ಅಷ್ಟಕ್ಕೂ ಇವರು ಹೊರಟಿದ್ದಾದರೂ ಎಲ್ಲಿಗೆ !? ಕುರಿಮಂದೆಯ ಹಿಂಡೊಂದು ಎಲ್ಲಿಗೆ ? ಯಾವುದರ ಕಡೆಗೆ ? ಯಾವುದಕ್ಕೆ ಎನ್ನುವ ಪರಿವೆಯೇ ಇಲ್ಲದಂತೆ ಕತ್ತು ನೆಲಕ್ಕೆ ಹಾಕಿಕೊಂಡು ಸಾಗುವಂತೆ ನಡೆಯುತ್ತಲೇ ಇದ್ದಾರೆ. ಕುಂತು ಭೂಮಿಗೆ ಭಾರವಾಗಬೇಡ ಎದ್ದು ನಡೆಯುತ್ತಿಲಿರೆಂದು ಹಿರೀಕರು ಹೇಳಿದ್ದೇನೋ ನಿಜ. ನಡೆಯುತ್ತಲೇ ಇರು ಎಂದ ಮಾತ್ರಕ್ಕೆ ನಡೆಯುವುದಾದರೊ ಎಲ್ಲಿಗೆ ? ಬೆಳಗಿನಿಂದ ಅರಳುವ ನಡಿಗೆ ಇರುಳಿನವರೆಗೆ ದಾಪಿಡುತ್ತಲೇ ಸಾಗುತ್ತದೆ, ಮತ್ತೆ ಬೆಳಗು ಮೂಡಿ ಮತ್ತೆ ಕಾಲನ ಕಾಲೊಳಗೆ ಕಾಲಿರಿಸಿ ಸಾಗುವುದಷ್ಟೇ ಗಾಣದ ಎತ್ತಿನಂತೆ ತಿರುಗುತ್ತಲೇ ಇರುವಂತಾಗಿಬಿಡುತ್ತದೆ. ಕ್ರಮಿಸಿ ಮತ್ಯಾವುದೋ ಗಮ್ಯವನ್ನ ತಲುಪಿದೆವ ಎಂದುಕೊಂಡರೆ ಅದೇ ಏಕಯಾತನೆಯಲ್ಲಿ ಮೈಮನಗಳು ದಣಿದು ಹೈರಾಣಗೊಂಡುಬಿಟ್ಟಿರುತ್ತವೆ. ಅದೇ ಏಳು, ಅದೇ ಓಡು, ಅದೇ ದುಡಿಮೆ, ಅದೇ ನಿದ್ದೆ ಸಾಕು ಸಾಕಾಗಿ ಹೋಗಿದೆ ನೋಡು ಎಂದು ಬೇಸರಹೊತ್ತು ಮಾತನಾಡುತ್ತಿದ್ದ ಮಂದಾಕಿನಿಯ ಮಾತುಗಳು ಈಗ ನನ್ನ ಪಾಲಿಗೆ ಹೌದಲ್ವಾ ! ಅವಳು ಆಗ ಹೇಳುತ್ತಿದ್ದು ನಿಜ ಎಂದು ಮನಸಿಗೆ ನಾಟುತ್ತಿವೆ. ಸಮಯವೇ ವೇಗವಾಗಿ ಸಾಗುತ್ತದೆ ಎಂದರೆ ಅದಕ್ಕಿಂತ ಒಂದು ಹೆಜ್ಜೆ ಮುಂದೇ ಇರುವಂತೆ ಬದುಕುತ್ತಿದ್ದವಳಾಕೆ. ಅದ್ಯಾಕಷ್ಟು ಅವಸರ ಮಾರಾಯ್ತಿ ಸಾವಧಾನದಿಂದ ಮಾಡಿದರಾಗಲ್ವೇ ಎಂದರೆ ಹೂಂ ಹೂ ನಿಧಾನ, ಸಾವಧಾನ ಅಂದ್ಕೊಳ್ತಾ ಹೋದರೆ ಬದುಕು ಬೇಸರ ಬರಲು ಆರಂಭಿಸಿ ಬಿಡುತ್ತದೆ ಕಣೋ ಎಂದು ನನ್ನ ಮಾತನ್ನ ಅಲ್ಲೇ ಮುರಿದು ಮೂಲೆಗೆಸೆದುಬಿಡುತ್ತಿದ್ದಳು.
ಅದೆಷ್ಟು ವೇಗವಾಗಿ ಚಲಿಸುವ ವಾಹನವೂ ಒಂದು ಹಂತದ ನಂತರ ನಿಧಾನವನ್ನ, ವಿಶ್ರಾಂತಿಯನ್ನ ಬಯಸೆ ಬಯಸುತ್ತದೆ ಹಾಗೇ ಓಡಿ ಓಡಿ ಹೈರಾಣಾದ ಮಂದಾಕಿನಿಯೂ ಸಾವಧಾನವನ್ನ, ವಿಶ್ರಾಂತಿಯನ್ನ ಬಯಸಿ ಯಾಕೋ ಗೊತ್ತಿಲ್ಲ ಕಣೋ, ಬದುಕು ನಿಸ್ಸಾರ ಅನ್ನಿಸೋಕೆ ಶುರು ಮಾಡಿದೆ, ಮೈಮನಗಳೊಳಗೆ ರಕ್ತಕ್ಕಿಂತಾ ಹೆಚ್ಚು ಅವಸರ, ಅವಸರಾನೇ ಹರಿದಾಡಿದಂತಾಗುತ್ತದೆ ಸುಮ್ಮನೆ ಎಲ್ಲಾ ಬಿಟ್ಟು ಹಾಯಾಗಿ ಶಾಂತವಾಗಿ ಇದ್ದುಬಿಡಬೇಕು ಅನಿಸ್ತಾ ಇದೆಯಂತ ಕಣ್ಣುತುಂಬಿಕೊಂಡಿದ್ದಳು. ನೋಡು ಅದೇ ಅದೇ ಯಾಂತ್ರಿಕತೆಗೆ ಮನಸು ಸಿಕ್ಕು ನಲುಗಿದಾಗ ಹೀಗೆಲ್ಲಾ ಅನ್ನಿಸೋದು ಸಹಜ ಆಫೀಸಿಗೆ ರಜೆಹಾಕಿ ಒಂದು ಸುಧೀರ್ಘ ಪ್ರವಾಸ ಮಾಡಿಕೊಂಡು ಬಾ ಮನಸ್ಸು ಹಗುರಾಗುತ್ತದೆ ಮತ್ತೆ ಉಲ್ಲಾಸ ನಿನ್ನೊಳಗೆ ಊಟೆ ಹೊಡೆಯುತ್ತದೆ ಎಂದು ಹೇಳಿ ಧೈರ್ಯ ತುಂಬಿದ್ದೆ. ಕೆಲಸದೊಳಗೆ ಕಳೆದುಹೋಗಿ ನನ್ನ ನಾನೇ ಮರೆತುಹೋದಂತಾಗಿರುವಾಗ ಅವಳೊಟ್ಟಿಗೆ ಮಾತನಾಡದೆ ತಿಂಗಳುಗಳೇ ಉರುಳಿದ್ದವೇನೋ. ಒಮ್ಮೆಲೇ ನೆನಪಾಗಿ ಫೋನ್ ಮಾಡಿದರೆ ಅತ್ತಲಿಂದ ಜಗತ್ತಿನೊಳಗಿನ ಎಲ್ಲ ಮೌನವನ್ನ ತುಂಬಿಕೊಂಡಿದ್ದ ಜೀವ ಆಗ ತಾನೇ ಬಾಯ್ತೆರೆದಂತೆ, ಶಾಂತಿಯೊಂದು ಮೆಲ್ಲಗೆ ಮಾತನಾಡಿದಂತೆ ಹೇಳೋ ? ಹೇಗಿದ್ದಿಯಾ ಎಂದಳು.
ಸರ ಸರ ಅವಸರವನ್ನೇ ತುಂಬಿಕೊಂಡು ಭೋರ್ಗರೆಯುತ್ತಿದ್ದ ಜಲಪಾತದಂತಿದ್ದ ಮಂದಾಕಿನಿ ಅಕ್ಷರಸಹ ಶಾಂತ ಸಮುದ್ರದಂತಾಗಿದ್ದಳು. ಎಂತ ಬದಲಾವಣೆ ಮಾರಾಯ್ತಿ ! ಎಂದು ಖುಷಿಯಾಗಿ ಹೇಳುತ್ತಲೇ ಅಮ್ಮಂಗೆ ಹೇಳು ಸಂಜೆ ಮನೆಗೆ ಬರ್ತೀನಿ ಎಂದು ಹೇಳಿ ಫೋನಿರಿಸಿದಳು. ಬದಲಾವಣೆ ಬರೀ ಖುಷಿಯೊಂದನ್ನೇ ಅಲ್ಲ ವಿಪರೀತ ಚಿಂತೆಗೂ ಎಡೆಮಾಡಿಕೊಡಬಹುದು ಎನ್ನುವ ಮಾತು ನನ್ನನ್ನ ಆವರಿಸಿ ನನ್ನೊಳಗೂ ಮೌನದ ಪರದೆಯನ್ನ ಹರಡಿತು.
ಮಂದಾಕಿನಿಯ ಮಾತುಗಳ ಲಹರಿಯೊಳಗೆ ಬಂಧಿಯಾಗಿದ್ದ ಮನಸಿಗೆ ಹೊತ್ತು ಹೋಗಿದ್ದರ ಪರಿವೆಯೇ ಇಲ್ಲದಂತೆ ಹೊರಗೆಲ್ಲ ಸಂಜೆಯ ಮಬ್ಬುಗತ್ತಲಾಗಲೇ ಆವರಿಸಿತ್ತು. ಆಫೀಸಿನಿಂದ ಹೊರಬಂದು ಅವಳ ಬದಲಾವಣೆಯ ಬಿಸಿಗೆ ತಲೆಯೊಳಗೆ ಭುಗಿಲೆದ್ದ ಸಾವಿರ ವಿಚಾರಗಳ ಮಂಥನಗೈದುಕೊಳ್ಳುತ್ತ ಬೈಕು ಹತ್ತಿ ಮನೆಯ ಹಾದಿ ಹಿಡಿದೆ. ಸಂಜೆಯಾಗಿದೆ ಎಂದು ಹೇಳುವುದಕ್ಕಾಗೆ ಹೊತ್ತಿ ನಿಂತ ಬೀದಿ ದ್ವೀಪಗಳ ಬೆಳಕ ನಡುವೆ ಕಾರಂಜಿಯಂತೆ ಬೀಳುವ ಸೋನೆಮಳೆಗೆ ಮೈ ಹಸಿಯಾದಂತೆ, ಅವಳ ಗುಂಗಿನೊಳಗೆ ಕಳೆದುಹೋದವನ ಮನಸು ಒಳಗೊಳಗೇ ಒದ್ದೆಯಾಗಿತ್ತು. ಬೈಕು ಹಚ್ಚಿ ಮನೆಯ ಒರಾಂಡದೊಳಗೆ ಬರುತ್ತಲೇ ತುಳಸೀಕಟ್ಟೆಯೊಳಗೆ ಅಮ್ಮ ಹಚ್ಚಿಟ್ಟ ದೀಪ, ಪರಿಮಳ ಬೀರುವ ಊದಿನಕಡ್ಡಿ ಅಕ್ಷರಶಃ ಮನೆ ಎನ್ನುವುದನ್ನೇ ಮರೆತು ದೇಗುಲದೊಳಗಿನ ದೈವಿಕತೆಯನ್ನ ಮನಸೊಳಗೆ ಅರಳಿಸಿಬಿಡುತ್ತದೆ. ನಂಬಿಕೆಯೋ, ಮೂಢನಂಬಿಕೆಯೋ ! ಬೆಳಗಿನ ತಳಿ, ರಂಗೋಲಿ, ಧೂಪದ ಪರಿಮಳ ನನ್ನ ಇಡೀ ದಿನದ ಕೆಲಸಕ್ಕೆ ಉಲ್ಲಾಸವನ್ನ ಉದ್ದೀಪನಗೊಳಿಸಿದರೆ, ಸಂಜೆಯ ತಳಿರು, ತುಳಸಿಕಟ್ಟೆಯ ದೀಪದ ಪ್ರಕಾಶ ನನ್ನಿಡೀ ದಿನದ ದಣಿಕೆಯನ್ನೆಲ್ಲ ನೀಗಿಸಿ ದಿವ್ಯ ಶಾಂತಿಯ ಅನುಭೂತಿಯನ್ನ ಪ್ರತಿನಿತ್ಯ ಹೃದಯಕ್ಕೆ ನೀಡುತ್ತದೆ. ಒದ್ದೆಯಾದ ಜರ್ಕಿನ್ನು ಹೊರಬಾಗಿಲ ಕೊಕ್ಕೆಗೆ ಹಾಕಿ ಒಳಬರುತ್ತಲೇ, ಸ್ವಲ್ಪ ಮಳೆ ನಿಂತಮೇಲೆ ಬಂದರಾಗಲ್ವೇನೋ ಎನ್ನುವ ಅಮ್ಮನ ಕೋಪಬೆರೆತ ಅಕ್ಕರೆಯ ಹಿತವಚನ. ಅವಳ ಮಾತುಗಳ ಬೆನ್ನ ಹಿಂದೆ ದಿವ್ಯ ಶಾಂತಿಯನ್ನ ತುಂಬಿಕೊಂಡ ಮೂರ್ತಿ ಮೆಲ್ಲ ಮೆಲ್ಲಗೆ ನಡೆದು ಬಂದು ನನ್ನೆದುರು ನಿಂತಿತು !
ಮನೆಯೊಳಗಿದ್ದೂ ಅದ್ಯಾವುದೋ ಗುಂಗೊಳಗೆ ಕಳೆದು ಹೋದದಂತಾಗಿದ್ದವನ ನನ್ನ ಕೈಗಳೆರೆಡು ನನ್ನಿರಿವಿಗೆ ಬರದಂತೆಯೇ ಒಂದಾಗಿ ಆ ಪ್ರಸನ್ನ ಮೂರ್ತಿಗೆ ನಮಿಸಿದವು. ಕಂಗಳೊಳಗಿನಿಂದ ಸಂತಸವೂ ಇಲ್ಲದೆ, ದುಃಖದ ಹಂಗೂ ಇರದೇ ಕಟ್ಟೆಯೊಡೆದು ಧುಮ್ಮಿಕ್ಕುವ ಜಲಧಿಯಂತೆ ಸದ್ದಿಲ್ಲದ ಅಶ್ರುಧಾರೆ ಕೆನ್ನೆಯಗುಂಟ ಇಳಿದು ಎದೆಯನ್ನ ಒದ್ದೆಯಾಗಿಸಿದವು. ಹರಡಿಕೊಂಡಿದ್ದ ದಟ್ಟ ಕಾರಿರುಳು ಸರಿದು ಸದ್ದಿಲ್ಲದೇ ಬೆಳಗೊಂದು ಅರಳುವಂತೆ, ಜಡಿಮಳೆಯ ಸುರಿಯುವಿಕೆಯ ನಂತರ ಆವರಿಸುವ ಗಾಢ ಪ್ರಶಾಂತತೆಯ ಪ್ರಸನ್ನತೆಯಂತೆ ನನ್ನೊಳಗೆ, ನನ್ನ ತನುಮನದ ಕಣ ಕಣದೊಳಗೆ ಬಣ್ಣಿಸಲೇ ಅಸಾಧ್ಯವಾದ ಶಾಂತಿಯ ಅನುಭೂತಿ ಆ ಮೂರ್ತರೂಪದೆದುರು ನಿಲ್ಲುತ್ತಲೇ ಆವರಿಸಿಕೊಂಡುಬಿಟ್ಟಿತು. ಬಾಯಿಯಿದ್ದೂ ಮೂಕನಾಗಿ, ಕೈಕಾಲುಗಳಿದ್ದೂ ಚಲಿಸಲು ಸಾಧ್ಯವಾಗದಂತವನಾಗಿ, ಒಂದು ಕ್ಷಣ ಮೂರ್ತಿ ಆದಂತಾಗಿ ಒಳಗಿನ ಚಲನವೂ ಇಲ್ಲದ, ಹೊರಗಿನ ಗದ್ದಲವೂ ಇಲ್ಲದ ನೀರವತೆಯಾದಂತಾಗಿ ನಿಂತಲ್ಲೇ ನಿಂತು ಕಳೆದುಹೋದೆ. ಹೂವಿನ ಸ್ಪರ್ಶದ ಹಸ್ತವೊಂದು ನೆತ್ತಿಯಮೇಲೆ ಆವರಿಸಿ, ಹುಬ್ಬುಗಳೆರಡರ ನಡುವಿನ ಕೇಂದ್ರವನ್ನ ಬಿಗಿಯಾಗಿ ಒತ್ತುತ್ತಲೇ ಅದ್ಯಾವುದೋ ನಿಗೂಢ ಯಾತ್ರೆಯೊಳಗೆ ಕಳೆದುಹೋಗಿದ್ದವನು ವಾಸ್ತವಕ್ಕೆ ಬಂದು ಬಾಯ್ತೆರೆದಾಗ ಹೊರಟ ಪದವೇ ಮಂದಾಕಿನಿ !! ಎದುರು ನಿಂತ ಶಾಂತಿಯ ಪ್ರತಿರೂಪ, ಅಲ್ಲ ! ಅಲ್ಲ ! ಶಾಂತಿಯೇ ತಾನಾದ ಮಂದಾಕಿನಿ !!
ಒಂದುಕ್ಷಣ ಜಗತ್ತಿನ ಇರುವನ್ನೇ ಮರೆತು ಅದ್ಯಾವುದೋ ನಿಗೂಢ ಯಾತ್ರೆಯೊಳಗೆ ಕಳೆದುಹೋಗಿದ್ದವನು ಮಂದಾಕಿನಿಯೆಂದು ಕೂಗುತ್ತಲೇ ಅವಳೆದುರು ಕುಳಿತುಕೊಂಡೆ. ಶುಭ್ರ ಬಿಳಿಯ ಸೀರೆಯನ್ನ ಉಟ್ಟ ಮಂದಾಕಿನಿಯ ಮೊಗದೊಳಗೆ ಹುಣ್ಣಿಮೆಯ ಪೂರ್ಣಚಂದ್ರಮನ ಪ್ರಕಾಶ ನೊರೆ ನೊರೆಯಾಗಿ ಹೊಮ್ಮುತ್ತಲೇ ಇತ್ತು. ಅವಳ ಕಂಗಳೊಳಗೆ ಸಂತಸವೂ ಇಲ್ಲದ ವಿಷಾದವೂ ಇಲ್ಲದ ಅಸ್ತಿತ್ವದೊಳಗೆ ಒಂದಾಗಿ, ಅಸ್ತಿತ್ವವೇ ತಾನಾಗಿ ಹೋದ ನಿಸ್ಪುರ ಭಾವಧಾರೆ ತೊರೆ ತೊರೆಯಾಗಿ ಹರಿಯುತ್ತಲೇ ಇತ್ತು. ಗಾಢವಾದ ಮೌನದೊಳಗೆ ಮಾತುಗಳ ಉಸಾಬರಿಯೇ ಇಲ್ಲದ ದಿವ್ಯ ಸಂಭಾಷಣೆ ಜಾರಿಯಲ್ಲಿತ್ತು. ಅದ್ಯಾವ ಲೋಕದೊಳಗೆ ಇಬ್ಬರೂ ಕಳೆದುಹೋಗಿರುವಿರಿ ಎಂದು ಮಾತನಾಡುತ್ತ ಹಾಲು ತಂದ ಅಮ್ಮನ ಮಾತು ಒಂದು ಅದ್ಭುತ ಲಹರಿಯ ಯಾತ್ರೆಯನ್ನ ಮೊಟಕುಗೊಳಿಸಿತು. ಹಾಲು ಕುಡಿದು ಮನೆಯ ಮೇಲಿನ ಬಾಲ್ಕನಿಯೊಳಗೆ ನಿಮ್ಮ ಮಾತು, ಮೌನದ ಲಹರಿಯನ್ನ ಮುಂದುವರೆಸಿ ಅಡಿಗೆ ತಯಾರಾಗುತ್ತಲೇ ಕರೆಯುತ್ತೇನೆ ಎಂದು ಅಮ್ಮ ಅಡುಗೆಯ ಮನೆಗೆ ನಡೆದಳು. ಅಮ್ಮ ಮತ್ತೆ ಮತ್ತೆ ನನಗಿಷ್ಟವಾಗುವುದೇ ಇದೆ ಕಾರಣಕ್ಕೆ. ಕಡಿಮೆ ಓದಿರುವುದಾದರೂ ಅವಳ ಸಾಮಾನ್ಯ ಅರಿವು, ಗೆಳೆಯರಿಬ್ಬರು ಜೊತೆಯಾಗಿರುವಾಗ ಅವರಿಗೆ ಒದಗಿಸಿಕೊಡಬಹುದಾದ ಒಂದು ತಿಳಿಯಾದ ವಾತಾವರಣದ ಕಾಳಜಿ, ಅನವಶ್ಯಕ ಮಾತನಾಡದೆ ನಾಲ್ಕೇ ನಾಲ್ಕು ಮಾತೊಳಗೆ ತನ್ನ ಎಲ್ಲ ಪ್ರೀತಿ, ವಾತ್ಸಲ್ಯಗಳನ್ನ ಹುದುಗಿಸಿ ಕೊಡುವ ಜಾಣ್ಮೆಯೋಳಗೆ ಅವಳಿಗೆ ಅವಳೇ ಸಾಟಿ ! ದಡಬಡಿಸಿ ಎದ್ದು ಬಾಲ್ಕನಿಯೊಳಗೆ ಚೇರುಗಳನ್ನ ಹಾಕಿ ಸಿದ್ಧಪಡಿಸುತ್ತಲೇ ಮಂದಾಕಿನಿ ಬಲೂ ಎಚ್ಚರದಿಂದ ಒಂದೊಂದೇ ಹೆಜ್ಜೆಯನ್ನೂ ತನ್ನ ಹೃದಯದಾಳದಿಂದ ಎತ್ತಿ ಇಡುವಂತೆ ನಡೆಯುತ್ತಾ ನಿಧಾನವಾಗಿ ಚೆರೊಳಗೇ ಕುಳಿತುಕೊಂಡಳು. ಬಿಡದಂತೆ ಸುರಿಯುತ್ತಿದ್ದ ಮಳೆ ಆಗ ತಾನೇ ನಿಂತು, ಹೆಪ್ಪುಗಟ್ಟಿದ್ದ ಕಾರ್ಮೋಡಗಳೆಲ್ಲ ಚದುರಿ ಬೆಳಗಲು ಸಿದ್ದವಾಗಿರುವ ಶಶಿಗೆ ಜಾಗಮಾಡಿಕೊಡುತ್ತಿದ್ದವು. ತಣ್ಣಗೆ ತಾಕುವ ತಂಗಾಳಿಯ ಸದ್ದು ಮಾತ್ರ ಕೇಳುತ್ತಿರುವುದೇ ಹೊರತು ಇಬ್ಬರ ನಡುವೆಯೂ ತುಟಿ ಪಿಟಕ್ಕೆನ್ನದ ಮೌನ.
ಅದೆಂತಹಾ ಮಾತು ! ಎಲ್ಲಿಂದಲೋ ಆರಂಭಿಸಿ, ಎಲ್ಲೋ ಎಳೆದುಕೊಂಡು, ಅದೇನನ್ನೋ ನೆನಪಿಸಿಕೊಂಡು, ಅದ್ಯಾವುದಕ್ಕೋ ನಗಾಡಿಕೊಂಡು, ಸುಮ್ಮನಿದ್ದವರ ಕಾಲು ಎಳೆದು ತಮಾಷೆ ಮಾಡಿಕೊಂಡು ಅರಳು ಹುರಿದಂತೆ ಮಾತನಾಡುತ್ತಿದ್ದ ಮಂದಾಕಿನಿ ಈಗ ಅಕ್ಷರಶಃ ಮೌನಿಯಾಗಿ, ಮೌನಮೂರ್ತಿಯಾಗಿ ಎದುರು ಕುಳಿತುಕೊಂಡಿದ್ದಾಳೆ. ಹಾಗಂತ ಅವಳ ಮೌನ ನನ್ನೊಳಗೆ ಚೂರೇ ಚೂರು ಬೇಸರವನ್ನಾಗಲಿ, ಕಿರಿ ಕಿರಿಯನ್ನಾಗಲಿ ಉಂಟುಮಾಡುತ್ತಿಲ್ಲ ಆದರೆ ಒಂದು ಗಾಢ ಆಶ್ಚರ್ಯವನ್ನ, ವಿಪರೀತವಾದ ಚಿಂತೆಯನ್ನ ಹುಟ್ಟುಹಾಕುತ್ತಲೇ ಇದೆ. ಮೌನವುಂಡು ಉಂಡು ಸಂತೃಪ್ತನಾದ ನಾನೇ ಕೊನೆಗೆ ಮೌನವನ್ನ ಮುರಿಯಲು ಸಿದ್ದನಾಗಿ ಮಂದಾಕಿನಿ ಅಂತಾ ಕಣ್ಣುತುಂಬಿಕೊಂಡು ಕರೆದೆ. ಕೂಸೊಂದು ಅಮ್ಮಾ ಎಂದು ಕರೆಯುತ್ತಲೇ, ಅಕ್ಕರೆಯಿಂದ ಬಿಗಿದೆತ್ತಿಕೊಳ್ಳುವ ತಾಯಿಯ ಮಮತೆಯೇ ಅವಳ ಕಂಠದಿಂದ ಹೊರಬಂದಂತೆ ನಾನೀಗ ಮಂದಾಕಿನಿಯಲ್ಲ ಕಣೋ, ಮಾನಿನಿ ಎನ್ನುವ ಮಾತು ಹೊರಬಂದಿತು !ಮೌನ ಮುರಿದಿದ್ದ ನಾನೇ ತಬ್ಬಿಬ್ಬುಗೊಂಡಂತವನಾಗಿ ಮತ್ತೆ ಮೌನಕ್ಕೆ ಜಾರಿದೆ. ನಿಂತುಕೊಂಡಿದ್ದ ಮಳೆ ಒಮ್ಮೆಲೇ ಭೂಮಿಯಾಗಸಗಳೆರಡನ್ನ ಏಕಾಕಾರವಾಗಿಸುವಂತೆ ಆರ್ಭಟಿಸಲಾರಂಭಿಸಿತು !!
ಮತ್ತೆ ಮೌನದೊಳಗೆ ಚಿಪ್ಪೊಳಗೆ ಅವಿತುಕೊಂಡ ನನ್ನನ್ನ ಎಚ್ಚರಿಸುವಂತೆ ಸುಶ್ರ್ಯಾವ ಗಾನವೊಂದು ಕೊಳಲಿಗೆ ಉಸಿರು ತಾಕುತ್ತಿದ್ದಂತೆಯೇ ಹೊಮ್ಮುವಂತೆ ಮಂದಾಕಿನಿ ಮೆಲ್ಲುಸಿರೊಳಗೆ ಮಾತನಾಡಲಾರಂಭಿಸಿದಳು.
ಮಂದಾಕಿನಿ ! ಅರ್ಥವಿಲ್ಲದ ಯಾತ್ರೆಯೊಳಗೆ ಕಳೆದುಹೋದಾಕೆ, ಕತ್ತಲನ್ನೇ ಬೆಳಕೆಂದು ಭಾವಿಸಿ ನರಳಿದಾಕೆ, ಎಲ್ಲಿಗೆ ಸಾಗುತ್ತಿರುವೆ ಎನ್ನುವ ಅರಿವೇ ಇಲ್ಲದೆ ದಿಕ್ಕೆಟ್ಟು ಹೋದಾಕೆ. ವಾಸನೆ, ವಾಂಛೆಗಳ ಗೂಡನ್ನೇ ವೈಭವವೆಂದು ಭ್ರಮಿಸಿದಾಕೆ ಅವೆಲ್ಲ ಮನಸಿನ ಕ್ಲೇಶ, ವ್ಯಸನ, ಮಲಿನತೆಗಳನ್ನ ತೊಳೆದುಕೊಂಡು ಈಗ ಮಾನಿನಿಯಾಗಿ ರೂಪಾಂತರಿಣೆಗೊಂಡಿರುವೆ ಕಣೋ. ಅದೆಷ್ಟು ಚಂದ ನೀ ನನಗೆ ಹೇಳಿದೆ, ಅದೇ ಅದೇ ಏಕಯಾತನೆಗೆ ಸಿಲುಕಿ ಬದುಕು ಯಾಂತ್ರಿಕ ಎನಿಸಿದಾಗ ಬದುಕು ನಿಸ್ಸಾರ ಎನಿಸೋದು ಸಹಜ ಅಂತ. ನಿನ್ನ ಹಿತನುಡಿ ನನ್ನನ್ನ ಸತ್ಯವಾಗೂ ಎಚ್ಚರಿಸಿತು ನೋಡು, ಒಂದು ಸುಧೀರ್ಘ ಪ್ರವಾಸ ಮಾಡಿಬಾ ಅಂತ ನೀ ಹೇಳಿದ್ದು ತುಂಬಾನೇ ಒಳ್ಳೆಯದಾಯಿತು. ಎಲ್ಲಿ ಹೋದರೇನಾದೀತು ಹೇಳು ? ಮತ್ತದೇ ಅವಸರಕ್ಕೆ ಮೈಮನಸುಗಳನ್ನ ಒಲ್ಲದಾಗಿದ್ದರೂ ಒಡ್ಡಿಕೊಳ್ಳಲೇಬೇಕು. ನೀನು ಯಾವ ಅರ್ಥದೊಳಗೆ ಒಂದು ಸುಧೀರ್ಘ ಪ್ರವಾಸ ಮಾಡಿಕೊಂಡು ಬಾ ಎಂದೆಯೇನೋ ? ನಿನ್ನೊಟ್ಟಿಗೆ ಮಾತನಾಡಿ, ಆಫೀಸಿಗೆ ನಾನು ಒಂದುವಾರ ರಜೆ ಹಾಕುತ್ತಿರುವುದಾಗಿ ತಿಳಿಸಿ, ಫೋನನ್ನ ಸುಧೀರ್ಘ ನಿದ್ರೆಗೆ ಹಾಕಿ ಮನೆಯೊಳಗೇ ನನ್ನಷ್ಟಕ್ಕೆ ನಾನೇ ಗೃಹಬಂಧಿಯಾದೆ, ಅಲ್ಲ ಅಲ್ಲ ಪುಟ್ಟದೆನಿಸುವ ಆದರೆ ಕಣ್ಣು ತೆರೆದು ನೋಡಿದಷ್ಟೂ ವಿಶಾಲವೆನಿಸುವ ನನ್ನದೇ ಹೃದಯದೊಳಗೆ ಮೊದಲಬಾರಿಗೆ ಸ್ವಚ್ಛಂದ ಹಕ್ಕಿಯಾಗಿ ವಿಹರಿಸಿದೆ ! ದಣಿವೆಯ ಕೊಳೆಯನ್ನೆಲ್ಲ ತೊಳೆಯುವ ಉಗುರುಬೆಚ್ಚಗಿನ ನೀರ ಸ್ನಾನ ಮಾಡಿ, ದೇವರ ಮುಂದೆರೆಡು ಪ್ರಣತಿಗಳನ್ನ ಹಚ್ಚಿ, ಧೂಪದ ಗಮವನ್ನೆಲ್ಲ ಮನೆಗೆ ಹರಡಿ, ಅಪ್ಪ ತಮ್ಮ ಧ್ಯಾನಕ್ಕೆ ಅಂತಾ ಮಾತ್ರವೇ ಬಳಸುತ್ತಿದ್ದ ಮೆತ್ತನೆಯ ಸುಖಾಸನದೊಳಗೆ ಕುಳಿತೆ ನೋಡು. ಮೆಲ್ಲ ಮೆಲ್ಲಗೆ ಕನಸೊಂದು ಆವರಿಸಿಕೊಂಡು ನನ್ನ ಅಸ್ತಿತ್ವವನ್ನೇ ನಾ ಮರೆತು ಬಂದಾವರಿಸಿದ ವಿಸ್ಮಯಕಾರಿ ಅನುಭೂತಿಗೆ ಪೂರ್ಣವಾಗಿ, ಸಂಪೂರ್ಣವಾಗಿ ನನ್ನನ್ನ ಅರ್ಪಿಸಿಕೊಂಡುಬಿಟ್ಟೆ. ಮೂಗಿನ ಹೊಳ್ಳೆಯ ಮಿಸುಗುವಿಕೆಯನ್ನ ನೋಡುತ್ತಾ ಹಣೆಯ ಮಧ್ಯದ ಆಜ್ಞಾ ಚಕ್ರವನ್ನ ನೋಡುತ್ತಾ ನೋಡುತ್ತಾ ನನ್ನಿರುವೇ ಮರೆಯಾಗಿ ಒಂದು ಸುಧೀರ್ಘ ಸಂಮೋಹನೇ ನನ್ನನ್ನ ಅದರ ತೆಕ್ಕೆಗೆ ಹಾಕಿಕೊಂಡುಬಿಟ್ಟಿತು. ಹಾಗೆ ಅದರ ತೆಕ್ಕೆಗೆ ಶರಣಾಗುತ್ತಾ, ಆಗುತ್ತಾ ಹಾಲು ಬೆಳದಿಂಗಳಿನ ಕಾಂತಿಯ ಪ್ರಕಾಶ ತಲೆಯ ಮಧ್ಯದ ಸಹಸ್ರಾರದಿಂದ ಉಕ್ಕೇರುತ್ತ ನನ್ನ ದೇಹದ ಪ್ರತಿ ಕಣ ಕಣದೊಳಗೆ ಬೆರೆಯುತ್ತಾ ಸಾಗಿ ಮೂಲಾಧಾರದೊಳಗೆ ಹೆಪ್ಪಾಗಿ, ಕರಗದ ಕಲ್ಲಾಗಿ ಉಳಿದುಹೋದಂತಾಯಿತು. ಕಣ್ಣು ಮುಚ್ಚಿದ್ದೇನೋ ? ತೆರೆದಿದ್ದೇನೋ ? ಕುಳಿತಿದ್ದೇನೆಯೋ ? ಮಲಗಿದ್ದೇನೆಯೋ ? ಕೊನೆಗೆ ಜೀವಂತವಾಗಿರುವೆನೋ ಇಲ್ಲವೋ ಎನ್ನುವ ಹೂಂ ಹೂ ಹೇಳಲು, ವಿವರಿಸಲು ಸಾಧ್ಯವೇ ಆಗದಂತ ವಿಸ್ಮಾತಿ ವಿಸ್ಮಯ ಭಾವ ! ಮೊಟ್ಟ ಮೊದಲಬಾರಿ ಬೆಳಕು ಎಂದರೆ ಏನು ? ಪ್ರಕಾಶ ಎಂದರೆ ಏನು ಎಂದು ಅರಿತ ಕಣ್ಣು ಬಂದ ಕುರುಡನಂತಾಗಿದ್ದೆ !! ನಾನು ಬರೀ ಬೆಳಕಾಗಿದ್ದೆ, ಪ್ರಕಾಶವಾಗಿದ್ದೆ ಮಾತನಾಡುತ್ತ ಆಡುತ್ತ ಮಾನಿನಿಯ ಸೀರೆ ಅಶ್ರುಧಾರೆಯಿಂದ ಒದ್ದೆಯಾಗಿ ಹೋಗಿತ್ತು. ಅವಳ ಬೆರಗು ತುಂಬಿದ ಕಿವಿಯಾಗಿ ನನ್ನನ್ನ ನಾನೇ ಮರೆತುಹೋಗಿದ್ದವನನ್ನ, ಗಂಟೆ ಹನ್ನೆರಡಾಗುತ್ತ ಬಂತು ತಾವಿಬ್ಬರೂ ಊಟ ಮಾಡಿ ಕುಳಿತರೆ ನಮಗೂ ಹಿತ ಎನ್ನುವ ಅಮ್ಮನ ಮಾತು ಸರಕ್ಕನೆ ನನ್ನ ಮನಸನ್ನ ಎಳೆತಂದು ವಾಸ್ತವಕ್ಕೆ ತಂದುನಿಲ್ಲಿಸಿತು. ಹೊರಗೆಲ್ಲ ಹುಣ್ಣಿಮೆಯ ಶಶಿಯ ಬೆಳಕು ಹರಡಿದ್ದರೆ, ನನ್ನ ಮನೆ, ಮನಸುಗಳ ತುಂಬೆಲ್ಲ ಶುಭ್ರ ಪ್ರಕಾಶ ಶಶಿಯ ಹಂಗಿಲ್ಲದಂತೆ ಹಬ್ಬಿತ್ತು. ಮಾನಿನಿಯಯ ಕಾಲಾತೀತವಾದ ಪ್ರಕಾಶ ನನ್ನ ಹೃದಯದ ಕಣ ಕಣಕ್ಕೂ ಪ್ರಕಾಶದ ತಟಗು ರುಚಿಯನ್ನ ನನಗರಿವಿಗೆ ಬರದಂತೆ ನನಗೆ ಉಣಬಡಿಸಿತು !!
ಅಡುಗೆಯೂ ಒಂದು ಆಧ್ಯಾತ್ಮ ! ಎನ್ನುವ ಬರಹವನ್ನ ಎಲ್ಲೋ ಓದಿದ್ದು, ಪ್ರತಿಬಾರಿ ಅಮ್ಮನ ಅಡುಗೆಯ ರುಚಿಯನ್ನ ಸವಿಯುವಾಗಲೂ ಮನಸಿಗೆ ಮತ್ತೆ ನೆನಪಿಗೆ ಬರುತ್ತದೆ. ಮಾನಿನಿಯ ವಿಸ್ಮಯದ ಮಾತುಗಳನ್ನ ಉಂಡು ಮನಸು ತುಂಬಿಕೊಂಡವನಿಗೆ ಸವಿರುಚಿಯ ಅಡುಗೆಯೂ ನಾಲ್ಕೇ ತುತ್ತಿಗೆ ಸಾಕೆನಿಸಿತು. ಮಾನಿನಿ ನಿಧಾನವಾಗಿ, ಸಾವಧಾನದಿಂದ ಊಟದ ಪ್ರತಿ ತುತ್ತನ್ನೂ ದೇವರಿಗೆ ಅರ್ಪಿಸುತ್ತಲಿರುವಳೇನೋ ಎನ್ನುವಷ್ಟು ತಾದ್ಯಾತ್ಮತೆಯಿಂದ ಸ್ವೀಕರಿಸುತ್ತಲಿದ್ದಳು. ಅದೆಷ್ಟು ನಿಧಾನಾ ತಿನ್ನೋದು ನೀ, ಬಿಸಿಯಾರುವ ಮೊದಲೇ ಸುಡು ಸುಡುವಾಗಲೇ ತಿಂದುಬಿಡಬೇಕು ಆಗ ಮಾತ್ರ ಹೊಟ್ಟೆಗೆ ಹಿತ ಕಣೋ ಎನ್ನುತ್ತಿದ್ದ ಮಂದಾಕಿನಿಯ ಮುಖ ನೆನಪಾಗಿ ಮನಸೊಳಗೆ ಮಂದಹಾಸ ಮೂಢಿ ಮರೆಯಾಯಿತು. ನಮಗೆಲ್ಲ ಊಟಬಡಿಸಿ, ತಾನೂ ಉಂಡುಸಂತೃಪ್ತಳಾದ ಅನ್ನಪೂರ್ಣೆಯಂತಹ ಅಮ್ಮ ಎರಡೂ ಕೋಣೆಗಳಲ್ಲಿ ಮಲಗಲು ಹಾಸಿಗೆ ಸಿದ್ಧಮಾಡಿಟ್ಟಿರುವೆ ನಿಮ್ಮ ವಿಚಾರ, ವ್ಯಾಕುಲತೆಗಳ ಗಹನಯಾತ್ರೆ ಮುಗಿಸಿಕೊಂಡು ಬೇಗ ಮಲಗಿ ಎಂದು ಹೇಳುತ್ತಲೇ, ಊಟ ಮುಗಿಸಿದ್ದ ಮಾನಿನಿ ಅಮ್ಮನನ್ನ ಬಿಗಿದಪ್ಪಿ ಶುಭರಾತ್ರಿ ಹೇಳಿದಳು. ಮಾನಿನಿಯ ಮುಂಗುರುಳು ಸರಿಸಿ ಹಣೆಗೆ ಮುತ್ತಿಟ್ಟು ಬೇಗ ಮಲಗಿಕೊ ಕಂದ ಎಂದುಹೇಳಿ ಅಮ್ಮ ತನ್ನ ರೂಮಿನೆಡೆಗೆ ಸಾಗಿದಳು. ಅದೆಷ್ಟು ವರ್ಷಗಳ ಸ್ನೇಹ ನನ್ನ ಹಾಗೂ ಮಂದಾಕಿನಿಯ ನಡುವಿನದ್ದು ? ಆಗತಾನೆ ಕಾಲೇಜು ಸೇರಿದ್ದ ನನಗೆ ಮತ್ತೊಬ್ಬರೊಟ್ಟಿಗೆ ಬೆರೆತು ಮಾತನಾಡಲೂ ಸಾಧ್ಯವಾಗದಷ್ಟು ನಾಚಿಕೆ, ಮುಜುಗರದಿಂದ ನರಳುತ್ತಿದ್ದವನನ್ನ ತನ್ನ ಸ್ನೇಹಿತನನ್ನಾಗಿಸಿಕೊಂಡು, ನನ್ನ ಪಾಲಿನ ಸೊಲ್ ಮೇಟ್ ಅಂತಾರಲ್ಲಾ ಹಾಗೆ ಆತ್ಮಬಂಧುವಿನಂತಾಗಿ ಹೋದಾಕೆಯಾಕೆ. ಪರಿಚಯವಾದ ಮೊದಲದಿನವೇ ಅಮ್ಮನ ಭೇಟಿ ಮಾಡಿಸಿದಾಗ, ಅಮ್ಮ ನಿನ್ನ ಅಕ್ಕ ಏನಾದ್ರೂ ಇದ್ದಿದ್ದರೆ ಹಿಂಗೇ ಇರ್ತಿದ್ಲು ನೋಡೋ ಅಂತಾ ಆಕೆಯನ್ನ ತನ್ನ ಮಗಳೇ ಏನೋ ಎನ್ನಿಸುವಷ್ಟು ಇಷ್ಟಪಟ್ಟಿದ್ದಳು. ದಿನಕಳೆದಂತೆ ಮಂದಾಕಿನಿ ಅಮ್ಮನ ಪಾಲಿನ ಮಗಳಾಗೇ ಹೋದಳು. ನಮ್ಮಿಬ್ಬರ ಸಮಾನ ಅಭಿರುಚಿಗಳು, ಆಸಕ್ತಿಗಳು, ಅರಿವಿನ ತುಡಿತಗಳು, ವಿಚಾರಶೈಲಿ, ಆಧ್ಯಾತ್ಮದೆಡೆಗಿನ ಒಲವು ನಮ್ಮಿಬ್ಬರನ್ನ ಒಬ್ಬರೊನ್ನೊಬ್ಬರು ಬಿಟ್ಟಿರದಂತೆ ಬೆಸೆದುಕೊಂಡಿರುವಂತೆ ಮಾಡಿದ್ದವು. ಅದ್ಯಾವುದೋ ಗುರುಗಳ ಬಗ್ಗೆ, ವಿಸ್ಮಯಕಾರಿ, ಅಗೋಚರ ಶಕ್ತಿಗಳ ಬಗ್ಗೆ ಓದುತ್ತಲೇ, ಇಲ್ಲವೇ ಯಾರಿಂದಲೋ ತಿಳಿಯುತ್ತಲೇ ಬೆನ್ನಿಗೊಂದು ಲಗೇಜು ಬ್ಯಾಗು ಸಿಗಾಕಿಕೊಂಡು ಇಬ್ಬರೂ ಹೊರಟೆ ಬಿಡುತ್ತಿದ್ದೆವು. ಆ ಗುರುವಿನ ಪಾದಗಳಿಗೆ ಶರಣಾಗಿ, ಅವರ ಅರಿವು, ತಿಳಿವಿನ ಕಾವಿಗೆ ಮೈಮನಸುಗಳನ್ನ ಒಡ್ಡಿಕೊಂಡು ಕಸುವುತುಂಬಿಕೊಂಡು ಬಂದರೆ ವರ್ಷಕ್ಕಾಗುವಷ್ಟು ಆಧ್ಯಾತ್ಮಿಕ ಸತುವು ನಮಗೆ ದಕ್ಕಿದಂತಾಗುತ್ತಿತ್ತು. ಕಾಲ ಹೀಗೆ ಇರುವುದಿಲ್ಲವಲ್ಲಾ ? ಬದುಕಿನ ಚಕ್ಕಡಿಗೆ ಬಿದ್ದು ಅವಸರ ಅವಸರದ ಹಾದಿ ಹಿಡಿದ ಮೇಲೆ ಅವೆಲ್ಲಾ ಮೂಲೆಗುಂಪಾಗಿ ಹೋದವು. ದೂರದ ಭೂಪಾಲದೊಳಗೆ ಮೂರುವರ್ಷ ಕೆಲಸಮಾಡುತ್ತಿದ್ದ ಮಂದಾಕಿನಿ, ಬೆಂಗಳೂರಿಗೆ ಬಂದು ಈಗ ಇನ್ನೂ ವರ್ಷವಾಗಿಲ್ಲ. ಹೀಗೆ ಹಳೆಯ ನೆನಪುಗಳ ಜಾಡಿನೊಳಗೆ ಕಳೆದುಹೋದವನನ್ನ ಅವಳ ಹಸ್ತದ ಸ್ಪರ್ಶ ಎಚ್ಚರಿಸಿತು. ಮುಂದೆ ಸಾಗುತ್ತಲಿರಬೇಕು ಕಣೋ, ಮತ್ತೆ ಮತ್ತೆ ಹಳೆಯ ನೆನಪುಗಳ ಸೆರೆಮನೆಯೊಳಗೆ ಬಂಧಿಯಾಗುತ್ತ ಉಳಿಯಬಾರದು ಎನ್ನುತ್ತಲೇ ನನ್ನ ಕೂದಲು ನಿಮಿರಿ ನಿಂತಂತಾಯಿತು !ಏನು ಹೇಳದೆ, ತುಟಿಯನ್ನ ಪಿಟಕ್ಕೆನ್ನದೆ ನನ್ನಷ್ಟಕ್ಕೆ ನಾನೇ ಮಾಡಿದ ನೆನಪುಗಳ ವಿಚಾರ ಅವಳಿಗೆ ದಕ್ಕಿದ್ದಾದರೂ ಹೇಗೆ ಎನ್ನುವ ಚಿಂತೆಯಲ್ಲೇ ಮತ್ತೆ ನಾನು ಮೌನಕ್ಕೆ ಜಾರಿದೆ !!
ಮಾನಿನಿಯ ವಿಭಿನ್ನ ಕೌತುಕಗಳ ಲಹರಿಗೆ ಶರಣಾದವನು ಮೌನ ಮುರಿದು, ಮಾತನಾಡುವುದು ಮುಗಿಯದಷ್ಟಿದೆ. ಅಲ್ಲಾ, ಅಲ್ಲಾ ನಿನ್ನ ಮಾತುಗಳಿಗೆ ನಾನು ಕಿವಿಯಾಗುವುದು ಸಾಕಷ್ಟಿದೆ ನಿನಗೆ ನಿದ್ದೆ ಬಂದಿದ್ದರೆ ಮಲಗಿಕೊ ಎಂದೇ. ನಿದ್ರೆ ! ಜಗತ್ತು ಹಗಲಿರುಳು ಲೆಕ್ಕಿಸದೆ ಬರೀ ನಿದ್ರಿಸುತ್ತಲೇ ಇದೆ. ದೇಹದ ದಣಿಕೆಗಷ್ಟೇ ನಿದ್ರೆ ಬೇಕು ಹೊರತು ಆತ್ಮಕ್ಕೆ ದಣಿಕೆ ಎನ್ನುವುದೇ ಇಲ್ಲ ನೋಡು. ನೀ ಮಲಗಿರಲಿ, ಎಚ್ಚರವಾಗಿರಲಿ ಅದು ಮಾತ್ರ ನಿರಂತರವಾಗಿ ಜಾಗೃತವಾಗೇ ಇರುತ್ತದೆ ಕಣೋ. ನಿನಗೆ ದಣಿವಾಗಿದ್ದಲ್ಲಿ ಮಲಗು. ಇಲ್ಲವಾದರೆ ಅನುಭವಗಳ ಧಾರೆಯನ್ನ ಎರೆಯಲು ನನ್ನ ಹೃದಯ ಸಿದ್ಧವಾಗೇ ಇದೆ ಎಂದು ಹುಬ್ಬು ಹಾರಿಸಿ ಮಂದಹಾಸ ಬೀರಿದಳು. ಅವಳ ಅನುಭಾವಕ್ಕೆ ಶರಣಾಗಿ ಹೋದವನಿಗೆಲ್ಲಿಯ ದಣಿವು ? ಇಬ್ಬರೂ ಬಾಲ್ಕನಿ ಒಳಗೆ ಹಾಕಿದ್ದ ಚೇರುಗಳ ಮೇಲೆ ಕುಳಿತುಕೊಂಡೆವು. ಜಗತ್ತಿನ ಬೆರಗುಗಳನ್ನ ಕಥೆಯಾಗಿಸಿ ಹೇಳುವ ಅಮ್ಮನ ಮಡಿಲೇರಿ ಕುಳಿತ ಮಗುವಂತೆ ನಾನು ಮಾನಿನಿಯ ಎದುರು ಕಣ್ಣಗಲಿಸಿ ಕುಳಿತುಕೊಂಡೆ. ಅವಳ ವಾಗ್ಜರಿಯನ್ನ ಕೇಳಲು ಎಲ್ಲೋ ಮರೆಯಾಗಿದ್ದ ತಂಗಾಳಿಯೂ ಓಡೋಡಿ ಬಂದು ನಮ್ಮಿಬ್ಬರ ಮೈಮೇಲೆ ಛಳಿಯ ಬುಗ್ಗೆಗಳನ್ನ ಅರಳಿಸಿತು. ಮಲಗಿ ನಿದ್ರಿಸುತ್ತಿದ್ದ ಮರದ ಎಲೆಗಳು ಎಚ್ಚರಗೊಂಡು ಚರಪರ ಸದ್ದು ಮಾಡಿ ಸುಮ್ಮನಾದವು. ಸಾಗರದ ಮೇಲಿನ ಅಲೆಗಳು ಒಂದೊಂದಾಗಿ ಮೆಲ್ಲಗೆ ದಡಕ್ಕಪ್ಪಳಿಸುವಂತೆ ಮಾನಿನಿ ಮಾತಾಗತೊಡಗಿದಳು. ಜೀವನವೇ ಒಂದು ಸಂತೆ ಕಣೋ ಇಲ್ಲಿ ಸುಖವೂ ಸಿಕ್ಕುತ್ತದೆ, ದುಃಖವೂ ಸಿಕ್ಕುತ್ತದೆ, ಸಂತಸವೂ ಸಿಕ್ಕುತ್ತದೆ, ಸಂಕಟವೂ ಸಿಕ್ಕುತ್ತದೆ, ಸಂಭ್ರಮ ದಕ್ಕುವಂತೆ, ಗಾಢ ವಿಷಾದವೂ ಸಿಕ್ಕುತ್ತದೆ. ಅವಸರ ಬೇಸರವಾಗುತ್ತಲೇ ಶಾಂತಿಯ ಅನುಭೂತಿಗೆ ಮನಸು ಹಾತೊರೆಯುತ್ತದೆ. ಬಡತನದೊಳಗೆ ಸಿಕ್ಕಿ ಹಸಿವು, ಸಂಕಟಗಳಿಂದ ನರಳಿದವನಿಗೆ ಬಡತನ ಸಾಕಾಗುವಂತೆ, ಸಿರಿವಂತನೆಂದುಕೊಂಡ ಧನಿಕನಿಗೂ ಹಣ, ಅಂತಸ್ತು, ಬಂಗಲೆಗಳೂ ನಿಸ್ಸಾರವೆನಿಸಿಬಿಡುತ್ತವೆ. ಆದರೆ ಬಡವ ತನ್ನ ಸಂಕಟವನ್ನ ತೋರಿಕೊಂಡಷ್ಟು ಸರಳವಾಗಿ ಧನಿಕನಾದವನು ತನ್ನ ಮನಸಿನ ಬಡತನ ತೋರಿಸಿಕೊಳ್ಳಲು ಮುಂದಾಗುವುದಿಲ್ಲ ಅದಕ್ಕೆ ಅವನ ಅಹಂಕಾರ ಅಡ್ಡಬಂದುಬಿಡುತ್ತದೆ. ಲೌಕಿಕದ ದೃಷ್ಟಿಯೊಳಗೆ ಬಡವ ಶ್ರೀಮಂತ ಎನ್ನುವ ಭಿನ್ನತೆಗಳಿವೆಯೇ ಹೊರತು ಅಲೌಕಿಕದೊಳಗ್ಯಾವ ವಿಂಗಡಣೆಗಳೇ ಇಲ್ಲ. ಅವನನ್ನ ಹೊಂದುವ ಹಾದಿಯೊಳಗೆ ಇರುವವರು, ಇಲ್ಲದಿರುವವರು, ಬರುವವರು, ಬಾರದವರು ಎಲ್ಲರೂ ಸಿರಿವಂತರೇ. ಅವನನ್ನ ತಮ್ಮ ತಮ್ಮೊಳಗೆ ವಿರಾಜಮಾನಿಸಿಕೊಂಡವರು ಬಡವರಾದರೂ ಹೇಗಾಗುತ್ತಾರೆ ಹೇಳು ? ನೀ ಹುಡುಕಿದಾಗ ಮಾತ್ರ ಸಿಗುವಂತವನು ಅವನು, ಹಾಗಂತ ಅವನು ಅಲ್ಲೆಲ್ಲೋ ಪರ್ವತದೊಳಗೆ, ಗುಹೆಯಲ್ಲಿ ಇಲ್ಲ ಇಲ್ಲೇ ಇದ್ದಾನೆ, ಈಗಲೇ ಸಿಕ್ಕುತ್ತಾನೆ ನಮ್ಮ ಕಣ್ಣು ತೆರೆದುಕೊಳ್ಳಬೇಕಷ್ಟೆ, ಹೃದಯವನ್ನ ಬೊಗಸೆಯಾಗಿಸಿಕೊಳ್ಳಬೇಕಷ್ಟೆ ಆದರೆ ನಾವು ಮಾತ್ರ ಅದನ್ನ ಬಿಟ್ಟು ಒಣ ಉಪಧ್ಯಾಪಕ್ಕೆ ಬಿದ್ದುಬಿಡುತ್ತೇವೆ.
ಒಬ್ಬ ಪರಮಕ್ರೂರಿ ಮಾತ್ರ ಮಹಾಅಹಿಂಸಾವಾದಿಯಾಗಿ ರೂಪಾಂತರಣೆಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಅದರಂತೆಯೇ ಅಲ್ಲವೇ ಬುದ್ಧನಿಂದ ಅಂಗುಲಿಮಾಲ ಬದಲಾಗಿದ್ದು. ನಾವು ಮಾತ್ರ ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ತೊಳಲಾಡುತ್ತಲೇ ಬದುಕಿಬಿಡುತ್ತೇವೆ. ಇತ್ತ ಕಡೆ ಪರಮಕ್ರೂರಿಯು ಅಲ್ಲದ ಪರಮಶಾಂತನು ಆಗದೆ ಎಡಬಿಡಂಗಿಯಾಗಿ ಹುಚ್ಚು ಪುಣ್ಯ, ಪಾಪ, ಶುದ್ಧಿ, ಮೈಲಿಗೆಯೊಳಗೆ ಹೊರಬರದೆ ಬದುಕು ಸವೆಸಿಬಿಡುತ್ತವೆ. ಪರಮಾತ್ಮನಿಗೆ ಮಾತ್ರ ಅವನೊಳಗಿದ್ದ ನಾನು ಅವನಿಗೆ ದಕ್ಕದೆ ಉಳಿದುಹೋದೆನಲ್ಲ ಎನ್ನುವ ಭಾವ ಉಳಿದುಕೊಳ್ಳುವಂತೆ ಮಾಡಿಬಿಡುತ್ತೇವೆ. ಅವನ ತಾಣವೇನಿದೆ ಅದು ಹುಟ್ಟು ಸಾವುಗಳ ಆಚಿನದ್ದು, ಪುಣ್ಯ, ಪಾಪಗಳ ಆಚೆಗಿನದ್ದು ಸರ್ವಾಂತರ್ಯಾಮಿಯಾದುದ್ದು. ಅದು ಗಾಳಿ, ಬೆಳಕು, ಅಗ್ನಿ, ಭೂಮಿ, ನೀರಿನಂತೆ ಎಲ್ಲರಿಗೂ ಸ್ವಾಭಾವಿಕವಾಗಿ ಹೊರಗೆ ಸಿಕ್ಕುವಂತದ್ದು, ನಮ್ಮ ಅರಿವಿಲ್ಲದಂತೆ ನಮ್ಮೊಳಗೇ ಪಂಚೇಂದ್ರಿಯಗಳಂತೆ ಪಂಚಮಹಾಭೂತಗಳು ಮಿಳಿತುಗೊಂಡಿರುವವು. ಬಾಗಿಲನ್ನ ತೆರೆದುಕೊಂಡೇ ಅವನು ನಮ್ಮ ಬರುವೆಗೆ ಕಾಯ್ದುಕುಳಿತಿದ್ದಾನೆ ಆದರೆ ನಾವು ಮಾತ್ರ ಬಾಗಿಲೇ ಇಲ್ಲದ ಅವನ ದೇಗುಲವನ್ನ ಬಡಿಯುತ್ತ ಹೊರಗೆ ಉಳಿದುಬಿಟ್ಟಿದ್ದೇವೆ ಎನ್ನುತ್ತಾ ಮಾನಿನಿ ಪ್ರಸನ್ನವಾದ ನಗುವೊಂದನ್ನ ಬೀರಿದಳು. ಬಾಲ್ಕನಿಗೆ ಹಬ್ಬಿದ ಮಲ್ಲಿಗೆಯ ಬಳ್ಳಿಯೊಳಗಿನ ಮೊಗ್ಗುಗಳು ಒಂದೊಂದಾಗಿ ಸದ್ದಿಲ್ಲದಂತೆ ಮೆಲ್ಲಗೆ ಅರಳಿ ಬೀಸುವ ಗಾಳಿಯೊಟ್ಟಿಗೆ ಪರಿಮಳವನ್ನ ತೂರಿ ನಮ್ಮೆಡೆಗೆ ತಂದವು. ಭಗವಂತ ಎಲ್ಲರೊಳಗೆ ಅರಳುವುದು ಹೀಗೆ ನೋಡು, ಸದ್ದಿಲ್ಲದಂತೆ, ಜಗತ್ತಿಗೆ ಗೊತ್ತಾಗದಂತೆ, ತಾನು ಅರಳುತ್ತಿರುವೆ ಎನ್ನುವ ಸದ್ನೆಯನ್ನೂ ನೀಡದಂತೆ. ಆದರೆ ಅವನ ಪರಿಮಳದಿಂದ ಮಾತ್ರ ಅವನು ನಮ್ಮೊಳಗೆ ಅರಳಿದ್ದಾನೋ?, ಇಲ್ಲವೋ ? ಎಂಬುದನ್ನ ತಿಳಿಯಬೇಕು ಅದೂ ಇತರರಿಂದ ಎನ್ನುತ್ತಾ ಒಂದು ಸುಧೀರ್ಘ ಉಸಿರನ್ನ ಒಳಗೆಳೆದುಕೊಂಡಳು ಮಾನಿನಿ !!
ಸುಧೀರ್ಘವಾಗಿ ಉಸಿರಾಡಿ ಪ್ರಫುಲ್ಲಳಾದ ಮಾನಿನಿ ಪ್ರಶ್ನೆಗಳೆನಾರು ಇವೆಯೇ ಎನ್ನುವ ನೋಟದಿಂದ ನನ್ನೆಡೆಗೆ ನೋಡಿದಳು. ಹೊಳೆಯುವ ನೇಸರನ ಪ್ರಕಾಶದ ಅನುಭೂತಿಯನ್ನ, ಪೂರ್ಣ ಚಂದ್ರಮನ ಹಾಲುಬೆಳದಿಂಗಳ ಸವಿಯನ್ನ, ಧುಮ್ಮಿಕ್ಕಿ ಹರಿಯುವ ಜಲಧಿಯ ಸೊಬಗನ್ನ, ಕಣ್ಣು ತೆರೆದು ನೋಡಿದಷ್ಟು ಹಬ್ಬಿಕೊಂಡೆ ನಿಂತಿರುವ ದಟ್ಟ ಕಾನನದೊಳಗಿನ ಪ್ರಖರ ಶಾಂತಿಯನ್ನ ತನ್ನೊಡಲೊಳಗೆ ತುಂಬಿಕೊಂಡು ನನ್ನ ಹೃದಯದ ಗುಂಡಿಗೆ ತನ್ನ ಭಾವಧಾರೆಯನ್ನ ಹರಿಬಿಟ್ಟು ಅರಿವಿನ ಹಸಿರು ಚಿಗುರೊಡಿಸಿರುವ ಆಕೆಗೆ ನಾನು ಯಾವ ಪ್ರಶ್ನೆಯನ್ನ ಕೇಳಲಾದೀತು ? ಮೌನ ಮಾರ್ದನಿಯ ನಡುವೆ ಹೃದಯದ ತುಂಬಾ ಅವಳೆಡೆಗಿರುವ ಆದರ, ಗೌರವ, ಪ್ರೀತಿಯನ್ನ ನನ್ನ ಮಂದಹಾಸದೊಳಗೆ ತೋರಿ ಯಾವ ಪ್ರಶ್ನೆಯೇ ಇಲ್ಲ ಎನ್ನುವಂತೆ ಕತ್ತು ಅಲ್ಲಾಡಿಸಿದೆ. ಅಂದು ಹಾಗೆ ನನ್ನೊಳಗೆ ನಾನು ಅಂತರ್ಯಾತ್ರೆ ಕೈಗೊಂಡೆನಲ್ಲ ಎನ್ನುತ್ತಾ ಮಾನಿನಿ ಮತ್ತೆ ಮಾತಾದಳು. ನಾನು ಬೇರಲ್ಲ, ಆ ಪ್ರಕಾಶ ಬೇರಲ್ಲ ಎನ್ನುವಂತೆ ನನ್ನ ತನುಮನದ ಕಣ ಕಣದಲ್ಲೂ ಬರೀ ಪ್ರಕಾಶವೇ ಬೆಳಗಿ ನನ್ನ ಮೂಲಾಧಾರದೊಳಗೆ ಹೆಪ್ಪಾಗಿ ಉಳಿದಂತಾಯಿತು. ಆ ಅನುಭವಕ್ಕೆ ಈಡಾದ ನಂತರ ಎರಡು ದಿನ, ನಲವತ್ತೆಂಟು ಘಂಟೆಗಳು ನನ್ನನ್ನ ಸಂಪೂರ್ಣವಾದ ಪ್ರಕಾಶವೇ ಆವರಿಸಿ ನನ್ನ ಅಸ್ತಿತ್ವವೇ ಮರೆಯಾಗಿ ಯಾವುದೋ ಅವರ್ಣಿತ ಅನುಭೂತಿಯೊಳಗೆ ಲೀನವಾದಂತಾಗಿ ಹೋದಂತೆನಿಸಿತು. ಎರಡು ದಿನವಾದ ನಂತರ ಎಚ್ಚರಗೊಂಡಾಕೆ ಮೊದಲಿನ ನಾನು ನಾನಾಗೆ ಇರಲಿಲ್ಲ. ಮತ್ತೊಮ್ಮೆ ಜನ್ಮವೆತ್ತಿ ಬಂದ ಮಗುವಂತಾಗಿದ್ದೆ. ಒಮ್ಮೆಲೇ ಲೌಕಿಕದ ವಾಂಛೆ, ವಾಸನೆಗಳ ಕಾವಳು ಅಳಿದು ಅಲೌಕಿಕದ ದಿವ್ಯ ಪ್ರಭೆ ಹೃದಯವನ್ನೆಲ್ಲ ಆವರಿಸಿತು. ಯಾವುದೋ ಅಗೋಚರವಾದ ಧ್ವನಿಯೊಂದು ನನ್ನ ಕಿವಿಗಳಿಗೆ ತಾಕಿ ನೀನು ಮಾನಿನಿಯಾದ ಮಂದಾಕಿನಿ ಎಂದು ಗುನುಗಿ ಮರೆಯಾಗಿತ್ತು. ಆಗಿನಿಂದ ನಾನು ನಾನಾಗೆ ಉಳಿಯಲಿಲ್ಲ. ಸಂಪೂರ್ಣವಾಗಿ ಅವನ ಅನುಭಾವದ ತೆಕ್ಕೆಗೆ ಶರಣಾಗಿ ಹೋದೆ. ಲೌಕಿಕವೆಲ್ಲ ಸುಳ್ಳಾಗಿ ಅಲೌಕಿಕವೊಂದೇ ಪರಮ ಸತ್ಯವೆನ್ನುವ ಅನುಭೂತಿ ಶಾಶ್ವತಕ್ಕೆ ಹೃದಯಕ್ಕಾಯಿತು ನೋಡು ಎಂದು ಹೇಳಿ ಪ್ರಸನ್ನಳಾಗಿ ಕುಳಿತಳು. ಸುಮ್ಮನೆ ಮೌನದಿಂದ ಆಲಿಸುತ್ತಿರಿರುತ್ತಿದ್ದವನು ಅಲ್ಲಾ ಮಾನಿನಿ, ಅವಸರದ ಅಬ್ಬರಕ್ಕೆ ಸೆರೆಯಾಗಿದ್ದ ನೀನು ಈಗ ಪರಮ ಶಾಂತಿಯೊಳಗೆ ಅನುರಕ್ತಳಾಗಿ ಹೋಗಿರುವೆ. ಅವಸರ ಬೇಸರವಾದಂತೆ ಪರಮಶಾಂತಿಯೂ ಎಂದೋ ನಿನಗೆ ಬೇಸರವಾಗಬಹುದಲ್ಲವೇ ಎಂದು ಹೇಳಿ ನಗು ಚೆಲ್ಲಿದೆ. ತನ್ನ ಮನದ ಅಂಗಳದೊಳಗೆ ಬಿದ್ದ ನನ್ನ ಪ್ರಶ್ನೆಯ ಚಂಡು ಅಕ್ಕರೆಯಿಂದ ಹಿಡಿದೆತ್ತಿಕೊಂಡು ಮಾನಿನಿ ಮತ್ತೆ ಮಾತಾದಳು.
ಮೇಲು ಮೇಲೆ ಪರಧಿಯ ಮೇಲೆ ವಿಹರಿಸುತ್ತಿದ್ದ ಅವಸರವಲ್ಲ ಕಣೋ ನಂದು ! ನನ್ನ ಹೃದಯದ ಕೇಂದ್ರದೊಳಗೆ ಅವಸರವೇ ಮುಕ್ತವಾಗಲು ನಿಡುಸೊಯ್ಯುತ್ತಿದ್ದ ಭಾವವಾಗಿತ್ತು, ತನುಮನದ ಕಣ ಕಣದೊಳಗೆ ತುಡಿಯುತ್ತಿದ್ದ ಶಾಂತಿಯ ಭೀಪ್ಸೆ ಅವನ ಕೇಂದ್ರದೊಳಗೆ ಅವಿಭಕ್ತವಾಗಿ ಹೋಗಿದೆ ಹನಿಯೊಂದು ಸಾಗರದೊಳಗೆ ಬೆರೆತು ಹನಿಯೇ ಸಾಗರವಾಗಿ ರೂಪಾಂತರಗೊಳ್ಳುವಂತೆ ಎಂದು ಮಂದಹಾಸ ಬೀರಿದಳು. ಅವನು ನಮಗೆಲ್ಲ ಕೊಟ್ಟ ಬಹುದೊಡ್ಡ ಉಡುಗರೆಯೇ ಈ ಬದುಕು ! ಅದನ್ನ ಈಡಿಯಾಗಿ ಅನುಭವಿಸದೇ ಹೀಗೆ ವಿರಕ್ತಿಗೊಳಗಾಗುವುದು ನಾವು ಅವನಿಗೆ ಮಾಡುವ ಮೋಸವಲ್ಲವೇ ? ನಮಗೆ ನಾವೇ ಮಾಡಿಕೊಳ್ಳುವ ಅಪರಾಧವಲ್ಲವೇ ? ಎಂದು ಸುಮ್ಮನಾದೆ. ಅರಿಷಡ್ವರ್ಗಗಳಳನ್ನ ಎಲ್ಲರೊಳಗೆ ಅಡಗಿಸಿ, ನೀನೇ ಶ್ರೇಷ್ಠ ಎನ್ನುವ ಅಹಂಕಾರದ ಬೀಜಾಕ್ಷರವನ್ನ ಬಿತ್ತಿದ ಭಗವಂತ ಅದನ್ನ ಹೇಗೆ ಇವನು ಮೆಟ್ಟಿ ನನ್ನೊಳಗೆ ಅನುರಕ್ತಗೊಳ್ಳುತ್ತಾನೆ ಎನ್ನುವ ಆಟವನ್ನ ನೋಡುತ್ತಿರುತ್ತಾನೆ. ಈಗಿಂದಾ ಈಗಲೇ, ಇಲ್ಲಿಯೇ ಘಟಿಸಬಹುದಾದ ಅವನ ಅನುಭೂತಿಗೆ ಬೆನ್ನು ತೋರಿಸಿ ನರಳುವುದು ನಾವು ಮಾಡುವ ಅಪರಾಧ, ನಾವು ಅವನಿಗೆ ಮಾಡುವ ಮೋಸ. ಮುಟ್ಟು ನಿಂತಮೇಲೂ ಮಕ್ಕಳಿಗಾಗಿ ಹಂಬಲಿಸುವುದು ಮುಠ್ಠಾಳತನವಾಗುತ್ತದೆ ಕಣೋ ! ಆಸೆ, ವಾಸನೆ, ಕಾಮನೆಗಳ ಲೌಕಿಕದ ನನ್ನ ಮುಟ್ಟು ನಿಂತು ಅವನ ತಟವನ್ನ ಮುಟ್ಟಿಬಿಟ್ಟಿರುವೆ. ತಿರುಗಿ ನೋಡಿದರೆ ದಟ್ಟ ಕಾರ್ಗತ್ತಲೊಂದೇ ಇದೆ, ಎದುರು ನೋಡಿದರೆ ಸುವಿಶಾಲವಾದ ಅವನ ಅನುಭಾವದ ಪ್ರಕಾಶವೇ ಇದೆ. ಸಾಗಿಬಿಟ್ಟ ಕಾವಳವನ್ನ ತೊರೆದು ಮುಂದೆ ಕಾಣುವ, ಈಗಾಗಲೇ ಕಂಡುಕೊಂಡ ಅವನ ಅರಿವಿನ ಪ್ರಕಾಶವನ್ನ ಶಾಶ್ವತಕ್ಕೆ ಶರಣಾಗಿ ಹೋಗಿರುವೆ ಎನ್ನುತ್ತಾ ಬಿದಿಗೆಯ ಚಂದ್ರಮನಂತೆ ಹೊಳೆದು ಕಣ್ಣಗಲಿಸಿ ಕುಳಿತಳು. ಆಗಸದೊಳಗಿನ ಒಂದೇ ಒಂದು ನಕ್ಷತ್ರ ನೋಡುತ್ತಾ ಕುಳಿತಿರುವಾಗ ಇದ್ದ ಅದೊಂದೇ ನಕ್ಷತ್ರ ಈಡಿ ಆಕಾಶವನ್ನೇ ತನ್ನೊಡಲೊಳಗೆ ಹುಡುಗಿಸಿಕೊಂಡಂತೆ ಈಗ ಇತ್ತು, ಈಗ ಇಲ್ಲ ಎನ್ನುವಂತೆ ಮರೆಯಾಯಿತು. ನಕ್ಷತ್ರವನ್ನ ಆಗಸ ಅಪೋಶನವಾಗಿಸಿಕೊಂಡಿತೋ ? ನಕ್ಷತ್ರವೇ ಆಗಸವನ್ನ ತನ್ನ ಮಡಿಲೊಳಗೆ ಇನ್ನಿಲ್ಲದಂತೆ ಹುದುಗಿಸಿಕೊಂಡಿತೋ ಎನ್ನುವ ಗೊಂದಲದೊಳಗೆ ನಾ ಸಿಕ್ಕಿಹಾಕಿಕೊಂಡಿರುವಾಗ ಮಾನಿನಿ ಹೇಳಿದಳು. ಅದೇನು ನಕ್ಷತ್ರ ನಮ್ಮೊಳಗೇ ಬಣ್ಣಿಸಲಾಗದ ಬೆರಗು ಉಳಿಸಿ ಮರೆಯಾಯಿತೋ ಅದೇ ಸಮಾಧಿ ಎನ್ನುತ್ತಾ ತನ್ನಷ್ಟಕ್ಕೆ ತಾನೇ ದಿವ್ಯವಾಗಿ ನಮಿಸಿಕೊಂಡಳು. ಎಲ್ಲೋ ಸದ್ದಿಲ್ಲದೇ ಮರೆಯಾಗಿದ್ದ ಹಕ್ಕಿಗಳು ತಮ್ಮ ಝೇಂಕಾರವನ್ನ ಶುರುಮಾಡಿದವು, ಮೂಢನದ ಮನೆಯ ಬಾಗಿಲು ತೆರೆದು ನೇಸರ ಮೆಲ್ಲ ಮೆಲ್ಲಗೆ ಹೆಜ್ಜೆಯಿರಿಸಿ ಹೊರಗೆ ಬರಲಾರಂಭಿಸಿದನು. . . .
– ಪ್ರವೀಣಕುಮಾರ್ ಗೋಣಿ