ಮಗು ಮತ್ತು ಶಿಕ್ಷಣ: ಗಾಯತ್ರಿ ನಾರಾಯಣ ಅಡಿಗ


‘ವಿದ್ಯೆ ಇಲ್ಲದವನ ಮುಖ ಹಾಳೂರ ಹದ್ದಿನಂತಿಕ್ಕು ಸರ್ವಜ್ಞ’ ಎಂಬ ಸರ್ವಜ್ಞನ ನುಡಿಗಳು ವಿದ್ಯೆಯ ಮಹತ್ವವನ್ನು ತಿಳಿಸುತ್ತದೆ. ಮುಂದುವರಿದ ಈ ಯುಗದಲ್ಲಿ ಶಿಕ್ಷಣವು ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದೆ. ಮಗು ಇಡೀ ಶಿಕ್ಷಣ ಪ್ರಕ್ರಿಯೆಯಲ್ಲಿ ಕೇಂದ್ರಬಿಂದು. ಮಗುವಿನ ಆಸಕ್ತಿ, ಅಭಿರುಚಿಯನ್ನು ಗ್ರಹಿಸುತ್ತಾ, ಮನ್ನಣೆ ನೀಡುತ್ತಾ ಸಂಪೂರ್ಣ ಸ್ವಾತಂತ್ರ್ಯ ನೀಡಿ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡುವುದೇ “ಮಗು ಕೇಂದ್ರಿತ ಶಿಕ್ಷಣ ಪದ್ಧತಿ. “

“ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು”. ಪ್ರಥಮತವಾಗಿ ಮಗು ತನ್ನ ಮನೆಯಿಂದಲೇ ಶಿಕ್ಷಣ ಪಡೆಯಲು ಪ್ರಾರಂಭಿಸುತ್ತದೆ. ತಾಯಿಯೇ ಮೊದಲ ಗುರುವಾಗುತ್ತಾಳೆ. ಮಗು ಮನೆಯವರು ಮತ್ತು ತಾಯಿಯ ನೆರವಿನಿಂದ ನಡೆಯುವುದು, ಓಡುವುದು, ಮಾತನಾಡುವುದು ಹೀಗೆ ಬೇರೆ ಬೇರೆ ರೀತಿಯ ಶಿಕ್ಷಣವನ್ನು ಪಡೆಯುತ್ತದೆ. ನಂತರ ‘ಶಾಲೆ’ ಎಂಬ ಮನೆಯೆಡೆಗೆ ತನ್ನ ಪುಟ್ಟ ಪುಟ್ಟ ಹೆಜ್ಜೆ ಇಡುತ್ತದೆ. ಅಲ್ಲಿ ತನ್ನ ಬೇಕುಗಳನ್ನು ಪೂರೈಸಿಕೊಳ್ಳುತ್ತದೆ. ಕೇವಲ ಓದು, ಬರಹ ಮಾತ್ರ ಶಿಕ್ಷಣವಲ್ಲ. ಮಗುವು ಪಡೆಯುವ ಶಿಕ್ಷಣವು ತನ್ನೆಲ್ಲಾ ಅಗತ್ಯತೆಗಳನ್ನು ಪೂರೈಸಿಕೊಳ್ಳುವಂತಿರಬೇಕು. ಪ್ರಸ್ತುತ ಶಿಕ್ಷಣ ಪದ್ಧತಿಯು ಶಿಶುಕೇಂದ್ರಿತವಾದರೂ ಅದು ನೂರಕ್ಕೆ ನೂರು ಸಫಲತೆಯನ್ನು ಕಾಣಲಿಲ್ಲ ಎಂಬುದು ವಿಷಾದನೀಯ.

ಮಗುವಿನ ಮನಸ್ಸಿನಲ್ಲಿ ಕಲಿಕೆಯ ಬಗ್ಗೆ ಆಸಕ್ತಿ, ಉತ್ಸಾಹವನ್ನು ಹೆಚ್ಚಿಸುವ ವಾತಾವರಣವನ್ನು ಉಂಟು ಮಾಡಬೇಕು. ತರಗತಿಯ ವಾತಾವರಣವು ಮಗು ಹಿರಿಯರಿಗೆ ನೀಡುವ ಗೌರವ, ಕಾಳಜಿ, ಸಹಪಾಠಿಗಳೊಂದಿಗೆ ಬೆರೆಯುವಿಕೆ, ಮಾನಸಿಕ ಮತ್ತು ಸಾಮಾಜಿಕವಾಗಿ ಇರುವುದನ್ನು ಕಲಿಯುತ್ತದೆ. ಇನ್ನು ಶಾಲಾ ವಾತಾವರಣವು ಮಗುವಿನ ಬೆಳವಣಿಗೆಗೆ ಪೂರಕವಾದ ಅಂಶಗಳನ್ನು ಒದಗಿಸುವ ಕೇಂದ್ರ. ಇಲ್ಲಿ ಮಗುವಿಗೆ ತನ್ನ ಅನಿಸಿಕೆ, ಅಭಿಪ್ರಾಯಗಳನ್ನು ಹೇಳಲು ಸ್ವಾತಂತ್ರ್ಯವಿರಬೇಕು. ಮಗುವು ಶಿಕ್ಷಕರನ್ನು ಅನುಕರಿಸಲು ಅವಕಾಶವಿರಬೇಕು. ಮಕ್ಕಳಿಗೆ ಬೇಕಾದಷ್ಟು ಆಟಿಕೆಗಳನ್ನು ನೀಡುವುದು ಮತ್ತು ಆ ಮೂಲಕ ಪ್ರಶ್ನಿಸಲು, ಚಿಂತಿಸಲು ಅವಕಾಶಗಳನ್ನು ನೀಡಬೇಕು. ಇದರಿಂದ ವೈಜ್ಞಾನಿಕ ಮನೋಭಾವನೆ ಬೆಳೆಯುತ್ತದೆ. ಜಾತಿ ಬೇಧವಿಲ್ಲದೆ ಮಾತನಾಡಲು ಇತರ ಮಕ್ಕಳ ಜೊತೆ ಮುಕ್ತ ಅವಕಾಶ ನೀಡಬೇಕು. ಇದರಿಂದ ಸಾಮಾಜಿಕ ಸಂಬಂಧದ ಅರಿವು ಮೂಡುತ್ತದೆ. ಒಟ್ಟಿನಲ್ಲಿ ಶಾಲೆಯು ಮಗುವಿನ ಸಾಮಾಜಿಕ, ಮಾನಸಿಕ, ಶಾರೀರಕವಾಗಿ ಬೆಳೆಯುವ, ಪರಿಸರ ಕಾಳಜಿ ಇತ್ಯಾದಿ ಗುಣಗಳನ್ನು ಬೆಳೆಸುವ, ಸರ್ವಾಂಗೀಣ ಅಭಿವೃದ್ಧಿಗೆ ಅಕ್ಷರಶಃ ದೇವಾಲಯವಾಗಿರುತ್ತದೆ.

ಮಗು ಮತ್ತು ಶಿಕ್ಷಣದ ನಡುವೆ ಶಿಕ್ಷಕ ಸಂಪರ್ಕ ಸೇತುವೆಯಾಗಿರುತ್ತಾನೆ. ಶಿಕ್ಷಕನು ಮಕ್ಕಳಿಗೆ ಗೌರವ, ಕಾಳಜಿ, ಸಲಹೆ, ನೈತಿಕ ಬೆಂಬಲ ಇತ್ಯಾದಿ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕೇ ಹೊರತು ಬೈಯುವುದು, ಹೊಡೆಯುವುದು, ಅವರ ಕೆಲಸದಿಂದ ಅವರನ್ನು ವಿಮುಖಗೊಳಿಸುವುದು, ಬೇರೆ ಮಕ್ಕಳ ಎದುರು ಅವರನ್ನು ನಿಂದಿಸುವುದು, ಪಕ್ಷಪಾತ ಧೋರಣೆ ಇತ್ಯಾದಿ ನಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಲೇಬಾರದು. ಶಿಕ್ಷಣವು ಕೇವಲ ಅಂಕಕ್ಕೆ ಮೀಸಲಾಗಿರದೆ ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುವಂತಿರಬೇಕು. ಮಗುವನ್ನು ವೈಯಕ್ತಿಕ ನೆಲೆಯಲ್ಲಿ ಅರ್ಥೈಸಿಕೊಂಡು ಆ ಮಗುವಿನ ಆಸಕ್ತಿ, ಅಭಿರುಚಿ, ಸಾಮರ್ಥ್ಯಗಳಿಗೆ ಹೊಂದುವಂತಹ ಚಟುವಟಿಕೆಗಳನ್ನು ನಮ್ಮ ಶಿಕ್ಷಣ ರೂಪಿಸಬೇಕು. ಈ ರೀತಿಯಲ್ಲಿ ನಮ್ಮ ಶಾಲೆ, ಪಠ್ಯಕ್ರಮ, ಪಠ್ಯವಸ್ತು, ಬೋಧನಾ-ಕಲಿಕಾ ಪ್ರಕ್ರಿಯೆಗಳನ್ನೂಳಗೊಂಡ ಶಿಕ್ಷಣವು ತನ್ನದೇ ರೀತಿಯ ಛಾಪನ್ನು ಮೂಡಿಸುತ್ತದೆ. ವಿಭಿನ್ನ ಕಲಿಕಾ ಸಾಮರ್ಥ್ಯವುಳ್ಳ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಧ್ಯೇಯವಾಗಿರಬೇಕು.

ಒಮ್ಮೆ ಪಂಡಿತನು ದೋಣಿಯಲ್ಲಿ ಸಾಗುವಾಗ ನಾವಿಕನೊಂದಿಗೆ ಮಾತನಾಡುತ್ತಾ ತಾನು ಸಕಲ ವಿದ್ಯೆ ಪಾರಂಗತನಾಗಿದ್ದೇನೆ. ಎಂತಹ ವೇದಾಂತ ಪ್ರಶ್ನೆಗಳನ್ನು ಎದುರಿಸಬಲ್ಲೆ ಎಂದು ಬಡಾಯಿ ಕೊಚ್ಚುತ್ತಿದ್ದ. ಹೀಗೆ ಇಬ್ಬರೂ ಮಾತನಾಡಿಕೊಳ್ಳುತ್ತಿರುವಾಗ ಗಾಳಿ ಬಲವಾಗಿ ಬೀಸತೊಡಗಿತು. ಮಳೆ ಬಂತು. ಇನ್ನೇನು ದೋಣಿ ಮುಳುಗಲು ಪ್ರಾರಂಭಿಸಿತು. ನಾವಿಕ ಪಂಡಿತನಿಗೆ “ಪಂಡಿತರೇ, ನಿಮಗೆ ಈಜಲು ತಿಳಿದಿದೆಯಾ? ನಾನು ಈಜಿ ದಡ ಸೇರುತ್ತೇನೆ”ಎಂದು ನದಿಗೆ ಧುಮುಕಿದ. ಈಜಿ ದಡ ಸೇರಿದ. ಆದರೆ ಈಜು ಗೊತ್ತಿಲ್ಲದ ಪಂಡಿತ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ. ಬರೀ ಓದು, ಬರಹ ಬಂದರೆ ಮಾತ್ರ ಅವನು ಬುದ್ಧಿವಂತ ಅಂತೇನೂ ಅಲ್ಲಾ. ತಾನು ಪಡೆದ ಶಿಕ್ಷಣವನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಉಪಯೋಗಿಸುವವನೇ ನಿಜವಾದ ಬುದ್ಧಿವಂತ. ತನ್ನ ನಿತ್ಯ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವ ಕೌಶಲಸಹಿತ ಶಿಕ್ಷಣವೇ ನಮ್ಮ ಗುರಿಯಾಗಿರಬೇಕು.

-ಗಾಯತ್ರಿ ನಾರಾಯಣ ಅಡಿಗ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x