ಭ್ರಮೆ? (ಅತೀಂದ್ರಿಯ ಅನುಭವದ ಕಥೆಗಳು – ಭಾಗ ೪): ಗುರುಪ್ರಸಾದ ಕುರ್ತಕೋಟಿ

(ಈ ಕಥೆ ನನ್ನ ಗೆಳೆಯ ವಿಟ್ಠಲ ಕುಲಕರ್ಣಿಗಾದ ಅನುಭವದ ಮೇಲೆ ಹೆಣೆದಿದ್ದು. ನಂಬುವಿರೋ ಇಲ್ವೊ ಗೊತ್ತಿಲ್ಲ… ಇದನ್ನು ಅವನ ಬಾಯಿಂದ ಕೇಳುತ್ತಿದ್ದಾಗ ಹಾಗೂ ಈ ಕಥೆಯನ್ನ ರಾತ್ರಿ ಬರೆಯುತ್ತಿರುವಾಗ ನನ್ನ ಮೈಯಲ್ಲಿ ಭಯದ ಕಂಪನಗಳೆದ್ದಿದ್ದಂತೂ ನಿಜ! ಅಂದ ಹಾಗೆ, ಕಥೆಯಲ್ಲಿ ಬಳಸಿರುವ  ಹೆಸರು ನಿಜವಾದ ವ್ಯಕ್ತಿಯದಲ್ಲ.)

— 

ಸುಮಾರು ಹದಿನೈದು ವರ್ಷಗಳ ಹಿಂದೆ, ನಾನಿನ್ನೂ ಹುಬ್ಬಳ್ಳಿಯಲ್ಲೇ ಕೆಲಸ ಮಾಡುತ್ತಿದ್ದೆ. ಸ್ಟುಡಿಯೋ ಒಂದರಲ್ಲಿ ಗ್ರಾಫಿಕ್ ಡಿಸೈನರ್ ಕೆಲಸ. ಬೆಳಿಗ್ಗೆ ಒಂಭತ್ತರಿಂದ ಸಂಜೆ ಆರು . ಆದರೂ ಒಂದೊಂದು ಸಲ ಏಳು, ಕೆಲವು ಸಲ ಎಂಟು! ಹೀಗೆ ವೇಳೆ ಕೆಲಸದ ಮೇಲೆ ಅವಲಂಬಿತವಾಗಿತ್ತು. ಅದೂ ಅಲ್ಲದೆ ನಾನು ಆಗ ಬ್ರಹ್ಮಚಾರಿ ಮತ್ತು ಸ್ವತಃ ಕಲಾವಿದನಾದ್ದರಿಂದ ನಾ ಮಾಡುತ್ತಿದ್ದ  ಕೆಲಸ ನನಗೆ ಖುಷಿ ಕೊಡುತ್ತಿತ್ತು ಎಂಬ ಕಾರಣಕ್ಕೆ ಕೆಲವು ಸಲ ಹಾಗೆ ಕೆಲಸದಲ್ಲಿ  ತಲ್ಲೀನನಾಗಿ ಗಡಿಯಾರ ನೋಡುವುದೇ ಮರೆತುಬಿಡುತ್ತಿದ್ದೆ!

ಹುಬ್ಬಳ್ಳಿ, ನಾನು ಹುಟ್ಟಿ ಬೆಳೆದ ಊರು. ಉತ್ತರ ಕರ್ನಾಟಕದವರಿಗೆ ದೊಡ್ಡ ವಾಣಿಜ್ಯ ಕೇಂದ್ರವದು. ಆದರೂ ಅದಿನ್ನೂ ಬೆಂಗಳೂರಾಗಿಲ್ಲ! ಅಂದರೆ ಅಷ್ಟೊಂದು ಹಾಳಾಗಿಲ್ಲ! ಬೆಂಗಳೂರಿನಷ್ಟು ಸೌಕರ್ಯಗಳು ಅಲ್ಲಿಲ್ಲ, ಅಥವಾ ಬೆಂಗಳೂರಿಗೆ ಸಿಕ್ಕ ಗಮನ ನಮಗೆ ಸಿಕ್ಕಿಲ್ಲ ಅನ್ನುವ ಬೇಜಾರು ನಮ್ಮ ಕಡೆಯವರಿಗಿದ್ದರೂ, ಅಲ್ಲಿನ ಎಲ್ಲವೂ ನಮಗಿಷ್ಟ! ಅಲ್ಲಿನ ಸಣ್ಣ ಗಲ್ಲಿಗಳಿರಬಹುದು, ಎಲ್ಲಿ ಕಣ್ಣು ಹಾಕಿದರೂ ಕಾಣುವ ಬೀಡಿ ಅಂಗಡಿಗಳಿರಬಹುದು, ಕೆಲವೇ ಕೆಲವು ಪ್ರವಾಸಿ ತಾಣಗಳಲ್ಲೊಂದಾದ  ಉಣಕಲ್ ಕೆರೆ ಇರಬಹುದು, ಒಮ್ಮಿಂದೊಮ್ಮೆಲೆ ಕಣ್ಣೊಳಗೆ ಅಡರಿ ದಳ ದಳ ನೀರು ಸುರಿಸುವ ಧೂಳಿರಬಹುದು, ಧುತ್ತನೆ ದಾರಿಯಲ್ಲಿ ಎದುರಾಗುವ ದನ… ಇವೆಲ್ಲವೂ ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ.       

ನಮ್ಮ ಮನೆ ಇದ್ದದ್ದು ಕೇಶವಾಪುರದಲ್ಲಿ. ನನ್ನ ಆಫಿಸಿನಿಂದ ನಡೆದುಕೊಂಡು ಹೋದರೆ ಅರ್ಧ ಗಂಟೆಯ ಹಾದಿ. ಆಗಿನ್ನೂ ಬೈಕಿನ ಹಾವಳಿ ಅಷ್ಟಿರಲಿಲ್ಲ. ಅದೂ ಅಲ್ಲದೇ  ಇನ್ನೂ ಆಗ ತಾನೇ ಕೆಲಸಕ್ಕೆ ಸೇರಿದ್ದರಿಂದ ಅದನ್ನು ಕೊಳ್ಳುವ ತಾಕತ್ತೂ ನನ್ನಲ್ಲಿರಲಿಲ್ಲ. ಹೀಗಾಗಿ ಆಫಿಸಿಗೆ ನಡೆದುಕೊಂಡೆ ಹೋಗಿ ಬರುತ್ತಿದ್ದೆ. ನಾನಾಗಲೇ ಹೇಳಿದಂತೆ ಹುಬ್ಬಳ್ಳಿ ಇನ್ನೂ ಬೆಂಗಳೂರಿನಂತಾಗಿಲ್ಲದ್ದರಿಂದ ಇನ್ನೂ ಜನರ ನಡುವೆ ಒಂದು ಸಂಪರ್ಕವಿತ್ತು, ಈಗಲೂ ಇದೆ. ನಮ್ಮ ಓಣಿಯಲ್ಲಿರುವ ಬಹುತೇಕ ಮಂದಿ ನನಗೆ ಗೊತ್ತು. ಅವರು ನನ್ನ ತಂದೆಯ ಗೆಳೆಯರೋ, ಇಲ್ಲ ನನ್ನಣ್ಣಂದಿರ ಗೆಳೆಯರೋ, ನನ್ನ ಗೆಳೆಯರೋ ಯಾರೇ ಇದ್ದರೂ ದಾರಿಯಲ್ಲಿ ಭೇಟಿಯಾದಾಗ ಒಂದು ನಮಸ್ಕಾರವೋ ಇಲ್ಲಾ "ಊಟಾತೇನಪಾ? ಅಪ್ಪ ಹೆಂಗಿದ್ದಾರ?" ಅನ್ನುವ ಬರೀ ಔಪಚಾರಿಕವಲ್ಲದ, ಕಾಳಜಿಪೂರ್ವಕ ಮಾತುಕತೆಗಳು ನಡೆಯುವುದು ಅಲ್ಲಿ ಮಾಮೂಲಿ.

ಹೀಗೆ ನಮ್ಮ ಮನೆಯಿಂದ ತುಸು ದೂರದಲ್ಲಿದ್ದವರು ಶಂಕ್ರಣ್ಣ. ಅವರು ಹೆಚ್ಚುಕಡಿಮೆ ನನ್ನ ತಂದೆಯ ವಾರಿಗೆಯವರೇ. ಅವರು  ಒಂದು ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರಾಗ ನಿವೃತ್ತಿಯ ಹೊಸ್ತಿಲಲ್ಲಿದ್ದರು. ಅವರದು ಒಂದು ಚಿಕ್ಕ ಸಂಸಾರ. ಹೆಂಡತಿ ಹಾಗೂ ಒಬ್ಬ ಮಗನೊಂದಿಗೆ  ವಾಸವಾಗಿದ್ದರು. ಅವರ ಮನೆಗೆ ನಾನು ಹೋಗುವದು ಅಪರೂಪವೇ. ಒಂದು ಸಲ ಏನೋ ಕೆಲಸವಿದೆ ಎಂದು ಕರೆದಿದ್ದರು. ತಾವು ಹೆಂಡತಿಯ ಜೊತೆಗಿದ್ದ ಹಳೆಯ ಫೋಟೋವೊಂದನ್ನು ಸ್ವಲ್ಪ ಪರಿಷ್ಕರಿಸಿ ದೊಡ್ಡದಾಗಿ ಮಾಡಿಸಬೇಕೆಂದು ಅವರ ತಲೆಯಲ್ಲಿ ಬಂದಿತ್ತು.  ನನ್ನಪ್ಪ ಆ ಕೆಲಸಕ್ಕೆ ನನ್ನ ಹೆಸರು ಸೋಚಿಸಿದ್ದರಂತೆ. ಅದನ್ನು ನನ್ನ ತಂದೆಯೇ ನನಗೆ ತಿಳಿಸಿ ಅವರ ಮನೆಗೆ ಹೋಗಲು ಹೇಳಿದ್ದರು. 

ಅಲ್ಲೇ ಹತ್ತಿರದಲ್ಲೇ ಶಂಕ್ರಣ್ಣನವರ ಮನೆ ಇದ್ದ ಕಾರಣ, ಹೋದರಾಯ್ತು ಅನ್ನುತ್ತಲೇ ನಾಲ್ಕೈದು ದಿನಗಳು ಕಳೆದಿದ್ದವು. ಅವರೂ ಕೂಡ ಹಿಂದಿನ ದಿನವೇ ಮತ್ತೆ ಅಪ್ಪನ ಬಳಿ ಅದನ್ನು ನೆನಪಿಸಿದ್ದರಂತೆ. ಅದಕ್ಕೆ, ಸಂಜೆ ಹೋದರಾಯ್ತು ಅಂತ ಅವತ್ತು ನಿರ್ಧರಿಸಿದ್ದೆ.  ಆಫಿಸಿಗೆ ಹೋದವನು ಅದು ಇದು ಅಂತ ಕೆಲಸದಲ್ಲಿ ಮುಳುಗಿ ಸಂಜೆ ವಾಪಸ್ಸು ಬರುವಷ್ಟರಲ್ಲಿ ಎಂಟಾಗಿತ್ತು. ನಾನು ಮನೆಗೆ ಮರಳುತ್ತಿದ್ದೆ. ಶಂಕ್ರಣ್ಣನವರ ಮನೆಗೆ ಹೋಗಬೇಕೆಂದು ಮಾಡಿದ್ದ ನಿರ್ಧಾರ ನೆನಪಾಯಿತು. ಆದರೆ ಇಷ್ಟು ರಾತ್ರಿಯಾಗಿದೆ, ಹೋಗಲೋ ಬೇಡವೋ ಅನ್ನುವ ದ್ವಂದ್ವದಲ್ಲಿದ್ದೆ. ನಮ್ಮ ಮನೆಯ ಹತ್ತಿರದಲ್ಲೇ ಒಂದು ತಿರುವು ಇದೆ.  ಅಲ್ಲಿ ಜಾಸ್ತಿ ಜನರ ಓಡಾಟವಿರಲಿಲ್ಲ. ಬೀದಿ ದೀಪದ ಬೆಳಕಿತ್ತು. ಅಲ್ಲೇ ಸ್ವಲ್ಪ ದೂರದಲ್ಲಿ ಶಂಕ್ರಣ್ಣ ನಿಧಾನವಾಗಿ ನಡೆದುಬರುತ್ತಿರುವುದು ನನಗೆ  ಕಂಡಿತು. ಅವರ ಬಗಲಲ್ಲೊಂದು ಚೀಲವಿತ್ತು. ಹೆಚ್ಚು ಕಡಿಮೆ ಐವತ್ತೆಂಟು ವಯಸ್ಸಾಗಿದ್ದು, ಕೆಲವು ವಯೋಸಹಜ ಕಾಯಿಲೆಗಳಿಂದಾಗಿ ಅವರ ಕಾಲುಗಳಲ್ಲಿ ನೋವಿರುತ್ತಿತ್ತು. ಹೀಗಾಗಿ, ಸ್ವಲ್ಪ ನಿಧಾನವಾಗಿಯೇ ನಡೆದುಕೊಂಡು ಬರುತ್ತಿದ್ದರು. ಈ ರಾತ್ರಿ ಒಬ್ಬರೇ ಎಲ್ಲಿ ಹೋಗುತ್ತಿದ್ದಾರೆಂದು ನನಗೆ ಆಶ್ಚರ್ಯವಾಗಿತ್ತಾದರೂ, ಹಾಗೆ ದೊಡ್ಡವರನ್ನು ಕೇಳಲಾದೇತೆ? ನಾನು ನಮಸ್ಕರಿಸಿದೆ. ತಲೆ ಎತ್ತಿ ನೋಡಿದರು. ಗುರುತು ಹಿಡಿದು ಪರಿಚಯದ ನಗೆ ನಕ್ಕರು. ಅದೊಂದು ಶುಷ್ಕ ನಗೆ. ಸ್ವಲ್ಪ ಬಳಲಿದಂತೆ ಕಂಡರು.   

"ನಿಮ್ಮ ಮನಿಗೇ ಹೊಂಟಿದ್ದೆ ನೋಡ್ರಿ. ನೀವೇನೋ ಕೆಲಸಾ ಅದ ಅಂತ ಹೇಳಿದ್ರಂತ ನನ್ನ ಅಪ್ಪನ ಹತ್ರ." ಅವರು ಏನೋ ಗಹನವಾದ ಯೋಚನೆಯಲ್ಲಿದ್ದಂತೆ ಕಂಡರಾದರೂ, ನನ್ನ ಪ್ರಶ್ನೆಯನ್ನು ಆಗಲೇ ನಿರೇಕ್ಷಿಸಿದ್ದರೇನೊ ಎಂಬಂತೆ ಕೂಡಲೇ ಉತ್ತರಿಸಿದರು.

"ಹೌದು ಹೇಳಿದ್ದೆ, ಆದ್ರ ಈಗೇನ ಬ್ಯಾಡ ಬಿಡು. ನನಗ ಇಲ್ಲೇ ಸ್ವಲ್ಪ ಕೆಲಸಾ ಅದ ಹೊಂಟಿನಿ. ಆಮ್ಯಾಲ್ಯಾವಾಗರೆ ನೋಡೋಣಂತ." ಅಂದು, ಆ ಕಡೆ ಹೊರಟಿರುವೆನೆಂಬಂತೆ ಒಂದು ದಿಕ್ಕಿನೆಡೆಗೆ ಕೈ ಮಾಡಿ ತೋರಿಸಿದರು. ನನಗೂ ಕೆಲಸದ ದಣಿವು ಇತ್ತಾದ್ದರಿಂದ, ಅವರಿಗೆ ಬೀಳ್ಕೊಟ್ಟು ಮನೆಗೆ ಬಂದೆ. ಹಸಿವೆಯಾಗಿತ್ತಾದ್ದರಿಂದ ಕೈ ಕಾಲು ತೊಳೆದುಕೊಂಡು ಊಟಕ್ಕೆ ಕೂತೆ. ಅಮ್ಮ ಬಡಸುತ್ತಿದ್ದರು. ಜೊತೆಗೆ ಅಪ್ಪನೂ ಊಟಕ್ಕೆ ಕೂತರು. ಇದು ನನ್ನ ದಿನಚರಿಯಾಗಿತ್ತು. ಆ ದಿನ ನಡೆದ ಎಲ್ಲ ಸಮಾಚಾರಗಳನ್ನೂ ಊಟ ಮಾಡಿಕೊಂಡೆ ಅಪ್ಪ ಅಮ್ಮನೊಂದಿಗೆ ಹರಟುತ್ತಿದ್ದೆ. ಅದು ಇದು ಮಾತನಾಡುತ್ತ ಸ್ವಲ್ಪ ಹೊತ್ತಿನ ಹಿಂದೆ ದಾರಿಯಲ್ಲಿ ಶಂಕ್ರಣ್ಣನವರು ಸಿಕ್ಕ ಸುದ್ದಿ ಹೇಳಿದೆ. ಅಪ್ಪ ಆವಾಕ್ಕಾದಂತೆ ಕಂಡರು.

"ಏನ್ ಹುಚ್ಚ ಗಿಚ್ಚ ಹಿಡದದೇನ್ ನಿನಗ?" ಅಂದ್ರು

"ಯಾಕಪಾ?" ಅಂದೆ

"ಅವ್ರ ಹೆಂಗ ಸಿಗಲಿಕ್ಕೆ ಸಾಧ್ಯ? ಅವ್ರು ಇವತ್ತ ಮದ್ಯಾಹ್ನನ ತೀರಕೊಂಡ್ರು" ಅಂದರು!  ನನ್ನ ಗಂಟಲಲ್ಲಿ ತುತ್ತು ಸಿಕ್ಕಿ ಕೊಂಡಿತ್ತು! ನೀರು ಕುಡಿದು ಸುಧಾರಿಸಿಕೊಂಡೆ. ನನಗೆ ಅಪ್ಪನಿಗೆ ಹುಚ್ಚು ಹಿಡಿದಿರಬಹುದೆ ಅಂತ ಸಂಶಯವಾಯ್ತು. ಈಗ ತಾನೇ ನನ್ನನ್ನು ಮಾತಾಡಿಸಿದ್ದ ಮನುಷ್ಯನೊಬ್ಬ ಮದ್ಯಾಹ್ನವೇ ಸತ್ತುಹೋಗಿದ್ದನೆಂಬ ವಿಷಯ ನಂಬಲಸಾಧ್ಯವಾಗಿತ್ತು. ಆದರೆ ಅವರು ಸತ್ತಿದ್ದು ನಿಜವೆಂದು ನನ್ನಮ್ಮನೂ ಹೇಳಿದರು. ನಾನಂತೂ ಕಳೆದುಹೋಗಿದ್ದೆ!           

—  

ಈ ಘಟನೆಯನ್ನು ಅರಗಿಸಿಕೊಳ್ಳಲು ವಿಟ್ಠಲನಿಗೆ ಆಮೇಲೆ ಎಷ್ಟೋ ದಿನಗಳು ಹಿಡಿದಿರಬೇಕು. ಈ ಅನುಭವ ಕೆಲವು ಪ್ರಶ್ನೆಗಳನ್ನಂತೂ ಹುಟ್ಟು ಹಾಕುತ್ತದೆ. ವಿಟ್ಠಲ ನೋಡಿದ್ದು ಯಾರನ್ನು? ಶಂಕ್ರಣ್ಣನವರ ಬಗ್ಗೆಯೇ ಯೋಚಿಸುತ್ತಾ ಹೋಗುತ್ತಿದ್ದನಾದ್ದರಿಂದ ಅದು ಅವನ ಭ್ರಮೆಯಾಗಿತ್ತೆ? ಅವರನ್ನು ಬರೀ ಕಂಡಿದ್ದರೆ ಹಾಗೇ  ಅಂದುಕೊಳ್ಳಬಹುದಿತ್ತು, ಕೆಲಸದ ಗುಂಗಿನಲ್ಲೋ ಅಥವಾ ಕತ್ತಲೆಯಿದ್ದುದರಿಂದೊ, ಅವರ ತರಹದ ಯಾವುದೋ ವ್ಯಕ್ತಿಯನ್ನು ನೋಡಿದ್ದನೇನೋ ಅಂದುಕೊಳ್ಲಬಹುದಿತ್ತು. ಆದರೆ ಅವರಿಬ್ಬರ ನಡುವೆ ನಿರ್ದಿಷ್ಟ ವಿಷಯದ ಬಗ್ಗೆ ಮಾತುಕತೆ ನಡೆದಿದೆ. ಅದೂ ಅಲ್ಲದೇ ವಿಟ್ಠಲನಿಗೆ ಶಂಕ್ರಣ್ಣ ಸತ್ತ ವಿಷಯವೇ ಗೊತ್ತಿರಲಿಲ್ಲ. ಹಾಗೆ ಮೊದಲೇ ಗೊತ್ತಿದ್ದಿದ್ದರೆ ಅದೊಂದು ರೀತಿಯ ಭ್ರಮೆ ಸೃಷ್ಠಿಯಾಗುವ ಸಾಧ್ಯತೆಗಳಿದ್ದವು. ಇನ್ನೂ ಒಂದು ವಿಷಯ ಇಲ್ಲಿ ಕುತೂಹಲ ಕೆರಳಿಸುತ್ತದೆ. ಅವರು ತಮಗೆ ಏನೋ ಕೆಲಸವಿದೆ ಅಂತ ಹೇಳಿ ಕೈ ತೋರಿಸಿದ ದಿಕ್ಕಿನಲ್ಲಿ ಸ್ಮಶಾನವಿದ್ದುದು ಅವರು ಸತ್ತ ವಿಷಯ ಕೇಳಿದ ಬಳಿಕ ಯೋಚಿಸುವಾಗ ವಿಟ್ಠಲನ ಗಮನಕ್ಕೆ ಬಂತಂತೆ! ಅದೂ ಅಲ್ಲದೆ ತಮ್ಮ ಫೋಟೊವನ್ನು ದೊಡ್ಡದಾಗಿ ಮಾಡಿಸುವ ವಿಚಾರ ಅವರಿಗೆ  ಬಂದಿದ್ದು, ತಮಗೆ ಮೃತ್ಯುಯೋಗ ಹತ್ತಿರದಲ್ಲೇ ಇದೇ ಅಂತ ಅವರಿಗೆ ಮೊದಲೇ ತಿಳಿದಿತ್ತೆನ್ನುವುದನ್ನು ಸೂಚಿಸುತ್ತದೆಯೇ? ಉತ್ತರ ಹೇಳುವವರ್ಯಾರು?       

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

28 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
10 years ago

ಇಂಥಹ ಅತೀಂದ್ರಿಯ ಘಟನೆಗಳು ನಡೆದಿದ್ದನ್ನು
ನಾನೂ ಕೇಳಿರುವೆ. ತರ್ಕಕ್ಕೆ ನಿಲುಕದ ಸಂಗತಿಗಳು
ಹಲವಾರು ಇವೆ. ನಮ್ಮ ಅರಿವಿಗೆ ಹೊರತಾಗಿ
ಹಲವು ಸಂಗತಿಗಳು ಘಟಿಸುತ್ತವೆ. ಏನೇ ಆಗಲಿ
ಕಥನದ ನಿರೂಪಣೆ ಮೈ ಝುಂ ಎನಿಸುತ್ತದೆ.
ನನ್ನ ಹಿರಿಯ ಗೆಳೆಯ ಸಾಯುವ ಹಿಂದಿನ
ದಿನ ಫೇಸ್-ಬುಕ್ ನಲ್ಲಿ ಇದು ನನ್ನ ಕಡೆಯ
ಪೋಸ್ಟ್ ಎಂದು ಬರೆದಿದ್ದರು. ಇದೀಗ ಅವರು
ತೀರಿಕೊಂಡು ೧೫ ದಿನವಾಯಿತಷ್ಟೆ. ಬರಹಕ್ಕೆ
ಧನ್ಯವಾದಗಳು ಕುರ್ತಕೋಟಿಯವರೆ.

Guruprasad Kurtkoti
10 years ago

ಹೌದು ಅಖಿಲೇಶ, ಇವು ತರ್ಕಕ್ಕೆ ನಿಲುಕದ ಸಂಗತಿಗಳೆ. ನಿಮ್ಮ ಗೆಳೆಯರ ಸುದ್ದಿಯೂ ಅದೇ ತರಹ ಚಿಂತನೆಗೀಡು ಮಾಡುತ್ತದೆ. ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
10 years ago

ಒಮ್ಮೊಮ್ಮೆ ಹೀಗೆ ತರ್ಕಕ್ಕೆ ನಿಲುಕದ ಸಂಗತಿಗಳು ಜರುಗಿಬಿಡುತ್ತವೆ..  ಹೇಳಿದರೆ ನಂಬುವ, ನಂಬದಿರುವ ಮುಖಚರ್ಯೆಗಳ ಪ್ರಶ್ನಾರ್ತಕ ಮತ್ತು ಆಶ್ಛರ್ಯಕರ ನೋಟಕ್ಕೆ ನಮ್ಮಲ್ಲಿ ಯಾವುದೇ ಉತ್ತರವಿರುವುದಿಲ್ಲ. ಬರಹ ತುಂಬಾ ಇಷ್ಟವಾಯ್ತು ಗೆಳೆಯ…..

Guruprasad Kurtkoti
10 years ago

ಹೌದು ಅಮರ್, ನೀವು ಹೇಳಿದ್ದು ಅಕ್ಷರಶಃ ಸತ್ಯ! ಬರಹವನ್ನು ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು!

Vitthal Kulkarni
Vitthal Kulkarni
10 years ago

ಭಾಳ ಛೊಲೋ ಬಂದದ… ಈ ಕಥಿ ನನಗ ಇನ್ನೂ ವಿಚಾರಕ್ಕ ಹಚ್ಚತದ ನಾ ಅವರನ್ನ ಭೆಟ್ಟಿಯಾಗಿದ್ನೋ ಅಥವಾ ನನ್ನ ಭ್ರಮೇನೋ ಅಂತ, ಅದು ಸುಳ್ಳೋ ಖರೇನೋಅಂತ. ನಾ ಎನ್ ಹೇಳಲಿ ತಿಳಿವಲ್ಲತು… ರಾತ್ರಿ ಕೊಮ್ಮೆಂಟ್ ಬಾರೀಬೇಕು ಅಂತಿದ್ದೆ ಆದ್ರೆ ಅಫಿಸನ್ಯಾಗ ಬರೆ ಆದರದ ವಿಚಾರ ಬರಲಿಕ್ಕೆಹತ್ಯಾವ… ಭಾರಿ ಛೊಲೋ ಬಂದದ ಗುರು…

Guruprasad Kurtkoti
10 years ago

ವಿಟ್ಠಲ, ನಿನ್ನ ಕಥೆಯನ್ನು ಮತ್ತೆ ನೆನಪು ಮಾಡಿಕೊಟ್ಟು ಅದು ನಿನ್ನನ್ನು ಕಾಡುವಂತೆ ಮಾಡಿದ್ದರೆ ಕ್ಷಮೆ ಇರಲಿ! ಆದರೆ ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ, ಹಾಗೆ ಅದು ನಿನ್ನ ಕಾಡಿದ್ದರೆ, ಅದು ನನ್ನ ಬರವಣಿಗೆಗೆ ಸಿಕ್ಕ ಪುರಸ್ಕಾರ ಅಂದುಕೊಳ್ಳೂತ್ತೇನೆ :). ಧನ್ಯವಾದಗಳು!

Ambika
Ambika
10 years ago

Tumba chennagide Guru:) Namma oohege nilukadanta yeshto sangathigalu ee vishwadalli nadithane iruthave. Eee reeti ghatanegalu namma vydnyanika mano bhudhige ondu savalu. Katheya jothege nimma baravanigeya shailiyu tumba ishtavaythu. My eyes were glued on the screen from first line till the end:)

Guruprasad Kurtkoti
10 years ago
Reply to  Ambika

ಅಂಬಿಕಾ, ಮೊದಲ ಸಾಲಿನಿಂದ ಕೊನೆಯ ಸಾಲಿನವರೆಗೆ ಬಿಟ್ಟೂಬಿಡದೇ ಓದಿಸಿಕೊಂಡು ಹೋಗುವಷ್ಟು ಕುತೂಹಲಕರವಾಗಿದೆ ಎಂದು ನೀವು ಹೇಳಿದ್ದು ಕೇಳಿ ಖುಷಿಯಾಯ್ತು! ಅಭಿನಮಾನವಿಟ್ಟು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

umesh desai
10 years ago

ಹುಂ ಏನ್ರಿ ಇದು ನಂಬೂದು ಅಷ್ಟು ಸುಲಭಅಲ್ಲ ಆದ್ರ ಕೆಲವು ನಮ್ಮ ಅಳತಿಗೆ ಸಿಗದ್ದು ಇರತಾವ..

Guruprasad Kurtkoti
10 years ago
Reply to  umesh desai

ಹೌದು ಉಮೇಶ, ನಂಬೂದು ಸುಲಭಲ್ಲ. ಆದರ ನಂಬದ ಇರಲಿಕ್ಕೂ ಆಗೂದಿಲ್ಲ! ನೀವು ಹೇಳಿದಂಗ ಇವು ಅಳತಿಗೆ ಸಿಗಲಾರದಂಥ ಸಂಗತಿಗಳು. ಧನ್ಯವಾದಗಳು!

pramod
pramod
10 years ago

thumba chennagide. EE ghataneya bhage neneskondare nija vaagiyu aascharyavaagide. idu khandithavaagiyu mrutyuyogada bhage soochane. adallade vittalarige ee phot frame madisuva bage ondu ghatanege dhaari.

Guruprasad Kurtkoti
10 years ago
Reply to  pramod

ಪ್ರಮೋದ, ಮೃತ್ಯುಯೋಗದ ಬಗ್ಗೆ ಇನ್ನೂ ಎಷ್ಟೋ ಕತೆಗಳನ್ನು ನಾವು ಕೇಳಿರುತ್ತೇವೆ. ಅದು ನಿಜಕ್ಕೂ ವಿಚಿತ್ರ ಆದರೂ ನಿಜ! ಅಭಿಮಾನದಿಂದ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Nameeta
Nameeta
10 years ago

OMG!!!! What a story! Vitthal, I really can't imagine what you must have felt when you realized the truth!!!

Guruprasad Kurtkoti
10 years ago
Reply to  Nameeta

ನಮಿತಾ, ಅದನ್ನು ಕೇಳಿ ಅಥವ ಓದಿದ ನಮಗೇ ಇಷ್ಟೊಂದು ಭಯವಾಗುವಾಗ, ವಿಟ್ಠಲನ ಆಗಿನ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ! ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!

prashasti.p
10 years ago

NIce annoke idu kate alla !!!

Namboke aagada ghatanegalu e tarad eshtidyo ? ! namma arivige bandiddu 10% aadre baaraddu 90% irattante

Guruprasad Kurtkoti
10 years ago
Reply to  prashasti.p

ಪ್ರಶಸ್ತಿ, ನೀವು ಹೇಳೋದು ಸರಿ. ಆದರೆ ನಂಬದೆ ಇರುವುದೂ ಕಷ್ಟವೇ :)… ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು!

Rajendra B. Shetty
10 years ago

ಇಂತಹ ವಿಚಾರಗಳನ್ನು,ಸಾಮಾನ್ಯವಾಗಿ, ಭ್ರಮೆಯೆಂದೋ, ಸುಳ್ಳು ಅಂದೋ, ಮೂಡ ನಂಬಿಕೆಯೆಂದೊ ತಳ್ಳಿ ಹಾಕುತ್ತಾರೆ. ಇಂತಹ ವಿಚಾರಗಳನ್ನು ಕಾರಂತರ ಪುಸ್ತಕಗಳಲ್ಲಿ, ಅರ್. ಕೆ. ನಾರಾಯಣರ ಪುಸ್ತಕಗಳಲ್ಲಿ ಓದಿದ್ದೆ. ಸಣ್ಣ ಪ್ರಮಾಣದಲ್ಲಿ ನನಗೂ ಅನುಭವವಾಗಿದೆ.
ನನ್ನ ತಾಯಿ, ಸತ್ತವರನ್ನು ಕಂಡ ಬಗ್ಗೆ ಆಗಾಗ ಹೇಳುತ್ತಿದ್ದರು. ಸುಮಾರು ಐವತ್ತು ವರ್ಷಗಳ ಹಿಂದೆ, ನನ್ನ ತಾಯಿ ರಾತ್ರಿಯಲ್ಲಿ, ಮೂವತ್ತು ಕಿಲೋಮೀಟರ್ ದೂರ ಆಸ್ಪತ್ರೆಯಲ್ಲಿದ್ದ ಅಜ್ಜಿಯೊಬ್ಬರನ್ನು ಕಂಡಿದ್ದರು. ಮರುದಿನ ಬೆಳಿಗ್ಗೆ ಅವರು ಸತ್ತ ವಿಷಯ ನಮಗೆ ಗೊತ್ತಾಯಿತು. ಇಂತಹ ಅತೀಂದ್ರಿಯ ಅನುಭವದ ಬಗೆಗೆ ಅಧ್ಯಯನ ನಡೆಯಬೇಕು. ಸುಳ್ಳು, ಭ್ರಮೆ ಅನ್ನುತ್ತಾ ತಳ್ಳಿ ಹಾಕ ಬಾರದು.

ನಿಮ್ಮ ಲೇಖನ ಚೆನ್ನಾಗಿತ್ತು. ಸ್ವಲ್ಪ ಮಟ್ಟಿಗೆ ಹೃದಯ ಬಡಿತದಲ್ಲಿ ಏರು ಪೇರಾಗಿತ್ತು.

Guruprasad Kurtkoti
10 years ago

ರಾಜೇಂದ್ರ, ನೀವು ಹೇಳಿದಂತೆ ಖಂಡಿತವಾಗಿಯೂ ಇದರ ಮೇಲೆ ಅಧ್ಯಯನ ನಡೆಯಬೇಕು. ಅಧ್ಯಯನಕ್ಕೆ ಬೇಕಾದ ಸಲಕರಣೆಗಳು ಈಗ ಲಭ್ಯವಿವೆ! ಅದರ ಬಗ್ಗೆ ಮುಂದೆ ಬರೆಯುವೆ :). ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Gaviswamy
10 years ago

ಅನುಭವ ಕಥನ ಭೀತಿ ಹುಟ್ಟಿಸಿತು ಸರ್ 🙂
ತುಂಬಾ ಸ್ವಾರಸ್ಯಕರ ನಿರೂಪಣೆ.

Guruprasad Kurtkoti
10 years ago
Reply to  Gaviswamy

ಗವಿಸ್ವಾಮಿ, ಬರಹವನ್ನು ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

minchu
minchu
10 years ago

ನಿಮ್ಮ ಕಥನ ಶೈಲಿ ತುಂಬಾ ಚೆನ್ನ.. ಎಲ್ಲರ ಪ್ರತಿಕ್ರಿಯೆಗಳಿಗೆ ನೀವು ಉತ್ತರಿಸಿದ್ದು ಹಾಗೂ ಅದರ ರೀತಿ ತುಂಬಾ ಆಪ್ತ ಅನ್ನಿಸ್ತು Sir.. 

Guruprasad Kurtkoti
10 years ago
Reply to  minchu

ಮಿಂಚು ಅವರೆ, ನಿಮ್ಮ ಮಿಂಚಿನ ಅನಿಸಿಕೆಗೆ ಧನ್ಯವಾದಗಳು :). ನನ್ನ ಶೈಲಿ ಹಾಗೂ ಪ್ರತಿಕ್ರಿಯಿಸುವ ರೀತಿಯನ್ನು ಇಷ್ಟಪಟ್ಟಿದ್ದು ಕೇಳಿ ಖುಷಿಯಾಯ್ತು!

Narayan Sankaran
Narayan Sankaran
10 years ago

ನನಗೆ ಮೊದಲ ಮೂರು ಕಂತುಗಳು ಹೆಚ್ಚು ಹಿಡಿಸಿದ್ವು ಗುರು. This one is a bit unpalatable

Guruprasad Kurtkoti
10 years ago

ನಾರಾಯಣ, ನಿಮಗೆ ಈ ಕಂತು ಇಷ್ಟವಾಗಿಲ್ಲದಿದ್ದರೂ ಪರವಾಗಿಲ್ಲ,…. ಪ್ರೀತಿಯಿಂದ ಓದಿದಿರಲ್ಲ, ಅಷ್ಟೇ ನನಗೆ ಖುಷಿ 🙂

ದಿವ್ಯ ಆಂಜನಪ್ಪ

ನಿರೂಪಣೆ ಮತ್ತು 'ಭ್ರಮೆ' ಎನಿಸೋ 'ನಿಜ ಕಥೆ'ಯು ಸೊಗಸಾಗಿ ಮೂಡಿ ಬಂದಿದೆ ಸರ್,, 🙂 

Guruprasad Kurtkoti
10 years ago

ದಿವ್ಯ, ಬರಹವನ್ನು ಓದಿ ಮೆಚ್ಚಿಕೊಂಡಿದಕ್ಕೆ ಧನ್ಯವಾದಗಳು!

Rajesh Nayak
Rajesh Nayak
10 years ago

ಹುಬ್ಬಳ್ಳಿ ಅಂತ ಓದಿದಾಗ ಕಿವಿ ನೆಟ್ಟಗಾತ ನೋಡ್ರಲಾ…
ಕಥಿ ಓದಿ ಚಳಿ ಜ್ವರ ಬಂದ್ಯಾ ದ.

Guruprasad Kurtkoti
10 years ago
Reply to  Rajesh Nayak

ರಾಜೇಶ, ಅಭಿಮಾನದಿಂದ ಓದಿ ಚಳಿ ಜ್ವರ ಬರೆಸಿಕೊಂಡದ್ದಕ್ಕೆ ಧನ್ಯವಾದಗಳು! 🙂

28
0
Would love your thoughts, please comment.x
()
x