ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ: ವೈ. ಬಿ. ಕಡಕೋಳ

KADAKOL Y.B.

"ಅಮ್ಮಾ ಇಂದು ನನಗೆ ಹೊಟ್ಟೆ ನೋಯುತಿದೆ. ಶಾಲೆಗೆ ಹೋಗಲಾರೆ”, ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ವಾಂತಿ ಸಹ ಮಾಡುತ್ತಾನೆ. ಆತನ ತಂದೆ ತಾಯಿ ಇದು ಆತನ ಹಠಮಾರಿತನ ಎಂದು ಭಾವಿಸುತ್ತಾರೆ. ಆತನನ್ನು ಹೊಡೆದು ಬಡಿದು ಬೈದು ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.    

ಅವರೇನೋ ಆತನದು ಹಠಮಾರಿತನ ಎಂದು ಭಾವಿಸಿದ್ದಾರೆ ಆತ ನಿಜವಾಗಿಯೂ ಅನಾರೋಗ್ಯಕ್ಕೀಡಾಗಿದ್ದಾನೆ. ಆತನಿಗೆ ಶಾಲೆಯ ಭಯವಿರಬಹುದೆಂದು ಅವರೇಕೆ ಭಾವಿಸುವುದಿಲ್ಲ. ? ಮನೋವೈದ್ಯರ ಪ್ರಕಾರ ಮಕ್ಕಳಲ್ಲಿ ತಲೆನೋವು, ಹೊಟ್ಟೆನೋವು, ವಾಂತಿ ಮುಂತಾದ ತೊಂದರೆಗಳು ಹೆಚ್ಚುತ್ತಿರುವ ಒತ್ತಡದಿಂದ ಉದ್ಬವಿಸುತ್ತವೆ.    

ಇಂದು ಮಕ್ಕಳು ಅನೇಕ ರೀತಿಯ ಒತ್ತಡದಿಂದಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತಂದೆತಾಯಿಯರ ಮಹತ್ವಾಕಾಂಕ್ಷೆ. ಅವರು ತಮ್ಮ ಮಕ್ಕಳು ಯಾವಾಗಲೂ ಹೆಚ್ಚು ಅಂಕ ಪಡೆಯಲಿ ಎಂದೇ ಬಯಸುತ್ತಾರೆ. ಹೀಗಾಗಿ ಶಾಲೆಗೆ ಹೆಸರು ಹಚ್ಚಿದಾಗಿನಿಂದಷ್ಟೇ ಅಲ್ಲ ಮೂರು ವರ್ಷದಿಂದಲೇ ಅವರ ವಿದ್ಯಾಬ್ಯಾಸದ ತಯಾರಿಯಲ್ಲಿ ತೊಡಗುವ ಮೂಲಕ ಅವರ ಮೇಲೆ ಒತ್ತಡ ಹೆಚು ್ಚಮಾಡುತ್ತಾ ಹೋಗುವವರ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಮಕ್ಕಳು ಅವರು ನಿರೀಕ್ಷಿಸಿದ ಯಶಸ್ಸು ಪಡೆಯದೇ ಹೋದಲ್ಲಿ ಅವರೊಡನೆ ತಂದೆ-ತಾಯಿಗಳು ಪ್ರೀತಿಯಿಂದ ಸ್ಪಂದಿಸುವುದಿಲ್ಲ ಕೂಡ. ಅಂಥ ಮಕ್ಕಳ ಆಟ ಓಟ  ಅವರಿಗೆ ಹಿಡಿಸದು. ಮಕ್ಕಳು ಎಷ್ಟೊಂದು ಒತ್ತಡ ಅನುಭವಿಸುತ್ತಿದ್ದಾರೆಂದರೆ ಅವರು ಮನೆಯಿಂದ ಓಡಿ ಹೋಗಬೇಕು ಎಂದು ಕೆಲವೊಮ್ಮೆ ಭಾವಿಸುತ್ತಾರೆ ಎಂದು ಓರ್ವ ಮಾನಸಿಕ ತಜ್ಞರು ಹೇಳುತ್ತಾರೆ.    

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂದೆತಾಯಂದಿರು ತಮ್ಮ ಮಕ್ಕಳನ್ನು "ಆಲ್ ರೌಂಡರ್" ಮಾಡಲು ಯೋಚಿಸುತ್ತಾರೆ. ಮಕ್ಕಳು ಇಂಥ ಸಂದರ್ಭದಲ್ಲಿ ಎಷ್ಟೊಂದು ಒತ್ತಡ ಅನುಭವಿಸುತ್ತಾರೆಂದರೆ ಅವರ ಹಸಿವು ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇತ್ತೀಚೆಗೆ ನನ್ನ ಸ್ನೇಹಿತರ ಒಬ್ಬ ಮಗ ಐದಾರು ವರ್ಷಗಳ ಕೋಚಿಂಗ ಕ್ಲಾಸ್ ಮೂಲಕ ಉತ್ತಮ ಶಾಲೆಯೊಂದಕ್ಕೆ ಆಯ್ಕೆಯಾದ ಅವರು ಅತೀ ಸಂತೋಷದಿಂದಲೇ ಎಲ್ಲರೆದುರು ಹೆಮ್ಮೆಯಿಂದ ತಮ್ಮ ಮಗ ತಾವು ನಿರೀಕ್ಷಿಸಿದ್ದನ್ನು ಸಾಧಿಸಿದ ಇನ್ನು ಮುಂದೆ ನಮ್ಮ ಕರ್ತವ್ಯದ ಅರ್ಧ ಕೆಲಸ ಹಗುರ ಮಾಡಿದ ಉತ್ತಮ ಶಾಲೆಗೆ ಆಯ್ಕೆಯಾದ ಎಂದೆಲ್ಲ ಹೇಳಿ ಅವನನ್ನು ಆ ಶಾಲೆಗೆ ಸೇರಿಸಿ ಬಂದರು.   

ಆ ಶಾಲೆಯವರು ಪಾಲಕರು ತಮ್ಮ ಮಕ್ಕಳ ಭೇಟಿಗಾಗಿ ನಿಗದಿತ ಸಮಯ, ದಿನ ಗೊತ್ತು ಮಾಡಿರುತ್ತಾರಂತೆ ಆ ದಿನ ಮಾತ್ರ ಪಾಲಕರು ತಮ್ಮ ಮಗುವನ್ನು ಕಂಡು ಮಾತನಾಡಿಸಿ ಬರುವುದು. ಉಳಿದ ಸಂದರ್ಭ ಅವರು ಅಲ್ಲಿ ಹೋಗುವಂತಿಲ್ಲ, . ಹೀಗೆ ಹಲವು ತಿಂಗಳು ಉರುಳಿದವು ಮೊದಲ ಸಲ ಭೇಟಿಗೆ ಇವರು ಹೋದಾಗ ನಗುನಗುತ್ತ ಮಾತನಾಡಿದ ಇವರ ಮಗ ಅಪ್ಪ ಅಮ್ಮಾ ಮನೆಯಲ್ಲಿ ದಿನವೂ ನನ್ನ ನೆನಪು ನಿಮಗಾಗುವುದಿಲ್ಲವೇ. ? ಎಂದು ಕೇಳಿದನಂತೆ ಆಗ ಮಗನ ಕಾಳಜಿ ಮತ್ತು ಇವರ ಶಿಕ್ಷಣ ಪ್ರೇಮ ಅವನನ್ನು ಸಾಂತ್ವನ ಮಾಡಿ ಮತ್ತೆ ಮತ್ತೆ ಆಗಾಗ ಭೇಟಿಗೆ ಬರುತ್ತೇನೆ ಅಂಥಾ ಹೇಳಿ ಬಂದಿದ್ದರಂತೆ ಕೆಲವು ದಿನಗಳು ಉರುಳುವಷ್ಠರಲ್ಲಿ ಸಂಬಂಧಿಸಿದ ಶಾಲೆಯ ಮುಖ್ಯೋಪಾದ್ಯಾಯರಿಂದ ನಿಮ್ಮ ಮಗುವಿಗೆ ಆರೋಗ್ಯದ ತೊಂದರೆ ಕಾಣಿಸಿಕೊಂಡಿದೆ ನಾಳೆಯೇ ನೀವು ಬಂದು ಕರೆದೊಯ್ಯಿರಿ ಎಂದು ಕರೆ ಬಂದಾಗ ಇಬ್ಬರೂ ಸರಕಾರಿ ವೃತ್ತಿಯಲ್ಲಿದ್ದ ಕಾರಣ ಗಂಡ ರಜೆ ಹಾಕಿ ಮಗುವಿನ ಭೇಟಿಗೆ ಹೋದಾಗ ತೀರಾ ಸಣಕಲು ಶರೀರದೊಂದಿಗೆ ಜೋಲು ಮೋರೆ ಹಾಕಿಕೊಂಡು ಮಗ ಮುಂದೆ ನಿಂತಾಗ ಕೆಲವು ತಿಂಗಳ ಹಿಂದೆ ಮಗು ಕೇಳಿದ ಪ್ರಶ್ನೆ ಅಪ್ಪ ನನಗೆ ನಿಮ್ಮ ನೆನಪಾಗುವುದಿಲ್ಲವೇ? ಎಂಬುದು ಕಣ್ಮುಂದೆ ದುತ್ತೆಂದು ಬಂತಂತೆ. ಕೂಡಲೇ ಮಗುವನ್ನು ಕರೆದುಕೊಂಡು ಮನೆಗೆ ಬಂದು ಆಸ್ಪತ್ರೆಯ ವೈದ್ಯರಲ್ಲಿ ಹೋದಾಗ ಕಂಡು ಬಂದ ಸತ್ಯ ಸಂಗತಿ"ಮಗುವಿನ ರಕ್ತ ಕಣದಲ್ಲಿ ಬಿಳಿ ರಕ್ತ ಕಣಗಳು ಕಡಿಮೆಯಾಗಿದ್ದು ಹೀಗೆ ಬಿಟ್ಟರೆ ಮಗು ಬದುಕುವ ಸಾದ್ಯತೆ ತೀರಾ ಕಡಿಮೆ" ಎಂಬುದು.    

ತಂದೆತಾಯಿಗೆ ದಿಕ್ಕೇ ತೋಚದಂತಾಗಿ ಮುಗ್ದ ಮಗು ಕೇಳಿದ ಪ್ರಶ್ನೆ ಅರಿಯದೇ ಹೋದ ಮೂರ್ಖರು ನಾವು ಎಂದುಕೊಂಡು ವರ್ಷವಿಡೀ ಮಗುವಿಗೆ ತರಕಾರಿ ಉತ್ತಮ ಆಹಾರ ನೀಡುವ ಜೊತೆಗೆ ವೈದ್ಯರು ಹೇಳಿದ ಸಲಹೆಗಳನ್ನು ಪಾಲಿಸುತ್ತ ಮಗುವನ್ನು ಬದುಕಿಸಿಕೊಂಡು ಅವರು ಹೇಳಿದ್ದೇನೆಂದರೆ ಇನ್ನು ಮುಂದೆ ಮಕ್ಕಳ ಮೇಲೆ ಒತ್ತಡ ಹೇರುವ ಮೂಲಕ ತಂದೆತಾಯಿಗಳು ಯಾವುದಕ್ಕೂ ಆಸ್ಪದ ಕೊಡದೇ ಮಕ್ಕಳು ಬೆಳೆಯುವ ವಯಸ್ಸಲ್ಲಿ ಅವರ ಆಸಕ್ತಿ ಅಭಿರುಚಿ ಗಮನಿಸಿ ಅವರು ಯಾವುದಕ್ಕೆ ಅರ್ಹರೋ ಅದನ್ನು ಒದಗಿಸಿ ಅವರ ಶಿಕ್ಷಣ ಕೊಡಿಸುವುದು ಉತ್ತಮ ಎನ್ನುವ ಮಾತು.    

1998 ರಲ್ಲಿ ಮುಂಬೈನಲ್ಲಿ ಕೈಗೊಂಡ ಒಂದು ಅದ್ಯಯನದ ಪ್ರಕಾರ ಮುಂಬೈನ ಆಸ್ಪತ್ರಗೆ 540 ರಷ್ಟು ವಿದ್ಯಾರ್ಥಿಗಳು ಒತ್ಡದ ಕಾರಣದಿಂದಾಗಿಯೇ ದಾಖಲಾಗುತ್ತಾರೆ ಎಂಬುದು. ಮಗುವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ತ್ರಾಸದಾಯಕ ಕೆಲಸ. ಮಗುವಿನ ವರ್ತನೆಗೆ ಹಲವಾರು ಸಂಗತಿಗಳು ಕಾರಣವಾಇರುತ್ತವೆ. ಒಂದು ಆಂತರಿಕ ಮತ್ತೊಂದು ಬಾಹ್ಯ ಸಂಗತಿಗಳು. ನಾವು ನಮ್ಮ ತಾಳ್ಮೆ, ಸಹನೆ. ಪ್ರೋತ್ಸಾಹದ ನುಡಿಗಳ ಮೂಲಕ ಮಗುವಿನೊಂದಿಗೆ ಮಗುವಂತೆ ಬೆರೆಯುವ ಮೂಲಕ ಮಕ್ಕಳ ಮನಸ್ಸಿನ ಭಾವನೆಗಳನ್ನು ಅರಿಯಬಹುದಾಗಿದೆ. ಮಗುವಿನ ಮಿದುಳಿನ ವಿವಿಧ ಕೇಂದ್ರಗಳ ಜಾಗೃತಿ ಮತ್ತು ಬೆಳವಣಿಗೆ ಆಯಾಯ ಪ್ರಾಯದಲ್ಲಿ ನಡೆದಿರಬೇಕು. ತಪ್ಪಿದಲ್ಲಿ ಅದಕ್ಕೆ ಸಂಬಂಧಿಸಿದ ಶಾಶ್ವತ ತೊಂದರೆ ಎದುರಿಸಬೇಕಾಗುತ್ತದೆ. ಮಕ್ಕಳ ಮನಸ್ಥತಿಯನ್ನು ಅರ್ಥಮಾಡಿಕೊಂಡು ಅವರ ವ್ಯಕ್ತಿತ್ವ ರೂಪಿಸುವಲ್ಲಿ ತಂದೆತಾಯಿಗಳ ಪಾತ್ರ ಮಹತ್ವದ್ದು.   

ಮಕ್ಕಳು ಇಂದು ದುಶ್ಚಟಗಳಿಗೆ  ಕೂಡ ಅಂಟಿಕೊಳ್ಳುತ್ತಿದ್ದಾರೆ ಪರೀಕ್ಷಾ ಕೋಣೆಯೊಳಗೆ ಹೋಗುವಾಗ ಅವರ ಜೇಬಿನಲ್ಲಿ ಪರೀಕ್ಷಾ ನೋಂದಣಿ ಪತ್ರದ ಜೊತೆಗೆ ಸ್ಟಾರ್ ಗುಟ್ಕಾದಂತಹ ತಂಬಾಕು ಮಿಶ್ರಿತ ಪಾಕೀಟುಗಳು ಸಿಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ. ಈ ಕುರಿತು ಕೂಡ ಕೆಲವು ಪಾಲಕರು ಹೆಚ್ಚು ಜವಬ್ದಾರಿ ವಹಿಸಬೇಕಾಗಿದೆ.

ಮಕ್ಕಳಿಗೆ ಕೇವಲ ಅಕ್ಷರಜ್ಞಾನ ಕೊಟ್ಟರೆ ಸಾಕೇ, ? ಶಿಕ್ಷಣಕ್ಕಾಗಿ ಶಾಲೆಗೆ ಕಳಿಸಿದರಾಯ್ತೆ? ಸುಂದರವಾದ ಬಟ್ಟೆ ಕೊಡಿಸಿದರೆ ಸಾಕೆ. ?ಅಳುವಾಗ ಆಟಿಕೆ ಕೊಡಿಸಿದರೆ ಸಾಕೆ. ? ಹಿರಿಯರಾದ ನಾವು ನಮ್ಮ ಆಕಾಂಕ್ಷೆಗಳನ್ನು ಹವ್ಯಾಸಗಳನ್ನು ಈಡೇರಿಸಿಕೊಳ್ಳಲು ದಿನದ 24 ಗಂಟೆ ಚಿಂತಿಸುತ್ತಿರುವಾಗ ಅದೇ ನಮ್ಮ ಮಗುವಿನಲ್ಲಿಯೂ ಹತ್ತು ಹಲವು ಆಸೆ-ಆಕಾಂಕ್ಷೆಗಳಿವೆ, ಅಂಕುರಗಳಿವೆ ಎಂಬುದನ್ನು ನಾವೇಕೆ ಅರಿಯುತ್ತಿಲ್ಲ.

ಮಕ್ಕಳ ಸಮಸ್ಯೆ ಅರಿಯಿರಿ

ಮಕ್ಕಳು ಶಾಲೆಗೆ ಹೋಗದಿದ್ದರೆ ಅಥವ ಶಾಲೆಗೆ ಹೋಗಲು ಹೆದರುತ್ತಿದ್ದರೆ ಅವರನ್ನು ಬೈಯದಿರಿ, ಹೊಡೆಯದಿರಿ, ಅದಕ್ಕೆ ನಿಜವಾದ ಕಾರಣ ತಿಳಿಯಿರಿ, ಶಾಲೆಯವರೆಗೂ ಹೋಗಿ ಆತನ ಸಮಸ್ಯೆಗೆ ಪರಿಹಾರ ಕಂಡುಕೊಂಡು ಆತನ ಭಯ ನಿವಾರಿಸಿ, ಮಕ್ಕಳ ತಕರಾರುಗಳ ಬಗ್ಗೆ ಗಮನಕೊಡಿ, ಅದು ಆ ಮಗುವಿನ ಶಾಲೆಗೆ ಸಂಬಂಧಪಟ್ಟಂತೆ ಇರಬಹುದು ಅಥವ ಅದರ ದೈಹಿಕ ಬೆಳವಣಿಗೆಗೆ, ಮಾನಸಿಕ ವಿಕಸನದೆಡೆಗೆ ಪೂರಕವಾಗಿದ್ದಿರಬಹುದು. ಅಥವ ಅಕ್ಕಪಕ್ಕದ ಮನೆಯ ವಾತಾವರಣಕ್ಕೆ ಸಂಬಂಧಿಸಿದ್ದಿರಬಹುದು. ಮಗುವಿನ ಹೇಳಿಕೆ ಖೊಟ್ಟಿ ಎಂದು ಅಲ್ಲಗಳೆಯದೇ ಅವರನ್ನು ಸಂಯಮದಿಂದ ಮಾತನಾಡಿಸಿ ನಿಮ್ಮ ಮಾತುಗಳಿಗೆ ಮಗು ಸ್ಪಂದಿಸಿ ಖುಷಿಯಾಗಿ ಇರತೊಡಗಿದರೆ ಚಿಂತೆಯಿಲ್ಲ, ಇಲ್ಲದಿದ್ದರೆ, ಮಕ್ಕಳ ವೈದ್ಯರಲ್ಲಿ ಕರೆದುಕೊಂಡು ಹೋಗಿ ಅಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ.    

ಮಕ್ಕಳು ನಿಮಗೆ ಗೊತ್ತಿಲ್ಲದಂತೆ ಸಹವಾಸ ದೋಷದಿಂದ ದುಶ್ಚಟಕ್ಕೆ ಅಂಟಿಕೊಳ್ಳಬಹುದು. ಅಂಥ ಮಗುವಿನ ಬಗ್ಗೆ ಎಚ್ಚರಿಕೆ ವಹಿಸಿ, ಜೊತಗೆ ಆ ಮಗುವಿಗೂ ತಿಳುವಳಿಕೆ ಹೇಲಿ, ಸಂಬಂಧಪಟ್ಟ ಪಾಲಕರೊಂದಿಗೆ ಸೌಜನ್ಯದಿಂದ ಆ ಮಗುವಿನ ವರ್ತನೆಯ ಬಗ್ಗೆ ಗಮನ ಸೆಳೆಯಿರಿ.    

ಮಕ್ಕಳ ಎದುರು ದೂರದರ್ಶನದ ಸದಭಿರುಚಿಯ ಕಾರ್ಯಕ್ರಮಗಳನ್ನು ವೀಕ್ಷಿಸಿ, ಕ್ರೌರ್ಯ, ಹಿಂಸೆ ತುಂಬಿದ ಕಾರ್ಯಕ್ರಮಗಳನ್ನು ಮಕ್ಕಳ ಮುಂದೆ ನೀವೂ ಕೂಡ ನೋಡಬೇಡಿ ಅಂಥವುಗಳು ಕೂಡ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.    

ಮಕ್ಕಳನ್ನು ನಿಮ್ಮ ಬಿಡುವಿನ ವೇಲೆ ಬೇರೆ ಸ್ಥಳಗಳ ಅಂದರೆ ಪ್ರವಾಸ ತಾಣಗಳತ್ತ ಕರೆದೊಯ್ಯಿರಿ ಅವರ ಜ್ಞಾನ ಬೆಳವಣಿಗೆಗೆ ಪೂರಕವಾಗುವ ನೈತಿಕ ಕಥೆ ಹೇಳುವುದನ್ನು ರೂಢಿಸಿಕೊಳ್ಳಿ.    

ಮಕ್ಕಳೆದುರು ತಂದೆ-ತಾಯಂದಿರು ಯಾವತ್ತೂ ಜಗಳವಾಡಬೇಡಿ, ಅಥವ ಪರಸ್ಪರ ದೂಷಿಸುವುದು, ಅಥವ ಮಾತು ಬಿಡುವುದು ಇಂಥ ಕೃತ್ಯಗಳಲ್ಲಿ ತೊಡಗಬೇಡಿ ಅದೂ ಕೂಡ ನಮ್ಮ ಅಪ್ಪ-ಅವ್ವ ಹೀಗೆ ಅಂಥ ಅವರಲ್ಲಿ ಕೀಳರಿಮೆ ಬರುವ ಸಾದ್ಯತೆ ಇದೆ.   

ಇಬ್ಬರು ಮಕ್ಕಳಿದ್ದಾಗ ಅವರಲ್ಲಿ ಮೇಲು ಕೀಳು ಎಂಬ ಬಾವನೆ ಬಿಂಬಿಸಬೇಡಿ, ನೀವೂ ಕೂಡ ಹಾಗೆ ನಡೆದುಕೊಳ್ಳದಿರಿ.   

ಮಕ್ಕಳನ್ನು ತಂದೆತಾಯಿಗಳು ತಮ್ಮ ಸ್ವತ್ತು ಎಂದು ಭಾವಿಸಿ ಅವರಿಂದ ಅತಿಯಾದ ವಿಧೇಯತೆಯನ್ನು ನಿರೀಕ್ಷಿಸುವುದು ಕಡ ದೊಡ್ಡ ತಪ್ಪು. ಮಕ್ಕಳ ಶಿಕ್ಷಣಕ್ಕಾಗಿ ತಾವು ಮಾಡುತ್ತಿರುವುದು ದೊಡ್ಡ ತ್ಯಾಗದ ಖರ್ಚು ಎಂದು ಅವರ ಶಾಲೆಗೆ ಸಂಬಂದಪಟ್ಟಂತೆ ತಿಳಿದುಕೊಳ್ಳುವುದು ಅವರಿ ತಮ್ಮ ಆಜ್ಞಾನುಸಾರ ನಡೆಯಲಿ ಎಂದು ಬಯಸುವುದು ನಿಜಕ್ಕೂ ಘೋರ ಒತ್ತಡಕ್ಕೆ ಕಾರಣ.   

ವಸತಿ ಸಹಿತ ಶಾಲೆಗಳಲ್ಲಿ ಮಕ್ಕಳನ್ನು ಇಡುವುದು ತಪ್ಪಲ್ಲ ಆದರೆ ಆ ಮಕ್ಕಳಿಗೆ ನಿಮ್ಮ ಪ್ರೀತಿಯ ಪ್ರೋತ್ಸಹವೂ ಅಷ್ಟೇ ಮುಖ್ಯ ಎಂಬುದನ್ನು ಅರಿಯಿರಿ.    

ಅತೀ ಹೆಚ್ಚು ಪಾಕೆಟ್ ಮನಿ ಮಕ್ಕಳಿಗೆ ಕೊಡಬೇಡಿ ಹಾಗಂತ ಹಣ ಕೊಡುವುದೇ ತಪ್ಪಲ್ಲ. ಅದು ಎಷ್ಟು ಅವಶ್ಯಕವೋ ಸಮಯ ಸಂದರ್ಭ ತಿಳಿದುಕೊಂಡು ಕೊಡಿ,   

ಮನೆಯಲ್ಲಿ ಪ್ರಕೃತಿ ಪ್ರೀತಿ. ತಂದೆತಾಯಿ, ಗುರು ಹಿರಿಯರಿಗೆ ತೋರಬೇಕಾದ ಪ್ರೀತಿ, ನಮ್ಮ ಸಂಸ್ಕøತಿ ನಡೆ ನುಡಿಗಳು, ರಾಷ್ಟ್ರಪ್ರೇಮ ಬಿಂಬಿಸುವ ಕಥೆಗಳು ಮುಂತಾದ ಚಟುವಟಿಕೆಗಳಲ್ಲಿ ತೊಡುಗುವ ಮೂಲಕ ಮಕ್ಕಳ ಮನಸ್ಸನ್ನು ಬೆಳೆಸಿ.  

ಅಶಿಸ್ತು ಮತ್ತು ಅತಿಯಾದ ಶಿಸ್ತು ಎರಡೂ ತುಂಬಾ ಅಪಾಯಕಾರಿ ಕಾರಣ ನಿಮ್ಮೊಲುಮೆಯ ಶ್ರೀರಕ್ಷೆ ನಿಮ್ಮ ಮಕ್ಕಳ ಮೇಲಿರಲಿ.  

ಒತ್ತಡವು ನಮ್ಮನ್ನು ಸಾಯಿಸುವ ಮೊದಲು ಅದನ್ನು ಮೊದಲು ನಮ್ಮೊಳಗಿಂದ ಸಾಯಿಸಬೇಕು, ಒತ್ತಡ ನಿಭಾಯಿಸುವುದನ್ನು ಕಲಿತೆ ಜೀವನ ನಿರ್ವಹಣೆ ಸುಲಭ.   

ಮಕ್ಕಳ ಮನಸ್ಸು ಹೂವಿನಂತೆ ಅದನ್ನು ಘಾಸಿಗೊಳಿಸಿ ಒತ್ತಾಯವನ್ನು ಹೇರಿ ಒತ್ತಡಕ್ಕೆ ಸಿಲುಕಿಸಬೇಡಿ, ಅವರ ಆಸೆ-ಆಕಾಂಕ್ಷೆಗಳನ್ನು ಬೇಕು ಬೇಡಗಳನ್ನು ತಿಳಿದುಕೊಂಡು ಸಾಗಿದಲ್ಲಿ ಮಗುವಿನ ಮನಸ್ಸು ಅರಳೀತು. ಜೊತೆಗೆ ನಿಮಗೂ ನೆಮ್ಮದಿ. ಮಕ್ಕಳು ಮನುಕುಲದ  ಆಶಾ ಕುಸುಮಗಳು, ಮನೆಯಂಗಳದಿ ಬೆಳಗುವ ಮಂಗಳ ದೀಪಗಳು ಭಾವೀ ರಾಷ್ಟ್ರದ ಭಾಗ್ಯೋದಯ ಶಿಲ್ಪಿಗಳು. ಮಕ್ಕಳಿಗೆ ಆಸ್ತಿ ಅಂತಸ್ತು ಕೂಡಿಡುವುದಕ್ಕಿಂತ ಮಕ್ಕಳನ್ನೇ ನಿಮ್ಮ ಆಸ್ತಿಯನ್ನಾಗಿ ಮಾಡಿಕೊಳ್ಳಿ.

-ವೈ. ಬಿ. ಕಡಕೋಳ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x