ಪ್ರವಾಸ-ಕಥನ

ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ: ಭಾಗ್ಯ ಭಟ್

ಎಲ್ಲಿ ನೋಡಿದರಲ್ಲಿ ಹಸಿರ ಸೊಬಗು… ದಾರಿಯುದ್ದಕೂ ಮನವ ಮುದ್ದಿಸೋ ತಂಪು ಗಾಳಿಯ ಇಂಪು… ತಿಳಿ ನೀಲ ಆಗಸದಿ ಮೆರವಣಿಗೆ ಹೊರಡೋ ಮೋಡಗಳು… ಚಂದದ ಊರಿದು, ಪಕ್ಕಾ ಮಲೆನಾಡ ತಂಪ ಉಣಬಡಿಸೋ ಕಾಫೀ ನಾಡು. ಅದೆಷ್ಟೋ ಚಂದದ ಬೆಟ್ಟ ಗುಡ್ಡಗಳಿಂದ ಕಣ್ಮನ ತಣಿಸುತಿರೋ ಚಿಕ್ಕಮಗಳೂರ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕಲ್ಲತಗಿರಿಗಳ ಸುತ್ತೋ, ನಿಸರ್ಗದ ಅಚ್ಚರಿಗಳ ಸಮೀಕರಿಸೋ ಸಣ್ಣದೊಂದು ಭಾಗ್ಯ ಸಿಕ್ಕಿದ್ದು ಇಲ್ಲಿಗೆ ಬಂದು ವರ್ಷವೊಂದಾದ ಮೇಲೆ.. ಇಲ್ಲಿ ದಕ್ಕಿದ್ದ, ಪಡೆದುಕೊಂಡ ಚಂದದ ಅನುಭವಗಳ ಪದಗಳಲಿ ಹಿಡಿಯೋದು ಕಷ್ಟವೇನೋ…. ಈ ಚಂದದ ಅನುಭವವ ನೀವೂ ಅನುಭಾವಿಸಿಯೇ ತೀರಬೇಕು. ಒಮ್ಮೆ ನೋಡಲೇಬೇಕಿರೋ ಜಾಗವಿದು.. ನೋಡಬನ್ನಿ ನೀವೂ ಒಮ್ಮೆ.

ಗಿರಿಯ ತಲೆಯ ಸವರಿ, ಮೋಡದೊಂದಿಗೆ ಸರಸವಾಡಿದ ಚಾರಣದ ನೆನಪಿನಿಬ್ಬನಿ ಈ ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ.. ಆತ್ಮೀಯ ಬ್ಲಾಗಿಗರೊಡಗೂಡಿ ಅವರ ಪುಟಾಣಿ ಗೆಳತಿಯಾಗಿ…

ಚಿಕ್ಕಮಗಳೂರಿನಿಂದ ೨೦,೨೫ ಕಿಲೋಮೀಟರ್ ಆಸುಪಾಸಿನಲ್ಲಿರೋ ಮುಳ್ಳಯ್ಯನಗಿರಿ… ಶಬ್ಧಗಳಿಗೆ ದಕ್ಕದ ಚಂದದ ಪರಿಸರವಿದು. ಅತೀ ಎತ್ತರದ ಈ ಗುಡ್ದವ ಏರೋವಾಗ ಬೇಸರಗಳೆಲ್ಲವೂ ದೂರಾ ದೂರ… ಮತ್ತೆ ಕರೆಯುತ್ತೆ ಬೆಟ್ಟದ ಇನ್ನೊಂದು ತೀರ..  ನಡೆಯೋ ಹಾದಿಯಲ್ಲಿ ದೇಹದ ಸುಸ್ತು, ಮನದ ಸುಸ್ತು ಎಲ್ಲವೂ ಮರೆತು ಹೋಗುತ್ತೆ… ಕಪ್ಪ ಹಸಿರ ಪ್ರಕೃತಿ ಅದೆಷ್ಟು ಚಂದ ಅನಿಸಿಬಿಡುತ್ತೆ. ಪ್ರೀತಿಯಾಗುತ್ತೆ ಈ ವಿಸ್ಮಿತ ಪ್ರಕೃತಿಯ ಮೇಲೆ… ಮನದ ಭಾವಗಳ ಜೊತೆಗೆ ಸ್ಪರ್ಧೆಗೆ ನಿಂತಂತೆ ಗೋಚರಿಸುತ್ತೆ ಒಮ್ಮೊಮ್ಮೆ.. ಈಗಿದ್ದ ಭಾವ ಮತ್ತೊಂದು ಕ್ಷಣಕ್ಕೆ ಬದಲಾದಂತೆ ಕ್ಷಣ ಕ್ಷಣಕೂ  ತನ್ನದೇ ವೈಚಿತ್ರವ ಉಣಬಡಿಸೋ ಗಿರಿಯನ್ನ ತಟದಲ್ಲೊಮ್ಮೆ ದಿಟ್ಟಿಸಿ ಉಸ್ಸಪ್ಪ ಹೇಗೆ ಹತ್ತೋದಿದ ಅಂದುಕೊಂಡು ಹತ್ತೋಕೆ ಶುರುವಿಟ್ರೆ ತುದಿಯ ಮುಟ್ಟಿದಾಗ ಅರಿವಿಗೆ ಬರುತ್ತೆ ಎಷ್ಟು ಸೊಬಗಿದೆ ಇಲ್ಲಿ ಅನ್ನೋದು.

ಸರ್ಪದಾರಿಯ ಬುಡದಲ್ಲಿ ಬಸ್ ಇಳಿದು ಬೆಟ್ಟವ ಹತ್ತೋಕೆ ಅಡಿಯಿಟ್ಟಾಗ ಒಂದು ತರಹದ ಅವ್ಯಕ್ತ ಭಾವ ಕಾಡುತ್ತೆ… ತಲೆಯೆತ್ತಿ ನೋಡಿದಾಗಲೂ ಕೊನೆಯಿರದ ಬೆಟ್ಟದ ಶ್ರೇಣಿಗಳ ಕೆಳಗಿಂದ ನೋಡೋವಾಗ ಒಂದಿಷ್ಟು ಪುಳಕ, ಒಂಚೂರು ರೋಮಾಂಚನ, ತುಸು ಭಯ… ಗೊತ್ತಿಲ್ಲ ನನಗೂ.. ಈ ಭಾವಗಳ ಹೇಗೆ ಕಟ್ಟಿಕೊಡೋದು ಅಂತಾ…

                           

 ನವ ವಧುವಿನಂತೆ ಸಿಂಗಾರವಾಗಿರೋ ಹಸಿರ ಸೊಬಗಿದು…

ಬೇಕಿರೋ ವ್ಯವಸ್ಥಿತ ಪ್ಲಾನ್ ಗಳ ಕುರಿತು:

ಹೇಳಿಕೊಳ್ಳೊವಂತಹ ವ್ಯವಸ್ಥೆಯೇನಿಲ್ಲ… ಎಲ್ಲಾ ಪ್ರವಾಸೀ ತಾಣಗಳಲ್ಲೂ ಇರೋ ದೊಡ್ಡ ನಿರ್ಲಕ್ಷವೇ ಇಲ್ಲೂ ಕಾಣಸಿಗೋದು.. ಸರ್ಕಾರಿ ವಾಹನದ ವ್ಯವಸ್ಥೆಯಿಲ್ಲ. ಪ್ರೈವೇಟ್ ಬಸ್ಸೊಂದೇ ಎಲ್ಲರನೂ ಹೊತ್ತು ತರೋದು.. ನಮ್ಮದೆ ವಾಹನದಲ್ಲಿ ಹೋದ್ರೆ ಮಾತ್ರ ಒಂದಿಡೀ ಚಿಕ್ಕಮಗಳೂರ ಸುತ್ತಿ ಬರಬಹುದು. ಯಾಕಂದ್ರೆ ಬೆಳಿಗ್ಗೆ ಮಾತ್ರ ಇರೋ ಬಸ್ ಇಡಿಯ ಗಿರಿಯ ದರ್ಶನ ಮಾಡಿಸೋದು ಕಷ್ಟ. ಉಳಿದುಕೊಳ್ಳೋ ವ್ಯವಸ್ಥೆಯಿಲ್ಲ.. ಗಟ್ಟಿಯಾದ ಟೆಂಟ್ ಹಿಡಿದೇ ಗುಡ್ದ ಹತ್ತಬೇಕು. ಸಂಜೆಯ ಟಾರ್ಗೆಟ್ ಬುಡನ್ ಗಿರಿಯ ಟವರ್ ಆದರೆ ಮಾತ್ರ ಒಂದುವರೆ ದಿನಕ್ಕೆ ಎಲ್ಲಾ ಸ್ಥಳಗಳ ಸುತ್ತಿ ಬರೋಕಾಗೋದು. ಸರ್ಪದಾರಿಯ ಕಾಲು ಹಾದಿಯಲ್ಲಿ ಸಾಗೋ ಪಯಣ ಮುಳ್ಳಯ್ಯನಗಿರಿಯ ಹತ್ತಿಳಿದು, ಮುಂದೆ ಬಾಬಾಬುಡನ್ ಗಿರಿಯ ಪಯಣಿಸಿ, ಏಕಸ್ಥಾಯಿ ಭಾವಗಳಲ್ಲಿ ಮಿಂದೆದ್ದು, ಮಾಣಿಕ್ಯಧಾರೆಯಲ್ಲಿ ಮೈ ಮರೆತು, ಕಲ್ಲತಗಿರಿಯ ಚಂದದ ಫಾಲ್ಸ್ ಒಂದ ಸವಿದು, ನೆನಪುಗಳ ಮೂಟೆಕಟ್ಟಿ ತೀರಾ ಸಮಾಧಾನ ಕೊಡೋ ಭಾವಗಳ ಜೊತೆಗೆ ಸೇರ್ಪಡಿಸಿ ಅಲ್ಲಿಂದ ಹೊರಬಿದ್ದರೆ ೧೫ ಕಿ.ಮೀ.ಗಳ  ಸಂತಸದ ಪ್ರಯಾಣದ ಅನುಭವವೊಂದಕ್ಕೆ ತೆರೆ ಬಿದ್ದಂತಾಗುವುದು.                       

ಮುಂಜಾವಿನೀ ಮಂಜು …ಮುಸ್ಸಂಜೆಯಾಕಾಶ..

ಮನ ತಣಿಸೋ ಹಸಿರಿದೆ… ಮಧುರ ಏಕಾಂತವಿದೆ… ಕಲ್ಪನೆಯಲ್ಲೂ ಮಧುರ ಭಾವವನ್ನೇ ಕೊಡೋ ಕನಸ ರಾಜಕುಮಾರನ ನೆನಪಿಸೋ ವಾತಾವರಣವಿದೆ. ಪ್ರೀತಿಯಿದೆ… ಶಾಂತಿಯಿದೆ… ಸ್ಪಷ್ಟತೆಯಿದೆ.. ಗೊಂದಲವೂ ಇದೆ… ಮನವ ತಿಳಿಗೊಳಿಸೋ, ಮನದ ಜಡತೆಯ ಕಳೆಯೋ, ಪೂರ್ತಿಯಾಗಿ ಬಿಕ್ಕಿ ಸಮಾಧಾನವಾಗೋ  ನೆಮ್ಮದಿಯ ಭಾವಗಳಿವೆ….. ಇಲ್ಲೇನೂ ಇಲ್ಲ – ಆದರೂ ಎಲ್ಲವೂ ಇದೆ…..

ಹೀಗೊಂದಿಷ್ಟು ಚಂದದ ಭಾವಗಳ "ಗಿರಿ"ಯ ತುಂಬಾ ಪಡೆದು, ಅಲ್ಲಲ್ಲಿ ಬಿತ್ತಿ ಬರೋಕೇನೂ ಅಭ್ಯಂತರವಿಲ್ಲದ ಅತೀ ಸುಂದರ ಮಲೆನಾಡಿದು ಅನ್ನೋದು ಅಲ್ಲಿ ಹೋಗಿ ವಾಪಸ್ ಬರೋವಾಗ ಎಲ್ಲರೂ ಮನ ತುಂಬಾ ಆಡೋ ಮಾತುಗಳು. ಕವಿಗಿದು ಪ್ರೇಯಸಿಯ ನೆನಪಿಸೋ ತಾಣವಾದರೆ, ಕಲಾಕಾರನ ಕುಂಚದಲ್ಲಿ ಹಸಿರ ಸೀರೆಯ ಸೆರಗ ಹೊದ್ದ ಹೆಣ್ಣಾಗಿ ಕಾಣ್ತಾಳೇನೋ… ಇನ್ನು ಕವಿಯೂ ಅಲ್ಲದ, ಕಲಾತ್ಮಕ ಭಾವಗಳೂ ಇಲ್ಲದ ನನ್ನಂತವರಿಗಿದು ಬಾಚಿ ಬಾಚಿ ಪಡೆಯೋ ಅವ್ಯಕ್ತ ಖುಷಿಗಳ ಪಾಲಾಗಿ, ಕಲ್ಪನೆಯ ಕನಸ ಅನಾವರಣಗೊಳಿಸಿ, ಬೇಸರಗಳ ಅಲ್ಲಿ ಬಿಟ್ಟು, ನಗುವ ಮಾತ್ರ ಎತ್ತಿಕೊಂಡು ಬಂದ ಭಾವವೊಂದ ರವಾನಿಸುತ್ತೆ.. ಹುಡುಗರಿಗೆ ವೀಕ್ ಎಂಡ್ ಫೇವರೆಟ್ ಸ್ಪಾಟ್ ಆದ್ರೆ ಟ್ರೆಕ್ಕಿಂಗ್ ಕ್ರೇಜ಼್ ಇರೋರಿಗಿದೊಂದು ಹಬ್ಬ…. ದಿನವೊಂದರಲ್ಲಿ ೧೫, ೧೬ ಕಿ.ಮಿ ನಡೆದ್ರೂ ಏನೂ ಆಯಾಸವಾಗದಷ್ಟು ಖುಷಿ ಕೊಡುತ್ತೆ ಈ ಜಾಗ.

ಮುಳ್ಳಯ್ಯನ ಗಿರಿಯ ಹತ್ತಿ ಕೆಳಗಿಳಿದು ಬಾಬಾಬುಡನ್ ಗಿರಿಯವರೆಗೂ ನಡೆದೇ ಸಾಗಬಹುದಿಲ್ಲಿ.. ಬಯಲ ನಡುವಿನ ಕಾಲು ದಾರೀಲಿ ಸಾಲಾಗಿ ನಡೆವ ಖುಷಿ… ಕೂಗುತ್ತ, ಕುಣಿಯುತ್ತ… ಮೊದಲೇ ಹೇಳಿದಂತೆ  ರಾತ್ರಿ ತಂಗೋಕೇನೂ ವ್ಯವಸ್ತೆಯಿಲ್ಲ… ಮೈ, ಮನ ನಡುಗೋವಷ್ಟು ಚಳಿ ಗಾಳಿಗೆ ಕ್ಯಾಂಪ್ ಫೈರ್ ಮಾತು ತೀರಾ ಕಷ್ಟ.. ಹೀಗಾಗಿ ಒಂದು ವ್ಯವಸ್ತಿತ ಪ್ಲಾನ್ ಜೊತೆ, ನಾಲ್ಕೈದು ಬೆಚ್ಚಗಿನ ಶಾಲುಗಳ ಜೊತೆ ಹೊರಡೋದು ಸೂಕ್ತ… ಸಂಜೆ ನಾಲ್ಕಾಗ್ತಾ ಇದ್ದ ಹಾಗೇ ಎದುರು ಒಂದು ಮಾರು ದೂರದಲ್ಲಿರೋರೂ ಕಾಣದಷ್ಟು ಕವಿಯೋ ಮಂಜು ನಿಜಕ್ಕೂ ನೆದರ್ ಲ್ಯಾಂಡ್ ನಂತಹ ಹೊರ ರಾಷ್ಟದ ವಾತಾವರಣದ ಕಲ್ಪನೆಯ ಕೊಡುತ್ತೆ. ದಾರಿಯ ಕೇಳೋಕೂ ಯಾರೂ ಸಿಗಲ್ಲ.. ಅಲ್ಲಲ್ಲಿ ಸಿಗೋ ಜನಗಳೂ ನಮ್ಮ ತರವೇ ದಾರಿ ಕೇಳೋರೆ ಆಗಿರ್ತಾರೆ.. ಹೀಗಾಗಿ ಒಂದೇ ಕೊನೆಯನ್ನ ಬುಡನ್ ಗಿರಿಯ ಟವರ್ ಅಂತಿಟ್ಟುಕೊಂಡು ಹೊರಡಬೇಕು… ನಡೆದಿದ್ದೇ ದಾರಿಯಾಗಿ ಆಮೇಲೆ ಹೇಗೋ ಟವರ್ ಮುಟ್ಟಿದಾಗ ದೊಡ್ಡ ಸಾಧನೆಯ ಸಂಭ್ರಮ ಎಲ್ಲರ ಮೊಗದಲ್ಲೂ… ಹಾದಿಯೂ ನಗುತ್ತಿತ್ತು ನಮ್ಮಗಳ ನೋಡಿ..

ನಂಗಂತೂ ಹೇಳಲಾಗದ ಅವ್ಯಕ್ತ ಭಾವಗಳು ದಕ್ಕಿತ್ತು ಈ ವಾತಾವರಣದಲ್ಲಿ. ಮನದ ಮಂಜನ್ನ ಸರಿಸೋಕಂತಾನೇ ಬಂದಿದ್ದ ಪ್ರದೇಶಕ್ಕೆ  ಮುತ್ತಿಕ್ಕೋ ಮಂಜು ಒಂದು ತರಹದ ರೋಮಾಂಚನವನಂತೂ ಕೊಡುತ್ತೆ.

ಇಲ್ಲೊಂದಿಷ್ಟು ನಮ್ಮದೆನ್ನೋ ಬ್ರಾಂಡೆಡ್ ಮಾತುಗಳಿವೆ… ಸ್ಟಾಂಡರ್ಡ್ ಜೋಕುಗಳಿವೆ… ಜಿದ್ದಾ ಜಿದ್ದಿಗೆ ಬಿದ್ದ ಭಾವಗಳಿವೆ… ಮೌನವ ಸೋಲಿಸಿದ ಬುದ್ಧಿಯ ಮನವಿದೆ. ಪ್ರೀತಿಸೋ ಜನರಿದ್ದಾರೆ…. ಇಲ್ಲೇನೋ ವಿಶೇಷತೆಯಿದೆ…. ಲಾವಣ್ಯವಿದೆ.. ಸೊಬಗಿದೆ… ಹೀಗೇ ಹಸಿರ ಹಾದಿಯುದ್ದಕೂ ಸೊಬಗ ಆಸ್ವಾದಿಸಿಕೊಂಡು ಪಯಣ ಸಾಗಿತ್ತು ವಿವಿಧತೆಯಲ್ಲಿ ಏಕತೆಯ ಮೆರೆಯೋ ಬಾಬಾ ಬುಡನ್ ಗಿರಿಯ ಕಡೆಗೆ…..ಪ್ರೀತಿಯ ಸಿಹಿಗಾಳಿಯಲ್ಲಿ ತೇಲೋ ಭಾವ ಗಿರಿಯ ತಟ ಮುಟ್ಟೋದರ ಜೊತೆಗೆ ಮನದ ತಟವ ತಲುಪೋದರಲ್ಲೂ ಯಶಸ್ವಿಯಾಗಿತ್ತು.

                                                 

ಇಲ್ಲೂ ಒಂದು ಚಂದದ ಪ್ರೀತಿಯೇ ಹಬ್ಬಿದೆ… ಮೊಗೆ ಮೊಗೆದು ಕೊಡೋಕಿರೋ ಪ್ರೀತಿಯ ಭಾವಾಂಕುರ…

(ಹಸಿರ ಊರಲ್ಲಿ ಭಾವಗಳ ಝೇಂಕಾರ)

ಇರದ ವ್ಯವಸ್ಥಿತ ಪ್ಲಾನ್ ಗೆ ತತ್ತರಿಸಿದ್ವಿ ಕವಿದ ಕಾರ್ಮೋಡದೆದುರು ನಾವಲ್ಲಿ… ಸಂಜೆ ನಾಲ್ಕಕ್ಕೆ ತಡೆಯೋಕಾಗದ ಚಳಿಗೆ ಮುಡುಗಿ ಕುಳಿತಿದ್ವಿ… ಬೆಂಕಿಯನೂ ಹೆದರಿಸೋ ಗಾಳಿ ನಡುಕ ಹೆಚ್ಚಿಸಿತ್ತು… 

ಅದೆಷ್ಟೋ ಅಂತಹುದೇ ಗುಡ್ದಗಳ ದಾಟಿ ದಾಟಿ ಯಾಕೋ ಈ ತರಹದ ಎಷ್ಟು ಬೆಟ್ಟಗಳ ಬೇಕಾದ್ರೂ ಧೈರ್ಯದಿ ಹತ್ತಿ ಮುನ್ನಡೆಯೋ ಆತ್ಮಸ್ಥೈರ್ಯ ಸಿಕ್ಕಿತ್ತು.. ಮುಂದಿನ ಪಯಣ ಅಸಾಧ್ಯ ಅನಿಸಿ ಅಲ್ಲೇ ತಂಗೋಕಂತ ಟೆಂಟ್ ಹಾಕ ಹೋದ್ರೆ ಅಸಾಧಾರಣ ಗಾಳಿ ಹೆದರಿಸುತ್ತಿತ್ತು… ಯಾಕೋ ಬೆಟ್ಟವೂ ಸುಸ್ತಾಗಿ ಬಿಕ್ಕುತ್ತಿದ್ದಂತೆ ಭಾಸವಾಗ್ತಿತ್ತು ಒಮ್ಮೊಮ್ಮೆ. ಆದರೂ ಚಂದಾ ಚಂದ ಆ ವಾತಾವರಣ… ಎಲ್ಲಿ ಕಳೆದುಹೋದ್ವಿ ಅನ್ನೋದು ಅರಿವಿಗೆ ಬಾರದ ಸ್ಥಿತಿ…

 ಸಂಜೆ ಆರಾಗುತ್ತಿದ್ದಂತೆ ಎಲ್ಲೋ ರಾತ್ರಿಯಾದ ಭಾವ.. ಇಡಿಯ ರಾತ್ರಿ ಹೇಗೆ ಕಳೆಯೋದು ಅನ್ನೋದೊಂದೆ ನನ್ನ ಆತಂಕ. ಗವ್ವನೆ ಕವಿದಿರೋ ಕತ್ತಲಲ್ಲೂ ನಗೆಯ ಬೆಳಕ ಸೊಬಗ ತೋರಿಸೋ ಜನ ಜೊತೆಗಿರಬೇಕಿದ್ರೆ ನೀನ್ಯಾಕೆ ಹೆದರ್ತೀಯ ಅಂತ ಮನ ಸಾಂತ್ವಾನಿಸಿದ್ರೂ ಆ ರಾತ್ರಿಯ ಕಳೆಯೋದು ನನ್ನ ಮಟ್ಟಿಗೆ ಕಷ್ಟ ಅನ್ನಿಸಿತ್ತು… ಪ್ರೀತಿಸೋ ಜೀವಗಳ ಕಾಳಜಿ ಅದೆಲ್ಲಾ ಭಯಗಳ ಮೆಟ್ಟಿ ನಿಂತಿತ್ತು ಗುಡ್ಡದ ಅರೆ ನಿದ್ದೆಯ ಹೊತ್ತಲ್ಲಿ.. ಕೊನೆಗೂ ಬೆಳಕು ಹರಿದಿತ್ತು. ಬೆಳಗಿನ ಆರುಗಂಟೆಯಲ್ಲಿ ಮತ್ತದೇ ಮಬ್ಬು ಮಬ್ಬು ವಾತಾವರಣ… ಮಳೆಯ ತರಹ ಸುರೀತಿದ್ದ ಮಂಜು ಅದ್ಯಾವುದೋ ರೊಮ್ಯಾಂಟಿಕ್ ಕಾಶ್ಮೀರವ ನೆನಪಿಸಿದ್ದಂತೂ ಸುಳ್ಳಲ್ಲ. ಸಾಗಿತ್ತು ಪಯಣ ಮತ್ತೆ ಮುಂದೆ ಮುಂದೆ… ಆಗಷ್ಟೇ ಸೊಬಗ ನಗುವ ಬೀರಿದ್ದ ಭಾಸ್ಕರನ ಜೊತೆಗೆ…

ಬುಡನ್ ಗಿರಿಯ ನೆತ್ತಿಯಲ್ಲಿ ಮನ ಬಿಕ್ಕೋ ಚಳಿಯಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಹಿಂದೂ ಮುಸ್ಲಿಂ ಬಾಂಧವ್ಯದ ಬಾಬಾ ಬುಡನ್ ಮತ್ತು ದತ್ತ ಪೀಠಗಳ ನೋಡಿ ಏಕತಾನತೆಯ ಸಂಭ್ರಮ ಮನಕ್ಕೆ… ಈ ಜಾಗದಿಂದ ೩ ಕಿ.ಮಿ  ದೂರವಿರೋ "ಮಾಣಿಕ್ಯಧಾರ" ಹೆಸರಿಗೆ ತಕ್ಕಂತೆಯೆ ಜಲಲ ಜಲಲ ಜಲಧಾರೆ… ಹನಿ ಹನಿಯಾಗಿ ಉದುರೋ ನೀರ ಧಾರೆ ದೊಡ್ಡ ಜಲಪಾತ ನೋಡಿದಾಗ, ಅದ ಸ್ಪರ್ಶಿಸಿದಾಗ ಕೊಡೋ ಮುದವನ್ನೇ ಕೊಡುತ್ತೆ.. ತೀರಾ ಇಷ್ಟವಾಗುತ್ತೆ ಮಾಣಿಕ್ಯಧಾರ ನೋಡುಗರಿಗೆ… ಹೊರ ನಿಂತು ನೋಡೋವಾಗ ಎಲ್ಲೆಲ್ಲೂ ದೊಡ್ಡದಾಗಿ ಕಾಣೋ ಇದೆ ಶ್ರೇಣಿ ಬೆಟ್ಟಗಳ ನಾವುಗಳು ಹತ್ತಿ, ಹಾರಿ, ಇಳಿದಿದ್ದು ಅಂತ ಹುಬ್ಬೇರಿಸೋ ತರಹ ಅನಿಸುತ್ತಿತ್ತು… ನಿಜಕ್ಕೂ ಅಲ್ಲೊಂದು ಸಾಮರ್ಥ್ಯದ ಅರಿವಿನ ಅನಾವರಣವಾಗಿತ್ತು.. ಅಲ್ಲಿಂದ ವಾಪಾಸ್ಸಾಗೋಕೆ ಕಾಲ್ನಡಿಗೆಯ ಬಿಟ್ರೆ ಒಂದಿಷ್ಟು ಜೀಪುಗಳಿದ್ವು ನಮ್ಮನ್ನ ಹೊತ್ತೊಯ್ಯೋಕೆ.. ಆದರೂ ತೀರಾ ಅನಿಸೋ ಜೀಪ್ ರೇಟ್‌ಗಳು ಅನಿವಾರ್ಯವಾಗಿತ್ತು ವಾಪಸ್ಸು ಊರು ಸೇರೋಕೆ… ಅದಕ್ಕೆ ಹೇಳಿದ್ದು ನಮ್ಮದೇ ವಾಹನವಿದ್ರೆ ಮಾತ್ರ ಈ ಬೆಟ್ಟ ಗುಡ್ಡವ ಖುಷಿಸೋದು ಸಾಧ್ಯ ಅಂತಾ… ಆದರೂ ಸುಮ್ಮನೆ ದಾರಿ ಹಿಡಿದು ಹೋಗೋಕೆ, ಚಾರಣದ ಮಜಾ ಸವಿಯೋಕೆ, ಸಣ್ಣ ಸಣ್ಣ ಖುಷಿಗಳ ಅನುಭವಿಸೋಕೆ ಏನೋ ಒಂದಿನಿತು ಸಂತಸವೆನಿಸುತ್ತೆ…                                                                                                                      

                                                                                                                                                   ತಡೆ ತಡೆದು ಸ್ರವಿಸೋ ಭಾವಗಳ ಜೊತೆ ಸ್ಪರ್ಧೆಗೆ ನಿಂತಂತೆ… ಜಲಲ ಜಲಲ ಜಲಧಾರೆ.                                                                                       (ಮಾಣಿಕ್ಯಧಾರಾ ,ಬಾಬಾಬುಡನ್ ಗಿರಿ)

ಅಂತೂ ಇಂತೂ ಮತ್ತೆ ಮರುದಿನದ ಅದೇ ಪ್ರೈವೇಟ್ ಬಸ್ಸ ಹಿಡಿದಾಗ ಎಲ್ಲರ ಮೊಗದಲ್ಲೂ ಏನೋ ಕಳಕೊಂಡ ಶೂನ್ಯತೆ… ಇನ್ನೊಮ್ಮೆ ಭೇಟಿಯಾಗ್ತೀವಿ ಅಂತ ಗೊತ್ತಿದ್ದಾಗ್ಲೂ ಇದೇ ಕೊನೆಯ ವಿದಾಯವೇನೋ ಅಂತನಿಸೋ ನೋವ ಧಾತು. ಪ್ರಕೃತಿಯೊಂದಿಗಿನ ಸಮ್ಮಿಲನದ ಏಕಾಂತ ಕೊನೆಯಾದಾಗ ಎಲ್ಲೋ ಒಡೆದ ಮನಕ್ಕಾಗೋ ಕಣ್ಣೀರ ಸ್ನಾನದ ಭಾವವದು. ಗುಜರಿಯಾಗಿದ್ದ ಮನದಲ್ಲಿ ಅದೆಷ್ಟೋ ಹಸಿರ ನೆನಪ ತುಂಬಿಕೊಂಡು, ಜೇಡ ಬಲೆಯನ್ನೆಲ್ಲಾ ಸಂಸ್ಕರಿಸಿ, ನೋವುಗಳ, ದುಃಖಗಳ ಆ ಪ್ರಥ್ವಿಗೆ ಕೊಟ್ಟು ಹೊರಬಿದ್ದಾಗ ಮನ ಹಗುರಾ ಹಗುರ…

ಅಲ್ಲಿಂದ ಬಸ್ಸು ಹತ್ತಿ ಮರಳಿ ಚಿಕ್ಕಮಗಳೂರತ್ತ ಪಯಣ ಸಾಗಿದ್ರೆ ಕಲ್ಲತಗಿರಿ ಅನ್ನೋ ಸುಂದರ ಜಲಪಾತವೊಂದು ಕೈ ಮಾಡಿ ನಿಲ್ಲಿಸಿತ್ತು… ಬುಡನ್ ಗಿರಿಯಿಂದ ಚಿಕ್ಕಮಗಳೂರ ದಾರಿಯಲ್ಲಿ ಸಿಗೋ ಕಲ್ಲತಗಿರಿ ಪ್ರಥ್ವಿಯ ಅದ್ಭುತ ಅನಿಸಿದ್ದಂತೂ ಹೌದು…. ವಾವ್ ! ಉದ್ಗಾರ ಬಿಟ್ಟು ಇನ್ನೇನಕ್ಕೂ ದಕ್ಕದ ಶಬ್ಧವಿದು… ಒಂದೂವರೆ ದಿನದಲ್ಲಿ ಸರಿ ಸುಮಾರು ೧೫ ಕಿ.ಮೀ ನಡೆದಾಗ್ಲೂ ಒಂದಿನಿತೂ ಸುಸ್ತು ಕಾಡದ, ಒಂದಿನಿತೂ ಬೇಸರವಾಗದ ನಾ ತೀರಾ ಇಷ್ಟಪಟ್ಟ ಸ್ಥಳ ಇದು…

ಇಷ್ಟವಾದೀತು ನಿಮಗೂ….ಅಚ್ಚ ಹಸಿರ, ಶುಭ್ರ ಮನದ, ಸ್ವಚ್ಚಂದ ನಗುವ, ಮುಗ್ಧ ಭಾವಗಳ, ಸ್ನೇಹದ ಸಂಕೋಲೆಯ, ಒಲವ ಪ್ರೀತಿಯ, ಮಿಳಿತದ, ತುಡಿತದ ಎಲ್ಲಾ ಭಾವಗಳ ಸಾಕ್ಷಾತ್ಕಾರ ದಿನವೊಂದರಲ್ಲಿ ಎಲ್ಲರನೂ ಹಾದು, ಮನಗಳ ಸೋಲಿಸಿ ಹೋಗುತ್ತಂದ್ರೆ ಅತಿಶಯೋಕ್ತಿ ಆಗಲಾರದು..

                                 

ಮನದ ಭಾವಗಳ ತಿರುವುಗಳ ಪ್ರತಿನಿಧಿಯಾಗಿ,

ನಡೆದಷ್ಟೂ ದೂರಕೆ…ಕನಸುಗಳಾ ಮೆರವಣಿಗೆ…

(ಬೆಟ್ಟದ ತುದಿಯಲ್ಲಿ ನಿಂತು ಸಾಗೋ ಹಾದಿಯ ಸೊಬಗ ಸವಿಯೋವಾಗ)

ಬಾಬಾಬುಡನ್ ಗಿರಿಯಿಂದ ಚಿಕ್ಕಮಗಳೂರಿಗೆ ಅಪರೂಪಕ್ಕನ್ನೋ ತರಹ ಖಾಸಗಿ ಸಾರಿಗೆಯ ವ್ಯವಸ್ಥೆಯಿದೆ… ಬೆಳಿಗ್ಗೆ ೮ಕ್ಕೆ ಚಿಕ್ಕಮಗಳೂರ ಬಿಡೋ ಏಕೈಕ ಬಸ್ಸೇ ಎಲ್ಲಾ ಪ್ರವಾಸಿಗರ ಹೊತ್ತು ತರೋದು… ಚಂದದ ದಾರಿಯಲ್ಲಿ ಗಿರಿಯ ಹತ್ತೋ ಕನಸ ಕಾಣೋವಾಗ್ಲೇ ಬಂದಿರುತ್ತೆ ಚಾರಣದ ಪ್ರದೇಶ.. ಅಲ್ಲಲ್ಲಿ ಸಿಗೋ ಕಾಫಿ ಎಸ್ಟೇಟ್‌ಗಳ ಕಾಫಿ ಪರಿಮಳವ ಹೀರಿಕೊಂಡು ಮುಂದೆ ಮುಂದೆ ಸಾಗಬೇಕು… ತಿರುವಿನ ಹಾದಿಯಲ್ಲಿ ಮನದ ತಿರುವುಗಳ, ಭಾವಗಳ ಜಾತ್ರೆಗಳ ದ್ವಂದ್ವದ ಅನಾವರಣ… ಪಕ್ಕದಲ್ಲಿ ಕುಳಿತಿರೋ ಗೆಳೆಯನ ಇನ್ಯಾವುದೋ ಭಾವಗಳ ಜೊತೆ ಅರ್ಧ ಸೇರಿ ಅಲ್ಲೊಂದಿಷ್ಟು ಗೋಜಲುಗಳು ಜಾಸ್ತಿಯಾಗಿ ಎಲ್ಲವನೂ ಆ ತಿರುವಲ್ಲೆ ಬಿಟ್ಟು ಮುನ್ನಡೆದರೇ ಮುಂದಿನ ಯಾವುದೋ ತಿರುವಲ್ಲಿ ಮತ್ತವೇ ಸ್ವಾಗತಿಸುತ್ತೆ.. ಹೀಗೇ ಒಂದಿಷ್ಟು ತಿರುವುಗಳಲ್ಲೂ ಬದುಕಿದೆ ಅನಿಸಿಬಿಡುತ್ತೆ….

ಸಂತೆಯ ಮಧ್ಯೆಯೂ ಒಂಟಿ ಅನಿಸೋ ಭಾವಗಳ ಹುಡುಕಾಟಕ್ಕೊಂದು ಬ್ರೇಕ್ ಕೊಟ್ಟು, ಧೂಳಾದ ಮನಕ್ಕೊಂದು ಉಡುಗರೆಯ ಕೊಡೋ ಬೆಚ್ಚಗಿನ ನೆನಪುಗಳು ಆ ಚಳಿಯ ಊರಲ್ಲಿ..

ಅಚ್ಚ ಹಸಿರು, ಖುಷಿಯ ನಿಟ್ಟುಸಿರು… ಒಲವಿದೆ, ಕನಸಿದೆ.. ಕಲ್ಪನೆಯಿದೆ… ಕೊನೆಗೆ ವಾಸ್ತವವೂ ಇದೆ… ಗಿರಿಯನೇರಿ ಪ್ರಾಮಾಣಿಕವಾಗಿ ನಾವಂದುಕೊಂಡಿದ್ದು  "ಇರುವುದೊಂದೇ ಭೂಮಿ.. ಅದು ನಮ್ಮೆಲ್ಲರ ಮನೆ… ಸಂರಕ್ಷಿಸಿ…. ಸಂಶೋಧಿಸಿ… ಪೋಷಿಸಿ…"

ತಿರುವು…. ಒಲವು… ಮರೆವು… ಚಿಕ್ಕಮಗಳೂರು…..

   

   ಏಕತಾನತೆಯ ಸೊಬಗಿದೆ ಇಲ್ಲಿ …

   ಜೊತೆಗೆ ನಮ್ಮವರಿದ್ದಾಗ ಎಂತಹ ಬೆಟ್ಟವೂ ಕಾಲ ಬುಡದಲ್ಲಿರುತ್ತೆ ..

   ಚಂದಾ ಚಂದ ಈ ಪ್ರಕೃತಿ …

ಅನುಭವವ ಹೇಳೋದು ಕಷ್ಟ.. ಅದ ಅನುಭವಿಸಿಯೇ ಕೊನೆಗೊಮ್ಮೆ ಅನುಭಾವಿಸಿಯಾದ್ರೂ ತೀರಬೇಕು…

ನೋಡಬನ್ನಿ ಮಲೆನಾಡ ಚಂದ ಚಂದದ ಸ್ಥಳಗಳ… ಖುಷಿಸೀತು ಮನ, ದೇಹ ಎರಡೂ…

ಒಂದಿಷ್ಟು ಮಧುರ ನೆನಪುಗಳ ಹೊತ್ತು ತನ್ನಿ…

ಗಿರಿಯ ತಟದಿಂದ ಚಿಕ್ಕಮಗಳೂರ ಕೊನೆಯ ತನಕ ಒಂದು ಚಂದದ ವಾರಾಂತ್ಯ ನಿಮ್ಮದೂ ಆಗಲಿ ಅನ್ನೋ ಭಾವದೊಂದಿದೆ…

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಮಂಜಿನ ಮುಸುಕಲ್ಲೂ ಮಾಸದ ಸ್ನೇಹ ಪಯಣ: ಭಾಗ್ಯ ಭಟ್

 1. ತುಂಬಾ ಚೆನ್ನಾಗಿದೆ.

  ನಿಜ, ಅನುಭವ ಹೇಳೋದು ಕಷ್ಟ ಅದೇ ರೀತಿ ಕೇಳೊದೂ ಕಷ್ಟ ಕಣ್ರೀ ಅದನ್ನ ಅನುಭವಿಸಿಯೇ ತೀರಬೇಕು.

  ಶುಭವಾಗಲಿ.

  1. ಆ ದಿನವನ್ನು… ಅಲ್ಲಿನ ಮಂಜನ್ನ…. ಕಳೆದ ರಾತ್ರಿಯನ್ನ…..

   ಹರಟೆಯ ಮಜವನ್ನ… ಯಾವಾಗ ಬೇಳಕು ಹರಿಯುತ್ತೋ ಅನ್ನೋ ನಿರೀಕ್ಷೆಯನ್ನ….

   ಕೆಲವು ಕಾಂಟ್ರಾವರ್ಸಿಗಳು… ಕೆಲವಿಷ್ಟು ನಮ್ಮ ತನಗಳು…. ಪ್ರೀತಿಗಳು…

   ನಮ್ಮ ಅಷ್ಟು ದೊಡ್ಡ ಗುಂಪಿನಲ್ಲಿನ ಹತ್ತು ಬೇರೆ ಬೇರೆ ರೀತಿಯ ಮನುಷ್ಯರನ್ನ…

   ಮರೆಯಲಾದೀತೇ….. ತುಂಬಾ ಒಳ್ಳೆಯ ಅನುಭವ ಅದು…..

 2. ಎಷ್ಟು ಚಂದ ಬರೀದ್ಯೆ…… ಓದುತ್ತಾ ಓದ್ತಾ ಸುಮಾರು ಹೊತ್ತು ಕಳೆದುಹೋಗಿಬಿಟ್ಟೆ….

Leave a Reply

Your email address will not be published. Required fields are marked *