ಭಾಷೆ ಭಾರವಾಗದಿರಲಿ: ಪೂಜಾ ಗುಜರನ್ ಮಂಗಳೂರು..

ನಾವಾಡುವ ಭಾಷೆ, ನಮ್ಮ ಹೃದಯದ ಸಂವಹನವನ್ನು ಬೆಸೆಯುವ ಒಂದು ಮಾಧ್ಯಮ. ನಮ್ಮೊಳಗಿನ ನೋವು, ವಿಷಾದ, ಖುಷಿ, ಕೋಪ, ಎಲ್ಲವನ್ನೂ ನಾವು ವ್ಯಕ್ತಪಡಿಸಬೇಕಾದರೆ ಹೃದಯಕ್ಕೆ ಹತ್ತಿರವಾಗುವ ಭಾಷೆ ಬೇಕು. ನಮ್ಮ ಮಾತೃಭಾಷೆ ಯಾವುದೇ ಇರಲಿ. ಅದನ್ನು ಮಾತಾನಾಡುವವರು ಜೊತೆಗೆ ದೊರೆತರಂತೂ ಮನಸ್ಸಿನ ಭಾವನೆಗಳು ಸರಾಗವಾಗಿ ಹರಿಯುತ್ತದೆ. ಆದರೆ ಈಗ ಎಲ್ಲರಿಗೂ ಇಂಗ್ಲಿಷ್ ಮೋಹ. ತಮ್ಮೊಳಗೆ ಹರಿಯುವುದು ಇಂಗ್ಲೀಷ್ ರಕ್ತ ಅನಿಸುವಷ್ಟರ ಮಟ್ಟಿಗೆ ಟಸ್ಸು ಪುಸ್ಸು ಇಂಗ್ಲೀಷ್ ಬಳಕೆಯಾಗುತ್ತದೆ. ಇನ್ನು ಹೆಚ್ಚಿನವರ ಮಾತಿನಲ್ಲಿ ಈ ಇಂಗ್ಲೀಷ್ ಭಾಷೆ ಇನ್ನಷ್ಟು ಬೆರೆತು ಹೋಗಿರುತ್ತದೆ. ಅಲ್ಲಿ ಯಾವ ಭಾಷೆ ಇದ್ದರೂ ಇಂಗ್ಲೀಷ್ ಬೇಕೆ ಬೇಕು. ಅಷ್ಟರ ಮಟ್ಟಿಗೆ ನಾವು ಇಂಗ್ಲೀಷ್ ಭಾಷೆಗೆ ಹತ್ತಿರವಾಗಿದ್ದೇವೆ.

ಮಾನವ ಭಾಷೆ ವಿಶಿಷ್ಟವಾದದ್ದು. ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ. ಎಲ್ಲದಕ್ಕೂ ಅದರದೇ ಆದ ವೈಶಿಷ್ಟ್ಯತೆ ಇದೆ. ಅವರವರ ಭಾಷೆಗಳು ಅವವರವರಿಗೆ ಮುಖ್ಯವಾಗಿರುತ್ತದೆ. ನಮಗೆ ಹಲವಾರು ಭಾಷೆಗಳು ತಿಳಿದಿದ್ದರೂ ಭಾವನೆಗಳನ್ನು ಹಂಚಿಕೊಳ್ಳಲು ನಮ್ಮದೇ ಭಾಷೆಯನ್ನು ಬಳಸುವಾಗ ಸಿಗುವ ತೃಪ್ತಿ ಬೇರೆ ಭಾಷೆಯಲ್ಲಿ ಸಿಗಲಾರದು. ಭಾಷೆ ಪರಸ್ಪರ ಹೃದಯಗಳನ್ನು ಬೆಸೆಯುತ್ತದೆ. ಅದರಲ್ಲೂ ಮಾತೃಭಾಷೆ ಎಂದರೆ ನಮ್ಮ ನಾಡಿ ಮಿಡಿತದಂತೆ. ದೇಹದಲ್ಲಿ ಹರಿಯುವ ರಕ್ತದಂತೆ. ಕೆಲವೊಮ್ಮೆ ನಾವು ಬಳಸುವ ನಮ್ಮ ಭಾಷೆ ಎದುರಿದ್ದವರಿಗೆ ಅರ್ಥವಾಗುವುದಿಲ್ಲ ಅಂದಾಗ ಮಾತ್ರ ನಾವು ಇಂಗ್ಲೀಷನ್ನು ಬಳಸುತ್ತೇವೆ. ಇಲ್ಲವೇ ಅವರಿಗೆ ತಿಳಿದಿರುವ ಭಾಷೆಯಲ್ಲಿ ವಿವರಿಸುತ್ತೇವೆ. ಇದು ಬರಿ ವ್ಯಾವಹಾರಿಕವಾಗಿ ಮಾತ್ರ ಬಳಸಲ್ಪಡುತ್ತದೆ.. ಇಲ್ಲಿ ನಾವು ಅವರಿಗೆ ಅವರು ನಮಗೆ ಹೃದಯಕ್ಕೆ ಹತ್ತಿರವಾಗುವುದಿಲ್ಲ. ಯಾವಾಗ ನಾವು ಮನಸ್ಸು ಬಿಚ್ಚಿ ನಮ್ಮದೇ ಭಾಷೆಯಲ್ಲಿ ಮಾತಾನಾಡುತ್ತೇವೋ ಆಗ ಅವರು ನಮ್ಮವರು ಅನಿಸುವಷ್ಟು ಹೃದಯಕ್ಕೆ ಹತ್ತಿರವಾಗಿರುತ್ತಾರೆ. ಇದು ನಮ್ಮ ಭಾಷೆಗೆ ಇರುವ ಶಕ್ತಿ. ಈ ಇಂಗ್ಲೀಷ್‌ ಭಾಷೆಯನ್ನು ಬಳಸುವಾಗ ಯಾವತ್ತು ಇದರಲ್ಲಿ ಒಂದು ಅತ್ಮೀಯತೆ ಇದೆ ಅಂತ ಅನಿಸಿದ್ದೆ ಇಲ್ಲ. ಭಾವನೆಗಳೇ ಇಲ್ಲದ ಒಂದು ನಿರ್ವಿಕಾರ ಭಾವ ಅಂತ ಅನಿಸಿದ್ದೆ ಹೆಚ್ಚು.

ಮನಸ್ಸಿನ ಮಾತಿಗೆ ಆಯಸ್ಕಾಂತದಂತ ಸೆಳೆತ ಇರಬೇಕು ಅಂದ್ರೆ ಅದು ನಮ್ಮ ಭಾವನೆಗಳನ್ನು ಜೀವಂತ ಇರಿಸಬೇಕು. ಆಗ ಅಲ್ಲಿ ಮಾತಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಯಾವಾಗ ನಾವು ಮನಸ್ಸು ಬಿಚ್ಚಿ ಆತ್ಮೀಯರಾಗುತ್ತೇವೋ ಆಗ ಮನಸ್ಸುಗಳ ಸಂಬಂಧ ಗಟ್ಟಿಯಾಗುತ್ತದೆ. ಅದು ನಮ್ಮ ಸಂವಹನದಿಂದ ಮಾತ್ರ ಸಾಧ್ಯ. ನಮ್ಮೊಳಗಿನ ಭಾವನೆಗಳನ್ನು ಹಂಚಿಕೊಳ್ಳಲು ಭಾಷೆಯೊಂದೆ ಸೇತುವೆ. ಭಾಷೆ ಗೊತ್ತಿಲ್ಲದ ದೇಶಕ್ಕೆ ಹೋದಾಗ ನಾವು ಪರದಾಡಲು ಶುರು ಮಾಡುತ್ತೇವೆ. ಅಯ್ಯೋ ಯಾರಾದರೂ ನಮ್ಮವರು ಇದ್ದಾರ ಅಂತ ಸುತ್ತಲೂ ಕಣ್ಣಾಡಿಸುತ್ತೇವೆ. ನಮ್ಮವರು ನಮಗಾಗಿ ಮಿಡಿಯುವವರು ಇಲ್ಲದೆ ಹೋದಾಗ ಮಾತು ಸತ್ತು ಹೋಗುತ್ತದೆ. ಗೊತ್ತಿಲ್ಲದ ಭಾಷೆಯಲ್ಲಿ ವ್ಯವಹರಿಸುವಾಗ ಮನಸ್ಸು ಇರಿಸು ಮುರಿಸಾಗುತ್ತದೆ. ನಾವು ಇರುವ ಪರಿಸರ ನಮ್ಮ ಕೆಲಸ ಎಲ್ಲವೂ ನಮ್ಮನ್ನು ಹೇಗೆ ಬದುಕಬೇಕು ಎಂದು ತಿಳಿಸುತ್ತದೆ.
ವ್ಯಾವಹಾರಿಕವಾಗಿ ನಾವು ಏನೇ ಕಲಿತಿದ್ದರೂ ಹೃದಯದ ಭಾಷೆಗೆ ಇರುವಷ್ಟು ಪ್ರೀತಿ ಬೇರೆ ಯಾವುದಕ್ಕೂ ಸಿಗಲಾರದು. ನಮ್ಮ ಸಂಸ್ಕ್ರತಿ ನಮ್ಮ ಆಚಾರ ವಿಚಾರ ಎಲ್ಲವೂ ನಮ್ಮ ಮೇಲೆ ಅಷ್ಟು ಪ್ರಭಾವ ಬೀರಿರುತ್ತದೆ. ಭಾಷೆಗೆ ಭೇದಭಾವವಿಲ್ಲ. ಅದು ನಮ್ಮೊಳಗೆ ಉದಯಿಸುವ ಪ್ರೀತಿಯ ಭಾವ. ನೀನು ಈ ಭಾಷೆಯನ್ನೇ ಮಾತಾನಾಡಬೇಕು ಅಂತ ಯಾರನ್ನು ಒತ್ತಾಯ ಪಡಿಸುವಂತಿಲ್ಲ. ಕಲಿಯೋದು ಬಿಡೋದು ಅವರವರ ಭಾವಕ್ಕೆ ಬಿಟ್ಟಿದ್ದು. ಪ್ರತಿಯೊಬ್ಬರಿಗೂ ಅವರವರ ತಾಯಿಭಾಷೆ ನಾಡಭಾಷೆಯ ಮೇಲೆ ವಿಶೇಷವಾದ ಒಲವು ಇದ್ದೇ ಇರುತ್ತದೆ.

ಎಲ್ಲೇ ಹೋದರೂ ನಮ್ಮವರು ಯಾರಾದರೂ ಇದ್ದಾರ ಅಂತ ಕಣ್ಣುಗಳು ಹುಡುಕಾಟ ನಡೆಸುತ್ತವೆ. ಕಿವಿಗೆ ಒಂಚೂರು ನಮ್ಮ ಭಾಷೆ ಕೇಳಿದರೂ ಸಾಕು. ಮನಸ್ಸು ಹುಚ್ಚೆದು ಕುಣಿಯುತ್ತದೆ. ಪರವೂರಿಗೆ ಹೋದಾಗ ಅಲ್ಲಿ ಯಾರಾದರೂ ನಮ್ಮ ಭಾಷೆ ಮಾತಾನಾಡುವವರು ಕಂಡರೂ ಸಾಕು. ಓ ನೀವು ಕನ್ನಡದವರ ಅಂತೀವಿ. ಓ ನೀವೂ ನಮ್ಮೂರಿನವರ ಅಂತ ಮಾತಿಗೆ ಇಳಿದು ಬಿಡುತ್ತೇವೆ. ನಮಗೆ ಒಬ್ಬರು ಹತ್ತಿರವಾಗಬೇಕಾದರೆ ಮುಖ್ಯವಾಗಿ ಇರಬೇಕಾದದ್ದು ಇಂಗ್ಲೀಷ್ ಜ್ಞಾನವಲ್ಲ. ಇನ್ಯಾವುದೋ ಬುದ್ಧಿವಂತಿಕೆಯಲ್ಲ. ನಮಗೆ ನಾವಾಡುವ ಆ ಮುದ್ದಾದ ಭಾಷೆ ಗೊತ್ತಿದ್ದರೆ ಸಾಕು. ನಾವು ಬೇಗ ಹತ್ತಿರವಾಗುತ್ತೇವೆ. ಅದೊಂದು ದಿನ ಬೆಂಗಳೂರಿನ ಹೋಟೆಲ್‌ ಒಂದಕ್ಕೆ ಹೋಗಿದ್ದಾಗ ನಮ್ಮ ಸಂಭಾಷಣೆ ತುಳುವಿನಲ್ಲಿ ಸಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಬಂದ ಹೋಟೆಲಿನ ಹುಡುಗ ಕೇಳಿಯೇ ಬಿಟ್ಟ. ತಿನಿಯರೆ ದಾದ ಕೊರೊಡ್ ಸರ್(ತಿನ್ನಲಿಕ್ಕೆ ಏನೂ ಕೊಡಲಿ ಸರ್) ಅಂತ. ಅರೆ ವಾಹ್ ತುಳುವಿನ ಹುಡುಗ ಅನಿಸಿತ್ತು. ಒಹ್ ನೀವು ಊರಿನವರ ಅಂತ ಕೇಳಿಯೇ ಬಿಟ್ಟೆವು. ಹೌದು ಸರ್ ನಾನು ಮಂಗಳೂರು. ಎಲ್ಲಿಯಾದರೂ ನಮ್ಮ ಭಾಷೆಯನ್ನು ಮಾತಾನಾಡುವವರು ಸಿಕ್ಕಿದಾಗ ನಮ್ಮ ಭಾಷೆ ಕಿವಿಗೆ ಬಿದ್ದಾಗ ಹೃದಯಕ್ಕೆ ತುಂಬಾ ಖುಷಿ ಆಗುತ್ತೆ‌. ಒಹ್ ನಮ್ಮವರೇ ಇದ್ದಾರೆ ಅನ್ನೋ ಭಾವನೆ ಬಂದುಬಿಡುತ್ತೆ ಅಂದ. ಇದು ನಮ್ಮ ಮಾತೃಭಾಷೆಗೆ ಇರುವ ಸೆಳೆತ. ಯಾರಾದರೂ ನಮ್ಮ ಹೃದಯದ ಭಾಷೆಗೆ ಸ್ಪಂದಿಸುತ್ತಾರೆ ಅಂದರೆ ಅದು ಅದರ ಶಕ್ತಿ.. ನಾವು ಅದೆಷ್ಟೆ ಇಂಗ್ಲೀಷನ್ನು ಅರೆದು ಕುಡಿದಿದ್ದರೂ ನಮ್ಮ ಒಳಗಿರುವ ಮಾತೃಭಾಷೆ ಹಾಗೇ ಇರುತ್ತದೆ. ಅದು ಇಂತಹ ಸಂದರ್ಭಗಳಲ್ಲಿ ಜಾಗೃತವಾಗುತ್ತದೆ.

ಹೊರದೇಶದಿಂದ ಬಂದವರೊಬ್ಬರು ಮೊನ್ನೆ ಮಾತಿಗೆ ಸಿಕ್ಕಿದರು ಅವರ ಮಾತು ಇಂಗ್ಲೀಷನಲ್ಲಿ ಸರಾಗವಾಗಿ ಸಾಗುತ್ತ ಇತ್ತು. ಆಗಲೇ ನನ್ನ ಸಹೋದ್ಯೋಗಿ ಬಂದು ನನ್ನ ಹತ್ತಿರ ತುಳುವಿನಲ್ಲಿ ಏನೋ ಕೇಳಿದಳು. ಅಷ್ಟೇ… ಇವರ ಮಾತು ಅಲ್ಲಿಂದಲೇ ತುಳುವಿಗೆ ತಿರುಗಿತ್ತು. ಅವರದು ಅದೇ ಅಭಿಪ್ರಾಯ. ನಾನು ತುಂಬಾ ವರ್ಷಗಳಿಂದ ಹೊರದೇಶದಲ್ಲಿ ವಾಸಿಸುತ್ತ ಇದ್ದೇನೆ. ಹಾಗೇ ಅಲ್ಲಿ ಇಂಗ್ಲೀಷ್ ಒಂದೇ ಪ್ರಯೋಜನಕ್ಕೆ ಬರೋದು.ಆದರೆ ಯಾವಾಗ ಊರಿಗೆ ಕಾಲಿಡುತ್ತೇವೋ ಆಗ ಹೃದಯ ನನ್ನ ಭಾಷೆಯ ಹುಡುಕಾಟದಲ್ಲಿ ಇರುತ್ತದೆ. ಯಾರಾದರೂ ಮಾತಾನಾಡಲು ಸಿಕ್ಕರಂತೂ ಹೊತ್ತು ಸರಿದದ್ದೇ ಗೊತ್ತಾಗಲ್ಲ. ನಮ್ಮ ಭಾಷೆಯಲ್ಲಿ ಮಾತಾನಾಡುವ ಖುಷಿ ಬೇರೆಲ್ಲೂ ಇಲ್ಲ. ನಮ್ಮ ನೆಲದ ಭಾಷೆಗೆ ಭಾವನೆಗಳಿವೆ ಸ್ಪಂದನೆಗಳಿವೆ. ಎಲ್ಲವನ್ನೂ ಹೇಳಿ ಬಿಡುವ ತವಕಗಳಿವೆ. ಆದರೆ ಈ ಇಂಗ್ಲೀಷ್ ಭಾಷೆಯಲ್ಲಿ ಯಾವುದು ಇಲ್ಲ. ಒಂದು ಪದಕ್ಕೆ ಸಾವಿರ ಅರ್ಥಗಳು. ಅದು ಎದುರಿಗಿರುವವನ ಹೃದಯವನ್ನು ಎಷ್ಟು ತಟ್ಟುತ್ತದೆ ಅನ್ನುವುದು ಆ ದೇವರೇ ಬಲ್ಲ.

ನಿಜ ಅಲ್ವ. ನಾವಾಡುವ ಪ್ರತಿ ಮಾತಿಗೂ ಅದೆಷ್ಟು ಸೆಳೆತವಿದೆ. ಈ ನೆಲದಲ್ಲಿ ಸುಂದರ ಭಾಷೆಗಳ ಸೊಗಡು ಸುಂದರವಾಗಿ ರೂಪಿತವಾಗಿದೆ. ಎಲ್ಲ ಭಾಷಿಗರು ಇರುವ ಈ ಪ್ರಪಂಚದಲ್ಲಿ ಅವರವರ ಭಾಷೆ ಎಲ್ಲರಿಗೂ ಪ್ರಿಯವೇ. ಹಲವಾರು ಭಾಷೆಯ ವಿವಿಧ ಸಂಸ್ಕೃತಿಯ ಸುಸಂಸ್ಕೃತ ನಾಡು ನಮ್ಮದು. ನಮ್ಮತನಕ್ಕೆ ಸಾಕ್ಷಿಯಾಗಿ ನಮ್ಮ ನೆಲದ ಉಳಿವಿಗಾಗಿ ಈ ನಮ್ಮ ಹೃದಯದ ಭಾಷೆಯನ್ನು ಉಳಿಸಿಕೊಳ್ಳಬೇಕು. ಇಂಗ್ಲೀಷ್ ಏನಿದ್ದರೂ ವ್ಯಾವಹಾರಿಕವಾಗಿ ಮಾತ್ರ ಇರಲಿ. ಇಂಗ್ಲೀಷ್ ಮಾತಾಡಿದರಷ್ಟೆ ಹೆಸರು ಪ್ರತಿಷ್ಠೆಯಲ್ಲ. ಪ್ರತಿಷ್ಠೆಯ ಹೆಸರಲ್ಲಿ ನಮ್ಮ ಭಾಷೆ ನಮಗೆ ಭಾರವಾಗದಿರಲಿ ನಮ್ಮವರ ಜೊತೆ ನಮಗೆ ಗೊತ್ತಿರುವ ಭಾಷೆಯಲ್ಲಿ ಮಾತಾನಾಡುತ್ತ ಹೃದಯಕ್ಕೆ ಮನಸ್ಸಿಗೆ ಹತ್ತಿರವಾಗೋಣ..

ಪೂಜಾ ಗುಜರನ್ ಮಂಗಳೂರು..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x