ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. ಆಮೇಲೆ ಒಂದಷ್ಟು ಹೋಮ್ ವರ್ಕ್ ಮಾಡುತ್ತಿದ್ದ. ಇಷ್ಟಾದರೂ ಮತ್ತೂ ಸಮಯ ಉಳಿಯುವ ಕಾರಣ ಹೊರಗಿನ ಬೀದಿಯಲ್ಲಿ ಅವನ ಅನೇಕ ಸ್ನೇಹಿತರ ಜೊತೆಗೆ ಆಡುತ್ತಿದ್ದ.ಆದರೆ ಅಲ್ಲಿನ ಹುಡುಗರ ಮನಸ್ಥಿತಿ ಬೇರೆಯದೇ ಆಗಿತ್ತು. ಗುಂಪುಕಟ್ಟಿಕೊಂಡು ಜಗಳ ಮಾಡುವುದು. ಸಣ್ಣ ವಯಸ್ಸಿನಲ್ಲಿಯೇ ಹಣದ ವ್ಯವಹಾರ ನಡೆಸುವುದು ಹೀಗೇ ಅಲ್ಲಿನ ವಾತಾವರಣ ಚೆನ್ನಾಗಿರಲಿಲ್ಲ. ಆ ಮಕ್ಕಳ ಗುಂಪಿನಲ್ಲಿ ಒಬ್ಬ ಹುಡುಗನಿದ್ದ. ಅವನು ಉಳಿದ ಮಕ್ಕಳ ವಯಸ್ಸಿಗಿಂತ ದೊಡ್ಡವನಾಗಿದ್ದ. ಅವನೇ ಅಲ್ಲಿ ಬಾಸ್ ಎಂದು ಉಳಿದ ಮಕ್ಕಳಿಗೆ ಹೆದರಿಸುತ್ತ ಇದ್ದ. ಅವನನ್ನು ಎಲ್ಲರೂ “ಸೀನಿಯರ್ ” ಎಂದು ಕರೆಯಬೇಕಿತ್ತು.
ಹಾಗಾಗಿ ದಿನವೂ ಅವನಿಗೆ ಉಳಿದ ಮಕ್ಕಳು ಸಂಜೆಗೆ ತಿನ್ನಲು ತಿಂಡಿ ಕೊಡಿಸಬೇಕಿತ್ತು. ಎಲ್ಲರೂ ಹೆತ್ತವರ ಹತ್ತಿರ ಹಣ ಕೇಳಿ ತಂದು ಅವನಿಗಾಗಿ ಖರ್ಚು ಮಾಡುತ್ತಿದ್ದರು. ಒಮ್ಮೆ ಜೀವಂತ್ ನ ಸರದಿ ಕೂಡ ಬಂದಿತು. ಆಗ ಅವನ ಬಳಿ ಹಣವಿರದ ಕಾರಣ ಅವನು “ಏನು ಹೇಳುವುದು? ಅಪ್ಪ ಅಮ್ಮ ಹಣ ಕೊಡುವುದಿಲ್ಲ. ಇವರಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದು ಸುಳ್ಳು ಹೇಳಿದ. ಹೀಗೆ ಎರಡು ಮೂರು ಬಾರಿ ಕೈಯಲ್ಲಿ ಹಣವಿಲ್ಲದ ಕಾರಣ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದ. ಕೊನೆಗೆ ಅವನ ಸ್ನೇಹಿತರ ದಂಡು ಹಿಯಾಳಿಸಲು ಶುರು ಮಾಡಿದರು. ” ನಿನ್ನಲ್ಲಿ ಒಂದು ಪಪ್ಸ್ ತೆಗಿಸಿಕೊಡಲು ಹಣ ಇಲ್ಲ. ನಮ್ಮ ಗ್ರೂಪ್ ಅಲ್ಲಿ ಇರಲು ಯೋಗ್ಯತೆ ಇಲ್ಲ ನಿನಗೆ ಹೋಗು…” ಎಂದು ಬೈದು ಅವಮಾನ ಮಾಡಿದರು.
ಇದರಿಂದ ಬೇಸತ್ತ ಹುಡುಗ ದುಃಖಿತನಾಗಿ ಮನೆಗೆ ವಾಪಾಸ್ಸಾದ. ಹಾಗೆಯೇ ಅಪ್ಪನ ಕೈಯಲ್ಲಿ ಹಣಕೇಳಲೇ ಬೇಕು ಎಂದು ಯೋಚಿಸಿದ. ರಾತ್ರಿ ಕೆಲಸ ಮುಗಿಸಿ ಅಪ್ಪ ಬಂದರು. ಊಟ ಮಾಡುವ ತನಕ ಕಾದು ಕುಳಿತ ಜೀವಂತ್ “ಅಪ್ಪ ನನಗೆ ಮಿಸ್ ಹಣ ತರಲು ಹೇಳಿದ್ದಾರೆ. ಸ್ಪೋರ್ಟ್ಸ್ ಡೇ ಇದೆ… ಐನೂರು ರೂಪಾಯಿ ಹಣ ಕೊಡಬೇಕು.” ಎಂದು ಸುಳ್ಳು ಹೇಳಿದೆ. ಇದನ್ನು ಅರಿಯದ ತಂದೆ ಹಣ ಕೊಟ್ಟರು. ಇವನೋ ಮರುದಿನ ಹೀರೋ ತರಹ ಹೋಗಿ “ಏನು ಬೇಕು ನಿನಗೆ..?? ಆ ಬೇಕರಿಗೆ ಹೋಗಿ ಎಲ್ಲ ತಗೊಂಡು ತಿನ್ನು. ಹಣ ಇಲ್ಲದವ ಅಂತ ನನಗೇ ಹಿಯಾಳಿಸ್ತೀಯಾ..? ನನ್ನ ಅಪ್ಪ ಅಮ್ಮ ಇಬ್ಬರೂ ದುಡಿಯುವವರೇ.. ಎಷ್ಟು ಬೇಕಾದರೂ ಕೊಡ್ತಾರೆ.. ಗೊತ್ತಾ?” ಎಂದು ದರ್ಪದಿಂದ ನುಡಿದು ಐನೂರು ರೂಪಾಯಿ ನೋಟನ್ನು ಆ ಸೀನಿಯರ್ ಮುಖದ ಮೇಲೆ ಎಸೆದ.
ಸೀನಿಯರ್ ಗೆ ಕೋಪ ಬಂದಿತು. ಆದರೂ ತೋರಿಸಿಕೊಳ್ಳಲು ಹೋಗಲಿಲ್ಲ. ಬೇಕಾದ ತಿಂಡಿ ತಿನಸುಗಳ ಖರೀದಿಸಿ ಎಲ್ಲರೂ ಹೊಟ್ಟೆ ತುಂಬ ತಿಂದು ಮನೆಗೆ ಹಿಂತಿರುಗಿದರು. ಹೀಗೆ ಮರುದಿನವೂ ಹಣ ತಂದಿರಬಹುದೆಂದು ಉಳಿದ ಮಕ್ಕಳು ಕೇಳಿದರು. ಆದರೆ ಜೀವಂತ್ “ನನ್ನ ಸರದಿ ಬಂದಾಗ ಮಾತ್ರ ಕೊಡುವೆ” ಎಂದು ಹೇಳಿದ. ಹೀಗೆ ಎರಡು ಮೂರು ಬಾರಿ ಹೆತ್ತವರಿಗೆ ಸುಳ್ಳು ಹೇಳಿ ಹಣ ಪಡೆದಿದ್ದ. ತಾನೂ ಯಾರಿಗೆ ಕಡಿಮೆಯಿಲ್ಲ ಎಂದು ಉಳಿದ ಮಕ್ಕಳೆದುರು ತೋರಿಸಿದ್ದ. ಒಮ್ಮೆ ಜೀವಂತ್ ನ ತಂದೆ ನೇರ ಶಾಲಾ ಆಫೀಸಿಗೆ ತೆರಳಿ ಮುಖ್ಯೋಪಾಧ್ಯಾಯರಲ್ಲಿ ಕೇಳಿಯೇ ಬಿಟ್ಟರು. “ಅಲ್ಲಾ ಮಿಸ್, ನಾವು ಫೀಸ್ ಕಟ್ಟೋದೆ ಕಷ್ಟದಲ್ಲಿ. ಅಂತದ್ದರಲ್ಲಿ ಆ ಡೇ.. ಈ ಡೇ.. ಎಂದು ನಡುನಡುವೆ ಐನೂರು ರೂಪಾಯಿ ಕೇಳಿ ಪಡಿತೀರಲ್ಲ , ಒಂದು ರಶೀದಿ ಕೂಡ ಕೊಡುವುದಿಲ್ಲ. ಏನು ಕತೆ ನಿಮ್ಮದು..??” ಎಂದು ಪ್ರಶ್ನಿಸಿದರು.
ಮುಖ್ಯೋಪಾಧ್ಯಾಯರಿಗೆ ಆಶ್ಚರ್ಯಕರವಾಯಿತು. “ಏನು? ಹಣವೇ.. ಇಲ್ಲವಲ್ಲ. ನಾವು ಯಾವ ಡೇ.. ಅಂತಾನೂ ಮಾಡಿಲ್ಲ. ಯಾವ ಮಕ್ಕಳ ಹತ್ತಿರವೂ ಹಣ ಕೇಳಿಲ್ಲ.. ನೀವು ಏನು ಹೇಳುತ್ತಿದ್ದೀರಿ? ನಮಗೆ ಒಂದು ಅರ್ಥವಾಗುತ್ತಿಲ್ಲ..” ಎಂದರು. ಆಗ ಜೀವಂತ್ ತಂದೆಗೆ ಏನೋ ತಪ್ಪಾದಂತೆ ಕಂಡಿತು. ಒಂದಷ್ಟು ಸ್ಪಷ್ಟತೆ ಪಡೆದು ಅಲ್ಲಿಂದ ಹೊರಟು ಹೋದರು.
ಜೀವಂತ್ ಶಾಲೆಬಿಟ್ಟು ಮನೆಗೆ ಬರುವಾಗ ತಂದೆ ಬಾಗಿಲಿನಲ್ಲೇ ನಿಂತಿದ್ದರು ಅವರ ಕೋಪದ ಮುಖ ನೋಡಿ ಜೀವಂತ್ ಗೆ ಗಾಬರಿಯಾಯಿತು. ಹಾಗೆಯೇ ಹೊಡೆತ ತಿನ್ನುವುದು ಖಚಿತ ಎನ್ನುವ ಅರಿವಾಯಿತು. ಅಪ್ಪನಿಗೆ ಕೋಪ ಬಂದಿದ್ದರಿಂದ ಚೆನ್ನಾಗಿ ನಾಲ್ಕು ಏಟು ಹೊಡೆದು ನಿಜ ಬಾಯಿ ಬಿಡಿಸಿದರು. ಆಗ ಬೀದಿ ಮಕ್ಕಳ ಸಹವಾಸದ ಕತೆಯನ್ನೆಲ್ಲ ವಿವರಿಸಿ ಹೇಳಿದ. ನನ್ನಿಂದ ತಪ್ಪಾಯಿತು ಎಂದು ಕ್ಷಮೆ ಕೇಳಿದ.
ಸ್ನೇಹಿತರೇ, ಇಲ್ಲಿ ಮಗುವಿನ ತಪ್ಪಿನ ಜೊತೆಗೆ ಹೆತ್ತವರ ತಪ್ಪು ಕೂಡ ಇದೆ. ಕೇವಲ ಉದ್ಯೋಗಕ್ಕೆ ಹೋಗುವುದು, ಮಗುವಿನ ಕಡೆಗೆ ಗಮನ ಹರಿಸದೇ ಇದ್ದ ಕಾರಣ ಅವನು ಸುಳ್ಳು ಹೇಳಿದ್ದ.ಕೆಟ್ಟ ಬುದ್ಧಿ ಕಲಿತಿದ್ದ. ಹಾಗೆಯೇ ಹೆತ್ತವರ ಹತ್ತಿರ ಸುಳ್ಳು ಹೇಳಬಾರದು. ಏನೇ ವಿಷಯವಾದರು ಮುಚ್ಚಿಡಬಾರದು. ಎಲ್ಲವನ್ನೂ ಹಂಚಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿಹೇಳಬೇಕು.
–ಸಿಂಧು ಭಾರ್ಗವ್
ತುಂಬಾ ಖುಷಿಯಾಯಿತು ಧನ್ಯವಾದಗಳು💐 ಸರ್
ಸಂಪಾದಕ ಬಳಗಕ್ಕೆ ವಂದನೆಗಳು💐