ಒಂದು ಅರಮನೆಯಲ್ಲಿ ರಾಜ, ರಾಣಿ ತಮ್ಮ ಮಕ್ಕಳ ಜೊತೆಗೆ ಸುಖವಾಗಿದ್ದರು. ಐದು ಜನ ಮಕ್ಕಳಲ್ಲಿ ಕೊನೆಯವಳೇ ಹೆಣ್ಣುಮಗಳು. ಒಬ್ಬಳೆ ಹಾಗೂ ಕೊನೆಯ ಮಗಳಾದ ಕಾರಣ ಮುದ್ದಿನಿಂದ ಸಾಕಿ ಬೆಳೆಸುತ್ತಿದ್ದರು. ಹೆಸರು ಕನಕಕಲ್ಯಾಣಿ. ಊಟ-ನಿದಿರೆ ಎಲ್ಲವೂ ಅವಳ ಅಂತಃಪುರದೊಳಗೇ ನಡೆಯುತ್ತಿತ್ತು. ನೆಲದಲ್ಲಿ ಕಾಲಿಡಲೂ ಬಿಡುತ್ತಿರಲಿಲ್ಲ. ಪ್ರತಿಯೊಂದಕ್ಕೂ ಒಬ್ಬ ಕೆಲಸದಾಕೆ ಇದ್ದಳು. ಯುವರಾಣಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೊರಗಿನ ಆಗುಹೋಗುಗಳನ್ನು ತಿಳಿಸಲು ತಂತಿಯಾಗಿದ್ದಳು. ಅವಳ ಕೋಣೆಯೊಳಗೆ ಕೇಳಿದ್ದೆಲ್ಲವೂ ಬರುತ್ತಿತ್ತು. ಹಾಗಾಗಿ ಯುವರಾಣಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಳೇ ವಿನಃ ನೋಡಿ, ಅನುಭವಿಸಿ ಖುಷಿ ಪಟ್ಟವಳಲ್ಲ. ಹೀಗೆ ಒಮ್ಮೆ ಕೆಲಸದಾಕೆ ತನ್ನ ಗಂಡನ ಬಗ್ಗೆ, ಅವಳ ಊರಿನ ಬಗ್ಗೆ ಪರಿಪರಿಯಾಗಿ ವಿವರಿಸುತ್ತಾ ಇದ್ದಳು. ಆಗ ಯುವರಾಣಿ ಕನಕಕಲ್ಯಾಣಿಗೂ ಅವಳ ಊರು ನೋಡುವ ಆಸೆಯಾಯಿತು. “ಈ ದಿನ ನಾನೂ ಬರುವೆ, ನಿಮ್ಮ ಊರಿಗೆ ಕರೆದುಕೊಂಡು ಹೋಗು..” ಎಂದು ಕೇಳಿದಳು. ಆದರೆ ಸಖಿಗೆ ಒಮ್ಮೆಗೆ ಎದೆ ‘ದಗ್’ ಎಂದು ಭಯವಾಯಿತು. “ಏನಿದು ಹುಚ್ಚು ಬಯಕೆ. ಮಹಾರಾಜರಿಗೆ ಈ ವಿಷಯ ತಿಳಿದರೆ ನನ್ನ ಕೊಂದೇ ಬಿಡುವರು… ಇಲ್ಲ.. ಇಲ್ಲ.. ನಾನು ಕರೆದುಕೊಂಡು ಹೋಗಲಾರೆ..” ಎಂದು ಕೋಣೆಯಿಂದ ಓಡಿಹೋದಳು.
ಯುವರಾಣಿಗೆ ಮನದಲ್ಲಿ ಬೇಸರದ ಛಾಯೆ ಮೂಡಿತು. ಸಮಾಧಾನ ಮಾಡಿಕೊಂಡಳು. ಸುಮ್ಮನಾದಳು. ಮರುದಿನವೂ ಕೆಲಸದಾಕೆ ಬಂದು ಎಲ್ಲ ಕೆಲಸವನ್ನೂ ಮಾಡುತ್ತ ನಡುನಡುವೆ ಆ ದಿನ ನಡೆದ ಎಲ್ಲ ಕಥೆಯನ್ನು ವಿವರಿಸಿ ಹೇಳಿದಳು. ತಮಾಷೆಯ ವಿಷಯಗಳ ಹಂಚಿಕೊಂಡು ನಗಿಸಿದಳು. ಆಗ ಯುವರಾಣಿಗೆ ಮತ್ತೆ ಆಸೆ ಚಿಗುರಿತು. “ದಯಮಾಡಿ ನನ್ನ ಕರೆದುಕೊಂಡು ಹೋಗು,ಹೊರಗಡೆ ಸುತ್ತಾಡಿಕೊಂಡು ಬರುವ ಬಯಕೆಯಾಗಿದೆ…” ಎಂದು ಒತ್ತಾಯಿಸಿದಳು. ಆಗಲೂ ಕೆಲಸದಾಕೆ “ಇಲ್ಲ..ಇಲ್ಲ …” ಎಂದು ಓಡಿಹೋದಳು. ಹೀಗೆ ಒಂದು ವಾರದ ನಡೆಯಿತು. ಕೊನೆಗೆ ಒಂದು ದಿನ ಕೆಲಸದಾಕೆ ಕೆಲಸ ಮಾಡುತ್ತಿರುವಾಗ ಯುವರಾಣಿ, “ಹೇಳು. ಇಂದಾದರೂ ನಿನ್ನ ಊರಿಗೆ ಕರೆದುಕೊಂಡು ಹೋಗುವಿಯೇನು?” ಎಂದು ಕೇಳಿದಳು. ಆಗಲೂ ಇಲ್ಲವೆಂದೇ ಉತ್ತರ ಬಂತು. ಅವಳು ರಾಜನ ಮೇಲಿನ ಭಯದಿಂದ ಓಡಿಹೋದಾಗ ಯುವರಾಣಿ ತನ್ನ ರಾಣಿಯ ಪೋಷಾಕು ತೆಗೆದು ಹರಿದುಹೋದ ಚಿಂದಿಬಟ್ಟೆ ಧರಿಸಿ ಮುಖಕ್ಕೆ ಪರದೆ ಹಾಕಿಕೊಂಡು ತನ್ನ ಕೋಣೆಯ ದೊಡ್ಡ ಕಿಟಕಿಯಿಂದ ಕೆಳಗಿಳಿದು ಸಖಿಯನ್ನೇ ಹಿಂಬಾಲಿಸಿದಳು. ಈ ವಿಷಯ ಯಾರಿಗೂ ಗೊತ್ತೇ ಆಗಲಿಲ್ಲ. ರಾಜನು ತನ್ನ ದರ್ಬಾರಿನಲ್ಲಿ ತಲ್ಲೀನನಾಗಿದ್ದನು. ಯುವರಾಣಿ ಮನೆ ಕೆಲಸದವಳನ್ನೇ ಹಿಂಬಾಲಿಸಿ ಅವಳ ಊರು ತಲುಪಿದಳು.
ಅಲ್ಲಿ ನೋಡಿದರೆ ಗುಡಿಸಲಿನ ಮನೆಯೊಂದಿತ್ತು. ಮನೆಯೊಳಗೆ ಕೆಲಸದವಳು ಮತ್ತು ಅವಳ ಗಂಡನಿದ್ದ. ಕುಡಿದ ಅಮಲಿನಲ್ಲಿ ಮಲಗಿದ್ದ. ಯುವರಾಣಿ ಆ ಮನೆಯವರನ್ನು ಮಾತನಾಡಿಸಬೇಕು ಎಂದು ದೂರದಿಂದಲೇ ಕೂಗಿ ಕರೆದಳು. ಆಗ ಕೆಲಸದಾಕೆ ಹೊರಬಂದು “ಯಾರು..?ಯಾರು ಬೇಕು..? ಎಂದು ಕೇಳಿದಳು. “ನಾನು ಈ ಊರಿಗೆ ಅಪರಿಚಿತೆ. ತುಂಬಾ ಬಾಯಾರಿಕೆ ಆಗುತ್ತಿದೆ. ನೀರು ಕೊಡುವಿರಾ?” ಕೇಳಿದಳು. ಆಯ್ತು. ಎಂದು ಒಳಗೆ ಹೋಗಿ ನೀರು ತಂದು ಕುಡಿಯಲು ನೀಡಿದಳು. ದಣಿವಾರಿಸಿಕೊಂಡ ಮೇಲೆ ಮತ್ತೆ ಯುವರಾಣಿ “ತುಂಬಾ ದೂರದಿಂದ ಬಂದಿದ್ದೇನೆ, ನನಗೆ ತುಂಬಾ ಹೊಟ್ಟೆ ಹಸಿವಾಗುತ್ತಿದೆ. ಊಟ ಕೊಡುವಿರಾ?” ಕೇಳಿದಳು.
ಆಗ ತನಗಾಗಿ ತೆಗೆದಿಟ್ಟಿದ್ದ ನಿನ್ನೆಯ ಅನ್ನವನ್ನು ಬಿಸಿ ಮಾಡಿ ತಂದು ಊಟಕ್ಕೆ ಬಡಿಸಲು ಮುಂದಾದಳು.
ಯುವರಾಣಿ “ನೀವು ಬನ್ನಿ, ಜೊತೆಗೆ ಊಟ ಮಾಡೋಣ..” ಎಂದಳು
“ಇಲ್ಲ .. ನೀವು ಅತಿಥಿಗಳು. ನೀವೇ ಮೊದಲು ಊಟ ಮಾಡಿ..” ಎಂದಳು.
ಕೊನೆಗೆ ಒತ್ತಾಯಪೂರ್ವಕವಾಗಿ ತನಗೆ ಹಾಕಿದ ಸ್ವಲ್ಪ ಅನ್ನವನ್ನೇ ಅವಳ ತಟ್ಟೆಗೂ ಬಡಿಸಿ ಜೊತೆಗೆ ಕೂತು ಊಟ ಮಾಡಿದರು.
ಯುವರಾಣಿ ನಿಧಾನಕ್ಕೆ ಮಾತಿಗಿಳಿದು “ನೀವು ಜೀವನ ಸಾಗಿಸಲು ಏನು ಕೆಲಸ ಮಾಡಿಕೊಂಡಿದ್ದೀರಿ.. ಎಂದು ಕೇಳಿದಳು.
“ನಾನು ನಮ್ಮೂರ ರಾಜರ ಅರಮನೆಯಲ್ಲಿ ಯುವರಾಣಿಗೆ ಸೇವಕಿಯಾಗಿರುವೆ. ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಬೇಕು ಬೇಡಗಳ ತಂದುಕೊಡುವ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ಬೆಳಿಗ್ಗಿನ ತಿಂಡಿ, ಮಧ್ಯಾಹ್ನದ ಊಟ ಮುಗಿಸಿ ಸಂಜೆ ತನಕವೂ ಕೆಲಸ ಮಾಡಿ, ಯುವರಾಣಿಯ ಜೊತೆಗೆ ಒಂದಷ್ಟು ಹರಟೆ ಹೊಡೆದು ಈಗ ವಾಪಾಸ್ಸಾದೆ…” ಎಂದಳು.
“ಹಾಗಾದರೆ ರಾಜರು ನಿಮಗೆ ದುಡಿಮೆಗೆ ಹಣ ಕೊಡುವುದಿಲ್ಲವೇ..” ಎಂದು ಕೇಳಿದಳು.
ಆಗ “ಇಲ್ಲ.. ಊಟಕ್ಕೆ ಕೊಡುತ್ತಿದ್ದಾರಲ್ಲ ಅಷ್ಟೇ. ನನ್ನ ಗಂಡ ಕುಡಿಯಲು ಸಾಲ ಕೇಳುವ. ಅದನ್ನೇ ನನ್ನ ಸಂಬಳದಲ್ಲಿ ವಸೂಲು ಮಾಡಿಕೊಳ್ಳುವರು…” ಎಂದಳು.
ಯುವರಾಣಿಗೆ ಬೇಸರವಾಯಿತು. ರಾತ್ರಿಯಾದ ಕಾರಣ ನಾನಿಲ್ಲೆ ಮಲಗುವೆ ಎಂದಳು. ಅವಳು ಒಪ್ಪಿ ಹರಿದುಹೋದ ಹೊದಿಕೆ , ಚಾಪೆ ನೀಡಿದಳು. ಬಡವಿಯ ಮನೆಯ ಗುಡಿಸಲಿನಿಂದ ಚಂದಿರನ ಬೆಳದಿಂಗಳು ಮೈಮೇಲೆ ಚೆಲ್ಲುತ್ತಿತ್ತು. ಅದನ್ನೆಲ್ಲ ಎಂದೂ ನೋಡದ ಯುವರಾಣಿಯು ಖುಷಿಪಟ್ಟಳು. ಅಂಗಳದಲ್ಲಿ ಕುಣಿದಾಡಿದಳು. ಹಾಡು ಹೇಳಿದಳು. ಹಾಗೆಯೇ ಒಳ ನಡೆದು ಕಣ್ತುಂಬಾ ನಿದಿರೆ ಮಾಡಿದಳು.
ಕೋಳಿ ಕೂಗಿ, ಸೂರ್ಯ ಬಂದ. ಬೆಳಗಾಯಿತು. ಮನೆ ಕೆಲಸದವಳು ಬೇಗನೆ ಎದ್ದು ಅರಮನೆಗೆ ಕೆಲಸಕ್ಕೆ ಹೊರಟಳು. ಇವಳಿಗೂ ಎಚ್ಚರವಾಯಿತು. ತಾನೂ ಜೊತೆಗೆ ಬರುವೆ ಎಂದು ಹೊರಡಲು ಸಿದ್ದತೆ ಮಾಡಿಕೊಂಡಳು. ಜೊತೆಯಾಗಿ ಅರಮನೆ ಸೇರಿದರು. ಅಲ್ಲಿದ್ದ ಭಟರು ಇವರನ್ನು ನೋಡಿ ವಿಶೇಷವಾದ ಗೌರವ ನೀಡಿದರು. ಸೇವಕಿಗೆ ಏಕೆಂದು ಅರ್ಥವಾಗಲಿಲ್ಲ. ಆದರೆ
ಕೆಲಸದವಳ ಜೊತೆಗೆ ತನ್ನ ಮಗಳನ್ನು ನೋಡಿದ ಮಹಾರಾಜನಿಗೆ ಕೋಪ ಬಂದಿತು. “ನೀನು ಎಲ್ಲಿಗೆ ಹೋಗಿದ್ದಿ?? ಈ ಕೆಲಸದವಳು ನಿನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಳು” ಎಂದು ದಬಾಯಿಸಿದನು.
ಅಲ್ಲಿಯ ತನಕವೂ ಕೆಲಸದವಳಿಗೆ ಯುವರಾಣಿ ತನ್ನ ಜೊತೆಗೆ, ತನ್ನ ಮನೆಯಲ್ಲಿ ಒಂದು ರಾತ್ರಿ ತಂಗಿದ್ದಳು ಎಂದು ತಿಳಿದೇ ಇರಲಿಲ್ಲ. ಅವಳಿಗೂ ಅಚ್ಚರಿ ಬಡಿದು ದಂಗಾಗಿ ನಿಂತಳು. ಆಗ ಯುವರಾಣಿ ರಾಜನಿಗೆ ಎದುರುವಾದಿಸಿ ಮಾತಿಗಿಳಿದಳು.
“ಪಿತಾಜಿ.. ನಾನು ನಿಮ್ಮ ಒಬ್ಬಳೇ ಮುದ್ದಿನ ಮಗಳು ಎಂದು ಹೊರಗಡೆ ಎಲ್ಲೂ ಹೋಗದ ಹಾಗೆ ನೋಡಿಕೊಂಡಿರಿ. ನನಗೆ ಬೇಕು ಬೇಡದ್ದನ್ನೆಲ್ಲ ನನ್ನ ಕೋಣೆಗೆ ತರಿಸಿ ಕೊಡುತ್ತಿದ್ದೀರಿ. ಆದರೆ ಈ ಸುಂದರವಾದ ಪ್ರಕೃತಿಯನ್ನು ನಾನು ನೋಡಲೇ ಇಲ್ಲ. ನನಗೂ ಆಸೆಯಾಗಿ ನಾನು ಇವಳಿಗೂ ತಿಳಿಸದೇ ಅವಳ ಊರಿಗೆ ಹೋಗಿ ಬಂದೆ. ಒಂದು ರಾತ್ರಿ ಅವಳ ಮನೆಯಲ್ಲೇ ಇದ್ದೆ. ಅವಳ ಹರಕು ಗುಡಿಸಲಿನಲ್ಲೇ ಕಣ್ತುಂಬಾ ನಿದಿರೆ ಮಾಡಿದೆ. ಅಲ್ಲದೇ ನನ್ನ ಇಷ್ಟು ಚೆನ್ನಾಗಿ ವೈಭೋಗದಿಂದ ನೋಡಿಕೊಳ್ಳುವ ನೀವು, ನನ್ನ ಕೆಲಸಕ್ಕೆ ಬರುವ ನನ್ನ ಗೆಳತಿಗೆ ಏಕೆ ಸರಿಯಾದ ಹಣ ಕೊಡುತ್ತಿಲ್ಲ. ಅವಳು ಗುಡಿಸಲಿನಲ್ಲಿ ಬದುಕು ನಡೆಸುತ್ತಾ ಇದ್ದಾಳೆ. ನಿನ್ನೆಯ ಅನ್ನವನ್ನು ಊಟ ಮಾಡುತ್ತಾಳೆ. ಚಿಂದಿಬಟ್ಟೆ ತೊಡುತ್ತಾಳೆ. ಪಿತಾಜಿ.. ಇಂದಿನಿಂದ ಅವಳು ನಮ್ಮ ಅರಮನೆಯಲ್ಲಿಯೇ ಇರಲಿ. ನನ್ನ ಜೊತೆಗೇ ಇರಬೇಕು. ಇದು ನನ್ನ ಕಟ್ಟಾಜ್ಞೆ…!!” ಎಂದು ಹೇಳಿ ಕೋಪದಿಂದಲೇ ತನ್ನ ಅಂತಃಪುರಕ್ಕೆ ನಡೆದಳು.ಮಗಳ ಮಾತಿಗೆ ಮರು ನುಡಿಯಲಾಗಲಿಲ್ಲ. ರಾಜ ಆತ್ಮಾವಲೋಕನದಲ್ಲಿ ತೊಡಗಿದ. ಕೊನೆಗೆ ಕೆಲಸದಾಕೆಯನ್ನೂ ಅರಮನೆಯಲ್ಲೇ ಇರಲು ಹೇಳಿದ. ಸೇವಕಿಯ ಜೊತೆಗೆ ಊರೆಲ್ಲ ಸುತ್ತಾಡಲು ಪ್ರಾರಂಭಿಸಿದಳು. ಸೈನಿಕರು ರಕ್ಷಣೆಗೆ ಜೊತೆಗಿದ್ದರು. ಯುವರಾಣಿಯು ಖುಷಿಯಾಗಿ ಜೀವನ ನಡೆಸಲು ಪ್ರಾರಂಭಿಸಿದಳು.
-ಸಿಂಧು ಭಾರ್ಗವ್
ಸಿಂಧು ಭಾರ್ಗವ್… ಕಥೆ ತುಂಬಾ ಚನ್ನಾಗಿದೆ…