ಇತ್ತೀಚೆಗೆ ಟಿ.ವಿ. ಚಾನೆಲ್‍ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿರುವ ‘ಮಿ ಟೂ’ ಅಭಿಯಾನ ದೇಶದೆಲ್ಲೆಡೆ ಭಾರೀ ಸಂಚಲನವನ್ನೇ ಸೃಷ್ಟಿಸಿತು. ಕೆಲವರು ರಾಜಕೀಯ ಮುಖಂಡರ ಕೈಗೆ ಕರವಸ್ತ್ರ ಕೊಡಿಸಿದರು; ಮಂತ್ರಿಗಳು ಮನೆಯ ಹಾದಿ ಹಿಡಿಯುವಂತಹ ಕಳವಳಕಾರೀ ಸನ್ನಿವೇಶÀವನ್ನೇ ಸೃಷ್ಟಿಸಿಬಿಟ್ಟರು. ಇನ್ನೂ ಕೆಲವು ಚಲನಚಿತ್ರ ರಂಗದ ಮಹಿಳೆಯರು ಹೆಸರು ಮಾಡಿದ ನಿರ್ದೇಶಕರು, ಸುಪ್ರಸಿದ್ಧ ನಾಯಕ ನಟರನ್ನು ಪಿಶಾಚಿಯಂತೆ ಬೆನ್ನತ್ತಿ ಕಾಡಿದರು. ಅವರು ಇವರ ಮೇಲೆ ಗೂಬೆ ಕೂಡ್ರಿಸಿದರು; ಇವರು ಅವರ ಮುಖಕ್ಕೆ ಮಸಿ ಬಳಿದರು. ಚಾನೆಲ್‍ಗಳಿಗಂತೂ ರೊಟ್ಟಿಯಲ್ಲ, ಹೋಳಿಗೆಯೇ ತುಪ್ಪದಲ್ಲಿ ಜಾರಿಬಿದ್ದಂತಾಗಿತ್ತು. ನಿಜವಾಗಿಯೂ ಅಹಿತಕರ ಘಟನೆಗಳು ನಡೆದಿದ್ದವೋ ಇಲ್ಲವೋ ಚಾನೆಲ್‍ಗಳ ಚರ್ಚೆಯಲ್ಲಿ ಮಾತ್ರ ದೂರು ಕೊಟ್ಟ ಹೆಣ್ಣುಮಕ್ಕಳ ಮಾನ ಮಾತ್ರ ಮೂರುಕಾಸಿಗೆ ಹರಾಜಾಗಿ ಹೋಯಿತು.
ನ್ಯೂಸ್ ಚಾನೆಲ್‍ನಲ್ಲಿ ‘ಮಿ ಟೂ’ ನೋಡುತ್ತಿದ್ದ ನಮ್ಮ ಮಂಗಳತ್ತೆಗೆ ನಖಶಿಕಾಂತ ಕೋಪವುರಿಯತೊಡಗಿತು. ತನ್ನಷ್ಟಕ್ಕೇ ಏನೇನೋ ಗೊಣಗುತ್ತ, ನೆಟಿಕೆ ಮುರಿಯುತ್ತ ಕಂಡವರಿಗೆ, ಕಾಣದವರಿಗೆಲ್ಲ ಹಿಡಿಶಾಪ ಹಾಕತೊಡಗಿದಳು. ಮೌನವಾಗಿ ಟಿ.ವಿ. ನೋಡುತ್ತ ಕುಳಿತಿದ್ದ ಪರಮೇಶಿ ಮಾವನಿಗೆ ಅವಳ ಚರ್ಯೆಯೇ ಅರ್ಥವಾಗಲಿಲ್ಲ. ‘ಯಾಕೆ? ಏನಾಯ್ತೆ?…’ ಎಂದವನ ಮಾತುಗಳಿಗೆ ‘ಕ್ಯಾರೇ’ ಎನ್ನದೆ ತನ್ನನ್ನೇ ದುರುಗುಟ್ಟಿ ನೋಡುತ್ತ ಒಳಗೆದ್ದು ಹೋದವಳನ್ನೇ ಅವಾಕ್ಕಾಗಿ ನೋಡುತ್ತ ಕುಳಿತುಬಿಟ್ಟ ಪರಮೇಶಿ(ದೇಶಿ?) ಮಾವ!
ಒಳಗೆ ಹೋದ ಮಂಗಳತ್ತೆ ಬೀರು ಬಾಗಿಲು ತೆರೆದ ಸದ್ದು ಕೇಳಿಸಿತು. ಅವಳ ಪರಿ ತಿಳಿಯದ ಪರಮೇಶಿ ಮಾವ ಟಿ.ವಿ. ಆರಿಸಿ ತನ್ನ ಪಾಡಿಗೆ ತಾನು ಸಾಯಂಕಾಲದ ಹವಾ ಸೇವನೆಗೆ ಹೊರಟುಹೋದ. ಅವನು ಹಿಂತಿರುಗಿ ಬಂದಾಗ ದಟ್ಟ ಕತ್ತಲು ಆವರಿಸಿತ್ತು. ಒಳಮನೆಯಲ್ಲಿ ಮಾತ್ರ ದೀಪವುರಿಯುತ್ತಿತ್ತು. ಮುಂಬಾಗಿಲು ಹಾರುಹೊಡೆದಿತ್ತು! ತಡಕಾಡುತ್ತ ಬಂದು ದೀಪ ಹಾಕಿ ಒಳಗೆ ಹೋಗಿ ನೋಡಿದಾಗ ಕಣ್ಣು ಕತ್ತಲೆ ಬರುವುದೊಂದೇ ಬಾಕಿ. ಮಂಗಳತ್ತೆ ಅವಳೆತ್ತರಕ್ಕೆ ಹಳೆಯ ಫೋಟೊಗಳನ್ನೆಲ್ಲ ರಾಶಿ ಹಾಕಿಕೊಂಡು ಅದರಲ್ಲಿ ಕಳೆದೇಹೋಗಿದ್ದಾಳೆ!
ಗಾಬರಿಗೊಂಡ ಮಾವ, ‘ಏನೇ, ಈ ಹಳೆ ಫೋಟೊಗಳನ್ನೆಲ್ಲ ರಾಶಿ ಹಾಕಿಕೊಂಡಿದ್ದೀಯೆ. ಯಾರ ಫೋಟೋ ಹುಡುಕುತ್ತಿದ್ದೀಯಾ?’ ಎಂದು ಸಹಜವಾಗಿ ಕೇಳಿದ.
ರೌದ್ರಾವತಾರ ತಾಳಿದ ಮಂಗಳತ್ತೆ, ‘ಎಲ್ಲರ ಫೋಟೋನೂ ಹುಡುಕುತ್ತಿದ್ದೇನೆ. ಎಲ್ಲರೂ ಫಟಿಂಗರೇ! ನಿಮಗೆಲ್ಲಾ ಕಾದಿದೆ ನೋಡಿ’ ಎನ್ನುತ್ತ ಕೆಲವು ಫೋಟೊಗಳನ್ನು ಪ್ರತ್ಯೇಕವಾಗಿ ಒಂದು ಕವರಿನಲ್ಲಿ ಹಾಕಿ ಎತ್ತಿಟ್ಟುಕೊಂಡಳು.
ಉಳಿದ ಫೋಟೊಗಳನ್ನೆಲ್ಲ ಯಥಾಸ್ಥಾನದಲ್ಲಿರಿಸಿ ಹೊರಗೆ ಬಂದು, ‘ರೀ ನಾಳೆ ನಾನು ಪೊಲೀಸ್ ಕಂಪ್ಲೆಂಟ್ ಕೊಡಬೇಕು. ನಿಮಗೆ ಗೊತ್ತಿರುವ ಪತ್ರಿಕಾ ವರದಿಗಾರರಿಗೆಲ್ಲ ಫೋನ್ ಮಾಡಿ ನಾಳೆ ಬೆಳಿಗ್ಗೆ 10 ಗಂಟೆಗೆಲ್ಲ ಪೊಲೀಸ್ ಸ್ಟೇಶನ್‍ಗೆ ಬರಲು ಹೇಳಿಬಿಡಿ.’ ಎಂದಾಗ ಪರಮೇಶಿ ಮಾವನಿಗೆ ಮಾತೇ ಹೊರಡಲಿಲ್ಲ.
‘ಅಲ್ವೆ, ಯಾವ ಕಂಪ್ಲೆಟು? ಯಾರ ಮೇಲೆ ಕಂಪ್ಲೆಂಟು? ಏನು ಕಾರಣ? ಸ್ವಲ್ಪ ಬಿಡಿಸಿ ಹೇಳು. ಏಕಾಏಕಿ ಹೀಗೆ ಕಂಪ್ಲೆಂಟ್ ಕೊಡುವ ಪ್ರಸಂಗವಾದರೂ ಈಗ ಏನಿದೆ? ಅದೂ ವರದಿಗಾರರಿಗೆ ಬೇರೆ ಹೇಳು ಎನ್ನುತ್ತಿದ್ದೀಯಲ್ಲ…?!’ ಗಾಬರಿಯಿಂದಲೇ ಕೇಳಿದ.
‘ಈಗ ಏನೂ ಕೇಳಬೇಡಿ. ಎಲ್ಲಾ ನಾಳೆ ಪೊಲೀಸ್ ಸ್ಟೇಶನ್ನಿನಲ್ಲಿ ಕಂಪ್ಲೆಂಟ್ ಕೊಟ್ಟು ಪತ್ರಿಕಾ ಗೋಷ್ಠಿ ನಡೆಸಿ ಅಲ್ಲಿಯೇ ಹೇಳುತ್ತೇನೆ. ಅಲ್ಲಿಯವರೆಗೆ ಕಾದಿರಿ’ ಎನ್ನುತ್ತ ಒಳಗೆ ನಡೆದಳು. ಅವಳ ಮುಖದಲ್ಲಿ ಏನನ್ನೋ ಗೆದ್ದ ಸಂಭ್ರವಿತ್ತು!
ಮರುದಿನ ಒಂಬತ್ತೂವರೆಗೆಲ್ಲ ಆಟೋದಲ್ಲಿ ಪೊಲೀಸ್ ಸ್ಟೇಶನ್‍ಗೆ ಹೊರಟೇ ಬಿಟ್ಟಳು ಮಂಗಳತ್ತೆ! ಸ್ಟೇಶನ್ನಿಗೆ ಹೋಗಿ ನೋಡಿದರೆ ಒಬ್ಬ ವರದಿಗಾರನೂ ಇಲ್ಲ. ಪರಮೇಶಿ ಮಾವನ ಮೇಲೆ ಇನ್ನಿಲ್ಲದ ಕೋಪ ಬಂದು ಮನಸ್ಸಿನಲ್ಲಿಯೇ, ‘ಇರಲಿ. ಮನೆಗೆ ಹೋದ ಮೇಲೆ ವಿಚಾರಿಸಿಕೊಳ್ಳುತ್ತೇನೆ’ ಎಂದುಕೊಳ್ಳುತ್ತ ದುಡುದುಡನೆ ಸ್ಟೇಶನ್ನಿನ ಒಳಗೆ ನಡೆದಳು. ಅವಳನ್ನು ವಿಚಾರಿಸಲು ಬಂದ ಮಹಿಳಾ ಪೇದೆಯ ಮಾತುಗಳಿಗೆ ಕವಡೆ ಕಿಮ್ಮತ್ತನ್ನೂ ಕೊಡದೆ ನೇರವಾಗಿ ಇನಿಸ್ಪೆಕ್ಟರ್‍ರ ಚೇಂಬರಿನೊಳಗೇ ನುಗ್ಗಿದಳು. ಅವಳು ನುಗ್ಗಿದ ರಭಸಕ್ಕೆ ಒಂದು ಕ್ಷಣ ಬೆಚ್ಚಿದ ಇನಿಸ್ಪೆಕ್ಟರ್ ಸಾವರಿಸಿಕೊಳ್ಳುತ್ತಲೇ, ‘ಯಾರಮ್ಮ ನೀವು? ಏನು ಕೆಲಸವಿತ್ತು? ಹೀಗೆಲ್ಲ ಹೇಳದೇ ಕೇಳದೇ ನುಗ್ಗಬಾರದಮ್ಮ’ ಎಂದರು.
‘ಹೇಳುವುದು ಕೇಳುವುದು ಇರುವುದರಿಂದಲೇ ಬಂದಿದ್ದೇನೆ ಸಾಹೇಬರೆ. ನಾನು ಕಂಪ್ಲೆಂಟ್ ಕೊಡಬೇಕು. ‘ಮಿ ಟೂ’ ಕಂಪ್ಲೆಂಟ್. ಫೋಟೊಸಾಕ್ಷಿ ಸಹಿತವಾಗಿ ಬಂದಿದ್ದೇನೆ. ತೊಗೊಳ್ಳಿ ನನ್ನ ಕಂಪ್ಲೆಂಟು’ ಎನ್ನುತ್ತ ಫೋಟೊ ಇದ್ದ ಕವರನ್ನು ಅವರ ಮುಂದೆ ತಳ್ಳಿದಳು. ಮಂಗಳತ್ತೆಯನ್ನು ಅಡಿಯಿಂದ ಮುಡಿಯವರೆಗೆ ಅಚ್ಚರಿಯಿಂದ ನೋಡಿದ ಇನಿಸ್ಪೆಕ್ಟರ್, ‘ಏನಮ್ಮ, ನೋಡಿದರೆ 65-70 ವರ್ಷದ ಮುದುಕಿಯಂತೆ ಕಾಣುತ್ತೀರಿ. ಈ ವಯಸ್ಸಿನಲ್ಲಿ ‘ಮಿ ಟೂ’ ಎನ್ನುತ್ತಿರುವಿರಿ. ತಮಾಶೆ ಮಾಡುತ್ತಿಲ್ಲ ತಾನೆ?’
‘ನನಗೆ ಈಗ ಸ್ವೀಟ್ ಸಿಕ್ಸಟಿ ಏಟೇ! ಆದರೆ ಇವುಗಳೆಲ್ಲ ಹಿಂದೆ ನಡೆದ ಘಟನೆಗಳು. ಅವುಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ದಯವಿಟ್ಟು ಸಂಬಂಧಿಸಿದವರನ್ನು ಬಂಧಿಸಿ, ವಿಚಾರಣೆ ನಡೆಸಿ ನನಗೆ ನ್ಯಾಯ ಒದಗಿಸಿಕೊಡಬೇಕು ಸಾಹೇಬರೆ.’
ಅವಳ ಕಾಟ ತಪ್ಪಿದರೆ ಸಾಕೆಂದುಕೊಂಡ ಸಾಹೇಬರು, ‘ಯಾರ ಮೇಲೆ ನಿಮ್ಮ ಕಂಪ್ಲೆಂಟ್ ರಿಜಿಸ್ಟರ್ ಮಾಡಬೇಕು? ಎಲ್ಲ ವಿವರಗಳನ್ನೂ ಹೇಳಿ ನಮ್ಮ ಪೇದೆ ಬರೆದುಕೊಳ್ಳುತ್ತಾರೆ’ ಎಂದರು.
‘ಒಬ್ಬಿಬ್ಬರ ಮೇಲಲ್ಲ ಸಾಹೇಬರೆ, ಸುಮಾರು ಜನರಿದ್ದಾರೆ. ಎಲ್ಲರ ಮೇಲೆಯೂ ಬಲವಾದ ಕೇಸು ಜಡಿದು ಒಳಗೆ ಹಾಕಿ. ಸರಿಯಾಗಿ ಬುದ್ಧಿ ಬರಲಿ ಅವಕ್ಕೆ. ಇನ್ನು ಜನ್ಮದಲ್ಲಿ ಹೆಣ್ಣುಮಕ್ಕಳ ಸಹವಾಸಕ್ಕೆ ಹೋಗಬಾರದು.’
ಅವಳ ಮಾತು ಕೇಳಿ ಇನಿಸ್ಪೆಕ್ಟರ್ ಕವರಿನೊಳಗಿದ್ದ ಫೋಟೊಗಳನ್ನು ಹೊರತೆಗೆದು ನೋಡತೊಡಗಿದರು. ಒಂದು ಫೋಟೊ ತೋರಿಸಿ, ‘ಇದು ಯಾರ ಫೋಟೊ ಮೇಡಂ? ತುಂಬಾ ಹಳೆಯದು ಎಲ್ಲ ಅಳಿಸಿಹೋಗಿದೆ. ಏನೂ ಕಾಣುತ್ತಿಲ್ಲ.’
‘ಸರಿಯಾಗಿ ನೋಡಿ, ಚೆಡ್ಡಿಯ ತರಹ ಕಾಣುತ್ತಿದೆಯಲ್ಲ, ಅದು ನಾನು. ಚಿಕ್ಕ ಬಾಲೆಯಾಗಿದ್ದಾಗ ಬರಿ ಚೆಡ್ಡಿಯಲ್ಲಿದ್ದ ನನ್ನನ್ನು ನನ್ನ ತಂದೆಯವರು ಎತ್ತಿಕೊಂಡು ಮುತ್ತು ಕೊಡುತ್ತಿರುವುದು. ಹಾಗೆ ಮಾಡುವುದು ‘ಮಿ ಟೂ’ ಕಾಯದೆ ಪ್ರಕಾರ ಅಪರಾಧವಲ್ಲವೆ ಸರ್?’
‘ಎಲ್ಲಿ ನಿಮ್ಮ ತಂದೆಯವರೇ ಕಾಣುತ್ತಿಲ್ಲವಲ್ರೀ ಫೊಟೊದಲ್ಲಿ!’
‘ಸರಿಯಾಗಿ ನೋಡಿ. ಮೇಲೆ ಮಸುಕು ಮಸುಕಾಗಿ, ಕಪ್ಪಾಗಿ ಕಾಣುತ್ತಿದೆಯಲ್ಲ ಸರ್, ಅದೇ ತಂದೆಯವರ ತಲೆ ಸರ್, ಅದು ಬಿಡಿ. ಇದು ನೋಡಿ, ನಾನು ಅಜಮಾಸು ಮೂರು ವರ್ಷದ ಬಾಲೆಯಾಗಿದ್ದಾಗಿನ ಫೋಟೊ. ಹೇಗೆ ಅವುಚಿಕೊಂಡು ಮುತ್ತಿಕ್ಕುತ್ತಿದ್ದಾನೆ ಧಡಿಯ? ಅವನು ನನ್ನ ದೊಡ್ಡಣ್ಣ! ಇದೆ, ಇದು ನೋಡಿ ನಾನು ಪ್ರೈಮರಿ ಸ್ಕೂಲಿನಲ್ಲಿ ಕಲಿಯುತ್ತಿದ್ದಾಗಿನದು. ಡಾನ್ಸ್ ಕಲಿಸುವ ನೆಪದಲ್ಲಿ ಹೇಗೆ ನನ್ನ ಮೈಕೈ ಸವರುತ್ತಿದ್ದಾರೆ ವೆಂಕಪ್ಪ ಮೇಷ್ಟ್ರು! ಈ ಮೂವರೂ ಈಗ ನಮ್ಮೊಂದಿಗಿಲ್ಲ. ಆದರೆ ಅವರ ಗಂಡುಮಕ್ಕಳು ಇದ್ದಾರೆ. ಅವರ ಮೇಲೇ ಕೇಸು ಹಾಕೋಣ ಬಿಡಿ. ಈ ಫೋಟೊ ನೋಡಿ. ಈ ಕೊರಮನನ್ನು ಯಾವ ಕಾರಣಕ್ಕೂ ಬಿಡಬಾರದು ಸರ್. ಇದ್ದಬಿದ್ದ ಕೇಸುಗಳನ್ನೆಲ್ಲ ಜಡಿದು ಜೀವಾವಧಿ ಶಿಕ್ಷೆ ಕೊಡಿಸಬೇಕು. ಹೇಗೆಲ್ಲ ನನ್ನನ್ನು ತಬ್ಬಿಕೊಂಡು, ಗಲ್ಲ ಹಿಡಿದು, ಥೂ… ಹೇಳಲೇ ಹೇಸಿಕೆಯಾಗುತ್ತಿದೆ. ಇವರು ನನ್ನ ಗಂಡ. ಇವರನ್ನು ಮಾತ್ರ ಬಿಡಬಾರದು.’ ಎಂದು ಇನ್ನೂ ಹಲವು ಫೋಟೊಗಳನ್ನು ತೋರಿಸಿ ಎಲ್ಲರ ಮೇಲೆಯೂ ಕೇಸು ಜಡಿಯಬೇಕೆಂದು ಮಂಗಳತ್ತೆ ಇನಿಸ್ಪೆಕ್ಟರ್‍ರಿಗೆ ಆಗ್ರಹಿಸಿದಳು.
‘ಯಾವಾಗಲೋ ನಡೆದಿರುವುದಕ್ಕೆ ಈಗ ಕಂಪ್ಲೆಂಟ್ ಕೊಡಲು ಬರುವುದಿಲ್ಲ ತಾಯಿ. ಮನೆಗೆ ಹೋಗಿ’ ಎಂದು ಸಾಹೇಬರು ನಗುತ್ತಲೇ ಹೇಳಿದರು.
‘ನೀವು ಕಂಪ್ಲೆಂಟ್ ತೆಗೆದುಕೊಳ್ಳದಿದ್ದರೆ ನಾನೇನೂ ಸುಮ್ಮನಿರುವುದಿಲ್ಲ ಸಾಹೇಬ್ರೆ. ಮೀಡಿಯಾ ಮುಂದೆ ಹೋಗ್ತೀನಿ’ ಎನ್ನುತ್ತ ಫೋಟೊ ಕವರ್ ಎತ್ತಿಕೊಂಡು ಹೊರನಡೆದಳು ಮಂಗಳತ್ತೆ!
-ಹುಳಗೋಳ ನಾಗಪತಿ ಹೆಗಡೆ