ನಮ್ಮ ಮುಖದ ಮೇಲಿನ ಎರಡು ಕಣ್ಣುಗಳು ಇಡೀ ಜಗತ್ತನ್ನು ನೋಡುವಂತೆಯೇ, ನಮ್ಮ ನೆಲದ ಎರಡು ಕಣ್ಣುಗಳಂತಿರುವ ರಾಮಾಯಣ ಮತ್ತು ಮಹಾಭಾರತಗಳಿಂದ ಇಡೀ ಜೀವನವನ್ನು ಅರ್ಥಮಾಡಿಕೊಳ್ಳಬಹುದು. ನವಭಾರತದೇಶದ ಸಂವಿಧಾನದಂತೆಯೇ ಇವೆರಡು ಮಹಾಕಾವ್ಯಗಳು ನಮ್ಮ ದೇಶದ ನಿತ್ಯನೂತನ ಸಂವಿಧಾನವೆನ್ನಬಹುದು. ರಚ್ಚೆಯಲ್ಲಿ, ಕಟ್ಟೆಯ ಮೇಲೆ, ಸಂತೆಬೀದಿಯಲ್ಲಿ, ಮಾರುಕಟ್ಟೆಯಲ್ಲಿ ಜನರು ಕುಳಿತು ಮಾತನಾಡುವಾಗ ಈ ಮಹಾಕಾವ್ಯಗಳ ಪ್ರಸ್ತಾಪ ಮತ್ತು ದರ್ಶನವಿದ್ದೇ ಇರುತ್ತದೆ. ಇವನ್ನು ಕುರಿತು ಓದಿದವರ ಕಾವ್ಯಪ್ರಯೋಗವೆನ್ನುವುದಕ್ಕಿಂತಲೂ ಕುರಿತೋದದ ಜನಪದರ ಎದೆಯ ಹಾಡುಗಳೆಂದು ಹೇಳಬಹುದು. ಮಣ್ಣು, ನೀರು, ಗಾಳಿ, ಬೆಳಕುಗಳಂತೆ ಪ್ರಕೃತಿಯ ಜೀವಸತ್ವಗಳಾಗಿ ಮಾರ್ಪಟ್ಟ ಕೃತಿಗಳೆಂದು ರಾಮಾಯಣ ಮತ್ತು ಮಹಾಭಾರತಗಳನ್ನು ನೋಡಬೇಕಾಗಿದೆ. ಈ ಮಹಾಕಾವ್ಯಗಳಿಗೆ ಸಂಬಂಧಪಟ್ಟಂತೆ ಲಭ್ಯವಿರುವ ಗ್ರಾಂಥಿಕ ಪರಂಪರೆಗಳು ಮತ್ತು ಮೌಕಿಕ ಪರಂಪರೆಗಳು ಪ್ರತ್ಯೇಕ ದ್ವೀಪಗಳಾಗಿರದೆ, ಒಂದರೊಳಗೊಂದು ಬೆರೆತುಹೋಗುವ ಸಮುದ್ರಗಳಿಂದ ಸುತ್ತುವರೆಯಲ್ಪಟ್ಟ ಪರ್ಯಾಯ ದ್ವೀಪದಂತೆ ಮುಕ್ತವಾಗಿವೆ.
ಇಂಥ ಮಹಾಭಾರತವನ್ನು ಇಪ್ಪತ್ತೊಂದನೆ ಶತಮಾನದ ಮಕ್ಕಳಿಗೆ ಮತ್ತು ಭಾರತ ಕಥಾಮೃತ ಪಾನದಿಂದ ವಂಚಿತರಾದ ಮೆಕಾಲೆಯ ಮಕ್ಕಳ ಹಾಗೂ ಎಲ್.ಪಿ.ಜಿ. ಮಕ್ಕಳಿಗೆ ಮತ್ತೆ ಮತ್ತೆ, ಮರಳಿ ಮರಳಿ ಹೇಳಬೇಕೆಂಬ ತುಡಿತದಿಂದ ಸಿ.ಎಂ.ಗೋವಿಂದರೆಡ್ಡಿಯವರು ‘ಮತ್ತೊಂದು ಮಹಾಭಾರತ’ವೆಂಬ ಮಗು ಮನಸ್ಸಿನ ಮಹಾಕಾವ್ಯವನ್ನು ರಚಿಸಿದ್ದಾರೆ.
1.ಎಲ್ಲವನ್ನು ಒಳಗೊಳ್ಳುವ ಸರ್ವಸಮಾವಿಷ್ಟ ಕಥಾಸಿದ್ಧಿ, 2.ಕ್ರಿಯೆ-ಕಾಲ-ದೇಶಗಳನ್ನು ಬೆಸೆಯುವ ಸಮಸ್ತಪ್ರಜ್ಞೆಯ ಭಾವಸಿದ್ಧಿ, 3.ಅಡೆತಡೆಗಳಿಲ್ಲದ ನಿರರ್ಗಳವಾದ ಸುಲಲಿತ ಶೈಲಿಯ ಭಾಷಾಸಿದ್ಧಿ- ಎಂಬ ಸಿದ್ಧಿತ್ರಯಗಳಿಂದ ಸಂಪನ್ನರಾದ ಗೋವಿಂದರೆಡ್ಡಿಯವರು ಸಂಕಲ್ಪಶಕ್ತಿಯಿಂದ ಇಂಥ ಮಹಾಕಾವ್ಯವನ್ನು ರಚಿಸಿದ್ದಾರೆ.
‘ಮತ್ತೊಂದು ಮಹಾಭಾರತ’ದ ಮುದ್ರಣ ಮತ್ತು ವಿನ್ಯಾಸಗಳನ್ನು ಕುರಿತು ನನಗೆ ತಿಳಿದ ಕೆಲವು ಮಾತುಗಳನ್ನು ಇಲ್ಲಿ ಹೇಳಲಿಚ್ಛಿಸುತ್ತೇನೆ. ಈ ಕೃತಿಯ ಮುಖಪುಟ ರೂಪಿಸಿರುವುದು ಖ್ಯಾತ ಕಲಾವಿದ ಎಂ.ಎಸ್.ಮೂರ್ತಿ. ಈ ಮುಖಪುಟದಲ್ಲಿ ಶಸ್ತ್ರರಹಿತರು ಮತ್ತು ಶಸ್ತ್ರಸಹಿತರು ಇದ್ದಾರೆ. ಧರ್ಮರಾಯನ ಶಸ್ತ್ರಪಾತ, ಭೀಮಸೇನನ ಶಸ್ತ್ರಪ್ರಯೋಗ, ಅರ್ಜುನನ ಶಸ್ತ್ರದ ಅನುಸಂಧಾನ, ಶಸ್ತ್ರಧಾರಿಗಳಾದ ನಕುಲ-ಸಹದೇವರನ್ನು ಇಲ್ಲಿ ನೋಡಬಹುದು. ಶಸ್ತ್ರದ ಜೊತೆಗೆ ಇವರೆಲ್ಲ ಹೊಂದಿರುವ ಸಂಬಂಧವನ್ನು ಪರಿಶೀಲಿಸಿದರೆ ಅವರವರ ಭಾವಕ್ಕೆ ಅವರವರ ದರುಶನಕೆ ತಕ್ಕಂತೆ ಎಂಬ ಸತ್ಯದ ಅರಿವಾಗುತ್ತದೆ. ಶ್ರೀಕೃಷ್ಣ ಮತ್ತು ದ್ರೌಪದಿಯರು ಶಸ್ತ್ರರಹಿತರಾಗಿದ್ದರೂ ಮಹಾಭಾರತವನ್ನು ನಡೆಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಕೃಷ್ಣ-ಕೃಷ್ಣೆಯರೇ ಸ್ವತಃ ಆಯುಧಗಳಾಗಿದ್ದಾರೆಂಬುದು ಹೊಳೆಯುತ್ತದೆ. ಮತ್ತೊಂದು ಮಹಾಭಾರತಕ್ಕೆ ಇಂಥದೊಂದು ಅರ್ಥಪೂರ್ಣ ಮುಖಪುಟವನ್ನು ರೂಪಿಸಿದ ಎಂ.ಎಸ್.ಮೂರ್ತಿ ಅವರಿಗೆ ಅಭಿನಂದನೆಗಳು.
‘ಮತ್ತೊಂದು ಮಹಾಭಾರತ’ವು ಏಕರೂಪಿಯಾಗಿ ಮೂಡಿಬಂದಿರುವ ಕೃತಿಯಲ್ಲ. ಇದರೊಳಗೆ ಮೂರು ಕೃತಿಗಳು ಅಡಗಿದ್ದು ‘ತ್ರೀ ಇನ್ ಒನ್’ ಎಂಬಂಥ ಮಹಾಕಾವ್ಯವಾಗಿದೆ.
1. ಚಿತ್ರಪಟ ಮಹಾಭಾರತ : ಸುಪ್ರಸಿದ್ಧವಾದ ಚಿತ್ರಪಟ ರಾಮಾಯಣದಂತೆಯೇ ಇಲ್ಲಿ ಚಿತ್ರಪಟಗಳಿಂದಲೇ ನಿರೂಪಿತವಾಗಿರುವ ಮಹಾಭಾರತ ಕತೆಯ ಗದ್ಯವಿವರಣೆಗಳಿವೆ. ಬೆಂಗಳೂರಿನ ಗಾಂಧಿಬಜಾರ್‍ನಲ್ಲಿರುವ ವಿದ್ಯಾರ್ಥಿಭವನದ ಹೋಟೆಲ್‍ನಲ್ಲಿ ಸಪ್ಲೈಯರ್ ಆಗಿದ್ದ ಎಂಬತ್ತು ವರ್ಷದ ವೃದ್ಧರಾದ ಸು.ವಿ.ಮೂರ್ತಿಯವರು ರಚಿಸಿರುವ ತಮ್ಮದೇ ಶೈಲಿಯ 112 ಚಿತ್ರಪಟಗಳಿಂದ ಕೂಡಿದ ಗದ್ಯವಿವರಣೆಗಳೇ ‘ಚಿತ್ರಪಟ ಮಹಾಭಾರತ’ವಾಗಿದೆ. ಅಜ್ಞಾತ ಅನಾಮಧೇಯ ವ್ಯಕ್ತಿಯೊಬ್ಬರ ಕಲೆಗೆ ಅವಕಾಶ ಕಲ್ಪಿಸಿ, ಕೃತಿಯ ಅಂದವನ್ನು ಹೆಚ್ಚಿಸಿರುವ ಗೋವಿಂದರೆಡ್ಡಿಯವರಿಗೆ ಅಭಿನಂದನೆಗಳು.
2. ಚಿಣ್ಣರ ಗೋವಿಂದನ ಕಗ್ಗ : ಡಿ.ವಿ.ಜಿ. ರಚಿಸಿರುವ ಮಂಕುತಿಮ್ಮನ ಕಗ್ಗ ಲೋಕಪ್ರಸಿದ್ಧವಾದುದು. ಇಲ್ಲಿರುವ ಭಾಷೆ ಮತ್ತು ಭಾವಗಳು ಪ್ರೌಢರಿಗೆ ಸವಿಯಹುದು. ಹಳಗನ್ನಡ ಶೈಲಿಯ ಸಮಾಸಭೂಯಿಷ್ಠವಾದ ಪದಮೈತ್ರಿಯನ್ನು ಎಲ್ಲರೂ ಭೇದಿಸಲರಿಯರು. ಆದರೆ, ಗೋವಿಂದರೆಡ್ಡಿಯವರು ‘ಮತ್ತೊಂದು ಮಹಾಭಾರತ’ದ ಪ್ರತಿಯೊಂದು ಅಧ್ಯಾಯದಲ್ಲಿ ಪೋಣಿಸಿರುವ ಚೌಪದಿ-ಷಟ್ಪದಿಗಳು ದಪ್ಪಕ್ಷರಗಳಲ್ಲಿ ಮುದ್ರಿತವಾಗಿದ್ದು ಮಕ್ಕಳ ಮನಸ್ಸಿಗೆ ನಾಟುವಂತೆ ಲೋಕಜ್ಞಾನವನ್ನು ತಲುಪಿಸುತ್ತವೆ. ಮಹಾಭಾರತದ ಲೋಕವಿಶಿಷ್ಟ ಕತೆಯ ಸಂದರ್ಭದಲ್ಲಿ ಲೋಕಸಾಮಾನ್ಯವೆನ್ನಬಹುದಾದ ವಿವೇಕವನ್ನು ಹೇಳುತ್ತದೆ. ಇವು ಕೇವಲ ನೀತಿ ಪದ್ಯಗಳಾಗದೆ, ಲೋಕವಿಶಿಷ್ಟ ಮತ್ತು ಲೋಕಸಾಮಾನ್ಯದ ಸಮಾಹಾರವಾಗಿಯೂ ಗಮನಸೆಳೆಯುತ್ತದೆ.
3. ಮತ್ತೊಂದು ಮಹಾಭಾರತ : ನಾಲ್ಕುಮಾತ್ರೆಗಳ ಲಯದ ಸರಳತೆಯ ಕಥಾಪ್ರವಾಹವನ್ನು ಒಳಗೊಂಡಿರುವ ಈ ಕೃತಿಯು ಮಹಾಭಾರತವನ್ನು ಆದಿಯಿಂದ ಅಂತ್ಯದವರೆಗೆ ಕಾಯಿಸಿ ಆರಿಸಿದ ಹಾಲಿನಂತೆ, ಸಿಗುರು ಕಳಚಿದ ಕಬ್ಬಿನಂತೆ, ಸುಲಿದ ಬಾಳೆಯ ಹಣ್ಣಿನಂತೆ ಸುಲಲಿತವಾದ ಕನ್ನಡದಲ್ಲಿ ನಿರೂಪಿಸಿರುವುದು ಹೆಮ್ಮೆಯಾಗಿದೆ.
ಒಂದೇ ಕೃತಿಯ ಗರ್ಭದಲ್ಲಿ ತ್ರಿವಳಿ ಜನನವಾಗುವಂತೆ ‘ಮತ್ತೊಂದು ಮಹಾಭಾರತ’ದಲ್ಲಿ ಮೂರು ಕೃತಿಗಳು ಅಂತರ್ಗತವಾಗಿದ್ದು, ಸಹೃದಯರಿಗೆ ಏಕತಾನತೆಯ ಅನುಭವವಾಗದಂತೆ, ರಸದೌತಣವನ್ನು ಉಣಬಡಿಸುತ್ತದೆ. ಮಹಾಭಾರತ ಕತೆಯ ಯುಗಯಾತ್ರೀಭಾವದಲ್ಲಿ ಲೋಕಪೂಜ್ಯವಾಗಿರುವುದಕ್ಕೆ ಪ್ರಮುಖ ಕಾರಣವೆಂದರೆ ಇದರಲ್ಲಿ ಮಾನವ ಸ್ವಭಾವಗಳ ಸಂಕೀರ್ಣ ಸಮುಚ್ಚಯವಿದೆ. ನಿಯಮಬದ್ಧರಾದವರು, ನಿಯಮಭಂಗ ಮಾಡುವವರು, ನಿಯಮರಹಿತರು, ನಿಯಮಗಳಿಗೆ ಅತೀತರಾದವರು- ಗಂಡು ಹೆಣ್ಣು ಭೇದವಿಲ್ಲದೆ ಜೀವನ ಸಂಗ್ರಾಮದಲ್ಲಿ ತೊಡಗಿಸಿಕೊಳ್ಳುವ ಬಗೆ ಬದುಕನ್ನೇ ಬಗೆದು ತೋರಿಸುತ್ತದೆ. ಇದರಿಂದಲೇ ಮಹಾಭಾರತವು ಲೋಕಪೂಜ್ಯವಾಗಿದೆ. ಗೋವಿಂದರೆಡ್ಡಿಯವರ ನಿರೂಪಣೆಯು ಹಿಂದಿನ ಕತೆಯನು ಇಂದಿಗೆ ಹೊಂದಿಸಿ, ಗದ್ಯಪದ್ಯಗಳ ಮಿಶ್ರಣಗೊಳಿಸಿ, ಲಯವೈವಿಧ್ಯತೆ ಮೃದುಗೊಳಿಸಿ, ಅಂದದ ಚಂದದ ಸುಂದರ ಬಂಧದಿ ಮೂಡಿಬಂದಿದೆ.
ಚಿಣ್ಣರ ಕವಿ ಗೋವಿಂದರೆಡ್ಡಿಯವರು ಪಟ್ಟಾಗಿ ಕುಳಿತು ‘ಮತ್ತೊಂದು ಮಹಾಭಾರತ’ವನ್ನು ಸ್ವಹಸ್ತಾಕ್ಷರಗಳಿಂದ ಬರೆದಿರುವಂತೆಯೇ, ಸ್ವತಃ ಅಕ್ಷರಜೋಡಣೆಯನ್ನು ಮಾಡಿರುತ್ತಾರೆ. ಈ ನಿಜವನ್ನು ಮರೆಮಾಚುವಂತೆ ಕೃತಿಯ ಆರಂಭದಲ್ಲಿ “ಹೇಳುತ ಸಾಗುವೆ”- ಎಂದಿದ್ದಾರೆ. ಗ್ರಾಂಥಿಕ ಪರಂಪರೆಯ ಕವಿಗಳು ಮೌಖಿಕ ಪರಂಪರೆಯ ಕವಿಗಳಂತೆ ಹೇಳುತ್ತಾ ಸಾಗುವುದು ಏಕೆ? ಆದಿಕವಿ ಪಂಪನು ಕೂಡ “ಪೇಳಲ್ ಒಡರ್ಚಿದೆನ್ ಮದೀಯ ಪ್ರಬಂಧಮಂ”- ಎಂದಿದ್ದಾನೆ. ಶಕ್ತಿಕವಿ ರನ್ನನು “ಅರಿಪಿದಂ ಕವಿರತ್ನಂ”- ಎನ್ನುತ್ತಾನೆ. ಕೃತಿಯ ಕೊನೆಯಲ್ಲಿ ಗೋವಿಂದರೆಡ್ಡಿಯವರು ಬೆನಕನನ್ನು ಕುರಿತು “ನೀ ನುಡಿಸಿದ ನುಡಿಗಳನೇ ನುಡಿಯುತ ಮುಗಿಸಿದೆ ಭಾರತ ಕಥಾನಕ”- ಎಂದು ಹೇಳಿದ್ದಾರೆ. ಕುಮಾರವ್ಯಾಸ, ಚಾಮರಸ ಕೂಡ ನುಡಿಸಿದ್ದನ್ನು ನುಡಿಯುವ ಪರಂಪರೆಗೆ ಸೇರಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಗ್ರಂಥ ಮತ್ತು ನಿರ್‍ಗ್ರಂಥಗಳು ಒಂದರೊಳಗೊಂದು ಬೆರೆತು ಹೋಗುವ ಔSಒಔSIS ಪ್ರಕ್ರಿಯೆಗೆ ಇವೆಲ್ಲ ಸ್ಪಷ್ಟ ನಿದರ್ಶನಗಳಾಗಿವೆ.
‘ಮತ್ತೊಂದು ಮಹಾಭಾರತ’ಕ್ಕೆ ಮುನ್ನುಡಿಯನ್ನು ಬರೆದಿರುವ ಎಚ್.ಎಸ್. ವೆಂಕಟೇಶಮೂರ್ತಿ ಯವರು “ಕನ್ನಡದಲ್ಲಿ ಸಾವಿರ ವರ್ಷದಷ್ಟು ಹಳೆಯದಾದ ಮಹಾಭಾರತ ಕಥನ ಪರಂಪರೆಯಿದೆ”- ಎಂದು ಹೇಳುತ್ತಾ ಪಂಪ-ರನ್ನ-ಕುಮಾರವ್ಯಾಸ, ಲಕ್ಷ್ಮೀಶ, ಭೈರಪ್ಪ ಮೊದಲಾದವರು ನಿರ್ಮಾತೃಗಳೆಂದು ಗುರುತಿಸಿದ್ದಾರೆ. ಶ್ರೀರಾಮ ಪಟ್ಟಾಭಿಷೇಕದ ಕರ್ತೃ ಮಾಸ್ತಿ, ಪರ್ವದ ಕರ್ತೃ ಭೈರಪ್ಪ, ಯುಗಾಂತದ ಕರ್ತೃ ಇರಾವತಿ ಕರ್ವೆ- ಇವರ ಮಾರ್ಗಕ್ಕೆ ಸೇರಿದವರೆಂದು ಗೋವಿಂದರೆಡ್ಡಿಯವರನ್ನು ವ್ಯಾಖ್ಯಾನಿಸಿದ್ದಾರೆ. (=ಇಲ್ಲಿ ಮಹಾಭಾರತವನ್ನು ಆಧರಿಸಿ ನಾಲ್ಕು ನಾಟಕಗಳನ್ನು ರಚಿಸಿದ ಕುವೆಂಪು ಹೆಸರನ್ನು ಹೇಳುವುದಿಲ್ಲ ಮತ್ತು ರಾಮಾಯಣವನ್ನು ಆಧರಿಸಿದ ಮಾಸ್ತಿ ಹೆಸರನ್ನು ಹೇಳುತ್ತಾರೆ) ಪರಾಣ ಭಂಜನೆ ಅಥವಾ ಡಿ-ಮಿತಿಫಿಕೇಷನ್ ಮೂಲಕ ಸಾಗುವ ಸಿ.ಎಂ.ಗೋವಿಂದರೆಡ್ಡಿಯವರನ್ನು ಕುರಿತು “ಯಾವುದೇ ಅತೀಂದ್ರಿಯ ಘಟನೆಯನ್ನು ಗೋವಿಂದರೆಡ್ಡಿಯವರ ಆಧುನಿಕ ಮನಸ್ಸು ಮಾನ್ಯ ಮಾಡಲಾರದು”- ಎಂದಿದ್ದಾರೆ.
ಕಥಾವಸ್ತುವಿನ ವಾಸ್ತವಿಕತೆ ಮತ್ತು ಆಧುನಿಕತೆ ಒಂದೇ ಅಲ್ಲ! ‘ಶ್ರೀರಾಮಾಯಣದರ್ಶನಂ’- ಬರೆದ ಕುವೆಂಪು ಅತೀಂದ್ರಿಯತೆ, ಅಸಂಭಾವ್ಯತೆ, ಅದ್ಭುತ ರಮ್ಯತೆಗಳಿಂದ ಕೂಡಿದ ಆಧುನಿಕತೆಯನ್ನು ತಮ್ಮ ಅನೇಕ ಕೃತಿಗಳಲ್ಲಿ, ನಾಟಕಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಪುರಾಣಗಳ ಸೃಷ್ಟಿಕರ್ತನಾದ ಕವಿಯನ್ನು ಮನೋವಿಜ್ಞಾನಿ ಸಿ.ಜೆ.ಯೂಂಗ್ Shಚಿmಚಿಟಿ, ಒಥಿಣhmಚಿಞeಡಿ ಎಂದು ಕರೆದಿರುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಪುರಾಣ ಮತ್ತು ಇತಿಹಾಸಗಳನ್ನು ಒಂದಾಗಿಸುವ ಸಂಶೋಧನೆಯಲ್ಲಿ ನನಗೆ ಆಸಕ್ತಿಯಿಲ್ಲ. ಪುರಾಣ ಬೇರೆ ಇತಿಹಾಸ ಬೇರೆ- ಎಂಬ ಸ್ಪಷ್ಟತೆ ನಮ್ಮಲ್ಲಿರಬೇಕು. ಇತಿಹಾಸದ ಕಣ್ಣಲ್ಲಿ ರಾಮಾಯಣ-ಮಹಾಭಾರತಗಳನ್ನು ನೋಡುವ ಪ್ರಯತ್ನ ನಮ್ಮನ್ನು ಬಹುದೂರ ಕೊಂಡೊಯ್ಯಲಾರದು. ಸೌಂದರ್ಯದ ವಿಶ್ವಯಾನಕ್ಕೆ, ಜನಸಮಷ್ಟಿಯ ಕಲ್ಯಾಣಕ್ಕೆ ಎಂದೆಂದಿಗೂ ಒದಗಿ ಬರುವ ಪುರಾಣಗಳು ವಾಸ್ತವಿಕಗೊಳ್ಳುವುದೆಂದರೆ ಅನಂತವು ಅಂತವಾಗುವುದೆಂದೇ ಅರ್ಥ. ಸೈಂಧವ ಸಂಹಾರಕ್ಕೆ ಸೂರ್ಯಗ್ರಹಣದ ಹಿನ್ನೆಲೆಯನ್ನು ಸೃಷ್ಟಿಸಿರುವ ಗೋವಿಂದರೆಡ್ಡಿಯವರು ಜನಪದ ನಂಬಿಕೆಯ ಕೃಷ್ಣಚಕ್ರದ ಹಿನ್ನೆಲೆಯನ್ನೂ ಉಳಿಸಿಕೊಂಡು ಸಮನ್ವಯಪ್ರಜ್ಞೆಯನ್ನು ಮೆರೆದಿದ್ದಾರೆ. ಅಂತೆಯೇ ಅತೀಂದ್ರಿಯವಾದ, ಅದ್ಭುತ ರಮ್ಯವಾದ ಎಷ್ಟೋ ಸಂದರ್ಭಗಳನ್ನು ಸಂಗತಿಸತ್ಯಕ್ಕೆ ಇಳಿಸಿದ್ದಾರೆ. ಶಿಶುಪಾಲನ ಕತ್ತರಿಸಿದ ತಲೆ (=ತಪಸ್ಸು ಮಾಡುತ್ತಿದ್ದ ತಂದೆಯ ಕೈಗಳಲ್ಲಿ ಬೀಳುವುದಕ್ಕೆ ಬದಲಾಗಿ) ಸಭೆಯಲ್ಲೇ ಉರುಳಿ ಬೀಳುವುದು, ಅಶ್ವತ್ಥಾಮನನ್ನು ಭ್ರೂಣಘಾತಕತನದಿಂದ ಪಾರುಮಾಡಿ ಶಿರೋರತ್ನದ ಬದಲು ಮೂರನೆಯ ಹಣೆಗಣ್ಣು ಉಳ್ಳವನೆಂದು ಹೇಳಿರುವುದು ಸಂಗತಿಸತ್ಯಗಳ ಸಮನ್ವಯಮಾರ್ಗಕ್ಕೆ ಉದಾಹರಣೆ. ಬೆಸ್ತರ ರಾಜನ ಪಾಪಪ್ರಜ್ಞೆ ಮತ್ತು ಕ್ಷಮಾಯಾಚನೆ, ಹಿಡಿಂಬೆಯ ಭೀಮಬಯಕೆಗೆ ರಾಕ್ಷಸಗಣದ ಸಾಥ್ ನೀಡಿರುವುದು ಸಾಮಾನ್ಯತಾಶ್ರೀಗೆ ನಿದರ್ಶನವಾಗಿದೆ. ಕನ್ನಡದಲ್ಲಿರುವ ಮಹಾಭಾರತ ಕಥನಪರಂಪರೆಯಲ್ಲಿ ಯಾವ ಕವಿಯೂ ಹೇಳದ ಸಂಗತಿಯನ್ನು ವಿ.ಸೀ. ಅವರು ‘ಆಗ್ರಹ’ ಎಂಬ ನಾಟಕದಲ್ಲಿ ಕಾಕ-ಘೂಕ ಪ್ರಸಂಗದ ಮೂಲಕ ನಿರೂಪಿಸಿದ್ದಾರೆ. ಇಂಥ ಧ್ವನಿಪೂರ್ಣ ಪ್ರಸಂಗವನ್ನು ಮೊದಲ ಬಾರಿಗೆ ಮಹಾಕಾವ್ಯದಲ್ಲಿ ಅಳವಡಿಸಿರುವ ಗೋವಿಂದರೆಡ್ಡಿಯವರು ತನ್ಮೂಲಕ ‘ಸರ್ವಸಮಾವಿಷ್ಟ ಕಥಾಸಿದ್ಧಿ’- ತಮ್ಮದೆಂಬುದನ್ನು ಸಾಬೀತುಗೊಳಿಸಿದ್ದಾರೆ.
ಇಲಿಗಳ ಕಾಟದಿಂದ ಬೇಸತ್ತು ಹೋಗಿದ್ದ ಜನರ ಮುಕ್ತಿಗಾಗಿ ಕುವೆಂಪು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯನ್ನು ಕೊಟ್ಟಿದ್ದರು. ಇದೀಗ ಗೋವಿಂದರೆಡ್ಡಿಯವರು ಈಸಿಮೌಸ್ ಅಥವಾ ಡಿಜಿಟಲ್ ಇಲಿಗಳ ಕಾಟದಿಂದ ಕೆಟ್ಟು-ದಿಕ್ಕೆಟ್ಟು ಹೋಗುತ್ತಿರುವ ಯುವಜನತೆಗಾಗಿ ಚೆನ್ನಿಗರಾಯಪುರದ ಕಿಂದರಿಜೋಗಿಯಾಗಿ ಅವತರಿಸಿ, ಕನ್ನಡಕ್ಕೆ ಅಪೂರ್ವ ತೇಜಸ್ಸಿನ ‘ಮತ್ತೊಂದು ಮಹಾಭಾರತ’ವನ್ನು ಕೊಟ್ಟಿರುವುದಕ್ಕೆ ಅಭಿನಂದನಾರ್ಹರಾಗಿದ್ದಾರೆ.
(ದಿನಾಂಕ 17.01.2016ರಂದು ಮಾಲೂರಿನಲ್ಲಿ ‘ಮತ್ತೊಂದು ಮಹಾಭಾರತ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಡಿದ ಅಧ್ಯಕ್ಷ ಭಾಷಣವನ್ನು ಆಧರಿಸಿದ ಲೇಖನವಿದು)
-ವಿ.ಚಂದ್ರಶೇಖರ ನಂಗಲಿ