೧)ಶುಭೋದಯ
__________________
ದಿನಾ ನಾನು ಶಾಲೆಗೆ
ಹೋಗುವಂಥ ವೇಳೆಗೆ
ಹಾದಿಬದಿಯ ಬೇಲಿಯು
ಮುಡಿದು ನಿಂತ ಹೂವಿಗೆ
ಹೇಳುವೆ ಶುಭೋದಯ
ಹೊಳೆದಂಡೆಯ ಬಂಡೆಗೆ
ಒರಗಿನಿಂಥ ಜೊಂಡಿಗೆ
ರೆಕ್ಕೆಗೆದರಿ ಹಾರುವ
ಹಚ್ಚಹಸಿರು ಮಿಡತೆಗೆ
ಹೇಳುವೆ ಶುಭೋದಯ
ಎತ್ತರೆದೆಳನೀರಿಗೆ
ಹತ್ತುವಂಥ ಅಳಿಲಿಗೆ
ಪುಟ್ಟ ಮೂರುಗೆರೆಗಳ
ಅದರ ಮುದ್ದುಬೆನ್ನಿಗೆ
ಹೇಳುವೆ ಶುಭೋದಯ
ಹಾಲ್ದುಂಬಿದ ತೆನೆಗೆ
ಕೊಕ್ಕಿಡುವಾ ಹಕ್ಕಿಗೆ
ತೊಟ್ಟಿಲಾಗಿ ತೂಗುವ
ತಾಯಿಯಂಥ ಪೈರಿಗೆ
ಹೇಳುವೆ ಶುಭೋದಯ
ಬೆಳ್ಳಿಯಂಥ ಬೆಳಗಿಗೆ
ಚಿನ್ನದಂಥ ಕಿರಣಕೆ
ಬದುಕಿರುವ ತನಕವೂ
ಬದುಕುಳಿಯುವ ಚಿತ್ರಕೆ
ಹೇಳುವೆ ಶುಭೋದಯ
೨)ಗುಂಡನ ಕರು
_______________________
ಸಂತೆಗೆ ಹೋಗಿ ತಂದರು ಅಪ್ಪ
ಸುಂದರವಾದ ಹಸುವನ್ನು
ಹಾಲನು ಕುಡಿದು ಬೆಣ್ಣೆಯ ತಿಂದು
ಬೆಳೆಯುವೆ ಎತ್ತರ ನಾನಿನ್ನು
ಹಬೆಯಾಡುವ ಬಿಸಿಬಿಸಿಯನ್ನಕ್ಕೆ
ಸುರಿವಳು ಅಮ್ಮ ಕೆನೆಮೊಸರು
ಬಿಸಿಬಿಸಿ ರುಚಿರುಚಿ ತುಪ್ಪವು ಇರಲು
ಮುಟ್ಟಬಹುದೆ ನಾ ಬಸ್ಸಾರು
ಮರೆಯುವುದುಂಟೆ ಕೊಟ್ಟಿಗೆ ತುಂಬ
ಕರುವಿನ ಚೇಷ್ಟೆ ಹಲವಾರು
ಅದರೆಂಜಲನೇ ಕುಡಿಯುವೆನಾನು
ಅಂದರೆ ನಾವು ಸೋದರರು
ತೋಟಕೆ ಹೋಗಿ ತರುವೆನು ದಿನವು
ಗರಿಗರಿ ಗರಿಕೆಯ ಚಿಗುರನ್ನು
ಕುಕ್ಕೆಗೆ ಹಾಕಿ ಕಟ್ಟುವೆ ಮೂತಿಗೆ
ನೆಕ್ಕದ ಹಾಗೆ ಮಣ್ಣನ್ನು
ಶಾಲೆಗೆ ದಿನವೂ ಹೋಗಲೆಬೇಕು
ಏನು ಮಾಡಲಿ ಬೇಜಾರು
ಕರುವನು ಸಂಗಡ ಕರೆದೊಯ್ದರೆ ನಾ
ಬೈದೇಬಿಟ್ಟರು ಟೀಚರ್ರು
೩)ಮಗಳಿಂದ ಪಾಠ
_______________________
ನೋಡು ಮಗಳೇ ನೋಡು ಮಗಳೇ
ಗೋಲ್ಡು ಚೈನು ತಂದೆನು
ಥ್ಯಾಂಕ್ಯೂ ಪಪ್ಪಾ ಥಾಂಕ್ಯೂ ಪಪ್ಪಾ
ಎಷ್ಟು ಕೊಟ್ಟೆ ದುಡ್ಡನು
ಹತ್ತು ಸಾವ್ರ ಅಷ್ಟೇ ಮರಿ
ಯಾಕೆ ಅದರ ಟೆನ್ಷನು
ಸಂಬಳ ಇನ್ನು ಬರಲೇ ಇಲ್ಲ
ಹೇಗೆ ತಂದೆ ಚೈನನು
ಹೇಗೋ ತಂದೆ ನಿನಗೆ ಯಾಕೆ
ಹಾಕೋ ಕೊರಳಿಗಿದನ್ನು
ಹೇಳದಿದ್ರೆ ನಿನ್ನ ಜೊತೆ
ಮಾತು ಬಿಟ್ಟುಬಿಡುವೆನು
ಆಫೀಸಲ್ಲಿ ಗೆಳೆಯ ಕೊಟ್ಟ
ಕಾಸಿನಿಂದ ತಂದೆನು
ಸಾಲ ಮಾಡಿ ತಂದ ಒಡವೆ
ಖಂಡಿತ ನಾ ಒಲ್ಲೆನು
ಸಾಲವಲ್ಲ ಲಂಚದ ಹಣ
ಕ್ಷಮಿಸು ಮಗಳೇ ನನ್ನನು
ನಾಳೆ ಹೋಗಿ ಕೊಡಲೇಬೇಕು
ಅವರಿಗವರ ಹಣವನು
ಆಯ್ತು ಮಗಳೇ ಮುದ್ದುಮಗಳೇ
ಮತ್ತೆ ಹೀಗೆ ಮಾಡೆನು
ನನ್ನಪಪ್ಪಾಜಾಣಪಪ್ಪಾ
ಎಂದುಹೆಮ್ಮೆಪಡುವೆನು
*****
ಚೆನ್ನಾಗಿದೆ
ishtavaadavu padyagalu….kavigale
olleya shishugeetegalu
Modala padyavannu naaleye nam shaaleli vaachisthene….it is really nice n ………
Ellarigu dhanyavadagalu…