ಗುಬ್ಬಿ ಮರಿ!!
ಗುಬ್ಬಿ ಗುಬ್ಬಿ
ಚೀಂವ್ ಚೀಂವ್
ಎನ್ನುವ ನಿನ್ನಯ
ಸಪ್ತಸ್ವರ ರಾಗ ಕೇಳುತ್ತಿಲ್ಲ!
ನಮ್ಮ ಬಳಿಯೇ
ಸುಳಿಯ ಬಯಸುವ
ಚೀಂವ್ ಚೀಂವ್ ಗುಬ್ಬಿ
ನಿನ್ನ ದ್ವನಿ ಕೇಳುತ್ತಿಲ್ಲ!
ಕಾಳನು ಹಾಕುತಾ
ಹಿಡಿಯಲು ಬರುವೇ
ನೀನೆಲ್ಲಿ ಹೋದೆ ಗುಬ್ಬಚ್ಚಿ
ನಿಮ್ಮಯ ಕಲರವ ಕಾಣುತ್ತಿಲ್ಲ!
ನಮ್ಮ ಮನೆಯ
ಅಂಗಳದೊಳಗೆ ನಿಮ್ಮ
ಸ್ನೇಹ ಬಳಗದ ಸದ್ದು
ಈಗ ನಾ ನೋಡಿಲ್ಲಾ!
ನಿಮ್ಮಗಳಿಗಾಗಿ ಇಂದು
ಹುಡುಕಾಡುವ ಸ್ಥಿತಿ
ನಮಗೆ ಬಂದಿದೆ
ನಿವೆಲ್ಲಿ ಹೋದಿರಾ ಗುಬ್ಬಿಚ್ಚಿ…!!
ಡಾ.ಶಿವಕುಮಾರ ಎಸ್.ಮಾದಗುಂಡಿ
*ನಾಯಿಮರಿ*
ಶಾಲೆಗೆ ಹೋಗುವ ದಾರಿಯಲಿ
ಗುಂಡನು ಕಂಡನು ನಾಯಿಮರಿ
ಹಸಿವಲಿ ನಾಯಿಯು ಅಳುತ್ತಿತ್ತು
ಗುಂಡನು ಕೊಟ್ಟನು ಚುರುಮುರಿ ||
ಗಬಗಬ ತಿಂದಿತು ನಾಯಿಮರಿ
ಪ್ರೀತಿಯ ತೋರಿದ ತಲೆಸವರಿ
ಗುಂಡನ ಕಾಲನು ನೆಕ್ಕಿತ್ತು
ಗುಂಡನು ಹೇಳಿದ ಜಾಣಮರಿ ||
ಇಬ್ಬರು ಗೆಳೆಯರು ಆ ಕ್ಷಣದಿ
ಹೊರಟರು ಮನೆಗೆ ಜೊತೆಯಲ್ಲಿ
ಸಂಜೆಯವರೆಗೂ ಆಟವನಾಡಿ
ಕಾಲವ ಕಳೆದರು ಖುಷಿಯಲ್ಲಿ ||
ಗುಂಡನ ಗೆಳೆಯರು ಸೇರಿದರು
ನಾಯಿಯ ಮರಿಯನು ನೋಡಿದರು
ಒಳ್ಳೆಯ ಗೆಳೆಯರು ಇಬ್ಬರು ಎಂದು
ಇಬ್ಬರ ಗೆಳೆತನ ಕೊಂಡಾಡಿದರು ||
ನಾಯಿಮರಿ ನಾಯಿಮರಿ
ಎಲ್ಲರ ಮುದ್ದಿನ ಜಾಣಮರಿ
ಸುಂದರ ಹೆಸರು ನಿನಗೊಂದು
ನಿನ್ನಯ ಹೆಸರು ಪಾಂಡುಮರಿ ||
-ವೆಂಕಟೇಶ ಚಾಗಿ
ನನ್ನ ಮುದ್ಧು ಬೊಂಬೆ
ತಿಂಡಿ ಬೇಕು ಹಣ್ಣು ಬೇಕು
ನನ್ನ ಮುದ್ಧು ಬೊಂಬೆಗೆ
ಡಾಲು ಬೇಕು ಚೆಂಡು ಬೇಕು
ನನ್ನ ಪಿಂಕು ಬೇಬಿಗೆ
ಚಿಟ್ಟೆಯಂತೆ ಹಾರಬೇಕು
ಮುಗಿಲು ಮುಟ್ಟೋ ಮಟ್ಟಿಗೆ
ದೋಣಿಯಂತೆ ತೇಲಬೇಕು
ಕಡಲಿನಲ್ಲಿ ಮೆಲ್ಲಗೆ
ಜಿರಾಫೆಯಂತೆ ಕತ್ತುಬೇಕು
ಮರದ ಸೊಪ್ಪು ತಿನ್ನೊಕೆ
ಬೆಕ್ಕಿನಂತೆ ಬುದ್ಧಿ ಬೇಕು
ಇಲಿಯನ್ನು ಹಿಡಿಯೊಕೆ
ಜಿಂಕೆಯಂತೆ ಜಿಗಿಯ ಬೇಕು
ಬನದ ಮಧ್ಯದೊಳಗೆ
ನವಿಲಿನಂತೆ ಕುಣಿಯಬೇಕು
ಕಾಮನಬಿಲ್ಲು ಮಿಂಚಿಗೆ
ಆಮೆಯಂತೆ ಓಡಬೇಕು
ಚತುರ ನರಿ ಸೋಲಿಗೆ
ಆನೆಯಂತೆ ನಡೆಯಬೇಕು
ಘನ ಗಾಂಭೀರ್ಯದೆಡೆಗೆ
-ಸಿಂಗಾರಿಪುರ ಆದಿತ್ಯಾ, ಮೈಸೂರು