ಮಕ್ಕಳನ್ನೂ ಅನ್ವೇಷಣಾ ಮನೋಭಾವದತ್ತ ಪ್ರೇರೇಪಿಸುವ ಆನಂದ ಪಾಟೀಲರ “ಬೆಳದಿಂಗಳು”: ರವಿರಾಜ್ ಸಾಗರ್. ಮಂಡಗಳಲೆ

ಸಣ್ಣ ಮಕ್ಕಳನ್ನೆ ದೃಷ್ಟಿಯಲ್ಲಿಟ್ಟುಕೊಂಡ ಸಿದ್ಧಮಾದರಿಯ ದಾರಿಯಿಂದ ದೂರ ನಿಂತು ಮಕ್ಕಳಿಗೆ ಕುತೂಹಲದ ವಸ್ತುವಿನೊಂದಿಗೆ ತಮ್ಮದೇ ಕಾಲ್ಪನಿಕತೆಗೆ ತೆರೆದುಕೊಳ್ಳಬಲ್ಲ, ಅನ್ವೇಷಣಾ ಮನೋಭಾವದತ್ತ ತೆರೆದುಕೊಳ್ಳುವಂತೆ ಮಾಡಬಲ್ಲ ವಸ್ತುವನ್ನಿಟ್ಟುಕೊಂಡು, ಸಣ್ಣ ಮಕ್ಕಳಿಗೆ ತುಸು ಗಂಭೀರ ಎನಿಸಿದರರೂ ಪ್ರೌಢ ಹಂತದ ಮಕ್ಕಳ ಮನೋಮಟ್ಟಕ್ಕೆ ಆಳವಾಗಿ ಇಳಿದು ತುಸು ಹೆಚ್ಚಾಗಿ ಪ್ರಭಾವ ಬೀರಬಲ್ಲ ಆನಂದ ಪಾಟೀಲರ ಬೆಳದಿಂಗಳು ಕಾದಂಬರಿಯನ್ನು ನೀವು ಒಮ್ಮೆ ಓದಿದರೆ ಅದು ಮತ್ತೊಮ್ಮೆ ಓದಿಸಿಕೊಳ್ಳುತ್ತದೆ.

ಸರಳ ಸಂಭಾಷಣೆಯೊಂದಿಗೆ ಮಕ್ಕಳ ಮನಃಪಟಲದಲ್ಲಿ ತಾವು ಈಗಾಗಲೇ ನೋಡಿರುವ ಯಾವುದೋ ಬೆಟ್ಟಗುಡ್ಡ,ಕಣಿವೆ ಪರಿಸರ ಅಥವಾ ಈಗಾಗಲೇ ನೋಡಿರುವ ಯಾವುದೋ ಸನ್ನಿವೇಶದ ಕುರಿತು ಪುನರ್ಮನನಕ್ಕೆ ಹೋಗಿ ತಮ್ಮ ಕಲ್ಪನಾಲೋಕವನ್ನು ತಾವೇ ವಿಸ್ತರಿಸಿಕೊಳ್ಳುವಂತೆ ಮಾಡಬಲ್ಲ , ತಮ್ಮ ಕಲಿಕಾ ಅನುಭವವನ್ನು ತಾವೇ ಮರುಕಟ್ಟಿಕೊಳ್ಳಬಲ್ಲಂತ ಸಾಧ್ಯತೆಗಳನ್ನು ಮಕ್ಕಳಲ್ಲಿ ವಿಸ್ತರಿಸಬಲ್ಲ ಕಾದಂಬರಿಯಾಗಿ ಬೆಳದಿಂಗಳು ಕಾದಂಬರಿಗೆ ಆಯ್ದುಕೊಂಡ ಕಥಾಹಂದರವನ್ನು ಹೊಸದೊಂದು ಮಾದರಿಯ ವಿಮರ್ಶಾ ತಕ್ಕಡಿಯಲ್ಲಿ ತೂಗಬೇಕಾಗುತ್ತದೆ.

ಮಕ್ಕಳ ಸಾಹಿತಿಗಳು ಎನ್ನುವುದಕ್ಕಿಂತ ಮಗು ಮನಸ್ಸಿನ ವ್ಯಕ್ತಿತ್ವವೇ ಆಗಿರುವ, ಸದಾ ಮಕ್ಕಳ ಸಾಹಿತ್ಯ ಕೃಷಿ ಕುರಿತು ಚಿಂತಿಸುವ, ಮಕ್ಕಳ ಸಾಹಿತ್ಯವನ್ನು ಆಸ್ವಾದಿಸುವ ಹಿರಿಯರಾದ ಆನಂದ ಪಾಟೀಲರ ಮಕ್ಕಳ ಸಾಹಿತ್ಯ ಕೃಷಿಯ ಪ್ರಯೋಗವೇ ವೈವಿಧ್ಯಮಯವಾದುದು. ಅವರದೇ ಆದ ಮಕ್ಕಳ ಸಾಹಿತ್ಯ ಕೃಷಿ ಶೈಲಿಯಲ್ಲಿ ಬರೆಯುತ್ತಲೇ ಮಕ್ಕಳ ಮನೋಪುಟವನ್ನು ಆವರಿಸುವಂತಹ ಕುತೂಹಲದ ಕಥನದೊಂದಿಗೆ ಸರಳ ಸಂಭಾಷಣೆಯ ಸನ್ನಿವೇಶ ನೇಯುವಲ್ಲಿ ಅವರ ಹೆಚ್ಚುಗಾರಿಕೆ ಇದೆ. ಅವರ ಬೆಳದಿಂಗಳು ಮಕ್ಕಳ ಕಾದಂಬರಿ ಓದಿದರೆ ನಿಮಗೆ ಮೇಲೆ ಹೇಳಿರುವ ಮಾತುಗಳು ಹೊಗಳಿಕೆ ಅಲ್ಲ ವಾಸ್ತವ ಎಂಬುದು ಅರ್ಥವಾಗುತ್ತದೆ.

ಈ ಕಾದಂಬರಿಯಲ್ಲಿ ಅಂತ್ಯದ ಸನ್ನಿವೇಶವನ್ನು ಹೊರತುಪಡಿಸಿ ಸಣ್ಣ ಮಕ್ಕಳಿಗೆ ಬೇಕಾದ ಫ್ಯಾಂಟಸಿ ಹೆಚ್ಚೇನು ಬರುವುದಿಲ್ಲ. ಆದರೆ ಸಣ್ಣ ಮಕ್ಕಳ ಹುಡುಕುವ ಬುದ್ಧಿ , ಕುತೂಹಲವೇ ಈ ಕಾದಂಬರಿಯಲ್ಲಿ ಬರುವ ಕಥೆಯ ಹುಟ್ಟಿಗೆ ಮೂಲ. ಪ್ರೌಢ ಹಂತದ ಮಕ್ಕಳ ಮನೋಮಟ್ಟಕ್ಕೆ ಸುಲಭವಾಗಿ ದಕ್ಕಬಹುದಾಗಿದ್ದು, ಸಂತೆಗೆ ಹೋಗಿದ್ದ ಅಪ್ಪು ಸಂತೆ ಮುಗಿಸಿ ಊರಿಗೆ ಹೋಗಲು ಬಸ್ಸಿಗಾಗಿ ಸಾಕಷ್ಟು ಸಮಯದಿಂದ ಕಾದಿದ್ದರೂ ಬಾರದ ಬಸ್ಸಿನಿಂದಾಗಿ ಬೇಸರಗೊಂಡ ಸಮಯದಲ್ಲಿ ಅನಿರೀಕ್ಷಿತವಾಗಿ ಕಾಣುವ ಒಂದು ಕಲ್ಲು ಕೆಣಕುವ ಕುತೂಹಲದಿಂದ ಕಥೆ ಆರಂಭವಾಗುತ್ತದೆ. ಅಪ್ಪುವಿಗೆ ಜೊತೆಯಾದ ಗೆಳೆಯ ಚಂದ್ರನಿಗೂ ಅಪ್ಪು ವಿಷಯ ತಿಳಿಸಿದ ನಂತರ ಅವನಿಗೂ ಕುತೂಹಲ ಕೆಣಕುವ ಮೂಲಕ ಕತೆ ಮುಂದುವರೆಯುತ್ತದೆ. ಇವರಿಬ್ಬರ ಕುತೂಹಲ ಕೆಣಕಿದ ಕಲ್ಲಿನ ಸುತ್ತಲಿನ ಕಣಿವೆ ಪರಿಸರದಲ್ಲಿ ನಡೆಯುವ ಸನ್ನಿವೇಶಗಳ ಮೂಲಕ ಮುಂದುವರಿಯುವ ಕಾದಂಬರಿ ಸಂಶೋಧನಾ ಪ್ರವೃತ್ತಿಯ ಅಪ್ಪಾರಾವ್ ಹಾಗೂ ಅವನ ಮಿತ್ರ ಫಡಕೆ ಅವರೆ ಇಡೀ ಕಾದಂಬರಿಯನ್ನು ಕೊನೆವರೆಗೂ ಆವರಿಸುತ್ತಾರೆ.

ಆರಂಭದಲ್ಲಿ ಮಕ್ಕಳ ಪಾತ್ರಗಳನ್ನು ಸೃಷ್ಟಿಸಿ ಅವರ ಕುತೂಹಲಗಳ ಅನುಭವಗಳನ್ನು ನಿರೂಪಿಸುವ ಕಾದಂಬರಿ ಸಂಶೋಧನೆಯಂತಹ ತುಸು ಗಂಭೀರ ವಸ್ತುವನ್ನು ಹುಡುಕಾಟ, ಪ್ರವಾಸಿ ಮನೋಪ್ರವೃತ್ತಿಯ ಅಲೆಮಾರಿತನ, ಹುಡುಗಾಟದ ಬುದ್ಧಿಯ ಅಪ್ಪಾರಾವ್ ಮತ್ತು ಫಡಕೆಯಂತಹ ಹಿರಿಯರ ಪಾತ್ರಗಳಲ್ಲಿ ಸನ್ನಿವೇಶ ನೇಯ್ದು ಕಾದಂಬರಿಯನ್ನು ಅಲ್ಲಿ ಬರುವ ಸಂಶೋಧನೆ ಮತ್ತು ಪತ್ತೇದಾರಿಕೆಯ ಕುತೂಹಲಿತ ವಿಷಯ ನಿರೂಪಣೆ,ವಿಸ್ತರಣೆಗಾಗಿ ಬೇಕಾದ ಪಾತ್ರಗಳನ್ನು ತರುವಲ್ಲಿ ಅವರ ಜಾಣ್ಮೆ ಇದೆ. ಆದರೆ ಆರಂಭದಲ್ಲಿ ಮಕ್ಕಳ ಮೂಲಕ ಸಾಗುವ ಕಾದಂಬರಿ ಆನಂತರ ಹಿರಿಯರ ಪಾತ್ರಗಳಲ್ಲಿ ಹೆಚ್ಚು ಗಿರಕಿ ಹೊಡೆಯುತ್ತ ಸಾಗುವುದು ಈ ಕಾದಂಬರಿಯ ವಸ್ತುವನ್ನು ನಿರೂಪಿಸಲು ಅನಿವಾರ್ಯವೋ, ಅಗತ್ಯವಿತ್ತೋ ಎನ್ನುವ ಪ್ರಶ್ನೆಯನ್ನು ಸಹ ಹುಟ್ಟುಹಾಕುತ್ತದೆ.

ಕಾದಂಬರಿಯ ಕುತೂಹಲದ ಕೇಂದ್ರಬಿಂದು ಒಂದು ಕಲ್ಲು . ಆ ಕಲ್ಲಿನಲ್ಲಿ ಬರೆದ ಚಿತ್ರಗಳು, ಅಕ್ಷರಗಳು ಅವರನ್ನು ರಜೆಯಲ್ಲಿ ಆಟದ ಕಡೆಗೆ ಬಿಡದೆ ಐತಿಹಾಸಿಕ ಅನ್ವೇಷಣೆಯತ್ತ ಸೆಳೆಯುತ್ತದೆ. ಶಾಲೆಯಲ್ಲಿಯು ಅಪ್ಪು ಮತ್ತು ಚಂದ್ರುಗೆ ಆ ಕಲ್ಲಿನ ವಿಚಾರವೇ ಹೆಚ್ಚು ಕಾಡತೊಡಗಿದ ಪರಿಣಾಮ ರಜಾ ವೇಳೆಯಲ್ಲಿ ಮತ್ತೆ ಅವರ ಹುಡುಕಾಟ ಮುಂದುವರಿಯುತ್ತ ಕಥೆ ಅಪ್ಪು ಮತ್ತು ಚಂದ್ರು ಸುತ್ತಲೆ ತೆರೆದುಕೊಳ್ಳುತ್ತದೆ. ನಂತರ ಸಂಶೋಧನಾ ಪ್ರವೃತ್ತಿಯ ಹುಡುಕಾಟದ ಬುದ್ಧಿಯ ಅಪ್ಪರಾವ್ ಮತ್ತು ಅವನ ಗೆಳೆಯ ಫಡಕೆ ಸಹ ಅದೇ ಕಣಿವೆಗೆ ಸುತ್ತಾಡಲು ಬಂದಿದ್ದಾಗ ಅನಿರೀಕ್ಷಿತವಾಗಿ ಕಾಣುವ ಅಪ್ಪು ಮತ್ತು ಚಂದ್ರು ಹೇಳುವ ವಿಚಾರ ತಿಳಿದ ಮೇಲೆ ಅವರು ಸಹ ಕಣಿವೆಯ ಸುತ್ತಲಿನ ನಿಗೂಢತೆಯನ್ನು ಅರಿಯಲು ಹುಡುಕಾಡುತ್ತಾರೆ . ಮದ್ಯಂತರದಿಂದ ಕಾದಂಬರಿಯು ಅಪ್ಪಾರಾವ್ ಮತ್ತು ಫಡಕೆ ಸುತ್ತ ಸುತ್ತುತ್ತ ಅವರ ಮೂಲಕ ಮಕ್ಕಳಿಗೆ ಆ ಕಣಿವೆಯ ಕಲ್ಲಿನ ಸುತ್ತ ಒಳಗೊಂಡಿರುವ ರಹಸ್ಯವನ್ನು ಅನ್ವೇಷಿಸಲು ಮಾರ್ಗದರ್ಶನ ದೊರಕುತ್ತದೆ. ಅವರ ನೆರವಿನಿಂದಲೇ ಅಪ್ಪು ಮತ್ತು ಚಂದ್ರು ಧೈರ್ಯವಾಗಿ ಆ ಕಣಿವೆಯಲ್ಲಿ ಸುತ್ತಾಡುತ್ತಾರೆ. ಕೊನೆಗೂ ಕಣಿವೆ ಸುತ್ತ ಸುತ್ತಾಡಿ ಕಲ್ಲನ್ನು ಬಗೆದು ತೆಗೆಯುತ್ತಾರೆ. ಕಲ್ಲಿನಲ್ಲಿ ಬರೆದಿರುವ ಅಕ್ಷರವನ್ನು ಓದುವಲ್ಲಿ ಯಶಸ್ವಿಯಾದ ಅಪ್ಪಾರಾವ್ ಮತ್ತು ಪಡಕೆಯವರಿಂದ ಬೆಟ್ಟದ ಸುತ್ತಲಿನ ರಹಸ್ಯವನ್ನು, ಆ ಮಾಯಕಲ್ಲಿನ ವಿಚಾರವನ್ನು ತಿಳಿದುಕೊಳ್ಳುತ್ತಾರೆ. ಆ ಕಲ್ಲು ಅತಿ ವಿಶಿಷ್ಟವಾದ ಶಕ್ತಿಯ ಕಲ್ಲಾಗಿದ್ದು ಸುಮಾರು 800 ವರ್ಷಗಳ ಹಿಂದೆ ಆ ಕಲ್ಲನ್ನು ತುಳಿದ ಒಬ್ಬ ಬಾಲಕ ದೈತ್ಯಾಕಾರವಾಗಿ ಬೆಳೆದದ್ದು , ತನ್ನ ದೈತ್ಯ ದೇಹಕ್ಕೆ ಹಸಿವನ್ನು ನೀಗಿಸಿಕೊಳ್ಳಲು ಆಗದೆ ಸಾಕಷ್ಟು ನೋವು ಅನುಭವಿಸಿ , ಸುತ್ತಲಿನ ಹಳ್ಳಿಗಳ ಜನರನ್ನು ಹೊಟ್ಟೆಪಾಡಿಗಾಗಿ ಪೀಡಿಸುತ್ತಿದ್ದುದಾಗಿ ಅದಕ್ಕಾಗಿ ರಾಕ್ಷಸತನ ವ್ಯಕ್ತಿತ್ವ ಬೆಳೆಸಿಕೊಂಡು ಬದಲಾದ ಬಗ್ಗೆ ಆ ಕಲ್ಲಿನಲ್ಲಿ ಬರೆದಿರುವ ಕುತೂಹಲಕರ ವಿಷಯವನ್ನು ಆ ಕಲ್ಲಿನ ಮೇಲೆ ಬರೆದಿರುವುದಾಗಿ ಕೊನೆಗೂ ಆ ಕಲ್ಲಿನ ರಹಸ್ಯ ಬಯಲಾಗುತ್ತದೆ.

ಕಾದಂಬರಿ ಓದುತ್ತಿರುವಾಗ ಕುತೂಹಲದ ಕೇಂದ್ರ ಬಿಂದುವಾದ ಆ ನಿಗೂಡ ಬೆಟ್ಟ, ಕಣಿವೆಯ ಸುತ್ತಲಿನ ಪರಿಸರ, ಬೆಳದಿಂಗಳ ಹೊಳಪಿನ ಕಲ್ಲು, ಕಲ್ಲಿನ ಸುತ್ತ ಬರೆದಿರುವ ಅಕ್ಷರಗಳಲ್ಲಿ ಏನೋ ಐತಿಹಾಸಿಕ ಮಹತ್ವದ ಸಂಗತಿ ತಿಳಿಯಬಹುದೆಂದು ಭಾವಿಸುವ ಓದುಗರಿಗೆ ಬಾಲಕನೊಬ್ಬ ಸುಮಾರು 800 ವರ್ಷಗಳ ಹಿಂದೆ ಆ ಮಾಯಾ ಕಲ್ಲಿನ್ನು ತುಳಿದಾಗ ದೈತ್ಯ ದೇಹದ ರಾಕ್ಷಸಾಕಾರವಾಗಿ ಬದಲಾದ ವಿಚಾರ ಹೇಳುವ ಮೂಲಕ ಅಂತ್ಯದಲ್ಲಿ ಫ್ಯಾಂಟಸಿ ಸನ್ನಿವೇಶವನ್ನು ಸೃಷ್ಟಿಸಿ ಐತಿಹಾಸಿಕ ಶಾಸನ ಸಂಶೋಧನಾ ವಸ್ತುವಿನ ಕಾದಂಬರಿಯಂತೆ ಆಗಬಹುದಾದ ವಸ್ತುವನ್ನು ಯಶಸ್ವಿಯಾಗಿ ಮಕ್ಕಳ ಕಾದಂಬರಿಯಾಗಿಸಲಾಗಿದೆ. ಮಕ್ಕಳಲ್ಲಿನ ಸಹಜವಾದ ಕಾಲ್ಪನಿಕತೆಯನ್ನು ಮೆಚ್ಚುವ ಗುಣ,ಕುತೂಹಲ ,ಹುಡುಕಾಟದ ಮನೋಪ್ರವೃತ್ತಿಗೆ ತಕ್ಕನಾದ ವಸ್ತು ಆಯ್ದುಕೊಂಡು ಇತಿಹಾಸ ಶೋಧನೆಯ ಕುತೂಹಲ ಕೆಣಕುವ ಬೌದ್ಧಿಕ ವಿಕಾಸಕ್ಕೆ ತೆರೆದುಕೊಳ್ಳಬಲ್ಲ ಮನೋಪಠ್ಯವಸ್ತುವನ್ನು ಕಾದಂಬರಿಯಾಗಿಸಿರುವುದು ಇಲ್ಲಿನ ಹೆಚ್ಚುಗಾರಿಕೆ.

ಈ ಪುಸ್ತಕವನ್ನು ಅಭಿನವ ಪ್ರಕಾಶನ ಪ್ರಕಟಿಸಿದ್ದು ಬೆಲೆ 50 ರೂ ಆಗಿರುತ್ತದೆ. ಈಗ ಎರಡನೇ ಮುದ್ರಣ ಆಗಿರುವುದು ಈ ಪುಸ್ತಕದ ಬೇಡಿಕೆ ತಿಳಿಸುತ್ತದೆ. ಇದು ಆನಂದ ಪಾಟೀಲರ ಮಕ್ಕಳ ಸಾಹಿತ್ಯ ಕೃಷಿಯ ಭಿನ್ನ ದಾರಿಯ ಒಂದು ಪ್ರಮುಖ ಪ್ರಾಯೋಗಿಕ ಮಕ್ಕಳ ಕಾದಂಬರಿ ಆಗಿದೆ.

ರವಿರಾಜ್ ಸಾಗರ್. ಮಂಡಗಳಲೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Varadendra K
Varadendra K
3 years ago

ಕೃತಿಯನ್ನು ಪರಿಣಾಮಾತ್ಮಕವಾಗಿ ಅವಲೋಕಿಸಿದ್ದೀರಿ ಸರ್. ಕಾದಂಬರಿಯ ತಿರುಳು ಮುಟ್ಟುವಂತೆ ಬರೆದಿದ್ದೀರಿ. ಈ ಅವಲೋಕನ ಕಾದಂಬರಿಯ ಕಥಾವಸ್ತುವನ್ನು ಸಂಪೂರ್ಣವಾಗಿ ತಿಳಿಸುತ್ತದೆ. ಖಂಡಿತವಾಗಿ ಕೃತಿಯನ್ನು ಓದಬೇಕೆನಿಸುವ ಬರಹ…. ಅಭಿನಂದನೆಗಳು ಸರ್

Asha shetti
Asha shetti
3 years ago
Reply to  Varadendra K

ರವಿರಾಜ ಸಾಗರ ಸರ್ ಕಾದಂಬರಿಯನ್ನು(ಬೆಳದಿಂಗಳು -ಆನಂದ ಪಾಟೀಲ) ಕೊಂಡು ಓದುವಂತೆ ಪ್ರೇರೇಪಿಸಿದೆ 🙏🏻🙏🏻🙏🏻

2
0
Would love your thoughts, please comment.x
()
x