ಮಧ್ಯರಾತ್ರಿಯ ಹೊತ್ತು, ಹೊರಗೆ ನಾಯಿಗಳ ಕೆಟ್ಟ ಕೂಗು. ಕೇಳಲು ಹಿಂಸೆ ಅನಿಸುತ್ತಿದೆ. ನರಳುತ್ತಿರುವ ಗಂಡ. ದಿನವೂ ಕುಡಿದು ಬಂದು ಹಿಂಸೆ ಮಾಡುತ್ತಿದ್ದ ಮನುಷ್ಯ. ಅವನನ್ನು ಉಳಿಸಿಕೊಳ್ಳುವುದು ಅಸಾಧ್ಯ ಅನ್ನಿಸುತ್ತಿದೆ. ಅವನು ಕುಡಿದುಬಂದಿರುವುದರಲ್ಲಿ ಏನಾದರು ಬೆರೆತಿತ್ತೋ ಏನೋ ತಿಳಿದಿಲ್ಲ. ಅಥವಾ ಡಾಕ್ಟರ್ ಹೇಳಿದಂತೆ ಅವನು ಕುಡಿತ ನಿಲ್ಲಿಸದ ಕಾರಣದಿಂದ ಅವನ ಅಂಗಾಂಗಗಳು ತೊಂದರೆ ಆಗಿವೆಯೇನೋ. ಏನು ಮಾಡಲೂ ತೋಚುತ್ತಿಲ್ಲ ಅವಳಿಗೆ. ಹೆಸರಲ್ಲಷ್ಟೇ ಮಂಗಳ ಎಂದು ಉಳಿದಿತ್ತು. ಬೇರೆಲ್ಲವೂ ಅವಳಿಗೆ ಜೀವನದಲ್ಲಿ ಅಮಂಗಳವೇ.
ಅವಳ ಜೀವನ ಹೀಗೆಯೇ 22 ವರ್ಷದಿಂದ ನಡೆದು ಬಂದಿದೆ. ಅವನು ಕೊಡುವ ಹಿಂಸೆ ಅವಳಿಗೆ ಜೀವನದ ಒಂದು ಪಾಲು ಆಗಿದೆ. ಸರ್ಕಾರೀ ನೌಕರಿಯಲ್ಲಿರುವ ಗಂಡು ಎಂದು ಹೇಳಿ ಮದುವೆಯಾದ ಸಂಭ್ರಮದಿಂದ ಶುರುವಾದ ಅವನೊಡನೆಯ ಜೀವನ ಇಂದು ಈರೀತಿಯಿಂದ ನಡೆಯಿತ್ತಿದೆ. ಇಂತಹ ನರಕದಲ್ಲೇ ಎರಡು ಮಕ್ಕಳು ಹುಟ್ಟಿದವು. ಅವನ ಹೊಲಸು ಮಾತನ್ನು ಸಹಿಸದೆ ಅವನ ಹೆತ್ತವರು ಅವನ ತಮ್ಮನ ಮನೆಯಲ್ಲಿಯೇ ಉಳಿದುಕೊಂಡರು. ಇನ್ನು ಮಕ್ಕಳು ಅವನನ್ನು ಸಹಿಸಿಕೊಂಡು ಬೆಳೆಯುವಂತೆ ಅವಳೇ ತುಂಬ ಎಚ್ಚರ ವಹಿಸಿಕೊಂಡಳು. ಆದರೂ ಅವಳನ್ನು ಹೊಡೆಯುವಾಗ ಅವಳ ಮಗ ಬಹಳಷ್ಟು ಬರಿ ಯೋಚಿಸಿದ್ದ ಅಪ್ಪನನ್ನು ಕೊಂದರೆ ಏನು ತಪ್ಪಿಲ್ಲವೆಂದು. ಆದರೆ ಅವಳು ತಾಯಿಯಾಗಿ ಮಕ್ಕಳಿಗೆ ಅವನ ಮೇಲೆ ಗೌರವ ಕೊಡಲೇ ಬೇಕೆಂದು ಬಹಳಷ್ಟು ತರಹದಲ್ಲಿ ಅವರಿಗೆ ಮನಸ್ಸಿಗೆ ಬರುವಹಾಗೆ ತಿಳಿಹೇಳುತ್ತಿದ್ದಳು. ತಾಯಿಯ ಮಾತನ್ನು ಗೌರವಿಸುವ ಮಕ್ಕಳು ಅವನಿಗೆ ಏನು ಹೇಳದೆ ಸುಮ್ಮನಿರುತ್ತಿದ್ದರು. ಆದರೆ ಹಿರಿಯ ಮಗ ಮಹೇಶ ತನ್ನ ತಂದೆಯ ನಡವಳಿಕೆಯಿಂದ ಬಹಳಷ್ಟು ನೊಂದಿದ್ದ. ಕುಟುಂಬದ ಎಲ್ಲ ಜವಾಬ್ದಾರಿಯನ್ನು ವಹಿಸಿ ಎಲ್ಲರನ್ನು ಅಷ್ಟೊಂದು ಕಾಳಜಿ ವಹಿಸಿದ್ದ ತಾಯಿಯನ್ನು ಹಿಂಸೆ ಮಾಡುವ ಯಾರನ್ನು ಅವನು ಸುಮ್ಮನೆ ಬಿಡುವಂಥವನಾಗಿರಲಿಲ್ಲ. ಆದರೆ ಅವನ ತಾಯಿ ಅವನನ್ನು ಏನು ಮಾಡದಂತೆ ನಿಲ್ಲಿಸಿದ್ದಳು. ಕಿರಿಯ ಮಗ ನರೇಶ ಯಾರ ಮಾತನ್ನು ಕೇಳುವಂಥವನಲ್ಲ. ವಯಸ್ಸಿನಲ್ಲಿ ಕಿರಿಯವನಾದ್ದರಿಂದ ಹಠವು ಹೆಚ್ಚು. ಅವನು ತನ್ನ ಅಪ್ಪನನ್ನು ಎಂದು ಕೊಂದುಬಿಡುವನೋ ಅಂದು ಮಂಗಳ ಆತಂಕಗೊಳ್ಳುತ್ತಿದ್ದಳು. ಅವನನ್ನು ಹೇಗೂ ಸಮಾಧಾನ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.
ಅಂದಿನ ರಾತ್ರಿಯಂತೂ ತುಂಬ ಹೆಚ್ಚಾಗಿಯೇ ನರಳುತ್ತಿದ್ದ ಗಂಡನನ್ನು ನೋಡಿ ಅವಳಿಗೆ ಮರುಕವಾಗಿತ್ತು. ಅವನು ಏನೋ ಹೇಳಲು ಪ್ರಯತ್ನ ಮಾಡುತ್ತಿದ್ದ. ನಾಲಿಗೆ ತಿರುಗಲು ಕಷ್ಟವಾಗಿತ್ತು. ಅವನಿಗೆ ಉಸಿರಾಡಲು ತೊಂದರೆ ಆಗುತ್ತಿತ್ತು. ಅವನಿಗೆ ತನ್ನ ಸಾವು ಹತ್ತಿರ ಬಂದಿದೆ ಎಂದು ಅನ್ನಿಸುತ್ತಿತ್ತು. ಆ ಹೊತ್ತಿನಲ್ಲಿ ಮಕ್ಕಳು ಹಾಗು ಹೆಂಡತಿಯನ್ನು ನೋಡಿ ಅವನ ಮನಸ್ಸು ತುಂಬ ಸಂಕಟಗೊಂಡಿತ್ತು. ಇವರನ್ನು ಒಂದು ದಿನವಾದರೂ ಪ್ರೀತಿಯಿಂದ ಕಾಣಲಿಲ್ಲ. ಆದರೂ ಅವನ ಎಲ್ಲ ಹಿಂಸೆಯನ್ನು ಸಹಿಸಿಕೊಂಡ ಹೆಂಡತಿಗೆ ಏನೂ ಹೇಳಲಾಗದೆ ಪ್ರಾಯಶ್ಚಿತ್ತದ ಕಣ್ಣಿನಿಂದ ಕ್ಷಮೆಯಾಚಿಸುತ್ತಿದ್ದ. ಅವಳ ಮನಸ್ಸು ರೋಸಿಹೋಗಿತ್ತು. ಅವಳಿಗೆ ಅವಳ ಎಲ್ಲವು ಅವಳ ಮಕ್ಕಳೇ ಆಗಿದ್ದರು. ಅವನ ಕಣ್ಣುಗಳನ್ನು ನೋಡುತ್ತಾ ಅವಳ ಮನಸ್ಸು ಕರಗಿತು. ಹೀಗೆಯೇ ಅವನಿಗೆ ಆರೋಗ್ಯ ಹೆಚ್ಚುಕಡಿಮೆ ಆಗಾಗ್ಗೆ ಆಗುತ್ತಿತ್ತು. ಡಾಕ್ಟರ್ ಬಳಿ ಕರೆದುಕೊಂಡು ಹೋಗಿ, ಅವರು ಅವನಿಗೆ ಕುಡಿಯುವುದನ್ನು ಬಿಡಲು ಹೇಳಿದ್ದರು. ಆದರೂ ಅವನು ಕುಡಿಯುವುದನ್ನು ಬಿಟ್ಟಿರಲಿಲ್ಲ. ಅವನ ಕುಡಿತ ಬಿಡಿಸುವುದು ಅವರಿಗೂ ಅಸಾಧ್ಯವಾಗಿತ್ತು.
ಅವನ ಕೊನೆಯ ಗಳಿಗೆಯಲ್ಲಿ ಅವನು ತನ್ನ ಜೀವನದ ಎಲ್ಲ ಕ್ಷಣಗಳನ್ನು ನೆನೆದು ಕಣ್ಣೀರು ಹಾಕುತ್ತಿದ್ದ. ಅಪಾರವಾದ ನೋವು, ತಾನು ಮಾಡಿದ ಪಾಪಕರ್ಮಗಳ ಆದ ಪಶ್ಚಾತ್ತಾಪದ ಹಿಂಸೆ. ಅವನ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು. ಪಾಪ ಪ್ರಜ್ಞೆ ಅವನನ್ನು ಕಾಡಿ ಹಿಂಡುತ್ತಿತ್ತು. ಭಗವಂತನನ್ನು ನೆನೆಯುತ್ತ ತನ್ನ ಪಾಪಕ್ಕೆ ತಪ್ಪು ಕೋರುತ್ತಿದ್ದ. ಕೊನೆಗೂ ಅವನ ಜೀವ ದೇಹವನ್ನು ತೊರೆಯಿತು.
-ಗಿರಿಜಾ ಜ್ಞಾನಸುಂದರ್