ಭೃಂಗದ ಬೆನ್ನೇರಿ…!: ಎಸ್.ಜಿ.ಶಿವಶಂಕರ್

ಎಲ್ಲ ಸರಿಯಾಗಿ ಜೋಡಿಸಿದ್ದೇನೆಯೇ ಎಂದು ಮನು ಮತ್ತೊಮ್ಮೆ ಖಚಿತಪಡಿಸಿಕೊಂಡ. ಸಮಾಧಾನವಾಯಿತು. ಎಲ್ಲ ಸರಿಯಾದರೆ ಇನ್ನು ಹತ್ತು ನಿಮಿಷಗಳಲ್ಲಿ ತನ್ನ ಮುಂದೆ ರೂಪಸಿಯೊಬ್ಬಳು ಜೀವ ತಳೆಯುತ್ತಾಳೆ. ಅದೂ ಎಂತಹ ರೂಪಸಿ ? ತಾನು ಬಯಸಿದಂತವಳು! ತಾನೇ ಹೇಳಿದಂತೆ ರೂಪುಗೊಂಡವಳು!! ಇದನ್ನು ನಂಬುವುದು ಕಷ್ಟ!! ಆದರೆ ಇದು ನಿಜ. ಎಲ್ಲಾ ತನ್ನ ಕಣ್ಣೆದುರೇ ನಡೆದಿದೆ. ಸ್ವತಃ ತಾನೇ ತನ್ನ ಕೈಯಾರೆ ರೂಪಿಸಿದವಳು!

ಅವಳಿಗೆ ಜೀವ ಕೊಡುವ ಮುನ್ನ ಒಮ್ಮೆ ಮುಟ್ಟಿ ನೋಡಿದ. ನಿಜಕ್ಕೂ ಅದು ರೋಬೋ ಎಂದು ಹೇಳಲು ಯಾರಿಗೂ ಸಾಧ್ಯವೇ ಇರಲಿಲ್ಲ! ಅಷ್ಟರಮಟ್ಟಿಗೆ ಅದು ಮನುಷ್ಯರನ್ನು ಹೋಲುತ್ತಿತ್ತು! ಇದಕ್ಕೆ ಜೀವ ಬರುತ್ತದೆ! ಇದು ಮನುಷ್ಯಳಂತೆಯೇ ಅಗುತ್ತದೆ, ಮನುಷ್ಯಳಂತೆಯೇ ಆಡುತ್ತದೆ ಎಂಬ ಯೋಚನೆಗೆ ಅವನ ಎದೆ ಬಡಿತ ಜೋರಾಯತು!
ಐದಡಿ ಆರೂವರೆ ಇಂಚು ಎತ್ತರ. ಮಾಟವಾದ ಮೈ! ಕಪ್ಪನೆಯ ದಟ್ಟ ಕೂದಲು! ಥಳಥಳ ಹೊಳೆಯುವ ತ್ವಚೆ! ಹದವಾಗಿ ಟ್ರಿಮ್ ಮಾಡಿದ ಹುಬ್ಬುಗಳು, ಕಡು ಕಪ್ಪು ಕಣ್ಣುಗಳು. ನೀಳವಾದ ತೋಳುಗಳು! ತಾನೇ ತೊಡಿಸಿದ ಉಡುಪು! ಧರೆಗಿಳಿದ ಅಪ್ಸರೆಯಂತಿತ್ತು ಆ ರೋಬೋ! 

ದೂರ ಸರಿದು ಅದನ್ನು ಇನ್ನೊಮ್ಮೆ ನೋಡಿ ಕಣ್ತುಂಬಿಕೊಂಡ. ಇನ್ನು ಜೀವ ತಳೆದ ಮೇಲೆ ಅದು ಹೇಗೆ ವರ್ತಿಸುವಳೋ..ಎಂಬ ಅಳುಕು ಬೇರೆ! 
'ಈ ರೋಬೋ ವಿಶಿಷ್ಠವಾದದ್ದು ನಿಮಗಿಷ್ಟವಾಗುವಂತೆ ವರ್ತಿಸುತ್ತದೆ. ಏಕೆಂದರೆ ಇದಕ್ಕೆ ಬೇಕಾದಂತ ಸೂಚನೆಗಳನ್ನು ಕೊಡುವವರೂ ನೀವೇ! ಅದು ಬೇರೆ ರೀತಿಯಲ್ಲಿ ವರ್ತಿಸುವುದರ ಬಗೆಗೆ ಅನಗತ್ಯ ಗೊಂದಲ ಬೇಡ. ರೋಬೋ ನಿಮ್ಮ ಇಚ್ಛೆಯನ್ನು ಮೀರಿ ಅಪಾಯಕಾರಿಯಾಗಿ ವರ್ತಿಸಿದರೆ ಈ ರಿಮೋಟ್ ಕಂಟ್ರೋಲ್ ಮೂಲಕ ಅದನ್ನು ನಿಷ್ಕ್ರಿಯಗೊಳಿಸಬಹುದು. ಕಂಪೆನಿಗೆ ವಾಪಸ್ಸು ಮಾಡಿ ಬೇರೆ ರೋಬೋ ಪಡೆಯಬಹುದು'
ಕಂಪೆನಿಯವರ ಮಾಹಿತಿಯನ್ನು ಇನ್ನೊಮ್ಮೆ ಓದಿಕೊಂಡ ಮನು. ಸರಿ ಇನ್ನು ಇದನ್ನು ಆನ್ ಮಾಡಿ ನೋಡುವ ಎಂದು ಧೈರ್ಯ ತಂದುಕೊಂಡು ರೋಬೋ ಸಮೀಪಿಸಿದ. ಒಬ್ಬಳು ಸುಂದರ ಯುವತಿಯ ಹತ್ತಿರ ಹೋದಂತೆಯೇ ಭಾಸವಾಯಿತು!
ಮೆಲ್ಲನೆ ಎಡ ಕಿವಿಯ ಹಿಂದೆ, ದೇಹದ ಒಂದು ಭಾಗವೇ ಎಂದು ಭ್ರಮೆ ಬರುವ ಜಾಗದಲ್ಲಿ ಮೃದುವಾಗಿ ಒತ್ತಿದ. ಅದಕ್ಕೆ ನೋವಾಗುವುದೇನೋ ಎಂಬ ಭ್ರಮೆಯಾಯಿತು. ಹಾಗೆಯೇ ಇದ್ದುವು ಅದರ ದೇಹದ ಭಾಗಗಳು. ಸ್ವಿಚ್ ಒತ್ತಿ ಹಿಂದೆ ಸರಿದು ಅದರ ಮುಖವನ್ನು ನೋಡಿದ. ಏನೂ ಬದಲಾವಣೆ ಕಾಣಲಿಲ್ಲ! ತಾನೇನಾದರೂ ತಪ್ಪು ಮಾಡಿದೆನೋ..? ಇಲ್ಲಾ ಇದರಲ್ಲೇನಾದರೂ ದೋಷವಿದೆಯೋ..? ಮನು ಗಲಿಬಿಲಿಗೊಂಡ.
ಅಷ್ಟರಲ್ಲಿ ರೋಬೋ ಕಣ್ಣುಗಳಲ್ಲಿ ಕಾಂತಿ ಕಂಡಿತು. ತುಟಿಗಳು ಅದುರಿದವು.

'ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು. ನಿಮ್ಮೊಂದಿಗೆ ಸಂಭಾಷಿಸುವ ಭಾಷೆಯನ್ನು ಹೇಳಿ"
ಮನು ತನ್ನ ಕೇಳಿದ್ದನ್ನು ನಂಬಲಿಲ್ಲ! ಮೈಚಿವಟಿಕೊಂಡು ನೋಡಿದ. ಆ ರೋಬೋ ಸಂಪೂರ್ಣ ಮಾನವಳಾಗಿ ಪರಿವರ್ತನೆಯಾಗಿತ್ತು! ಇದು ಸಾಧ್ಯವೆ..? ಯಾಕೆ ಸಾಧ್ಯವಿಲ್ಲ…? ಇಪ್ಪತ್ತೊಂದನೆಯ ಶತಮಾನದಲ್ಲಿ ನಡೆಯದಿರುವುದೇ ಇಲ್ಲ! ತಂತ್ರಜ್ಞಾನ ಪೂರ್ಣವಾಗಿ ವಿಕಸಿತವಾಗಿದೆ! ಮನುಷ್ಯರಿಗೆ ಸಾಧ್ಯವಾಗದೆ ಇರವುದೇ ಇಲ್ಲ! ತಾನೇ ತನ್ನ ಕಾಲೇಜಿನ ಪ್ರಾಜೆಕ್ಟಿಗಾಗಿ ಮಾನವರ ಮಾತಿಗೆ ಸ್ಪಂದಿಸಿ ಕೈಕಾಲು ಆಡಿಸುವ ಮಿನಿ ರೋಬೋ ತಯಾರಿಸಿರಲಿಲ್ಲವೆ..? ಅದು ಐದು ವರ್ಷಗಳ ಹಿಂದೆ! ಅದೂ ಕನಿಷ್ಠ ಮೂಲಭೂತ ಸೌಕರ್ಯಗಳಿದ್ದ ಕಡೆ! ಇದು..ಅಮೆರಿಕಾ, ತಂತ್ರಜ್ಞಾನ ಮತ್ತು ವಿಜ್ಞಾನದಲ್ಲಿ ಮುಂದುವರಿದ ದೇಶ. ಇಲ್ಲಿ ಸಾಧ್ಯವಗದಿರುವುದು ಏನೂ ಇಲ್ಲ!!
ಆ ರೋಬೋಗೆ..ಇಲ್ಲ ಅದನ್ನು ರೋಬೋ ಎನ್ನುವುದು ಸಾಧ್ಯವಿಲ್ಲ! ಆಕೆ, ಆ ಸುಂದರಿ ಮುಂದಿನ ಹತ್ತು ನಿಮಿಷಗಳು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಮನು ಎಚ್ಚರಿಕೆಯಿಂದ ಅವುಗಳಿಗೆ ಉತ್ತರ ನೀಡುತ್ತಿದ್ದ. ತಾನು ನೀಡುವ ಮಾಹಿತಿಯ ಮೇರೆಗೇ ಆಕೆ ವರ್ತಿಸುವಳೆಂದು ಅವನಿಗೆ ತಿಳಿದಿತ್ತು.
ಇಪ್ಪತ್ತು ನಿಮಿಷಗಳ ನಂತರ ಆಕೆ ಪರಿಪೂರ್ಣವಾಗಿ ಹೆಣ್ಣೇ ಆಗಿದ್ದಳು. ಮನುವಿನ ಜೊತೆ ಮಾತಾಡುವಾಗ ನಗುತ್ತಿದ್ದಳು, ಹುಬ್ಬು ಹಾರಿಸುತ್ತಿದ್ದಳು, ಮುಖದಲ್ಲಿ ಪ್ರಶ್ನಾರ್ಥಕ ಚಿನ್ಹೆಗಳನ್ನು ವ್ಯಕ್ತಪಡಿಸುತ್ತಿದ್ದಳು. ಕಣ್ಣಿನಲ್ಲೂ ಭಾವನೆ ವ್ಯಕ್ತಪಡಿಸುತ್ತಿದ್ದಳು.
"ನನ್ನನ್ನು ಏನೆಂದು ಕರೆಯುತ್ತೀರಿ?" ಆಕೆಯ ಪ್ರಶ್ನೆಗೆ ಮನು ಬೆದÀರಿದ. ಕಾರಣ ಒಂದು ವ್ಯವಹಾರಿಕ ಹೆಸರು ಕೊಡಲೋ ಇಲ್ಲ ತನ್ನ ಕಲ್ಪನೆಯಲ್ಲಿದ್ದ ಸುಂದರಿಯ  ಹೆಸರು ಕೊಡಲೋ..? ಆಕೆಗೊಂದು ನಂಬರು ಕೊಟ್ಟರೂ ನಡೆಯುತ್ತದೆ. ಆದರೆ ಅದು ಅಮಾನವೀಂiÀiವಾಗುತ್ತದೆ.
"ಕಮಲ" ಆಕೆಯ ಕಮಲದ ಕಣ್ಣುಗಳನ್ನು ನೋಡುತ್ತಾ ಅವನಿಗರಿವಿಲ್ಲದೆಯೇ ಹೇಳಿಬಿಟ್ಟ!
"ಸುಂದರವಾದ ಹೆಸರು, ಧನ್ಯವಾದಗಳು. ಒಮ್ಮೆ ಈ ಮನೆಯ ಪರಿಚಯ ಮಾಡಿಸುತ್ತೀರಾ..?"
"ಓ..ಶೂರ್..ಬನ್ನಿ.."
"ಐ ಯಾಮ್ ಎ ಮಷಿನ್..ನನ್ನನ್ನು ಏಕವಚನದಿಂದಲೂ ಕರೆಯಬಹುದು"
ಮನುವಿಗೆ ಧೈರ್ಯ ಬಂತು. ಹೌದು, ತನ್ನೆದುರಿಗಿರುವುದು ಒಂದು ಯಂತ್ರ. ಮುಂದುವರಿದ ಕಂಪ್ಯೂಟರು. ಅದಕ್ಕೆ ತಾನೇಕೆ ಅಧೀರನಾಗಬೇಕು. ಅದು ತಾನು ಹೇಳಿದಂತೆ ಕೇಳುತ್ತದೆ. ಅದಕ್ಕೇ ಅಲ್ಲವೆ ಅದನ್ನು ಕೊಂಡುಕೊಂಡಿರುವುದು. ಅದೂ ಎಷ್ಟು..? ಹತ್ತು ಸಾವಿರ ಡಾಲರ್! 

ಅಮೆರಿಕಾ ಸೇರಿ ಆರು ವರ್ಷವಾಗಿತ್ತು. ಒಂಟಿ ಜೀವನ ಸಾಕಾಗಿತ್ತು! ಹಸಿಬಿಸಿಯಾಗಿ ಬೇಯಿಸಿಕೊಂಡೋ, ಬರ್ಗರು, ಸ್ಯಾಂಡ್ವಿಚ್, ಪಿಜ್ಜಾಗಳನ್ನು ತಿಂದು ನಾಲಿಗೆ ಜಡ್ಡು ಹಿಡಿದಿತ್ತು. ತನಗೆ ಸಾಂಗತ್ಯ ಒದಗಿಸಿಕೊಡುವ, ಒಂಟಿತನವನ್ನು ನೀಗುವ, ರುಚಿರುಚಿಯಾದ ಸ್ವದೇಶೀ ಆಹಾರ ತಯಾರಿಸಿಕೊಡುವ ಸಂಗಾತಿಯ ಬಗೆಗೆ ಯೋಚಿಸುತ್ತಿದ್ದ. ಮದುವೆ ಇನ್ನೂ ದೂರವಿತ್ತು. ಸ್ವದೇಶದಲ್ಲಿ ಮದುವೆಗೆ ಬೆಳೆದಿದ್ದ ತಂಗಿಯಿದ್ದಳು. ಈ ಸಂದರ್ಭದಲ್ಲಿ ಏನು ಮಾಡಬಹುದು..? ಹೀಗೆ ಯೋಚಿಸುತ್ತಿದ್ದಾಗಲೇ ಆ ರೊಬೋ ಕಂಪೆನಿಯ ಸೇಲ್ಸ್‍ಮನ್ ತಾನು ಕೆಲಸ ಮಾಡುತ್ತಿದ್ದ ರಿಸರ್ಚ್ ಸೆಂಟರಿಗೆ ಬಂದು ಈ ಹೊಸ ರೋಬೋ ಬಗ್ಗೆ ಬ್ರೋಶರ್ ನೀಡಿದ್ದ. ತಕ್ಷಣವೇ ಮನು ಆರ್ಡರ್ ನೀಡಿದ್ದ. ಸ್ನೇಹಿತರೆಲ್ಲಾ ಗೇಲಿ ಮಾಡಿದ್ದರು! ಅಷ್ಟು ಹಣವನ್ನು ಖರ್ಚು ಮಾಡುವಂತಿದ್ದರೆ ಮದುವೆಯೇ ಅಗಬಹುದು ಎಂದಿದ್ದರು. ಅದಾವುದಕ್ಕೂ ಮನು ತಲೆಕೆಡಿಸಿಕೊಂಡಿರಲಿಲ್ಲ.

"ನಿಮಗೆ ಸ್ಟ್ಯಾಂಡರ್ಡ ಮಾಡಲ್ ಬೇಕೋ ಇಲ್ಲಾ ವಿಶೇಷವಾಗಿ ನಿಮ್ಮಅಗತ್ಯಕ್ಕಂತೆ ರೂಪಿಸಬೇಕೆ..? ಅದಕ್ಕೆ ಮತ್ತೆ ಐದು ಸಾವಿರ ಡಾಲರ್ ಹೆಚ್ಚಿಗೆ ನೀಡಬೇಕಾಗುತ್ತದೆ"
ಸೇಲ್ಸ್‍ಮನ್ ಮಾತು ಕೇಳಿದ್ದ ಮನುಗೆ ವಿಶೇಷ ರೋಬೋ ಬೇಕೆನಿಸಿತ್ತು. ವಿಶೇಷ ರೋಬೋಗೇ ಆರ್ಡರ್ ಮಾಡಿದ್ದ. ಬಹುಶಃ ಜೀವಮಾನವಿಡೀ ಅದರ ಉಪಯೋಗವಿರುತ್ತದೆ. ಅದು ಸಾಮಾನ್ಯ ಯಂತ್ರದಂತೆ ಇರಬಾರದು ಎನಿಸಿತ್ತು. ಅದಕ್ಕೆ ಈ ಹಣ ಹೆಚ್ಚೆನಿಸರಲಿಲ್ಲ.
"ನಿಮ್ಮ ಅಗತ್ಯಗಳನ್ನು ಮೈಲ್ ಮೂಲಕ ಕಳಿಸಿ" ಎನ್ನುತ್ತಾ ಆತ ಆರ್ಡರ್ ಕಾಪಿ ನೀಡಿದ್ದ.

ತನ್ನ ಅಪಾರ್ಟ್ಮೆಂಟಿಗೆ ಹಿಂತಿರುಗಿದ ತಕ್ಷಣ ಮನು ಹುಡುಕತೊಡಗಿದ್ದ! ತಾನು ಯುವಕನಾಗಿದ್ದಾಗ ತನ್ನನ್ನು ಆಕರ್ಷಿಸಿದ್ದ ಒಬ್ಬಳು ಅಜ್ಞಾತ ರೂಪಸಿಯನ್ನು! ಹೌದು, ಆಕೆ ಅವನ ಹೃದಯದಲ್ಲೂ ಶಾಶ್ವತವಾಗಿ ಉಳಿದಿದ್ದಳು! ಅವಳು ಯಾರೋ ಏನೋ ಗೊತ್ತಿಲ್ಲ! ಆಕೆ ಒಬ್ಬಳು ಪ್ರವಾಸಿ! ಮನು ತನ್ನ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಿದ್ದಾಗ ಕಂಡವಳು. ಅವಳ ಚಿತ್ರವನ್ನು ತಾನೇ ಸ್ವತಃ ಬರೆದು, ನೂರಾರು ಬಾರಿ ತಿದ್ದಿ, ತೀಡಿ ತೃಪ್ತಿಯಾದಾಗ, ಅದನ್ನು ತನ್ನೊಂದಿಗೇ ಗೌಪ್ಯವಾಗಿಟ್ಟುಕೊಂಡಿದ್ದ. ಆ ಚಿತ್ರವನ್ನು ಸ್ಕ್ಯಾನ್ ಮಾಡಿ ರೋಬೋ ಕಂಪೆನಿಗೆ ಮೈಲ್ ಮಾಡಿದ್ದ. ಒಂದೇ ವಾರದಲ್ಲಿ ಬಂದಿತ್ತು ರೋಬೋ ಇದ್ದ ಬಾಕ್ಸುಗಳು-ವಿಶೇಷ ಕೊರಿಯರ ಮೂಲಕ.

ಆ ರೋಬೋ, ಅಲ್ಲಲ್ಲ ಕಮಲ ಮುಟ್ಟಿದರೆ ನಲುಗುವಂತಿದ್ದಳು! ರೋಬೋ ಜೋಡಿಸುವ ಮುನ್ನ ಅದರ ಉಡುಪುಗಳ ಮೇಲೆ ಸಿಂಪಡಿಸಿದ್ದ ಅತಿ ದುಬಾರಿಯ ವಿಶೇಷ ಸುಗಂಧ ದ್ರವ್ಯ ಮತ್ತು ತರುವಂತಿತ್ತು. ದೇವ ಕನ್ನಿಕೆ ರಂಭಾ, ಮೇನೆಕಯರ ಜೊತೆಗಾತಿಯೋ ಎಂಬಂತಿದ್ದಳು. ಆ ದೇವ ಕನ್ನಿಕೆಯರ ಸೌಂದರ್ಯಕ್ಕೆ ಋಷಿಗಳೇ ಸಂಯಮ ಕಳೆದುಕೊಂಡರೆಂದು ಪುರಾಣಗಳು ಹೇಳುತ್ತವೆ! ಅಂತದರಲ್ಲಿ ಸಾಮಾನ್ಯನಾದ ಮನುವಿನದು ಯಾವ ಲೆಕ್ಕ…? ಅವನ  ಸಂಯಮ ಮೇಲೇರಲಾರದ ಗಾಳಿಪಟದಂತೆ ಲಾಗಾ ಹಾಕುತ್ತಿತ್ತು! 
ತಂತ್ರಜ್ಞಾನ ಅತಿ ಎತ್ತರಕ್ಕೆ ಬೆಳೆದಂತೆ ಮಾನವ ಬ್ರಹ್ಮ  ಸೃಷ್ಟಿಯನ್ನೇ ಮೀರಿಸಬಹುದು ಎನಿಸಿತ್ತು ಮನುಗೆ.
ರೋಬೋಗೆ ಮನೆಯ ಎಲ್ಲ ಭಾಗಗಳನ್ನೂ ತೋರಿಸಿದ ಮನು. ಆ ರೋಬೋ ಸಾಮೀಪ್ಯಕ್ಕೆ ಅವನು ಉದ್ವೇಗದಿಂದ ಕಂಪಿಸುತ್ತಿದ್ದ. ಭಾವನೆಗಳಿಂದ ಭಾರವಾದ ಮನಸ್ಸಿಗೆ ಯೋಚಿಸುವ ಶಕ್ತಿ ಉಡುಗಿತ್ತು. ತನಗೆ ಬೇಕಾದಂತ ರೋಬೋವೇನೋ ಬಂದಿದೆ! ಮುಂದೆ..? ಅದನ್ನು ಹೇಗೆ ಬಳಸಿಕ್ಕೊಳ್ಳಬೇಕು..? ಸೇವಕಳಂತೆ? ಪರಿಚಾರಿಕೆಯಂತೆ..? ಇಲ್ಲಾ ಪ್ರೇಮಿಯಂತೆ..? ಪ್ರೇಮ..? ರೋಬೋ ಜೊತೆಗೆ ಪ್ರೇಮ..? ನಗು ಬಂತು! ನಕ್ಕ!

"ಏಕೆ ನಗುತ್ತಿದ್ದೀರಿ..?"
ಆಕೆ ಕೇಳಿದಾಗ ಅಚ್ಚರಿ!
'ಈ ಮಾಡೆಲ್ ರೋಬೋ ಸಾಮಾನ್ಯವಾದುದ್ದಲ್ಲ… ಇದು ಮಾನವರನ್ನೂ ಮೀರಿಸುವ ಸಾಧ್ಯತೆಯಿದೆ..ಅದಕ್ಕಾಗಿ ಟೆಸ್ಟಿಂಗ್ ನಡೆಯುತ್ತಿದೆ ನಮ್ಮ ಸಂಶೋಧನಾ ಕೇಂದ್ರದಲ್ಲಿ' ಸೇಲ್ಸ್‍ಮನ್ ಹೇಳಿದ್ದು ನೆನಪಾಯಿತು.
ರೋಬೋಗೆ ಭಾವನೆಗಳಿರಲು ಸಾಧ್ಯವೆ..? ಅದು ಕೇವಲ ಯಂತ್ರ! ನೋಡಲು ಸುಂದರವಾಗಿದೆ ಅಷ್ಟೆ! ಇದು ಮಾನವರನ್ನೂ ಮೀರಿಸಲು ಸಾಧ್ಯವೆ..? ಆ ಸೇಲ್ಸ್‍ಮನ್ ಇದನ್ನು ಮಾರಲು ತನ್ನ ಬಣ್ಣದ ಮಾತುಗಳನ್ನು ಉಪಯೋಗಿಸಿರಬೇಕು. ಮನು ತನ್ನನ್ನು ನಿಯಂತ್ರಿಸಿಕ್ಕೊಳ್ಳಲು ತರ್ಕಬದ್ದವಾಗಿ ಯೊಚಿಸತೊಡಗಿದ.
ಈ ವಿಷಯ ತನ್ನ ತಂದೆ ತಾಯಿಗಳಿಗೆ, ತಂಗಿ ರಂಜನಾಗೆ ತಿಳಿದರೆ ಹೇಗೆ ಪ್ರತಿಕ್ರಿಯಿಸಬಹುದು. ಇದರ ಜೊತೆ ಕೂತು ಒಂದು ಫೋಟೋ ತೆಗೆದು ಕಳಿಸಿದರೆ ನಾನು ಗುಪ್ತವಾಗಿ ಮದುವೆಯಾಗಿದ್ದೇನೆಂದು ತಿಳಿಯುತ್ತಾರೆ..! ಖಂಡಿತಾ.. !

ಮನುಗೆ ಒಮ್ಮಲೇ ನೆನಪಾಯಿತು. ಪ್ರತಿ ಸಲ ತಾನು ಮನೆಯವರೊಂದಿಗೆ ವಿಡಿಯೋ ಚಾಟ್ ಮಾಡುವಾಗ ಈ ರೋಬೋ ತನ್ನ ಹತ್ತಿರವೆಲ್ಲೂ ಕಾಣಿಸಬಾರದು. ಆ ಸಮಯದಲ್ಲಿ ಇದನ್ನು ಸ್ವಿಚ್ ಆಫ್ ಮಾಡುವುದೇ ಕ್ಷೇಮ! ಇಲ್ಲವಾದರೆ ಅನುಮಾನಗಳು ಮನೆಯವರಿಗೆ ಮೂಡಲು ಸಾಧ್ಯ!!
"ನೀವು ನಕ್ಕಿದ್ದು ಏಕೆಂದು ಹೇಳಲೇ ಇಲ್ಲ"
ರೋಬೋ ಮತ್ತೆ ಕೇಳಿತು-ವಿನಯದಿಂದ. ಇಷ್ಟು ನಾಜೂಕಾಗಿ ರೋಬೋವನ್ನು ಸೃಷ್ಟಿಸಬಹುದೆಂದು ಮನುವಿಗೆ ಕಲ್ಪನೆ ಬಂದಿರಲಿಲ್ಲ.
"ಅದು.." ತಡವರಿಸಿದ.

"ಹೂಂ..ಅದು..?"
"ಇಲ್ಲಾ..ನೋಡು ಈಗ.."
"ನನಗೆ ಹೆಸರಿದೆ…ನೀವೇ ಇಟ್ಟ ಹೆಸರು..ಕಮಲ..ತುಂಬಾ ಸುಂದರವಾದ ಹೆಸರು, ಬಹುಶಃ ಅದು ನನ್ನ ಕಣ್ಣುಗಳನ್ನು ನೋಡಿ ಇಟ್ಟ ಹೆಸರಲ್ಲವೆ..?"
ಮನುಗೆ ಧಿಗ್ಭ್ರಮೆಯಾಗುವುದು ಬಾಕಿ ಇತ್ತು! ತನ್ನ ಮನಸ್ಸನ್ನೂ ಈಕೆ ಓದಬಲ್ಲಳೆ..?
"ನಿನ್ನ ಕಣ್ಣು..? ಕಮಲ ನಿನ್ನ ಕಣ್ಣು ಹೇಗಿದೆಯೆಂದು ನಿನಗೇನು ಗೊತ್ತು..?" ಆಕೆ ಒಬ್ಬಳು ಯುವತಿಯೇನೋ ಎಂಬಂತೆ ಚೇಡಿಸಿದ.
"ಯಾಕೆ ಗೊತ್ತಿಲ್ಲ..?"
"ನಿನ್ನ ಮುಖ ನೀನು ಕನ್ನಡಿಯಲ್ಲಿ ನೋಡಿಕೊಂಡೇ ಇಲ್ಲ..? ನಿನ್ನ ಕಣ್ಣುಗಳ ಆಕಾರ ನಿನಗೆ ಹೇಗೆ ಗೊತ್ತು..?"
"ಮೈ ಡಿಯರ್ ಮನು, ಅದೆಲ್ಲಾ ನನ್ನ ನೆನೆಪಿನಲ್ಲೇ ಇದೆ"
 ಮನು ಮೆಟ್ಟಿಬಿದ್ದ! 'ಮೈ ಡಿಯರ್ ಮನು..?' ಏನು? ಇವು ಆಕೆಯ ಬಾಯಿಂದ ಮಾತುಗಳೇ ಅವು..? ಅವಳಿಗೆ ಹೇಗೆ ಗೊತ್ತು ತನ್ನ ಹೆಸರು..? ತಾನು ಹೇಳಿಯೇ ಇಲ್ಲವಲ್ಲ..? ಮೈ ಡಿಯರ್ ಎನ್ನುವ ಈ ರೋಬೋ ಜೊತೆ ತನ್ನ ಸಂಬಂಧವೇನು..?
"ನನ್ನ ಹೆಸರು ನಿನಗೆ ಹೇಗೆ ಗೊತ್ತು..?"
ಭಯ ಮಿಶ್ರಿತ ಸಂಶಯದಿಂದ ಕೇಳಿದ ಮನು.
"ಐ ನೋ ಎವ್ವೆರಿಥಿಂಗ ಎಬೌಟ್ ಯೂ.."
"ಹೇಗೆ..?"
"ನಿಮ್ಮ ಅರ್ಡರ್ನಲ್ಲಿತ್ತಲ್ಲ..?" ಆಕೆ ಮೋಹಕವಾಗಿ ನಕ್ಕಳು.
"ಅದನ್ನು ನೀನು ಓದಿರುವ ಸಾಧ್ಯತೆಯಿಲ್ಲ..?"
"ಆದರೆ ಕಂಪೆನಿಯವರು ಅದನ್ನು ನನ್ನ ನೆನಪಿಗೆ ಸೇರಿಸಿದ್ದಾರೆ. ನಾನು ಸ್ಪೆಷಲ್ ರೋಬೋ..ನಿನಗಾಗಿ ತಯಾರಿಸಲಾದ ವಿಶೇಷವಾದ ರೋಬೋ..ಆದರೆ ನಾನು ಮಾನವಳಲ್ಲ ಅಷ್ಟೆ! ಅದರೆ ಮಾನವರನ್ನೂ ಮೀರಿಸಬಲ್ಲೆ..?"
ಆ ಸುಂದರ ರೋಬೋ ತನ್ನದೆಂದು ಹೆಮ್ಮೆಪಟ್ಟ ಮನು ಮೊದಲಬಾರಿಗೆ ಅಳುಕಿದ. ಏನೋ ಮಾಡಲು ಹೋಗಿ ತಾನು ಏನನ್ನೋ ಮಾಡುತ್ತಿಲ್ಲವಷ್ಟೆ! ಮಾನವರನ್ನೂ ಮೀರಿಸಬಲ್ಲೆ ಎನ್ನುವ ಮಾತಿನ ಅರ್ಥವೇನು..? 

ರೋಬೋಗಳ ತಯಾರಿಕೆ ಮತ್ತು ಬಳಕೆ ಹೆಚ್ಚಾದಂತೆ ಅವುಗಳ ರಕ್ಷಣೆ ಮತ್ತು ದುರುಪಯೋಗದ ಬಗೆಗೆ ಎಲ್ಲ ದೇಶಗಳಲ್ಲೂ ಸಂವಿಧಾನ ಬದಲಾಗಿತ್ತು. ಅವುಗಳ ಬಗೆಗೆ ಕಾನೂನು ಕೂಡ ಬಿಗಿಯಾಗಿದೆ. ರೋಬೋ ಕೊಂಡುಕ್ಕೊಳ್ಳುವುದು ಸುಲಭ, ಆದರೆ ಅದನ್ನು ನಿಷ್ಕ್ರಿಯಗೊಳಿಸುವುದಾಗಲೀ ಇಲ್ಲವೇ 'ಜಂಕ್' ಮಾಡುವುದು ಕಾನೂನು ಬಾಹಿರ! ಈ ರೋಬೋ ತನ್ನ ಜೊತೆ ಜೀವನ ಪರ್ಯಂತ ಇರುತ್ತೇನೆಂದರೆ..? ರೋಬೋ ಜೊತೆಗೆ  ಹೆಚ್ಚಿನ ಸಂಬಂಧವೇನಾದರೂ ಬೆಳೆದುಬಿಟ್ಟರೆ..? ದಿಗಿಲಾಯಿತು!
ತಾನು ನಾಳೆಯೇ ಕಂಪೆನಿಯವರ ಜೊತೆ ಮಾತಾಡಿ ಈ ರೋಬೋ ಬಗೆಗೆ ವಿವರವಾಗಿ ಚರ್ಚಿಸಬೇಕು. ಅಗತ್ಯಬಿದ್ದರೆ ಪ್ರೋಗ್ರಾಮುಗಳನ್ನು ಬದಲಾಯಿಸಬೇಕು ಎಂದು ಯೋಚಿಸಿದ.
"ಹಲೋ ಮಾಸ್ಟರ್, ಈಗ ಸಮಯ ರಾತ್ರಿ ಎಂಟು ಗಂಟೆ. ನಿಮಗೆ ಊಟದ ಬಗೆಗೆ ಏನಾದರೂ ಯೋಚನೆಯಿದೆಯೆ..? ನಾನು ಕೂಡ ಹಸಿದಿದ್ದೇನೆ..?"
ಕಮಲ ಮಾತಿಗೆ ಮನು ಇನ್ನೊಮ್ಮೆ ಬೆಚ್ಚಿದ. ರೋಬೋಗೆ ಹಸಿವೆ..? ಯಂತ್ರ ಮಾನವರಲ್ಲಿ ಮಾನವರಂತೆ ಜೈವಿಕ ಭಾಗಗಳಿವೆಯೆ..? ಏನೋ ತಪ್ಪಾಗುತ್ತಿದೆ..ಎನಿಸಿತು!
"ನಿನಗೆ ಹಸಿವೆ..? ಬಟ್ ಯೂ ಆರ್ ಅ ರೋಬೋ..?"
"ಮೈ ಡಿಯರ್ ಸರ್..ನಾನಾಗಲೇ ಹೇಳಿದೆ, ನಾನು ಅತ್ಯಂತ ಸುಧಾರಿತ ರೋಬೋ ಗುಂಪಿಗೆ ಸೇರಿದ್ದೇನೆ! ನಾನು ಮನುಷ್ಯರಿಗಿಂತಲೂ ಮೇಲು! ಜೈವಿಕ ಜೀವಿಯೂ ಹೌದು. ನನ್ನ ದೇಹ ಸ್ಟೆಮ್ ಸೆಲ್ಲಿನಿಂದ ತಯಾರಾಗಿದೆ"

ಮನು ನಿರುತ್ತರನಾದ. ಅದರ ಜ್ಞಾನ ಅಸಾಧಾರಣ ಎನಿಸತೊಡಗಿತ್ತು. ನೋಡೋಣ ಇನ್ನೂ ಏನೇನು ಆಗುವುದೋ ಎಂದು ಧೈರ್ಯತಂದುಕೊಂಡ.
"ಓಕೆ. ಈಗ ಊಟಕ್ಕೆ ಚಪಾತಿ, ಅದಕ್ಕೆ ಮಟರ್ ಪನೀರ್, ಅನ್ನ, ರಸಂ ಮತ್ತು ಮೊಸರು ಆಗಬಹುದೆ..?"
"ಫೈನ್. ನಾನು ಈಗ ಕಿಚನ್ನಿಗೆ ಹೊರಟೆ. ಇನ್ನು ಅರ್ಧ ಗಂಟೆಯಲ್ಲಿ ಡಿನ್ನರ್ ರೆಡಿ. ನೀವು ಬೇರೆ ಕೆಲಸಗಳಿದ್ದರೆ ಮುಗಿಸಬಹುದು. ಹಾಗೇ ರೋಬೋ ಕಂಪೆನಿಗೆ ಫೋನ್ ಮಾಡಿ ಡಿಸೈನರ್ ಜಾಕೋಬ್ಗೆ ನಾನು ಸರಿಯಾಗಿ ಇನ್‍ಸ್ಟಾಲ್ ಆಗಿದ್ದೇನೆಂದು ತಿಳಿಸುವಿರಾ..? ಪ್ಲೀಸ್..?"
"ಆಗಲಿ. ಆ ಕೆಲಸ ಈಗಲೇ ಮಾಡುತ್ತೇನೆ" 

"ಯೂ ಆರ್ ಎ ಸ್ವೀಟ್ ಪರ್ಸನ್" ಎಂದು ಅವನತ್ತ ಮಾದಕವಾಗಿ ನಕ್ಕು ಕಿಚನ್ನಿನ ಕಡೆಗೆ ನಡೆದಳು ಕಮಲ.
ಮನು ಫೆÇೀನೆತ್ತಿಕ್ಕೊಂಡು ಜಾಕೋಬರಿಗೆ ಫೋನ್ ಮಾಡಿ, ರೋಬೋ ಸುಂದರವಾಗಿಯೂ ಇದೆ ಮತ್ತು ಸಮರ್ಪಕವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ. 
"ಇದು ಸ್ಪೆಷಲ್ ಡಿಸೈನಿನ ಮೊಟ್ಟ ಮೊದಲ ರೋಬೋ, ಇದರ ಬಗೆಗೆ ಆಗಗ್ಗೆ ನನಗೆ ಮಾಹಿತಿ ಒದಗಿಸುತ್ತಿರಿ, ಸ್ವಲ್ಪ ಎಚ್ಚರಿಕೆಯೂ ಇರಲಿ ಧನ್ಯವಾದಗಳು" 
ಜಾಕೋಬ್ ಮಾತು ಮನುವನ್ನು ಚಿಂತೆಗೀಡುಮಾಡಿತು.

'ಸ್ವಲ್ಪ ಎಚ್ಚರಿಕೆಯೂ ಇರಲಿ..?' ಹಾಗೆಂದರೇನು..? ರೋಬೋಗಳು ಹತ್ತಾರು ವರ್ಷಗಳಿಂದ ಜಗತ್ತಿನ ಎಲ್ಲೆಡೆ ಕೆಲಸದಲ್ಲಿ ತೊಡಗಿವೆ. ಯಾವ ರೋಬೋ ತಯಾರಕರೂ ತಮ್ಮ ರೋಬೊ ಬಗೆಗೆ ಎಚ್ಚರಿಕೆಯಿಂದಿರು ಎಂದು ಹೇಳಿಲ್ಲ. ಈ ರೋಬೋ ಬಗೆಗೆ ಇಂತ ಮಾತೇಕೆ..? '. ಇದು ಮಾನವರನ್ನೂ ಮೀರಿಸಬಹುದು ಎಂಬ ಮಾತಿಗೂ ಜಾಕೋಬರ ಈ ಮಾತಿಗೂ ಏನಾದರೂ ಸಾಮ್ಯವಿದೆಯೆ..? ಮನು ಯೋಚನೆಯಲ್ಲಿ ಮುಳುಗಿದ. ಹುಚ್ಚು ಕುದುರೆಯಂತೆ ಮನಸ್ಸು ಎತ್ತೆತ್ತಲೋ ಏನೇನೋ ಯೋಚಿಸುತ್ತಿತ್ತು. ಹಾಗೇ ಅದೆಷ್ಟು ಹೊತ್ತು ಕೂತಿದ್ದೆನೋ..?ಸಮಯ ಸರಿದಿದ್ದೇ ಅರಿವಾಗಲಿಲ್ಲ.

"ವಿಶ್ವಾಮಿತ್ರರ ತಪಸ್ಸಿಗೆ ಭಂಗವಾಯಿತೇನೋ..? ಪಾಪ..ನಿಮ್ಮ ಮೇನಕೆ ಊಟಕ್ಕೆ ಕರೆಯುತ್ತಿದ್ದಾಳೆ ಬನ್ನಿ"
ಮಾದಕ ನಗೆ ಬೀರುತ್ತಾ ಎಚ್ಚರಿಸಿತು ಕಮಲ ರೋಬೋ! 
"ಅಡಿಗಡಿಗೆ ಬೆಚ್ಚಿಬೀಳುವ ಅವಶ್ಯಕತೆಯಿಲ್ಲ. ನಾನು ನಿಮ್ಮ ಆಪ್ತ ಸಂಗಾತಿ. ನೀವು ನನ್ನನ್ನು ನೂರಕ್ಕೆ ಇನ್ನೂರು ಪಾಲು ನಂಬಬಹುದು. ದಯಮಾಡಿ ಈಗ ಊಟಕ್ಕೆ ಏಳಿ"
"ನಡಿ ಕಮಲ…" ಮನು ಎದ್ದ.
"ದಟ್ ಇಸ್ ಲೈಕ್ ಎ ಗುಡ ಬಾಯ್"
ಡೈನಿಂಗ್ ಟೇಬಲ್ ಮೇಲಿನ ತಿನಿಸಿಗಳು ಪರಿಮಳ ಬೀರುತ್ತಿದ್ದವು. ನೋಡಲು ರಸಪಾಕದಂತೆ ಕಾಣುತ್ತಿದ್ದವು.
ಮನು  ಎದುರಿನಲ್ಲಿ ಕಮಲ ಕೂತಳು. ಮೊದಲು ಮನು ತಟ್ಟೆಗೆ ನಂತರ ತನ್ನ ತಟ್ಟೆಗೆ ಎಲ್ಲ ಖಾದ್ಯಗಳನ್ನೂ ನಾಜೂಕಾಗಿ, ಒಪ್ಪವಾಗಿ ಬಡಿಸಿದಳು. ಒಬ್ಬಳು ಸುಸಂಸ್ಕೃತ ಮನೆತನದ ಹೆಣ್ಣುಮಗಳಂತೆ ಅವಳ ವರ್ತನೆ ಕಾಣಿಸುತ್ತಿತ್ತು.
ಮೊದಲ ತುತ್ತು ಬಾಯಿಗಿಳಿಸುತ್ತಲೇ "ವಾವ್" ಎಂದು ಉದ್ಗರಿಸಿಬಿಟ್ಟ ಮನು-ತನ್ನ ಅರಿವೇ ಇಲ್ಲದೆ.
"ತ್ಯಾಂಕ್ಸ್" ನಾಜೂಕಾಗಿ ತಿನ್ನುತ್ತಿದ್ದ ಕಮಲ ಪ್ರತಿಕ್ರಿಯಿಸಿದಳು.
ಎಲ್ಲ ಮಾಯಾಬಜಾರಿನಂತೆ ಮನುಗೆ ಕಾಣಿಸುತ್ತಿತ್ತು. ಇದನ್ನು ನಂಬುವುದೋ ಬಿಡುವುದೋ..? ನಂಬಲಾರೆ ನಂಬದಿರಲಾರೆ ಎನ್ನುವಂತಿತ್ತು ಅವನ ಸ್ಥಿತಿ. ತುತ್ತುಗೊಮ್ಮೆ ಆನಂದಿಸುತ್ತಾ ಊಟ ಮುಂದುವರಿಸಿದ.
"ಇನ್ನೂ ಏನೇನು ಬರುತ್ತೆ ನಿನಗೆ..?"
"ಇಂಟರ್ನೆಟ್ಟಿನಲ್ಲಿ ಲಭ್ಯವಿರುವ ಎಲ್ಲ ಆಹಾರ ಪದಾರ್ಥಗಳನ್ನೂ ತಯಾರಿಸಬಲ್ಲೆ. ಇನ್ನೂ ಹೆಚ್ಚಿನದೇನಾದರೂ ಬೇಕಾದರೆ, ಅದರ ವಿವರ ಕೊಟ್ಟರೆ ಅದನ್ನೂ ಮಾಡಬಲ್ಲೆ.."
"ನೀನು ತಂತ್ರ ಜಗತ್ತಿನ ಅದ್ಭುತ"
ಆ ರೋಬೋ ಸೃಷ್ಟಿಯನ್ನು ಮುಕ್ತ ಮನಸ್ಸಿನಿಂದ ಒಪ್ಪಿಬಿಟ್ಟ ಮನು.

"ತ್ಯಾಂಕ್ಸ್. ನೀವಿನ್ನೂ ಸ್ವಲ್ಪವೇ ನೋಡಿರುವುದು…ನೋಡಬೇಕಾದದ್ದು, ಅನುಭವಿಸಬೇಕಾದದ್ದು  ಇನ್ನೂ ಬಹಳ ಬಹಳ ಇದೆ.."
ಕಮಲ ರೋಬೋ ತುಂಟತನದಲ್ಲಿ ಮಾತಾಡಿದಂತೆ ಭಾಸವಾಯಿತು. ಅಡಿಗಡಿಗೆ ಮನುಗೆ ತಾನು ಭ್ರಮಾಲೋಕದಲ್ಲಿರುವೆನೇನೋ ಎನಿಸುತ್ತಿತ್ತು. ರೋಬೋ ಮಾತುಗಳಲ್ಲಿ ಗೂಢಾರ್ಥಗಳು ತುಂಬಿರುವಂತೆ ಕಾಣುತ್ತಿದ್ದುವು. ಸರಿಸಿಯಂತೆ, ತುಂಟಿಯಂತೆ ಮಧುವನ್ನೇ ತುಂಬಿ ಮಾತಾಡುವ ಅದರ ಪರಿಗೆ ಬೆರಗಾಗಿದ್ದ.
ಅಮೆರಿಕಾಕ್ಕೆ ಬಂದು ಆರು ವರ್ಷಗಳ ನಂತರ ಮೊದಲ ಬಾರಿಗೆ ತೃಪ್ತಿಯಾಗುವಂತೆ ಊಟ ಮಾಡಿದ್ದ. ಮನೆಯ ನೆನಪು ಬರುತ್ತಿತ್ತು. ಅಮ್ಮನ ಅಡುಗೆಯ ರುಚಿ ನೆನಪಾಗುವಂತಿತ್ತು ಊಟ.
"ಊಟ ತೃಪ್ತಿಯಾಯಿತಾ..? ಯಾವುದಕ್ಕೂ ನನ್ನೊಂದಿಗೆ ನೀನು ಸಂಕೋಚಪಡಬೇಕಾಗಿಲ್ಲ. ಯಾವುದಕ್ಕೂ ಮುಚ್ಚುಮರೆ ಬೇಕಿಲ್ಲ. ನಾನು ನಿನ್ನ ಜೀವದುದ್ದಕ್ಕೂ ನಿನ್ನ  ಸಂಗಾತಿಯಾಗಿರುವವಳು. ಬಿ ಫ್ರೀ ಅಂಡ್ ಫ್ರ್ಯಾಂಕ್"
"ತ್ಯಾಂಕ್ಸ್ ಫಾರ್ ಎವ್ವೆರಿಥಿಂಗ್" ಮನು ಅಭಿನಂದಿಸಿದ.

"ಯೂ ಆರ್ ಅ ಪರ್‍ಫೆಕ್ಟ್ ಜಂಟಲ್‍ಮನ್" ತಾನು ಕಡೆಮೆಯಿಲ್ಲವೆಂಬಂತೆ ರೋಬೋ ಅಭಿನಂದಿಸಿತು.
ತೃಪ್ತಿಕರವಾದ ಊಟ ತುಸು ಹೆಚ್ಚೇ ಹೊಟ್ಟೆಯಲ್ಲಿ ಸೇರಿತ್ತು. ಮನು ಎದ್ದು ಲಿವಿಂಗ್  ರೂಮಿಗೆ ಬಂದ.
"ಗೀವ್ ಮಿ ಟೆನ್ ಮಿನಿಟ್ಸ್. ಇದೆಲ್ಲಾ ಕ್ಲೀನ್ ಮಾಡಿ ಬರುತ್ತೇನೆ" ಒಳಗಿಂದ ಕಮಲ ರೋಬೊ ಹೇಳಿತು.
ಇದು ಎಡಬಿಡದೆ ತನ್ನ ಸಂಗಾತಿಯಾಗಿಬಿಡುತ್ತೇನೋ..? ಮನು ಮನಸ್ಸಿನಲ್ಲೇ ಹೇಳಿಕೊಂಡ. ಪರಿಸ್ಥಿತಿ ಹೀಗಾದರೆ ತಾನು ಭಾರತಕ್ಕೆ ಹೋಗುವಾಗ ಏನು ಮಾಡಬೇಕು..? ಇದನ್ನೂ ಕರೆದುಕೊಂಡು ಹೋಗಬೇಕೆ..? ಮನೆಯವರಿಗೆ ಏನೆಂದು ಹೇಳುವುದು..? ಇನ್ನಾರು ತಿಂಗಳಲ್ಲೇ ತಂಗಿ ಮದುವೆಯಿದೆ. ಅರೆ..ತಾನೇಕೆ ಹೀಗೆ ಯೋಚಿಸುತ್ತಿರುವೆ. ಇದು ರೋಬೋ..! ಇದರ ಸ್ವಿಚ್ಚನ್ನು ಆಫ್ ಮಾಡಿದರಾಯಿತು. ತಾನು ಬರುವವರೆಗೆ ಫ್ಲಾಟಿನ ಒಂದು ವಸ್ತುವಿನಂತೆ ಇರುತ್ತದೆ. ತಾನೇಕೆ ಹೀಗೆಲ್ಲಾ ಯೋಚಿಸುತ್ತಿರುವೆ. .? ಇದು ರೋಬೋ..ಇದು ಖಂಡಿತಾ ಮನುಷ್ಯರ ಸ್ಥಾನ ತೆಗೆದುಕ್ಕೊಳ್ಳಲು ಸಾಧ್ಯವಿಲ್ಲ.
ಮನು ಸಿಗರೇಟನ್ನು ಹಚ್ಚಿ ಅದರ ಹೊಗೆ ಹೊರಗೆ ಬಿಡುತ್ತಾ ತನ್ನತಲೆಯಲ್ಲಿ ತುಂಬಿಕ್ಕೊಂಡಿದ್ದ ಯೋಚನೆಗಳನ್ನು ಆಚೆ ತಳ್ಳಲು ಯತ್ನಿಸಿದ.
"ಮೈ ಡಿಯರ್ ಮನು, ಸ್ಮೋಕಿಂಗ್ ಇಸ್ ಬ್ಯಾಡ್ ಫಾರ್ ಹೆಲ್ತ್.."
ಕಿಚನ್ನಿನ ಕೆಲಲಸ ಮುಗಿಸಿದ ಕಮಲ ರೋಬೊ ಈಚೆ ಬಂದಿತ್ತು.

"ನನಗದು ಗೊತ್ತು"
"ಹಾಗಿದ್ದ ಮೇಲೇಕೆ ಸ್ಮೋಕ್ ಮಾಡುತ್ತೀಯ..ಇಷ್ಟು ಸ್ವೀಟ್ ವ್ಯಕ್ತಿಗೆ ಈ ಸ್ಮೋಕಿಂಗ್ ಹೊಂದುವುದಿಲ್ಲ. ಅದನ್ನು ಬಿಡಲಾರೆಯಾ..?"
ಅವಳ ಮಾತು ಮನು ಮೇಲೆ ಅಚ್ಚರಿಯ ಪರಿಣಾಮ ಬೀರಿತು. 'ಸ್ವೀಟ್ ಪರ್ಸನಾಲಿಟಿಗೆ ಸ್ಮೋಕಿಂಗ್ ಹೊಂದುವುದಿಲ್ಲ..!'. ವಾವ್  ಎಂತಾ ಮಾತು..! ವ್ಯಕ್ತಿಯ ಹೃದಯ ಗೆಲ್ಲಲು ಇಂಥ ಮಧುರವಾದ ಮಾತಲ್ಲವೇ ಬೇಕಾಗಿರುವುದು. ಈ ರೋಬೋ ಡಿಸೈನರ್ ನಿಜಕ್ಕೂ ಅಸಮಾನ್ಯ! ಹ್ಯಾಟ್ಸ್ ಆಫ್ ಟು ಹಿಮ್. ಇದು ರೋಬೋ ಆಗದೆ ನಿಜವಾದ ಯುವತಿಯೇ ಆಗಿಬಿಟ್ಟರೆ ತನ್ನ ಜನ್ಮ ಸಾರ್ಥಕ!

"ಇದೋ ಈಗಲೇ ಬಿಟ್ಟೆ" ಸೇದುತ್ತಿದ್ದ ಸಿಗರೇಟನ್ನು ಆಷ್‍ಟ್ರೇ ಸೇರಿಸಿದ ಮನು.
"ದಟ್ ಇಸ್ ಲೈಕ್ ಅ ಗುಡ್ ಬಾಯ್..ತ್ಯಾಂಕ್ಸ್…ಈಗ ಮಲಗು ಬೆಳಿಗ್ಗೆ ನೀನು ಎಂಟರ ಟ್ರೈನ್ ಹಿಡಿದು ನ್ಯೂಯಾರ್ಕಿಗೆ ಹೋಗಬೇಕಲ್ಲವೆ..?"
ಅಡಿಗಡಿಗೂ ಮನುಗೆ ಅಚ್ಚರಿ! ಆ ರೋಬೋನ ಒಂದೊಂದು ಮಾತಿನಲ್ಲಿ ಒಂದೊಂದು ವ್ಯಕ್ತಿತ್ವ ಕಾಣಿಸುತ್ತಿತ್ತು. ಒಮ್ಮೆ ಹಿತವಚನ ಹೇಳುವ ತಂದೆಯಂತೆ, ಮಿತ್ರನಂತೆ, ಮಮತೆಯ ತಾಯಿಯಂತೆ…ಹೂಂ..ಪ್ರೇಮ ಯಾಚಿಸುವ ತರುಣಿಯಂತೆ…! ಕಾಮನೆಗಳನ್ನು, ಬಯಕೆಗಳನ್ನು ಬಡಿದೆಬ್ಬಿಸುವ ಪ್ರೇಯಸಿಯಂತೆ..!!
"ಓ..ಹೌದು ನಾಳೆ ನ್ಯೂಯಾರ್ಕಿಗೆ ಹೋಗಬೇಕು. ಓ.ಕೆ ನಾನೀಗ ವÀುಲಗುತ್ತೇನೆ…ನೀನು..?"
"ನಾನೂ ಮಲಗುತ್ತೇನೆ.."
"ಎಲ್ಲಿ..?"
"ತುಂಟಾ..ಅದನ್ನೂ ಹೇಳಬೇಕೆ..?"
ಮನುಗೆ ಜ್ವರ ಬಂದಂತಾಯಿತು! ಅವನಿನ್ನೂ ಕುಮಾರ! ಇಂತಾ ಸುಂದರಿ, ತನ್ನ ಪಕ್ಕದಲ್ಲಿ ಮಲಗುತ್ತೇನೆಂದರೆ ಹೇಗಾಗಬಹುದೋ ಹಾಗೆಯೇ ಆಯಿತು.
"ತುಂಬಾ ಹೆದರಿದ್ದೀಯಾ..? ಏನೂ ಆಗುವುದಿಲ್ಲ..ಭಯಪಡಬೇಡ..ಬಾ..ಲಾಲಿ ಹಾಡಿ ಮಲಗಿಸುತ್ತೇನೆ.."
ನಸುನಗುತ್ತಾ ಅವನ ಕೈಹಿಡಿದು ರೂಮಿಗೆ ಕರೆದುಕೊಂಡು ಹೋದಳು. ಮೆಲ್ಲಗೆ ಅವನನ್ನು ಹಾಸಿಗೆಯ ಮೇಲೆ ಮಲಗಿಸಿದಳು. ತಾನು ಬಂದು ಪಕ್ಕಕ್ಕೆ ಮಲಗಬೇಕು ಎನ್ನುವಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ!

ಈ ಸಮಯದಲ್ಲಿ ಯಾರು ಬಂದಿರಬಹುದು..? ಮನು ಎದ್ದ. ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ ನಿಂತಿತ್ತು.
"ನೋ..ಡಿಯರ್, ಯಾರಾದರಿರಲಿ..ಈ ಸಮಯದಲ್ಲಿ ಡಿಸ್ಟರ್ಬ್ ಮಾಡಬಾರದು. ನೀನು ನೆಮ್ಮದಿಯಿಂದ ಮಲಗು"
ಕಮಲ ರೋಬೋ ಹೇಳಿತು.
ಮನು ಗೊಂದಲದಲ್ಲಿ ಬಿದ್ದ. ಮತ್ತೆ ಕಾಲಿಂಗ ಬೆಲ್! ಈ ಸಲ ಅದು ನಿಲ್ಲಲೇ ಇಲ್ಲ!! ಏನೋ ತುರ್ತು ಪರಿಸ್ಥಿತಿ ಇರುವಂತೆ ಮನುಗೆ ಭಾಸವಾಯಿತು.
ರೋಬೋ ಬೇಡ ಎಂದು ತಡೆಯುತ್ತಿದ್ದರೂ ಮನು ಧಾವಿಸಿ ಬಾಗಿಲು ತೆರೆದ.
"ಐ ಯಾಮ್ ಜಾಕೋಬ್.. ರೋಬೋ ಡಿಸೈನ್‍ರ ಬೇಗನೆ ರೋಬೋ ಎಮರ್ಜೆನ್ಸಿ ರಿಮೋಟ್ ಕೊಡಿ"
ಆತ ಗಾಬರಿಯಲ್ಲಿದ್ದ. ಆತುರದಿಂದ ಮಾತಾಡುತ್ತಿದ್ದ. 

"ಏಕೆ..? ಏನಾಯಿತು..?"
"ಪ್ರಶ್ನೆ ಆಮೇಲೆ, ಮೊದಲು ರಿಮೋಟ್ ಪ್ಲೀಸ್..ರಷ್..ನೋ ಟೈಮ್ ಫಾರ್ ಎಕ್ಸ್‍ಪ್ಲನೇಶನ್" ಆತ ನಿಜಕ್ಕೂ ಹೆದರಿದ್ದ. ತರತರ ನಡುಗುತ್ತಿದ್ದ. ಮನೆಯಲ್ಲಿ ಯಾರನ್ನೋ ಹುಡುಕುತ್ತಿದ್ದ.
ಮನು ರಿಮೋಟ್ ತರಲು ಒಳಗೆ ಹೋದ. ಆದರೆ…ಎದುರು ಕಂಡಿದ್ದು ನೋಡಿ ನಿಂತಲ್ಲೇ ಕುಸಿಯುವಂತಾಯಿತು!!!
ಆ ಸುರಸುಂದರಿ, ಕಮಲ ರೋಬೋ ಎರಡೂ ಕೈಗಳಲ್ಲಿ ದೊಡ್ಡ ಚಾಕುಗಳನ್ನು ಹಿಡಿದು ಇವರತ್ತ ಬರುತ್ತಿತ್ತು! ಕಣ್ಣುಗಳು ಕೋಪದಿಂದ ನಿಗಿನಿಗಿ ಹೊಳೆಯುತ್ತಿದ್ದವು!
"ಐ ವಿಲ್ ಕಿಲ್ ಯೂ..ಐ ವಿಲ್ ಕಿಲ್ ಯೂ" ಎಂದು ಹೂಂಕರಿಸುತ್ತಿತ್ತು!! ಕೆಲವೇ ನಿಮಿಷಗಳ ಹಿಂದೆ 'ಲಾಲಿ ಹಾಡಿ ಮಲಗಿಸುತ್ತೇನೆ ಬಾ" ಎಂದಿದ್ದ, ತನ್ನ ಮನ ಗೆದ್ದಿದ್ದ ರೋಬೋ ಇದೇನೇ ಎಂದು ನಂಬಲು ಸಾಧ್ಯವಿಲ್ಲದ ಅವತಾರದಲ್ಲಿ!!

" ಪ್ರೋಗ್ರಾಮಿನಲ್ಲಿ ಬಗ್ ಇದೆ. ಅದಕ್ಕೇ ಇದು ಹೀಗೆ ವರ್ತಿಸುತ್ತಿದೆ. ಬೇಗನೆ ರಿಮೋಟ್ ತಾ…" ಜಾಕೋಬ್ ಬಾಗಿಲ ಬಳಿ ಆತುರದಿಂದ ಕಿರುಚುತ್ತಿದ್ದರು.
ರೋಬೋ ಹತ್ತಿರ ಹತ್ತಿರ ಬರುತ್ತಿತ್ತು. ಒಂದೊಂದೇ ಹೆಜ್ಜೆ..! ಇನ್ನೇನು ಅದು ತನ್ನನ್ನು ತಿವಿಯಬೇಕು ಅಷ್ಟರಲ್ಲಿ ಯಾರೋ ಹಿಂದಕ್ಕೆಳೆದರು. 
ಮನು ಆಯತಪ್ಪಿ ಬಿದ್ದ! ಎಚ್ಚರ ಕೂಡ ತಪ್ಪಿತು. ಕಣ್ಣು ಕತ್ತಲಿಟ್ಟಿತು!!

"ಏಳು..ಏಳು ಮನು.." ಯಾರೋ ಅಲುಗಾಡಿಸಿ ಎಬ್ಬಿಸುತ್ತಿದ್ದರು. ಅಂದರೆ ತಾನು ಸತ್ತಿಲ್ಲ! ರೋಬೋ ಏನಾಯಿತು..? ಜಾಕೋಬ್.. ಎಲ್ಲಿಗೆ ಹೋದರು..?
ಮನು ಕಣ್ಣು ಬಿಟ್ಟ. ತಾಯಿ ಎಬ್ಬಿಸುತ್ತಿದ್ದರು.

"ಇವತ್ತು ಪ್ರಾಜೆಕ್ಟ್ ವೈವಾ ಇದೆ ಎನ್ನುತ್ತಿದ್ದೆ..ಏಳೋದಿಲ್ಲವಾ..?" ಆಕೆಯ ಮಾತು ಕೇಳಿ ಅಚ್ಚರಿಯಾಯಿತು! ಅಮೆರಿಕಾ..? ರೋಬೋ..? ಜಾಕೋಬ್..?
"ಯಾಕೋ ಗಾಬರಿಯಾಗಿದ್ದೀಯ..? ಕೆಟ್ಟ ಕನಸು ಬಿತ್ತೆ..? ಎದೆ ಮೇಲೆ ಪುಸ್ತಕ ಇಟ್ಕೊಂಡೇ ಮಲಗಿಬಿಟ್ಟಿದ್ದೀಯ"
ತಾಯಿಯ ಮಾತಿಗೆ ನಾಚಿ ಎದ್ದ ಮನು. ಎದೆಯ ಮೇಲಿದ್ದ ಭಾರವಾದ "ಭವಿಷ್ಯದಲ್ಲಿ ರೋಬೋಗಳು"ಎನ್ನುವ ಪುಸ್ತಕದ ಜೊತೆಯಲ್ಲಿಯೇ ಅವನು ನಿದ್ರಿಸಿದ್ದ!! 

-ಎಸ್.ಜಿ.ಶಿವಶಂಕರ್, 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Arathi ghatikar
Arathi ghatikar
6 years ago

Sogasaada kalpane …sooper

1
0
Would love your thoughts, please comment.x
()
x