ಮಕ್ಕಳು ಮತ್ತು ಯುದ್ಧ ನೀತಿಯ ಒಂದು ಪುಟ: ರುದ್ರೇಶ್ವರ ಸ್ವಾಮಿ

`ಮಕ್ಕಳು ಮತ್ತು ಯುದ್ಧ ನೀತಿ’- ಈ ಶೀರ್ಷಿಕೆಯನ್ನು ಓದುತ್ತಿದ್ದಂತೆ, ಇಲ್ಲಿ ಏನೋ ಒಂದು ಗೊಂದಲವಿದೆ ಅನ್ನಿಸುತ್ತದೆ. ಒಂದೇ ಗುಂಪಿಗೆ ಸೇರದ ಯಾವುದೋ ಒಂದು ಹೊರಗಿನದು ಇಲ್ಲಿ ಬಂದು ಈ ಗೊಂದಲ ಸೃಷ್ಟಿಸಿದಂತೆ ಕಂಡುಬರುತ್ತದೆ- ಮೊಸರಲ್ಲಿ ಕಲ್ಲು ಸಿಕ್ಕ ಹಾಗೆ. ಮಕ್ಕಳಿಗೂ ಯುದ್ಧಕ್ಕೂ ಯಾವ ಬಾದರಾಯಣ ಸಂಬಂಧ?  ಆದರೆ ಆಳದಲ್ಲಿ ಅದರ ಕಥೆ ಬೇರೆಯದೇ ಆಗಿದೆ. ಮಕ್ಕಳು ಮತ್ತು ಯುದ್ಧ (ನೀತಿ)- ಇದು ಎಂತಹ ವೈರುಧ್ಯಗಳುಳ್ಳ ಸಮಸ್ಯೆ. ಈ ವೈರುಧ್ಯವನ್ನು, ಬದುಕಿನ ಈ ಅಣಕವನ್ನು ನಾವು ಆಳಕ್ಕಿಳಿಯದೆ ಅರ್ಥಮಾಡಿಕೊಳ್ಳುವುದು ಕಷ್ಟ. ಇದು ಹೊಸದಾಗಿ ಇವತ್ತು ಹುಟ್ಟಿದ್ದೇನೂ ಅಲ್ಲ. ಈಗ ಮಾತ್ರ ಅದು ಸಂಭವಿಸುತ್ತಿದೆ ಎಂದು ಯಾರೂ ತಿಳಿಯಬೇಕಿಲ್ಲ, ಮಂದಿರಗಳು,  ಮಸೀದಿಗಳು ಮತ್ತು ಚರ್ಚುಗಳು ಇವತ್ತು ಮಾತ್ರ ಯುದ್ಧಗಳ ಅಡ್ಡೆಯಾಗಿವೆ ಎನ್ನುವುದು ಸತ್ಯವಲ್ಲ. ಸಾವಿರಾರು ವರ್ಷಗಳ ಹಿಂದೆ, ಒಳ್ಳೆಯ ಜನ ಈ ಬುವಿಯ ಮೇಲೆ ವಾಸಿಸಿದ್ದರು ಎಂದು ನಂಬಲಾದ ಕಾಲದಲ್ಲಿ, ಅದ್ಭುತ ವ್ಯಕ್ತಿತ್ವ ಹೊಂದಿದ್ದ ಶ್ರೀ ಕೃಷ್ಣ ಬದುಕಿದ್ದ ಕಾಲದಲ್ಲಿಯೆ- ಧಾರ್ಮಿಕವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲು ಜನ ನೆರೆದಿದ್ದರು. ಮನುಷ್ಯನ ಮನಸ್ಸಿನ ಆಳಕ್ಕೆ ಬೇರುಬಿಟ್ಟು ಮನೆಮಾಡಿಕೊಂಡಿರುವ ಈ ಯುದ್ದ ದಾಹ, ನಾಶ ಮಾಡಬೇಕೆನ್ನುವ ವಿಧ್ವಂಸಕಾರಿ ಬಯಕೆ ಮನುಷ್ಯನ ಆಳದಲ್ಲೆ ಕೆತ್ತಲಾಗಿದೆ. ಮನುಷ್ಯನ ಒಳಗೆ ಆಳದಲ್ಲಿ ಹುದುಗಿಕೊಂಡಿರುವ ಈ ಪ್ರಾಣಿ ಒಳ್ಳೆಯ ಕ್ಷೇತ್ರಗಳಲ್ಲೂ ಕಾಣಿಸುತ್ತದೆ. ಅಲ್ಲಿದ್ದುಕೊಂಡೆ ಯುದ್ದಕ್ಕೆ ಸಿದ್ದಗೊಳಿಸುತ್ತದೆ.

ಬದುಕು ಕೊನೆ ಗೊತ್ತಿರದ ಒಂದು ಪಯಣ. ಆದಕಾರಣ, ಆರಂಭದ ಕ್ಷಣಗಳಲ್ಲಿ ನಂಬಿದ್ದೆಲ್ಲವೂ, ಮೊದಲ ಅನುಭವಗಳಲ್ಲಿ ದಕ್ಕಿದ್ದೆಲ್ಲವೂ ಕಡೆಗೆ ಅದೇ ಆಗಿರುವುದಿಲ್ಲವಾದರೂ, ಅವುಗಳ ಪರಿಣಾಮ ಮಾತ್ರ ಅಗಾಧವಾಗಿರುತ್ತದೆ, ಅಚ್ಚೊತ್ತಿಬಿಡುತ್ತದೆ. ಇವತ್ತು ನಾವು ಮಕ್ಕಳಿಗೆ ಕಲಿಸುತ್ತಿರುವುದಾದರೂ ಏನು? ಶಾಲೆಗಳು ಮಕ್ಕಳಿಗೆ ಏನನ್ನು ಕಲಿಸುತ್ತಿವೆ ? ನಾವು ಮತ್ತು ಶಾಲೆಗಳು ಮಕ್ಕಳಿಗೆ ಕಲಿಸುತ್ತಿರುವುದು- `ಮಹತ್ವಾಕಾಂಕ್ಷೆಯನ್ನು’.  ಶಾಲೆಗಳು ಮಕ್ಕಳಿಗೆ ಕಲಿಸುತ್ತಿರುವುದು ಒಬ್ಬರು ಇನ್ನೊಬ್ಬರನ್ನು ಕಂಡು  ಅಸೂಯೆ ಪಡುವುದನ್ನು, ಒಬ್ಬರು ಇನ್ನೊಬ್ಬರ ಜೊತೆ ಸ್ಪರ್ಧಿಸುವುದನ್ನು. ನಿಮಗೆ ಅನ್ನಿಸುತ್ತಿಲ್ಲವೆ, ಆರಂಭದಲ್ಲೆ ನಾವು ಎಡವುತ್ತಿದ್ದೇವೆಂದು,  ಮಕ್ಕಳ ಮನಸ್ಸಿನಲ್ಲಿ ಯುದ್ಧದ ಬೀಜಗಳನ್ನು ಬಿತ್ತುತ್ತಿದ್ದೇವೆಂದು, ನಮ್ಮ ಶಾಲೆಗಳು ಶಾಲೆಗಳಾಗಿ ಉಳಿದಿಲ್ಲವೆಂದು ? ನಾವು ಕಲಿಸುತ್ತಿರುವುದೆಲ್ಲ ಪ್ರಕೃತಿಯನ್ನು ನಾಶಮಾಡುವುಕ್ಕಾಗಿ, ಪರಿಸರದ ಸಮತೋಲನ ಹಾಳುಮಾಡುವುದಕ್ಕಾಗಿ. ಗಣಿತ ತಂತ್ರಜ್ಞಾನ ಕಲಿಸುತ್ತಿರುವುದು ಹಣಗಳಿಸುವುದಕ್ಕಾಗಿ, ಮಹಲುಗಳಲ್ಲಿ ವಾಸಿಸುವುದಕ್ಕಾಗಿ, ಐಷಾರಾಮಿ ಬದುಕು ನಡೆಸುವುದಕ್ಕಾಗಿ. ನೆಮ್ಮದಿ ತಾರದ ಈ ಬದುಕು ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ. ಶಾಲೆಗಳು ಇದನ್ನು ಇನ್ನೂ ಮುಂದುವರಿಸಿದರೆ ಪ್ರಕೃತಿ ನಾಶವಾಗುತ್ತದೆ, ಪ್ರಕೃತಿ ಸಾಯುವುದರ ಜೊತೆಗೆ ನಾವು ಕೂಡ ನಾಶವಾಗುತ್ತೇವೆ.  ಪ್ರತಿ ಬಯಕೆಯೂ ಪ್ರಕೃತಿಯ ವಿರುದ್ಧದ ಹುನ್ನಾರವೇ ಆಗಿರುತ್ತದೆ. ಈ ನಾಶಪಡಿಸುವ ಗುಣವನ್ನೇ,  ಧ್ವಂಸಗೊಳಿಸುವ ಪ್ರವೃತ್ತಿಯನ್ನೇ `ಯುದ್ದ’ ಎನ್ನುವುದು. ಮಕ್ಕಳು ತಮ್ಮ ಹಾದಿಯನ್ನು ತಾವೇ ಕಂಡುಕೊಳ್ಳುವಂತಹ ಶಿಕ್ಷಣ ನೀಡಬೇಕು, ಯಾರಾದರೂ  ಒಬ್ಬ ತಾನು ಬಡಗಿ ಆಗಲು ಬಯಸಿದರೆ, ಇನ್ನೊಬ್ಬ ಇಂಜಿನಿಯರ್ ಆಗಬಯಸಿದರೆ, ಮಗದೊಬ್ಬ ಕಲಾವಿದನಾಗಬಯಸಿದರೆ ಆ ನಿಟ್ಟಿನಲ್ಲಿ ಬೆಳೆಯಲು ಮುಕ್ತ ಅವಕಾಶವಿರಬೇಕು. ಹಾಗೆ ಮಾಡದೆ, ಹಗಲು ರಾತ್ರಿ ಪುಸ್ತಗಳನ್ನು ಬಾಯಿಪಾಠ ಮಾಡಿಸಿ, ಪರೀಕ್ಷೆಗಳನ್ನು ಪಾಸು ಮಾಡಿಸಿ, ಇಂಜಿನಿಯರ್, ಡಾಕ್ಟರ್ ಮಾಡುವುದಲ್ಲ. ಇಲ್ಲವೆ ಐಎಎಸ್ ಕೆಎಎಸ್ ಪರೀಕ್ಷೆ ಪಾಸು ಮಾಡುವುದೂ ಅಲ್ಲ.

`ನಾನು’, `ನಾನು’ ಯಾರೆಂದು ಜಗತ್ತಿಗೇ ತೋರಿಸಬೇಕು, ಅದನ್ನು ಸಾಬೀತು ಪಡಿಸಬೇಕು, ನನ್ನನ್ನು ನಾನು ಸಮರ್ಥಿಸಿಕೊಳ್ಳಬೇಕು, ನನ್ನನ್ನು ನಾನು ಸಂರಕ್ಷಿಸಿಕೊಳ್ಳಬೇಕು, ನಾನು ಕಾದಾಡಬೇಕು, ನಾನು ಗೆಲ್ಲಬೇಕು. ಇದು ಸಮಸ್ಯೆ, ಇದು ಗೀತೆಯ ಉದ್ದಕ್ಕೂ ಕಂಡುಬರುತ್ತದೆ. ಇದು ಒಳಗಿನ ಸಂಘರ್ಷ. ತನ್ನದು ಎಂದುಕೊಳ್ಳುವ ಒಂದು ಕಲ್ಲಿನ ಮೂರ್ತಿಗಾಗಿ, ಇನ್ನೊಬ್ಬರ ಜೀವ ತೆಗೆಯುವುದಕ್ಕೆ ಸಿದ್ಧನಾಗುವುದು. ತಾನು ಮೆರೆಯುವುದಕ್ಕೆ ಇನ್ನೊಬ್ಬನನ್ನು ಇಲ್ಲವಾಗಿಸುವುದು. ಯುದ್ಧ ಪಿಪಾಸು ಕುರುಡಾಗಿರುತ್ತಾನೆ, ಅವನಿಗೆ ಏನೂ ಕಾಣುವುದಿಲ್ಲ, ಅವನು ತನ್ನ ಶತ್ರುಗಳನ್ನು ಕೂಡ ನೋಡಬಯಸುವುದಿಲ್ಲ. ಅವನ ಎದುರು ಬಂದವರೆಲ್ಲರೂ ಅವನ ಶತ್ರುಗಳೇ.  ಈ ಎಲ್ಲ ಮೇಲಾಟ ಪೈಪೋಟಿ ಇಲ್ಲವಾಗಬೇಕು. ಮಕ್ಕಳು ತಾವು ಬಯಸಿದ್ದು ಆಗುವಂತಹ ವಾತಾವರಣ ನಿರ್ಮಾಣವಾಗಬೇಕು, ಅಂತಹ ಸನ್ನಿವೇಶ ನಿರ್ಮಾಣವಾದಾಗ, ತನಗೆ ತಾನೇ ಸಂತೋಷ ಮೂಡುತ್ತದೆ, ಒಳಗೂ ಮತ್ತು ಹೊರಗೂ ಯುದ್ಧದ ಕರಿನೆರಳು ಇಲ್ಲವಾಗುತ್ತದೆ. 

ಮಕ್ಕಳ ಕಣ್ಣಲ್ಲಿ ಬೆಳಕು ಮೂಡಿದರೆ ಯುದ್ದ ಎನ್ನುವ ಕತ್ತಲೆ ಇಲ್ಲವಾಗುತ್ತದೆ. ಮಕ್ಕಳು ಮಕ್ಕಳಾಗುತ್ತಾರೆ.  ಇದು ಬಹಳ ದೂರದ ಯಾತ್ರೆ ಮತ್ತು ತುಂಬಾ ಸೂಕ್ಷ್ಮವಾದ ಯಾತ್ರೆ. ಒಂದು ಸುಂದರ ಜಗತ್ತಿನ ನಿರ್ಮಾಣದಲ್ಲಿ,  ಹೆಣ್ಣು ಮಹತ್ವದ ಪಾತ್ರವಹಿಸಬೇಕಿದೆ. ಯಾವ ವಿಶ್ವವಿದ್ಯಾಲಯಗಳೂ ಇದುವರೆಗೂ ಹೃದಯಕ್ಕೆ ಕಲಿಸುವ, ಅದನ್ನು ಸುಶಿಕ್ಷಿತಗೊಳಿಸುವ ದಾರಿಯನ್ನು ಕಂಡುಕೊಂಡಿಲ್ಲ, ಇದನ್ನು ಹೆಣ್ಣು ಮಾಡಬಲ್ಲಳು, ಒಬ್ಬ ತಾಯಿ ಮಾಡಬಲ್ಲಳು. ತನ್ನ ಮಗ ಇನ್ನೊಬ್ಬನನ್ನು ಕೊಲ್ಲುವ, ಇನ್ನೊಬ್ಬನಿಂದ ಅವನು ಕೊಲ್ಲಲ್ಪಡುವುದನ್ನು ಅವಳೆಂದೂ ಬಯಸಲಾರಳು. ಆವಳು ಮಕ್ಕಳನ್ನು ಮಕ್ಕಳಾಗಿ ಇರುವಂತೆ ನೋಡಿಕೊಳ್ಳಬಲ್ಲಳು. ಅವಳನ್ನು ಈ ನಿಟ್ಟಿನಲ್ಲಿ ತೊಡಗಿಕೊಳ್ಳುವಂತೆ ಮಾಡಬೇಕಿದೆ. ಎಲ್ಲರನ್ನೂ ಪ್ರೀತಿಸುವ, ಗಡಿ ಭಾಷೆ  ದೇಶ ಎಲ್ಲವನ್ನೂ ದಾಟಿ ಒಂದುಗೂಡಿಸುವ ಕೆಲಸವನ್ನು ಅವಳು ಮಾತ್ರ ಮಾಡಬಲ್ಲಳು. ಅದಕ್ಕಾಗಿ ಮೊದಲು ನಾವು ಅವಳನ್ನು ಮನುಷ್ಯಳನ್ನಾಗಿ ಕಾಣುವ ಪ್ರವೃತ್ತಿ ಬೆಳೆಸಿಕೊಳ್ಲಬೇಕಿದೆ. ಹೆಣ್ಣಿನ ಮೇಲಿನ ಎಲ್ಲಾ ರೀತಿಯ ದೌರ್ಜನ್ಯ ನಿಲ್ಲಬೇಕಿದೆ. ಮಕ್ಕಳ ಸರ್ವತೋಮುಖ ಅಭಿವೃದ್ದಿಯಲ್ಲಿ ಇದು ಇವತ್ತಿನ ಯುದ್ಧ ನೀತಿ ಆಗಬೇಕು. ಮನುಕುಲದ ಉಳಿಯುವಿಕೆಗೆ ಇರುವುದು ಅದೊಂದೇ ಭರವಸೆಯ ಆಶಾಕಿರಣ.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Aparna Rao
Aparna Rao
9 years ago

ಹೌದು ಶಾಲೆಗಳು ಶಾಲೆಗಳಾಗಿ ಉಳಿದಿಲ್ಲ..ಮಕ್ಕಳ ಮನಸ್ಸಿನಲ್ಲಿ ಯುದ್ದದ ಬೀಜ ಬಿತ್ತಿ ಆಗಿದೆ..ಜೊತೆಗೆ ಅವರನ್ನು ವ್ಯವಸ್ಥೆ ರೀಮೊಟ್ ಕಂಟ್ರೋಲ್ ನಂತೆ ಆಡಿಸುತ್ತಿದೆ.. ಕಲಾ ಮಾಧ್ಯಮದಲ್ಲಿ  ಪ್ರತಿಯೊಂದು ರೀತಿಯಲ್ಲೂ ಚಾತುರ್ಯ ಉಳ್ಳಂಥ ನಮ್ಮ ಮಕ್ಕಳು ..ಅದರ ಬಗ್ಗೆ ಬೇರೆಯವರಿಗೆ ಇರುವ ಅಸಡ್ಡೆ ಭಾವನೆಯಿಂದಾಗಿ.. ಅದನ್ನು ಆರಿಸಿಕೊಂಡಲ್ಲಿ.. ತಾವೆಲ್ಲೋ ಉಪೇಕ್ಷೆಗೆ ಕಾರಣರಾಗಬಹುದು ಅನ್ನುವ ಅವ್ಯಕ್ತ ಭಯದಲ್ಲಿ… ತಂದೆ ತಾಯಿಯ ಯಾವ ಮಾತಿಗೂ ಸೊಪ್ಪು ಹಾಕದೆ ಕುರಿಗಳಂತೆ ಎಲ್ಲಾರು ಬೀಳುವ ಹಳ್ಳಕ್ಕೆ ತಾವು ಬೀಳುತ್ತೇವೆ ಅನ್ನುವಂತಾದರೆ..ಯಾರನ್ನು ದೂಷಿಸುವುದು?

Pradeep Kumar MK
Pradeep Kumar MK
9 years ago

Very good article.

Thanks,

Pradeep Kuamr MK

Vinod Kumar Bangalore
9 years ago

ಉತ್ತಮ ಬರಹ ಸರ್ . ಅನವಶ್ಯಕವಾದ ಸ್ಪರ್ಧಾ ಲೋಕವಾಗುತ್ತಿದೆ ಮಕ್ಕಳಿಗೆ ಇತ್ತೀಚಿನ ದಿನಗಳು , ಚಟುವಟಿಕೆಗಳು 

Rukmini Nagannavar
Rukmini Nagannavar
9 years ago

ಹೌದು ಸರ್ ಶಾಲೆಗಳು ಈ ದಿನ ಶಾಲೆಗಳಾಗಿ ಉಳಿದಿಲ್ಲ.ಮನಿ ಮೇಕಿಂಗ್ ಮಷಿನ್ಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಈ ಒಂದು ವಾತಾವರಣ ಒಬ್ಬ ಮತ್ತೊಬ್ಬನೆಡೆಗೆ ಅಸೂಯೆ, ಅಸಮಾಧಾನ ಉಂಟುಮಾಡಲು ಕಾರಣವಿರಬಹುದೇನೊ.

ಹೆಣ್ಣೊಂದು ಕಲಿತರಿೆ ಶಾಲೆಯೊಂದು ತೆರೆದಂತೆ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಆಕೆಯೇ ಮಕ್ಕಳಿಗೆ ಮೊದಲ ಗುರು. ಹೆಣ್ಣನ್ನು ಗೌರವದಿಂದ ಕಂಡಂದ್ದೆ ಆದರೆ ನಿಜವಾಗಿಯೂ ಆಕೆ ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ತನ್ನನ್ನು ತಾ ಸಕ್ರೀಯವಾಗಿ ಪಾಲ್ಗೊಳ್ಳುತಾ್ತಾಳೆ.

ರುಕ್ಮಿಣಿ.ಎನ್

4
0
Would love your thoughts, please comment.x
()
x