ಭಾಷಾ ಮೋಡಿಗಾರ: ಜಯಲಕ್ಷ್ಮೀ ಪಾಟೀಲ್

jayalakshmi-patil


ಗೋಪಾಲ್ ವಾಜಪೇಯಿ ಅನ್ನುವ ಹೆಸರು ಕೇಳಿದ ತಕ್ಷಣ ಸಿನಿಮಾದ ಹಾಡುಗಳ ಬಗ್ಗೆ ಗೊತ್ತಿರುವವರಿಗೆ ‘ಈ ಹಸಿರು ಸಿರಿಯಲಿ, ಮನಸು ನಲಿಯಲಿ ನವಿಲೇ’ ಮತ್ತು ‘ಕಂಬದಾ ಮ್ಯಾಲಿನ ಗೊಂಬೆಯೆ, ನಂಬಲೇನ ನಿನ್ನ ನಗೆಯನ್ನ’ ಹಾಡುಗಳಾದರೆ, ರಂಗಭೂಮಿಯ ಜನರಿಗೆ ‘ಅದ ಗ್ವಾಡಿ, ಅದ ಸೂರು ದಿನವೆಲ್ಲ ಬೇಜಾರು/ ತಿದಿಯೊತ್ತಿ ನಿಟ್ಟುಸಿರು ಎದಿಯಾಗ ಚುರುಚುರು..’, ‘ಯಾವ ದೇಸದ ರಮಣ ಬಂದು, ಏನ ಮೋಸವ ಮಾಡಿದಾ…’ ಇತ್ಯಾದಿ ಹಾಡುಗಳು ನೆನಪಿಗೆ ಬರುತ್ತವೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಶಿವರಾಜಕುಮಾರ್ ನಟಿಸಿದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾ ನೆನಪಾಗುತ್ತದೆ, ಅದರಲ್ಲಿನ ಅರ್ಥಪೂರ್ಣ ಕಬೀರ್ ದೋಹಾಗಳು ನೆನಪಾಗುತ್ತವೆ. ಇದಿಷ್ಟು ದೂರದಿಂದ ಅವರನ್ನು ಬಲ್ಲವರಿಗೆ. ಹತ್ತಿರದಿಂದ ಗೋಪಾಲ್ ವಾಜಪೇಯಿ ಅವರನ್ನು ಬಲ್ಲವರ ಕಿವಿಗೆ ಈ ಹೆಸರು ಕಿವಿ ಬಿದ್ದೊಡನೆ ನೆನಪಾಗುವುದು ಅವರ ನಡೆ ನುಡಿಯಲ್ಲಿನ ಸರಳತನ, ಸಜ್ಜನಿಕೆ ಹಲವಾರು ವಿಷಯಗಳಲ್ಲಿನ ಆಳ ಅರಿವು, ಅರಿಯದ ವಿಷಯಗಳ ಕುರಿತ ನೇರವಂತಿಕೆ. ಉತ್ತರ ಕರ್ನಾಟಕದ ಬನಿ ಅವರ ಬರಹದಲ್ಲಿ ಜೇನಿನಂತೆ ತುಂಬಿ ತುಳುಕಿ ತೊಟ್ಟುಕ್ಕುತ್ತಿತ್ತು. ಉತ್ತರ ಕರ್ನಾಟಕದ ಕನ್ನಡದ ಸೊಗಡನ್ನು ಅನೇಕ ಸಾಹಿತಿಗಳು ಸಮರ್ಥವಾಗಿಯೇ ತಮ್ಮ ಬರಹಗಳಲ್ಲಿ ಒಡಮೂಡಿಸಿದ್ದಾರಾದರೂ ಅವರಲ್ಲಿ ವಾಜಪೇಯಿಯವರ ರಂಗಗೀತೆಗಳ ತೂಕ ಒಂದು ಕೈ ಹೆಚ್ಚು! ಕಾಮದ ವಿಷಯವನ್ನು ಸಹ ಓದುವವರಿಗೆ/ಹಾಡುವವರಿಗೆ/ಕೇಳುವವರಿಗೆ ಮುಜುಗರವಾಗದಂತೆ ಸಭ್ಯತೆಯನ್ನು ಮೀರದೆ ಆದರೆ ಸ್ಪಷ್ಟವಾಗಿ ಅರಿವಾಗುವಂತೆ ಬರೆದವರೆಂದರೆ ಬೇಂದ್ರೆ ನಂತರ ವಾಜಪೇಯಿ ಮಾತ್ರ ಎಂದರೆ ಉತ್ಪ್ರೇಕ್ಷೆಯಾಗಲಾರದು.

ಅವರನ್ನು ಭೇಟಿಯಾದ ಮೊದಲ ಸಲಕ್ಕೆ ಅವರೊಬ್ಬ ವಿಶೇಷ ವ್ಯಕ್ತಿ ಅನಿಸುವುದರ ಮೂಲಕ, ಅವರ-ನಮ್ಮ ಗೌರವಕ್ಕೆ ಧಕ್ಕೆ ಬರದಂತೆ ನಾಲ್ಕು ಹೆಜ್ಜೆ ಹಿಂದೆ ನಿಂತು ಮಾತಾಡುವುದೊಳಿತು ಎನ್ನುವ ಭಾವ ಮೂಡದೆ, ಅವರೊಬ್ಬ ಆತ್ಮೀಯರು, ಮನೆಯ ಹಿರಿಯರಲ್ಲಿ ಒಬ್ಬರು ಎನಿಸುವಂಥಾ ಗೌರವಪೂರ್ಣ ಆತ್ಮೀಯತೆ ಮನದಲ್ಲಿ ತಂತಾನೆ ಒಡಮೂಡಿತ್ತು ನನ್ನಲ್ಲಿ. ಅದೇ ಕಾರಣಕ್ಕೆ ಅವರ ಅನುಮತಿಗೂ ಕಾಯದೆ ನೇರವಾಗಿ ಕಾಕಾರ ಎಂದೇ ಸಂಬೋಧಿಸಿದ್ದೆ. ನನ್ನ ಸಂಬೋಧನೆಯಿಂದಾಗಿ ಅವರು ನನ್ನನ್ನು ಏಕವಚನದಲ್ಲಿ ಮಾತನಾಡಿಸುವ ಅವಕಾಶವಿದ್ದರೂ ಜಯಕ್ಕ ಎನ್ನುತ್ತಲೇ ಬಹುವಚನದಲ್ಲೇ ಮಾತನಾಡಿಸುತ್ತಿದ್ದರು.  ಅವರಿಗೂ ನನ್ನ ಭೇಟಿಯಾಗಿದ್ದು ಸಂತಸ ತಂದಿತ್ತು. ಅವರ ಮನೆಯ ಜನರು ನಾನು ಅಭಿನಯಿಸುತ್ತಿದ್ದ ಧಾರಾವಾಹಿಗಳನ್ನು ನೋಡುತ್ತಿರುವುದಾಗಿಯೂ, ಅವರಿಗೆಲ್ಲ ನನ್ನ ಅಭಿನಯವೆಂದರೆ ತುಂಬಾ ಇಷ್ಟ ಅಂತಲೂ ಹೇಳಿದರು. ಮುಂದೆ ವಾಜಪೇಯಿ ಕಾಕಾರ ‘ನಂದಭೂಪತಿ’ ನಾಟಕದ ಮರು ಬಿಡುಗಡೆಯ ಹೊತ್ತಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಅವರ ಮಾತೋಶ್ರೀಯವರಿಗೆ ನನ್ನನ್ನು ತೋರಿಸಿ, ‘‘ಯಾರು ಗೊತ್ತಾತೇನು? ಗುರ್ತು ಹಿಡಿ ನೋಡೂನು?” ಎನ್ನುತ್ತಾ ನನ್ನನ್ನು ಪರಿಚಯಿಸಿದ್ದು, ನಂತರ ಅಜ್ಜಿ ನಗುತ್ತಾ ನನ್ನನ್ನು ಹರಸಿದ್ದು ಎಲ್ಲವೂ ಅಚ್ಚಳಿಯದ ನೆನಪು ನನ್ನಲ್ಲಿ. ಇಲ್ಲಿ ನನ್ನ ಬಗ್ಗೆ ಹೇಳುವ ಇರಾದೆಯಿಂದ ಇದನ್ನೆಲ್ಲ ಹೇಳುತ್ತಿಲ್ಲ. ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದೆ ಕಿರಿಯರ ಬಗ್ಗೆಯೂ ಅಭಿಮಾನ ತಳೆಯುತ್ತಿದ್ದ ಅವರ ಸ್ವಭಾವವನ್ನು ಪರಿಚಯಿಸಲು ಹೇಳುತ್ತಿದ್ದೇನೆ. 

ಉತ್ತರ ಕರ್ನಾಟಕದ ಮಣ್ಣಿನ ಗುಣ ಬಲು ವಿಚಿತ್ರ. ನಮ್ಮ ಭಾಷೆಯನ್ನು, ಗಟ್ಟಿ ದನಿಯನ್ನು ಕೇಳಿದವರಿಗೆ ನಾವುಗಳು ಒರಟರಂತೆ, ಹುಂಬರಂತೆ ಕಾಣುತ್ತೇವೆ. ಆದರೆ ನಮ್ಮಂಥಾ ಸಂಕೋಚ ಸ್ವಭಾವದ ಜನ ಕರ್ನಾಟಕದ ಉಳಿದ ಭಾಗಗಳಲ್ಲಿ ಈ ಮಟ್ಟದಲ್ಲಿ ಕಾಣಸಿಗುವುದು ಅಪರೂಪ. ಈ ಸಂಕೋಚವೇ ಗೋಪಾಲ್ ವಾಜಪೇಯಿಯವರನ್ನು ಪದೆ ಪದೆ ನೋವುಣ್ಣುವಂತೆ ಮಾಡಿತು ಅವರ ಬದುಕಿನಲ್ಲಿ. ತಮಗಾದ ಅನ್ಯಾಯದ ಅವರು ಅನ್ಯಾಯಕ್ಕೊಳ್ಳಗಾಗಿ, ಅನ್ನಲಾಗದೆ, ಅನುಭವಿಸಲಾಗದೆ ಅದರ ವಿರುದ್ಧ ದನಿ ಎತ್ತಿದ್ದು ದಶಕಗಳ ನಂತರ! 

ವಾಜಪೇಯಿ ಕಾಕಾ ಅನುವಾದಿಸಿದ ‘ಸಂತ್ಯಾಗ ನಿಂತಾನ ಕಬೀರ’ ನಾಟಕದ ವಾಚನ ನಮ್ಮ ಮನೆ ‘ಮುಗುಳ್ನಗೆ’ಯಲ್ಲಿ ಆದದ್ದು, ಅವರೂ ಅದರಲ್ಲಿನ ಎರಡೆರಡು ಪಾತ್ರಗಳನ್ನ ನಿರ್ವಹಿಸಿದ್ದು ನನ್ನ ಅವಿಸ್ಮರಣೀಯ ನೆನಪುಗಳಲ್ಲಿ ಒಂದು. ಮೆದು ಮಾತಿನ ಕಾಕಾರ ಅಂದಿನ ಥೀಯಟರ್ ದನಿ ಕೇಳಿ ಅಚ್ಚರಿಗೊಂಡಿದ್ದೆ, ಸಂತಸ ಪಟ್ಟಿದ್ದೆ. ಮೆಲುದನಿಯ ಗೋಪಾಲ್ ವಾಜಪೇಯಿ ಕಾಕಾ ಮರೆಯಾಗಿ, ಪಾದರಸದಂಥ ಕಡಕ್ ದನಿ ಅನುರುಣಿಸಿತ್ತು. ಅಂದು ಅವರಿಂದಾಗಿ ಉತ್ತರ ಕರ್ನಾಟಕದ ಕೆಲವು ರಂಗಕರ್ಮಿಗಳ, ರಂಗಾಸಕ್ತರ ಪರಿಚಯವಾಗುವ ಸುಯೋಗ ನನಗೆ. ಮತ್ತೊಮ್ಮೆ ಅದೇ ನಾಟಕದ ವಾಚನ ಆಯೋಜಿಸಬೇಕೆಂದುಕೊಂಡೆವಾದರೂ ಸಾಧ್ಯವಾಗಲಿಲ್ಲ. 

ಒಮ್ಮೆ ರಂಗಭೂಮಿ ಸ್ನೇಹಿತ ಧನಂಜಯ್ ಕುಲಕರ್ಣಿ ಫೋನ್ ಮಾಡಿ, ಬಚ್ಚಾಸಾನಿಯ ಕುರಿತು ವಾಜಪೇಯಿ ಕಾಕಾ ನಾಟಕ ಬರೆಯುತ್ತಿದ್ದಾರೆಂದೂ, ನನ್ನನ್ನು ಮತ್ತು ಹನುಮಕ್ಕನನ್ನು ಬಚ್ಚಾಸಾನಿ ಪಾತ್ರದಲ್ಲಿ ತಾವು ನಿರ್ದೇಶಿಸಬೇಕೆಂದುಕೊಂಡಿದ್ದಾರೆಂದೂ ಹೇಳಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ. ಮೊದಲ ಮಹಿಳಾ ನಾಟಕ ಕಂಪನಿಯ ಒಡತಿ ರಾಜವ್ವ ಊರ್ಫ್ ರಾಜಾಸಾನಿ ಊರ್ಫ್ ಬಚ್ಚಾಸಾನಿ. ಸಂಗೀತ ವಿದೂಷಿ, ನೃತ್ಯ ಪ್ರವೀಣೆ. ವರ್ಷಗಟ್ಟಲೆ ಕಾದೆ, ಇವತ್ತು ನಾಳೆ ನಾಟಕ ಶುರುವಾಗಬಹುದು ಎಂದು. ಯಾಕೊ ಅದರ ಸುದ್ದೀನೇ ಇಲ್ಲ ಎನಿಸಿ ನೇರ ವಾಜಪೇಯಿ ಕಾಕಾರಿಗೇ ಫೋನಾಯಿಸಿದೆ. ಆಗವರು, “ಬರೀತೀನಿ ಜಯಕ್ಕಾ. ಆದ್ರ ಅದಕ್ಕೂ ಮದ್ಲ ಧಾರವಾಡದ ಪ್ರಸಿದ್ಧ ಮಂದಿ ಬಗ್ಗೆ ಬರ್ಯಾಕತ್ತೀನಲ್ಲ ಅವಧಿಯೊಳಗ ಅದನ್ನ ಬರ್ದು ಮುಗಸ್ಬೇಕಾಗೇದ. ಪುಸ್ತಕ್ ಆಗೂದದ. ಅದನ್ನಿಷ್ಟು ಬರ್ದು ಮುಗಿಸಿ, ಬಚ್ಚಾಸಾನಿ ಚಾಲೂ ಮಾಡ್ತೀನಿ” ಅಂದ್ರು. ಸಮಾಧಾನಗೊಂಡು ಫೋನಿಟ್ಟೆ. ಆದ್ರೆ ಬಚ್ಚಾಸಾನಿ ರಂಗದ ಮೇಲಲ್ಲ, ಕಾಗದದ ಮೇಲೂ ನಾಟಕವಾಗಿ ಮೂಡಲಿಲ್ಲ ಅನ್ನೋದು ನನ್ನ ಹಾಗೂ ಬಚ್ಚಾಸಾನಿಯ ದುರ್ದೈವ…

ಹೌದು, ಎಲ್ಲರೂ ಹೇಳುವಂತೆ ಗೋಪಾಲ ವಾಜಪೇಯಿ ಅವರಿಗೆ, ಎರಡು ಬಾರಿ ರಾಜ್ಯ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಅಮ್ಮ ಪ್ರಶಸ್ತಿ ಮತ್ತು ಒಂದಿಷ್ಟು ಗೌರವ ಪುರಸ್ಕಾರಗಳು ದೊರೆತಿವೆಯಾದರೂ ಅವರಿಗೆ ಸಿಗಬೇಕಾದಷ್ಟು ಮಣ್ಣನೆ, ಪ್ರೋತ್ಸಾಹ ಸಿಗಲಿಲ್ಲ ಎನ್ನುವುದು ಎಲ್ಲ ಕನ್ನಡಿಗರ ಒಮ್ಮತ ಅಭಿಪ್ರಾಯ. ಹಾಗಂತ ಅವರೊಳಗಿನ ಒರತೆ ಬತ್ತಿ ಬರಡಾಗಲಿಲ್ಲ. ಬರಹ ಅವರ ಪ್ಯಾಶನ್ ಆಗಿತ್ತು ಆದ್ದರಿಂದಲೇ ಮಣೆಗಳಿಗಾಗಿ ಕಾಯುತ್ತಾ ಕೂರದೆ ಬರೆದರು, ಇರುವವರೆಗೂ ಬರೆಯುತ್ತಲೆ ಹೋದರು. ಆರೋಗ್ಯದಲ್ಲಿ ಸಿಗದ ನೆಮ್ಮದಿಯನ್ನ ಅವರ ಬರವಣಿಗೆ ಅವರಿಗೆ ಒದಗಿಸಿಕೊಟ್ಟಿದೆ ಎಂದುಕೊಳ್ಳುತ್ತೇನೆ. 

೨೧ ಸೆಪ್ಟಂಬರ್ ೨೦೧೬ರ ರಾತ್ರಿ ೯.೨೦ರ ಹೊತ್ತಿಗೆ ಗೆಳತಿ ಕುಮುದವಲ್ಲಿ ಫೋನ್ ಮಾಡಿ, “ವಿಷಯ ಗೊತ್ತಾಯ್ತಾ?” ಅಂದ್ರು. ಅಷ್ಟೊತ್ತಿನಲ್ಲಿ ಹೀಗೆ ಕೇಳ್ತಿದಾರಂದ್ರೆ ಯಾಕೊ ಏನೋ ಒಳ್ಳೆ ಸುದ್ದಿ ಇರ್ಲಿಕ್ಕಿಲ್ಲ ಅಂತಲೆ ಅನಿಸಿತು ನನಗೆ. “ಏನಾಯ್ತು?” ಅಂದೆ. ಅದಕ್ಕವ್ರು ನೋವಿನ ದನಿಯಲ್ಲಿ “ಗೋಪಾಲ್ ವಾಜಪೇಯಿ” ಅಂದ್ರು ಅಷ್ಟೆ, ಗೊತ್ತಾಗಿಹೋಯ್ತು… ತಕ್ಷಣ ಪತಿಯ ಜೊತೆಗೆ ಮನೆಯಿಂದ ಹೊರಟು ಕುಸುಮ ಆಸ್ಪತ್ರೆ ತಲುಪಿ, ಐಸಿಯುಗೆ ಹೋಗಿ ನೋಡಿದ್ರೆ, ಲೋಕದ ಗೊಡವೆ ಇಲ್ಲದೆ ಮಗುವೊಂದು ನಿರುಮ್ಮಳವಾಗಿ ಕೈಕಟ್ಟಿಕೊಂಡು ಮಲಗಿದಂತೆ ಅಲ್ಲಿ ಮಲಗಿದ್ದರು ವಾಯಪೇಯಿ ಕಾಕಾ. ಅವರ ಪಾದ ಮುಟ್ಟಿ ನಮಸ್ಕರಿಸುತ್ತಿದ್ದ ನಾನು ಅಂದು ಹಾಗೆ ಮಲಗಿದ ಗೋಪಾಲ ಎಂಬ ಮಗುವಿನ ಅಸ್ತ್ಯವ್ಯಸ್ಥಗೊಂಡಿದ್ದ ಕೂದಲನ್ನು ಮೃದುವಾಗಿ ಸರಿ ಮಾಡಿ, ಹಣೆ ನೇವರಿಸಿದೆ. ಎಚ್ಚರಗೊಳ್ಳದ ಗಾಢ ನಿದ್ದೆಯಲ್ಲಿ ಸುಮ್ಮನೆ ಮಲಗಿದ್ದರು ವಾಜಪೇಯಿ ಕಾಕಾ… 
-ಜಯಲಕ್ಷ್ಮೀ ಪಾಟೀಲ್
 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Umesh Desai
Umesh Desai
7 years ago

ಖರೇ ಅದ ಮೇಡಂ ನಮ್ಮ ಕಡಿ ಮಂದಿ ಸ್ವಭಾವ ಗುಣ ವಿಚಿತ್ರ ಅದ

ಇದ್ದಾಗಲೂ ಇರದಿದ್ದಾಗಲೂ ನೆನಪು ಮಾಡಕೋತನ ಇರತೇವಿ

ಬಾಲಕೃಷ್ಣ ಟಿ.ಜಿ
ಬಾಲಕೃಷ್ಣ ಟಿ.ಜಿ
7 years ago

ಇಷ್ಟೊಂದು ಬಳಗವನ್ನು ಬಿಟ್ಟು ಹೋಗುವ ಅವಸರ ಏನಾಗಿತ್ತು.

2
0
Would love your thoughts, please comment.x
()
x