ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್


ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು.
ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,

 ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’ 

ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, ಬಗ್ಗಿ ನೋಡಿದೆ, 
ನಡುಗಿ ಹೋದೆ! 

ನನ್ನ ಗೆಳೆಯ ಶಿವರಾಜ್, ಸ್ಟೂಲಿನ ಮೇಲೆ ಹತ್ತಿ ನಿಂತು, ಮೇಲೆ ಛಾವಣಿಯ ಕಬ್ಬಿಣದ ಹುಕ್ಕಿಗೆ ಹಗ್ಗ ಸಿಕ್ಕಿಸುತ್ತಿದ್ದಾನೆ, 
’ಬೇಡವೋ, ಏಕೊ ಏನಾಯಿತೋ ’ ಎಂದು ಒಳಗೆ ನುಗ್ಗಿ ಅವನ ಕೈಲಿದ್ದ ಹಗ್ಗ ಕಿತ್ತುಕೊಂಡೆ, 
ಅರ್ಥವಾಗದವನಂತೆ ಅವನು
’ಅರೆ ಏಕಿಷ್ಟು ಗಾಭರಿ, ನೀನು ಯಾವಾಗ ಬಂದೆ?" ಎಂದ ಶಾಂತವಾಗಿ.
’ನಾನು ಈಗಿನ್ನು ಬಂದೆ ಅದು ಬಿಡು, ಏನಿದು ನಿನ್ನ ಪರಿಸ್ಥಿತಿ, ನೇಣು ಹಾಕಿಕೊಳ್ಳುವ ಸ್ಥಿತಿ ನಿನಗೇಕೆ ಬಂದಿತು, ಅಂತಹ ಕಷ್ಟ ನಿನಗೇನು ? ಈ ವಯಸ್ಸಿನಲ್ಲಿ ಹೆಂಡತಿಯನ್ನು ಮಕ್ಕಳನ್ನು ಬಿಟ್ಟು ಹೋಗುವ ಮನಸ್ಸೇಕೆ’ ಎಂದೆ ಸಂಕಟದಿಂದ.
ನನ್ನ ಮುಖ ನೋಡಿ ನುಡಿದ
’ಲೋ  ಸತೀಶ,  ಪೆದ್ದು ಪೆದ್ದಾಗಿ ಆಡಬೇಡವೋ, ಹುಕ್ಕಿಗೆ ಯಾವುದೋ ಕಾಲದಲ್ಲಿ ಹಗ್ಗ ಕಟ್ಟಿತ್ತು , ಅಸಹ್ಯ ಕಾಣುತ್ತಿತ್ತು, ಮನೆ ಕ್ಲೀನ್ ಮಾಡುತ್ತಿದ್ದೆ, ಹಾಗಾಗಿ ಆ ಹಳೆ ಹಗ್ಗ ಬಿಚ್ಚಿ ಹಾಕೋಣ ಅಂತ ನೋಡಿದೆ ಅಷ್ಟೆ, ಯಾರಾದರು, ನೇಣು ಹಾಕಿಕೊಳ್ಳುವರು, ಬಾಗಿಲು ತೆರೆದಿಟ್ಟು ಪ್ರಯತ್ನಪಡುತ್ತಾರ? ದಡ್ಡ " ಎಂದ

ಅಷ್ಟರಲ್ಲಿ ಅವನ ಹೆಂಡತಿ ಇಂದಿರಮ್ಮ ಹೊರಬಂದರು, 
’ಓ ಸತೀಶರವರು,  ನೀವು ಯಾವಾಗ ಬಂದಿರಿ , ಬನ್ನಿ ಕುಳಿತುಕೊಳ್ಳಿ ಕಾಫಿ ತರ್ತೀನಿ ’ ಎನ್ನುತ್ತ ಒಳಗೆ ಹೋದರು. 

’ಬಾರೋ ಕೂತ್ಕೋ , ಎಲ್ಲಿ ತುಂಬಾ ದಿನದಿಂದ ಕಾಣಲೆ ಇಲ್ಲ ’

’ನನದೇನಪ್ಪ ಆಫೀಸಿಗೆ ಹೋಗೋದು ಬರೋದು, ಬಿಟ್ಟರೆ ಏನಿದೆ, ನಿನ್ನದಲ್ಲವೆ ಎಲ್ಲ ಗಡಿಬಿಡಿ, ಅದೇನು ಮನೆ ಎಲ್ಲ ಕ್ಲೀನು ಅಂತ ಶುರು ಹಚ್ಕೊಂಡಿದಿ’ 

’ಮಾಡ್ಲೇ ಬೇಕಲ್ಲಪ್ಪ, ಇದು ಯಾವ ಮಂತ್ ಹೇಳು’ 

’ಅದೇನು ಸೆಪ್ಟೆಂಬರ್  ಅಲ್ಲವೆ ?"

’ಅದು ಇಂಗ್ಲೀಶ್ ಮಂತ್ ಆಯಿತು, ಕನ್ನಡ ಮಂತ್ ಯಾವುದೂ ಹೇಳು’ 

’ಕನ್ನಡದಲ್ಲೂ  ಸೆಪ್ಟೆಂಬರ್ ಗೆ ಸೆಪ್ಟೆಂಬರ್ ಅಂತಾನೆ ಅಲ್ಲವೆ ಅನ್ನೋದು?"  

’ಓ ಅದಲಪ್ಪ ನಾನು ಕೇಳಿದ್ದು, ಈಗ ನೋಡಿ ವಿದೇಶಿಯರೆಲ್ಲ, ಕ್ರಿಸ್ಚಿಯನ್ ಕ್ಯಾಲೆಂಡರ್ ಅನುಸರಿಸುತ್ತಾರೆ, ನಮ್ಮವರು ಆ ದಿನಾಂಕ ಅನುಸರಿಸೋಲ್ಲ, ಇವರು ಬೇರೆ ಕ್ಯಾಲೆಂಡರ್ ಅಲ್ವೇ ?" 

’ಅದಾ , ಪಂಚಾಂಗ ಅನ್ನುತ್ತಾರೆ ಅಷ್ಟೆ’ 

’ನೋಡು ಅದೇ ಪಂಚಾಂಗದ ಪ್ರಕಾರ ಇದ್ಯಾವ ತಿಂಗಳು’ 

’ಈಗ ಶ್ರಾವಣ ನಡೀತಿರಬೇಕಲ್ಲವೆ ?" 

’ಅನುಮಾನ ಏಕೆ ಅದೇ ನಡಿಯುತ್ತ ಇರೋದು, ಹಾಗೆ ಈ ತಿಂಗಳು ಪೂರ್ತ ವ್ರತಗಳು ಪೂಜೆಗಳು ಇದ್ದೇ ಇರುತ್ತವಲ್ಲಪ್ಪ , ಹಾಗಾಗಿ ಮನೇ ಸ್ವಲ್ಪ ಸ್ವಚ್ಚವಾಗಿರಲಿ ಅಂತ’ 

’ಅದೇನೊ ಅಪ್ಪ ನೀನು ಹೇಳೋದು, ಹಬ್ಬ ಹರಿದಿನ ಅಂದರೆ ಮನೆಯಲ್ಲಿ ಗಲೀಜು ಇದ್ದಷ್ಟು ಹೆಚ್ಚು ಹೆಚ್ಚು ಶ್ರೇಷ್ಠ ಅಲ್ಲವೇ ?" ಅಂದೆ ತಮಾಷಿಗೆ 

’ಹಾಗೆ ಅಂದುಕೋ , ನಾನೇನೊ ಕ್ಲೀನ್ ಮಾಡ್ತಾ ಕೂತೆ,  ನಿನ್ನೆ ಎಲ್ಲ ಮನೆಯಲ್ಲಿ ಒಂದು ವ್ರತದ ಪ್ರಹಸನ ಆಯ್ತಲ್ಲಪ್ಪ’ 

’ವ್ರತವೇ ನೀನು ಅದ್ಯಾವ ವ್ರತ ಮಾಡ್ತೀಯಪ್ಪ ನನಗೆ ತಿಳಿಯದೇ " 

'ಅಯ್ಯೋ ನಿನ್ನೆ ಮಂಗಳಗೌರಿ ವ್ರತ ಅಲ್ಲವೇನಪ್ಪ , ಅತ್ತೆ ಸೊಸೆ ಸೇರಿ ವ್ರತಮಾಡಿದರು , ನಾನು ಅವರಿಗೆ ಸಹಾಯಕ ’ 

’ಹೌದೆ ಪರವಾಗಿಲ್ಲಪ್ಪ ನೀನು ರಿಟೈರ್ಡ್ ಆದಮೇಲೆ ಒಳ್ಳೆ ಚುರುಕಾಗಿಬಿಟ್ಟೆ, ಹೇಗೆ ನಡೀತು ಹೇಳು ನಿನ್ನೆಯ ವ್ರತ’ 

’ಅಯ್ಯೋ ಏಕೆ ಹೇಳ್ತಿ ಅದನ್ನು ವಿವರವಾಗಿಯೆ ಹೇಳಬೇಕು’ 

ವ್ರತದ ವಿವರ : 

ಅತ್ತೆ ಇಲ್ಲಿಯವಳೆ ಅಪ್ಪಟ ಬೆಂಗಳೂರಿನವಳು, ಸೊಸೆಯಾದರು ಇಲ್ಲಿಯವಳೆ ಆದರು ಹುಟ್ಟಿನಿಂದ ನ್ಯೂಜಿಲೆಂಡಿನಲ್ಲಿ ಬೆಳೆದವಳು ಇಲ್ಲಿಯ ಸಂಪ್ರದಾಯಗಳ ವಿಷಯದಲ್ಲಿ ಅವಳ ಜ್ಞಾನ ಅಷ್ಟಕ್ಕೆ ಅಷ್ಟೆ. 

’ಏನಮ್ಮ ನಾಳೆ ಮಂಗಳಗೌರಿ ವ್ರತವಿದೆ, ನೀನು ಬೆಳಗ್ಗೆ ಸ್ವಲ್ಪ ಬೇಗ ಎದ್ದು ಮಾಡಬೇಕಮ್ಮ, ’ 

’ವಾಟ್ ಅತ್ತೆ, ಮಂಗಲಗೋರಿ, ಯಾ ಯಾ ಮಮ್ಮಿ ವಾಸ್ ಟೆಲಿಂಗ್ ’ 

ಅವರಿಬ್ಬನ ನಡುವೆ ಇದೇ ತಾಪತ್ರಯ, 
ಅತ್ತೆಗೆ ಇಂಗ್ಲೀಶ್ ಸ್ವಲ್ಪ ಅರ್ಥವಾದರು, ಕನ್ನಡ ಬಿಟ್ಟು ಬೇರೆ ಬಾಷೆ ಮಾತನಾಡಲು ಬರದು, 
ಸೊಸೆಗೆ ಕನ್ನಡ ಸ್ವಲ್ಪ ಅರ್ಥವಾದರು ಎಂದಿಗೂ ಕನ್ನಡ ಮಾತನಾಡಳು . 

’ಹೌದಮ್ಮ ನಾಳೆ ಸ್ವಲ್ಪ ನಾಲ್ಕಕ್ಕೆ ಅಲಾರಮ್ ಇಟ್ಟುಕೊಂಡು ಎದ್ದುಬಿಡು, ನೀನು ಹೊರಡುವ ಮುಂಚೆ ಪೂಜೆ ಮುಗಿಸಿ ಆಫೀಸಿಗೆ ಹೋಗುವೆಯಂತೆ’

’ಯಾ ಯಾ , ಅತ್ತೆ, ಬಟ್ ಯು ನೋ, ಅಮ್ ನಾಟ್ ಅವೇರ್‍ ಆಫ್ ಆಲ್ ದೀಸ್ ಫಾರ್ಮಾಲಿಟೀಸ್ ಯೂ ನೋ, ಯೂ ಹಾವ್ ಟೂ ಹೆಲ್ಪ್ , ..’ 

’ಹಾಗೆ ಆಗಲಮ್ಮ , ನೀನು ವ್ರತಮಾಡುತ್ತೀನಿ ಅಂತ ಒಪ್ಪಿಕೊಳ್ಳುವುದು ಹೆಚ್ಚೊ ನಾನು ಸಹಾಯ ಮಾಡುವುದು ಹೆಚ್ಚೋ’ 

ಪಾಪ ಆತ್ತೆ ಇಂದಿರಾರವರು, ದಿನವೆಲ್ಲ ಮಾರ್ಕೆಟ್ , ಮಠ ಅಂತ ಸುತ್ತಿದರು, ಪಾಪ ಅವರು ಮಂಗಳಗೌರಿ ಮಾಡುವಾಗಲು ಅಷ್ಟು ಶ್ರಮ ಪಟ್ಟಿರಲಿಲ್ಲ,  ಪೂಜೆಗೆ ಬೇಕಾದ ಹೂಗಳು, ಹಣ್ಣುಗಳು, ಮಾವಿನಸೊಪ್ಪು , ಹರಿಸಿನ, ಕುಂಕುಮ , ಹರಿಸಿನ ದಾರ ಎಂದು ದಿನಪೂರ್ತಿ ಓಡಾಡಿ ಸುಸ್ತಾದರು. ಪಾಪ ಶಿವರಾಜನು ಅಷ್ಟೆ ಪತ್ನಿಗೆ ಸಹಾಯಮಾಡುವದೇನು, ಅಟ್ಟದ ಮೇಲಿದ್ದ ದೇವರ ಮಂಟಪ ಇಳಿಸುವದೇನು, ಸ್ಟೂಲಿಗೆ ಬಾಳೆಕಂದು, ಮಾವಿನಸೊಪ್ಪು ಕಟ್ಟುವದೇನು ಒಂದೇ ಎರಡೇ ಕೆಲಸ ಎಲ್ಲವನ್ನು ಮಾಡುವದರಲ್ಲಿ, ತಮ್ಮ ಸೊಸೆ ಮಂಗಳಗೌರಿಗೆ ವ್ರತಮಾಡಲು ಎಲ್ಲ ಸಿದ್ದಪಡಿಸುವದರಲ್ಲಿ ಇಬ್ಬರೂ ಸುಸ್ತು 

ಬೆಳಗ್ಗೆ ಗಂಡ ಹೆಂಡತಿ ಎದ್ದು ಸ್ನಾನ ಮುಗಿಸಿ, ಕಾದಿದ್ದೆ ಬಂತು ಸೊಸೆ ಎಂದಿನಂತೆ ಆರುವರೆಗೆ ಎದ್ದು ಬಂದಳು, ಹೊರಗೆ ಎಲ್ಲ ಸಿದ್ದವಿರುವದನ್ನು ಕಾಣುತ್ತ 
’ಓ… ಸಾರಿ ಅತ್ತೆ, ಜಸ್ಟ್ ಐ ಹಾವ್ ಫರ್ ಗಾಟನ್ ಟೋ ಕೀಪ್ ಅಲಾರಮ್  , ಎನಿ ಹೌ ಡೋಂಟ್ ವರಿ , ಐ ವಿಲ್ ಮಾನೇಜ್ , ಜಸ್ಟ್ ಐ ವಿಲ್ ಪ್ರಿಪೇರ್ ಅಂಡ ಕಂ ’ 

ಅತ್ತೆ ಸೋತು ನುಡಿದರು, 

’ಆಯಿತಮ್ಮ, ತಲೆಗೆ ಸ್ನಾನ ಮಾಡು ಹಾಗೆ ಬರುವಾಗ, ಮದುವೆಯ ಸೀರೆ ಹಸಿರಿನದು ಇದೆಯಲ್ಲ, ಅದನ್ನು ಲಕ್ಷಣವಾಗಿ ಉಟ್ಟು ಬಾ’ 

’ನೋ ಅತ್ತೆ,  ಇಟ್ ಇಸ್ ಇಂಪಾಸಿಬಲ್,  ಇನ್ ದಿಸ್ ಹರಿ, ಐ ಕಾಂಟ್  ವಿಯರ್ ಸ್ಯಾರಿ ಯು ನೊ,  ’ ಎಂದಾಗ ಅತ್ತೆ ಕಣ್ಣು ಕಣ್ಣು ಬಿಟ್ಟರು . 

ಹೇಗೋ ಸೊಸೆಮುದ್ದು ತಯಾರಾಗಿ ಬರುವದರಲ್ಲಿ, ತಾವು ನೈವೈದ್ಯಕ್ಕೆ ಎಂದು ಸಜ್ಜಿಗೆ, ಅನ್ನ ತೊವ್ವೆ, ಕೋಸಂಬರಿ, ಒಂದಿಷ್ಟು ಶಾವಿಗೆ ಪಾಯಸ ಎಲ್ಲವನ್ನು ಸಿದ್ದ ಮಾಡಿಟ್ಟರು

ಸೊಸೆ ಮಾತ್ರ ಲಕ್ಷಣವಾಗಿ ನೈಟಿ ಧರಿಸಿ ಸಿದ್ದವಾಗಿದ್ದಳು. ಅತ್ತೆಯೆ ಬಲವಂತಮಾಡಿ ಒಳಗೆ ಎತ್ತಿಟ್ಟಿದ್ದ ತಾಳಿ ಹಾಗು ಸರವನ್ನು  ಅವಳ ಕುತ್ತಿಗೆಗೆ ಹಾಕಿದರು 

ಅಲ್ಲಿ ಸಿದ್ದವಿದ್ದ ಮಂಟಪ ಎಲ್ಲವನ್ನು ನೋಡುತ್ತ, ಸೊಸೆ 
’ಅತ್ತೆ ಸಾರಿ,  ವೇರಿ ಇಸ್ ದ ಚೇರ್,  ಐ ಕಾಂಟ್ ಸಿಟ್ ಆನ್ ಫ್ಲೋರ್ ,ಯೋ ನೋ,  ಐ ಅಮ್ ನಾಟ್ ಫೆಮಿಲಿಯರ್ ಟೊ ದಟ್ , ’ ಎನ್ನುತ್ತ ಹೊರಗೆ ಹೋಗಿ ಅಲ್ಲಿದ್ದ ಒಂದು ಪ್ಲಾಸ್ಟಿಕ್ಕಿನ  ಚೇರನ್ನು ಎಳೆದು ತಂದಳು, ಅತ್ತೆ ಪಾಪ ಎದುರಿಗೆ ಲಕ್ಷಣವಾಗಿ ಚಾಪೆಯ ಮೇಲೆ ಕುಳಿತರು 

ಸರಿ ವ್ರತ ಪ್ರಾರಂಭ,  

ಮಾವ ಪುಸ್ತಕ ಓದುತ್ತ, ಮಂತ್ರ ಹೇಳುವುದು, ಅತ್ತೆ ಹೀಗೆ ಮಾಡು ಹಾಗೆ ಮಾಡು ಎನ್ನುತ್ತ, ಸೊಸೆಯ ಕೈಲಿ ಪೂಜೆ ಮಾಡಿಸುವುದರಲ್ಲಿ ಸಾಕಷ್ಟು ಸುಸ್ತಾಗಿದ್ದರು, ಪೂಜೆ ಮುಗಿಯಿತು ಅನ್ನುವಾಗ, ಸೊಸೆ 
’ಓ  ಇಟ್ ಇಸ್ ಸೋ ಸಿಂಪಲ್ , ಐ ವಿಲ್ ಟಕೆ ಅ ವೀಡಿಯೋ ಆಪ್   ದೀಸ್  ಮಂಗಲ್ ಗೋರಿ,  ಸೆಂಡ್ ಮೈ ಮಾಮ್, ಇನ್ ವಾಟ್ಸಪ್ ’ ಅಂತ ಖುಷಿ ಪಟ್ಟಳು. 
ಅತ್ತೆ ಹೂವನ್ನೆತ್ತಿ ಸೊಸೆಗೆ ಕೊಡುವುದು, ಸೊಸೆ ಅದನ್ನು ದೇವರ ಪೋಟೋದ ಮೇಲೆ ಎಸೆಯುವುದು, ಅತ್ತೆ ಮರಿ ಪೂಜಾರಿಯಂತೆ ಮಂಗಳಾರತಿಗೆ ಸಿದ್ದ ಮಾಡಿಕೊಟ್ಟರೆ ಸೊಸೆ, ಅದನ್ನು ದೇವರ ಮುಂದೆ ತೋರಿಸಿವುದು ಹೀಗೆ ಸಾಗಿತ್ತು ಅವರ ಪೂಜೆ. 
ಕೈಗೆ ಹರಿಸಿನ ಹಚ್ಚಿದ ದಾರ ಕಟ್ಟಿಕೊಂಡರು.

ಅಂತೂ ಇಂತೂ ಪೂಜೆ ಮುಗಿಯಿತು ಅಂತ ಅತ್ತೆ ಉಸಿರುಬಿಟ್ಟರೆ, ಸೊಸೆ

’ಸೋ ಎವ್ವೆರಿ ಥಿಂಗ್ ಓವರ್ ಅತ್ತೆ, ’ ಎಂದು ಕೇಳುತ್ತ ಎದ್ದು ನಿಂತಳು. 

ಅತ್ತೆ ನೋಡುತ್ತಿರುವಂತೆ ಕೈಗೆ ಕಟ್ಟಿದ ದಾರವನ್ನು ಬಿಚ್ಚಲು ನೋಡಿ ಆಗದಿದ್ದಾಗ ಅಲ್ಲೆ ಇದ್ದ ಚಾಕುವಿನಿಂದ ಪಟ್ ಎಂದು ಕತ್ತರಿಸಿದಳು, ಅತ್ತೆ ಇದೇನು ಎಂದು ನೋಡುತ್ತಿರುವಂತೆ 
’ಟೇಕ್ ದಿಸ್ ಅತ್ತೆ, ಕೀಪ್ ಇಟ್ ವಿತ್ ಯೂ’ ಎನ್ನುತ್ತ ನಿಂತಳು 

’ಅಯ್ಯೋ ಇದೇನಮ್ಮ ಮಾಡಿದೆ , ಲಕ್ಷಣವಾಗಿ ಪೂಜೆ ಮಾಡಿ , ಮಂಗಳಗೌರಿಯ ವರ ಸಿಗಲಿ ಎಂದು ಕಟ್ಟಿಕೊಂಡಿದ್ದ ದಾರವನ್ನೆಲ್ಲ ಕಿತ್ತು ಹಾಕಿದೆಯಲ್ಲ ’ ಅಂತ ಪ್ರಲಾಪ ಮಾಡುತ್ತಿರುವಂತೆ , ಸೊಸೆ, ಲಕ್ಷಣವಾಗಿ ಕುತ್ತಿಗೆಯಲ್ಲಿದ್ದ, ತಾಳಿ ಸಮೇತ ಇದ್ದ ಎರಡೆಳೆ ಸರವನ್ನು ತೆಗೆದಳು ಅತ್ತೆ ಕೈಗೆ ಹಾಕುತ್ತ 
’ಓ ಅತ್ತೆ, ಹೌ ಕೆನ್ ಐ ಗೋ ಟೋ ಆಫೀಸ್, ವಿತ್ ಆಲ್ ದೀಸ್ ಡರ್ಟಿ ಥಿಂಗ್ಸ್, ಅನಿ ಹೌ ಮಂಗಳ ಗೋರಿ ಇಸ್ ಕಂಪ್ಲೀಟೆಡ್ , ಮೈ ಕ್ಯಾಬ್ ಡ್ರೈವರ್  ಕಾಲಿಂಗ್ ಮೀ , ಐ ಹವ್ ಟೊ ಮೂವ್ ’ ಎನ್ನುತ್ತ ರೂಮಿನತ್ತ ಹೊರಟಳು, 

ಅತ್ತೆಗೆ ಅರ್ಥವಾಗಿತ್ತು , ಇನ್ನು ಸೊಸೆ ಕೈಗೆ ಸಿಗೋಲ್ಲ, ನಾನು ಹೇಳಿದಂತೆ ಕೇಳೋಲ್ಲ, ಅಂತ ಪಾಪ ಮಾಡಿದ್ದ ಪ್ರಸಾದ ನೈವೈದ್ಯಗಳನ್ನೆಲ್ಲ ಅತ್ತೆ ಮಾವನೆ ತಿನ್ನ ಬೇಕಿತ್ತು. 

ಅತ್ತೆಗಂತು ತೀರಾನೆ ಬೇಸರವಾಗಿತ್ತು, ಮಗನಿಗೆ ಒಳ್ಳೆಯದಾಗಲಿ ಎಂದು ಸೊಸೆ ಕೈಲಿ ಮಂಗಳಗೌರಿ ಮಾಡಿಸಿದರೆ, ಆಕೆ ಪೂಜೆ ಮುಗಿಸಿ, ದಾರಿ ಬಿಚ್ಚಿಟ್ಟಿದ್ದು, ತಾಳಿ ತೆಗೆದು ತನ್ನ ಕೈಗೆ ಕೊಟ್ಟಿದ್ದು ಆಕೆಯ ಸಂಪ್ರದಾಯಸ್ಥ ಮನಸನ್ನು ನೋಯಿಸಿತ್ತು, ಆದರೆ ಆಕೆಯ ಮಾತಿಗೆ ಮನಸಿಗೆ ಯಾವ ಬೆಲೆ 

*****

ಶಿವರಾಜ್ ಎಲ್ಲವನ್ನು ಹೇಳುತ್ತಿರುವಂತೆ ನನಗೆ ನಗೆ ಉಕ್ಕಿ ಬಂದಿತು, 
’ಅಲ್ಲಯ್ಯ, ಈ ರೀತಿ ಬಲವಂತ ಮಾಘಸ್ನಾನ ಏಕೆ ಬೇಕು ಹೇಳು, ಅಲ್ಲ ಅವರೆಲ್ಲ ಈಗಿನ ಕಾಲದವರಪ್ಪ, ಈ ರೀತಿ ಪೂಜೆಯಿಂದ ನಿನಗಾಗಲಿ ನಿನ್ನ ಹೆಂಡತಿಗಾಗಿಲಿ ಏನು ಲಾಭ’ ಎಂದೆ
ಅದಕ್ಕವನು 
’ಲಾಭವೇ?  ಇದ್ದೆ ಇದೆಯಪ್ಪ, ಸಂಜೆ ನನ್ನ ಹೆಂಡತಿ ಪಾರ್ಕಿಗೆ ವಾಕಿಂಗ್ ಅಂತ ಬಂದಿದ್ದರಲ್ಲ ಅವಳ ಗೆಳೆತಿಯರು, ಕ್ಲಬ್ ಮೆಂಬರ್ಸ್ ಎಲ್ಲರ ಕೈಲಿ ಕೊಚ್ಚಿ ಕೊಂಡಿದ್ದೆ, ಕೊಚ್ಚಿಕೊಂಡಿದ್ದು, ತನ್ನ ಸೊಸೆ ಮಂಗಳಗೌರಿ ಪೂಜೆ ಮಾಡಿದಳು ಅಂತ, ಅವಳು ತಾಳಿ ಬಿಚ್ಚಿಟ್ಟಿದ್ದನ್ನು ಮಾತ್ರ ಅವರ ಕೈಲಿ ಹೇಳದೆ ಬಚ್ಚಿಟ್ಟಳು ಅಂದುಕೋ " ಎಂದು ನಗುತ್ತಿದ್ದ
 ಜೊತೆಗೆ ವಾಕಿಂಗ್ ಗೆಳತಿಯರೆಲ್ಲ ಉರಿದು ಕೊಂಡಿದ್ದೆ ಆಯಿತಂತೆ, ಪಾರಿನಿನ್ನಲ್ಲಿ ಬೆಳದ ಸೊಸೆಯಾದರು ಪಾಪ ಇಂದಿರಮ್ಮನ ಸೊಸೆ ಲಕ್ಷಣವಾಗಿ ಮಂಗಳಗೌರಿ ಮಾಡಿದಳು, ಅತ್ತೆಯ ಮಾತಿಗೆ ಎಷ್ಟು ಬೆಲೆ ಕೊಡ್ತಾಳೆ ಅಂತ ಹೊಗಳಿದ್ದೆ ಹೊಗಳಿದ್ದು, ಹಾಗೆ ತಮ್ಮ ತಮ್ಮ ಸೊಸೆಯರನ್ನ ಬೈದುಕೊಂಡರಂತೆ. 

ಅಷ್ಟರಲ್ಲಿ ಇಂದಿರಮ್ಮ ಮತ್ತೆ ಒಳಗಿನಿಂದ ಕಾಫಿ ತಂದರು , ತರುತ್ತ 
’ಆಯಿತ ,  ಮತ್ತೆ ಕಂಡವರ ಮುಂದೆ ಅದೇ ಮಂಗಳಗೌರಿನ ಕತೆಯ ಗ್ರಾಮಾಪೋನ್ ಪ್ಲೇಟ್ ಹಾಕಿ ಆಯಿತ ?. ನಿಮಗೆ ನನ್ನ ಮಾನ ತೆಗೆಯೋದು ಅಂದರೆ ಅದೇನು ಸಂತಸವೋ ’ ಎಂದು ರೇಗಿದರು. 

ನನ್ನನ್ನು ಕಂಡವರು ಅಂದಿದ್ದು ನನ್ನನ್ನು ಚುಚ್ಚಿತು, ಆದರೇನು ಕಾಫಿ ಬಿಟ್ಟು ಬರಲಾಗುವುದೆ. ಕುಡಿದು ಅಲ್ಲಿಂದ ಹೊರಟೆ . 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
chaithra
chaithra
8 years ago

Super !! 

1
0
Would love your thoughts, please comment.x
()
x