ಮಂಕಿ ಬ್ಯುಸಿನೆಸ್: ಅಖಿಲೇಶ್ ಚಿಪ್ಪಳಿ


ಮಂಗಳೂರಿನ 800 ಜನ ರೈತರು ಮಂಗಗಳ ಕಾಟದಿಂದ ಬೇಸತ್ತು 2012ರಿಂದ ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಮಂಗನ ಕಡಿತಕ್ಕೆ ಪರಿಹಾರ ನೀಡುವ ಏಕೈಕ ರಾಜ್ಯ ಉತ್ತರಾಖಂಡ. ಜಮ್ಮು ಜಿಲ್ಲೆಯಲ್ಲಿ ಪ್ರತಿವರ್ಷ 33 ಕೋಟಿ ರೂಪಾಯಿ ಮೊತ್ತದ ಬೆಳೆ ನಾಶ ಮಂಗಗಳಿಂದ. ಹಿಮಾಚಲ ಪ್ರದೇಶದಲ್ಲಿ ಪ್ರತಿವರ್ಷ ಮಂಗಗಳಿಂದ ಆಗುವ ಬೆಳೆ ಹಾನಿ ಮೊತ್ತ 500 ಕೋಟಿ ರೂಪಾಯಿಗಳು. ಮಂಗಗಳ ವಿರುದ್ಧ ಸೆಣೆಸಲು ಆಗ್ರಾ ಸಿಟಿ ಡೆವಲಪ್‍ಮೆಂಟ್ ಅಥಾರಿಟಿ ಪ್ರತಿವರ್ಷ ಖರ್ಚು ಮಾಡುವ ಹಣದ ಮೊತ್ತ 2 ಕೋಟಿ ರೂಪಾಯಿಗಳು. ದೇಶದ ರಾಜಧಾನಿ ದೆಹಲಿಯಲ್ಲಿ 2007ರಿಂದ ಮಂಗಗಳನ್ನು ಹಿಡಿದು ಅಭಯಾರಣ್ಯಕ್ಕೆ ಬಿಡುವುದು ಹಾಗೂ ಅವುಗಳಿಗೆ ಆಹಾರ ನೀಡಲು ದೆಹಲಿ ಆಡಳಿತ ಖರ್ಚು ಮಾಡಿದ ಮೊತ್ತ 8 ಕೋಟಿ ರೂಪಾಯಿಗಳು, ಇಷ್ಟು ಖರ್ಚು ಮಾಡಿದರೂ 1000 ಮಂಗಗಳು ಹಸಿವಿನಿಂದ ಸತ್ತಿವೆ. ಖಾಸಗಿಯಾಗಿ ಮಂಗನನ್ನು ಹಿಡಿಯಲು ಮಹಾರಾಷ್ಟ್ರದಲ್ಲಿ ಒಂದು ಮಂಗಕ್ಕೆ 6 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಬಿಹಾರದ ಸಹರಾ ಜಿಲ್ಲೆಯ 50 ಸಾವಿರ ರೈತರು ಮಂಗಗಳ ಕಾಟದ ಸಂತ್ರಸ್ಥರಾಗಿದ್ದಾರೆ. ತೆಲಂಗಾಣ ರಾಜ್ಯದ 2 ಲಕ್ಷ ಮಂಗಗಳಿಗಾಗಿ ಹಸಿರೀಕರಣಕ್ಕಾಗಿ ಅಲ್ಲಿನ ಆಡಳಿತ 830 ಕೋಟಿ ರೂಪಾಯಿಗಳನ್ನು ಈ ವರ್ಷ ತೆಗೆದಿರಿಸಿದೆ. ಈ ಮಂಕಿ ಬ್ಯುಸಿನೆಸ್ಸಿನ ವ್ಯವಹಾರದಲ್ಲಿ ಭಾರತದ ಎಲ್ಲಾ ರಾಜ್ಯಗಳ ಲೆಕ್ಕ ಸೇರಿಲ್ಲ. ಮಂಗಗಳಿಂದಾಗುವ ಪರೋಕ್ಷ ಹಾನಿಯನ್ನು ಪರಿಗಣಿಸಲಾಗಿಲ್ಲ. ಪ್ರತ್ಯಕ್ಷ ಬೆಳೆ ಹಾನಿಯ ಪೂರ್ತಿ ಲೆಕ್ಕ ಇಲ್ಲಿ ಸೇರಿಲ್ಲ.

ಒಂದು ಮಾತಿದೆ. ವೇದ ಸುಳ್ಳಾದರೂ, ಗಾದೆ ಸುಳ್ಳಾಗುವುದಿಲ್ಲ. ಹಾಗೆಯೇ ಮಂಗಗಳ ಕುರಿತಾಗಿ ಇನ್ನೊಂದು ಮಾತಿದೆ. ಮಂಗಕ್ಕೇನು ಗೊತ್ತು ಶುಂಠಿ ಸ್ವಾದ. ಆದರೆ ಮಂಗಗಳ ವಿಚಾರದಲ್ಲಿ ಈ ಗಾದೆ ಮಾತು ಸುಳ್ಳಾಗಿದೆ. ಹಿಮಾಚಲ ಪ್ರದೇಶದ ಚುಕ್ಕಾ ಹಳ್ಳಿಯ ರಾಜೇಶ್ ಬಿಸ್ಟ್ ಎಂಬ ರೈತನ ಹೊಲದಲ್ಲಿನ ಶುಂಠಿ ಬೆಳೆಯನ್ನೂ ಮಂಗಗಳು ದ್ವಂಸ ಮಾಡಿವೆ. ಇದೇ ಸಂಜೆ ಹಳ್ಳಿಯ ಸರಪಂಚರಾದ ಮಂದಾಕಿನಿ ದೇವಿಯ ಮನೆಯ ಜಗುಲಿಯ ಮೇಲೆ ಹಳ್ಳಿಗರ ಸಭೆ ಸೇರಿದೆ. ಅವತ್ತಿನ ಸಭೆಯ ಮುಖ್ಯ ವಿಷಯ ಮಂಗಗಳಿಂದ ಆಗುತ್ತಿರುವ ಹಾನಿಯನ್ನು ತಡೆಯುವ ಬಗೆ ಹೇಗೆ ಎಂದಾಗಿತ್ತು. ಸಭಾಧ್ಯಕ್ಷರ ಕುರ್ಚಿಯ ಹಿಂಭಾಗದ ಗೋಡೆಯ ಮೇಲೆ ಆಂಜನೇಯನ ಭಾವಚಿತ್ರ!!!

2014ರ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಬಾರೀ ವಿಜಯ ಸಾಧಿಸಿ, ಪ್ರಧಾನಿ ಪಟ್ಟ ಅಲಂಕರಿಸಿದ ಮೋದಿ ವಾರಾಣಾಸಿ ಕ್ಷೇತ್ರವನ್ನು ಬಿಟ್ಟುಕೊಡಬೇಕಾದ ಸಂದರ್ಭ. ಮತದಾರರ ಋಣ ತೀರಿಸಲೇ ಬೇಕೆಂದು ಹಠ ತೊಟ್ಟರೇನೋ? ಪ್ರತಿ ಮನೆಗೂ ವೈ-ಫೈ ಸಂಪರ್ಕ ಕಲ್ಪಿಸುವ ಯೋಜನೆ ತಯಾರಾಯಿತು. ಕೆಲಸವೂ ಭರದಿಂದ ಸಾಗಿತು. ಎಲ್ಲರಿಗೂ ಸಂಪರ್ಕ ಸಿಕ್ಕಿತೇ? ಅಳವಡಿಸಿದ ಎಲ್ಲಾ ಆಪ್ಟಿಕಲ್ ಫೈಬರ್ ಕೇಬಲ್‍ಗಳನ್ನೆಲ್ಲಾ ಮಂಗಗಳೇ ಸ್ವಾಹಾ ಮಾಡಿದವು. ಹೀಗೆ ಮೋದಿಯ ಎಲ್ಲರಿಗೂ ವೈ-ಫೈ ಎಂಬ ಪೈಲಟ್ ಯೋಜನೆ ಹಳ್ಳ ಹಿಡಿಯಿತು. ಇದೀಗ ನೆಲದಾಳದಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ತಯಾರಾಗುತ್ತಿದೆ.

2007ರಲ್ಲಿ ದೆಹಲಿಯ ಉಪಮೇಯರ್ ಆಗಿದ್ದ ಎಸ್.ಎಸ್.ಭಜ್ವಾ, ಬೆಳಗ್ಗೆ ಅಷ್ಟೊತ್ತಿಗೆ ಎದ್ದು ಮನೆಯ ಟೇರೆಸ್ ಮೇಲೆ ಹೋದರು, ಟೆರೇಸ್ ಮೇಲೆ ಪವಡಿಸಿದ್ದ ಮಂಗಗಳು ಇವರ ಮೇಲೆ ದಾಳಿ ಮಾಡಿದವು. ತಪ್ಪಿಸಿಕೊಳ್ಳುವ ಯತ್ನದಲ್ಲಿ ಕೆಳಗೆ ಬಿದ್ದ ಉಪಮೇಯರ್ ಸತ್ತೇ ಹೋದರು. ಇಡೀ ಭಾರತದಲ್ಲಿ ಹೀಗೆ ಒಂದು ದಿನದಲ್ಲಿ ಸುಮಾರು ಸಾವಿರ ಕೋತಿ ಕಡಿತದ ದೂರು ದಾಖಲಾಗುತ್ತವೆ. ದೆಹಲಿಯ ಅತ್ಯಂತ ಪ್ರತಿಷ್ಟಿತ ಹೋಟೆಲ್‍ನ ಹೆಸರು ಇಂಡಿಯಾ ಕಾಫೀ ಹೌಸ್. ಈ ಹೋಟೆಲ್‍ಗೆ ಬರುವ ಗ್ರಾಹಕರಿಗೆ ಮಂಗಗಳ ದಾಳಿಯ ಕುರಿತು ಮೊದಲೇ ಎಚ್ಚರಿಸಲಾಗುತ್ತದೆ. 30-40 ಮಂಗಗಳು ಒಟ್ಟಿಗೆ ದಾಳಿ ಮಾಡುತ್ತವೆ. ಈಗ ವೈಟರ್‍ಗಳು ನೀರು ಲೋಟ ಕೈಬಿಟ್ಟು, ಪಟಾಕಿಯನ್ನು ಕೈಗೆತ್ತಿಕೊಳ್ಳುತ್ತಾರೆ. ಚಂಡೀಗಡದಲ್ಲಿ 2013ರಲ್ಲಿ ಮಂಗಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಕುರಿತು ಸಾರ್ವಜನಿಕ ಅಭಿಯಾನವನ್ನೇ ಕೈಗೊಳ್ಳಲಾಗಿತ್ತು. ಶಿಮ್ಲಾದ ಜನರು ತಮ್ಮ ನೀರಿನ ತೊಟ್ಟಿಗಳನ್ನು ತಂತಿಯಿಂದ ಮುಚ್ಚಿ ಇಡುವ ಪ್ರಸಂಗ ಎದುರಿಸುತ್ತಿದ್ದಾರೆ. ಇಲ್ಲವಾದಲ್ಲಿ ಅದೇ ತೊಟ್ಟಿ ಮಂಗಗಳ ಸ್ನಾನದ ತೊಟ್ಟಿಯಾಗುವ ಭಯವಿದೆ. ಹರಿದ್ವಾರದ ಮಂಗಗಳು ಅಲ್ಲಿನ ಬಿಕ್ಷುಕರ ಜೊತೆಗೆ ಕುಳಿತುಕೊಂಡು ಹೋಗಿ-ಬರುವ ಭಕ್ತಾದಿಗಳ ಮೇಲೆ ಎರಗುತ್ತವೆಯಾದ್ದರಿಂದ ಅವುಗಳಿಗೆ ಅಲ್ಲಿನ ಜನ “ಬಿಕ್ಷುಕ ಮಂಗಗಳು” ಎಂದೇ ಕರೆಯುತ್ತಾರೆ.

ನರರಿಗೆ ಅತಿ ಹತ್ತಿರ ಸಂಬಂಧಿಗಳು ಈ ವಾನರರು. ಒಟ್ಟು 225 ವಾನರ ಪ್ರಬೇಧಗಳಲ್ಲಿ ಮನುಷ್ಯನಿಗೆ ಹತ್ತಿರದಲ್ಲಿ ಬದುಕುವ ಪ್ರಬೇಧಗಳು ಬರೀ ಮೂರು ಮಾತ್ರ. ದಟ್ಟಾರಣ್ಯಗಳಲ್ಲಿ ಕೋತಿಗಳು 12-14 ಗಂಟೆಗಳನ್ನು ತಮ್ಮ ಆಹಾರನ್ವೇಷಣೆಗೇ ಮೀಸಲಾಗಿಡುತ್ತವೆ. ನರನೆಂಬ ಅಸಾಸುರ ಅಭಿವೃದ್ಧಿ-ತಂತ್ರಜ್ಞಾನ-ವಸತಿ ಇತ್ಯಾದಿಗಳಿಗಾಗಿ ಅರಣ್ಯ ಪ್ರದೇಶವನ್ನು ಕಡಿಮೆ ಮಾಡುತ್ತಾ ಸಾಗಿದ. ಅನಿವಾರ್ಯವಾಗಿ ಕಾಡಿನಲ್ಲಿರಬೇಕಾದ ಮಂಗಗಳು ಊರಿನತ್ತ ಮುಖ ಮಾಡಿದವು. ಊರಿನತ್ತ ಮುಖ ಮಾಡಿದ ಮಂಗಗಳು ಮನುಷ್ಯನ ಆಹಾರಕ್ರಮಕ್ಕೆ ಅತಿಬೇಗ ಹೊಂದಿಕೊಂಡವು. ಕಾಡಿನಲ್ಲಿ ತಮ್ಮ ಜೀವನದ ಅತಿ ಹೆಚ್ಚು ಸಮಯವನ್ನು ಆಹಾರನ್ವೇಷಣೆಗಾಗಿಯೇ ಮೀಸಲಾಗಿಡುತ್ತಿದ್ದ ಮಂಗಗಳಿಗೆ ಮಾನವ ವಸತಿ ಪ್ರದೇಶದಲ್ಲಿ ಬರೀ 10 ನಿಮಿಷದಲ್ಲೆ ಹೊಟ್ಟೆ ತುಂಬುವಷ್ಟು ಆಹಾರ ಲಭ್ಯವಾಯಿತು. ಹೊಟ್ಟೆ ತುಂಬಿದ ಮೇಲೆ ಏನು ಮಾಡುವುದು, ಲೈಂಗಿಕ ಕ್ರಿಯೆಯ ಪ್ರಮಾಣ ಹೆಚ್ಚಾಯಿತು. ಇದರಿಂದಾಗಿ ಅವುಗಳ ಸಂತತಿ ವೃದ್ಧಿಯಾಗುವ ಪ್ರಸಂಗ ಸೃಷ್ಟಿಯಾಗಿ ಸಂತತಿ ವೇಗವಾಗಿ ಬೆಳೆಯಿತು. ನೈಸರ್ಗಿಕ ಕಾಡಿನಲ್ಲಿ ಮಂಗಗಳ ಸ್ವಾಭಾವಿಕ ಮರಣದ ಸಂಖ್ಯೆ ಅತಿ ಹೆಚ್ಚು ಇರುತ್ತದೆ. ವಯಸ್ಸಿಗೆ ಬರುವ ಮೊದಲೇ 80% ಮರಿಗಳು ಸಾವಿಗೀಡಾಗುತ್ತವೆ. ಪೇಟೆ-ಪಟ್ಟಣಗಳಲ್ಲಿ ಸಾವಿನ ಪ್ರಮಾಣ ಅತಿ ಕಡಿಮೆಯಾಗಿದ್ದು ಅವುಗಳ ಸಂತತಿ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ತಜ್ಞರು.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಸಮಸ್ಯೆಗಳಿಗೂ ಸರಕಾರವೇ ಕಾರಣ, ಹಾಗಾಗಿ ಸರಕಾರಗಳೇ ಇದನ್ನು ನಿವಾರಿಸಬೇಕು ಎಂಬ ಮನ:ಸ್ಥಿತಿಯಿದೆ. ಆದ್ದರಿಂದ ಮಂಗಗಳ ಹಾವಳಿ ಹೆಚ್ಚಿರುವ ರಾಜ್ಯಗಳಲ್ಲಿ ಸರ್ಕಾರಗಳು ಮಂಗಗಳ ನಿಯಂತ್ರಣಕ್ಕೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿವೆ. ಉದಾಹರಣೆಯಾಗಿ 2007ರಿಂದ ಹಿಮಾಚಲ ಪ್ರದೇಶದಲ್ಲಿ ಮಂಗಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವುದು. ಇಲ್ಲಿಯವರೆಗೆ 96500 ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಅಲ್ಲಿನ ಪ್ರಧಾನಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಜೆ.ಎಸ್.ವಾಲಿಯ ಹೇಳುತ್ತಾರೆ. ಇಲ್ಲಿನ ಒಟ್ಟು 8 ಸಂತಾನ ಹರಣ ಕೇಂದ್ರಗಳು ದಿನಕ್ಕೆ 40-45 ಮಂಗಗಳಿಗೆ ಸಂತಾನಹರಣ ಚಿಕಿತ್ಸೆ ನೀಡುವ ಸಾಮಥ್ರ್ಯ ಹೊಂದಿವೆ. ಅದರಂತೆ, ಕಳೆದ 8 ವರ್ಷಗಳಲ್ಲಿ 4,30000 ಮಂಗಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕಾಗಿತ್ತು. ಆದರೆ, ಗುರಿ ಮುಟ್ಟುವುದು ಸಾಧ್ಯವಾಗಿಲ್ಲ. ನೀರೀಕ್ಷಿತ ಮಟ್ಟದಲ್ಲಿ ಮಂಗಗಳನ್ನು ಹಿಡಿಯುವುದು ಸಾಧ್ಯವಾಗುತ್ತಿಲ್ಲ ಎಂಬುದು ಒಂದು ಕಾರಣವಾದರೆ, ಸಂತಾನಹರಣಗೊಂಡ ಮಂಗಗಳೇ ಮತ್ತೆ ಬೋನಿಗೆ ಬೀಳುತ್ತಿರುವ ಹೊಸ ತೊಡಕೊಂದು ಸೃಷ್ಟಿಯಾಯಿತು. ಇದಕ್ಕಾಗಿ ಅವುಗಳ ಕೂದಲಿಗೆ ಬಣ್ಣ ಬಳಿಯುವ ಪ್ರಯತ್ನವೂ ಯಶಸ್ವಿಯಾಗಿಲ್ಲ. ಇದೆಲ್ಲಾ ಬೇಡ ಅತ್ಯಂತ ಸುಲಭವಾಗಿ ತಿನ್ನುವ ಆಹಾರದಲ್ಲೇ ಸಂತಾನ ಹರಣ ಮಾತ್ರೆಗಳನ್ನು ಹಾಕುವ ಪ್ರಯತ್ನವೂ ಯಶಸ್ವಿಯಾಗುತ್ತಿಲ್ಲ.

ಇದೆಲ್ಲಾ ಬೇಡ ಬಿಡಿ, ಎಂದು ಕೊಂಡು ಅಲ್ಟ್ರಾಸೋನಿಕ್ ಬಂದೂಕು ಉಪಯೋಗಿಸಿ ಮಂಗಗಳನ್ನು ಕಾಡಿಗೆ ಅಟ್ಟುವ ಮತ್ತೊಂದು ಪ್ರಯತ್ನವೂ ನಡೆಯಿತು. ಇದರಲ್ಲಿ ಒಂದು ಬಂದೂಕಿನ ಬೆಲೆಯೇ 20 ಸಾವಿರ ರೂಪಾಯಿಗಳು ಅಲ್ಲದೆ ಈ ಬಂದೂಕನ್ನು ಪೇಟೆಗಳಲ್ಲಿ ಉಪಯೋಗಿಸುವಾಗ ಇಂಟರ್‍ನೆಟ್ ಹಾಗೂ ಮೊಬೈಲ್ ಫೋನ್‍ಗಳು ಕೆಲಸ ಮಾಡುತ್ತಿರಲಿಲ್ಲ. ಇಷ್ಟಾಗಿಯೂ ಹಿಮಾಚಲ ಪ್ರದೇಶ ಸರ್ಕಾರವು ಹೇಗಾದರೂ ಮಾಡಿ ಮಂಗಗಳನ್ನು ನಿಯಂತ್ರಿಸಲೇ ಬೇಕೆಂದು 2015 ಸಾಲಿಗೆ 15 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದೆ. ತೆಲಂಗಾಣದಲ್ಲಿ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಮಂಗಗಳಿವೆ. ಇವುಗಳಿಗೆ ಪರ್ಯಾಯವಾಗಿ ಕಾಡು ಬೆಳೆಸುವ “ಹರಿತ ಹಾರಂ” ಎಂಬ ಯೋಜನೆಗಾಗಿ ಅಲ್ಲಿನ ಮುಖ್ಯಮಂತ್ರಿ ಚಂದ್ರಶೇಖರ ರಾವ್ 830 ಕೋಟಿ ರೂಪಾಯಿಗಳನ್ನು ಎತ್ತಿಟ್ಟಿದ್ದಾರೆ. ಈ ಯೋಜನೆಯ ಅನುಸಾರ ರಾಜ್ಯಾದ್ಯಂತ 373 ದಶಲಕ್ಷ ಸಸಿಗಳನ್ನು ನೆಟ್ಟು ಬೆಳೆಸುವುದು. ಅದೇಕೋ ಗೊತ್ತಿಲ್ಲ, ಇದರಲ್ಲಿ 365 ದಶಲಕ್ಷ ಗಿಡಗಳು ಯಾವುದೇ ರೀತಿಯ ಫಲ-ಪುಷ್ಪ ನೀಡುವ ತಳಿಗಳಾಗಿಲ್ಲ. ಒಳಗೇನೋ ಕಿಕ್-ಬ್ಯಾಕ್ ಇದೆ ಎಂದು ನೀವೆಂದುಕೊಂಡರೆ ನಮ್ಮ ಅಭ್ಯಂತರವೇನಿಲ್ಲ.

1998ರಲ್ಲೇ ಇಕ್ಬಾಲ್ ಮಲ್ಲಿಕ್ ಎಂಬ ಪ್ರಸಿದ್ಧ ವಾನರ ತಜ್ಞೆ ದೆಹಲಿ ಸರ್ಕಾರಕ್ಕೆ ಮಂಗಗಳ ಹಾವಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದ್ದರು. ಅತ್ಯಂತ ಗಂಭೀರವಾದ ಇವರ ಸಲಹೆಗಳನ್ನು ಜಾರಿ ಮಾಡುವಾಗ ಆಡಳಿತ ಎಡವಿತು. ಮಂಗಗಳು ಯಾವಾಗಲೂ ಗುಂಪಾಗಿ ಇರುತ್ತವೆ. ಮಂಗಗಳನ್ನು ಸ್ಥಳಾಂತರ ಮಾಡುವಾಗ ಅಥವಾ ಅವುಗಳಿಗೆ ಮರುವಸತಿ ಕಲ್ಪಿಸುವ ಸಂದರ್ಭದಲ್ಲಿ ಇಡೀ ಗುಂಪಿನ ಎಲ್ಲಾ ಮಂಗಗಳನ್ನು ಒಟ್ಟಿಗೆ ಹಿಡಿದು ಸಾಗಿಸಬೇಕು. ಆದರೆ ಅಲ್ಲಿನ ಆಡಳಿತ ಇದಕ್ಕೆ ವ್ಯತಿರಿಕ್ತವಾಗಿ ವರ್ತಿಸಿತು. ಎರ್ರಾಬಿರ್ರಿ ಮಂಗಗಳನ್ನು ಹಿಡಿಯಲಾಯಿತು. ಕೆಲವು ಗುಂಪುಗಳ ಹಲವು ಮಂಗಗಳು ತಪ್ಪಿಸಿಕೊಂಡು ಬೇರೆಯದೇ ತಂಡ ರಚಿಸಿಕೊಂಡವು. ಇದಕ್ಕೂ ಪೂರ್ವದಲ್ಲಿ ಅಂದರೆ ಸ್ಥಳಾಂತರಗೊಳಿಸುವ ಪೂರ್ವದಲ್ಲಿ, ನಿರ್ದೇಶಿತ ಮರುವಸತಿ ಸ್ಥಳದಲ್ಲಿ ಸಾಕಷ್ಟು ಹಣ್ಣು-ಹಂಪಲು ನೀಡುವ ಮರಗಳನ್ನು ಬೆಳೆಸಲು ಮಲ್ಲಿಕ್ ಸಲಹೆ ನೀಡಿದ್ದರು. ಆದರೆ ಅಲ್ಲಿನ ಆಡಳಿತ ಬೆಂಗಾಡಿಗೆ ಮಂಗಗಳ ಗುಂಪನ್ನು ಬಿಟ್ಟಿತು. ಸರಿಯಾದ ಬೇಲಿಯನ್ನು ನಿರ್ಮಾಣ ಮಾಡಲು ಆಗಲಿಲ್ಲ. ಒಟ್ಟಾರೆಯಾಗಿ ಈ ಯೋಜನೆ ವಿಫಲಗೊಂಡಿತು ಎಂದು ಬೇರೆ ಹೇಳಬೇಕಾಗಿಲ್ಲ. 

ಇಡೀ ದೇಶದಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಮುಗಿಲು ಮುಟ್ಟಿದೆ. ಬೃಹತ್ ದೇಹಿಯಾದ ಆನೆಯಿಂದ ಹಿಡಿದು ನರನೆಂಟ ಮಂಗಗಳವರೆಗೂ ಈ ಸಂಘರ್ಷದಲ್ಲಿ ಪಾಲ್ಗೊಂಡಿವೆ. ಕಾನೂನು ಕಾಯ್ದೆಯ ಪ್ರಕಾರ ಎಲ್ಲವನ್ನೂ ಕೊಲ್ಲುವ ಹಾಗಿಲ್ಲ. ವನ್ಯಜೀವಿ ಕಾಯ್ದೆ 1972ರ ಪ್ರಕಾರ ಕೆಲವು ಪ್ರಾಣಿಗಳನ್ನು ಮಾತ್ರ ಯಾರೂ ಬೇಕಾದರೂ ಕೊಲ್ಲಬಹುದು. ಉದಾಹರಣೆಗೆ ಕಾಗೆ ಹಾಗೂ ಮೊಲ. ಕಾಗೆ ಮತ್ತು ಮೊಲಗಳನ್ನು ಕೊಂದರೆ ಶಿಕ್ಷೆಯಿಲ್ಲ. ಏಕೆಂದರೆ, ಮಾನವನಿಗೆ ಇವು ಕೀಟಗಳಂತೆ (ವರ್ಮಿನ್) ಉಪದ್ರವಕಾರಿಯೆಂದು ಕಾಯ್ದೆಯಲ್ಲಿ ಹೇಳಲಾಗಿದೆ. ಕೆಲವು ದೇಶಗಳಲ್ಲಿ ಕಲ್ಲಿಂಗ್ ಪದ್ಧತಿಯ ಮೂಲಕ ಪೀಡೆಕಾರಕ ಪ್ರಾಣಿಗಳನ್ನು ಎಚ್ಚರತಪ್ಪಿಸಿ ಕೊಲ್ಲಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರದÀ ಹೆಚ್ಚುವರಿ ಅನುಮತಿ ಬೇಕಾಗುತ್ತದೆ ಹಾಗೂ ಅರಣ್ಯ ಇಲಾಖೆಯ ತಜ್ಞರು ಮಾತ್ರ ಕೊಲ್ಲಬಹುದಾಗಿದೆ.

ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು, ಸಮಸ್ಯೆಯನ್ನು ಬಿಗಡಾಯಿಸುವುದು, ಸಮಸ್ಯೆಗೆ ಪರಿಹಾರ ಹುಡುಕುವುದು, ಜಾರಿ ನಿರ್ಣಯ ಇತ್ಯಾದಿಗಳೆಲ್ಲ ನಮ್ಮ ಕೈಯಲ್ಲೇ ಇರುವುದರಿಂದ, ಹೇಗಾದರೂ (ಕೊಂದಾದರು) ವನ್ಯಜೀವಿಗಳಿಂದಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಲ್ಲೆವೆಂಬ ವಿಶ್ವಾಸ ನಮಗಿದೆ ಅಲ್ವಾ!

(ಕೃಪೆ: ಡೌನ್ ಟು ಅರ್ಥ್ 16-31 ಜುಲೈ 2015)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x