ಭೌತದ ಬೆನ್ನೇರಿ

ಭೌತ ವಿಜ್ಞಾನದ ಬೆನ್ನೇರಿ, ನಿಸರ್ಗದಲ್ಲೊಂದು ಸವಾರಿ: ರೋಹಿತ್ ವಿ. ಸಾಗರ್

ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸುವು ಜನಜೀವನಕೆ ಎಂದು ಡಿ.ವಿ.ಜಿಯವರು ’ಮಂಕುತಿಮ್ಮನಕಗ್ಗ’ದಲ್ಲಿ ಹೇಳಿರುವಂತೆ ಯಾವ ಆಚರಣೆ, ಸಂಪ್ರದಾಯ ಮತ್ತು ತಿಳುವಳಿಕೆಗಳು ವಿಜ್ಞಾನದೊಂದಿಗೆ ಬೆಸೆಯುತ್ತವೆಯೋ ಅವುಗಳಿಂದ ಮಾತ್ರ ಮನುಕುಲದ ಉನ್ನತೀಕರಣ ಸಾಧ್ಯ. ಆದರೆ ಈ ವಿಜ್ಞಾನವನ್ನು ಜನರಿಗೆ ತಲುಪಿಸುವುದು ಪ್ರಯಾಸದ ಕೆಲಸ ಏಕೆಂದರೆ ಎಲ್ಲಾ ಜನರಿಗೂ ಇಂಗ್ಲೀಷ್ ಬರುವುದಿಲ್ಲ ; ವಿಜ್ಞಾನದ ಪದಗಳು ಕನ್ನಡದಲ್ಲಿ ಸಿಗುವುದೇ ಇಲ್ಲ ಎನ್ನುವುದು ಕೆಲವು ಜ್ಞಾನಿಗಳ ಆಂಬೋಣ. ಇಂತಹವರ ಬಗ್ಗೆ ಜಗದೀಶ್ಚಂದ್ರ ಬೋಸ್ ಹಿಂದೊಮ್ಮೆ ಹೇಳಿದ್ದರಂತೆ ನಿಮಗೆ ಬಂಗಾಳಿ ಬಾಷೆಯಲ್ಲಿ ವಿಜ್ಞಾನವನ್ನು ಹೇಳಲು ಅಸಾಧ್ಯ ಎಂದಾದರೆ ನಿಮಗೆ ಬೆಂಗಾಳಿ ಗೊತ್ತಿಲ್ಲ ಎಂದು ಅರ್ಥವಲ್ಲ ನಿಮಗೆ ವಿಜ್ಞಾನ ಗೊತ್ತಿಲ್ಲ ಎಂದರ್ಥ ಎಂದು, ಇದೇ ಮಾತು ಕನ್ನಡಕ್ಕೂ ಅನ್ವಯಿಸುತ್ತದೆ ಎಂದರೆ ಉತ್ಪ್ರೇಕ್ಷೆಯಾಗಲಿಕ್ಕಿಲ್ಲ. ಇರಲಿ ಬಿಡಿ, ’ಡೊಂಕು ಬಾಲದ ನಾಯಕರೇ ಲೋಕದ ಡೊಂಕ ನೀವೇಕೆ ತಿದ್ದುವಿರಿ’ ಎಂದು ಯಾರಾದರೂ ಹೇಳುವ ಮೊದಲೇ ನಾವು ವಿಜ್ಞಾನದ ಬಗ್ಗೆ ಇಂದಿನ ಈ ಲೇಖನದಲ್ಲಿ ಹಾಗೂ ಭೌತ ವಿಜ್ಞಾನದ ಬಗ್ಗೆ ನನ್ನ ಮುಂದಿನ ಲೇಖನಗಳಲ್ಲಿ ತಿಳಿದುಕೊಳ್ಳೋಣ, ನಮ್ಮ ಭಾಷೆಯಲ್ಲಿ.

ಯಾವುದೇ ಹೊಸ ಆವಿಷ್ಕಾರಗಳಾದಾಗ, ಹೊಸ ಹೊಸ ತಂತ್ರಜ್ಞಾನಗಳು ಜನ್ಮ ತಳೆದಾಗ ಅಥವಾ ಅವುಗಳ ಬಗ್ಗೆ ಯಾವೂದೋ ವಿಜ್ಞಾನದ ಪುಸ್ತಕಗಳನ್ನೋದುತ್ತಿರುವಾಗ ನಮ್ಮ ಗೆಳೆಯರ ಬಾಯಲ್ಲಿ ಹೆಚ್ಚಾಗಿ ನಾನು ಕೇಳಿದ್ದು, ಏನೇ ಹೇಳಿ ಈ ವಿಜ್ಞಾನ ಅನ್ನೊದು ತುಂಬಾ ಕುತೂಹಲದ ವಿಷಯ ಕಣ್ರೀ….. ಅನ್ನೊ ಮಾತನ್ನ, ಹೌದಲ್ಲವೇ..! ಕುತೂಹಲದಿಂದಲೇ ಹುಟ್ಟಿ ಕುತೂಹಲದಿಂದಲೇ ಬೆಳೆದು ಮತ್ತೆ ಕುತೂಹಲವನ್ನೇ ಬಿತ್ತುವ ವಿಸ್ಮಯ ವಿಷಯವೇನಾದರು ಇದೆ ಎಂದರೆ ಅದೇ ವಿಜ್ಞಾನ.
ಜೀವಕ್ಕೆಜೀವ ಜಲ ನೀಡಿ, ಅದಕೊಂದು ವಿನ್ಯಾಸ ಮಾಡಿ
ಭುವಿಯಲಿ ಮನುಜರಿಗೆ ಬದುಕನುಕೊಟ್ಟ
ನಿಸರ್ಗರಹಸ್ಯವನ್ನು ಬಿಚ್ಚಿ ಹೇಳುವವರಾರು
ಮಲಗಿದ್ದ ಮಿದುಳನ್ನು ಬಡಿದುಕರೆದೆಬ್ಬಿಸುವ
ನಿಮ್ಮೆಲ್ಲ ಪ್ರಶ್ನೆಗಳಿಗುತ್ತರಿಸಿ ಮೆರೆಯುವ
ವಿಜ್ಞಾನರಸದೌತಣಕ್ಕೆಜಯವೆನ್ನಿ …….

ಈ ಮೇಲಿನ ಸಾಲುಗಳೇ ಪ್ರಾಯಶಃ ನಿಮಗೆ ಅರ್ಥಮಾಡಿಸಿಬಿಡುತ್ತವೆ ವಿಜ್ಞಾ ಎಂದರೇನು? ಅದರ ಸೌಂದರ್‍ಯವೇನು? ಎಂಬುದನ್ನು. ಆದರೂ ವಿಜ್ಞಾನವನ್ನು ಇದು ಹೀಗೆಯೇ ಎಂದು ಹೇಳುವುದು ಸ್ವಲ್ಪ ಪ್ರಯಾಸದ ಕೆಲಸವೇ, ಯಾಕೆಂದರೆ ರಾಮಾಯಣದಲ್ಲಿ ಹಾರುವ ಪುಷ್ಪಕ ವಿಮಾನದಿಂದ ಹಿಡಿದು ಮೊನ್ನೆ ಮೊನ್ನೆ ನಾವು ಮಂಗಳಕ್ಕೆ ಹಾರಿಸಿದ ಉಪಗ್ರಹದವರೆಗೆ, ಅಡಿಗೆ ಮನೆಯಲ್ಲಿ ಅಜ್ಜಿ ಉಪ್ಪಿನಕಾಯಿಗೆ ಹಾಕುವ ಉಪ್ಪಿನಿಂದ ಹಿಡಿದು ಪಿಜ್ಜಾವನ್ನು ಸುತ್ತಿರುವ ಅಲ್ಯುಮಿನಿಯಂ ಪೊಟ್ಟಣದವರೆಗೆ, ಭಟ್ಟರ ಕೈಯಲ್ಲಿರುವ ತೀರ್ಥದಿಂದ ಹಿಡಿದು, ಭಯೋತ್ಪಾದಕರ ಕೈಯಲ್ಲಿರುವ ಬಂದೂಕಿನವರೆಗೆ ತನ್ನ ವೈವಿದ್ಯ ರೂಪಗಳಲ್ಲಿ ಇರುವುದೆಲ್ಲವೂ ವಿಜ್ಞಾನವೇ.

ಇಷ್ಟು ಸರಾಗವಾಗಿ ನಿಜ ಜೀವನದಲ್ಲಿ ಬೆರೆತ ಮೇಲೆ ವಿಜ್ಞಾನವನ್ನು ಒಂದು ವಿಷಯವಾಗಿ ಯಾಕೆ ಓದಬೇಕು? ಎನ್ನುವುದಾದರೆ ನೀವೇ ಯೋಚಿಸಿ, ನಿಮ್ಮ ಮಗ ಮಾಡುವ ಕೆಲಸ ಮತ್ತು ಎದುರು ಮನೆಯ ಹುಡುಗ ಮಾಡುವ ಕೆಲಸಗಳಲ್ಲಿ ಯಾವುದರ ಫಲವನ್ನು ನೀವು ಕರಾರುವಕ್ಕಾಗಿ ಊಹಿಸಬಲ್ಲಿರಿ ಮತ್ತು ಯಾಕೆ? ಖಂಡಿತಾ ನಿಮ್ಮ ಮಗನ ಕೆಲಸವನ್ನೆ ಏಕೆಂದರೆ ನೀವು ಆತನನ್ನು ನಿರಂತರವಾಗಿ, ತುಂಬಾ ನಿಖರತೆಯಿಂದ ಗಮನಿಸಿರುತ್ತೀರಿ, ಅಭ್ಯಸಿಸಿರುತ್ತೀರಿ. ಅಂದರೆ ಕರಾರುವಕ್ಕಾದ ಜ್ಞಾನ ಪಡೆಯಲು ನಿಖರತೆಯ ಅವಶ್ಯಕತೆಯಿದೆ. ಆ ನಿಖರತೆಯನ್ನು ಕಲಿಸುವುದಕ್ಕಾಗಿ ವಿಜ್ಞಾನ ಶಿಕ್ಷಣದ ಅವಶ್ಯಕತೆಯಿದೆ. ಹಾಗಾದರೆ ವಿಜ್ಞಾನ ಎಂದರೆ ನಮ್ಮ ಮಕ್ಕಳು ಪುಸ್ತಕ ಬಿಚ್ಚುವ ಮೊದಲೇ ಹೆದರಿಕೂರುತ್ತಾರಲ್ಲ ಆ ವಿಷಯವೇ, ಅಥವಾ ಹತ್ತನೇ ತರಗತಿಯಲ್ಲಿ ರಾತ್ರಿಯಿಡೀ ನಿದ್ದೆಬಿಟ್ಟು ಓದಿ ಅತೀ ಹೆಚ್ಚು ಅಂಕ ಪಡೆದವರೂ ಮಾತ್ರ ಪಿಯುಸಿಗೆಂದು ಆರಿಸಿಕೊಳ್ಳುತ್ತಾರಲ್ಲ ಆ ವಿಷಯವೇ ಎಂದು ನೀವೇನಾದರೂ ಯೋಚಿಸುತ್ತಿದ್ದರೆ, ನಿಮ್ಮ ಚಿಂತನೆಗಳು ದಾರಿತಪ್ಪಿವೆ ಎಂದರ್ಥ. ಏಕೆಂದರೆ ನಿಖರತೆ ಬರುವುದು ಪರೀಕ್ಷೆಗಳಿಂದಲ್ಲ; ಜ್ಞಾನದ ಹಸಿವಿನಿಂದ.

ತೀರಾ ಸರಳವಾಗಿ ಎಂದರೆ ವಿಜ್ಞಾನವನ್ನು ವಿಶೇಷವಾದ ಜ್ಞಾನ ಎಂದು ಅರ್ಥೈಸಬಹುದು. ಉದಾಹರಣೆಗೆ ಒಬ್ಬ ಬಸ್ ಚಾಲಕನಿಗೆ ಎಕ್ಸಿಲರೇಟರನ್ನು ಒತ್ತಿದ್ದರೆ ಬಸ್ ಜೋರಾಗಿ ಓಡುತ್ತದೆ ಎಂದು ಗೊತ್ತಿರುತ್ತದೆ – ಅದು ಜ್ಞಾನ, ಏಕ್ಸಿಲರೇಟರ್ ಒತ್ತಿದಾಗಲೇ ಅದೇಕೆ ಓಡುತ್ತದೆ ಎಂದು ತಿಳಿದುಕೊಂಡರೆ ಅದೇ ವಿಜ್ಞಾನ.ನಿಮಗೇ ಗೊತ್ತಿರುವುಂತೆ ಜ್ಞಾನವೇನೋ ಅನುಭವದಿಂದ ಬಂದುಬಿಡುತ್ತದೆ, ಹಾಗಾದರೆ ವಿಜ್ಞಾನ…… ?ಅದೂ ಅನುಭವದಿಂದಲೇ ಬರುತ್ತದೆಯಾದರೂ ಅದರೊಂದಿಗೆ ನಮ್ಮ ಮನೋಭಾವ ವೈಜ್ಞಾನಿಕವಾಗಿರಬೇಕು.
    
ವೈಜ್ಞಾನಿಕ ಮನೋಭಾವ ಎಂಬ ಪದಪಾರಿಭಾಷಿಕವಲ್ಲದಿದ್ದರೂ ಪುಸ್ತಕದ ಪರಿಬಾಷೆಯಿಂದ ಬಂದದ್ದು, ನಾಲಿಗೆ ಸ್ವಲ್ಪ ಹಿಡಿಯುತ್ತದೆ ಎನ್ನುವದನ್ನು ಬಿಟ್ಟರೆ ಅರ್ಥ ತುಂಬಾ ಸರಳ. ನಾನು ಒಂದು ಕಲ್ಲನ್ನು ಮೇಲಕ್ಕೆ ಎಸೆದಿದ್ದೇನೆ ನಂತರ ಅದು ಕೆಳಕ್ಕೇ ಬೀಳುತ್ತದೆ ಅದನ್ನ ನೀವು ನೊಡುತ್ತಿದ್ದೀರಿ ಈ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು ಎಂದು ಊಹಿಸಿಕೊಳ್ಳಿ. ಕೈಯಲ್ಲಿ ಕಲ್ಲು ಕಂಡೊಡನೆ ನೀವು ನಾನು ಮಾಡುವುದನ್ನೇ ನೋಡುತ್ತೀರಿ. ಕಂಡ ತಕ್ಷಣ ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟುತೊಡಗುತ್ತವೆ – ಇವನು ಕಲ್ಲನ್ನು ಏಕೆ ತೆಗೆದುಕೊಂಡ? ಏಕೆ ಎಸೆದ? ಎಸೆದದ್ದು ಮೇಲಕ್ಕೇಕೆ ಹೊಯಿತು? ಹೋದದ್ದು ಮತ್ತೇಕೆ ಕೆಳಕ್ಕೆ ಬಂತು? ಹೀಗೆ ಮುಂತಾದವು. ಈಗ ನೀವೂ ಅದನ್ನೇ ಮಾಡಿ ನೋಡುತ್ತೀರಿ. ಆಗಲೂ ಹಾಗೆಯೇ ಆದರೆ ನಿಮ್ಮ ಮನಸ್ಸಿನಲ್ಲಿನ ಪ್ರಶ್ನೆಗಳಿಗೆ ನಿಮ್ಮ ಬಳಿಯೇ ಇರುವ ಮಾಹಿತಿಗಳಿಂದ ಉತ್ತರ ಹುಡುಕುವ ಹೆಣಗಾಟಕ್ಕೆ ಶುರುವಿಡುತ್ತೀರಿ.  ಹೊಸ ತರ್ಕಗಳನ್ನು ಲೆಕ್ಕಾಚಾರಗಳನ್ನು ಮಾಡಿ, ಗೊತ್ತಿದ್ದವರ ಬಳಿ ಕೇಳಿ, ಗೊತ್ತಿಲ್ಲದವರಿಗೆ ಬೈದು, ಸಿಕ್ಕ ಸಿಕ್ಕ ಪುಸ್ತಕ, ಲೇಖನ, ಸಿದ್ಧಾಂತಗಳನ್ನು ತಿರುವಿ ಉತ್ತರ ಹುಡುಕಿಕೊಳ್ಳುತ್ತೀರಿ. ಮುಂದೆ ಇದಕ್ಕೆ ಸಾಮಿಪ್ಯದ ಕ್ರಿಯೆಗಳಾದಾಗ ಈ ಉತ್ತರವನ್ನು ಅಲ್ಲಿ ಬಳಸುತ್ತೀರಿ ಎಂದಾದರೆ ನಿಮ್ಮ ಮನೋಭಾವನೆ ವೈಜ್ಞಾನಿಕವಾಗಿತ್ತೆಂದು ಅರ್ಥ. ನೀವು ಈಗ ಮಾಡಿದ ಕೆಲಸಗಳಾದ ಗಮನಿಸು, ಪ್ರಶ್ನಿಸು, ಚಿಂತಿಸು,ತರ್ಕಿಸು,ಅನುಕರಿಸು, ವಿಶ್ಲೇಷಿಸು, ಅಭ್ಯಸಿಸು ಹಾಗು ಅರ್ಥೈಸು ಇವುಗಳನ್ನೇ ವೈಜ್ಞಾನಿಕ ಚಿಂತನೆಯ ಹಂತಗಳು ಎಂದುಕರೆಯುವುದು.

ಈ ರೀತಿಯ ಕುತೂಹಲ, ವೈಜ್ಞಾನಿಕ ಮನೋಭಾವಗಳ ಸಮ್ಮಿಳಿತ ಫಲವೇ ವಿಜ್ಞಾನ. ನೆನಪಿಡಿ, ಇದೇ ಮನೋಭಾವನೆ ಇಂದು ನಮ್ಮನ್ನ ವಿಶ್ವದ ಅತೀ ಬುದ್ದಿವಂತ ಪ್ರಾಣಿಯನ್ನಾಗಿಸಿರುವುದು. ಇದೇ ಮನೋಭಾವನೆಯಿಂದಲೇ ಆದಿಮಾನವ ಚಕ್ರ, ಬೆಂಕಿಗಳನ್ನು ಕಂಡು ಹಿಡಿದದ್ದು, ಇದರಿಂದಲೇ ನಾವಿಂದು ಮಂಗಳನ ಅಂಗಳಕೆ ಲಗ್ಗೆ ಇಟ್ಟಿರುವುದು.

ವಿಜ್ಞಾನವನ್ನ ಹಲವಾರು ರೀತಿ ವಿಭಾಗಿಸಬಹುದಾದರೂ ಮೂಲ ವಿಜ್ಞಾನವನ್ನ ಪ್ರಮುಖವಾಗಿ ಭೌತ ವಿಜ್ಞಾನ (ಫಿಸಿಕ್ಸ್), ರಾಸಾಯನಿಕ ವಿಜ್ಞಾನ (ಕೆಮಿಸ್ಟ್ರಿ) ಹಾಗೂ ಜೀವ ವಿಜ್ಞಾನ (ಬಯಾಲಜಿ) ಎಂದು ವಿಂಗಡಿಸಬಹುದು. ಅದರಲ್ಲಿನಮ್ಮ ಭೌತವಿಜ್ಞಾನವು ವೈಜ್ಞಾನಿಕ ಮನೋಭಾವದಿಂದ ನಿಮ್ಮ ಸುತ್ತಲಿನ ನಿಸರ್ಗವನ್ನು, ಅದರಲ್ಲಿ ಭೌತಿಕವಾಗಿ ಕಂಡುಬರುವ ನೈಸರ್ಗಿಕ ಕ್ರಿಯೆಗಳನ್ನು, ಅವುಗಳಿಗೆ ಸಂಬಂದಪಟ್ಟ ಸಿದ್ಧಾಂತಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸುವ ವಿಜ್ಞಾನದ ಒಂದು ಅಂಗ. ನಿಸರ್ಗ ಎಂದು ಅರ್ಥ ನೀಡುವ ಗ್ರೀಕ್‌ನ ’ಫ್ಯೂಸಿಸ್’ ಎಂಬ ಪದದಿಂದ ಇಂಗ್ಲೀಷ್‌ನ ಫಿಸಿಕ್ಸ್ ಆಗಿದೆ. ೧೯ನೇ ಶತಮಾನಕ್ಕಿಂತ ಮುಂಚೆ ಇದನ್ನು ’ನೈಸರ್ಗಿಕ ತತ್ವಶಾಸ್ತ್ರ’ ಎಂದು ಕರೆಯಲಾಗುತಿತ್ತು. ಮಾನವನ ವಿಕಾಸದ ಮೊದಲ ಹೆಜ್ಜೆಯಲ್ಲೇ ಇದರ ಉಗಮವಾಗಿದ್ದರೂ, ಕ್ರಿ.ಪೂ ೬ನೇ ಶತಮಾನದಲ್ಲಿ ಗ್ರೀಕ್‌ನತತ್ವಶಾಸ್ತ್ರಜ್ಞರಲ್ಲಿ ಥೇಲ್ಸ್‌ಆಫ್ ಮಿಲೆಟಸ್ ಎಂಬಾತನೊಬ್ಬ ಅತಿಮಾನವ ಶಕ್ತಿ ಮತ್ತು ಮೂಢನಂಬಿಕೆಗಳ ವಿರುದ್ದ ತಿರುಗಿ ಬಿದ್ದು ನಿಸರ್ಗದಲ್ಲಿ ಪ್ರತಿಯೊಂದು ಕ್ರಿಯೆಯೂ ಕೆಲವೊಂದಷ್ಟು ನಿಯಮಗಳ ಪ್ರಕಾರವೇ ನಡೆಯುತ್ತದೆ ಇದರಲ್ಲಿ ಯಾವುದೇ ಅತೀಂದ್ರಿಯ ಶಕ್ತಿ ಇರಲು ಸಾಧ್ಯವಿಲ್ಲ ಎಂದು ಘೋಷಿಸಿದ್ದನ್ನೇ ನಿಜವಾದ ಭೌತಶಾಸ್ತ್ರದ ಮೊದಲ ಐತಿಹ್ಯ ಎನ್ನಲಾಗುತ್ತದೆ. ಪ್ರಾಯಶ: ಅದೇ ಸಮಯದಲ್ಲಿ ಭಾರತದ ಕಣಾದ ಎಂಬ ಋಷಿಯು ಅಣು/ಕಣಗಳಿಂದಲೇ ಎಲ್ಲಾ ವಸ್ತುಗಳು ರಚನೆಯಾಗಿವೆ ಎಂಬುದರ ಬಗ್ಗೆ ವಿವರಣೆ ನೀಡಿದ್ದಎಂದು ಕೆಲವು ಇತಿಹಾಸಕಾರರು ವಾದಿಸಿದ್ದನ್ನ ಕೇಳಿದ್ದೇನೆ. ಉಳಿದಂತೆ ಕೋಪರ್ನಿಕಸ್, ಗೆಲಿಲಿಯೋ, ಟಾಲೆಮಿ, ಕೆಪ್ಲರ್, ಥಾಮ್ಸನ್ ಮುಂತಾದಜಗತ್ತಿನ ಹಲವು ಜ್ಞಾನಿ, ವಿಜ್ಞಾನಿ, ತತ್ವಜ್ಞಾನಿಗಳೆಲ್ಲರೂ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರಾದರೂ ಗುರುತ್ವ ಎಂದಾಗ ನ್ಯೂಟನ್, ಸಾಪೇಕ್ಷ ಸಿದ್ದಾಂತ ಎಂದಾಗ ನೆನಪಾಗುವ ಐನಸ್ಟೈನ್ ಜನಮಾನಸಕ್ಕೆ ಸ್ವಲ್ಪ ಹತ್ತಿರವಾದವರು. ಇನ್ನು ಭಾರತದಲ್ಲಿ ಖಗೋಳಶಾಸ್ತ್ರದ ಸುಬ್ರಮಣ್ಯನ್ ಚಂದ್ರಶೇಖರ್ (ನೊಬೆಲ್ ೧೯೮೩) ಮತ್ತು ಮೇಘನಾದ್ ಸಾಹಾ, ರೇಡಿಯೋ ತರಂಗಗಳ ಜಗದೀಶ್ಚಂದ್ರ ಬೋಸ್, ಅಣುಶಕ್ತಿಯ ಹೋಮಿ ಜಹಾಂಗೀರ್ ಬಾಬಾ, ಕ್ಷಿಪಣಿ ತಂತ್ರಜ್ಞಾನದ ಎ.ಪಿ.ಜೆ.ಅಬ್ದುಲ್ ಕಲಾಂ ಮುಂತಾದವರು ತಮ್ಮ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಇನ್ನು ಹೆಸರು ಕೇಳಿದೊಡನೆಯ ಪ್ರತಿಯೊಬ್ಬ ಭಾರತೀಯನ ರೋಮ ರೋಮಗಳು ನೆಟ್ಟಗಾಗುವ, ಸರ್.ಸಿ.ವಿ.ರಾಮನ್‌ರವರ ಕೊಡುಗೆ ಭಾರತೀಯ ಭೌತವಿಜ್ಞಾನಕ್ಕೆ ಅಪಾರ. ಇವರ ರಾಮನ್‌ಎಫೆಕ್ಟ್’ ಎಂಬ ವಿಷಯಕ್ಕೆ ೧೯೩೦ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದೆ. ಭಾರತದ ಭೌತವಿಜ್ಞಾನಕ್ಷೇತ್ರಕ್ಕೆ ಸಂದ ಮೊಟ್ಟ ಮೊದಲ ನೊಬೆಲ್ ಅದಾಗಿತ್ತು. ತೀರಾ ಇತ್ತೀಚಿಗೆ ಸದ್ದು ಮಾಡುತ್ತಿರುವ ’ಹಿಗ್ಸ್-ಬೋಸಾನ್’ನಲ್ಲಿರುವ’ ಬೋಸಾನ್’ಎಂಬ ಪದ ಎಲ್ಲಿಂದ ಬಂತು ಗೊತ್ತೇ ? ೧೯೯೦ರ ಆಸುಪಾಸಿನ ’ಬೋಸ್-ಐನ್‌ಸ್ಟೈನ್ ಸ್ಟಾಟಿಸ್ಟಿಕ್ಸ್’ನಲ್ಲಿ ಐನ್‌ಸ್ಟೈನ್ ಜೊತೆ ಕೈ ಜೋಡಿಸಿದ್ದ ನಮ್ಮ ಸತ್ಯೇಂದ್ರನಾಥ ಬೋಸ್ ಅವರಿಂದ. ಇವರೆಲ್ಲರುಗಳಿಂದಾಗಿ ಯಾವುದೇ ಮಿತಿ, ಎಲ್ಲೆಗಳಿಲ್ಲದೆ ಭೌತಶಾಸ್ತ್ರ ಬೆಳೆಯುತ್ತಿದೆ ಎನ್ನುವುದಂತೂ ಸೂರ್‍ಯಚಂದ್ರರಷ್ಟೇ ಸತ್ಯ.

ಈ ಅಗಾಧ ವಿಷಯದ ಎಲ್ಲಾ ಮಜಲುಗಳೂ ಜನಸಾಮಾನ್ಯರಿಗೆ ಅರ್ಥವಾಗಲಾರವು, ಆದರೂ ಕೆಲ ಪ್ರಾಥಮಿಕ ಅಂಶಗಳು ನಮ್ಮ ಜೀವನದ ಭಾಗಗಳೇ ಆಗಿರುವುದರಿಂದ ಅವುಗಳಲ್ಲಡಗಿರುವ ಭೌತಶಾಸ್ತ್ರವನ್ನು ನನ್ನ ಜ್ಞಾನದ ನಿಲುಕಿನಲ್ಲಿ ಸಾಧ್ಯವಿದ್ದಷ್ಟು ಸರಳವಾಗಿ ನಿಮ್ಮ ಮುಂದಿಡುವ ಪ್ರಯತ್ನದಲ್ಲಿ. . .  (ಮುಂದುವರೆಯುವುದು. . .)

******

ಕನ್ನಡದ ಬರಹಗಳನ್ನು ಹಂಚಿ ಹರಡಿ

4 thoughts on “ಭೌತ ವಿಜ್ಞಾನದ ಬೆನ್ನೇರಿ, ನಿಸರ್ಗದಲ್ಲೊಂದು ಸವಾರಿ: ರೋಹಿತ್ ವಿ. ಸಾಗರ್

  1. ವಿಜ್ಞಾನ ಸಂಬಂಧಿ ಲೇಖನಗಳನ್ನು ಬರೆಯುವವರೇ ಕಡಿಮೆ…ನಿಮ್ಮ ಲೇಖನ ಉಳಿದವರಿಗೆ ಪ್ರೇರಣೆಯಂತಿದೆ

  2. ನಿಸರ್ಗದ ಮೇಲೆ ಒಲವನ್ನಿಟ್ಟುಕೊಂಡು,ಕನ್ನಡದಲ್ಲಿ ಭೌತಶಾಸ್ರವನ್ನುಣಬಡಿಸಿ, ಹೊಂಗಿರಣದ ಮರಗಳ, ತಿಳಿ ನೆಳಲಿನಲ್ಲಿ ಪರಿಸರವನುಳಿಸುವ ಕಾರ್ಯ ಕೈಗೊಂಡು, ನಮ್ಮಲ್ಲಿ ಪರಿಸರ ಪ್ರೀತಿ ಮೂಡುವಂತೆ ಮಾಡಿದ ನಿಮಗೆ ಧನ್ಯವಾದಗಳು ಸರ್ ….ಧನ್ಯವಾದಗಳು;

Leave a Reply

Your email address will not be published. Required fields are marked *