ಲೇಖನ

ಮಕ್ಕಳ ದಿನದ ಮಹತ್ವ: ಹೊರಾ.ಪರಮೇಶ್ ಹೊಡೇನೂರು

   

ಅಪ್ಪ ತನ್ನ ಅಂಗಿ ಜೇಬಿನಲ್ಲಿ ಸದಾ ಎರಡು ಪೆನ್ನುಗಳನ್ನು ಇಟ್ಟುಕೊಳ್ಳುತ್ತಿದ್ದ ಶಿಸ್ತುಬದ್ಧ ಜೀವನದ ವಕೀಲರು. ಮಗನಿಗೆ ಮಾತ್ರ ಆ ಎರಡು ಪೆನ್ನುಗಳ ಅಗತ್ಯವೇನು ಎಂಬ ತರ್ಕ. ಒಮ್ಮೆ ಅಪ್ಪನಿಗೆ ಹೇಳದೆ ಆ ಎರಡು ಪೆನ್ನುಗಳಲ್ಲಿ ಒಂದನ್ನು ಮಗ ಎಗರಿಸಿಬಿಟ್ಟ ಇದನ್ನು ಗಮನಿಸಿದ ಅಪ್ಪ ಹೆಂಡತಿ ಮಗನನ್ನು ಗದರಿಸಿ ಕೇಳಿದಾಗ ಮಗನು ತಾನು ತೆಗೆದುಕೊಂಡಿದುದಾಗಿ ಹೇಳಿದನು. ಇದನ್ನು ಕೇಳಿದ ಅಪ್ಪನು ಹೇಳದೇ ಕೇಳದೇ ಪೆನ್ನು ತೆಗದುಕೊಂಡಿದ್ದು ತಪ್ಪೆಂದು ತಿಳಿಸಿ ಬೈಯ್ದು ಬುದ್ಧಿ ಹೇಳಿದರು. ಈ ಪ್ರಸಂಗದಿಂದಲೇ ಮಗನು ಮುಂದೇ ತಾನೂ ಶಿಸ್ತಿನ ಸಿಪಾಯಿಯಾಗಿ ಅಪ್ಪನ ಆದರ್ಶಗಳನ್ನು ಮೈಗೂಡಿಸಿಕೊಂಡು ನಮ್ಮ ದೇಶದ ಪ್ರಥಮ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತಹ ಮಹಾ ಪುರುಷರೇ ಮೋತಿ ಲಾಲ್ ನೆಹರೂ ಮತ್ತು ಸ್ವರೂಪ ರಾಣಿಯವರ ಮಗನಾಗಿ 1889 ನವೆಂಬರ್ 14ರಂದು ಜನಿಸಿದ ಜವಾಹರ್ ಲಾಲ್ ನೆಹರು.

ನವೆಂಬರ್-14 ರ ದಿನ ಎಂದರೆ, ನಮ್ಮ ರಾಷ್ಟ್ರದ ಮಕ್ಕಳಿಗೆಲ್ಲ ವಿಶೇಷ ಸಡಗರದ ದಿನವಾಗಿದೆ. ಏಕೆಂದರೆ ಅಂದು ಜವಾಹರಲಾಲ್ ನೆಹರುರವರ ಜನ್ಮದಿನವನ್ನು ಅವರ ಅಭಿಲಾಷೆಯಂತೆಯೇ "ಮಕ್ಕಳ ದಿನ"ವನ್ನಾಗಿ ಆಚರಿಸುವ ಸುಸಂದರ್ಭವಾಗಿದೆ.

ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದ ನೆಹರೂರವರ ಹುಟ್ಟಹಬ್ಬವನ್ನು ಆಚರಿಸುವ ಪ್ರಸ್ತಾಪ ಬಂದಾಗ, ವ್ಯಕ್ತಿ ಪೂಜೆ ಮಾಡುವ ಬದಲು ಭವಿಷ್ಯದ ನಾಗರೀಕರಾಗುವ ಮುದ್ದು "ಮಕ್ಕಳ ಹಬ್ಬ"ವಾಗಲಿ ಎಂದು ಅಪೇಕ್ಷಿಸಿದರಂತೆ. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದುದರ ದ್ಯೋತಕವೆಂಬಂತೆ, ಎಲ್ಲಿಗೆ ಹೋದರೂ ಗುಲಾಬಿ ಹೂವನ್ನು ನೀಡಿ ಬೆನ್ನುತಟ್ಟುತ್ತಿದ್ದರಂತೆ. ಯಾವುದೇ ಸಭೆ-ಸಮಾರಂಭಗಳಿಗೆ ಹೋದರೂ ಮಕ್ಕಳ ಜೊತೆ ತುಂಬಾ ಪ್ರೀತಿಯಿಂದ ಮಾತನಾಡಿ, ಹುರಿದುಂಬಿಸುತ್ತಿದ್ದ ನೆಹರೂ ಅವರನ್ನು "ಚಾಚಾ ನೆಹರು" ಎಂದೇ ಕರೆಯುತ್ತಾ ಸಂಭ್ರಮಿಸುತ್ತಿದ್ದರು.

"ಇಂದಿನ ಮಕ್ಕಳು ಭವಿಷ್ಯದ ಪ್ರಜೆಗಳು" ಎಂದು ನುಡಿಯುತ್ತಿದ್ದ ನೆಹರೂರವರು, ತಮ್ಮ ಹೇಳಿಕೆಗಳಲ್ಲಿ ಮಕ್ಕಳಿಗೆ, ಯುವಕ-ಯುವತಿಯರಿಗೆ, "ಸಾಹಸಿಗಳಾಗಿರಿ, ವಿಜ್ಞಾನಿಗಳಾಗಿರಿ, ಅಶ್ವಾರೋಹಣ, ಪರ್ವತಾರೋಹಣ, ಈಜು, ವ್ಯಾಯಾಮ ಮುಂತಾದ ಹವ್ಯಾಸ, ಅಭ್ಯಾಸಗಳನ್ನು ಇಟ್ಟುಕೊಂಡು ದೈಹಿಕ ಹಾಗೂ ಮಾನಸಿಕವಾಗಿ ಸದೃಢತೆ ಪಡೆದು ಭಾರತದ ಸಂಪತ್ತಾಗಿ ಪರಿಣಮಿಸಿ" ಎಂದು ಕರೆ ನೀಡುತ್ತಿದ್ದರಂತೆ. ಶ್ರೀಮಂತಿಯ ಮನೆತನದ ನೆಹರೂರವರು "ಬಾರ್-ಎಟ್-ಲಾ" ಕೋರ್ಸನ್ನು ಇಂಗ್ಲೆಂಡ್ ನಲ್ಲಿ ವ್ಯಾಸಂಗ ಮಾಡಿ ವಕೀಲ ವೃತ್ತಿಯನ್ನು ಹಿಡಿದ ನೆಹರೂ ಮುಂದೆ "ಭಾರತ ಸ್ವಾತಂತ್ರ್ಯ ಸಂಗ್ರಾಮ"ದಲ್ಲಿಯೂ ಧುಮುಕಿ ಆಂಗ್ಲರ ವಿರುದ್ಧದ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಹಲವಾರು ಬಾರಿ ಜೈಲುವಾಸವನ್ನೂ ಅನುಭವಿಸಿದರು. ಸ್ವಾತಂತ್ರ್ಯ ಚಳುವಳಿಯ ಒಡನಾಟದಲ್ಲಿ ನೆಹರೂ ಗಾಂಧೀಜಿಯವರ ಶಿಷ್ಯರಾಗಿ ಅವರನ್ನು "ಬಾಪೂಜಿ" ಎಂದೇ ಸಂಭೋದಿಸುತ್ತಿದ್ದರು.

ಸ್ವಾತಂತ್ರ್ಯ ನಂತರದಲ್ಲಿ ದೇಶದ ಪ್ರಧಾನ ಮಂತ್ರಿಗಳಾಗಿ ಸುಮಾರು 17 ವರ್ಷಗಳವರೆಗೂ ಸೇವೆ ಸಲ್ಲಿಸಿದ ನೆಹರು, ಈ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳು, ಶಿಕ್ಷಣ, ಕೃಷಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದರು.

ಜವಾಹರಲಾಲ್ ನೆಹರು ಅವರು ಪ್ರಬುದ್ಧ ಬರಹಗಾರರೂ ಆಗಿದ್ದು, ಆತ್ಮ ಚರಿತ್ರೆ, ಡಿಸ್ಕವರಿ ಆಫ್ ಇಂಡಿಯಾ, ಜಗತ್ತಿನ ಇತಿಹಾಸ, ಮಗಳಿಗೆ ಬರೆದ ಪತ್ರಗಳು ಮುಂತಾದ ಅನೇಕ ಕೃತಿಗಳನ್ನು ಬರೆದು ಖ್ಯಾತರಾದರು. ಪ್ರಧಾನ ಮಂತ್ರಿಗಳಾಗಿ ಜಗತ್ತಿನ ಯಾವುದೇ ಬಣಕ್ಕೆ ಸೇರದೆ 'ಅಲಿಪ್ತ ನೀತಿ'ಯನ್ನು ಅನುಸರಿಸಿದರು. ಸಹಜೀವನ, ಪಂಚಶೀಲ ತತ್ವಗಳು, ಅಲಿಪ್ತ ನೀತಿ – ಇವು ನೆಹರೂರವರ ಪ್ರಮುಖ ಕೊಡುಗೆಗಳು.

ಪ್ರಧಾನ ಮಂತ್ರಿಯಾಗಿದ್ದ ಅವಧಿಯಲ್ಲಿಯೇ ನೆಹರೂರವರು 1964 ರ ಮೇ27ರಲ್ಲಿ ವಿಧಿವಶರಾದರು.

ನಮ್ಮ ದೇಶ ಕಂಡ ಈ ಅಪ್ರತಿಮ ನಾಯಕರ ಜನ್ಮದಿನದಿಂದು ಅವರ ಕಾರ್ಯ- ಸಾಧನೆಗಳ ಮೆಲುಕು ಹಾಕಿ, ಅವರ ಆದರ್ಶಗಳನ್ನು ಮಕ್ಕಳಿಗೆ ಪರಿಚಯಿಸುವ ಪರಿಪಾಠವು 'ಮಕ್ಕಳ ದಿನಾಚರಣೆ'ಯ ವಿಶೇಷ ಉದ್ದೇಶವಾಗಿದ್ದು, ಈ ಸಂದರ್ಭದಲ್ಲಿ ನೆಹರೂ ಅವರ ನೆನಪಿನಲ್ಲಿ ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ದೇಶಾದ್ಯಂತ ನಡೆಸಲಾಗುತ್ತದೆ. ಪ್ರತಿಭಾವಂತ ಹಾಗೂ ಸಾಹಸ ಪ್ರದರ್ಶನ ಮಕ್ಕಳಿಗೆ ಪುರಸ್ಕಾರ, ಗೌರವ ಸಮರ್ಪಣಾ ಕಾರ್ಯಕ್ರಮಗಳೂ ಏರ್ಪಾಡಾಗುತ್ತದೆ. ಒಟ್ಟಿನಲ್ಲಿ "ಮಕ್ಕಳ ದಿನಾಚರಣೆ"ಯು ಮುಂದಿನ ಪ್ರಜೆಗಳಾಗುವ ಮಕ್ಕಳ ಭವಿಷ್ಯಕ್ಕೆ ಸ್ಫೂರ್ತಿ ತುಂಬುವ ಕಾರ್ಯಕ್ರಮವಾಗಿದೆ.

->ಹೊರಾ.ಪರಮೇಶ್ ಹೊಡೇನೂರು

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಮಕ್ಕಳ ದಿನದ ಮಹತ್ವ: ಹೊರಾ.ಪರಮೇಶ್ ಹೊಡೇನೂರು

Leave a Reply

Your email address will not be published. Required fields are marked *