ಕಥಾಲೋಕ

ಮಗುವಿನ ಕಥೆ: ನಂದಾ ಹೆಗಡೆ

ಪ್ರೈಮರಿ ಸ್ಕೂಲ್ ಟೀಚರಾದ ನಾನು ಇಂದು ಶಾಲೆಯಿಂದ ಮನೆಗೆ ಬಂದರೂ ಶಾಲೆಯದೇ ಗುಂಗಿನಲ್ಲಿದ್ದೆ. ಆರನೇ ಕ್ಲಾಸ್ ನಲ್ಲಿ ಓದುತ್ತಿದ್ದ ಪ್ರಗತಿ ನನ್ನ ಯೋಚನೆಯ ವಿಷಯವಾಗಿದ್ದಳು.
ಪ್ರಗತಿ ನಾನು ನೋಡುತ್ತಿದ್ದ ಹಾಗೆ ಚೂಟಿಯಾದ ಹುಡುಗಿ. ಓದುವುದರಲ್ಲಿ ಯಾವಾಗಲೂ ಮುಂದು. ಸಾಮಾನ್ಯವಾಗಿ ಅವಳು ಎಲ್ಲಾ ವಿಷಯಕ್ಕೂ ನೂರಕ್ಕೆ ನೂರು ಅಥವಾ ಅದರ ಆಜು ಬಾಜು ಅಂಕ ಗಳಿಸುತ್ತಿದ್ದಳು. ಆದರೆ ಈಗ ಎರಡು ಮೂರು ಪರೀಕ್ಷೆಗಳಲ್ಲಿ ಅಂಕಗಳ ಇಳಿಕೆಯಾಗತೊಡಗಿತ್ತು. ಏನೋ ಸ್ವಲ್ಪ ವ್ಯತ್ಯಾಸವಾಗಿರಬಹುದೆಂದು ನಾನೂ ವಿಶೇಷವಾಗಿ ಏನೂ ಹೇಳಿರಲಿಲ್ಲ. ಆದರೆ ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಅವಳು ಅನುತ್ತೀರ್ಣಳಾಗಿದ್ದಾಳೆ! ನಿಲ್ಲಿಸಿ ಕೇಳಿದರೆ ಜೋರಾಗಿ ಅಳಲು ಶುರು ಮಾಡಿದಳು. ನಾನು ಗಾಭರಿಯಾಗಿ ಅವಳನ್ನು ಕೂರುವಂತೆ ಹೇಳಿ ಸಮಾಧಾನಪಡಿಸಿದೆ. ನಂತರ ಅವಳನ್ನು ಕರೆದು ನಾಳೆ ಪಾಲಕರನ್ನು ಕರೆದು ತರುವಂತೆ ತಿಳಿಸಿ ಮನೆಗೆ ಬಂದೆ. ಆದರೆ ಅಷ್ಟು ಚಿಕ್ಕ ಮಗುವಿಗೆ ಅಷ್ಟು ಜೋರಾಗಿ ಅಳುವಂತದ್ದೇನಿರಬಹುದು ಎಂಬುದೇ ನನ್ನ ಚಿಂತೆ. ರಾತ್ರಿ ಕೂಡಾ ಇದೇ ಯೋಚನೆಯಲ್ಲಿ ಹೊರಳಾಡಿ ನಾಳೆ ಪಾಲಕರು ಬಂದಾಗ ಕೇಳಿದರಾಯಿತು ಎಂದು ಸಮಾಧಾನ ಪಟ್ಟುಕೊಂಡು ನಿದ್ದೆ ಹೋದೆ.

ಮಾರನೇ ದಿನ ಶಾಲೆಗೆ ಹೋದಾಗ ಪ್ರಗತಿ ತನ್ನ ತಾಯಿಯನ್ನು ಕರೆತಂದಿದ್ದಳು. ಅವರನ್ನು ಕೂಡಿಸಿಕೊಂಡು ಪ್ರಗತಿಯ ಹಿನ್ನಡೆಯ ಬಗ್ಗೆ ವಿವರಿಸಿದೆ, ಕೇಳಿದಾಗ ಅವಳು ಅತ್ತಿದ್ದರ ಬಗ್ಗೆ ಹೇಳಿದೆ. ಅವರು ಎಲ್ಲಾ ಪಾಲಕರಂತೆ ತಾನು ಮಗಳ ಏಳ್ಗೆಯ ಬಗ್ಗೆ ತೋರುವ ಕಾಳಜಿ, ಮಾಡುವ ಖರ್ಚು ಇವುಗಳ ಉದ್ದ ಪಟ್ಟಿಯನ್ನೇ ಹೇಳಿದರು. ಆದರೆ ನನಗೆ ಯೋಚನೆಯಾಗಿದ್ದು ಅವರು ಮಾತನಾಡುವ ಉದ್ದಕ್ಕೂ ಪ್ರಗತಿ ಅವರ ಕಡೆ ಸಿಟ್ಟಿನಿಂದ ನೋಡುತ್ತಿದ್ದುದು. ಅವರಿಬ್ಬರಿಗೂ ಕಳಿಸಿಕೊಟ್ಟು ನಾನು ಆಫೀಸ್ ರೂಮಿಗೆ ಹೋದೆ. ಪ್ರಗತಿಯ ಪಾಲಕರ ಬಗ್ಗೆ ವಿಚಾರಿಸಿದೆ. ಆಗ ತಿಳಿದು ಬಂದ ವಿಷಯದಂತೆ ಈಗ ಒಂದು ವರ್ಷದಿಂದ ಪ್ರಗತಿಯ ಅಪ್ಪ ಅಮ್ಮ ಬೇರೆಯಾಗಿದ್ದಾರೆ. ಹಾಗಾಗಿ ಅವರ ಸೂಚನೆಯ ಮೇರೆಗೆ ಶಾಲೆಯ ಯಾವುದೇ ವಿಚಾರವಿದ್ದರೂ ಅದನ್ನು ಪ್ರಗತಿಯ ತಾಯಿಗೇ ತಿಳಿಸುತ್ತಿದ್ದರು.

ನನಗೆ ಕೊಂಚ ಮಟ್ಟಿಗೆ ಪ್ರಗತಿಯ ಸಮಸ್ಯೆಯ ಅಂದಾಜಾಯಿತು. ಏನು ಮಾಡುವುದೆಂಬ ಯೋಚನೆಯಲ್ಲಿದ್ದೆ. ರಾತ್ರಿ ಮಲಗುವಾಗ ಎಂದಿನಂತೆ ಏನಾದರೂ ಓದುವ ಮನಸಾದಾಗ ಎದುರಿಗೆ ಸಿಕ್ಕಿದ್ದು – ಡಾ. ಮೀನಗುಂಡಿ ಸುಬ್ರಮಣ್ಯಂ ಅವರ “ಮನಸ್ಸು ಇಲ್ಲದ ಮಾರ್ಗ” ಪುಸ್ತಕ. ಅದರಲ್ಲಿ ಬರುವ ಭರತನ ಸಮಸ್ಯೆಯನ್ನು ಓದುವಾಗ ನನಗೂ ಪ್ರಗತಿಯದು ಅದೇ ರೀತಿಯ ಸಮಸ್ಯೆ ಇರಬಹುದೇನೋ ಎನ್ನಿಸಿತು.

ಮಾರನೆಯ ದಿನ ಪ್ರಗತಿಯನ್ನು ಪ್ರತ್ಯೇಕವಾಗಿ ಕರೆದು “ಪ್ರಗತಿ ಸಂಜೆ ನಮ್ಮನೆಗೆ ಹೋಗೋಣ ಬರ್ತೀಯಾ” ಎಂದೆ. ಅದಕ್ಕವಳು “ಟೀಚರ್, ಲೇಟಾಗಿ ಹೋದರೆ ಅಮ್ಮ ಬಯ್ತಾಳಲ್ಲ” ಅಂತ ಅನುಮಾನಿಸಿದಾಗ ಅಮ್ಮನಿಗೆ ಫೋನ್ ಮಾಡಿ ನಾನು ಹೇಳ್ತೀನಿ ಅಂದ ಮೇಲೆ ಒಪ್ಪಿದಳು. ಆಫೀಸಿನಿಂದ ಅವಳಮ್ಮನ ಫೋನ್ ನಂಬರ್ ತೆಗೆದುಕೊಂಡು ಅವಳಮ್ಮನಿಗೆ, “ಪ್ರಗತಿಗೆ ಚೆನ್ನಾಗಿ ಅಭ್ಯಾಸ ಮಾಡುವ ಕ್ರಮದ ಬಗ್ಗೆ ಮನೆಗೆ ಕರೆದುಕೊಂಡು ಹೋಗಿ ಕೆಲವು ಮಾಹಿತಿ ಕೊಟ್ಟು ಆಮೇಲೆ ನಾನೇ ನಿಮ್ಮ ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ತಿಳಿಸಿದೆ.

ಪ್ರಗತಿಯನ್ನು ಮನೆಗೆ ಕರೆತಂದು ಅವಳಿಗೆ ಸ್ವಲ್ಪ ತಿಂಡಿ ಹಾಲು ಕೊಟ್ಟು ನನ್ನ ರೂಮಲ್ಲಿ ಕೂರಿಸಿಕೊಂಡೆ. ಅಲ್ಲಿ ನಡೆದ ನಮ್ಮ ಸಂಭಾಷಣೆ ಹೀಗಿತ್ತು–

ಪ್ರಗತಿ, ಯಾಕೆ ಪುಟ್ಟಾ ನೀನು ಅಷ್ಟೊಂದು ಜಾಣೆಯಾಗಿದ್ದವಳು ಹೀಗಾಗಿಬಿಟ್ಟೆ?

ಪ್ರಗತಿ ಮತ್ತೆ ಜೋರಾಗಿ ಅಳಲು ಶುರು ಮಾಡಿದಳು. ನಾನು

ಪ್ರಗತಿ, ಅಳಬೇಡ ಪುಟ್ಟಾ, ನೋಡು ಇಲ್ಲಿ ಯಾರೂ ಇಲ್ಲ. ನಾನು ಯಾರಿಗೂ ಹೇಳಲ್ಲ. ಏನಿದ್ದರೂ ನನ್ನ ಹತ್ತಿರ ಹೇಳು. ಏನೇ ಸಮಸ್ಯೆ ಇದ್ದರೂ ಬಗೆಹರಿಸೋಣ.

ಇಲ್ಲ ಟೀಚರ್, ಅದೇನೂ ಸರಿ ಹೋಗುವುದಿಲ್ಲ

ಅದು ಎಂದರೆ ಏನು ಪುಟ್ಟಾ?

ಅದಕ್ಕೆ ಪ್ರಗತಿ ಅಳುತ್ತಾ ಅಳುತ್ತಾ ಹೇಳಿದ ಕತೆ ಮನ ಕಲಕುವಂತಿತ್ತು.

ಟೀಚರ್, ನನಗೆ ನನ್ನಪ್ಪನ ಕಂಡರೆ ತುಂಬಾ ಪ್ರೀತಿ. ಅಮ್ಮ ಯಾವಾಗಲೂ ಅಪ್ಪನೊಂದಿಗೆ ಜಗಳ ಆಡುತ್ತಿದ್ದಳು. ರಾತ್ರಿ ನಾನು ಮಲಗಿದಾಗಲೂ ಅವರ ಜಗಳ ಮುಂದುವರಿಯುತ್ತಿತ್ತು
ಈಗ ಒಂದು ವರ್ಷದ ಹಿಂದೆ ರಾತ್ರಿ ತುಂಬಾ ಜಗಳವಾಯಿತು. ಅಪ್ಪ ರಾತ್ರೀನೇ ಮನೆ ಬಿಟ್ಟು ಹೊರಟುಬಿಟ್ಟರು. ನಾನು ಅಪ್ಪನನ್ನು ತಡೆಯಬೇಕೆಂದು ರೂಮಿನಿಂದ ಹೊರಬರುತ್ತಿದ್ದೆ, ಆದರೆ ಅಮ್ಮ ರೂಮಿನ ಬಾಗಿಲು ಹಾಕಿಬಿಟ್ಟರು. ಆಮೇಲೆ ಅಪ್ಪ ಮನೆಗೆ ಬರಲೇ ಇಲ್ಲ. ಅಮ್ಮನಿಗೆ ಅಪ್ಪನ ವಿಷಯ ಕೇಳಿದರೆ ಕೋಪ ಬಂದು ನನ್ನನ್ನು ಹೊಡೆಯುತ್ತಿದ್ದರು.
ಒಂದು ದಿನ ಅಮ್ಮ ನನಗೆ ಶಾಲೆಗೆ ರಜೆ ತೆಗೆದುಕೋ ನಿಮ್ಮಪ್ಪನ ಹತ್ತಿರ ಕರೆದುಕೊಂಡು ಹೋಗುತ್ತೀನಿ ಎಂದರು. ನಾನು ಆ ದಿನವೆಲ್ಲ ಸಂಭ್ರಮದಿಂದ ಇದ್ದೆ. ದಾರಿಯಲ್ಲಿ ಹೋಗುವಾಗ ಅಮ್ಮ “ನೋಡು ಮರಿ, ಅಲ್ಲಿ ಇವತ್ತು ತುಂಬಾ ಜನರಿರುತ್ತಾರೆ. ನಿನ್ನನ್ನ ಪ್ರಶ್ನೆ ಕೇಳುತ್ತಾರೆ. ಯಾರು ಕೇಳಿದರೂ ನಾನು ಅಮ್ಮನ ಜೊತೆಗೇ ಇರುತ್ತೇನೆ ಎಂದು ಹೇಳಬೇಕು, ಅಂದರೆ ಮಾತ್ರ ನಿನಗೆ ನಿನ್ನಪ್ಪನನ್ನು ಆವಾಗಾವಾಗ ನೋಡಲು ಕರೆದುಕೊಂಡು ಹೋಗ್ತೀನಿ. ಇಲ್ಲಾಂದರೆ ಈ ಜನ್ಮದಲ್ಲಿ ನಿನಗೆ ಅಪ್ಪನನ್ನು ತೋರಿಸುವುದಿಲ್ಲ” ಎಂದು ಹೇಳಿದಳು. ನಾನು ಅಪರೂಪಕ್ಕಾದರೂ ನನ್ನ ಪ್ರೀತಿಯ ಪಪ್ಪನನ್ನು ನೋಡಬಹುದೆಂದು ಅವಳು ಹೇಳಿಕೊಟ್ಟಂತೇ ಹೇಳಿದೆ. ಅಂದಿನಿಂದ ಇಂದಿನವರೆಗೂ ಅಪ್ಪ ಮನೆಗೆ ಬರಲೇ ಇಲ್ಲ. ತಿಂಗಳಿಗೊಮ್ಮೆ ಅಮ್ಮ ಅಪ್ಪನ ಹತ್ತಿರ ಕರೆದುಕೊಂಡು ಹೋಗ್ತಾರೆ. ಅಮ್ಮ ದೂರದಲ್ಲಿ ನಿಂತಿರ್ತಾರೆ. ಅಪ್ಪ ಮುದ್ದು ಮಾಡಿ ಕಣ್ಣೀರಿಡುತ್ತಾರೆ, ಇದೇ ಆಗಿದೆ. ಎಂದ ಪ್ರಗತಿಗೆ ನಾನು-

ಏನು ಮಾಡೋದು ಪುಟ್ಟಾ, ಕೆಲವೊಂದು ಅನಿವಾರ್ಯವಲ್ವಾ, ಅದಕ್ಕೆಲ್ಲಾ ನಿನ್ನ ಅಭ್ಯಾಸ ಹಾಳುಮಾಡಿಕೊಂಡರೆ ನಿನ್ನ ಪಪ್ಪನಿಗೆ ಬೇಜಾರಾಗಲ್ವಾ, ಪುಟ್ಟಿ ಮುಂದೆ ಚೆನ್ನಾಗಿ ಓದಬೇಕಂತ ನಿನ್ನ ಅಪ್ಪ ತುಂಬಾ ಆಸೆ ಇಟ್ಕೊಂಡಿದ್ದಾರೆ ಅಲ್ವ್ರಾ ಅಂತ ನಾನು ಮಗುವಿಗೆ ಕಹಿ ವಾಸ್ತವದ ಅರಿವು ಮೂಡಿಸಿ, ಭವಿಷ್ಯದ ಕನಸು ಬಿತ್ತಲು ನೋಡಿದೆ. ಆದರೆ ಮಗು ಮುಂದೆ ಆಡಿದ ಮಾತು ಹೃದಯ ಹಿಂಡುವಂತಿತ್ತು.

ಏನ್ ಓದೋದು ಟೀಚರ್, ನನಗೆ ಈಗ ಮನೆಯಿಂದ ಹೊರಬೀಳುವುದೇ ಬೇಡವಾಗಿದೆ.

ಯಾಕೆ ಪುಟ್ಟಾ?

ದಿನಾಲೂ ರಾತ್ರಿಯಾದೊಡನೆ ಅರ್ಜುನ್ ಅಂಕಲ್ ನಮ್ಮ ಮನೆಗೆ ಬರ್ತಾರೆ. ನಾನೇ ಬಾಗಿಲು ತೆಗೆಯಬೇಕಾಗುತ್ತದೆ. ಹಾಗೆ ಬಾಗಿಲು ತೆಗೆಯಹೋದಾಗಲೆಲ್ಲಾ ಎದುರುಮನೆಯ ಆಂಟಿ ನಮ್ಮ ಪಕ್ಕದ ಮನೆಯ ಆಂಟಿಗೆ ಏನೋ ಸನ್ನೆ ಮಾಡ್ತಾರೆ. ಇಬ್ಬರೂ ಒಂಥರಾ ನಗ್ತಾರೆ. ಎಲ್ಲಾದರೂ ನನ್ನನ್ನು ಕಂಡರೆ ಸಾಕು, ಪುಟ್ಟೀ, ಅಂಕಲ್ ಬೆಳಿಗ್ಗೆ ಹೋದರಾ? ಎಂದು ಕೇಳಿ ಒಂಥರಾ ನಗ್ತಾರೆ. ಅದೂ ಸಾಲದೂ ಅಂತ ಅದೇ ಬೀದಿಯಲ್ಲಿರುವ ನನ್ನ ಗೆಳತಿ ನಿಶಾಳ ಅಮ್ಮನಿಗೂ ಏನೋ ಹೇಳಿದ್ದಾರೆ. ಈಗೀಗ ನಿಶಾ ಕೂಡ ನನ್ನೊಂದಿಗೆ ಹೆಚ್ಚು ಮಾತಾಡಲ್ಲ. ಮನೆಗೆ ಬರಲ್ಲ. ಯಾಕೆ ಬರಲ್ಲ ಎಂದರೆ ನಮ್ಮಮ್ಮ ಬಯ್ತಾರೆ ಅಂತಾಳೆ. ಅಮ್ಮನಿಗೆ ಹೇಳಿದರೆ ಯಾರೇಕೆ ಬೇಕು ನೀನೊಬ್ಬಳೇ ಆಡಿಕೋ ಅಂತಾಳೆ. ಒಂದು ದಿನ ಅಂಕಲ್ ಬರೋದರಿಂದಲೇ ಹೀಗೆ ಅಂತ ಧೈರ್ಯ ಮಾಡಿ ಹೇಳಿದ್ದಕ್ಕೆ ನಮ್ಮಮ್ಮ ಹೊಡೆದ ನೋವಿಗೆ ನಾನು ಒಂದ ಮಾಡಿಕೊಂಡುಬಿಟ್ಟೆ ಟೀಚರ್. ಈಗೀಗ ನನಗೆ ಶಾಲೆಯಲ್ಲಿ ಕೂಡ ಯಾರನ್ನು ನೋಡಿದರೂ ಭಯ. ಇವರಿಗೂ ನಮ್ಮ ಮನೆಗೆ ಅರ್ಜುನ್ ಅಂಕಲ್ ಬರುವ ವಿಷಯ ನಿಶಾಳಿಂದ ತಿಳಿದು ಹೋಗಿದಯೇನೋ, ಇವರೂ ನನ್ನೊಂದಿಗೆ ಮಾತನಾಡಲು ಬರುವುದಿಲ್ಲವೇನೋ ಅಂತ. ಅದಕ್ಕೇ ಟೀಚರ್ ನಾನು ಈಗೀಗ ಶಾಲೆಯಲ್ಲಿ ಬರೀ ನಿಶಾಳನ್ನು ನೋಡೋದೇ ಆಗಿಹೋಗಿದೆ, ಅವಳು ಯಾರ ಹತ್ರ ಮಾತಾಡ್ತಾಳೋ, ಏನು ಹೇಳ್ತಾಳೋ ಅಂತ.

ಇಷ್ಟು ಹೇಳಿ ಪ್ರಗತಿ ಸುಸ್ತಾದವಳಂತೆ ಕುಳಿತು ಸೂರು ನೋಡತೊಡಗಿದಳು.

ಈ ಮಗುವಿಗೆ ಅದರ ಸದ್ಯದ ವಾತಾವರಣ ಬದಲಾಗಬೇಕು ಅಥವಾ ಕೌನ್ಸೆಲಿಂಗ್ ಮಾಡಬೇಕು. ಆದರೆ ಇದನ್ನು ಯಾರಿಗೆ, ಹೇಗೆ ಹೇಳುವುದು ನೀವೇ ಹೇಳಿ.
ನಂದಾ ಹೆಗಡೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಮಗುವಿನ ಕಥೆ: ನಂದಾ ಹೆಗಡೆ

  1. ಚೇ ಈ ದೊಡ್ಡವರು ಮಾಡೋ ತಪ್ಪುಗಳಿಗೆ ಮಕ್ಕಳು ಬೆಲೆ ಕೊಡಬೇಕು .ಇದರಿಂದ ಆ ಮಗು ಎಷ್ಟು ಹಿಂಸೆ ಪಟ್ಟಿದೆ ಏನು ಹೇಳೋದು .

  2. ಹೌದು ಸ್ಮಿತಾ ಅವರೇ.ಇದು ಈಗೀಗ ಸಮಾಜದಲ್ಲಿ ನಾವು ನೋಡುತ್ತಿರುವ ಹೊಸ ಸಮಸ್ಯೆ ಅಲ್ವಾ

Leave a Reply

Your email address will not be published. Required fields are marked *