ಇಲ್ಲಿಯವರೆಗೆ…
ಪ್ರಪಂಚದಲ್ಲಿ ಏನೇ ಆದರೂ, ಹಗಲು-ರಾತ್ರಿ ಆಗುವುದು ತಪ್ಪದು. ಕಾಲ ಯಾರಿಗೂ ಕಾಯುವುದಿಲ್ಲ. ಮೂಡಣದಲ್ಲಿ ಸೂರ್ಯನ ನಸುಬೆಳಕು ಮೂಡುತ್ತಿದ್ದಂತೆ ಮೊದಲು ಎಚ್ಚರಗೊಂಡು ಕೂಗುವುದು ಕಾಜಾಣ. ಹಿಂದೆಯೇ ಕರಿಕುಂಡೆಕುಸ್ಕದ ಸೀಟಿ ಶುರು. ಪ್ರಾಣಿ-ಪಕ್ಷಿಗಳಿಗೆ ಹೋಲಿಸಿದರೆ, ಮಾನವನಿಗೆ ಬೆಳಗಾಗುವುದು ತುಸು ತಡ. ವಯಸ್ಸಾದ ಕಾರಣಕ್ಕೆ ಹೆಚ್ಚು ನಿದ್ದೆ ಮಾಡದ ದ್ಯಾವರ ಭಟ್ಟರು ಬೇಗ ಏಳುತ್ತಾರೆ. ಹೆಂಡತಿ ತೀರಿಕೊಂಡ ಮೇಲೆ ಬೆಳಗಿನ ಕಾಫಿ ಕುಡಿಯುವ ಅಭ್ಯಾಸ ತಪ್ಪಿ ಹೋಗಿದೆ. ಬರುವ ಛಪ್ಪನ್ನಾರು ಧಾರಾವಾಹಿಗಳನ್ನು ನೋಡಿ ಸೊಸೆ-ಮಗ ಮಲಗುವುದು ರಾತ್ರಿ ೧೧.೩೦ ಆಗುತ್ತದೆ. ಬೆಳಗ್ಗೆ ಇಬ್ಬರೂ ಬೇಗ ಏಳುವುದಿಲ್ಲ. ಭಟ್ಟರಿಗೆ ಬೆಡ್ ಕಾಫಿಯಿಲ್ಲ. ಎದ್ದ ಮೇಲೆ ಮುಖ ತೊಳೆದು, ದೇವರ ಕೋಣೆಗೆ ಹೋಗಿ ರಾಮಸ್ಮರಣೆ ಮಾಡಿ, ಹೂಚುಬ್ಬಲು ಹಿಡಿದು ದೇವರಿಗೆ ಹೂ ಕೊಯ್ಯಲು ಹೋಗುತ್ತಾರೆ. ದಾಸವಾಳ, ಕರವೀರ, ಮಲ್ಲಿಗೆ, ತುಳಸಿ, ದೂರ್ವೆ ಹೀಗೆ ಬುಟ್ಟಿ ತುಂಬುವ ಹೊತ್ತಿಗೆ ಅರ್ಧ-ಮುಕ್ಕಾಲು ಗಂಟೆಯಾದರೂ ಬೇಕು. ಅವತ್ತೂ ರಾಮಸ್ಮರಣೆ ಮಾಡಿ, ಬೇಲಿಸಾಲಿನಲ್ಲಿರುವ ದಾಸವಾಳ ಹೂ ಕೊಯ್ಯಲು ಹೊರಟರು. ಮರೆವಿನ ಕಾರಣಕ್ಕೋ ಅಥವಾ ಕಾಲಾಯ ತಸ್ಮೈ ನಮ: ಎಂಬ ಧೋರಣೆಯೋ, ಒಟ್ಟು ಹಿಂದಿನ ದಿನದ ಸಂಜೆಯ ಕಹಿಘಟನೆ ಭಟ್ಟರಿಗೆ ಮರೆತು ಹೋಗಿತ್ತು. ಮಂಗಗಳ ಹಿಂಡು ಬೇಲಿ ಬದಿಯಲ್ಲೇ ಇದೆ. ಆಗ ನೆನಪಾಯಿತು. ನಿನ್ನೆ ಕೊಂದ ಮಂಗನ ಮರಿಯನ್ನು ಇದೇ ಬೇಲಿಸಾಲಿನಂಚಿನಲ್ಲಿ ಹೂಳಿದ್ದರು. ತಾಯಿ ಮಂಗ ಮರಿಯ ಶವವನ್ನು ಹೊರತೆಗೆದು ಅವುಚಿಕೊಂಡು ಕುಳಿತಿತ್ತು. ಹಿಂಡಿನ ಉಳಿದ ಮಂಗಗಳೂ ಸೂತಕದ ಛಾಯೆಯಲ್ಲಿದ್ದವು. ಸದಾ ರಾಮಸ್ಮರಣೆ ಮಾಡುವ ಭಟ್ಟರ ಎದೆ ಧಸಕ್ಕೆಂದಿತು. ಥೇಟ್ ಮನುಷ್ಯರಂತೆ ಮಂಗಗಳೂ ವರ್ತಿಸುತ್ತಿದ್ದವು. ಕ್ರಿಯಾಕರ್ಮ ವಿಧಿಗಳನ್ನು ನೇರವೇರಿಸಲು ಅಪರಭಟ್ಟರುಗಳು ಇರಲಿಲ್ಲ ಅಷ್ಟೆ. ಅಂತಹ ದು:ಖದಲ್ಲೂ ದ್ಯಾವರ ಭಟ್ಟರನ್ನು ನೋಡಿದ ತಾಯಿ ಮಂಗ ಕೊಲೆಯಾದ ತನ್ನ ಮರಿಯನ್ನು ಅವುಚಿಕೊಂಡೇ ಹತ್ತಿರದ ಮರ ಹತ್ತಿತು.
ಮರುದಿನ ತಿಮ್ಮನಿಗೆ ತಡವಾಗಿ ಬೆಳಗಾಯಿತು. ಸ್ವಲ್ಪ ಹೆಚ್ಚೇ ಸೆರೆ ಕುಡಿದಿದ್ದರಿಂದ ತಲೆ ಹಿಡಿದಿತ್ತು. ಜೊತೆಗೆ ಮನಸ್ಸಿಗಾದ ಬೇಸರದಿಂದ ಊಟವನ್ನೂ ಮಾಡಿರಲಿಲ್ಲ. ಎರಡು ದಿನದಿಂದ ಮನೆಯಲ್ಲಿಲ್ಲದ ನಾಯಿ ರಾತ್ರಿ ಅದೆಷ್ಟೊತ್ತಿಗೋ ಮನೆಗೆ ಬಂದು ಮಲಗಿತ್ತು. ಯಜಮಾನ ಹೊರಗೆ ಬರುತ್ತಿದ್ದಂತೆ, ಬಾಲ ಅಲ್ಲಾಡಿಸುತ್ತಾ ಹತ್ತಿರ ಬಂತು. ಅನಿಷ್ಟ ನಾಯಿಯಿಂದಾದ ಅನಾಹುತವನ್ನು ನೆನೆದು ತಿಮ್ಮನಿಗೆ ಹೆಡಿಗೆಯಷ್ಟು ಸಿಟ್ಟು ಬಂತು. ತಾನು ಮಾಡಿದ ಅನಾಹುತದ ಪರಿಣಾಮವನ್ನು ಬಡನಾಯಿಯ ಮೇಲೆ ಹೊರಿಸಿ ಕಳ್ಳ ಸಮಾಧಾನ ಹೊಂದುವ ಹುನ್ನಾರದ ಪರಿಣಾಮವಾಗಿ ನಾಯಿಗೊಂದು ಕಟ್ಟಿಗೆಯೇಟು ಬಿತ್ತು. ಕುಂಯ್ಯೋ ಎಂದು ಕುಂಟುತ್ತಾ ನಾಯಿ ಓಡಿತು. ಇತ್ತ ಸೊಸೆ ಕುಕ್ಕಿ ಹೋದ ಕಾಫಿಯನ್ನು ಕುಡಿಯಲು ದ್ಯಾವರ ಭಟ್ಟರಿಗೆ ಮನಸ್ಸಾಗಲಿಲ್ಲ. ಕಾಫಿ ಕುಡಿಯುತ್ತಾ ಬೆಳಗಿನ ಪೇಪರ್ ಓದುವುದು ಭಟ್ಟರಿಗೆ ಅಭ್ಯಾಸವಾಗಿತ್ತು. ಕಾಫಿಯೂ ಇದೆ ಜೊತೆಗೆ ಪೇಪರ್ರೂ ಬಂದಿದೆ. ಇವತ್ತು ಎರಡೂ ಭಟ್ಟರಿಗೆ ಬೇಡವಾಗಿದೆ. ಬಾಯಲ್ಲಿ ರಾಮ-ರಾಮ ಅಷ್ಟೆ. ಭಟ್ಟರ ಮನ:ಸ್ಥಿತಿಯನ್ನು ಅರ್ಥಮಾಡಿಕೊಳ್ಳಲಾಗದ ಸೊಸೆ ತನ್ನ ಗಂಡನ ಹತ್ತಿರ ದೂರು ಹೇಳುತ್ತಿದ್ದಳು. ಕಾಫಿಯಿಟ್ಟು ಅರ್ಧ ಗಂಟೆಯಾಯಿತು ಇನ್ನೂ ನಿಮ್ಮ ಅಪ್ಪ ಕಾಫಿ ಕುಡಿದಿಲ್ಲ. ಆಮೇಲೆ ತಣ್ಣಗಾಗಿದೆಯೆಂದು ದೂರುತ್ತಾರೆ ಎಂದು ಗೊಣಗುಟ್ಟುತ್ತಿದ್ದಳು. ಅಮ್ಮನ ಗಲಾಟೆಯಿಂದ ಎಚ್ಚರಗೊಂಡ ಮಗಳು ದಿಢೀರನೆ ಎದ್ದು ಸೀದಾ ಜಗುಲಿಗೆ ಬಂದು ಬೇಲಿಯಂಚಿಗೆ ಕಣ್ಣಾಡಿಸಿದಳು. ಮಂಗಗಳ ಗುಂಪು ಕಾಣಲಿಲ್ಲ. ಕಣ್ಣುಜ್ಜಿಕೊಳ್ಳುತ್ತಾ ಮುಖ ತೊಳೆದುಕೊಳ್ಳಲು ಬಚ್ಚಲಿಗೆ ಹೋದಳು.
ಈ ತರಹದ ಘಟನೆಗಳು ಮಲೆನಾಡಿನ ಎಲ್ಲಾ ಹಳ್ಳಿಗಳಲ್ಲೂ ನಡೆಯುತ್ತದೆ. ಪರಮ ರಾಮಭಕ್ತರೇ ಮಂಗಗಳ ಗುಂಪಿಗೇ ವಿಷವಿಕ್ಕಿ ನಾಶ ಮಾಡುವ ಮಾತನ್ನು ಹೇಳುತ್ತಾರೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲಿಕ್ಕೆ ಮುಂದಾಗುವುದಿಲ್ಲ. ರೈತರ ಕೆಲಸವೆಂದರೆ, ದಿನದ ೨೪ ಗಂಟೆಯೂ ವರ್ಷದ ೩೬೫ ದಿನವೂ ಇರುತ್ತದೆ. ದಿನಕ್ಕೊಂದು ಪ್ರಯೋಗ ಮಾಡುವ ರೈತರಿಗಂತೂ ದಿನದ ೨೪ ಗಂಟೆ ಸಾಕಾಗುವುದಿಲ್ಲ. ಇನ್ನು ಅಡಕೆ ತೋಟಗಳ ಮೇಲ್ಬಾಗದಲ್ಲಿ ಸೊಪ್ಪಿನ ಬೆಟ್ಟ ಇರುತ್ತದೆ. ಈ ತರಹದ ಸೊಪ್ಪಿನ ಬೆಟ್ಟಗಳೇ ಇಂದಿನ ನೈಜ ಹಸಿರಿನ ಅರಣ್ಯದಂತೆ ಪರಿವರ್ತನೆಯಾದಂತೆ ಕಾಣುತ್ತದೆ. ಆದರೆ ಹಿಂದಿನ ಸೊಪ್ಪಿನ ಬೆಟ್ಟಗಳ ಸ್ವರೂಪಕ್ಕಿಂತ ಇಂದಿನ ಸೊಪ್ಪಿನಬೆಟ್ಟಗಳ ಸ್ವರೂಪ ಬದಲಾಗಿ ವಿರೂಪವಾಗಿವೆ. ಆಗ ಒಂದು ಊರಿನ ಸೊಪ್ಪಿನಬೆಟ್ಟಗಳಲ್ಲಿ ಹಲವಾರು ತರಹದ ಹಣ್ಣುಗಳು ಇರುತ್ತಿದ್ದವು. ಕೆಲಸಕ್ಕೆ ಬಾರದವು ಎಂಬ ಕಾರಣಕ್ಕೆ ಹೆಚ್ಚಿನ ಕಾಡು ಹಣ್ಣಿನ ಮರಗಳನ್ನು ಕಡಿದು ಹಾಕಿದರು. ಮಂಗನ ಚುಂಗಿನ ಬಳ್ಳಿಯನ್ನು ತುರಿಕೆ ಎಂಬ ಕಾರಣಕ್ಕೆ ಸವರಿ ಹಾಕಿದರು. ಇದಕ್ಕೆ ಸಂಸ್ಕ್ರತದಲ್ಲಿ ಕಪಿಕಾಚು ಎಂದು ಕರೆಯುತ್ತಾರೆ. ಈ ಬಳ್ಳಿಯಲ್ಲಿ ಬಿಡುವ ವೆಲ್‌ವೆಟ್ ಬೀನ್ಸ್ ತರಹದ ಎಳೆಕಾಯಿಗಳನ್ನು ಮಂಗಗಳು ಇಷ್ಟಪಟ್ಟು ತಿನ್ನುತ್ತವೆ. ಮೇಲಾಗಿ ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರಿಗೆ ನೀಡುವ ಸೈಂಡೋಪ ಎಂಬ ಅಮೇರಿಕಾದಿಂದ ಅಮದಾಗುವ ಮಾತ್ರೆಗೆ ಈ ಬೀಜ ಕಚ್ಛಾವಸ್ತುವೂ ಹೌದು. ಇದರ ಬೀಜವನ್ನು ಹುರಿದು ಕಷಾಯವನ್ನು ಮಾಡಿಕೊಂಡು ಕುಡಿದರೆ ನರಗಳಿಗೆ ಶಕ್ತಿ ಬರುತ್ತದೆ. ಈಗ ಈ ಬಳ್ಳಿ ನೋಡಲೂ ಸಿಗುವುದಿಲ್ಲ. ಮಂಗಗಳ ಮೂಲ ಹಲವು ಆಹಾರವನ್ನು ನಾವು ನಾಶ ಮಾಡಿದ್ದೇವೆ. ಈಗ ಮಂಗಗಳು ಕಾಟಕೊಡುತ್ತವೆ ಎಂದು ಕೊಲ್ಲಿಸುತ್ತೇವೆ.
ಬೆಂಗಳೂರಿನ ಜಿಕೆವಿಕೆಯಿಂದ ಕಪಿಕಾಚುವಿನ ಹೈಬ್ರೀಡ್ ಬೀಜವನ್ನು ಬೇಲಿಯಂಚಿನಲ್ಲಿ ಹಾಕಿ ಮರೆತಿದ್ದೆ. ಅದು ಬಳ್ಳಿಯಾಗಿ ಬೇಲಿಯಲ್ಲಿ ಕಾಯಿ ಬಿಟ್ಟಿತ್ತು. ಮಂಗಗಳು ಸದಾ ಆ ಬೇಲಿಯಲ್ಲೇ ಇರುತ್ತಿದ್ದವು. ನಮಗೆ ತೊಂದರೆಯಾಗುತ್ತಿರಲಿಲ್ಲ. ಕುತೂಹಲದಿಂದ ಮಂಗಗಳು ಇಲ್ಲದ ಒಂದು ದಿನ ಬೇಲಿಯಂಚಿಗೆ ಹೋಗಿ ಸೂಕ್ಷ್ಮವಾಗಿ ಗಮನಿಸಿದೆ. ಹೈಬ್ರೀಡ್ ಕಪಿಕಾಚು ಕಾಯಿ ಬಿಟ್ಟಿತ್ತು. ಎಳೆಕಾಯಿಗಳನ್ನು ಮಂಗಗಳು ತಿಂದ ಕುರುಹಾಗಿ ಅಲ್ಲಲ್ಲಿ ಎಳೆ ಕಾಯಿಯ ಚೂರುಗಳು ಬಿದ್ದಿದ್ದವು. ದ್ಯಾವಣಿಗೆ ಹಣ್ಣು ಏತಕ್ಕೂ ಬರುವುದಿಲ್ಲ, ಬರೀ ಹುಳಿ ಎಂಬ ಕಾರಣಕ್ಕೆ ನಮ್ಮ ಸೊಪ್ಪಿನ ಬೆಟ್ಟದಿಂದ ಅಳಿದು ಹೋಗಿವೆ. ಹುಳಿಯಾದರೂ ಮಂಗಗಳಿಗೆ ಪ್ರಿಯವಾದ ಆಹಾರವಾಗಿತ್ತು. ಹೀಗೆ ಹೆಸರು ಹೇಳುತ್ತಾ ಹೋದರೆ ಅದೆಷ್ಟೋ ಕಾಡುಹಣ್ಣು ಬಿಡುವ ಪ್ರಭೇದಗಳು ನಾಶವಾಗಿವೆ. ಲಕ್ಷಾಂತರ ಹಣ್ಣು ಬಿಡುತ್ತಿದ್ದ ದೈತ್ಯ ರಂಜಲ ಮರವನ್ನು ತೇರು ಮಾಡಲು ಬೇಕು ಎಂಬ ಕಾರಣಕ್ಕೆ ಕಡಿದು ಸಾಗಿಸಿದ ಉದಾಹರಣೆಗಳಿವೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುವ ಸಂದರ್ಭದಲ್ಲಿ ತೇರು ಎಳೆಯುವುದನ್ನು ಎಲ್ಲರೂ ಕೇಳಿದ್ದೇವೆ. ಹೀಗೆ ಒಂದು ದೇವಸ್ಥಾನದ ತೇರು ಹಾಳಾಗಿತ್ತು. ಕಮಿಟಿಯವರು ಸೀದಾ ಅರಣ್ಯ ಇಲಾಖೆಯ ಮುಖ್ಯಸ್ಥರನ್ನೇ ಕಂಡರು. ಮುಖ್ಯಸ್ಥರು ಎಲ್ಲಾ ವಲಯದ ಕಿರಿ ಮುಖ್ಯಸ್ಥರಿಗೆ ರಂಜಲಮರ ಲಭ್ಯತೆ ಬಗ್ಗೆ ಮೌಖಿಕವಾಗಿ ವಿಚಾರಿಸಿದರು. ನಾಮುಂದು-ತಾಮುಂದು ಎಂದು ಎಲ್ಲರೂ ೨೪ ತಾಸಿನಲ್ಲೇ ವರದಿ ಕೊಟ್ಟರು ಮೌಖಿಕವಾಗಿ. ನಮ್ಮ ಕಾಡಿನ ಮರ ದೊಡ್ಡದಿತ್ತು, ಸುತ್ತಳತೆಯಲ್ಲಿ ಎಲ್ಲಾ ಮರಗಳನ್ನು ಮೀರಿಸುತ್ತಿತ್ತು. ಆದರೆ, ತುರ್ತಾಗಿ ದೇವರಿಗೆ ಅರ್ಪಿತವಾಗಬೇಕಿತ್ತು. ಮಿಂಚಿನ ವೇಗದಲ್ಲಿ ದೇವಸ್ಥಾನದ ಸಮಿತಿಯ ಕಡತ ವಿಲೇವಾರಿಯಾಯಿತು. ರಂಜಲ ಮರವನ್ನು ಕಡಿದು ಹದಿನಾರು ಗಾಲಿ ಲಾರಿಯ ಮೇಲೆ ಸಾಗಿಸಲಾಯಿತು. ಇದು ನಡೆದದ್ದು ಸುಮಾರು ೨೫-೩೦ ವರ್ಷಗಳ ಹಿಂದೆ. ಅದ್ಯಾವುದೋ ಕೆಲಸಕ್ಕಾಗಿ ಒಮ್ಮೆ ಅರಣ್ಯ ಇಲಾಖೆಗೆ ಹೋಗಿದ್ದೆ. ಮೇಲೆ ಕುಳಿತ ಮಹಾಶಯ ಎದುರುಭಾಗದಲ್ಲಿ ಕುಳಿತಿದ್ದ ಭಕ್ತನಿಗೆ ಈ ರಂಜಲ ಮರ ಕಡಿದ ಘಟನೆಯನ್ನು ರಸವತ್ತಾಗಿ ವರ್ಣಿಸುತ್ತಿದ್ದ ರೀತಿ ಕೇಳಿ ಈ ವ್ಯಕ್ತಿಯಿಂದ ನನ್ನ ಕೆಲಸವಾಗದು ಎಂದು ವಾಪಾಸು ಬಂದೆ. ಹೀಗೆ ಹಲವು ಕಾರಣಗಳಿಗಾಗಿ ಕಾಡಿನ ಸಂಪತ್ತು ನಶಿಸಿಹೋಗಿದೆ. ಪ್ರಾಣಿ-ಮಾನವ ಸಂಘರ್ಷ ಶುರುವಾಗಿ ಕೊನೆಗೆ ಗೆಲ್ಲುವುದು ನಾವೇ ಆಗಿದ್ದೇವೆ.
ವನ್ಯಜೀವಿ-ಮಾನವ ಸಂಘರ್ಷಗಳನ್ನು ಸಂಪೂರ್ಣ ತಪ್ಪಿಸಲು ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಾಗದಿದ್ದರೂ, ಕೆಲವು ಪ್ರಾಮಾಣಿಕ ಪ್ರಯತ್ನಗಳನ್ನು ರೈತರು ಮಾಡಬೇಕು. ಅಳಿದುಹೋದ ಮರಗಳ ಬೀಜಗಳನ್ನು ಸಂಗ್ರಹಿಸಿ ತಂದು ಸೊಪ್ಪಿನಬೆಟ್ಟಗಳಲ್ಲಿ ಹಾಕಬಹುದು. ಇದೊಂದು ದೀರ್ಘಕಾಲಿನ ಯತ್ನವಾದರೂ, ನಿಶ್ಚಿತವಾಗಿ ವನ್ಯಪ್ರಾಣಿಗಳ ದೃಷ್ಟಿಯಿಂದ ಶ್ಲಾಘನೀಯ ಪ್ರಯತ್ನವಾಗಬಲ್ಲದು. ಅಲ್ಲದೇ ಅಲ್ಪಾವಧಿ ಬೆಳೆಗಳ, ಧಾನ್ಯಗಳ ಬೀಜಗಳನ್ನು ಮಳೆಗಾಲದ ಪ್ರಾರಂಬದ ಹಂತದಲ್ಲಿ ಖಾಲಿ ಪ್ರದೇಶದಲ್ಲಿ ಬಿತ್ತಿದರೂ, ಅವುಗಳಿಂದ ವನ್ಯಜೀವಿ ಪ್ರಪಂಚಕ್ಕೆ ಅಲ್ಪ ಸಹಾಯವಾಗುತ್ತದೆ. ತೋಟಗಳಲ್ಲಿ ಬಾಳೆ ಹಾಗೂ ಇನ್ನಿತರ ಗಿಡಗಳನ್ನು ನೆಡುವಾಗಲೂ ಸ್ವಲ್ಪ ಉದಾರತೆ ತೋರಬೇಕು. ಬದುವಿನ ಅಂಚಿನಲ್ಲಿ ಅಥವಾ ಖಾಲಿ ಜಾಗಗಳಲ್ಲಿ ಒಬ್ಬಬ್ಬೊರು ಹತ್ತಿಪ್ಪತ್ತು ಗಿಡಗಳನ್ನು ನೆಟ್ಟು ಹಾಗೆ ಪ್ರಾಣಿಗಳಿಗೋಸ್ಕರ ಬಿಡಬೇಕು. ಅವುಗಳಿಂದ ಬರುವ ಫಸಲನ್ನು ರೈತ ಉಪಯೋಗಿಸಬಾರದು. ಹೀಗೊಂದು ಸಾಮೂಹಿಕ ಪ್ರಯತ್ನ ಉತ್ತಮ ಫಲಿತಾಂಶ ನೀಡಬಲ್ಲದು. ಊರಿನಲ್ಲಿರುವ ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯೋಗಶೀಲರಾಗಬೇಕು. ಮಂಗಗಳನ್ನು ಕೊಲ್ಲಲು ಹೇಗೆ ಸಾಮೂಹಿಕವಾಗಿ ಒಟ್ಟಾಗಿ ದೇಣಿಗೆಯೆತ್ತಿ ತಳವಾರನಿಗೆ ಸಂಬಳ ಕೊಡುತ್ತಾರೋ, ಇದೇ ರೀತಿಯಲ್ಲಿ ಸಕಾರಾತ್ಮಕ ಪ್ರಯತ್ನಗಳಿಗೆ ಸಾಮೂಹಿಕ ಒಗ್ಗಟ್ಟು ತೋರಬೇಕು.
ಮಂಗನ ಮರಿಯನ್ನು ಕೊಂದ ಮರುದಿನ ತಳವಾರ ಮಂಗನ ಕಾಯಲಿಕ್ಕೆ ಹೋಗಲಿಲ್ಲ. ಭಟ್ಟರ ಖಿನ್ನತೆಯೂ ಕಡಿಮೆಯಾಗಲಿಲ್ಲ. ಪಕ್ಕದೂರಿನ ಒಬ್ಬರು ಒಂದು ಮಂಗ ಸತ್ತ ಮರಿಯನ್ನು ಅವಚಿಕೊಂಡು ಓಡಾಡುತ್ತಿದೆ ಎಂದು ಹೇಳಿದರು. ಸಧ್ಯಕ್ಕೆ ಊರಿನಲ್ಲಿ ಮಂಗಗಳ ಹಾವಳಿಯಿಲ್ಲ. ಬದುಕು-ಬದುಕಲು ಬಿಡು ಎಂಬ ತತ್ವ ಇಲ್ಲಿ ಸುಳ್ಳಾಯಿತು.
*****
ಅಖಿಲೇಶ್, ಕತೆ ತುಂಬಾ ಚೆನ್ನಾಗಿತ್ತು!
"ಮಂಗಗಳ ಮೂಲ ಹಲವು ಆಹಾರವನ್ನು ನಾವು ನಾಶ ಮಾಡಿದ್ದೇವೆ. ಈಗ ಮಂಗಗಳು ಕಾಟಕೊಡುತ್ತವೆ ಎಂದು ಕೊಲ್ಲಿಸುತ್ತೇವೆ." ಎಷ್ಟು ಸತ್ಯವಾದ ಮಾತು! ಬುದ್ಧಿಗೇಡಿಯಾದ ಮನುಷ್ಯಪ್ರಾಣಿ, ಮಾನವನಾಗುವುದು ಯಾವಾಗ?