ಕಾವ್ಯಧಾರೆ

ಮಕ್ಕಳ ಕವನ: ವೆಂಕಟೇಶ್ ಚಾಗಿ, ದೀಪು

ನನ್ನ ತಂಗಿ

ಪುಟ್ಟ ಪುಟ್ಟ ಹೆಜ್ಜೆ ಇಡುತಾ
ನನ್ನ ತಂಗಿ ಬರುವಳು
ಅಣ್ಣಾ ಎಂದು ತೊದಲುನುಡಿದು
ನನ್ನ ಮನವ ಸೆಳೆವಳು ||

ತಿನ್ನಲು ಒಂದು ಹಣ್ಣು ಕೊಡಲು
ನನ್ನ ಬಳಿಗೆ ಬರುವಳು
ಅಲ್ಪಸ್ವಲ್ಪ ಹಣ್ಣು ತಿಂದು
ಮನೆಯ ತುಂಬಾ ಎಸೆವಳು ||

ಕಣ್ಣೇ ಮುಚ್ಚೆ ಕಾಡೆಗೂಡೆ
ಆಟ ಆಡು ಎನುವಳು
ಅಮ್ಮನಿಂದ ಅಡಗಿ ಕುಳಿತು
ನಕ್ಕು ನನ್ನ ಕರೆಯುವಳು ||

ನನ್ನ ಕಾರು ನನ್ನ ಗೊಂಬೆ
ತನಗೂ ಬೇಕು ಎನುವಳು
ಕೊಡುವ ತನಕ ಹಠವಮಾಡೇ
ಅಪ್ಪ ಅಮ್ಮ ಬರುವರು ||

ನನ್ನ ತಂಗಿ ಪುಟ್ಟ ತಂಗಿ
ಇವಳು ನನಗೆ ಹೆಮ್ಮೆಯೂ
ನನ್ನ ತಂಗಿ ನಗುತಲಿರಲು
ನನಗೆ ತುಂಬಾ ಹರುಷವು ||

ವೆಂಕಟೇಶ ಚಾಗಿ


ನನ್ನರಮನೆ

ಅಜ್ಜಿಯ ಮನೆಯಿದು ನನ್ನರಮನೆ
ಬೇಸಿಗೆಯ ದಿನಗಳ ಕನಸಿನ ಖಜಾನೆ!
ಅಪ್ಪ ಅಮ್ಮನ ಶಿಸ್ತಿಗೆ ಕೊಂಚ ಕಡಿವಾಣ
ತೋಟದ ಮನೆಯ ನೀರಿನ ತೊಟ್ಟಿಯ ಸ್ನಾನ
ಹುರಿದ ಕಡಲೆ, ಹುಳಿ ಮಾವು, ಚಿಗಳಿಯ ಸವಿ
ಅಜ್ಜಿಯ ಮನೆಯಿದು ನನ್ನರಮನೆ!

ಬೆಳಗಿನ ಚಳಿಗೆ ಅಡುಗೆ ವಲೆಯೇ ಹಿತ
ಬಿಸಿ ಹಾಲಿಗೆ ತುಸು ಚಹಾ ಸೇರಿಸುವ ಅಜ್ಜನ ಪ್ರೀತಿ
ಬೆಣ್ಣೆ ತುಪ್ಪದ ಮೇಲೆ ನಮ್ಮದೇ ವಸಾಹತು!
ಅಜ್ಜಿಯ ಮನೆಯಿದು ನನ್ನರಮನೆ!

ತೂಗುಮಂಚದಲಿ ತೂಕಡಿಸಿದ ಸಂಜೆ
ಬೆಳದಿಂಗಳ ರಾತ್ರಿಯ ಕೈ ತುತ್ತು ಸರದಿ
ನಕ್ಷತ್ರ ನೋಡುತ ಮಲಗುವ ಸಂಭ್ರಮ
ಅಜ್ಜಿಯ ಮನೆಯಿದು ನನ್ನರಮನೆ!

ಅಜ್ಜನ ಸೈಕಲ್ ಸವಾರಿ, ತೆಂಗಿನ ಗರಿಯ ಪರಿ
ಸಂತೆಯ ಮಂಡಕ್ಕಿ ಕುರು ಕುರು ತಿಂಡಿ
ಕಳ್ಳ ಪೊಲೀಸ್, ಕಣ್ಣು ಮುಚ್ಚಾಲೆಯ ಕಿಂಡಿ
ಅಜ್ಜಿಯ ಮನೆಯಿದು ನನ್ನರಮನೆ!

ಮಲಗುವ ಮುಂಚಿನ ಅಜ್ಜಿಯ ಕಥೆಗಳು
ಕೇಳಿದ ಕಥೆಯಾದರೂ ಹೊಸತು ಅಜ್ಜಿಯ ಸೊಗಸಲಿ
ನಡುವೆ ಕೇಳುವ ಪ್ರಶ್ನೆಗೆ ರೇಗುವ ಅಣ್ಣ ಅಕ್ಕಂದಿರು
ಅಜ್ಜಿಯ ಮನೆಯಿದು ನನ್ನರಮನೆ!

ಈಗಲೂ ಹೋಗುವೆ ನನ್ನರಮನೆಗೆ
ಅಜ್ಜಿಯ ಪ್ರೀತಿ, ಊರ ಮಣ್ಣಿನ ಘಮ ಇದೆ ಹಾಗೆ
ಆದರೂ ಏನನೋ ಕಳೆದುಕೊಂಡ ಹಾಗೆ
ಸಮಯವಿಲ್ಲ ಎನ್ನೋ ಕಾರಣವಾ ಹೊದ್ದ ಹಾಗೆ
ಕಳೆದುಕೊಂಡಿದ್ದು ಬಾಲ್ಯಎನ್ನುವ ಹಾಗೆ
ಆದರೂ ಅಜ್ಜಿಯ ಮನೆಯಿದು ನನ್ನರಮನೆ!

ದೀಪು


ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮಕ್ಕಳ ಕವನ: ವೆಂಕಟೇಶ್ ಚಾಗಿ, ದೀಪು

Leave a Reply

Your email address will not be published. Required fields are marked *