ಮಂಗಳ ಗ್ರಹದ ಕಕ್ಷೆ ಪ್ರವೇಶಿಸಿದ ’ಮಂಗಳಯಾನ’ : ಜೈಕುಮಾರ್.ಹೆಚ್.ಎಸ್,


ಮಂಗಳ ಗ್ರಹದಲ್ಲಿ ಕೋಟ್ಯಾಂತರ ವರ್ಷಗಳ ಹಿಂದೆ ಜೀವಿಗಳು ಇದ್ದುವೇ? ಜೀವಿಗಳ ಇರುವಿಕೆಗೆ ಕಾರಣವಾಗಿರುವ ಮಿಥೇನ್ ಯಾವ ಪ್ರಮಾಣದಲ್ಲಿ ಅಲ್ಲಿದೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸೇರಿದಂತೆ ಭೂಮಿಯಿಂದ ಇತರೆ ಗ್ರಹಗಳಿಗೆ ಉಪಗ್ರಹ ರವಾನಿಸಲು ಅವಶ್ಯವಿರುವ ತಂತ್ರಜ್ಞಾನವನ್ನು ಸ್ವತ: ಅಭಿವೃದ್ಧಿಪಡಿಸುವುದನ್ನು ಭಾರತ ಖಾತರಿಪಡಿಸಿಕೊಳ್ಳುವುದು ಮಂಗಳಯಾನ ಉಡಾವಣೆಯ ಉದ್ದೇಶ. 

ಭಾರತಕ್ಕೆ ಮೊದಲ ಯತ್ನದಲ್ಲೇ ಯಶಸ್ಸು:
ಇದೀಗ ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ತ್ರೋ) ತಯಾರಿಸಿದ್ದ ’ಮಂಗಳಯಾನ’ ಉಪಗ್ರಹವು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯನ್ನು ಪ್ರವೇಶಿಸಿ ಎಲ್ಲೆಡೆ ಹರ್ಷ ಮೂಡಿಸಿದೆ. ಭೂಮಿಯಿಂದ ಮಂಗಳ ಗ್ರಹದತ್ತ ಕಳೆದ ವರ್ಷ ನವೆಂಬರ್ ೫ರಂದು ತನ್ನ ಪ್ರಯಾಣ ಆರಂಭಿಸಿದ ಈ ನೌಕೆ ಒಟ್ಟು ೩೦೦ ದಿನಗಳ ಕಾಲ ೬೬ ಕೋಟಿ ಕಿ.ಮೀ ದೂರ ಬಾಹ್ಯಾಂತರಿಕ್ಷದ ಯಾನ ನಡೆಸಿ ಕೆಂಪುಗ್ರಹದ ಕಕ್ಷೆ ತಲುಪಿತು. ೨೦೧೪ ಸೆಪ್ಟೆಂಬರ್ ೨೪ ರ ಬೆಳಿಗ್ಗೆ ಹೊತ್ತಿಗೆ ಅದು ಮಂಗಳನ ಉತ್ತಮ ಗುಣಮಟ್ಟದ ಐದು ಛಾಯಾಚಿತ್ರಗಳನ್ನು ತೆಗೆದು ಕಳುಹಿಸಿದೆ. ಬೆಂಗಳೂರಿನ ಕೆಂಗೇರಿ ಬಳಿಯಿರುವ ಬ್ಯಾಲಾಳು ಆಂಟೇನಾ ಕೇಂದ್ರ, ಅಮೇರಿಕಾದ ಗೋಲ್ಡ್ ಸ್ಟೋನ್, ಸ್ಪೇನ್‌ನ ಮ್ಯಾಡ್ರಿಡ್, ಆಸ್ಟ್ರೇಲಿಯಾದ ಕ್ಯಾನ್‌ಬೆರಾ ಕೇಂದ್ರಗಳು ಏಕಕಾಲಕ್ಕೆ ಈ ಉಪಗ್ರಹದ ಸಂಕೇತಗಳನ್ನು ಸ್ವೀಕರಿಸಿವೆ.  
ಸೋವಿಯತ್ ರಷ್ಯಾ, ಅಮೇರಿಕಾ, ಮತ್ತು ಯೂರೋಪ್ ನಂತರ ಮಂಗಳ ಪ್ರವೇಶ ಮಾಡಿದ ರಾಷ್ಟ್ರವಾಗಿದ್ದರೂ ಮೊದಲ ಯತ್ನದಲ್ಲಿಯೇ ಯಶಸ್ಸುಗಳಿಸಿದ್ದು ಭಾರತದ ಹೆಗ್ಗಳಿಕೆ ಎನ್ನಲಾಗುತ್ತಿದೆ. ಈ ಉಪಗ್ರಹ ಯೋಜನಾ ವೆಚ್ಚ ಕೇವಲ ರೂ. ೪೫೦ ಕೋಟಿ. ನಮ್ಮ ದೇಶದಲ್ಲಿಯೇ ಸಂಶೋಧನೆ ನಡೆಸಿ ಸ್ವಾವಲಂಬಿಯಾಗಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದಲ್ಲಿ ಬಲು ಅಗ್ಗವಾಗಿ ಏನೆಲ್ಲಾ ಲಭ್ಯವಾಗಬಹುದು ಎನ್ನುವುದಕ್ಕೆ ಇದೇ ಸಾಕ್ಷಿ. ಇಂಥದೇ ಉಪಗ್ರಹ ತಯಾರಿಸಲು ಇತರೇ ದೇಶಗಳು ಸುಮಾರು ಇದಕ್ಕಿಂತಲೂ ೧೦ ಪಟ್ಟು ಹೆಚ್ಚು ಹಣ ವ್ಯಯಿಸಿವೆ. ಆದರೂ ಮಂಗಳಯಾನ ಉಪಗ್ರಹದ ಉಡಾವಣೆಯನ್ನು ವಿಮರ್ಶೆಯಿಂದ ನೋಡುವುದು ಅಗತ್ಯವಿದೆ.

 

ಈ ಸಾಧನೆಯಿಂದ ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿದೆಯೇ?
ಮಂಗಳಯಾನ ಉಪಗ್ರಹವನ್ನು ಹೊತ್ತೊಯ್ಯಲು ಭಾರತವು ಬಳಸಿದ ರಾಕೆಟ್ ಪಿಎಸ್‌ಎಲ್‌ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಎಂಬುದು. ಇದು ಮತ್ತೊಂದು ಭಾರಿ ತೂಕದ ರಾಕೆಟ್ ’ಜಿಎಸ್‌ಎಲ್‌ವಿ’ (ಜಿಯೋಸ್ಟೇಷನರಿ ಸ್ಯಾಟಲೈಟ್ ಲಾಂಚ್ ವೆಹಿಕಲ್) ಗಿಂತ ಕಡಿಮೆ ತೂಕದ್ದು. ಪಿಎಸ್‌ಎಲ್‌ವಿ ರಾಕೆಟ್ ಬಹಳ ಹಗುರ ಪೇ-ಲೋಡ್ ನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಭೂಮಿಯ ಕೆಳಮಟ್ಟದ ಕಕ್ಷೆಗಳನ್ನು ಮಾತ್ರವೇ ತಲುಪುತ್ತದೆ. ಇದಕ್ಕೆ ಹೋಲಿಸಿದರೆ, ಟಿವಿ, ಟೆಲಿಪೋನ್, ಇತ್ಯಾದಿಗಳಿಗೆ ಅವಶ್ಯವಿರುವ ಸಂವಹನ ಉಪಗ್ರಹಗಳನ್ನು ಎತ್ತರದ ಕಕ್ಷೆಗಳಿಗೆ ಹೆಚ್ಚಿನ ತೂಕದ ಪೇ-ಲೋಡ್ ನಲ್ಲಿ ತಲುಪಿಸಬೇಕು. ಆದರೆ, ಇಸ್ತ್ರೋ ಸಂಸ್ಥೆಯು ಇನ್ನೂ ಕೂಡ ಜಿಎಸ್‌ಎಲ್‌ವಿ ಬಳಕೆಯಲ್ಲಿ ಪೂರ್ಣ ಪ್ರಮಾಣದ ಯಶಸ್ಸು ಕಂಡಿಲ್ಲವಾದ್ದರಿಂದ ಅಂತಹ ತೂಕದ ಉಪಗ್ರಹಗಳ ಉಡಾವಣೆಗೆ ಯೂರೋಪ್ ಅಥವಾ ರಷ್ಯಾ ದೇಶಗಳನ್ನು ಅವಲಂಬಿಸಿದೆ. ಇದೇ ಕಾರಣದಿಂದಾಗಿ ಬಹುಬೇಡಿಕೆ ಇರುವ ’ತೂಕದ ಉಪಗ್ರಹ’ ಉಡಾವಣೆ ಮಾಡುವ ಮಾರುಕಟ್ಟೆಯಲ್ಲಿ ಇಸ್ತ್ರೋ ಯಶಸ್ಸು ಕಂಡಿಲ್ಲ. 

ಇದೇ ವೇಳೆಯಲ್ಲಿ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕಳುಹಿಸಿರುವ ’ಮಾವೆನ್’ ಎಂಬ ಹೆಸರಿನ ಉಪಗ್ರಹ ಕೂಡ ಮಂಗಳ ಗ್ರಹವನ್ನು ತಲುಪಿದೆ. ಮಾವೆನ್ ಉಪಗ್ರಹವು ಮಂಗಳ ಗ್ರಹದ ಮೇಲ್ಮೈ ವಾತಾವರಣವನ್ನು ವಿಶೇಷವಾಗಿ ಅಧ್ಯಯನ ನಡೆಸಲು ಸಹಕಾರಿಯಾಗಿದೆ. ಕನಿಷ್ಟ ೧ ವರ್ಷ ಜೀವಿತಾವಧಿ ಹೊಂದಿರುವ ೨,೫೦೦ಕೆಜಿ ತೂಕದ ಮಾವೆನ್ ಉಪಗ್ರಹವು  ೬೫ಕೆಜಿ ತೂಕದ ಉಪಕರಣಗಳನ್ನು ಹೊಯ್ದಿದ್ದು ಮಂಗಳಗ್ರಹದಿಂದ ಸುಮಾರು ೧೫೦ ಕಿ.ಮೀ ದೂರದಲ್ಲಿದ್ದು, ಕೇವಲ ೪.೫ ಘಂಟೆಯಲ್ಲಿ ಪ್ರತಿ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ೬ ತಿಂಗಳಿಗಿಂತ ಕಡಿಮೆ ಆಯುಷ್ಯ್ಟ ಹೊಂದಿರುವ ೧,೩೩೬ಕೆಜಿ ತೂಕದ ಮಂಗಳಯಾನ್ ಉಪಗ್ರಹವು ಕೇವಲ ೧೫ ಕೆಜಿ ತೂಕದ ಉಪಕರಣಗಳನ್ನು ಹೊಯ್ದಿದ್ದು ಮಂಗಳ ಗ್ರಹದಿಂದ ಸುಮಾರು ೩೭೭ ಕಿ.ಮೀ ದೂರದಲ್ಲಿದ್ದು, ೩ ದಿನಗಳಲ್ಲಿ ಪ್ರತಿ ಕಕ್ಷೆಯನ್ನು ಪೂರೈಸುತ್ತದೆ. ಹಗುರ ರಾಕೆಟ್ ಆದ್ದರಿಂದ ಪಿಎಸ್‌ಎಲ್‌ವಿ ಯು ಮಾವೆನ್ ರೀತಿಯಲ್ಲಿ ನೇರವಾಗಿ ಮಂಗಳಕ್ಕೆ ಜಿಗಿಯದೆ ಭೂಮಿಯನ್ನು ಸುತ್ತಿಕೊಂಡು ಮಂಗಳ ತಲುಪಿದೆ. ಮಂಗಳಯಾನ್ ಮತ್ತು ಮಾವೆನ್ ಎರಡೂ ಉಪಗ್ರಹಗಳು ನೀಡುವ ಮಂಗಳ ಗ್ರಹದ ವಿವರಗಳನ್ನು ಒಗ್ಗೂಡಿಸಿ ಅಧ್ಯಯನ ನಡೆಸಲಾಗುತ್ತದೆ.

ಹಲವು ಹಂತಗಳಲ್ಲಿ ಬಾಹ್ಯಾಕಾಶ ನೌಕೆಯ ಪಯಣ:
ಪಿಎಸ್‌ಎಲ್‌ವಿ ಎಂಬ ಭಾರತದ ನಂಬಿಕಸ್ತ ರಾಕೆಟ್ (ಇಂಧನವೂ ಸೇರಿದಂತೆ) ಒಟ್ಟು ತೂಕ ೧೩೫೦ ಕೆಜಿ. ಇದರಲ್ಲಿ ಉಪಕರಣಗಳ ತೂಕ ೧೫ ಕೆಜಿ. ಉಪಗ್ರಹ ಉಡಾವಣೆಯಲ್ಲಿ ಹಲವು ಹಂತಗಳಿದ್ದು, ಮೊದಲಿಗೆ ಉಡಾವಣೆ, ನಂತರ ಭೂಮಿಯ ಸುತ್ತಲೂ ಉಪಗ್ರಹ ದೀರ್ಘ ಕಕ್ಷೆಯಲ್ಲಿ ಸುತ್ತಿ, ವೇಗವನ್ನು ಹೆಚ್ಚಿಸಿಕೊಳ್ಳುತ್ತದೆ. ಆಗ ಅಂತರಿಕ್ಷದಾಳಕ್ಕೆ ಮತ್ತಷ್ಟು ಜಿಗಿದು ಸೂರ್ಯ-ಕೇಂದ್ರಿತ ಕಕ್ಷೆಯ ಮೂಲಕ ಉಪಗ್ರಹವು ಮಂಗಳ ಗ್ರಹದ ಗುರುತ್ವ ಪ್ರಭಾವಕ್ಕೆ ಬರುತ್ತದೆ. ನಂತರ ನೌಕೆಯನ್ನು ಮಂಗಳದ ನಿಗಧಿತ ಪಥದಲ್ಲಿ ಅಳವಡಿಸುವುದು, ಇತ್ಯಾದಿ..

ಈ ಸುಧೀರ್ಘ ಪಯಣದ ಹಾದಿಯಲ್ಲಿ ಸುಮಾರು ಆರು ಹಂತಗಳ ಪ್ರಕ್ರಿಯೆ ನಡೆಸಲಾಗಿತ್ತು. ನೌಕೆಯು ನಿಗಧಿತ ಪಥದಲ್ಲಿ ಸಂಚರಿಸುವಂತೆ ಮಾಡುವ ಪಥ ಸರಿಪಡಿಸುವಿಕೆ ಕಾರ್ಯವನ್ನು ಇದುವರೆಗೆ ನಾಲ್ಕು ಹಂತಗಳಲ್ಲಿ ಪೂರೈಸಲಾಗಿದೆ. ಸುಮಾರು ೩೦೦ ದಿನಗಳ ಕಾಲ ಬಳಸದೇ ಇದ್ದ ಮುಖ್ಯ ದ್ರವ ಎಂಜಿನ್‌ನ್ನು ಮೊನ್ನೆ ಸೋಮವಾರ ಪರೀಕ್ಷಾರ್ಥವಾಗಿ ನಾಲ್ಕು ಸೆಕೆಂಡುಗಳ ಕಾಲ ಉರಿಸಲಾಗಿತ್ತು. 
ಭೂಮಿಯಿಂದ ನೌಕೆಯ ಮಂಗಳ ಕಕ್ಷೆಗೆ ಇರುವ ’ರೇಡಿಯೋ ದೂರ’ ಸುಮಾರು ೨೧.೫ ಕೋಟಿ ಕಿ.ಮೀ. ಇಷ್ಟು ದೂರಕ್ಕೆ ಸಂಕೇತಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಕಳುಹಿಸಲು ಸುಮಾರು ೬ ನಿಮಿಷ ಬೇಕು. ಮಂಗಳ ನೌಕೆಯಲ್ಲಿರುವ ಸೌರಫಲಕಗಳು ತಾವೇ ಬಿಚ್ಚಿಕೊಂಡು ೮೪೦ ವ್ಯಾಟ್‌ಗಳಷ್ಟು ವಿದ್ಯುತ್ ಶಕ್ತಿಯನ್ನು ಸೂರ್ಯನ ಬೆಳಕಿನಲ್ಲೇ ಉತ್ಪಾದಿಸುತ್ತವೆ. ಈ ಉಪಗ್ರಹವನ್ನು ಸದ್ಯಕ್ಕೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ತ್ರೋ ಸಂಸ್ಥೆಯ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮ್ಯಾಂಡ್ ನೆಟ್‌ವರ್ಕ್ ಕೇಂದ್ರವು ಬ್ಯಾಲಾಳು ಆಂಟೇನಾ ಕೇಂದ್ರದ ನೆರವಿನೊಂದಿಗೆ ನಿಗಾವಹಿಸಿ ನಿರ್ವಹಿಸುತ್ತಿದೆ. ಈ ನೌಕೆಯು ಸುಮಾರು ೬ ರಿಂದ ೧೦ ತಿಂಗಳು ಮಾತ್ರವೇ ನಿಗಧಿತ ಕಕ್ಷೆಯಲ್ಲಿದ್ದು ನಮ್ಮ ಸಂಪರ್ಕದಲ್ಲಿರುತ್ತದೆ. ಆಮೇಲೆ ಈ ಉಪಗ್ರಹದಲ್ಲಿರುವ ಇಂಧನ ಮುಗಿದು ಹೋಗುತ್ತದೆ. 

ಮಂಗಳಯಾನದ ಉಪಗ್ರಹದಲ್ಲಿ ಏನೇನು ಉಪಕರಣಗಳಿವೆ?

ಮಂಗಳ ಗ್ರಹದ ವಾಯುಮಂಡಲದ ಅಧ್ಯಯನ ಮಾಡುವ ಉಪಕರಣಗಳು:
ಲೈಮನ್ ಅಲ್ಫಾ ಪೋಟೋಮೀಟರ್ (೧.೯೭ ಕೆಜಿ): ಇದು ಮಂಗಳ ಗ್ರಹದ ಮೇಲಿರುವ ಜಲಜನಕ ಮತ್ತು ಡ್ಯುಟಿರಿಯಂ ಮೂಲಧಾತುಗಳನ್ನು ಅಳೆಯುತ್ತದೆ, ಇದರಿಂದ ಮಂಗಳನಲ್ಲಿನ ನೀರಿನ ಕುರಿತು ತಿಳಿಯಬಹುದು.

ಮಿಥೇನ್ ಸೆನ್ಸರ್ ಫಾರ್ ಮಾರ್‍ಸ್ (೨.೯೪ ಕೆಜಿ): ಇದು ಮಂಗಳನಲ್ಲಿರುವ ಮಿಥೇನ್ ಅನಿಲವನ್ನು ಪತ್ತೆ ಮಾಡುವುದಲ್ಲದೆ, ಅಲ್ಲಿರುವ ಯಾವುದೇ ವಿಕಿರಣಶೀಲ ವಸ್ತುಗಳ ಬೆಳಕನ್ನು ಈ ಸೆನ್ಸರ್‌ಗಳು ಗ್ರಹಿಸಿ ನಮಗೆ ತಿಳಿಸುತ್ತವೆ.

ಮಂಗಳದಲ್ಲಿನ ಖನಿಜಾಂಶಗಳ ಅಧ್ಯಯನಕ್ಕಾಗಿ:
ಮಾರ್‍ಸ್ ಎಕ್ಸೋಸ್ಪೆರಿಕ್ ನ್ಯೂಟ್ರಲ್ ಕಾಂಪೋಜಿಷನ್ ಅನಲೈಸರ್ (೩.೫೬ ಕೆಜಿ): ಈ ಉಪಕರಣವು ಮಂಗಳ ಗ್ರಹದ ಮೇಲ್‌ಪದರು, ರಚನೆ, ಇತ್ಯಾದಿ ಕುರಿತು ತಿಳಿಸುತ್ತದೆ.

ಮಂಗಳ ಗ್ರಹದ ಮೇಲ್ಪದರು ಅಧ್ಯಯನ ಮಾಡಲು:
ಮಾರ್‍ಸ್ ಕಲರ್ ಕ್ಯಾಮೆರಾ (೧.೨೭ ಕೆಜಿ): ಮೂರು ಬಣ್ಣಗಳ ಛಾಯಾಚಿತ್ರ ತೆಗೆಯಲ್ಲದು. ಇದರಲ್ಲಿರುವ ಶಕ್ತಿಶಾಲಿ ಮಸೂರಗಳು ಈ ಗ್ರಹದ ಮೇಲ್ಪದರಿನ ಗುಣಲಕ್ಷಣಗಳು, ರಚನೆ, ವಾತಾವರಣ ಇತ್ಯಾದಿ ಕುರಿತು ಮಾಹಿತಿ ರವಾನಿಸುತ್ತವೆ. ಮಂಗಳನಿಗೆ ಪೋಬೋಸ್ ಮತ್ತು ಡಿಮೋಸ್ ಎಂಬ ಎರಡು ಉಪಗ್ರಹಗಳಿದ್ದು, ಅವುಗಳ ಚಿತ್ರಗಳನ್ನೂ ಈ ಕ್ಯಾಮೆರಾ ಕಳುಹಿಸುತ್ತದೆ. 

ಥರ್ಮಲ್ ಇನ್‌ಫ್ರಾ ರೆಡ್ ಇಮೇಜಿಂಗ್ ಸ್ಪೆಕ್ಟ್ರೋಮೀಟರ್ (೩.೨ ಕೆಜಿ): ಇದು ಮಂಗಳ ಗ್ರಹದ ಉಷ್ಣತೆಯನ್ನು ನಿರಂತರವಾಗಿ ದಾಖಲಿಸುತ್ತಾ ಅಲ್ಲಿನ ಮಣ್ಣು, ಖನಿಜಗಳ ಕುರಿತು ಮಾಹಿತಿ ಕಳುಹಿಸುತ್ತದೆ. 

ಏನೇ ಆಗಲಿ, ಮಂಗಳಯಾನದ ಯಶಸ್ಸು ನಮ್ಮ ಮುಂದೆ ಮತ್ತದೇ ಪ್ರಶ್ನೆಗಳನ್ನು ಇಡುತ್ತದೆ: ಬಾಹ್ಯಾಕಾಶ ಸಂಶೋಧನೆ ಮತ್ತು ಅಣು ಸಂಶೋಧನೆಯಲ್ಲಿ ನಮ್ಮ ವಿಜ್ಞಾನಿಗಳು ಸ್ವಾವಲಂಬಿಯಾಗಿ ಯಶಸ್ಸು ಗಳಿಸುತ್ತಿರುವಂತೆಯೇ ರಕ್ಷಣಾ ರಂಗದಂತಹ ಇತರೆ ವಿಜ್ಞಾನ ಶಾಖೆಗಳಲ್ಲಿ ವಿಫಲಗೊಂಡು ಆಮದು ಮಾಡಿಕೊಳ್ಳುತ್ತಿದೆ? ನಮ್ಮ ವಿಜ್ಞಾನ ಸಂಶೋಧನಾ ಸಂಸ್ಥೆಗಳಿಗೆ ಅವಶ್ಯ ಸ್ವಾಯತ್ತತೆ ಮತ್ತು ಅನುದಾನವನ್ನು ಏಕೆ ನೀಡುತ್ತಿಲ್ಲ? ವಿಜ್ಞಾನ ಸಂಶೋಧನೆಗೆ ಜಿಡಿಪಿಯಲ್ಲಿ ಶೇ. ೧ಕ್ಕಿಂತಲೂ ಕಡಿಮೆ ಅನುದಾನ ನೀಡಲಾಗುತ್ತಿದೆ ಏಕೆ? ಭಾರತದ ಮುಂದಿನ ಏಳಿಗೆ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಲ್ಲಿದೆ. 

*****

ಮಂಗಳನ ಕುರಿತ ಮೂಢನಂಬಿಕೆಗಳು:
ಪ್ರತಿಯೊಂದು ಧರ್ಮದಲ್ಲಿಯೂ ಗ್ರಹಗಳ ಕುರಿತಾಗಿ ಮೂಢನಂಬಿಕೆಗಳು, ಪುರಾಣಗಳು ದಟ್ಟವಾಗಿ ಹಬ್ಬಿವೆ. 

ಹಿಂದೂ ಪುರಾಣದ ಪ್ರಕಾರ, ಮಂಗಳನನ್ನು ಅಂಗಾರಕ ಎಂದು ಕರೆಯುತ್ತಾರೆ. ಕೈಲಾಸ ಪರ್ವತದಲ್ಲಿ ಶಿವನು ಧ್ಯಾನದಲ್ಲಿ ಮಗ್ನನಾಗಿದ್ದಾಗ ಅವನ ಹಣೆಯಲ್ಲಿ ಮೂಡಿದ ಮೂರು ಹನಿ ಬೆವರು ಭೂಮಿಗೆ ಬೀಳುವಾಗ ಕೆಂಪು ಬಣ್ಣದ ನಾಲ್ಕು ಕೈಗಳನ್ನು ಹೊಂದಿರುವ ಮಗುವಾಗಿತ್ತು. ಆದ್ದರಿಂದ ಇವನು ಭೂಮಿಯ ಮಗ, ಯುದ್ದಗಳ ದೇವತೆ! ಪಾರ್ವತಿ ಈ ಮಗುವನ್ನು ಬಿಗಿಯಾಗಿ ಬಿಗಿದಪ್ಪಿದ್ದರಿಂದ ಒಂದೇ ದೇಹದಲ್ಲಿ ಆರು ಮುಖಗಳಾಗಿ, ಹನ್ನೆರಡು ಕೈಗಳಾದವು. ಇವನೇ ಷಣ್ಮುಖ.

ಭಾರತದ ಜ್ಯೋತಿಷ್ಯಶಾಸ್ತ್ರದಲ್ಲಿ ‘ಮಂಗಳ ದೋಷ’ ಎಂಬುದಾಗಿ ಹೇಳಿ ಹಲವು ಗಂಡಾಂತರ ಆರೋಪಿಸಲಾಗುತ್ತದೆ ಮತ್ತು ಪರಿಹಾರಗಳನ್ನು ಸೂಚಿಸಲಾಗುತ್ತದೆ. ಜ್ಯೋತಿಷ್ಯ ವೇಳಾಪಟ್ಟಿಯಲ್ಲಿ ಮಂಗಳನು ೧, ೨, ೪, ೭, ೮, ಅಥವಾ ೮ನೇ ಮನೆ ಪ್ರವೇಶಿಸಿರುವ ಸಮಯದಲ್ಲಿ ಹುಟ್ಟಿದ ವ್ಯಕ್ತಿಯನ್ನು ‘ಮಂಗಳೀಕ’ ಎಂದು ಕರೆಯುತ್ತಾರೆ. ಈ ವ್ಯಕ್ತಿಗೆ ಮದುವೆಯು ಅಮಂಗಳಕರವಾಗಿದ್ದು, ವಿವಾಹ ಸಂಬಂಧದಲ್ಲಿ ಬಿರುಕು ಉಂಟಾಗಿ ಜೀವನದಲ್ಲಿ ದೊಡ್ಡ ಕಷ್ಟಗಳು ಉಂಟಾಗುತ್ತವೆ ಎನ್ನುತ್ತಾರೆ. ಅಲ್ಲದೆ ದಂಪತಿಗಳಿಬ್ಬರೂ ಮಂಗಳೀಕರಾಗಿದ್ದಲ್ಲಿ ಎರಡೂ ಕೆಟ್ಟ ಅಂಶಗಳು ಪರಸ್ಪರ ರದ್ದಾಗುತ್ತವೆ ಎನ್ನುತ್ತಾರೆ! ಬಾಳೆ ಮರ ಅಥವಾ ವಿಷ್ಣುವಿನ ವಿಗ್ರಹವನ್ನು ಮಂಗಳೀಕ ಮದುವೆಯಾದರೆ ಅದನ್ನು ’ಕುಂಭ್ ವಿವಾಹ್’ ಎಂದು ಕರೆಯುವುದಿದ್ದು, ಮಂಗಳೀಕನಿಗೆ ಉಂಟಾದ ವಿವಾಹ ಸಂಕಷ್ಟವನ್ನು ಇದರಿಂದ ಪರಿಹರಿಸಬಹುದಂತೆ!

ಮಂಗಳ ಗ್ರಹದಿಂದ ಬಂದಿಳಿದಿರುವ ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಧಾಳಿಯಿಟ್ಟಿದ್ದು ಈಗಾಗಲೇ ನ್ಯೂಯಾರ್ಕ್ ನಗರವನ್ನು ವಶಕ್ಕೆ ತೆಗೆದುಕೊಂಡಿವೆ ಎಂದು ೧೯೩೮ ರಲ್ಲಿ ಪೋರ್ಚುಗಲ್ ದೇಶದ ನಗರವೊಂದರ ರೇಡಿಯೋ ಕೇಂದ್ರವೊಂದು ಬಿತ್ತರಿಸಿತ್ತು. ಇದರಿಂದ ಇಡೀ ನಾಗರೀಕರು ಭಯಭೀತರಾಗಿ ದಿಕ್ಕಾಪಾಲಾಗಿದ್ದರು.!! 

  ಇಂತಹ ಅನೇಕ ವಿಷಯಗಳಿವೆ. ಆದರೆ ಈಗ ಭಾರತದ ಉಪಗ್ರಹ ಮಂಗಳನ ಕಕ್ಷೆ ಸೇರಿ, ಮಂಗಳನ ಮೇಲೆ ಇಳಿದು ಸಂಶೋಧನೆ ನಡೆಸುತಿರುವ ಹೊತ್ತಲ್ಲಾದರೂ ಮಂಗಳ ಗ್ರಹದ ಬಗೆಗೆ ಇರುವ ಅನಗತ್ಯ ಭೀತಿ, ತಪ್ಪು ಕಲ್ಪನೆ ಹೋಗಲಾಡಿಸುವ ಪ್ರಯತ್ನ ನಡೆಯುವುದೋ ನೋಡಬೇಕು.  ಈ ನಿಟ್ಟಿನಲ್ಲಿ ನಮ್ಮ ದೂರದರ್ಶನ ಚಾನೆಲ್‌ಗಳು ಮಂಗಳ ಯಾನದ ಕುರಿತು ಏನು ತೋರಿಸುತ್ತವೆ ಎಂಬುದು ಮುಖ್ಯ.  ಈ ಸಂದರ್ಭದ ಚರ್ಚೆಗೆ ಕೂಡ ಒಬ್ಬ ಅರೆಬರೆ ವಿಜ್ಞಾನಿ, ನಾಲ್ಕು ಜನ ಜೋತಿಷಿಗಳನ್ನು ಕರೆತಂದು ಚರ್ಚೆ ನಡೆಸಿದರೂ ಆಶ್ಚರ್ಯವಿಲ್ಲ. ವಿಜ್ಞಾನ ಇಂತಹ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಿ ಬೆಳೆಯಬೇಕಿದೆ.      

***********

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x