ಮಕ್ಕಳು, ಲೈಂಗಿಕ ದೌರ್ಜನ್ಯ ಮತ್ತು ಕಾನೂನು: ಅಂಜಲಿ ರಾಮಣ್ಣ

ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ದೇಶವು ಸಹಿ ಹಾಕಿ ದಶಕಗಳೇ ಸಂದಿವೆ. ಆದರ ಪ್ರಕಾರ ಮತ್ತು ನಮ್ಮ ಸಂವಿಧಾನದ ಮೂಲ ಆಶಯದಂತೆ ಮಕ್ಕಳ ಸಂರಕ್ಷಣೆ ನಮ್ಮ ಮೂಲಭೂತ ಕರ್ತವ್ಯವೇ ಆಗಿದೆ. ಅದಕ್ಕಾಗಿ ಸರ್ಕಾರಗಳು ಹಲವಾರು ವಿಶೇಷ ಕಾನೂನುಗಳನ್ನು ರಚಿಸಿರುವುದು ಮಾತ್ರವಲ್ಲ ಹಲವಾರು ಯೋಜನೆಗಳನ್ನೂ ರೂಪಿಸಿ ಜಾರಿಗೆ ತಂದಿವೆ. “ಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯ” ಎಂಬ  ದೂರದೃಷ್ಟಿಯಿಂದ  ಇಲಾಖೆಯ ನೀತಿ, ಯೋಜನೆಗಳು ಮತ್ತು ಕಾರ್ಯಕ್ರಮಗಳು ಮಕ್ಕಳ ಪರಿಪೂರ್ಣ ಅಬಿವೃದ್ಧಿಗಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಇದರಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಣೆಮಾಡುವುದು, ಮಕ್ಕಳ ಮೇಲಿನ ಎಲ್ಲಾ ರೀತಿಯ  ದೌರ್ಜನ್ಯ ತಡೆಯುವುದು ಹಾಗು ಮಕ್ಕಳ ಪೋಷಣೆ ಮತ್ತು ಪಾಲನೆಯು ಸೇರಿರುತ್ತದೆ.

ಮಕ್ಕಳ ಪಾಲನೆ ಪೋಷಣೆ, ಅವರ ಪೌಷ್ಠಿಕಾಂಶ, ವಿದ್ಯಾಭ್ಯಾಸ, ರಕ್ಷಣೆ, ಒಟ್ಟಾರೆ ಶ್ರೇಯೋಭಿವೃದ್ಧಿ ಮಾತ್ರವಲ್ಲ, ಸಮಾಜದ ಬೆಳವಣಿಗೆಯಲ್ಲಿ ಅವರುಗಳ ಭಾಗವಹಿಸುವಿಕೆಯೂ ಅವಶ್ಯಕ ಎಂದು ಸಮಾಜ ಮನಗಂಡಿದೆ.  ಅದಕ್ಕಾಗಿಯೇ ವಿಶ್ವ ಸಂಸ್ಥೆಯ  ಸಾಮಾನ್ಯ ಸಭೆಯು ತನ್ನ 27ನೆಯ ವಿಶೇಷ ಅಧಿವೇಶನದಲ್ಲಿ ಮಕ್ಕಳ ಪರವಾದ ಹಲವಾರು ಘೋಷಣೆಗಳನ್ನು ನಿರೂಪಿಸಿ ಜಗತ್ತನ್ನು ಅವುಗಳ ಬದ್ಧತೆಗೆ ಒಳಪಡಿಸಿದೆ . ಆ ಘೋಷಣೆಗಳೆಂದರೆ;
 1.    ಮಕ್ಕಳಿಗೆ ಮೊದಲ ಆದ್ಯತೆ ನೀಡಿ
2.    ಬಡತನ ನಿರ್ಮೂಲನೆ ಮಾಡಿ ಮಕ್ಕಳನ್ನು ಆಸ್ತಿಯನ್ನಾಗಿ ತೊಡಗಿಸಿ
 3.   ಯಾವುದೇ ಮಗುವನ್ನು ಹಿಂದೆ ಸರಿಯಲು ಬಿಡಬೇಡಿ 
4.    ಪ್ರತಿ ಮಗುವಿನ ಆರೈಕೆ ಮಾಡಿ
 5.   ಪ್ರತಿ ಮಗುವಿಗೆ ಶಿಕ್ಷಣ ಕೊಡಿ 
6.    ಮಕ್ಕಳನ್ನು ಅಪಾಯ ಲೈಂಗಿಕ ದೌರ್ಜನ್ಯ ಮತ್ತು  ಶೋಷಣೆಯಿಂದ  ರಕ್ಷಿಸಿ 
7.    ಯುದ್ಧದಿಂದ ಮಕ್ಕಳನ್ನು ರಕ್ಷಿಸಿ
 8.    ಎಚ್ಐವಿ/ ಏಯ್ಡ್ಸ್ ವಿರುದ್ಧ ಹೋರಾಡಿ 
9.    ಮಕ್ಕಳು ಹೇಳುವುದನ್ನು ಕೇಳಿ ಮತ್ತು ಅವರ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಿ 
10.    ಭೂ ಮಂಡಲವನ್ನು ಮಕ್ಕಳಿಗಾಗಿ ರಕ್ಷಿಸಿ ಇಡಿ

ಈ ಘೋಷಣೆಗಳು ಮತ್ತು ಬದ್ಧತೆಯಲ್ಲಿ ಮಕ್ಕಳ ಮೂಲಕ ಸಮಾಜದ ಸಮಗ್ರ ಬೆಳವಣಿಗೆಯ ಉದ್ದೇಶವಿದೆ. ಮಕ್ಕಳ ಇತರೆ ಎಲ್ಲಾ ವಿಷಯಗಳಿಗಾಗಿ ಪ್ರತ್ಯೇಕ ಕಾನೂನುಗಳು ಮತ್ತು ಯೋಜನೆಗಳು ಈಗಾಗಲೇ ಸಿದ್ಧಗೊಂಡಿವೆ ಮತ್ತು ಜಾರಿಗೆಯಲ್ಲೂ ಇವೆ. ಆದರೆ ಆಘಾತಕಾರಿ ವಿಷಯವಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳಿಗೆ ಪ್ರತ್ಯೇಕವಾದ ಕಾನೂನಿನ ವ್ಯವಸ್ಥೆ ಇರಲಿಲ್ಲವಾದರೂ ಇಂತಹ ಹೀನ ಕೃತ್ಯಗಳನ್ನು ಅಸ್ತ್ತಿತ್ವದಲ್ಲಿರಬಹುದಾದ ಯಾವುದೇ ಅಪರಾಧಿಕ ದಂಡ ಸಂಹಿತೆ ಕಾನೂನುಗಳಡಿಯಲ್ಲಿಯೇ ಬಗೆಹರಿಸಿಕೊಳ್ಳುವ ಸಪೂರವಾದ ಅವಕಾಶವೇನೋ  ಇತ್ತು. ಆದರೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರವನ್ನು ವೈಜ್ಞಾನಿಕವಾಗಿ  ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಪ್ರತ್ಯೇಕವಾಗಿಯೇ ಪರಿಗಣಿಸಬೇಕೆಂದು ತಜ್ಞರ   ಸಂಶೋಧನೆಗಳಿಂದ ಬೆಳಕಿಗೆ ಬಂದಿರುವುದರಿಂದ ಮತ್ತು ಕ್ಷೇತ್ರ ತಜ್ಞರ ಪುರಾವೆ ಸಮೇತವಾದ ಆಲೋಚನೆ ಮತ್ತು ಸಲಹೆಗಳಿಂದ ಈಗ ಸರ್ಕಾರ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ವಿಷಯವಾಗಿ ಹೊಸ ಕಾನೂನನ್ನು ರಚಿಸಿದೆ. 

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾನೂನು,  ೨೦೧೨, ನಿಜಕ್ಕೂ ಮಕ್ಕಳೆಡೆಗಿನ ಅತೀವ ಕಾಳಜಿಯುಳ್ಳ ಕಾನೂನಾಗಿ ಹೊರಬಂದಿದೆ. ಈ ಕಾನೂನಿನ ವ್ಯಾಖ್ಯಾನದ ಪ್ರಕಾರ ಮಕ್ಕಳು ಎಂದರೆ ಹುಟ್ಟಿದ ಮಗುವಿನಿಂದ ಹಿಡಿದು ಹದಿನೆಂಟು ವರ್ಷಗಳ ಒಳಗೆ ಇರುವ ಎಲ್ಲಾ ಗಂಡು ಮತ್ತು ಹೆಣ್ಣು ಮಕ್ಕಳಾಗಿರುತ್ತಾರೆ. ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗುವಂತಹ ಕಾನೂನಾಗಿದೆ.

ಈ ಕಾನೂನಿನಲ್ಲಿ ಮಕ್ಕಳನ್ನು ಲೈಂಗಿಕ ಹಿಂಸೆ, ದೌರ್ಜನ್ಯ ಮತ್ತು ಕ್ರೌರ್ಯಗಳಿಂದ ರಕ್ಷಿಸುವುದು ಮಾತ್ರವಲ್ಲ ಅವರುಗಳನ್ನು ಅಶ್ಲೀಲವಾಗಿ ಬಳಸಿಕೊಳ್ಳುವುದನ್ನು ಅಪರಾಧ ಎಂದು ಪರಿಗಣಿಸಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಮಕ್ಕಳ ರಕ್ಷಣೆಗಾಗಿ ಸರ್ಕಾರಗಳು ಯೋಜನೆಗಳನ್ನು ರೂಪಿಸುವ ಮತ್ತು ಕಾರ್ಯಗತಗೊಳಿಸುವ  ಜವಾಬ್ದಾರಿಯನ್ನು ಹೊಂದಿರಬೇಕೆಂದು ಈ ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಈ ಕಾನೂನಿನ ಪ್ರಕಾರ ಮಕ್ಕಳನ್ನು ಕಾಮತೃಷೆಗೆ ಬಳಸಿಕೊಳ್ಳುವುದು, ಅವರೊಡನೆ ದೈಹಿಕವಾಗಿ ಅಸಭ್ಯವಾಗಿ ವರ್ತಿಸುವುದು, ಅವರನ್ನು ಅಶ್ಲೀಲ ಕ್ರಿಯೆಯಲ್ಲಿ ತೊಡಗುವಂತೆ ಪ್ರೇರೇಪಿಸುವುದು, ಅವರಿಂದ ವೇಶ್ಯಾವೃತ್ತಿ ನಡೆಸುವುದು ಮತ್ತು ಅವರುಗಳು ಇರುವೆಡೆಯಲ್ಲಿ ದೈಹಿಕವಾಗಿ ಅಸಭ್ಯ ಮತ್ತು ಅಶ್ಲೀಲವಾಗಿ ವರ್ತಿಸುವುದು ಕಾನೂನು ರೀತ್ಯ ಅಪರಾಧವಾಗಿರುತ್ತದೆ. ಮಕ್ಕಳ ಮೇಲಿನ ಅತ್ಯಾಚಾರಕ್ಕೆ, ಅವರುಗಳಿಗೆ ನೀಡುವ ಯಾವುದೇ ಸ್ವರೂಪದ ಲೈಂಗಿಕ ಕಿರುಕುಳಗಳಿಗೆ ಮತ್ತು ಅವರುಗಳನ್ನು ಬಳಸಿಕೊಂಡು ಅಶ್ಲೀಲ ವೆಬ್ ಸೈಟ್ ಗಳನ್ನು ಹಾಗೂ ಫೋಟೋಗಳನ್ನು ತಯಾರು ಮಾಡಿದರೆ ಅದಕ್ಕೆ ತೀವ್ರತರವಾದ ಶಿಕ್ಷೆ ನೀಡಲಾಗುತ್ತದೆ. ಈ ಕಾನೂನಿನ ಮತ್ತೊಂದು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಮಕ್ಕಳ ಮೇಲಿನ ಲೈಂಗಿಕ ಹಲ್ಲೆಯನ್ನೂ ಅಪರಾಧವೆಂಬುದಾಗಿ ಪರಿಗಣಿಸಲಾಗಿದೆ. ಮಕ್ಕಳ ಯಾವುದೇ ಅಂಗಾಂಗಗಳನ್ನು ಯಾರೇ ಆದರೂ ತಮ್ಮ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.  

ಯಾವುದೇ ಲೈಂಗಿಕ ಕ್ರಿಯೆಗೆ ಮತ್ತು ಅತ್ಯಾಚಾರಕ್ಕೆ ಹಾಗೂ ಅಶ್ಲೀಲತೆಗೆ ಮಕ್ಕಳ ಒಪ್ಪಿಗೆ ಇದೆ ಎನ್ನುವುದು ಮತ್ತು ಅವರುಗಳ ವಿರೋಧ ಇರಲಿಲ್ಲ ಎನ್ನುವ ಕಾರಣ ನೀಡುವುದನ್ನು ಕಾನೂನು ಮಾನ್ಯ ಮಾಡುವುದಿಲ್ಲ.  ಮಕ್ಕಳ ಮರ್ಮಾಂಗಗಳನ್ನು ಘಾಸಿಗೊಳಿಸುವುದು, ನೋಯಿಸುವುದು, ತಾತ್ಕಾಲಿಕವಾಗಿಯಾಗಿಯಾದರೊ ಸರಿ ಅದು ಕ್ರಿಮಿನಲ್ ಅಪರಾಧವಾಗಿರುತ್ತದೆ. ವಯಸ್ಕರಾದಾಗ ಸಾಮಾನ್ಯ ಮತ್ತು ಆರೋಗ್ಯಕರ ರೀತಿಯಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿಗೆ ಮಕ್ಕಳ ಮನಸನ್ನು ಮತ್ತು ಅಂಗಾಂಗಗಳನ್ನು ಪರಿವರ್ತಿಸುವುದು ಮತ್ತು ಘಾಸಿಗೊಳಿಸುವುದು ಅಪರಾಧವಾಗಿರುತ್ತದೆ. ವಿವಾಹದ ಹೆಸರಿನಲ್ಲಿ ಅರ್ಥಾತ್ ಬಾಲ್ಯ ವಿವಾಹ ಮಾಡಿಕೊಂಡು ಮಗುವಿನೊಡನೆ ದೈಹಿಕವಾಗಿ ಮತ್ತು ಲೈಂಗಿಕವಾಗಿ ಸಂಪರ್ಕ ಇಟ್ಟುಕೊಂಡರೆ ಮತ್ತು ಹಿಂಸಿಸಿದರೆ ಅದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಹದಿನಾರು ವರ್ಷ ಒಳಗಿರುವ ಮಕ್ಕಳೊಡನೆ ಯಾವ ಸಂದರ್ಭದಲ್ಲೂ ಸಂಭೋಗ ಮಾಡುವಂತೆಯೇ ಇಲ್ಲ. ಹದಿನಾರರಿಂದ ಹದಿನೆಂಟು ವರ್ಷ ವಯಸ್ಸಿನ ಮಕ್ಕಳ ಜೊತೆಗೆ ಲೈಂಗಿಕ ಸಂಪರ್ಕವನ್ನು ಸಂಭೋಗದ ಮುಖೇನ ಹೊಂದಿದ್ದರೆ ಅದಕ್ಕೆ ಆ ಅಪ್ರಾಪ್ತ ವಯಸ್ಕನ/ಳ ಒಪ್ಪಿಗೆ ಇತ್ತೆ ? ಒಪ್ಪಿಗೆ ಇರುವುದೇ ಆದರೆ ಅದು ಭಯ, ಹೆದರಿಕೆ ಮತ್ತು ಬಲವಂತಗಳ ಹೊರತಾಗಿತ್ತೇ ಎನ್ನುವ ಅಂಶಗಳನ್ನು ಪರಿಗಣಿಸಿ ಅದು ಆ ಅಪ್ರಾಪ್ತ ವಯಸ್ಕನ/ಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ತೊಂದರೆ ಕೊಡವುದೇ ಇಲ್ಲವೇ ಎನ್ನುವುದನ್ನೂ ಗಣನೆಗೆ ತೆಗೆದುಕೊಂಡು ಅಂತಹ ಲೈಂಗಿಕತೆ ಅಪರಾಧವೇ ಇಲ್ಲವೇ ಎನ್ನುವುದನ್ನು ನಿರ್ಧರಿಸಲಾಗುತ್ತದೆ. 

ಈ ಕಾನೂನಿನ ಪ್ರಕಾರ ಮಕ್ಕಳ ವೈಯಕ್ತಿಕ ಅಂಗಗಳನ್ನು ಕೈಯಿಂದ ಮುಟ್ಟುವುದು ಅಥವಾ ತಮ್ಮ ಇತರೆ ಅಂಗಗಳಿಂದ ಸ್ಪರ್ಶಿಸುವುದು ಕೂಡ ಅಪರಾಧ. ಮಕ್ಕಳನ್ನು ಹೆದರಿಸಿ, ಬೆದರಿಕೆಯೊಡ್ಡಿ, ಅವರ ಮೇಲೆ ಹಲ್ಲೆ ನಡೆಸಿ, ಕೂಡಿ ಹಾಕಿ, ಮತ್ತುಬರಿಸಿ, ಅವರು ನಿದ್ರೆಯಲ್ಲಿದ್ದಾಗ ಅಥವಾ ಪ್ರಜ್ಞೆ ತಪ್ಪಿರುವಾಗ ಅವರ ಮೇಲೆ  ಲೈಂಗಿಕ ದೌರ್ಜನ್ಯ ಎಸಗಿದರೆ ಅದಕ್ಕೆ ಗುರುತರವಾದ ಶಿಕ್ಷೆಯಿರುತ್ತದೆ. ತಂದೆ ತಾಯಿಗಳು, ರಕ್ತ ಸಂಬಂಧಿಗಳು, ನೆರೆ ಹೊರೆಯವರು, ಅಪರಿಚಿತ ಸಾಮಾನ್ಯರು, ಹೋಟೆಲು ಮತ್ತು ಲಾಡ್ಜ್ಗಳ ಸಿಬ್ಬಂದಿ ವರ್ಗದವರು, ಕಾರ್ಮಿಕರು, ಸೈನಿಕರು, ಪೋಲಿಸರು, ರಿಮ್ಯಾಂಡ್ ಹೋಮಿನ ಅಧಿಕಾರಿಗಳು, ರಕ್ಷಣಾ ಗೃಹದ ಸಿಬ್ಬಂದಿಗಳು, ಕಾರಾಗೃಹದ ಅಧಿಕಾರಿಗಳು, ಶಾಲೆ ಕಾಲೇಜುಗಳ ಸಿಬ್ಬಂದಿ ವರ್ಗದವರು, ಸರ್ಕಾರಿ ನೌಕರರು ಮತ್ತು ವೈದ್ಯರುಗಳು ಮಕ್ಕಳ ಮೇಲೆ ನಡೆಸುವ ಲೈಂಗಿಕ ಅಪರಾಧಗಳಿಗೆ ಬೇರೆ ಬೇರೆ ಸ್ವರೂಪದ ಶಿಕ್ಷೆಗಳನ್ನು ವಿಧಿಸಲಾಗಿದೆ. 

ಲೈಂಗಿಕ ದೌರ್ಜನ್ಯ, ಹಲ್ಲೆ, ಕಿರುಕುಳ ಮತ್ತು ಅತ್ಯಾಚಾರಗಳ ಮೂಲಕ ಮಕ್ಕಳಿಗೆ ಯಾವುದೇ ಖಾಯಿಲೆಗಳು ಬಂದರೆ ಮತ್ತು ಎಚ್ಐವಿ ಏಡ್ಸ್ ನಂತಹ ಮಾರಣಾಂತಿಕ ಖಾಯಿಲೆ ತಗುಲಿದರೆ ಅದು ಕೂಡ ಪ್ರತ್ಯೇಕ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂತಹ ಕ್ರಿಯೆಗಳಿಂದ ಮಕ್ಕಳು ಮಾನಸಿಕ ಆಘಾತಕ್ಕೆ ಒಳಗಾದರೆ ಅಪರಾಧಿಗೆ ಕಠಿಣ ಶಿಕ್ಷೆಯುಂಟಾಗುತ್ತದೆ. ಲೈಂಗಿಕ ಹಿಂಸೆಯಿದ, ದೈಹಿಕ ದೌರ್ಜನ್ಯದಿಂದ ಹೆಣ್ಣು ಮಕ್ಕಳು ಗರ್ಭ ಧರಿಸಿದರೆ,  ಯಾವುದೇ ಮಕ್ಕಳ ಹತ್ಯೆ ಆದರೆ, ಅಂತಹ ಕ್ರೌಯದಿಂದ ಮಕ್ಕಳು ಶಾಶ್ವತವಾಗಿ ಅಂಗವಿಕಲರಾದರೆ. ದೈಹಿಕವಾಗಿ ಅಸಾಮರ್ಥ್ಯರಾದರೆ  , ಮಾನಸಿಕವಾಗಿ ಖಿನ್ನತೆಗೆ ಒಳಗಾದರೆ, ಲೈಂಗಿಕ ಅಪರಾಧಕ್ಕೆ ತುತ್ತಾದ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ  ಇದು ಘೋರ ಅಪರಾಧವಾಗಿರುತ್ತದೆ. 

ಯಾರದರೂ ಇಂತಹ ಅಪರಾಧಗಳಲ್ಲಿ ನೇರವಾಗಿ ಪಾಲ್ಗೊಳ್ಳದೆ ಇತರರನ್ನು ಪಾಲ್ಗೊಳ್ಳೂವಂತೆ ಪ್ರಚೋದಿಸಿದರೆ, ಮಕ್ಕಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರೆ, ವೇಶ್ಯಾವಾಟಿಕೆ ಜಾಲಗಳಿಗೆ ಮಕ್ಕಳನ್ನು ಸರಬರಾಜು ಮಾಡುತ್ತಿದ್ದರೆ, ಲೈಂಗಿಕತೆ ಉದ್ದೇಶಕ್ಕಾಗಿ ಮಕ್ಕಳನ್ನು ಸಾಗಾಣಿಕೆ ಮಾಡುತ್ತಿದ್ದರೆ, ಮಕ್ಕಳ ಮೇಲಿನ ಲೈಂಗಿಕ ಹಲ್ಲೆಗೆ ಆಯುಧಗಳನ್ನು ಒದಗಿಸಿಕೊಟ್ಟರೆ ಅವರೂ ಸಹ ಈ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಇಂತಹ ಅಪರಾಧಗಳನ್ನು ಪರಿಶೀಲಿಸಲು ಮತ್ತು ಪ್ರಕ್ರಿಯೆಗೆ ಒಳಪಡಿಸಲು ಈ ಕಾನೂನಿನ ಅಡಿಯಲ್ಲಿ ಆಯಾ ಸರ್ಕಾರಗಳು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕಿರುತ್ತದೆ. ಕೋರ್ಟಿನ ಕಲಾಪಗಳು ನಡೆಯುವಾಗ ನೊಂದ ಮಕ್ಕಳ ಏಕಾಂತಕ್ಕೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿರುತ್ತದೆ. ಅಂತಹ ಕೋರ್ಟುಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ಇರಬೇಕಾಗುತ್ತದೆ. 

ನೊಂದ ಮಕ್ಕಳ ಪಾಲಕರು ಮತ್ತು ಪೋಷಕರು ನ್ಯಾಯಾಲಯದ ಖರ್ಚನ್ನು ಭರಿಸಲು ಸಾಧ್ಯವಿಲ್ಲವಾದಾಗ ಸರ್ಕಾರವೇ ಅಂತಹ ಖರ್ಚು ವೆಚ್ಚಗಳನ್ನು ಭರಿಸಬೇಕಿರುತ್ತದೆ. ಮತ್ತು ನುರಿತ ಕಾನೂನು ಸಲಹೆಗಾರರನ್ನೂ ಒದಗಿಸಿಕೊಡಬೇಕಿರುತ್ತದೆ. ಕಲಾಪಗಳನ್ನು ಗುಪ್ತವಾಗಿ ನಡೆಸಬೇಕಿರುತ್ತದೆ. ಯಾವುದೇ ಮಿಡಿಯಾಗಳಲ್ಲಿ ಅಂತಹ ಮಕ್ಕಳ ಹೆಸರು ಮತ್ತಿತರ ವಿವರಗಳು ಮತ್ತು ಫೋಟೊಗಳನ್ನು ಬಿತ್ತರಿಸುವುದಾಗಲೀ ಅಚ್ಚು ಹಾಕಿ ಪ್ರಕಟಪಡಿಸುವುದಾಗಲಿ ನಿಷಿದ್ಧವಾಗಿರುತ್ತದೆ. ಅಪರಾಧದಿಂದ ನೊಂದ ಮಕ್ಕಳಿಗೆ ವೈದ್ಯರುಗಳನ್ನು ಮತ್ತು ಮಾನಸಿಕ ಸಲಹೆಗಾರರನ್ನು ಒದಗಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ. ನೊಂದ ಮಕ್ಕಳು ತಮ್ಮ ಮೇಲಾದ ದೌರ್ಜನ್ಯಕ್ಕೆ ಯಾವುದೇ ಸಾಕ್ಷಿಗಳನ್ನು ಒದಗಿಸಬೇಕಿರುವುದಿಲ್ಲ. ಬದಲಿಗೆ ಅಪರಾಧಿಯೇ ತಾನು ನಿರಪರಾಧಿ ಎಂದು ಸಾಬೀತು ಪಡಿಸುವ ಜವಬ್ದಾರಿಯನ್ನು ಹೊಂದಿರುತ್ತಾನೆ. ಅಗತ್ಯಕ್ಕೆ ತಕ್ಕಂತೆ ಕೋರ್ಟಿನ ಆದೇಶವನ್ನು ಅನುಸರಿಸಿ ಮಕ್ಕಳು ನ್ಯಾಯಾಲಯಕ್ಕೆ ಹಾಜರಾಗಬಹುದಿರುತ್ತದೆ. 

ಇಂತಹ ಅಪರಾಧಗಳನ್ನು ನೋಡಿದ ಗುರುತಿಸಿದ ಯಾರೇ ಆಗಲಿ ದೂರು ನೀಡಬಹುದಿರುತ್ತದೆ. ಹಾಗೆ ತಿಳಿದೂ ದೂರು ದಾಖಲಿಸದಿರುವುದೂ ಅಪರಾಧವಾಗಿರುತ್ತದೆ. ಮಕ್ಕಳು ಸ್ವತಃ ದೂರು ದಾಖಲಿಸಬಹುದಾಗಿರುತ್ತದೆ. ಈ ಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಸಹ ಇಲ್ಲಿ ಗಮನ ಹರಿಸಲಾಗಿದೆ. ಯಾವುದೇ ದೂರು ಸುಳ್ಳು ಎಂದು ಸಾಬೀತಾದರೆ ಅಂತಹ ದೂರು ದಾಖಲಿಸಿದ ವಯಸ್ಕನಿಗೆ ಶಿಕ್ಷೆಯಾಗುತ್ತದೆ. ಅಂತಹ ಸುಳ್ಳು ದೂರನ್ನು ಹನ್ನೆರಡು ವರ್ಷ ವಯಸ್ಸಿನೊಳಗಿನ ಮಕ್ಕಳು ದಾಖಲಿಸಿದರೆ ಅಂತಹ ಸುಳ್ಳನ್ನು ಅಪರಾಧವೆಂದು ಪರಿಗಣಿಸುವುದಿಲ್ಲ. ಆದರೆ ಅಂತಹ ಸುಳ್ಳು ದೂರನ್ನು ಹದಿನಾರು ವರ್ಷ ಮೇಲ್ಪಟ್ಟ ಮಕ್ಕಳು ದಾಖಲಿಸಿದರೆ ವಿವರವಾದ ತನಿಖೆಗಾಗಿ ಬಾಲಾಪರಾಧ ನ್ಯಾಯಾಲಯಕ್ಕೆ ಕಳುಹಿಸಿಕೊಳಲಾಗುತ್ತದೆ ಮತ್ತು ಬಾಲಾಪರಾಧ ಕಾನೂನಿನ ಪ್ರಕಾರ ಶಿಕ್ಷೆಯೂ  ಆಗಬಹುದಿರುತ್ತದೆ.

ಸ್ಥಳೀಯ ಪೋಲಿಸ್ ಠಾಣೆಯಲ್ಲಾಗಲೀ, ಮ್ಯಾಜಿಸ್ಟ್ರೇಟರ ಎದುರಾಗಲೀ ದೂರು ದಾಖಲಿಸಬಹುದು. ಪೋಲಿಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರೆ ನೇರವಾಗಿ ಪೋಲಿಸ್ ಕಮಿಷನರ್ ಅವರನ್ನು ಸಂಪರ್ಕ ಮಾಡ ಬಹುದಾಗಿರುತ್ತದೆ. ಈ ವಿಷಯದಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಹಾಯವನ್ನೂ ಪಡೆಯ ಬಹುದಾಗಿರುತ್ತದೆ. ತುರ್ತು ಅವಶ್ಯಕತೆಗಳಿಗಾಗಿ ಮಕ್ಕಳ ಸಹಾಯವಾಣಿಯನ್ನು ೧೦೯೮ ಸಂಖ್ಯೆಯಲ್ಲಿ ದಿನದ ೨೪ ಗಂಟೆಯೂ ಸಂಪರ್ಕಿಸಬಹುದಾಗಿರುತ್ತದೆ.

ನೆನೆಪಿರಲಿ ಮಕ್ಕಳೆಡೆಗಿನ ಯಾವುದೇ ಲೈಂಗಿಕ ದೌರ್ಜನ್ಯಗಳ ಅಪರಾಧಿಗಳಿಗೆ ೭ ವರ್ಷಗಳ ಕಠಿಣ ಸಜೆ, ಜೀವಾವಧಿ ಶಿಕ್ಷೆ ಮಾತ್ರವಲ್ಲ ಮರಣ ದಂಡನೆಯನ್ನೂ ವಿಧಿಸಬಹುದಾಗಿರುತ್ತದೆ. ಕಾನೂನು ಶಿಕ್ಷೆಗೆ ಹೆದರಿ ಮಾತ್ರವಲ್ಲ, ಮಕ್ಕಳು ಈ ಭೂಗೋಳದ ಜೀವಾಳ. ಅವರ ಅಭಿವೃದ್ಧಿಯೇ ನಮ್ಮ ನೆಮ್ಮದಿಗೆ ಕಾರಣ ಎನ್ನುವುದನ್ನು ಮನಗೊಂಡು ಮಕ್ಕಳನ್ನು ಹೂವಿನಂತೆ ಅರಳಲು ಬಿಡೋಣ. ಕಾಪಾಡೋಣ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Roopa Satish
Roopa Satish
10 years ago

Saakasthu maahitigaLive lekhanadalli….. Thank you for sharing Anjali. 

amardeep.p.s.
amardeep.p.s.
10 years ago

ಉಪಯುಕ್ತ ಮಾಹಿತಿ ಮತ್ತು ಅನುಸರಿಸಲೇಬೇಕಿರುವ ಕೆಲವು ಜಾಗ್ರತೆ ಕ್ರಮಗಳ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ…..ಅಭಿನಂದನೆಗಳು.

prashasti.p
10 years ago

sakat maahiti anjali avre

3
0
Would love your thoughts, please comment.x
()
x