*ಹಕ್ಕಿಯ ಮನೆ*
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ
ಜೀವ ಜೀವಿಗಳ ಮೆಟ್ಟಿ ನಿಲ್ಲದೆ
ಧರೆಯನೆಂದು ಬಿಟ್ಟು ಹೋಗದೆ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ
ತಂಪಾದ ಗಾಳಿ ಮನೆಯ ತೂಗಿ
ಹಸಿರಾದ ಗರಿಕೆ ತುಸು ಬೆಚ್ಚಗಿರಿಸಿ
ಗುಟುಕುಗಳೇ ಆಸ್ತಿ ಉಳಿದೆಲ್ಲ ನಾಸ್ತಿ
ಜೋಕಾಲಿ ಜೀಕಲಿ ಜೋಗುಳದ ದೋಸ್ತಿ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ
ಹೊಸ ಬೆಳಕಿನ ಹೊಸ ಹುಟ್ಟಿಗೆ
ಜೊತೆಗಿದೆ ಭೂಮಾತೆಯ ಸೃಷ್ಟಿ
ದುಷ್ಟತೆಯ ದೂರದಲೇ ದೂರಿಟ್ಟು
ಸುಳಿಯದಲೇ ಮನಕೆಂದು ಪೆಟ್ಟು
ಮನ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮಗಿಲ ಹಾಗೆ
ಸೃಷ್ಟಿಯ ದೃಷ್ಟಿಯಲಿ ಪುಟ್ಟ ಮಗುವಂತೆ
ಸ್ವಚ್ಛ ಸೌಂದರ್ಯದ ಹೂವಿನ ಕುಡಿಯಂತೆ
ಆಸೆಗಳ ಬೆಟ್ಟವನು ಮೆಟ್ಟಿ ಬದಿಗೊತ್ತಿ
ಗೊಡವೆ ಇಲ್ಲದ ಗೋಡೆಗೆ ಪ್ರೀತಿ ಮೆತ್ತಿ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ
✍ ವೆಂಕಟೇಶ ಚಾಗಿ, ಲಿಂಗಸುಗೂರ
ಚಿತ್ರದುರ್ಗಕ್ಕೆ ಹೋಗೋಣಾ…
ಅಪ್ಪಾ ಈಸಲ ಪ್ರವಾಸಕೆ ನಾವು
ಚಿತ್ರದುರ್ಗಕೆ ಹೋಗೋಣಾ
ದುರ್ಗದ ದುರ್ಗಮ ಕೋಟೆಯ
ಚಂದವ ಕಣ್ಮನ ತುಂಬಿಕೊಳ್ಳೋಣಾ
ಏಳು ಸುತ್ತಿನಾ ಕೋಟೆಯಂತೆ
ಆಕಾಶದೆತ್ತರ ಬಂಡೆಗಳಂತೆ
ಏಳುತ ಬೀಳುತ ಹತ್ತಬೇಕಂತೆ
ಎತ್ತರದ ಉಯ್ಯಾಲೆ ಕಂಬವಂತೆ
ಒನಕೆ ಓಬವ್ವನ ಕಿಂಡಿಯಂತೆ
ತೂರಲೆ ಬೇಕು ನಾನಲ್ಲಿ
ತಣ್ಣೀರು, ಗೋಪಾಲಸ್ವಾಮಿ ಹೊಂಡವಂತೆ
ಮೀಯಲೆ ಬೇಕು ನನಗಲ್ಲಿ
ಆನೆ ಹೆಜ್ಜೆಯಂತೆ, ಕುದುರೆ ಹೆಜ್ಜೆಯಂತೆ
ಹತ್ತಲೆ ಬೇಕು ನಾನೊಮ್ಮೆ
ಎಣ್ಣೆ ಕೊಳವಂತೆ, ತುಪ್ಪದ ಕೊಳವಂತೆ
ನೋಡಲೆಬೇಕು ಅವನ್ನೊಮ್ಮೆ
ಮದಕರಿ ನಾಯಕನ ನೆಲೆವೀಡಂತೆ
ಸಾರುವುದವನ ಇತಿಹಾಸವಂತೆ
ನಾಗರಹಾವು ಸಿನೆಮಾದಲಿ ತೋರಿಸಿದಂತೆ
ಪಾಠದಲಿ ನಾವು ಓದಿದ ಹಾಗೆ ಇದೆಯಂತೆ
ಹಾಗಾಗಿ ಈ ಸಲ ಪ್ರವಾಸಕೆ ನಾವು
ಚಿತ್ರದುರ್ಗಕೆ ಹೋಗೋಣಾ ಬಾ!!
ನಳಿನಿ. ಟಿ. ಭೀಮಪ್ಪ