ಪುಟ್ಟನ ರೈಲು
ಪುಟ್ಟಗೆಂದು ಅಪ್ಪ ತಂದ ಚಿಕ್ಕದೊಂದು ರೈಲನು
ನೋಡಿ ಈಗ ಪುಟ್ಟನೊಮ್ಮೆ ರೈಲು ಬಿಡುವ ಸ್ಟೈಲನು ||
ರೈಲು ಈಗ ಓಡುತಿಹುದು ಮನೆಯ ಮೂಲೆ ಮೂಲೆಗೆ
ಆಗ ಈಗ ಹಾರುತದೆ ಹಿತ್ತಲಾಚೆ ಬೇಲಿಗೆ
ಹೋಗುತಿಹುದು ರೈಲು ನಿಮಗೆ ಎಲ್ಲಿ ಬೇಕೊ ಅಲ್ಲಿಗೆ
ನಿಲ್ಲುತದೆ ಚಿಂತೆಯಿಲ್ಲ ನೀವೆ ಕೇಳಿದಲ್ಲಿಗೆ ||
ಹಳಿಯ ಮೇಲೆ ಓಡ ಬೇಕು ಎಂಬ ನಿಯಮವಿಲ್ಲ
ಗೋಡೆ ಮೇಲೆ ಕಿಡಕಿಯೊಳಗೆ ತೂರಿ ನಡೆವುದಲ್ಲ
ಚಿಕ್ಕದೇನು ದೊಡ್ಡದೇನು ಅಡ್ಡ ಬಂದ್ರೆ ಎಲ್ಲ
ಹಾರಿಕೊಂಡು ಹೋಗುತದೆ ಅದಕೆ ತೊಂದ್ರೆ ಇಲ್ಲ||
ಇವನ ರೈಲಿಗಿಲ್ಲವಲ್ಲ ಇಂಧನದ ಚಿಂತೆ
ಗಳಿಗೆಗೊಮ್ಮೆ ಹತ್ತಿ ಇಳಿವ ದೊಡ್ಡ ಜನರ ಸಂತೆ
ಬೆಟ್ಟ ಗುಡ್ಡ ಏರಿ ಇಳಿವ ದೊಡ್ಡ ರೈಲಿನಂತೆ
ಮೇಜು ಕುರ್ಚಿ ಹತ್ತಿ ಇಳಿವುದೆಲ್ಲಿ ನಿಲ್ಲದಂತೆ||
ಅಜ್ಜ ಅಜ್ಜಿ ಕರೆದು ತೋರ್ಸಿ ಕೂಡಿ ನೀವು ಇಲ್ಲಿ
ಕರೆದು ಕೊಂಡು ಹೋಗುವೆ ನಿಮ್ಮನೆಲ್ಲಿ ಬೇಕೊ ಅಲ್ಲಿ
ಅತ್ತೆ ಊರಿಗ್ಹೋಗ ಬೇಕೆ ದುಡ್ಡು ಇಲ್ಲ ಬನ್ನಿ
ಕಣ್ಣು ಮುಚ್ಚಿ ತೆಗೆಯುವೊಳಗೆ ಊರು ಬಂತು ಅನ್ನಿ||
ಊಟ ನಿದ್ರೆ ಮಾಡುವಾಗ್ಲು ಪಕ್ಕದಲ್ಲಿ ರೈಲು
ಸುಸ್ತು ಗಿಸ್ತು ಏನು ಇಲ್ಲ ಪುಟ್ಟನಂತೆ ರೈಲು
ಯಾರು ಬಂದು ಹೋದರೂನು ನೋಡಿ ಅವನ ರೈಲನು
ಮೆಚ್ಚಿ ತುಂಬ ಹೊಗಳತಾರೆ ಜೊತೆಗೆ ಅವನ ಸ್ಟೈಲನು||
***
ಪರೀಕ್ಷೆ
ಓಡುತ ಬಂತು ಮತ್ತೆ ಪರೀಕ್ಷೆ
ಹಗಲು ರಾತ್ರಿ ಓದುವ ಶಿಕ್ಷೆ
ಅಪ್ಪನು ಆಫೀಸಿಂದ ಮಾಡುವ ಫೋನು
ಲೆಕ್ಕ – ಪ್ರಯೋಗ ಮಾಡಿದೆಯೇನು?
ಅಮ್ಮನು ಆಫೀಸು ಕೆಲಸದ ಮಧ್ಯೆಯೇ
ಕೇಳುತಲಿರುವಳು ಇಂಗ್ಲೀಷ ಎಲ್ಲಾ ಓದಿದೆಯಾ?
ಅಜ್ಜಿಗೆ ಚೂರು ಬಿಡುವೇಯಿಲ್ಲ
ತಿನ್ನಲು ಕುಡಿಯಲು ಕೊಡಬೇಕಲ್ಲ.
ಅಜ್ಜನು ಪ್ರೀತಿಲಿ ಹೇಳುವ “ಚಿನ್ನ,
ಓದದೆ ಇದ್ದರೆ ಏನೋ ಚನ್ನ!”
ಕನ್ನಡ ಕಲಿಸಲು ಅಜ್ಜಿಯು ಸಾಕು
ಕಂಪ್ಯೂಟರ ಹೇಳಲು ಅಮ್ಮನೆ ಬೇಕು.
ಆಟ ಟೀವಿ ಎಂಥದೂ ಇಲ್ಲ
ಪರೀಕ್ಷೆ ಮುಗಿಯಲು ಕಾಯಬೇಕು ಎಲ್ಲ.
ಯುದ್ಧಕೆ ಹೋಗುವ ಯೋಧನ ಹಾಗೆ
ಸಿದ್ಧತೆ ನಡೆದಿದೆ ಮನೆಯಲಿ ಹೀಗೆ.
ಪರೀಕ್ಷೆಯ ಭೂತ ಇರುವುದು ನನಗೆ
ಬೆದರಿಕೆ ಎಲ್ಲ ಇರುವುದು ಅವರಿಗೆ.
ಫಸ್ಟು ಬಂದರೆ ಅಜ್ಜನ ಸ್ವೀಟು
ಅಪ್ಪ ಮಾಡುವ ಟೂರಿಗೆ ಸೀಟು
ಅಮ್ಮನು ಕೊಡಿಸಳೆ ಕೇಳಿದ ಪ್ಯಾಂಟು
ಎಲ್ಲರ ಸಂತೋಷ ಈಗಲೆ ಸ್ಟಾರ್ಟು.
-ವೃಂದಾ ಸಂಗಮ
ರಂಗ ಮತ್ತು ಕರಿಯ:
ನಸುಗೆಂಪಿನ ಮುಂಜಾವದು ಬರಲು
ಹುಂಜದ ಕೂಗದು ಕೇಳಿತ್ತು
ಎಳೆ ಹೆಂಗಳೆಯರ ರಂಗೋಲಿಯದು
ಮನೆಯ ಅಂಗಳವ ಬೆಳಗಿತ್ತು
ಫಳಫಳ ಹೊಳೆಯುವ ಪಾತ್ರೆಯ ಒಳಗಡೆ
ಆಕಳ ಹಾಲದು ತುಂಬಿತ್ತು
ಪಾತ್ರೆಯ ಹಿಡಿದ ರಂಗನ ಸವಾರಿ
ಪೇಟೆಯ ಕಡೆಗೆ ಹೊರಟಿತ್ತು
ರಂಗನ ಜೊತೆಗೆ ಕರಿಯನು ಬರಲು
ಜೋಡಿಯು ಮೆಲ್ಲನೆ ಸಾಗಿತ್ತು
ಕರಿಯನ ಬಾಲವ ದುಂಬಿಯು ಕಚ್ಚಲು
ಪ್ರಯಾಣ ಅರ್ಧಕೆ ನಿಂತಿತ್ತು
ಬಾಲವ ಬಾಯಲಿ ಕಡಿಯಲು
ಕರಿಯನ ಹರಸಾಹಸವು ಜರುಗಿತ್ತು
ಕರಿಯನ ಪಾಡನು ನೋಡಲಾಗದೆ
ರಂಗನ ಮನಸು ಮರುಗಿತ್ತು
ಬಾಲಕೆ ಹಸುರಿನ ಔಷಧ ಸವರಲು
ಕಡಿತದ ನೋವದು ನಿಂತಿತ್ತು
ಬಾಲವಾಡ್ಸಿ ಮುದ್ದಿಸಿದ ನಂತರ
ಪ್ರಯಾಣ ಮುಂದಕೆ ಸಾಗಿತ್ತು
-ವಿಭಾ ಶ್ರೀನಿವಾಸ್
ಅತ್ಯದ್ಭುತ ವಿಭಾ!