“ಮಕ್ಕಳ ಸುರಕ್ಷತೆಗಿರಲಿ ಮೊದಲ ಆದ್ಯತೆ” : ಹೊರಾ.ಪರಮೇಶ್ ಹೊಡೇನೂರು

"ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಹೊಣೆ" ಎಂಬ ಸಾಮಾಜಿಕ ಕಾಳಜಿಯ ಘೋಷವಾಕ್ಯ ಇಂದಿನ ದಿನಮಾನಗಳಲ್ಲಿ ತುಂಬಾ ಚಾಲ್ತಿಯಲ್ಲಿದೆ. ಏಕೆಂದರೆ, ಭವಿಷ್ಯದ ನಾಗರೀಕರಾಗಿರುವ ಮಕ್ಕಳ ಬಾಲ್ಯವು ತುಂಬಾ ಆಯಕಟ್ಟಿನದ್ದಾಗಿದ್ದು, ತಮ್ಮ ಮನೆಯ, ಶಾಲೆಯ ಮತ್ತು ಸಮುದಾಯದ ನಡುವೆ ಸಹಜ ತುಂಟಾಟ, ತರಲೆ, ಚೇಷ್ಟೆ, ಹುಡುಗಾಟಿಕೆಗಳಿಂದ ಕೂಡಿರುತ್ತದೆ ಮತ್ತು ಈ ಸಂದರ್ಭಗಳಲ್ಲಿ ಅಕಾಸ್ಮಾತ್ ಆಗಿ ಅಚಾತುರ್ಯಗಳು ಉಂಟಾದಾಗ ಅನಾಹುತಗಳೇ  ಜರುಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಂತಹ ಕೆಲವು ಸಂದರ್ಭಗಳು, ಸಾಧ್ಯತೆಗಳ ಬಗೆಗೆ ಒಂದಿಷ್ಟು ಮೆಲುಕು ಹಾಕುತ್ತಾ, ಮಕ್ಕಳ ಸುರಕ್ಷತೆಗೆ ಹೇಗೆ ಹೊಣೆಗಾರಿಕೆ ನಿಭಾಯಿಸಬೇಕೆಂಬುದನ್ನು ಕುರಿತು ಅವಲೋಕಿಸೋಣ.

ಅಂದೊಂದು ದಿನ ಪೈಪ್ ಲೈನ್ ಒಡೆದಿದ್ದರಿಂದ ಶಾಲೆಯಲ್ಲಿನ ಕುಡಿಯುವ ನೀರಿನ ಟ್ಯಾಂಕ್ ಖಾಲಿಯಿತ್ತು. ಪರ್ಯಾಯವಾಗಿ ಪಕ್ಕದಲ್ಲಿಯೇ ಇರುವ ಬೋರ್ ವೆಲ್ ನಿಂದ ನೀರು ಬಳಸಿಕೊಳ್ಳಲು ಅವಕಾಶ ಕಲ್ಪಿಸಿದೆವು. "ಕ್ಷೀರ ಭಾಗ್ಯ" ಯೋಜನೆಯ ಹಾಲು ಕುಡಿಯಲು ಲೋಟ ತೊಳೆಯಲು ಹೋದ ಒಂದು ಪುಟ್ಟ ಮಗು ಬೆರಳಿಗೆ ಗಾಯ ಮಾಡಿಕೊಂಡಿತ್ತು. ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿದ್ದ ಟಿಂಚರ್ ಹಚ್ಚಿ ಬ್ಯಾಂಡೇಜ್ ಹಾಕಿ ಸಮಾಧಾನ ಪಡಿಸಿದೆವು.

ಮತ್ತೊಂದು ದಿನ ವಲಯ ಮಟ್ಟದ ಕ್ರೀಡಾಕೂಟಕ್ಕಾಗಿ ಅಭ್ಯಾಸ ಮಾಡಿಕೊಳ್ಳುವಾಗ ಕಬಡ್ಡಿ ಆಡುತ್ತಿದ್ದ ಒಬ್ಬ ವಿದ್ಯಾರ್ಥಿಯ ತಲೆಗೆ ತುಂಬಾ ಪೆಟ್ಟು ಬಿದ್ದಿತು. ತಕ್ಷಣ ಸಮೀಪವೇ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಿ ಚಿಕಿತ್ಸೆ ಕೊಡಿಸಿದೆವು.

ಒಮ್ಮೆ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು ಹತ್ತಾರು ಮಕ್ಕಳನ್ನು ಕರೆದೊಯ್ದ ಶಾಲೆಯೊಂದರ ಆಟೋ ನಿಯಂತ್ರಣ ತಪ್ಪಿ, ಪಲ್ಟಿಯಾಗಿ ಕೆಲವರಿಗೆ ಗಂಭೀರ ಪೆಟ್ಟುಗಳಾದರೆ, ಒಂದಿಬ್ಬರು ಮಕ್ಕಳು ಪ್ರಾಣ ಕಳೆದುಕೊಂಡರು. ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸದಿದ್ದುದರ ಪರಿಣಾಮ ಆ ಶಾಲಾ ಸಿಬ್ಬಂದಿ ಕಾನೂನು ಕ್ರಮಕ್ಕೆ ಒಳಗಾಗಿ ಪರಿತಪಿಸಬೇಕಾಯಿತು. ಆದರೆ, ಅಮೂಲ್ಯವಾದ, ಒಮ್ಮೆ ಹೊದರೆ ಮತ್ತೆ ಬಾರದ ಪ್ರಾಣ ಕಳೆದುಕೊಂಡ ಮಕ್ಕಳ ಪಾಲಕರು ಜೀವನವಿಡೀ ಪರಿತಪಿಸುವಂತಾಯಿತು.

ಹೀಗೆ, ನೂರಾರು ವಿದ್ಯಾರ್ಥಿಗಳು ಕಲಿಯುವ ಶಾಲೆಗಳಲ್ಲಿ ಆಗಾಗ ಇಂತಹ ಘಟನೆಗಳು ಜರುಗುತ್ತಿರುತ್ತವೆ.ಸಣ್ಣ ಪುಟ್ಟ ಘಟನೆಗಳಾದರೆ ಅಷ್ಟೊಂದು ಗಂಭೀರತೆ ಪಡೆದುಕೊಳ್ಳುವುದಿಲ್ಲ. ಒಂದು ವೇಳೆ ತೀವ್ರತರವಾದ ಅಥವಾ ಮಾರಣಾಂತಿಕವಾದ ಪೆಟ್ಟು ಬಿದ್ದರೆ ಮಕ್ಕಳಿಗೂ ಕಷ್ಟ, ಶಿಕ್ಷಕ ಸಿಬ್ಬಂದಿಗೂ ಅಪಾಯಕಾರಿ. ಆದುದರಿಂದ ಅವರ "ಸುರಕ್ಷತೆ"   ಕಡೆಗೆ ಹೆಚ್ಚು ಕಾಳಜಿ ವಹಿಸಬೇಕಾದುದು ಅತ್ಯವಶ್ಯ.

ಮನೆಯಲ್ಲಿ:

ಬಿಡುವಿನ ಸಮಯದಲ್ಲಿ ಆಟವಾಡುವಾಗ , ಗೆಳೆಯರೊಡನೆ ತುಂಟಾಟ ಚೇಷ್ಟೆಗಳಲ್ಲಿ ತೊಡಗಿರುವಾಗ ತುಂಬಾ ಜಾಗರೂಕರಾಗಿರಬೇಕಾದುದು ಮಕ್ಕಳಿಗೆ ಬಹಳ ಅವಶ್ಯ. ಅಲ್ಲದೆ ಮನೆಯಲ್ಲಿ ವಿದ್ಯುತ್ ಉಪಕರಣಗಳ ಜೊತೆ, ಚಾಕು ಸೂಜಿ ದಬ್ಬಳ ಕತ್ತರಿಯಂತಹ ಸಾಧನಗಳ ಜೊತೆ ಹುಡುಗಾಟ ಆಡುವುದೂ ಅಪಾಯಕಾರಿ. 

ಶಾಲೆಗಳಲ್ಲಿ:

ಶಾಲೆಗಳಿಗೆ ನಡೆದುಕೊಂಡೇ ಹೋಗಿ ಬರುವವರು ರಸ್ತೆಯ ಒಂದೇ ಬದಿಯಲ್ಲಿಯೇ (ಎಡ) ಸಾಗಬೇಕು. ಗೆಳೆಯರ ಜೊತೆ ಆಟವಾಡುತ್ತಾ, ತಳ್ಳಾಡುತ್ತಾ ನಡೆಯುವುದು ಸುತರಾಮ್ ಸರಿಯಲ್ಲ. ವಾಹನಗಳು, ಹಳ್ಳಿಗಳಲ್ಲಾದರೆ ದನ ಎಮ್ಮೆಗಳು ಬೀಡಾಡಿ ನಾಯಿಗಳು ಮನಸೋ ಇಚ್ಛೆ ಓಡಾಡುವುದರಿಂದ ಬಹಳ ಹುಷಾರಾಗಿ ಹೋಗಬೇಕು.

ತರಗತಿ ಕೊಠಡಿಗಳಲ್ಲಿ ಶಿಕ್ಷಕರಿಲ್ಲದ ವೇಳೆ ಸಹಪಾಠಿಗಳೊಂದಿಗೆ ಕೀಟಲೆ ಮಾಡುವುದು, ಪೆನ್ನು ಪೆನ್ಸಿಲ್ ಗಳಿಂದ ಚುಚ್ಚುವುದು, ಬೆಂಚುಗಳ ಮೇಲೆ ಹತ್ತಿ ಜಿಗಿದಾಡುವುದು….ಇಂತಹ ಚೇಷ್ಟೆಗಳಿಂದ ಕೆಲವೊಮ್ಮೆ ಅನಾಹುತಗಳಾಗುವ ಸಂಭವವಿರುತ್ತದೆ. ಹೆಚ್ಚು ಕಡಿಮೆಯಾದರೆ ಮಕ್ಕಳಲ್ಲಿಯೇ ದ್ವೇಷ ಪ್ರತೀಕಾರ ಭಾವನೆಗಳು ಮೊಳೆತು, ನಿರ್ಮಲ ಮನಸ್ಸು ರಾಡಿಯಾಗಿ ಕಲಿಕೆಗೆ ಬೇಕಾದ ಆಸಕ್ತಿ ಏಕಾಗ್ರತೆಗೆ ಭಂಗ ಉಂಟಾಗುತ್ತದೆ. ಆಟದ ಸಮಯದಲ್ಲಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ಆಡಬೇಕು. ಇಲ್ಲದಿದ್ದರೆ ಎಡವಟ್ಟುಗಳಾದಾಗ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಸೋಲು ಗೆಲುವುಗಳನ್ನು ಕ್ರೀಡಾ ಮನೋಭಾವದೊಂದಿಗೆ ಸ್ವೀಕರಿಸುವ ಧೋರಣೆ ಬೆಳಹಿಕೊಳ್ಳಬೇಕೇ ವಿನಃ ದ್ವೇಷಾಸೂಯೆಗಳಿಗೆ ಎಡೆ ಮಾಡಿಕೊಡಬಾರದು.

ಶಾಲೆಗಳಲ್ಲಿರುವ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ಅಸ್ವಸ್ಥರಾದ ಸುದ್ದಿಗಳು, ಮೃತಪಟ್ಟ ಧಾರುಣ ಘಟನೆಗಳು ವರದಿಯಾಗುವುದನ್ನು ನೋಡುತ್ತಲೇ ಇರುತ್ತೇವೆ. ಅಲ್ಲದೆ ನೂಕು ನುಗ್ಗಲಿನಲ್ಲಿ ಸಾಂಬಾರ್ ಪಾತ್ರೆಯೊಳಗೆ ಬಿದ್ದ ಮಕ್ಕಳು ತೀವ್ರತರ ಗಾಯಗಳಿಗೆ ತುತ್ತಾದ ಉದಾಹರಣೆಗಳೂ ಇವೆ. ಇಂತಹ ಅವಘಡಗಳ ತಡೆಗೆ ಶಿಸ್ತು ಮತ್ತು ಸ್ವಚ್ಚತೆಯ ಕಡೆಗೆ ಹೆಚ್ಚು ಗಮನ ನೀಡಬೇಕಾದುದು ಅತ್ಯಗತ್ಯವಾಗಿದೆ.ಶಾಲಾ ಮುಖ್ಯಸ್ಥರು, ಬಿಸಿಯೂಟ ಸಿಬ್ಬಂದಿಯು ಪರಸ್ಪರ ಸಹಕಾರದೊಂದಿಗೆ, ಕರ್ತವ್ಯವನ್ನು ಸೇವಾ ಮನೋಭಾವದೊಂದಿಗೆ ನಿರ್ವಹಿಸುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಕಡಿವಾಣ ಹಾಕಬಹುದಾಗಿದೆ.

ಕೈತೋಟ ನಿರ್ವಹಣೆಯಲ್ಲಿ:

ಶಾಲಾವರಣದ ಕೈತೋಟ ನಿರ್ವಹಣೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಕ್ಕಳಿಂದ ಮಾಡಿಸುವಾಗ ಬಹಳ ನಾಜೂಕಾಗಿ ಉಪಾಯದಿಂದ ಮಾಡಬೇಕು. ಈ ಸಂದರ್ಭದಲ್ಲಿ ಶಿಕ್ಷಕರ ಜೊತೆ ಮುಕ್ತವಾಗಿ ಮಾತನಾಡಿ ಮಕ್ಕಳಿಂದ ಸಾಧ್ಯವಾಗುವ ಕೆಲಸವನ್ನಷ್ಟೇ ಮಾಡುವುದು ಉತ್ತಮ. ಶ್ರಮದಾಯಕ ಕೆಲಸಗಳನ್ನು ಶಾಲಾ ಮಕ್ಕಳಿಂದ ಮಾಡಿಸುವುದು ಅಪರಾಧವೆಂಬುದು ಶಿಕ್ಷಕರಿಗೆ ತಿಳಿದೇ ಇರುವುದರಿಂದ ಯಾರೂ ಮಕ್ಕಳಿಗೆ ಒತ್ತಾಯ ಮಾಡುವುದಿಲ್ಲ. 

ಶಿಕ್ಷಕರೊಂದಿಗೆ ಹೆಚ್ಚು ಸಲಿಗೆ ಬೇಡ:

ಅಲ್ಲಲ್ಲಿ ಶಾಲಾ ಶಿಕ್ಷಕರೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಕುರಿತು ವರದಿಗಳು ಬರುತ್ತಿರುತ್ತವೆ. ಯಾವನೋ ಒಬ್ಬ ಹಾಗೆ ಮಾಡಿದನೆಂದರೆ ಎಲ್ಲರೂ ಹಾಗೆಯೇ ಇರುತ್ತಾರೆ ಎಂಬ ಪೂರ್ವಾಗ್ರಹ ಪೀಡಿತ ಧೋರಣೆ ಸರಿಯಲ್ಲ. ಆದರೂ ಶಿಕ್ಷಕರೊಂದಿಗೆ ಅಗತ್ಯಕ್ಕಿಂತ ಹೆಚ್ಚಾದ ಅವಲಂಬನೆ, ಸಲಿಗೆ ಇರಬಾರದು. ಶಿಕ್ಷಕರನ್ನು ಒಂಟಿಯಾಗಿ ಭೇಟಿಯಾಗುವುದು, ಅವರ ಮನೆಗೆ ಒಬ್ಬರೇ ಹೋಗುವುದು, ಅವರ ಮೈ ಕೈ ಸ್ಪರ್ಶಿಸಿ ಮಾತನಾಡುವುದು…ಇಂತಹ ಚಟುವಟಿಕೆಗಳಿಂದ ದೂರವಿದ್ದಷ್ಟೂ ಮನಸ್ಸು ನಿರ್ಮಲವಾಗಿರುತ್ತದೆ.  ಒಂದು ವೇಳೆ ಶಿಕ್ಷಕರೇನಾದರೂ ಅನುಚಿತ ವರ್ತನೆ ತೋರಿಸುತ್ತಿದ್ದಾರೆಂದು ಅನಿಸಿದರೆ, ಭಯಪಡದೆ ಮುಖ್ಯಸ್ಥರಿಗೆ, ಮನೆಯ ಹಿರಿಯರಿಗೆ ಹೇಳುವುದರಿಂದ ಮುಂದಿನ ಕ್ಲಿಷ್ಟ ಸಮಸ್ಯೆಗಳು ಸುಲಭವಾಗಿ ಆರಂಭದಲ್ಲಿಯೇ ಪರಿಹಾರವಾಗುತ್ತವೆ. ಆದರೆ ಎಚ್ಚರ! ಯಾರೋ ದುರುದ್ದೇಶದಿಂದ, ಕೆಲವು ಶಿಕ್ಷಕರ ಮೇಲಿನ ವೈಯಕ್ತಿಕ ದ್ವೇಷಕ್ಕಾಗಿಯೂ ಹಾಗೆ ಮಕ್ಕಳನ್ನು ಪ್ರೇರೇಪಿಸಿ ತಮ್ಮ ಹಗೆ ಸಾಧಿಸಿಕೊಳ್ಳುವವರೂ ಇರುತ್ತಾರೆ. ಅಂತಹ ದುರುದ್ಧೇಶಪೂರಿತ ಕಾರ್ಯಗಳಿಗೆ ಮಕ್ಕಳು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳಬಾರದು ಮತ್ತು ವ್ಯಕ್ತಿತ್ವಕ್ಕೆ ಮಸಿ ಬಳದುಕೊಳ್ಳಬಾರದು.

ಸುರಕ್ಷತೆಗಾಗಿ ಸೂಕ್ತ ಟಿಪ್ಸ್ ಗಳು:
* ಪೋಷಕರು ಹೇಳುವ ಕೆಲವು ಬುದ್ಧಿಮಾತುಗಳನ್ನು ತಪ್ಪದೆ ಪಾಲಿಸಬೇಕು. ಅದರಲ್ಲೂ ಅಜ್ಜ-ಅಜ್ಜಿಯರ ಅನುಭವ ಜನ್ಯವಾದ ನುಡಿಗಳನ್ನು ಅನುಪಾಲನೆ ಮಾಡಬೇಕು.
* ಐರನ್ ಬಾಕ್ಸ್, ಟಿವಿ ಸೆಟ್, ಸ್ವಿಚ್ ಬೋರ್ಡ್, ವಾಟರ್ ಹೀಟರ್ ಮುಂತಾದ ವಿದ್ಯುತ್ ಉಪಕರಣಗಳನ್ನು ತಿಳುವಳಿಕೆ ಇಲ್ಲದೆ ಮುಟ್ಟಬಾರದು ಅಥವಾ ಅವುಗಳೊಂದಿಗೆ ಚೆಲ್ಲಾಟ ಆಡಬಾರದು. ತಿಳಿದುಕೊಳ್ಳಬೇಕೆಂದರೆ ಹಿರಿಯರ ಮಾರ್ಗದರ್ಶನ ಪಡೆಯಲೇಬೇಕು.
* ಮನೆಯಲ್ಲಿ ಬಿಡುವಿನ ವೇಳೆ ಸ್ನೇಹಿತರೊಂದಿಗೆ ಆಟವಾಡುವಾಗ ಅತಿಯಾದ ಹುಡುಗಾಟಿಕೆ ಸಲ್ಲದು. ಪರಸ್ಪರ ಬಯ್ದಾಟ, ಜಗಳ, ಬಡಿದಾಟಗಳಂತಹ ನಕಾರಾತ್ಮಕ ಅಂಶಗಳಿಂದ ಮನಸ್ಸು ರಾಡಿಯಾಗಿ ವ್ಯಕ್ತಿತ್ವದ ಮೇಲೆ ದುಷ್ಪರಿಣಾಮ ಬೀರುತ್ತದೆ.
* ರಸ್ತೆಯ ಮಧ್ಯೆ, ತೆರೆದ ಬಾವಿಗಳ ಅಕ್ಕ ಪಕ್ಕ, ಆಟವಾಡಬಾರದು, ಅಲ್ಲದೆ ಕಾಲುವೆ, ಕೆರೆಗಳಲ್ಲಿ ಈಜು ಬಾರದೆ, ದೊಡ್ಡವರ ಮೇಲ್ವಿಚಾರಣೆ ಇಲ್ಲದೆ ಈಜುವ ಸಾಹಸಕ್ಕೆ ಹೋಗಬಾರದು.
* ನಗರ ಪಟ್ಟಣ ಪ್ರದೇಶಗಳಲ್ಲಿ ಆಟೋಗಳ ಮೂಲಕ ಶಾಲೆಗೆ ಹೋಗುವ ಮಕ್ಕಳು ಕ್ಷಣ ಕ್ಷಣಕ್ಕೂ ಎಚ್ಚರ ವಹಿಸಬೇಕು.ಹೊರಕ್ಕೆ ಕೈ ಕಾಲು ತಲೆ ಚಾಚಬಾರದು. ಹಣದ ಆಸೆಗಾಗಿ ಮಿತಿ ಮೀರಿ ಮಕ್ಕಳನ್ನು ತುಂಬುವ ಆಟೋ ಚಾಲಕ, ಮಾಲೀಕರನ್ನು ನಿರ್ಲಕ್ಷಿಸಬೇಕು.
*  ಶಾಲೆಗಳಲ್ಲಿ ಶಿಕ್ಷಕರ ಮೇಲ್ವಿಚಾರಣೆಯಲ್ಲಿಯೇ ಆಟೋಟ, ಕೈತೋಟ ನಿರ್ವಹಣೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು.
*  ಹಾಲು, ಬಿಸಿಯೂಟ ಸೇವನೆ ಸಂದರ್ಭದಲ್ಲಿ ಸರತಿ ಅಥವಾ ಪಂಕ್ತಿಯನ್ನು ಪಾಲಿಸಬೇಕು. ಶಿಕ್ಷಕರು ಈ ಸಮಯದಲ್ಲಿ ಸಹಕಾರ ನೀಡುವುದು ಒಳಿತು.
*  ಪಠ್ಯೇತರ ಸ್ಪರ್ಧೆಗಳಿಗೆ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಮಕ್ಕಳನ್ನು ಕರೆದೊಯ್ಯುವಾಗ ಸರ್ಕಾರೀ ವಾಹನಗಳನ್ನೇ ಬಳಸುವುದು ಕ್ಷೇಮ. ಅನಿವಾರ್ಯದ ಸಂದರ್ಭಗಳಲ್ಲಿ ಖಾಸಗಿಯಾದ ವಾಹನಗಳ ಕಾರ್ಯಕ್ಷಮತೆ ಪರಿಶೀಲಿಸಿಕೊಂಡು, ಮಿತಿಯಲ್ಲಿಯೇ ಕರೆದೊಯ್ಯುವುದು ಒಳ್ಳೆಯದು.
*  ಶ್ರಮಕ್ಕೆ ಮೀರಿದ ಇಲ್ಲವೇ ತಿಳುವಳಿಕೆ ಇರದ ಕೆಲಸವನ್ನು ಕುತೂಹಲಕ್ಕಾಗಿ ,ಬಲವಂತವಾಗಿ ಮಾಡಲು ಯಾವತ್ತೂ ಮುಂದಾಗಬಾರದು.
*  ಸಣ್ಣ ಪುಟ್ಟ ಸಾಮಾನುಗಳನ್ಪು ತರಲು ಅಂಗಡಿ, ಹೋಟೆಲ್ ಗಳಿಗೆ ಹೋಗುವಾಗ, ರಸ್ತೆಯಲ್ಲಿ ಸಂಚರಿಸುವ ಬೀದಿ ನಾಯಿಗಳು, ವಾಹನಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು.
*  ವಿದ್ಯಾರ್ಥಿನಿಯರು ಶಿಕ್ಷಕರೊಂದಿಗೆ ಅಗತ್ಯಕ್ಕಿಂತ ಹೆಚ್ಚಾದ ಸಂಪರ್ಕ ಇಟ್ಟುಕೊಳ್ಳಬಾರದು, ಒಂಟಿಯಾಗಿ ಭೇಟಿ ಮಾಡಬಾರದು. ಅವರ ವರ್ತನೆಯಲ್ಲಿ ಏನಾದರೂ ಅನುಮಾನ ವ್ಯಕ್ತವಾದರೆ ಮುಖ್ಯಸ್ಥರ, ಪೋಷಕರ ನೆರವು ಪಡೆಯಬೇಕು.
ಮಾನಸಿಕ ಸುರಕ್ಷತೆಗಾಗಿ :
* ತಂಬಾಕು ಉತ್ಪನ್ನಗಳನ್ನು ದೊಡ್ಡವರು ಸೇವಿಸುತ್ತಾರೆಂಬ ಕಾರಣಕ್ಕೆ ಕುತೂಹಲದಿಂದ ಪ್ರಯತ್ನಿಸಲು ಹೋಗಬಾರದು.
* ಗಾಂಜಾ, ಅಫೀಮುಗಳಂತಹ ಮಾದಕ ವಸ್ತುಗಳ ಬಗ್ಗೆಯೂ ಅನಾಸಕ್ತಿ ತೋರಿಸಿ ನಿರ್ಲಕ್ಷಿಸಬೇಕು.
* ಮದ್ಯಪಾನ ಸೇವನೆಯು ಸಾಮಾಜಿಕ, ಸಾಂಸಾರಿಕ ಮತ್ತು ಆರ್ಥಿಕ ಸ್ಥಿತಿ ಹಾಗು ಆರೋಗ್ಯವನ್ನು ಹಾಳು ಮಾಡುತ್ತದೆಂಬ ಅರಿವು ಬೆಳೆಸಿಕೊಳ್ಳಬೇಕು.
* ಪಾಲಕರಾದವರು ಮಕ್ಕಳಿಗೆ ಮೊಬೈಲ್ ಉಪಕರಣವನ್ನು ಅದರನ್ನೂ ನೆಟ್ ಸಂಪರ್ಕವಿರುವ ವಾಟ್ಸಪ್, ಫೇಸ್ಬುಕ್, ಗೂಗಲ್ ಸರ್ಚ್ ನಂತಹ ಅವಕಾಶಗಳಿಗೆ ಅನುಮತಿ ನೀಡಬಾರದು. ಅವಶ್ಯವಿದ್ದರೆ, ತಮ್ಮ ಉಸ್ತುವಾರಿಕೆಯಲ್ಲಿಯೇ ಕೆಲವೊಮ್ಮೆ ಬಳಸಲು ಅವಕಾಶ ಕೊಡಬಹುದು.
* ಸಜ್ಜನರೊಂದಿಗೆ ಸಹವಾಸ, ಸಮಯಕ್ಕೆ ತಕ್ಕ ಸದ್ವರ್ತನೆ, ಹಿತ ಮಿತವಾದ ಮಾತು ಎಲ್ಲವೂ 'ಸುರಕ್ಷತೆ' ಮೇಲೆ ಪರೋಕ್ಷ ಪಾತ್ರ ನಿರ್ವಹಿಸುತ್ತವೆ.
* ಮಳೆಗಾಲದಲ್ಲಿ ಜೊತೆಗೆ ಛತ್ರಿ ಒಯ್ಯುವುದು, ಸದಾ ಪಾದರಕ್ಷೆಗಳನ್ನು ಧರಿಸುವುದು, ರಾತ್ರಿವೇಳೆ ಟಾರ್ಚ್ ಬಳಸುವುದು, ಮನೆಯಲ್ಲಿ ಮತ್ತು ಶಾಲೆಯಲ್ಲಿ ಶೌಚಾಲಯ ಬಳಸುವುದು, ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಡುವುದು…. ಇವೇ ಮೊದಲಾದ ಅನೇಕ ಅಂಶಗಳೂ "ಮಕ್ಕಳ ಸುರಕ್ಷತೆ" ಮೇಲೆ ಉತ್ತಮ ಪ್ರಭಾವ ಬೀರುತ್ತವೆ.

ಒಟ್ಟಿನಲ್ಲಿ ಶಾಲಾ ಮಕ್ಕಳ ಸುಂದರ ಕನಸುಗಳು ಶಿಕ್ಷಣದ ಮೂಲಕ ನನಸಾಗಬೇಕಾದರೆ, ಕಲಿಕಾ ಚಟುವಟಿಕೆಗಳಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು, ತಮ್ಮ ಅಮೂಲ್ಯ ಬಾಲ್ಯದ ವಿವಿಧ ಸಂದರ್ಭಗಳಲ್ಲಿ ಸುರಕ್ಷತೆಯ ಕಡೆಗೂ ಕೊಡಬೇಕಾದುದು ಅತ್ಯಂತ ಅವಶ್ಯಕವಾಗಿದೆ. ಈ ಸಾಮೂಹಿಕ ಹೊಣೆಗಾರಿಕೆಯನ್ನು ಪೋಷಕರು, ಶಿಕ್ಷಕರು, ಹಾಗೂ ಸಮಸ್ತ ನಾಗರೀಕರೂ ನಿರ್ವಹಿಸಬೇಕಾದ್ದು ಸಾಮಾಜಿಕ, ನೈತಿಕ ಜವಾಬ್ದಾರಿಯಾಗಿದೆ.ಮಕ್ಕಳೂ ಸರಿ ತಪ್ಪು ಸುರಕ್ಷತೆ ಪ್ರಜ್ಞೆಯನ್ನು ಹೊಂದುವುದೂ ಅತ್ಯಗತ್ಯ.
           
->ಹೊರಾ.ಪರಮೇಶ್ ಹೊಡೇನೂರು

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ಅಕ್ಕಿಮಂಗಲ ಮಂಜುನಾಥ
ಅಕ್ಕಿಮಂಗಲ ಮಂಜುನಾಥ
9 years ago

ಮಕ್ಕಳ ಬಗೆಗಿನ ಕಾಳಜಿಯನ್ನು ಹೊ.ರಾ.ಪರಮೇಶ್ ರವರು ಬಹಳ ಆಪ್ತವಾಗಿ ವಿವರಿಸಿದ್ದಾರೆ.

1
0
Would love your thoughts, please comment.x
()
x