ಭೂಜ್ವರ – 2017ರ ಹಿನ್ನೋಟ: ಅಖಿಲೇಶ್ ಚಿಪ್ಪಳಿ

Akhilesh chippali column1
ಹಳೆಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬದಿಗಿಟ್ಟು ಹೊಸದನ್ನು ಪಡೆಯುವ ದಿನ ದಾಪುಗಾಲಿಕ್ಕುತ್ತಾ ಬರುತ್ತಿದೆ. ಮತ್ತೊಂದು ವರುಷ ಕಳೆಯಿತು. ಹಾಗಂತ ಹಳೆಯ ಡೈರಿ ಹಾಗೂ ಕ್ಯಾಲೆಂಡರ್‍ಗಳನ್ನು ಮರತೇ ಬಿಡುವುದು ಐತಿಹಾಸಿಕ ದಾಖಲೆಯನ್ನು ಮರೆತ ಹಾಗೆ ಆಗುತ್ತದೆ. ಅತಿಮುಖ್ಯವಾದ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಇವು ಅಗತ್ಯ. ಹೊಸದನ್ನು ಸ್ವಾಗತಿಸುವು ಪೂರ್ವದಲ್ಲಿ ಒಮ್ಮೆ ಹಿಂತಿರುಗಿ ಅವಲೋಕನಗೈಯುವುದು ಕೂಡ ಮುಖ್ಯ. ಇಡೀ ಪ್ರಪಂಚ ಇವತ್ತು ನಮ್ಮ ಅಂಗೈ ತುದಿಯಲ್ಲಿದೆ. ಮಾಹಿತಿಗಳು ಭರಪೂರ ಲಭ್ಯ. ಹಾಗಂತ ಅಂಗೈತುದಿಗೆ ನಿಲುಕುವ ಪ್ರಪಂಚ ಎಷ್ಟು ಸುರಕ್ಷಿತ ಎಂದು ಕೇಳಿದರೆ, ಅದರ ಆರೋಗ್ಯ ದಿನೇ-ದಿನೇ ಹದಗೆಡುತ್ತಲೇ ಇದೆ. ಸಮಸ್ಯೆಗಳಿಗೆ ಕಾರಣವಾಗಿರುವ “ಜನಸಂಖ್ಯಾ” ಸ್ಪೋಟದ ಕುರಿತಾಗಿ ಯಾರೊಬ್ಬರು ಮಾತನಾಡುತ್ತಿಲ್ಲ. ಬೂಟಿನೊಳಗೆ ಕಲ್ಲು ಹಾಗೆಯೇ ಇದೆ. ನಡೆಯಲಾಗದೇ ಒದ್ದಾಡುತ್ತಿದ್ದೇವೆ. ಜಗತ್ತಿನ ಎರಡು ಮುಖ್ಯವಾದ ರಾಷ್ಟ್ರಗಳು ಹವಾಗುಣ ಬದಲಾವಣೆಯ ಕುರಿತು ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಅದರಲ್ಲೂ ದೊಡ್ಡಣ್ಣನೆಂಬ ಖ್ಯಾತಿಯಲ್ಲಿರುವ ಅಮೇರಿಕಾ ಹಾಗೂ ಅದರ ಹಾಲಿ ಅಧ್ಯಕ್ಷ ಹವಾಗುಣ ಬದಲಾವಣೆಯೆಂಬುದು ಬರೀ ಸುಳ್ಳು ಎಂದು ಹೇಳುವ ಧಾಷ್ರ್ಯ ತೋರಿದ್ದಾರೆ. ಅವರ ವರ್ತನೆಗಳು ಹಾಗೆಯೇ ಇವೆ. ಈ ಮನೋಭಾವ ಖಂಡಿತಾ ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ನಮ್ಮ ದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇರಲಿ, ಡೋನಾಲ್ಡ್ ಟ್ರಂಪ್ ಎಂಬ ತಿಕ್ಕಲು ಮನುಷ್ಯನ ಧೋರಣೆಯನ್ನು ಜಗತ್ತಿನ ಅನೇಕರು ಖಂಡಿಸಿದ್ದಾರೆ. ಹೀಗೆ ಖಂಡಿಸಿದವರಲ್ಲಿ ವಿಜ್ಞಾನಿಗಳಿದ್ದಾರೆ, ಧಾರ್ಮಿಕ ಮುಖಂಡರು, ಪರಿಸರವಾದಿಗಳು, ಭಾಷಾತಜ್ಞರು, ನಟ-ನಟಿಯರು, ರಾಜಕೀಯ ಮುಖ್ಯಸ್ಥರು ಇದ್ದಾರೆ. ಅವೆರೆಲ್ಲಾ ಏನು ಹೇಳಿದ್ದಾರೆ ಎಂಬುದು ದಾಖಲಾಗಬೇಕಾದ ವಿಚಾರ, ಕೊಂಚ ನೋಡೋಣವೆ?
ಪಾರಿಸಾರಿಕವಾಗಿ 2017ನೇ ಸಾಲು ತುಂಬಾ ಜಿದ್ದಾಜಿದ್ದಿನಿಂದ ವರ್ಷ ಅಂತ ಹೇಳಬಹುದು. ಕಾಳ್ಗಿಚ್ಚು, ಚಂಡಮಾರುತ ಹಾಗೂ ನೆರೆ ಇವುಗಳು ಅಮೇರಿಕಾವನ್ನು ತೀವ್ರವಾಗಿ ಬಾಧಿಸುತ್ತಿರುವ ಹೊತ್ತಿನಲ್ಲೇ ಡೋನಾಲ್ಡ್ ಟ್ರಂಪ್ ಅಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ವಿಪರ್ಯಾಸ. ಮೊಟ್ಟಮೊದಲಿಗೆ ಟ್ರಂಪ್ ಪರಿಸರ ವಿರೋಧಿ ವಿಚಾರಧಾರೆಗಳಿಗೆ ಸಡ್ಡು ಹೊಡೆದಿದ್ದು ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನ್ಯುವೆಲ್ ಮ್ಯಾಕ್ರೋನ್. ಪ್ಯಾರೀಸ್ ಒಪ್ಪಂದವನ್ನು ರದ್ದುಗೊಳಿಸಿದ ಅಮೆರಿಕಾದ ಅಧ್ಯಕ್ಷರಿಗೆ ನೇರವಾಗಿ “ಮೇಕ್ ಅರ್ಥ್ ಗ್ರೇಟ್ ಎಗೈನ್” ಘೋಷಣೆಯನ್ನು ಕಳುಹಿಸುವುದರ ಮೂಲಕ ನಿಮ್ಮ ಧೋರಣೆಗಳನ್ನು ವಿರೋಧಿಸುತ್ತೇನೆ ಎಂಬ ಬಲವಾದ ಸಂದೇಶವನ್ನು ಕಳುಹಿಸಿದರು. ಅಮೆರಿಕಾದ ಪರಿಸರ ವಿಜ್ಞಾನಿಗಳಿಗೆ ನಮ್ಮ ದೇಶಕ್ಕೆ ಬಂದು ನೀವು ಸಂಶೋಧನೆ ನಡೆಸಿ ಎಂಬ ಆಹ್ವಾನವನ್ನು ನೀಡುವುದರ ಜೊತೆಗೆ ಇದಕ್ಕಾಗಿ 70 ಲಕ್ಷ ಡಾಲರ್‍ಗಳನ್ನು ಮೀಸಲಿಟ್ಟರು. ಜಗತ್ತಿನ 20 ಅಂತಾರಾಷ್ಟ್ರೀಯ ದೈತ್ಯ ಕಂಪನಿಗಳನ್ನು ತಮ್ಮ ದೇಶಕ್ಕೆ ಆಹ್ವಾನಿಸಿ “ಒಂದೇ ಭೂಮಿ” ಎಂಬ ಶೃಂಗಸಭೆಯನ್ನು ನಡೆಸಿದರು. ಇದರ ಫಲವಾಗಿ ಆ ಇಪ್ಪತ್ತು ದೈತ್ಯ ಕಂಪನಿಗಳು ಕಲ್ಲಿದ್ದಲ್ಲ ಮೇಲಿನ ಅವಲಂಬನೆಯಿಂದ ಹೊರಬಂದರು. ಈ ಮೂಲಕ ಪಾರಿಸಾರಿಕವಾಗಿ ವಿಶ್ವನಾಯಕರಾಗಿ ಹೊರಹೊಮ್ಮಿದರು.

ಉದ್ಯಮಿ ಹಾಗೂ ಸ್ಪೇಸ್ ಎಕ್ಸ್, ಟೆಲ್ಸಾ, ಸೊಲಾರ್ ಸಿಟಿ ಎಂಬ ಹಲವು ಕಂಪನಿಗಳ ಸಂಸ್ಥಾಪಕ ಇಲಾನ್ ಮಸ್ಕ್, ಟ್ರಂಪ್ ಆಡಳಿತದಲ್ಲಿ ಹಣಕಾಸು ಸಲಹೆಗಾರರಾಗಿ ಕೆಲಸ ಮಾಡುತ್ತಲೇ ಟ್ರಂಪ್‍ನ ಪರಿಸರ ವಿರೋಧಿ ಧೋರಣೆಗಳನ್ನು ಖಂಡಿಸಿದರು. ಯಾವಾಗ ಪ್ಯಾರೀಸ್ ಒಪ್ಪಂದದಿಂದ ಟ್ರಂಪ್ ಹೊರಹೋದರೋ ಆಗಲೇ ಅವರು ಟ್ರಂಪ್ ಜೊತೆಯನ್ನು ಬಿಟ್ಟರು. ಇಲಾನ್‍ರ ಈ ನಡೆ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತು. ಅಕ್ಟೋಬರ್ ತಿಂಗಳಲ್ಲಿ ಮಾರಿಯಾ ಎಂಬ ಚಂಡಮಾರುತ ಪೋರ್ಟೊರಿಕಾಕ್ಕೆ ಅಪ್ಪಳಿಸಿ ಇಡೀ ದ್ವೀಪ ಕತ್ತಲಲ್ಲಿ ಮುಳುಗಿದ ಸಂದರ್ಭದಲ್ಲಿ ದ್ವೀಪದ ಎಲ್ಲೆಡೆ ಸೌರಶಕ್ತಿಯನ್ನು ಪರಿಚಯಿಸಿದರು. ಅತ್ತ ಟ್ರಂಪ್ ಪಳೆಯುಳಕೆ ಇಂಧನಗಳಿಗೆ ಭರ್ಜರಿ ಪ್ರೋತ್ಸಾಹ ನೀಡುತ್ತಿದ್ದರೆ, ಮಸ್ಕ್ ಮರುಬಳಕೆ ಇಂಧನಗಳಿಗೆ ಹೆಚ್ಚಿನ ಮಾನ್ಯತೆ ನೀಡುವುದರ ಮೂಲಕ ಟ್ರಂಪ್ ಆಡಳಿತಕ್ಕೆ ಸಡ್ಡು ಹೊಡೆದರು. 

ಜರ್ಮನಿಯ ಕ್ಲೈಮೇಟ್ ಚಾನ್ಸಲರ್ ಖ್ಯಾತಿಯ ಎಂಜೆಲಾ ಮಾರ್ಕೆಲ್ ಟ್ರಂಪ್ ವಿರುದ್ಧ ಗುಡುಗಿದ ಮೊದಲ ಮಹಿಳೆ. ಡೋನಾಲ್ಡ್ ಟ್ರಂಪ್‍ನ ಹವಾಗುಣ ವಿರೋಧಿ ನೀತಿ ಅತ್ಯಂತ ವಿಷಾಧನೀಯ ಎಂದು ಬಣ್ಣಿಸಿದರು.  ಅಮೆರಿಕಾದ ಹೊರತಾಗಿಯೂ ನಾವು ಪ್ಯಾರೀಸ್ ಒಪ್ಪಂದಕ್ಕೆ ಬದ್ಧರಿದ್ದೇವೆ ಎಂದು ನವಂಬರ್‍ನಲ್ಲಿ ಬಾನ್‍ನಲ್ಲಿ ನಡೆದ ಹವಾಗುಣ ಶೃಂಗಸಭೆಯಲ್ಲಿ ವಿಶ್ವನಾಯಕರಿಗೆ ಚುರುಕಿನ ಸಂದೇಶ ರವಾನಿಸಿದರು. 

2016ರ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿನ್ನೆಡೆ ಅನುಭವಿಸಿ ಬರ್ನಿ ಸ್ಯಾಂಡರ್ಸ್ ಎಂಬ ನಾಯಕ ಸುಮ್ಮನೆ ಕೂರಲಿಲ್ಲ. ಟ್ರಂಪ್‍ನ ಪರಿಸರ ವಿರೋಧಿ ನೀತಿಗಳನ್ನು ಅತ್ಯಂತ ಕಟುವಾಗಿಯೇ ಟೀಕಿಸಿದರು. ಪಳೆಯುಳಕೆ ಇಂಧನಗಳಿಗೆ ಪ್ರಾತಿನಿಧ್ಯ ನೀಡುವ “ಶಕ್ತಿ ಮತ್ತು ನೈಸರ್ಗಿಕ ನೀತಿ 2017” ಕಾಯ್ದೆಯನ್ನು ವಿರೋಧಿಸಿದ ಕೆಲವೇ ಜನರಲ್ಲಿ ಇವರೂ ಒಬ್ಬರು. ಅಕ್ಟೋಬರ್ 2017ರಲ್ಲಿ ಮಾರಿಯಾ ಎಂಬ ಚಂಡಮಾರುತ ಪೋರ್ಟೊರಿಕಾಕ್ಕೆ ಅಪ್ಪಳಿಸಿ ಇಡೀ ದ್ವೀಪದ ಜನರು ಸಂಕಷ್ಟಕ್ಕೆ ಸಿಲುಕಿದಾಗ ಅಧ್ಯಕ್ಷ ಟ್ರಂಪ್ ಅಲ್ಲಿನ ನಿವಾಸಿಗಳಿಗೆ ನೆರವು ನೀಡಲು ನಿರಾಕರಿಸಿದರು. ಆಗ ಮುಂದೆ ಬಂದ ಬರ್ನಿ 146 ಕೋಟಿ ಡಾಲರ್‍ಗಳ ಪ್ಯಾಕೇಜ್ ಘೋಷಿಸಿ, ಆ ದ್ವೀಪ ಮತ್ತೆ ಮೊದಲಿನಂತೆ ಕಟ್ಟುವಲ್ಲಿ ಸಹಕರಿಸಿದರು. ಅಲ್ಲದೇ 100/50 ಎಂಬ ಸೂತ್ರವನ್ನು ಜಾರಿಗೆ ತರುವುದರ ಮೂಲಕ ಪಳೆಯುಳಕೆ ಇಂಧನ ಉತ್ಪಾದನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ 2050ನೇ ಇಸವಿಯ ಒಳಗಾಗಿ ಪಳೆಯುಳಕೆ ಇಂಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಉತ್ತೇಜನೆ ನೀಡುತ್ತಿದ್ದಾರೆ. 

ಹವಾಗುಣ ಬದಲಾವಣೆಯನ್ನು ನಿರಾಕರಿಸುವವರನ್ನು ಬಹಿರಂಗವಾಗಿಯೇ ಟೀಕಿಸುವಲ್ಲಿ ಮಂಚೂಣಿಯಲ್ಲಿದ್ದವರು ಪೋಪ್ ಫ್ರಾನ್ಸಿಸ್, ಫೆಬ್ರುವರಿ 2017ರಲ್ಲಿ ಪೋಪ್‍ರವರು ಅಭಿವೃದ್ಧಿ ಹಂತದಲ್ಲಿ ಮೂಲನಿವಾಸಿಗಳ ಹಕ್ಕುಗಳಿಗೆ ಚ್ಯುತಿ ಬರುವ ಸಂದರ್ಭವಿದ್ದಲ್ಲಿ ಅವರ ಒಪ್ಪಿಗೆ ಪಡೆದೇ ಯಾವುದೇ ತರಹದ ಅಭಿವೃದ್ಧಿಯನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಬಾರದು ಎಂದು ಕರೆ ನೀಡಿದ್ದರು. ಟ್ರಂಪ್ ಅಧ್ಯಕ್ಷ ಸ್ಥಾನ ಅಲಂಕರಿದ ನಂತರದಲ್ಲಿ ವಿವಾದಾತ್ಮಕವಾದ ಎರಡು ಪರಿಸರ ವಿರೋದಿ (ಡಕೋಟ ಹಾಗು ಕೀಸ್ಟೋನ್ ಎಕ್ಸೆಲ್ ತೈಲ ಸರಬರಾಜು ಪೈಪ್ ಲೈನ್) ü ಯೋಜನೆಗಳಿಗೆ ಅನುಮತಿ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿದ್ದರು. ಹವಾಗುಣ ಬದಲಾವಣೆಯನ್ನು ನಿರಾಕರಿಸುವುದನ್ನು “ವ್ಯತಿರಿಕ್ತ ವರ್ತನೆಗಳು” ಎಂದು ತಿರುಗೇಟು ನೀಡಿ, ಈ ತರಹದ ವರ್ತನೆ ಇಡೀ ಪ್ರಪಂಚದ ಆಹಾರ ಭದ್ರತೆಗೆ ಸವಾಲು ಒಡ್ಡುತ್ತದೆ ಎಂದಿದ್ದರು. ಇವಕ್ಕೆಲ್ಲಾ ಮುಕುಟಪ್ರಾಯದಂತೆ ಪರಿಸರಸ್ನೇಹಿ ಕಾರನ್ನು ಖರೀದಿಸಿ ಮಾದರಿಯಾದರು. 

ಟೈಟಾನಿಕ್ ಎಂಬ ಐತಿಹಾಸಿಕ ಸಿನೆಮಾದ ನಾಯಕ ಲಿಯನಾರ್ಡೋ ಡೈಕಾರ್ಪಿಯೋ ಹಾಗೂ ಮತ್ತೋರ್ವ ಉದಯೋನ್ಮುಕ ನಟಿ ಮಿಶೇಲ್ ರೋಡ್ರಿಗ್ಸ್ ಹವಾಗುಣ ಬದಲಾವಣೆಯನ್ನು ನಿಗ್ರಹಿಸುವಲ್ಲಿ ಬಹು ಮುಖ್ಯ ಭೂಮಿಕೆಯಲ್ಲಿ ತೊಡಿಗಿಕೊಂಡಿದ್ದಾರೆ. ಮಾಂಸಾಹಾರಕ್ಕೆ ಪರ್ಯಾಯವಾಗಿ ಸಸ್ಯಾಧಾರಿತ ಆಹಾರ ಸಂಸ್ಕರಣೆ ಕಂಪನಿಯನ್ನು ಸ್ಥಾಪಿಸುವುದರ ಜೊತೆಗೆ 20 ಮಿಲಿಯನ್ ಡಾಲರ್ ಹಣವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಟ್ಟಿದ್ದಾರೆ. ಮಿಶೇಲ್ ಹವಾಗುಣ ಬದಲಾವಣೆಯಿಂದಾಗಿ ಕರಗುತ್ತಿರುವ ಮಂಜುಗಡ್ಡೆ ಹಾಗೂ ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಕೆನಡಾದ ಸೀಲ್ ಮರಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾಳೆ. ನ್ಯೂಯಾರ್ಕ್ ಪಟ್ಟಣದ ಮಾಜಿ ಮೇಯರ್ ಮೈಕೆಲ್ ಬ್ಲೂಮ್‍ಬರ್ಗ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಮಾಡುವ ಕಂಪನಿಗಳನ್ನು ತಮ್ಮ ಹಣ ನೀಡಿ ಮುಚ್ಚಿಸುವಲ್ಲಿ ಸಫಲರಾಗಿದ್ದಾರೆ, ಇದಕ್ಕಾಗಿ ಇವರು ವ್ಯಯಿಸಿದ ಮೊತ್ತ ಬರೋಬ್ಬರಿ 64 ಮಿಲಿಯನ್ ಡಾಲರ್!! ಹಾಗೆಯೇ ಮೆಕ್ಸಿಕೊದ ರಾಜಕಾರಣಿ ಪ್ಯಾಟ್ರೀಸಿಯಾ ಹವಾಗುಣ ಬದಲಾವಣೆಗೆ ಕಾರಣವಾಗುವ ಎಲ್ಲಾ ತರಹದ ಪಳೆಯುಳಕೆ ಆಧಾರಿತ ಉದ್ಯಮಗಳನ್ನು ಮರುಬಳಕೆ ಇಂಧನಗಳನ್ನು ಬಳಸುವಲ್ಲಿ ಬದಲಾಯಿಸಲು ಪ್ರತ್ಯೇಕ ಅಂತಾರಾಷ್ಟ್ರೀಯ ಕಾನೂನು ರಚನೆ ಮಾಡಬೇಕು ಹಾಗೂ ಇದಕ್ಕಾಗಿ ಹೆಚ್ಚು ಹೆಚ್ಚು ಮಹಿಳೆಯರು ಈ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. 

ಅಮೆರಿಕಾದ ಮಾಜಿ ಉಪಾಧ್ಯಕ್ಷ ಆಲ್‍ಗೋರೆ, ಭಾಷಾತಜ್ಞ ನೋಮ್ ಚಾಮ್ಸ್ಕಿ ಹಾಗೂ ಜಗತ್ತಿನ ಶೇಷ್ಠ ಭೌತವಿಜ್ಞಾನಿ ಸ್ಥೀಫನ್ ಹಾಕಿಂಗ್ಸ್ ಹೆಸರು ಕೇಳದವರು ಬಹುಷ: ವಿರಳ. ಇದರಲ್ಲಿ ಆಲ್‍ಗೋರೆ ಈ ಹಿಂದೆ “ಅಪಥ್ಯ ಸತ್ಯ” ಎನ್ನುವ ಚಿತ್ರವನ್ನು ತಯಾರಿಸಿ ಹವಾಗುಣ ಬದಲಾವಣೆಯ ಪರಿಣಾಮಗಳ ಕುರಿತಾಗಿ ಬೆಳಕು ಚೆಲ್ಲಿದ್ದರು. 2017ರಲ್ಲಿ ಮತ್ತೊಂದು ಸಾಕ್ಷ್ಯಚಿತ್ರ “ಅಪಥ್ಯದ ಉತ್ತರಾರ್ಧ : ಶಕ್ತಿಯ ಸತ್ಯ” ನಿರ್ಮಿಸಿದರು. ಮೊನ್ನೆ ಡಿಸೆಂಬರ್ 4 ಮತ್ತು 5ರಂದು “24 ಗಂಟೆಯ ವಾಸ್ತವ” ಎಂಬ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದರು. ಜಗತ್ತಿನ ವಿವಿಧ ದೇಶಗಳ ನಾಗರಿಕರು ಭೂಜ್ವರ ತಗ್ಗಿಸುವ ನಿಟ್ಟಿನಲ್ಲಿ ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಈ ಕಾರ್ಯಕ್ರಮದಲ್ಲಿ ತೋರಿಸಿದ್ದರು. ಭೂಜ್ವರದ ಕುರಿತಾದ ಈ ಕಾರ್ಯಕ್ರಮ ಪರಿಸರದ ವಿಷಯದಲ್ಲಿ ಅತ್ಯಂತ ಹೆಚ್ಚಿನ ಟಿಆರ್‍ಪಿ ಗಳಿಸಿದ ಕಾರ್ಯಕ್ರಮ ಎಂದು ನಿರೂಪಿತವಾಯಿತು. ನೋಮ್ ಚಾಮ್ಸ್ಕಿಯವರು ಟ್ರಂಪ್ ಧೋರಣೆಯನ್ನು “ಭವಿಷ್ಯದ ತಲೆಮಾರಿನ ವಿರುದ್ದದ ದಾಳಿ” ಎಂದು ಒಂದೇ ವಾಕ್ಯದಲ್ಲಿ ಖಂಡಿಸಿದರು. ಟ್ರಂಪ್ ಆಡಳಿತದ ರಿಪ್ಲಬಿಕನ್ ಪಕ್ಷ ಮಾನವ ಇತಿಹಾಸದಲ್ಲೇ ಅತ್ಯಂತ ಕ್ರೂರಿಯಾದ ಒಂದು ಸಂಸ್ಥೆ ಎಂದು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಇಂಗಾಲಾಮ್ಲವನ್ನು ನಾವು ಹೀಗೆಯೇ ಕಕ್ಕುತ್ತಿದ್ದರೆ,  ಇನ್ನು ನೂರು ವರ್ಷಗಳಲ್ಲಿ ನಾವು ಬದುಕಿಗಾಗಿ ಜಾಗವನ್ನು ಹುಡುಕಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಸಧ್ಯಕ್ಕೆ ಅದು ಸಾಧ್ಯವಿಲ್ಲ. ಆದ್ದರಿಂದ “ಹವಾಗುಣ ಬದಲಾವಣೆಯನ್ನು ನಿರಾಕರಿಸುವುದನ್ನು ಬಿಡಿ – ಭೂಜ್ವರ ತಗ್ಗಿಸಲು ಕಾನೂನು ರೂಪಿಸಿ” ಎಂದು ಟ್ರಂಪ್‍ಗೆ ಕಿವಿಮಾತನ್ನು ಹೇಳಿದವರು ಸ್ಟೀಫನ್ ಹಾಕಿಂಗ್ಸ್. ಇದೇ ಹೊತ್ತಿನಲ್ಲಿ ನಮ್ಮಗಳ ಜನಸಂಖ್ಯೆಗೆ ಈ ಭೂಮಿಯ ಗಾತ್ರ ಚಿಕ್ಕದಾಗಿದೆ ಎಂದು ಜನಸಂಖ್ಯೆಯ ಹೆಚ್ಚಳದ ಕುರಿತು ಕಳವಳ ವ್ಯಕ್ತಪಡಿಸಿದರು. 

ಇಂಗ್ಲೀಷ್ ಸಾಕ್ಷ್ಯಚಿತ್ರ ತಯಾರಕ ಮತ್ತು ಪರಿಸರಪ್ರೇಮಿ ಡೇವಿಡ್ ಅಟೆನ್‍ಬರ್ಗ್ ಹಲವು ಅತ್ಯುತ್ತಮ ಪರಿಸರ ಸಂಬಂಧಿ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಸಮುದ್ರದಲ್ಲಿಯ ಪ್ಲಾಸ್ಟಿಕ್ ಶೇಖರಣೆ ಹಾಗೂ ಅದರಿಂದಾಗಿ ಜಲಚರಗಳ ಮೇಲಾಗುವ ದುಷ್ಪರಿಣಾಮಗಳ ಕುರಿತಾಗಿ ಹಲವು ಬಾರಿ ಅವರು ಮಾತನಾಡಿದ್ದಾರೆ. ಭೂವಿರೋಧಿ ಟ್ರಂಪ್‍ಗೆ ಅವರು ಈ ರೀತಿ ಸಂದೇಶ ನೀಡಿದ್ದಾರೆ “ಹಿಂದೆಂದಿಗಿಂತಲೂ ಭೂಮಿಯ ಆರೋಗ್ಯದ ಬಗ್ಗೆ ನಮ್ಮ ತಿಳುವಳಿಕೆ ಹೆಚ್ಚಾಗಿದೆ – ಹಾಗೆಯೇ ಭೂಜ್ವರವನ್ನು ನಿಗ್ರಹಿಸುವ ನಿಟ್ಟಿನಲ್ಲೂ ನಮ್ಮ ಸಾಮಥ್ರ್ಯ ಹಿಂದೆಂದಿಗಿಂತಲೂ ಹೆಚ್ಚಿದೆ” ದಯವಿಟ್ಟು ಮಾಡಿ!
ಭೂಬಿಸಿಯೆಂಬುದು ಸತ್ಯ ಹಾಗೂ ಇದರಿಂದಾಗಿ ಭೂಮಿಯ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಅವಘಡಗಳಾಗುತ್ತವೆ. ತೀರ ಪ್ರದೇಶದ ಹಾಗೂ ಬಡವರಿಗೆ ಇದರ ಬಿಸಿ ಬೇಗ ತಟ್ಟುತ್ತದೆ, ಇಡೀ ಮನುಕುಲ ಇದರ ಕುರಿತು ಜಾಗೃತಿ ಹೊಂದಬೇಕು ಎಂಬ ಸಂದೇಶವನ್ನು ನೀಡುತ್ತಿರುವ ಹೊತ್ತಿನಲ್ಲೇ, ಹವಾಮಾನ ಬದಲಾವಣೆ ನಿರಾಕರರು ಬೇರೊಂದು ಪೃಥ್ವಿಯನ್ನು ಹುಡುಕುವ ಭರದಲ್ಲಿದ್ದಾರೆ. ಇದಕ್ಕಾಗಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ, ಎಷ್ಟೋ ಲಕ್ಷಕೋಟಿ ಡಾಲರ್‍ಗಳನ್ನು ವ್ಯಯ ಮಾಡುತ್ತಿದ್ದಾರೆ. ಭೂಮಿಯನ್ನು ಪ್ಲಾನ್ “ಎ” ಎಂದುಕೊಂಡರೆ,  ಅಗೋಚರವಾದ, ತಿಳಿದಿಲ್ಲದ ಮತ್ತೊಂದು “ಭೂಮಿ”ಯನ್ನು ಪ್ಲಾನ್ “ಬಿ” ಎನ್ನಬೇಕಾಗುತ್ತದೆ. ಪ್ಲಾನ್ “ಬಿ”ಗೆ ನೀಡುವ ಪ್ರಾಶಸ್ತ್ಯದ ಕಾಲು ಭಾಗವನ್ನು ಪ್ಲಾನ್ “ಎ” ಉಳಿಸಲು ವಿನಿಯೋಗಿಸಿದರೂ ಸಾಕು ಸರ್ವೇ ಜನ ಸುಖಿನೋ ಭವಂತು!.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x