ಅಮರ್ ದೀಪ್ ಅಂಕಣ

ಮಕ್ಕಳೆದುರಿ​ಗೆ ಮತ್ತು ಮಕ್ಕಳಾಗುವ ಮುನ್ನ: ಅಮರ್ ದೀಪ್ ಪಿ.ಎಸ್.

ಹಳ್ಳಿಗಳಲ್ಲಿ ಹಿಂದೆ ವೈದ್ಯರಿಗಿಂತ ಅನುಭವಸ್ಥರಾಗಿ ಸೂಲಗಿತ್ತಿಯರು ಗರ್ಭಿಣಿ ಹೆಂಗಸರಿಗೆ ಮನೆಯಲ್ಲೇ ನಾರ್ಮಲ್ ಹೆರಿಗೆ ಮಾಡಿಸಿ ಕೂಸು ಬಾಣಂತಿಯನ್ನು ಎರೆದು ನೀರು ಹಾಕಲು ಬರುತ್ತಿದ್ದರು.    ಹೊರಗೆ ಗಂಡ, ಉಳಿದವರು ಕಾತರದಿಂದ ಕಾಯುತ್ತಿದ್ದರೆ, ಒಳಗೆ ಗರ್ಭಿಣಿ ಹೆಂಗಸು ನೋವು ತಿನ್ನುತ್ತಿರುತ್ತಾಳೆ.   ಒಂದು ಕ್ಷಣ ನೋವು ತಿನ್ನುವ ಸದ್ದು ನಿಂತಿತೋ? ಮತ್ತೊಂದು ಕೂಗು ಕೇಳುತ್ತದೆ.  ಈಗ ಹುಟ್ಟಿದ್ದು ಹೆಣ್ಣೋ? ಗಂಡೋ? ಎನ್ನುವ ಕಾತರ.   ಹೊರಗಡೆ ಬಂದ ಮೊದಲ ಹೆಂಗಸು ಮಗು ಯಾವುದೆಂದು ತಿಳಿಸಿ ಮತ್ತೆ ಒಳ ನಡೆಯುತ್ತಾಳೆ.   ಅಲ್ಲಿವರೆಗೆ ಬರೀ ಗಂಡನಾಗಿದ್ದ ಪುರುಷನೊಂದಿಗೆ  "ಅಪ್ಪ" ಜನಿಸುತ್ತಾನೆ. ಒಳಗೆ ಹೆಂಗಸಾ ಗಲೇ ಜನ್ಮ ನೀಡುವುದರೊಂದಿಗೆ "ಅಮ್ಮ" ನಾಗಿರುತ್ತಾಳೆ.  ಹಳ್ಳಿಗಳಲ್ಲಿ ಹುಟ್ಟಿದ ಸಮಯ ನೋಡಿ ಕೂಸಿನ ನಕ್ಷತ್ರ, ರಾಶಿ, ದೋಷ ಎಲ್ಲದರ ಬಗ್ಗೆ ಕೇಳುತ್ತಾರೆ. ಪಟ್ಟಣಗಳಲ್ಲಿ ಜನ ದಿನಾಂಕ, ಸಮಯ, ನಕ್ಷತ್ರ, ರಾಶಿ ಎಲ್ಲವನ್ನೂ ನಿಗದಿ ಮಾಡಿಕೊಂಡೇ ಹೆರಿಗೆ ಮಾಡಿಸಲು ಸನ್ನದ್ಧರಾಗಿ ಆಸ್ಪತ್ರೆಗೆ ಹೆಜ್ಜೆ ಇಡುತ್ತಾರೆ. ವ್ಯತ್ಯಾಸ ವೆಂದರೆ, ಅಲ್ಲಿ ಹುಟ್ಟಿದ ಕೂಸು ಆರೋಗ್ಯವಾಗಿ ಹುಟ್ಟಿದರೆ, ಅದರ ಭವಿಷ್ಯದ್ದು ಮುಂದಿನ ಮಾತು. ಅದು  ವಾಸ್ತವ. ಇಲ್ಲಿ ಹಾಗಲ್ಲ, ಉಳಿದೆಲ್ಲವೂ ಚೆನ್ನಾಗಿದ್ದರೆ, ಹುಟ್ಟಿದ ಕೂಸಿನ ಭವಿಷ್ಯ  "ಅರೋಗ್ಯ" ವಿರುತ್ತದೆನ್ನುವುದು ನಂಬಿಕೆ.   
 
ಗಂಡಸಿಗೆ ಹುಟ್ಟಿನಿಂದ ಬಾಲ್ಯ, ಬಾಲ್ಯದಿಂದ ಹರೆಯಕ್ಕೆ, ಹರೆಯದಿಂದ  ಪುರುಷತ್ವಕ್ಕೆ, ಪಿತೃತ್ವಕ್ಕೆ ಹೆಜ್ಜೆ ಇಡುವಾಗ ಆಗುವ ವ್ಯತ್ಯಾಸವೆಂದರೆ ಹುಡುಗುತನದಿಂದ ಹುಂಬುತನಕ್ಕೆ ಅಥವಾ ಓದಿನಲ್ಲಿ ಜಾಣತನಕ್ಕೆ ಮತ್ತದರಿಂದ ಪುರುಷತ್ವಕ್ಕೆ,  ಅಹಮಿಕೆಗೆ, ಅಹಮಿಕೆಯಿಂದ ಜವಾಬ್ದಾರಿಗೆ ಹೆಜ್ಜೆ ಇಡುತ್ತಾನೆ. ಆದರೆ, ಹೆಣ್ಣು ಹಂಗಲ್ಲ, ಬಾಲ್ಯ, ಹರೆಯ,ಹೆಂಗಸಾಗುವ  ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದಲೇ ಸೂಕ್ಷ್ಮವಾಗಿ  ಬೆಳೆ ಯುತ್ತಾಳೆ.  ಗಂಡು ಹುಟ್ಟಿದರೆ, ಪೋಷಕರಿಗೆ ಅವನ ಓದು, ಆರೋಗ್ಯ,ಒಂದು ಹಂತದವರೆಗೆ ಮಾತ್ರ ರಕ್ಷಣೆ, ಏಳಿಗೆ, ಮದುವೆ ಮಾಡಿದರೆ, ಮುಗಿಯಿತು.  ಹೆಣ್ಣಿಗೆ ಹಂಗಲ್ಲ, ಈಗಿನ  "ಅತ್ಯಾಚಾರ", "ಹತ್ಯಾಚಾರ" ಗಳ ದುಸ್ಥಿತಿ ಮತ್ತು ಹಾವಳಿಗಳ ಮಧ್ಯೆ ಬಾಲ್ಯದಿಂದಲೇ ರಕ್ಷಣೆ, ರಕ್ಷಣೆ ಮತ್ತು ರಕ್ಷಣೆ ಎನ್ನುವುದೇ ಆಗಿದೆ.  ಅದು ಬಿಡಿ, ಹುಡುಗಿಯು  ಬಾಲ್ಯ, ಬಾಲ್ಯದಿಂದ ಯೌವ್ವನಕ್ಕೆ ಕಾಲಿಡುವ ಸಂದರ್ಭ.  ಗಂಡಿಗೆ ನೂರು ಯೋಚನೆ, ಆಸೆ, ಯೋಜನೆ ಎಲ್ಲಕ್ಕೂ ಆಯ್ಕೆ ಇದ್ದಂತೆ  ಹೆಣ್ಣಿಗೂ ಆಯ್ಕೆಗಳಿರುತ್ತವೆ;   ಬಟ್ಟೆ, ಓದು, ದುಡಿಮೆ, ಪ್ರವಾಸ,  ಶಾಪಿಂಗು, ವಾಹನ ಎಲ್ಲಾ.  ಇಷ್ಟಪಟ್ಟ ಹುಡುಗನ ಆಯ್ಕೆಯೂ ಸೇರಿದಂತೆ.   ಆದರೆ,  ಅಲ್ಲಿಂದ ಮದುವೆಯಾಗುವವರೆಗೂ ಆ ಸ್ನೇಹ, ಸಂಭಂಧ ಉಳಿದು ಮದುವೆಯಲ್ಲಿ ಕೊನೆಯಾದರೆ, ಸಂತೋಷವಲ್ಲವೇ?  ಹೆಚ್ಚಿನ ಸಂಧರ್ಭಗಳಲ್ಲಿ ಹೆಣ್ಣಿಗೆ ಅಂಥ ಅವಕಾಶಗಳು ಕಡಿಮೆ.  ಕಾರಣ,  ಒಂದೋ ಮಧ್ಯದಲ್ಲಿ ಹುಡುಗ ಬದಲಾಗಿರುತ್ತಾನೆ,  ಇಲ್ಲಾ?   ತಂದೆ ತಾಯಿಯ ನಿರ್ಧಾರಗಳು ಬದಲಾಗಿರುತ್ತವೆ. ಕೆಲ ಹುಡುಗಿಯರು  ದೃಢ ನಿರ್ಧಾರಗಳು ತಳೆಯುತ್ತಾರೆ. ಗೊಂದಲದಲ್ಲಿದ್ದವರು ಜೀವನವನ್ನೇ ನಾಶ ಮಾಡಿಕೊಳ್ಳುತ್ತಾರೆ. ಎಲ್ಲಾ ಬದಲಾದ ಸಮಯಕ್ಕೂ ಸಂಘರ್ಷಕ್ಕೂ  ತನ್ನನ್ನು ತಾನು ಕನ್ವಿನ್ಸ್ ಮಾಡಿಕೊಳ್ಳು ವುದು, ಕಾಂಪ್ರೋಮೈಜ್ ಆಗುವುದರಲ್ಲಿ  ಹೆಣ್ಣಿಗೆ ಹೆಚ್ಚು ತಾಳ್ಮೆ ಮತ್ತು ಅನಿವಾರ್ಯತೆ ಇದೆ ಅನ್ನಿಸುತ್ತೆ.   
 
ಇರಲಿ, ಹಾಗೂ ಹೀಗೂ ಇಷ್ಟಪಟ್ಟು ಲವ್ ಮಾಡಿದವನನ್ನೋ ಅಥವಾ  ಸಂಪ್ರದಾಯದಂತೆ ತಂದೆ ತಾಯಿ ಕೊಟ್ಟು ತನ್ನನ್ನು ನೋಡಿದವನೊಂದಿಗೆ ಮದುವೆ ಆಯಿತೆನ್ನಿ.   ಮುಂದೆ? ದಂಪತಿಗೆ ಮಕ್ಕಳ ಚಿಂತೆ. ಗಂಡ ನಿಗೆ ಹೆಣ್ಣು ಮಗುಬೇಕು.   ಹೆಂಡತಿಗೆ ಗಂಡು ಮಗು ಬೇಕು.   ತಿಂಗಳು ಚಕ್ರ ನಿಂತಿತೆಂದರೆ; ಯಾವುದಾ ದರೂ ಸರಿ, ಆರೋಗ್ಯವಾಗಿ ಕೂಸು ಹುಟ್ಟಿದರೆ ಸಾಕು ಅಂದುಕೊಳ್ಳುತ್ತಾರೆ.  ಗರ್ಭ ಫಲಿತು ಎಂಟು ತಿಂಗಳು ಕಳೆಯಿತೆನ್ನಿ;  ಗರ್ಭವತಿಗೆ ತವರಿಂದ ಸೀಮಂತ ಕಾರಣದ ಆಸೆ. ಅದೂ ಆಯಿತು. ಭರ್ತಿ ದಿನಗಳು ತುಂಬಿದ ನಂತರ ಆಸ್ಪತ್ರೆಗೆ  ಸೇರಿದ್ದಾಯಿತು.  ನಾರ್ಮಲ್ ಆದರೆ ಸಾಕಪ್ಪ ಅಂದು ಕೊಳ್ಳುವಷ್ಟರಲ್ಲೇ ಹೊಟ್ಟೆ ಕುಯ್ದು ಕೂಸನ್ನು ವೈದ್ಯರು ತೆಗೆದಿರುತ್ತಾರೆ.   ಕಾರಣ ಮಾಮೂಲಿ.   ಇವೆಲ್ಲಾ ಮದುವೆ ಆಗಿ, ತಿಂಗಳು ನಿಂತು, ಭರ್ತಿ ದಿನಗಳ ನಂತರ ಆರೋಗ್ಯವಾಗಿರುವ ಮಗುವಿಗೆ ಜನ್ಮ ನೀಡಿದ ಹೆಣ್ಣಿನ ಸಂತೋಷವಾಯ್ತು.  

ಈಗಾಯಿತೆಂದು ಭಾವಿಸೋಣ. ಮದುವೆಯೂ ಆಯಿತು.  ವರ್ಷಗಳೂ ಉರುಳಿದವು.  ದಂಪತಿ ಗುಡಿ ತಿರುಗಿ ದ್ದಾಯಿತು.  ವೈದ್ಯರಲ್ಲಿ ಅಲೆದದ್ದಾಯಿತು.  ಕೊನೆಗೊಂದು ದಿನ  ದಂಪತಿಗೆ  ವೈದ್ಯರು ಸೂಕ್ಷ್ಮವಾಗಿ ತಿಳಿಸು ತ್ತಾರೆ; ಹೆಂಡತಿಗೆ ಗರ್ಭ ಕೋಶದ ತೊಂದರೆ ಇರುವ ನೀವು  ಮಗುವನ್ನು ನಿರೀಕ್ಷಿಸುವುದು ವ್ಯರ್ಥ. ಮಗು ವನ್ನು ಪಡೆಯಲು, ಸಾಕಲು, ಬೇರೆ ಮಾರ್ಗಗಳನ್ನು ಹುಡುಕುವುದು ಒಳ್ಳೆಯದೆಂದು. ಅಂಥ ಸಂಧರ್ಭದಲ್ಲಿ ದಂಪತಿ ಹೆಚ್ಚು ತಾಳ್ಮೆಯಿಂದಿರಬೇಕಾಗುತ್ತೆ.  ಅದರಲ್ಲೂ ಹೆಣ್ಣು "ಇನ್ನು ತನಗೆ ಮಕ್ಕಳಾಗುವುದಿಲ್ಲ; ತಾನಿನ್ನು ಅವರಿವರು ಕಿವಿ ಹಿಂದೆ ಆಡಿ ಕೊಳ್ಳುವಂತೆ ಬಂಜೆಯಾ?"  ಅನ್ನುವ ನಿರಾಶವಾದಿತನಕ್ಕೆ ಬಂದಳೋ? ಅವಳನ್ನು ಆ ವರ್ತುಲದಿಂದ ಹೊರತರುವುದು ತುಸು ಕಷ್ಟ.  
 
                                                                **********
 
"ಪತಿ ಪತ್ನಿ ಸುತ ಆಲಯ" ಹೀಗೊಂದು ಮಾತನ್ನು ಕೇಳಿದ್ದೇನೆ. ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ  ಇಲ್ಲೊಂದು ಕುಟುಂಬ. ತಂದೆ ತಾಯಿ, ಮಕ್ಕಳಲ್ಲಿ  ನಾಲ್ಕು ಜನ ಅಕ್ಕ ತಂಗಿಯರು.ಕೊನೆಯವನು ಗಂಡು ಮಗ. ಎಲ್ಲಾ  ಹೆಣ್ಣು ಮಕ್ಕಳಿಗೆ ಆ ಕುಟುಂಬ ಹಿರಿಯ ಮದುವೆ ಮಾಡಿಕೊಡುತ್ತಾನೆ. ಮೊದಲನೇಯವಳಿಗೆ ಮದುವೆಯಾದ ಒಂಬತ್ತು ವರ್ಷಕ್ಕೆ ನಾಲ್ಕನೆಯವಳ ಮದುವೆ ಆಗುತ್ತೆ.  ನಡುವೆ ಎರಡು, ಮೂರು ಮತ್ತು ನಾಲ್ಕನೇ ತಂಗಿಗೂ ತಲಾ ಎರಡೆರಡು ಮಕ್ಕಳಾಗಿ ಸಂತಾನ ಶಸ್ತ್ರ ಚಿಕಿತ್ಸೆಯನ್ನೂ ಮಾಡಿಸಿಕೊಳ್ಳುತ್ತಾರೆ.  ದುರಾದೃಷ್ಟವೆಂದರೆ, ಮೊದಲನೇ ಮಹಿಳೆಗೆ ಮದುವೆಯಾಗಿ ಹದಿನಾಲ್ಕು ವರ್ಷ ಕಳೆದರೂ ಮಕ್ಕಳಾಗುವ ಸೂಚನೆ ಇಲ್ಲ. ನಿಂತ ತಿಂಗಳೂ ಸಹ ಸರಿದು ಸ್ರಾವವಾಗುತ್ತೆ.   ತಂಗಿಯರಿಗೆ ಹುಟ್ಟಿದ ಮಕ್ಕಳಿಗೆ ಇಷ್ಟಪಟ್ಟು ಬಟ್ಟೆ, ಗೆಜ್ಜೆ, ಗಿಲಗಿಂಚಿ, ತಿನಿಸು, ಬಂದಾಗೊಮ್ಮೆ ಕೈಯಲ್ಲಿ ಒಂದಿಷ್ಟು ನೋಟುಗಳು. ದೊಡ್ಡವರಾದಂತೆ ಅವ ರಿಗೆ ಸಣ್ಣ ಸೈಕಲ್ಲು.  ಕೇರಂ ಬೋರ್ಡ್, ಆಟಿಕೆ ಸಾಮಾನು ಕೊಟ್ಟು ಖುಷಿ ಪಡುತ್ತಾಳೆ. ಹಾಗೇ ಮನೆಗೆ ಬಂದ ಪ್ರತಿ ಮಗುವಿಗೂ ಆ ದಂಪತಿ ಮುದ್ದು ಮಾಡುವುದು  ಅಭ್ಯಾಸವಾಗಿತ್ತು. ಹಾಜರಾದ ಸಂಭಂಧಿಕರ, ಪರಿ ಚಯಸ್ಥರ ಪ್ರತಿ ಕೌಟುಂಬಿಕ ಕಾರ್ಯಕ್ರಮದಲ್ಲೂ ಈಕೆಯ ಬಸಿರು ನಿಲ್ಲದ ಕುರಿತು ಒಬ್ಬೊಬ್ಬರದು ಒಂದೊಂದು ಕೊಂಕು. ಅದಿಲ್ಲದಿದ್ದರೂ ಅದೇ  ಪ್ರಶ್ನೆಯ ನೋಟವಂತೂ ಇದ್ದೇ ಇರುತ್ತದೆ.   
 
ಸಣ್ಣ ಮೊತ್ತದ ದುಡಿಮೆಯಿಂದ ಶುರು ಮಾಡಿದ ಆಕೆಯ ಗಂಡ, ಬಾಡಿಗೆ ಮನೆಯಿಂದ ಸ್ವಂತ ಮನೆ, ಕೆಳಗಿನ ಮನೆಯಿಂದ ಮಹಡಿ ಮತ್ತೆ ಮಹಡಿ ಮನೆ ಕಟ್ಟಿದ. ಆದರೆ, ಮನೆ ತುಂಬಾ  ಸಣ್ಣ ತುಂಟ ಪಾದಗಳು ಅವರ  ಕೂಸಿನದೇ ಇಲ್ಲವಲ್ಲ? ಗಂಡ ಹೆಂಡತಿಗೆ ಅದೇ ಕೊರಗು.  ಬಂದವರೆದುರಿಗೆ ಒತ್ತಾಯದ ನಗು.   ಗಂಡನ ಅಣ್ಣ ತಮ್ಮಂದಿರು ಅವರ ಕುಟುಂಬ, ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಇವರ ಏಳಿಗೆ ಕಂಡು ಖುಷಿಪಡು ವವರೇ.  ಆದರೆ,  ಆ ದಂಪತಿ ಕುಟುಂಬದ ಸುಖ, ದುಡಿಮೆಯ ಸುಖ, ಕಷ್ಟದ ನಡುವೆ ಮಕ್ಕಳಿಲ್ಲದಾಗ್ಯೂ ಇರುವ ಒಂದೇ ಒಂದು ಬದುಕಿನ ಭರವಸೆಯನ್ನು ಮಾತ್ರ ಕಳೆದುಕೊಂಡಿರಲಿಲ್ಲ.  ಕೆಲ ಕುಟುಂಬಗಳಲ್ಲಿ ಹಿಡಿತವಿಲ್ಲದವರ  ನಾಲಗೆಗೆ ಎಟುಕದ ಆಸೆ ಇರುತ್ತದೆ.  "ಮಕ್ಳಿಲ್ಲ, ಮರಿಯಿಲ್ಲ, ತಂದ್ ತಂದ್ ಯಾರ್ ತಲೀಗೆ ಕಟ್ತಾನೋ ಏನೋ. ಮಕ್ಳು ಮರಿ ಇದ್ದ ನಮ್ಗಾದ್ರೂ ಒಂಚೂರು ಕೊಟ್ರೆ ನೆನಸ್ತೀವಿ" ಅನ್ನುತ್ತಿರುತ್ತಾರೆ.  
 
ತಮಗೆ ತಮ್ಮವೇ ಮಕ್ಕಳಿಲ್ಲದಿದ್ದರೇನಂತೆ.  ಆಗದಿದ್ದರೇನಂತೆ.  ಒಂದು ಮಗುವನ್ನು ದತ್ತು ತೆಗೆದುಕೊಂಡ ರಾಯಿತು.  ಅವರಿವರ ಕೊಂಕು, ಕೊಕ್ಕು ಮಾತುಗಳನ್ನು ಎದುರಿಸಲಿಕ್ಕಾಗಲೀ ಅಥವಾ ಬೇರೆಯವರ ಸಂತೋಷಕ್ಕಾಗಿ  ಅಲ್ಲ. ಬದಲಿಗೆ ನಮ್ಮ ಸಣ್ಣ ಸಂತೋಷಕ್ಕಾಗಿ. ಅವರಿವರ ಮಾತುಗಳ ಹಂಗೇಕೆ? ಹಾಗಂತ ಒಂದು ಯೋಚನೆ ಆ ದಂಪತಿಗೆ ಬರುತ್ತದೆ. ಅದಕ್ಕೂ ಒಂದು ದಿನ ಬರುತ್ತೆ.   ದತ್ತು ಕೊಡುವ ದಂಪತಿಗೆ ಮಕ್ಕಳು ಸಾಕಲಾರದ ಬಡತನ.  ಕಾನೂನುಬದ್ಧವಾಗಿ ಪೋಷಕರ ಸಮ್ಮತಿ ಪಡೆದೇ ಒಂದು ಕಂದನನ್ನು ಕಂಕುಳಲ್ಲಿ ಹೊತ್ತು ತರುತ್ತಾರೆ.   ಮೊದಲೇ ಪುಟ್ಟ ಪಾದಗಳ ನುಣುಪನ್ನು ಕೆನ್ನೆಗೆ, ಗಲ್ಲಕೆ ಸೋಕಿಸಿ ಖುಷಿಪಡಲು ವರ್ಷಗಳಿಂದ  ಕಾತರವಾಗಿದ್ದ  ಕಣ್ಣಲ್ಲಿ ಹೊಳಪೇ ಹೊಳಪು.  ಮಗು  ತಂದ ದಿನ ತನ್ನ ಸುತ್ತಲಿರುವ ಸಂಭಂಧಿಕರು, ಸ್ನೇಹಿತರು, ಎಲ್ಲರಿಗೂ ದತ್ತು ಪಡೆದಿರುವ ಸಂಗತಿಯನ್ನು ಆ ದಂಪತಿ  ಖಚಿತಪಡಿಸಿಯೇ ತಿಳಿಸಿರುತ್ತಾರೆ; ಇನ್ನು ಮುಂದೆ ಅವರು ಆ ಮಗುವಿಗೆ ಅಪ್ಪ – ಅಮ್ಮ.  ಹಾಗಂತ ಖುಷಿ ಯಿಂದ ಬೀಗುತ್ತಾರೆ.  
 
ನಮ್ಮ ಸುತ್ತ ನಡೆದಿರುವಂತೆ ಮಕ್ಕಳಿಲ್ಲವೆಂಬ ಒಂದೇ ಕಾರಣಕ್ಕೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ, ಪ್ರಾಣಕ್ಕೆ ಕುತ್ತು ಬಂದ ಎಷ್ಟೋ ಹೆಣ್ಣು ಮಕ್ಕಳಿದ್ದಾರೆ. ಗಂಡ ಇನ್ನೊಂದು ಮದುವೆ ಮಾಡಿಕೊಂಡಿರುತ್ತಾನೆ. ಬಂಜೆಯಾಗುಳಿದ ಹೆಣ್ಣು ತಾತ್ಸಾರಕ್ಕೆ, ನಿರ್ಲಕ್ಷ್ಯಕ್ಕೆ ಈಡಾಗಿರುತ್ತಾಳೆ. ದುರಂತವೆಂದರೆ, ಗಂಡ ಹೆಂಡತಿ ತಮ್ಮ ಮಿಲನ ಸುಖಕ್ಕೆ ಅಡ್ಡಿಯಾಯಿತೆಂದು ವರ್ಷ ತುಂಬಿರದ ಮಗುವನ್ನು  ಕೊಂದ ಪ್ರಸಂಗವೂ ನಡೆ ದಿದೆ.  ಚಿಕ್ಕ ಮಕ್ಕಳೆಂಬ, ತಮ್ಮವೇ ಮಕ್ಕಳೆಂಬ  ಸಾಮಾನ್ಯ ಪ್ರಜ್ಞೆಯೂ ಇಲ್ಲದಂತೆ ಕಾಮತೃಷೆಗೆ ಬಳಸಿ ಕೊಂಡ ಪೋಷಕರು, ಶಿಕ್ಷಕರು, ಸುಶಿಕ್ಷಿತರ ಪ್ರಕರಣಗಳು ದಾಖಲಾಗುತ್ತಲೇ ಇವೆ.    
 
ಇವೆಲ್ಲವನ್ನೂ ನೋಡಿದರೆ, ದತ್ತು ಪಡೆದ  ದಂಪತಿ ವರ್ಗಕ್ಕೆ ಸೇರಿದ ಸಾಕಷ್ಟು ಜನರಿದ್ದಾರೆ.  ತಾವು ಸಾಕ ದಿದ್ದರೂ ಮಕ್ಕಳನ್ನು ಸಾಕುವ, ಓದಿಸುವ ಆಶ್ರಮ, ಆಶ್ರಯಗಳಿಗೆ, ಶಾಲೆಗಳಿಗೆ, ಹೆಸರು ಹೇಳದೇ ದಾನ ಮಾಡುವ ನಿರ್ಗರ್ವಿಗಳೂ ಸಿಗುತ್ತಾರೆ. ರಕ್ತ ಹಂಚಿಕೊಂಡು ಜನಿಸಿದ  ತಮ್ಮದೇ ಕೂಸಿಗೆ ಪ್ರೀತಿ, ಮಮತೆ, ಸಹಾಯ, ಸಹಕಾರ ಮತ್ತು ಪೋಷಣೆ  ನೀಡಿ ಬೆಳೆಸಿದಷ್ಟೇ ಶ್ರೇಷ್ಠತೆ ದತ್ತು ಪಡೆದ ಅಥವಾ ಇನ್ನಿತರ ತಂದೆ ತಾಯಿ ಪ್ರೀತಿ ವಂಚಿತ ಮಕ್ಕಳಿಗೆ ಹಂಚುವುದರಲ್ಲೂ  ಇದೆ.  ಆದರೆ, "ಮಕ್ಳಿಲ್ಲ, ಮರಿಯಿಲ್ಲ, ದುಡುದ್ ತಂದ್ ತಂದ್  ಯಾರಿಗ್ ಇಡ್ತಾನೋ ಏನ್ ಕತೀನೋ" ಅನ್ನುವ ಮಂದಿ, ಇನ್ನಿತರ ಭೋಗಾಸಕ್ತ ಬುದ್ಧಿಯ  ಮತಿ ಹೀನರಿರುತ್ತಾರಲ್ಲಾ?  ಅಂಥವರ ಬುದ್ಧಿಯನ್ನು ಏನು ಹಚ್ಚಿ ತೊಳೆದರೆ ತಿಳಿಯಾದೀತು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಮಕ್ಕಳೆದುರಿ​ಗೆ ಮತ್ತು ಮಕ್ಕಳಾಗುವ ಮುನ್ನ: ಅಮರ್ ದೀಪ್ ಪಿ.ಎಸ್.

  1. ನಿಮ್ಮ ಬರಹವನ್ನು ಸಕಾಲದಲ್ಲಿ ಪ್ರಕಟಸಿರುವುದು ನಿಮಗೆ ಧನ್ಯವಾದಗಳು. ಹೆಣ್ಣುಮಕ್ಕಳ ಶೋಷಣೆ ಹಾಗೂ ತಾತ್ಸಾರ ಮನೋಭಾವ ಅನಾದಿಕಾಲದಿಂದ ಬಂದ ಅನಿಷ್ಟ ಆಚಾರ.  ಗಂಡಿನ ಅಹಂ ಪುರುಷಪ್ರಧಾನ ಸಮಾಜ ಹೆಣ್ಣಿಗೆ ಎರಡನೇ ದರ್ಜೆಯ ಸ್ಥಾನ ಎಲ್ಲವೂ ಅಳಿದು ಸಮಾನ ಅವಕಾಶ ನೀಡಿದಲ್ಲಿ ಪ್ರಸ್ತುತ ಹೆಣ್ಣಿನ ಮೇಲೆ ನಡೆಯುತ್ತಿರುವ ದ್ರೌಜನ್ಯ ಕಡಿಮೆಯಾಗಬಹುದು.   ಕಾಮಾಂಧರಿಂದ ಜರುಗುವ ಕ್ರೌಯ ಹೆಣ್ಣಿನ ದೇಹಕ್ಕಿಂತ ಅವಳ ಮನಸ್ಸನ್ನು ಶಾಶ್ವತವಾಗಿ ಘಾಸಿಗೊಳಿಸುತ್ತದೆ.  ಅದರಲ್ಲೂ ಮುಗ್ದ ಹೆಣ್ಣು ಮಕ್ಕಳ ಮೇಲಿನ ಕ್ರೌಯ ಅಮಾನವೀಯವಾದುದು.  ಬದಲಾಗುತ್ತಿರುವ ಸಮಾಜದ ಸಂಸ್ಕೃತಿ  ಸ್ವೇಚಾಚಾರ ಸ್ವಾತಂತ್ರ್ಯ ಹಾಗೂ ತಂತ್ರಜ್ಞಾನದ ದುರುಪಯೋಗಗಳು ಎಲ್ಲೋ ಈಗಿನ ನವಪೀಳಿಗೆಯನ್ನು ಅವನತಿಯ ಕಡೆಗೆ ಸಾಗುವಂತೆ ಮಾಡುತ್ತಿವೆಯೇನೋ ಎಂಬ ಯಕ್ಷ ಪ್ರಶ್ನೆ ನನ್ನನ್ನು ಸದಾ ಕಾಡುತ್ತಿರುತ್ತದೆ.

  2. ಅಂಥಾ ಜನರಿಗೆ ತೊಳೆಯೋಕೆ ಮಲಿನ್ ಗಂಗೆಯ್ ನೀರೊಂದೇ ಸಾಕು ಅಮರ್

Leave a Reply

Your email address will not be published. Required fields are marked *