“ಈ ಎರಡು ಮಾತುಗಳನ್ನು ಹೇಳಿ ನಾನು ನನ್ನ ಮಾತನ್ನು ಮುಗಿಸುತ್ತಿದ್ದೇನೆ'', ಎಂದು ಆ ಗಣ್ಯರು ಹೇಳುತ್ತಿದ್ದರು.
ಹೀಗೆ ವೇದಿಕೆಯಲ್ಲಿ ಮೈಕಿನ ಮುಂದೆ ಆ ಗಣ್ಯರು ಹೇಳುತ್ತಿದ್ದಿದ್ದು ಹತ್ತಕ್ಕೂ ಹೆಚ್ಚಿನ ಬಾರಿ. ಅದು ಶಾಲಾ ವಾಷರ್ಿಕೋತ್ಸವ ಒಂದರ ಸಮಾರಂಭ. ಆಮಂತ್ರಣ ಪತ್ರಿಕೆಯಲ್ಲಿ ಏಳು ಘಂಟೆಗೆ ಕಾರ್ಯಕ್ರಮವು ಶುರುವಾಗಲಿದೆಯೆಂದು ಮುದ್ರಿಸಿದ್ದರೂ ಶುರುವಾಗಿದ್ದು ಎಂಟೂವರೆಗೆ. ಮೊದಲು ಗಣ್ಯರ ಭಾಷಣ, ಸನ್ಮಾನ ಕಾರ್ಯಕ್ರಮ, ಬಹುಮಾನ ವಿತರಣೆ ಇತ್ಯಾದಿಗಳು, ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಬುದು ಆ ಶಾಲೆಯಲ್ಲಿ ಹಲವು ವರ್ಷಗಳಿಂದಲೂ ನಡೆದು ಬಂದ ವಾಡಿಕೆ. ಗಣ್ಯರು ಎಂದರೆ ವೇದಿಕೆಯ ಮೇಲೆ ಒಬ್ಬರಿಬ್ಬರೇ? ಮುಖ್ಯ ಅತಿಥಿಗಳಿಂದ ಹಿಡಿದು ಮುಖ್ಯವಲ್ಲದ ಅತಿಥಿಗಳಿಗೂ ವೇದಿಕೆಯಲ್ಲಿ ಒಂದೊಂದು ಕುಚರ್ಿಯನ್ನು ಮೀಸಲಿಡಲೇ ಬೇಕು. ವೇದಿಕೆಯಲ್ಲಿ ಕುಳಿತಿದ್ದ ಎಲ್ಲರೂ ಅಲ್ಲದಿದ್ದರೂ ನಾಲ್ಕೈದು ಜನರಂತೂ ಮಾತನಾಡಲೇಬೇಕು. ಅಂತೂ ಎಂಟೂವರೆಗೆ ಶುರುವಾಗುವ ಸಭಾ ಕಾರ್ಯಕ್ರಮವು ಮುಗಿದು ಸಾಂಸ್ಕೃತಿಕ ಕಾರ್ಯಕ್ರಮವು ಶುರುವಾಗುವಷ್ಟರಲ್ಲಿ ಹತ್ತು ಘಂಟೆಯಂತೂ ಆಗಲೇಬೇಕು. ಹಾಗೇ ಆಗುತ್ತಿತ್ತು ಕೂಡ.
ಆದರೆ ಶಾಲೆಯ ಮಕ್ಕಳ ಕಥೆ? ಆ ಮಕ್ಕಳು ಮಧ್ಯಾಹ್ನದಿಂದಲೇ ತಮ್ಮ ವೇಷಭೂಷಣಗಳನ್ನು ಹಾಕಿಕೊಂಡು ಕೂತಿದ್ದಾರೆ. ಒಬ್ಬಳಿಗೆ ನೃತ್ಯ, ಇನ್ನೊಬ್ಬನಿಗೆ ಛದ್ಮವೇಷ, ಮತ್ತೊಬ್ಬನಿಗೆ ನಾಟಕ ಹೀಗೆ ಇನ್ನೂ ಏನೇನೋ. ಇನ್ನು ಶಾಲಾವಾಷರ್ಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಲು ಊರವರೂ ಸಾಕಷ್ಟು ನೆರೆದಿದ್ದಾರೆ. ಮಕ್ಕಳ ತಂದೆ ತಾಯಂದಿರಿಗೂ ತಮ್ಮ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡುತ್ತಾ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಅವಸರ. ಶಾಲೆಯಲ್ಲಿ ವರ್ಷವಿಡೀ ಒಂದಲ್ಲಾ ಒಂದು ಚಟುವಟಿಕೆಗಳು ನಡೆಯುತ್ತಿದ್ದರೂ ಶಾಲಾ ವಾಷರ್ಿಕೋತ್ಸವ ಅನ್ನುವುದರ ಕಳೆಯೇ ಬೇರೆಯಲ್ಲವೇ! ಆದರೆ ಮಕ್ಕಳ ಉತ್ಸಾಹವು ಸಂಜೆ ಏಳಾಗುವಷ್ಟರಲ್ಲೇ ಸೋರಿಹೋಗಿದೆ. ತಮ್ಮ ಆಕರ್ಷಕ ವೇಷಭೂಷಣಗಳನ್ನು ಹಾಕಿಕೊಂಡು ಅಷ್ಟು ಹೊತ್ತಿನಿಂದ ಉತ್ಸಾಹದಿಂದ ಓಡಾಡುತ್ತಿದ್ದ ಮಕ್ಕಳು ಒಂದು ಮಟ್ಟಿಗೆ ಸುಸ್ತಾಗಿದ್ದಾರೆ. ಮೈಯೆಲ್ಲಾ ಬೆವತು ಮಿರುಗುವ ಆ ಭಾರದ ಬಟ್ಟೆಗಳನ್ನು ಯಾವಾಗ ಕಿತ್ತೆಸೆಯಲಿಲ್ಲ ಎಂಬಂತಾಗಿದೆ. ಇನ್ನು ಕೆಲವು ಮಕ್ಕಳು ಕೂತಲ್ಲೇ ತೂಕಡಿಸುತ್ತಿದ್ದಾರೆ. ಅವರನ್ನು ಮತ್ತೆ ಮತ್ತೆ ಎಬ್ಬಿಸುತ್ತಾ ಬಿಸ್ಕತ್ತನ್ನೋ, ಬಾಳೆಹಣ್ಣನ್ನೋ ತಿನ್ನಿಸುತ್ತಾ ಅವರ ಉತ್ಸಾಹವನ್ನು ಜೀವಂತವಾಗಿರಿಸುವ ಪ್ರಯಾಸದ ಉತ್ಸಾಹ ಹೆತ್ತವರದ್ದು.
ಹೀಗೆ ವೇದಿಕೆಯ ಹೊರತಾಗಿ ಇಷ್ಟೆಲ್ಲಾ ಚಟುವಟಿಕೆಗಳು ನಡೆಯುತ್ತಿದ್ದರೂ, ವೇದಿಕೆಯ ಮುಂಭಾಗದಲ್ಲಿ ಹಾಸಿದ್ದ ಟಪರ್ಾಲಿನ ಮೇಲೆಯೇ ಕೆಲ ಮಕ್ಕಳು ಅಮ್ಮಂದಿರ ಮಡಿಲಿನಲ್ಲಿ ತೂಕಡಿಸುತ್ತಿದ್ದರೂ ಈ ಗಣ್ಯ ಮಹಾಶಯರು ಮಾತ್ರ “ಇನ್ನೊಂದರೆಡು ಮಾತು…'' ಎನ್ನುತ್ತಾ ಮಾತನಾಡುತ್ತಲೇ ಇದ್ದಾರೆ. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನಷ್ಟೇ ನೋಡಲು ಆಸಕ್ತಿಯಿಂದ ಬರುವ ಮತ್ತು ಅದರ ಮುಂಚೆ ಬರುವ ಸಭಾ ಕಾರ್ಯಕ್ರಮವನ್ನು ಕಾಟಾಚಾರಕ್ಕೆಂಬಂತೆ ನೋಡಲು ಬಂದಿರುವ ಊರವರೂ ಕೂಡ ಕುಳಿತಲ್ಲೇ ಗೊಣಗುತ್ತಿದ್ದಾರೆ. ಇನ್ನು ಕೆಲವರು ಈ ಗಣ್ಯರ ಮುಗಿಯದ ಭಾಷಣವನ್ನು ಕೇಳಿ ಕಿವಿ ತೂತಾಗಿ, ಕುಳಿತು ಬೇಜಾರೂ ಆಗಿ ಬೀಡಿ ಸೇದಲೋ ಅಥವಾ ಇನ್ನೇನೋ ಬಾಕಿಯಿರುವ ಕೆಲಸವನ್ನು ಮಾಡಲೋ ಹೊರನಡೆಯುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲದ ಮಕ್ಕಳ ತಾಯಂದಿರು ತಮ್ಮ ಪುಟ್ಟ ಗುಂಪುಗಳೊಂದಿಗೆ ಐಸ್ ಕ್ರೀಂ ಸ್ಟಾಲುಗಳ ಮುಂದೆ ನಿಂತುಕೊಂಡು ಐಸ್ ಕ್ರೀಂ ಸವಿಯುತ್ತಾ ತಮ್ಮದೇ ಲೋಕದಲ್ಲಿ ತೇಲಾಡುತ್ತಿದ್ದಾರೆ. ಇಷ್ಟೆಲ್ಲಾ ತನ್ನ ಕಣ್ಣೆದುರಿಗೇ ಆಗುತ್ತಿದ್ದರೂ ಆತ ಇನ್ನೂ ಮಾತನಾಡುತ್ತಲೇ ಇದ್ದಾನೆ. “ಇನ್ನೊಂದೆರಡು ಮಾತು…'' ಎನ್ನುತ್ತಲೇ ಇದ್ದಾನೆ.
ಭಾಷಣ ಎಂಬುದು ಶುದ್ಧ ಗೊಣಗಾಟವಾಗಿ ಹೋಗುವುದು ಇಂಥದ್ದೇ ಸಂದರ್ಭಗಳಲ್ಲಿ. ಭಾಷಣಕಾರನಿಗೆ ತನ್ನೆದುರಿಗಿರುವ ಜನಸಮೂಹ, ಸಂದರ್ಭ, ಸಮಯದ ಪರಿವೆ, ಮಂಡಿಸಬೇಕಾದ ವಿಚಾರಗಳ ಅವಶ್ಯಕತೆ/ಪ್ರಸ್ತುತತೆ ಇತ್ಯಾದಿಗಳ ಬಗ್ಗೆ ಸಾಮಾನ್ಯಜ್ಞಾನವೂ ಇಲ್ಲದೇ ಹೋದಾಗ ಇಂಥಾ ಅವಾಂತರಗಳಾಗುವುದು ಸಹಜ. ವೇದಿಕೆಗೆ ಬಂದು ಮೈಕು ಹಿಡಿದಾಕ್ಷಣ ಜಗತ್ತನ್ನೇ ಮರೆತು ಮಾತನಾಡುತ್ತಾ ಹೋಗುವವರು ಇವರು. ಹಿಂದೆ ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಇತ್ಯಾದಿ ಸಂದರ್ಭಗಳಲ್ಲಿ ಧ್ವಜಾರೋಹಣ ನಡೆಸುವ ವ್ಯಕ್ತಿಯು ಸಂದಭರ್ೋಚಿತವಾಗಿ ಮಾತನಾಡುವ ಪರಿಪಾಠವು ಚಾಲ್ತಿಯಲ್ಲಿತ್ತು. ಆಗ ನಡೆಯುತ್ತಿದ್ದಿದ್ದೂ ಇಂಥದ್ದೇ ಸನ್ನಿವೇಶಗಳು. ಮೇಲೆ ಬಂದಿದ್ದ ಸೂರ್ಯನ ಸುಡುತಾಪದೊಂದಿಗೆ ಕೆಲಹೊತ್ತು ಸೆಣಸಾಡುತ್ತಾ ವಿದ್ಯಾಥರ್ಿಗಳಲ್ಲಿ ಒಬ್ಬಿಬ್ಬರಾದರೂ ಧರಾಶಾಯಿಯಾಗಿ ತರಗತಿಯ ಕೋಣೆಗಳಿಗೆ ಮರಳುವುದು ಸಾಮಾನ್ಯವಾಗಿತ್ತು. ಈ ಭಾಷಣದ ಕೊನೆಯಲ್ಲಿ ಸಿಗುವ ಒಂದು ಲಡ್ಡಿಗಾಗಿ ಕಾಲೂರಿ ನಿಲ್ಲುತ್ತಾ, ಕಷ್ಟದಿಂದ ಈ ಮಹಾಭಾಷಣಗಳನ್ನು ಅರಗಿಸಿಕೊಳ್ಳುತ್ತಾ ಶಾಲಾದಿನಗಳಲ್ಲಿ ನಿಂತ ದಿನಗಳು ನನಗಿನ್ನೂ ನೆನಪಿದೆ.
ಮಾತು ಎಂಬುದು ನಮ್ಮ ದೈನಂದಿನ ಜೀವನದಲ್ಲಿ ಇಷ್ಟರಮಟ್ಟಿಗೆ ಸೇರಿಹೋಗಿದ್ದರೂ `ಭಾಷಣ' ಎಂಬ ಮಾತಿನ ಗಂಭೀರ ಪ್ರಭೇದದ ವಿಷಯದಲ್ಲಿ ಮಾತ್ರ ಆಗಾಗ್ಗೆ ಇಂಥಾ ಅವಾಂತರಗಳಾಗುವುದು ವಿಪಯರ್ಾಸವೇ. ಇದು ಜನಸಾಮಾನ್ಯನಿಂದ ಹಿಡಿದು ಹಿರಿಯ ರಾಜಕಾರಣಿಗಳವರೆಗೂ ಅನ್ವಯಿಸುತ್ತದೆ. ತಮ್ಮ ಹಾಸ್ಯಲೇಖನಗಳಲ್ಲಿ ಪುಢಾರಿಗಳ ಭಾಷಣವನ್ನು ರಸವತ್ತಾಗಿ ವಿವರಿಸುತ್ತಾ ಓದುಗರಲ್ಲಿ ಕಚಗುಳಿಯನ್ನುಂಟುಮಾಡುತ್ತಿದ್ದ ಬೀಚಿಯವರ ಕೆಲ ನಗೆಬರಹಗಳು ನನಗೆ ನನ್ನ ಶಾಲಾದಿನಗಳಲ್ಲಿ ಫೇವರಿಟ್ ಆಗಿದ್ದವು. ಇನ್ನು ವಿದ್ಯಾಥರ್ಿಗಳಾಗಿದ್ದ ನಮಗೆ ಭಾಷಣ ಸ್ಪಧರ್ೆಗಳಲ್ಲಿ ಒತ್ತಾಯದಿಂದ ಹೆಸರನ್ನು ಹಾಕಿಸಿ ಕಾಟಾಚಾರಕ್ಕೆಂದು ಸ್ಪಧರ್ೆಯನ್ನು ಮಾಡಿಸುತ್ತಿದ್ದರೇ ಹೊರತು ಭಾಷಣ ಮಾಡುವ `ಕಲೆ'ಯನ್ನಂತೂ ಯಾರೂ ಹೇಳಿಕೊಡಲಿಲ್ಲ. ಭಾಷಣವನ್ನು ಒಂದು ಕಲೆಯಂತೆ ಅವರುಗಳೂ ನೋಡಿರಲಿಲ್ಲವೋ ಏನೋ. ಅಥವಾ ಒಂದೆರಡು ದೊಡ್ಡ ತೂಕದ ಶಬ್ದಗಳನ್ನು ಬಳಸುವುದರ ಹೊರತಾಗಿ ಭಾಷಣಕ್ಕೂ ಕಾಡುಹರಟೆಗೂ ವ್ಯತ್ಯಾಸವೇ ಇಲ್ಲವೆಂದು ಯೋಚಿಸಿದ್ದಿರಲೂಬಹುದು. ಅಂತೂ ಆಕರ್ಷಕವಾಗಿಯೂ ಭಾಷಣವನ್ನು ಮಾಡಬಹುದು ಎಂದು ನನ್ನಂಥವರಿಗೆ ಜ್ಞಾನೋದಯವಾದಾಗ ಚಿಗುರುಮೀಸೆಯು ಬಂದಾಗಿತ್ತು ಎಂಬುದು ನಂಬಲೇಬೇಕಾದ ಸತ್ಯ.
ಉತ್ತಮ ಭಾಷಣಕಾರ, ವಾಗ್ಮಿ ಇತ್ಯಾದಿ ಬಿರುದುಗಳು ಮಹಾಮಾತುಗಾರರಿಗಷ್ಟೇ ಸಿಗುವಂಥದ್ದು ಮತ್ತು ಹೀಗೆ ಮಾತನಾಡುವ ಕಲೆಯು ದೈವದತ್ತವಾಗಿಯೇ ಬರುವಂಥದ್ದು ಎಂಬ ತಪ್ಪುಕಲ್ಪನೆಯಲ್ಲೇ ಬೆಳೆದ ಮೂರ್ಖಶಿಖಾಮಣಿಗಳ ತಂಡವಾಗಿತ್ತು ನಮ್ಮದು. ನಾನಂತೂ ಎಂಜಿನಿಯರಿಂಗ್ ಓದುವ ಮೊದಲ ಎರಡು ವರ್ಷಗಳವರೆಗೂ ವೇದಿಕೆಗೆ ಬರಲಿದ್ದ ಎಲ್ಲಾ ಅವಕಾಶಗಳನ್ನೂ ತಪ್ಪಿಸಿಕೊಂಡು ತಲೆಮರೆಸಿಕೊಂಡು ಓಡಾಡುತ್ತಿದ್ದ ಭೂಪನಾಗಿದ್ದೆ. ಆಗ ನನಗೆ ಈ `ಸ್ಟೇಜ್ ಫಿಯರ್' ಎಂಬುದೊಂದು ಭಯಂಕರವಾದ ಭೂತದಂತೆ ಕಂಡಿತ್ತು. ನಂತರ ನಿಧಾನವಾಗಿ ಈ ಭಯವನ್ನು ತೊಡೆದುಹಾಕಿದ್ದು ಓದೆಂಬ ಸಂಜೀವಿನಿ. ಜಗತ್ತಿನ ಅತ್ಯದ್ಭುತ ಭಾಷಣಕಾರರೆಂದು ಕರೆಯಲ್ಪಡುವ ಹಲವರು ತಮ್ಮಲ್ಲಿದ್ದ ಭಯವನ್ನು ತೊಡೆದುಹಾಕಲು ಭಾಷಣಕ್ಕಾಗಿ ಮಾಡುತ್ತಿದ್ದ ತಯಾರಿಗಳು, ಬಾಡಿ ಲ್ಯಾಂಗ್ವೇಜ್ ಎಂದು ಕರೆಯಲಾಗುವ ಆಂಗಿಕ ಚಲನೆಯ ವೈಖರಿಗಳು, ಕ್ರಮೇಣ ಈ ತಯಾರಿಗಳು ಅಭ್ಯಾಸವಾಗಿ ಹೋಗುವ ಬಗೆ… ಇತ್ಯಾದಿ ಭಾಷಣ ಸಂಬಂಧಿ ಗುಟ್ಟುಗಳು ನನ್ನೊಳಗಿನ ಒಂದು ದೊಡ್ಡ ಭ್ರಮೆಯನ್ನು ತೊಡೆದುಹಾಕಿದ್ದವು. ಸಾಮಾನ್ಯನೊಬ್ಬನೂ ಕೂಡ ಅದ್ಭುತವಾಗಿ ಮಾತನಾಡುವ ಕಲೆಯನ್ನು ಸಿದ್ಧಿಸಿಕೊಳ್ಳಬಲ್ಲ ಎಂಬ ಹೊಸ ಸತ್ಯವೊಂದು ನನಗೆ ಎದುರಾಗಿತ್ತು.
ಇಂದಿರಾಗಾಂಧಿ, ಮೊರಾಜರ್ಿ ದೇಸಾಯಿಯವರ ಕಾಲದಲ್ಲಿ ಪ್ರಧಾನಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿದ್ದ, ಪ್ರಧಾನಮಂತ್ರಿ ಕಾಯರ್ಾಲಯದಲ್ಲಿ ಬರೋಬ್ಬರಿ ಎರಡು ದಶಕಗಳ ಕಾಲ ಈ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಎಚ್. ವೈ. ಶಾರದಾಪ್ರಸಾದ್ ರವರ ಮಾತುಗಳು ಈ ಸಂದರ್ಭದಲ್ಲಿ ನೆನಪಾಗುತ್ತವೆ. ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿಯವರು ಪತ್ರಿಕಾಗೋಷ್ಠಿಯೊಂದನ್ನು ಕರೆಯುವ ಮುನ್ನ ತಮ್ಮ ಕಾಯರ್ಾಲಯದ ಸಹೋದ್ಯೋಗಿಗಳನ್ನು ಪತ್ರಕರ್ತರಂತೆ ಎದುರಿಗೆ ಕುಳ್ಳಿರಿಸಿಕೊಂಡು ಅಣಕು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿದ್ದರಂತೆ. ಈ ಅಣಕು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರಿಂದ ಬರಬಹುದಿದ್ದ ಎಲ್ಲಾ ಪ್ರಶ್ನೆಗಳನ್ನೂ ಪಟ್ಟಿ ಮಾಡಿ, ಪ್ರಧಾನಮಂತ್ರಿ ಕಾಯರ್ಾಲಯದ ಸಹೋದ್ಯೋಗಿಗಳಿಂದ ಉತ್ತರಗಳನ್ನು ಸಿದ್ಧಪಡಿಸಿ, ಇಂದಿರಾಗಾಂಧಿಯವರು ಸ್ವತಃ ಉತ್ತರಿಸುತ್ತಿದ್ದರಂತೆ. ಮುಂಬರುವ ಪತ್ರಿಕಾಗೋಷ್ಠಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಅವರು ಮಾಡುತ್ತಿದ್ದ ರಿಹರ್ಸಲ್ ಇದಾಗಿತ್ತು. ಇಂದಿರಾಗಾಂಧಿಯವರಿಗೆ ತನ್ನ ಮಾತುಗಳ ಮೌಲ್ಯ, ತನ್ನ ಹುದ್ದೆಯ ಗಾಂಭೀರ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಳಿಸಿಕೊಳ್ಳಬೇಕಾಗಿದ್ದ ತನ್ನ ಇಮೇಜ್ ಇತ್ಯಾದಿಗಳು ಅದೆಷ್ಟು ಮುಖ್ಯವಾಗಿದ್ದವು ಎಂಬುದನ್ನು ಹೇಳಲು ಇದಕ್ಕಿಂತ ಉತ್ತಮ ಉದಾಹರಣೆಯು ಇನ್ನೊಂದು ಸಿಗಲಿಕ್ಕಿಲ್ಲ.
ಅಂದಹಾಗೆ ಇಂದಿರಾಗಾಂಧಿಯವರು ಮತ್ತೊಮ್ಮೆ ನೆನಪಾಗಿದ್ದು ಗಾಂಧಿ ಕುಟುಂಬದ ಕುಡಿಯಾದ ರಾಹುಲ್ ಗಾಂಧಿಯವರಿಂದ. ವೇದಿಕೆಗೆ ಬಂದರೂ ಯಾವತ್ತೂ ಹೆಚ್ಚಾಗಿ ಮುಖ್ಯಭೂಮಿಕೆಯಲ್ಲಿ ಮಾತನಾಡದ, ಸಂದರ್ಶನಾದಿಗಳಿಂದ ದೂರವೇ ಇದ್ದ ರಾಹುಲ್ ಗಾಂಧಿಯವರು 2014 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅನರ್ಾಬ್ ಗೋಸ್ವಾಮಿಯವರಿಗೆ ಸಂದರ್ಶನವೊಂದನ್ನು ಕೊಟ್ಟು ನಗೆಪಾಟಲಿಗೀಡಾಗಿದ್ದರು. ಆ ಅವಧಿಯಲ್ಲಿದ್ದ “ಮೋದಿ ಅಲೆ'' ಅನ್ನುವಂಥದ್ದು ಭಾರತೀಯ ಜನತಾ ಪಾಟರ್ಿಯನ್ನು ಗೆಲ್ಲಿಸುವಲ್ಲಿ ಅದೆಷ್ಟರ ಮಟ್ಟಿಗೆ ಕೆಲಸ ಮಾಡಿತೋ, ಆ ಗೆಲುವಿನ ಅಷ್ಟೇ ಮಟ್ಟಿನ ಕ್ರೆಡಿಟ್ ರಾಹುಲ್ ಗಾಂಧಿಯವರ ಕಳಪೆ ಮಾತುಗಾರಿಕೆಗೂ ಕೊಡಬೇಕಾದದ್ದೇ. ಮೊದಲೇ ಕೈಗೊಂದು ಕಾಲಿಗೊಂದು ಎಂಬಂತೆ ಹಗರಣಗಳನ್ನು ಮಾಡಿ ಕೈಸುಟ್ಟುಕೊಂಡಿದ್ದ `ಕೈ' ಪಕ್ಷವು ತನ್ನ ಯುವರಾಜನ ತೂಕವೇ ಇಲ್ಲದ ಮಾತುಗಳಿಂದ ಮತ್ತಷ್ಟು ನೆಲಕಚ್ಚಿದ್ದಂತೂ ಹೌದು. ಅಚ್ಚರಿಯ ಮತ್ತು ವಿಪಯರ್ಾಸದ ವಿಷಯವೆಂದರೆ ಅವರಲ್ಲಿ ಇಂದಿಗೂ ಅಂಥಾ ಮಹಾಬದಲಾವಣೆಗಳೇನೂ ಕಾಣುತ್ತಿಲ್ಲ. ಇಷ್ಟು ವರ್ಷಗಳ ತಮ್ಮ ರಾಜಕೀಯ ಅನುಭವ, ಪಕ್ಷದಲ್ಲಿರುವ ಮಹಾಮೇಧಾವಿಗಳ ಸಾಂಗತ್ಯ, ಕಲಿಕೆಗಳ್ಯಾವುದೂ ಅವರನ್ನು ದಡ ಸೇರಿಸಿದಂತಿಲ್ಲ. ಸದ್ಯದ ಉತ್ತರಪ್ರದೇಶದ ಚುನಾವಣಾ ರ್ಯಾಲಿಗಳಲ್ಲೂ ಐದು ವರ್ಷಗಳ ಹಿಂದೆಯಷ್ಟೇ ಮುನ್ನೆಲೆಗೆ ಬಂದ ಯುವ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ರವರೇ ಮಿಂಚುತ್ತಿದ್ದಾರೆಯೇ ಹೊರತು ಅವರ ಮೈತ್ರಿಕೂಟದ ನಾಯಕರಾಗಿರುವ ರಾಹುಲ್ ಗಾಂಧಿಯವರಲ್ಲ.
ಇನ್ನು ತಯಾರಿಯ ವಿಚಾರಕ್ಕೆ ಬಂದರೆ ಇಂದಿರಾಗಾಂಧಿಯವರಂತೆಯೇ ಹೆಸರಿಸಬಹುದಾದ ಮತ್ತೊಂದು ಹೆಸರೆಂದರೆ ಅಡಾಲ್ಫ್ ಹಿಟ್ಲರ್. ಹಿಟ್ಲರ್ ವೇದಿಕೆಗೇರಿ ಮಾತನಾಡುತ್ತಿದ್ದನೆಂದರೆ ಕೇಳುಗರು ರೋಮಾಂಚಿತರಾಗುತ್ತಿದ್ದರು ಎಂಬುದನ್ನು ಇತಿಹಾಸವೇ ತನ್ನ ಪುಟಗಳಲ್ಲಿ ದಾಖಲಿಸಿದೆ. ಇಂತಿಪ್ಪ ಹಿಟ್ಲರ್ ತನ್ನ ಕೋಣೆಯಲ್ಲಿ ಗಂಟೆಗಟ್ಟಲೆ ಭಾಷಣಗಳನ್ನು ಅಭ್ಯಾಸ ಮಾಡುತ್ತಿದ್ದ. ಹಿಟ್ಲರ್ ತನ್ನ ಕೋಣೆಯಲ್ಲಿ ತಲೆ, ಕೈಗಳನ್ನಾಡಿಸುತ್ತಾ ಭಾವಾವೇಶದಿಂದ ಭಾಷಣವನ್ನು ಮಾಡುತ್ತಿದ್ದರೆ ಸವರ್ಾಧಿಕಾರಿಯ ಛಾಯಾಗ್ರಾಹಕನಾಗಿದ್ದ ಹೆನ್ರಿಕ್ ಹಾಫ್ಮನ್ ಆ ಕ್ಷಣಗಳನ್ನು ಛಾಯಾಚಿತ್ರಗಳಾಗಿ ಸೆರೆಹಿಡಿಯಬೇಕಿತ್ತು. ನಂತರ ಈತ ತೆಗೆದ ಛಾಯಾಚಿತ್ರಗಳನ್ನು ಒಂದೊಂದಾಗಿ ಪರೀಕ್ಷಿಸುತ್ತಿದ್ದ ಹಿಟ್ಲರ್ ಯಾವ ಭಂಗಿಯು ತನಗೆ ಹೊಂದುತ್ತಿದೆ, ಯಾವ ಮುಖಚಯರ್ೆಗಳು ನೋಡಲು ಲಾಯಕ್ಕಾಗಿವೆ ಎಂಬಂತೆ ಫೋಟೋಗಳನ್ನು ಆರಿಸಿಕೊಂಡು ಅವಷ್ಟನ್ನೇ ತನ್ನ ಭಾಷಣಗಳಲ್ಲಿ ಬರುವಂತೆ ಮಾಡಿ ವೇದಿಕೆಯಲ್ಲಿ ಪ್ರಸ್ತುತಪಡಿಸುತ್ತಿದ್ದ. ಹಲವು ವರ್ಷಗಳ ಕಾಲ ರಹಸ್ಯವಾಗಿದ್ದ ಈ ಛಾಯಾಚಿತ್ರಗಳು ಹಿಟ್ಲರನ ಸಾವಿನ ನಂತರವೇ ಬೆಳಕಿಗೆ ಬಂದಿದ್ದವು. ಜಗತ್ತು ಮತ್ತೊಮ್ಮೆ ಅಚ್ಚರಿಯಲ್ಲಿತ್ತು. ಏನಿಲ್ಲವೆಂದರೂ ಸಾರ್ವಜನಿಕವಾಗಿ ತನ್ನನ್ನು ತಾನು ಪ್ರಸ್ತುತಪಡಿಸಿಕೊಳ್ಳುವ ವಿಚಾರದಲ್ಲಿ ಹಿಟ್ಲರನಿಗಿದ್ದ ಬದ್ಧತೆಯನ್ನು ಶ್ಲಾಘಿಸದೇ ವಿಧಿಯಿಲ್ಲ.
ಅಸಲಿಗೆ ಭಾಷಣಗಳ ವಿಚಾರಕ್ಕೆ ಬಂದರೆ ನಿಜಕ್ಕೂ ಇಂಥಾ ತಯಾರಿಗಳು ಬೇಕಾಗುತ್ತವೆ. ಉತ್ತಮ ವಾಗ್ಮಿಗಳೂ ಕೂಡ ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಪಟ್ಟು ತಮ್ಮ ನೈಪುಣ್ಯತೆಗೆ ಹೊಸ ಹೊಳಪನ್ನು ತಂದಿದ್ದಾರೆ ಮತ್ತು ತರುತ್ತಿದ್ದಾರೆ ಎಂಬುದು ಗುಟ್ಟಿನ ವಿಷಯವೇನೂ ಅಲ್ಲ. ಅಮೇರಿಕಾದಲ್ಲಿ ಅಧ್ಯಕ್ಷರ ಮಾತುಗಳಿಗೆ, ಹಾವಭಾವಗಳಿಗೆ, ಆಂಗಿಕ ಚಲನೆಗಳಿಗೆ ಬಹಳ ಮಹತ್ವವನ್ನು ಕೊಡಲಾಗುತ್ತದೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣಾ ತಯಾರಿಯ ಸಮಯದಲ್ಲಿ ನಡೆಸಲಾಗುವ ಚಚರ್ೆಗಳಲ್ಲಿ ತಮ್ಮ ದಿರಿಸಿನಿಂದ ಹಿಡಿದು, ಕುಚರ್ಿಯಲ್ಲಿ ಕುಳಿತುಕೊಳ್ಳುವ ಭಂಗಿ, ಹಾವಭಾವಗಳು ಇತ್ಯಾದಿಗಳ ಬಗ್ಗೆ ಬಿಲ್ ಕ್ಲಿಂಟನ್ ರವರ ಕಾಲದಲ್ಲೇ ಬಿರುಸಿನ ತಯಾರಿಗಳನ್ನು, ರಿಹರ್ಸಲ್ ಗಳನ್ನು, ಅಣಕು ಸೆಟ್ ಗಳನ್ನು ಸಿದ್ಧಪಡಿಸಿ ಮುಂದಿನ ಅಧ್ಯಕ್ಷರ ಇಮೇಜ್ ಅನ್ನು ಸಾರ್ವಜನಿಕ ವಲಯದಲ್ಲಿ ರೂಪಿಸಲಾಗುತ್ತಿತ್ತು. ಇನ್ನು ಅಬ್ರಹಾಂ ಲಿಂಕನ್ ಮತ್ತು ಮಾಟರ್ಿನ್ ಲೂಥರ್ ಕಿಂಗ್ ರಂತೆಯೇ ಅತ್ಯುತ್ತಮ ಭಾಷಣಕಾರರೆಂದು ಹೆಸರು ಪಡೆದವರಲ್ಲಿ ಬರಾಕ್ ಒಬಾಮಾ ಕೂಡ ಒಬ್ಬರು. ತಮ್ಮ ನಿಲುವು, ಮಾತುಗಳ ಲಯ, ವಿಚಾರಗಳನ್ನು ಮಂಡಿಸುವ ಬಗೆ, ಶಬ್ದಗಳ ಬಳಕೆ, ಧ್ವನಿಯ ಏರಿಳಿತಗಳು, ಆಂಗಿಕ ಚಲನೆ, ಮಾತುಗಳ ನಡುವೆ ನೀಡುವ ಪುಟ್ಟ ವಿರಾಮಗಳು, ಭಾಷಣಕಾರನಾಗಿ ಸಭಿಕರ ಜೊತೆ ಅವರು ಸೃಷ್ಟಿಸುವ ಅದ್ಭುತ ಸಂವಹನ… ಹೀಗೆ ಎಲ್ಲಾ ವಿಚಾರಗಳಲ್ಲೂ ಒಬಾಮಾರಿಗಿರುವ ನೈಪುಣ್ಯತೆಯನ್ನು ಹಾಡಿ ಹೊಗಳುವವರಿದ್ದಾರೆ. ಇಷ್ಟೇ ಖ್ಯಾತಿಯನ್ನು ಪಡೆದಿರುವ ಮತ್ತೋರ್ವ ಸಮಕಾಲೀನ ರಾಜಕಾರಣಿಯೆಂದರೆ ರಷ್ಯಾದ ಅಧ್ಯಕ್ಷ್ಯ ವ್ಲಾದಿಮಿರ್ ಪುತಿನ್. ಪುತಿನ್ ಸೇರಿದಂತೆ ವಿಶ್ವದ ಹಲವು ನಾಯಕರ ಆಂಗಿಕ ಚಲನೆಗಳನ್ನು ಗಂಭೀರವಾಗಿ ಅಭ್ಯಸಿಸುತ್ತಿದ್ದ ಪೆಂಟಗನ್ ಸಂಶೋಧನಾ ತಂಡವೊಂದರ ಬಗ್ಗೆ ಟೆಲಿಗ್ರಾಫ್ ತನ್ನ ವರದಿಯೊಂದರಲ್ಲೂ ಬೆಳಕು ಚೆಲ್ಲಿತ್ತು.
ಚೆನ್ನಾಗಿ ಮಾತನಾಡಲು ಬಲ್ಲ ರಾಜಕಾರಣಿಯು ತನ್ನ ಕಾರ್ಯವೈಖರಿಯಲ್ಲೂ ಅಷ್ಟೇ ಮುತ್ಸದ್ದಿತನವನ್ನೂ ಪ್ರದಶರ್ಿಸಬಲ್ಲ ಎಂಬುದಕ್ಕೇನೂ ಖಾತ್ರಿಯಿಲ್ಲದಿದ್ದರೂ ಇತರ ಎಲ್ಲಾ ವಿಷಯಗಳಂತೆ ಮಾತಿನ ವಿಚಾರದಲ್ಲೂ ಅಮೇರಿಕಾದ ಬೆಳವಣಿಗೆಯನ್ನು ನಾವುಗಳು ಪರೋಕ್ಷವಾಗಿ ಒಪ್ಪಿಕೊಂಡಂತಿದೆ. ನಮ್ಮಲ್ಲಿ ಮೋದಿಯವರ ವಾಗ್ಝರಿಯ ಕಮಾಲ್ ಎಷ್ಟು ಖ್ಯಾತಿಯನ್ನು ಗಳಿಸಿತೋ ಅಷ್ಟೇ ಬಾರಿ ಮನ್ ಮೋಹನ್ ಸಿಂಗ್ ರನ್ನು ಎಳೆದು ತಂದು ಅವರನ್ನು ವ್ಯಂಗ್ಯ ಮಾಡುವಂತೆ ಕೆಲ ಮಾಧ್ಯಮಗಳು ಬರೆದವು. ಮಾಜಿ ಪ್ರಧಾನಿ ವಾಜಪೇಯಿಯವರ ಮಾತುಗಾರಿಕೆಯನ್ನು ನೆನಪಿಸಿದ ಮಂದಿಗೆ ಅದೇ ಹುದ್ದೆಯಲ್ಲಿದ್ದ ಮತ್ತೊಬ್ಬ ಧೀಮಂತ ಮುತ್ಸದ್ದಿ, ಮೌನಿ ನರಸಿಂಹರಾವ್ `ಮಹಾಬೋರು' ಎಂಬಂತೆ ಕಂಡರು. ಆದರೆ ಭಾಷಣದ ಗಾಂಭೀರ್ಯದ ಬಗ್ಗೆ ಮಾತನಾಡುವುದಾದರೆ ಇಂದಿಗೂ ನಮ್ಮ ಜನಪ್ರತಿನಿಧಿಗಳು ಅಷ್ಟೊಂದು ತಲೆಕೆಡಿಸಿಕೊಂಡಿಲ್ಲವೆಂದೇ ಹೇಳಬೇಕು. ಒಬ್ಬರು ಪ್ರಧಾನಮಂತ್ರಿಗಳನ್ನು “ಸಾವಿನ ವ್ಯಾಪಾರಿ'' ಎಂದು ಜರಿದರೆ, ಪ್ರಧಾನಮಂತ್ರಿಗಳು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರ ಪತ್ನಿಯ ಬಗ್ಗೆ ಮಾತನಾಡುತ್ತಾ “ಐವತ್ತು ಕೋಟಿ ಮೌಲ್ಯದ ಗಲರ್್ ಫ್ರೆಂಡ್'' ಎಂದು ಕುಹಕವಾಡಿದರು. ತಮ್ಮ ಮಾತುಗಳು ಇತಿಹಾಸದ ದಾಖಲೆಗಳಲ್ಲಿ ಶಾಶ್ವತವಾಗಿ ಸೇರಿಹೋಗುತ್ತವೆಯೆಂಬ ಸಾಮಾನ್ಯಜ್ಞಾನವೂ ಇವರುಗಳಿಗೆ ಇದ್ದಂತಿಲ್ಲ ಎಂಬುದು ಮಾತ್ರ ವಿಪಯರ್ಾಸ.
ತಮ್ಮ ಮಾತುಗಳಲ್ಲಿದ್ದ ಶಿಸ್ತು ಮತ್ತು ನಿಖರತೆಯ ವಿಷಯದಲ್ಲಿ ಇಂದಿಗೂ ನನ್ನನ್ನು ಬಹುವಾಗಿ ಕಾಡುವವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ. “ಅಮ್ಮ'' ಹೆಸರಿನಲ್ಲಿ ಬಿಡುಗಡೆಯಾಗಿರುವ ಜಯಲಲಿತಾರ ಜೀವನಕಥನದಲ್ಲಿ ಮಾತಿನ ಮೇಲೆ ಅವರಿಗಿದ್ದ ಅದ್ಭುತವಾದ ಹಿಡಿತವನ್ನು ಬರೆಯುವ ಲೇಖಕಿ ವಾಸಂತಿಯವರು ತಮ್ಮ ಮೊದಲ ಭೇಟಿಯಲ್ಲೇ ಇಂದಿರಾಗಾಂಧಿಯವರು ಜಯಲಲಿತಾರ ಮಾತಿನ ಮೋಡಿಗೆ ಮರುಳಾಗಿ ಎ.ಐ.ಡಿ.ಎಂ.ಕೆಯೊಂದಿಗೆ ಸ್ನೇಹವನ್ನು ಕುದುರಿಸಲು ಬಹುತೇಕ ನಿರ್ಧರಿಸಿದ್ದನ್ನೂ, ಸಂಸತ್ತಿನಲ್ಲಿ ಜಯಲಲಿತಾರ ಚೊಚ್ಚಲ ಭಾಷಣವನ್ನು ಕೇಳಿ ಮಂತ್ರಮುಗ್ಧರಾದ ಹಿರಿಯ ಪತ್ರಕರ್ತ ಖುಷ್ವಂತ್ ಸಿಂಗ್ ಜಯಲಲಿತಾರನ್ನು ಹೊಗಳಿ ತಮ್ಮ ಲೇಖನದಲ್ಲಿ ಬರೆದಿದ್ದನ್ನೂ ದಾಖಲಿಸಿದ್ದಾರೆ. ತನ್ನ ರಾಜಕೀಯ ಗುರು ಎಂ.ಜಿ.ಆರ್ ರ ಅಭಯಹಸ್ತದ ಹೊರತಾಗಿಯೂ ಜಯಲಲಿತಾರವರು ಸಾರ್ವಜನಿಕ ವಲಯದಲ್ಲಿ ಸೃಷ್ಟಿಸಿಕೊಂಡ ತನ್ನ ವ್ಯಕ್ತಿತ್ವ, ಲಕ್ಷಗಟ್ಟಲೆ ಅಭಿಮಾನಿಗಳನ್ನು ಕರೆತಂದು ಕೂಡಿಸಬಲ್ಲ ತಾಕತ್ತಿದ್ದ ಅವರ ಭಾಷಣಗಳು, ಮಾತೃಭಾಷೆಯಷ್ಟೇ ಅದ್ಭುತವಾಗಿ ಅಂಗ್ಲಭಾಷೆಯಲ್ಲಿ ಅವರಿಗಿದ್ದ ಪ್ರಭುತ್ವ ಇತ್ಯಾದಿಗಳನ್ನು ಅವರ ಕಟ್ಟಾವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಅಷ್ಟು ಹರಿತ, ನಿಖರ ಮತ್ತು ಶಕ್ತಿಶಾಲಿಯಾಗಿದ್ದವು ಅವರ ಮಾತುಗಳು.
“ಭಾಷಣಕಾರರಲ್ಲಿ ಇರುವುದು ಎರಡೇ ವಿಧಗಳು: ಏನಾಗುತ್ತದೋ ಎಂಬ ಆತಂಕದಲ್ಲಿರುವವರು ಮತ್ತು ಸುಳ್ಳಾಡುವವರು'', ಎಂದಿದ್ದ ಮಾಕರ್್ ಟ್ವೈನ್. ನೀವು ಭಾಷಣಕಾರರಾಗಿದ್ದರೆ ಈ ಎರಡರಲ್ಲಿ ಯಾವ ಕೆಟಗರಿಯವರಾಗಿದ್ದರೂ ಸರಿಯೇ. ಲಾಲೂ ಪ್ರಸಾದರ ಹಾಸ್ಯ, ಶಾರೂಖ್ ಖಾನನ ಸಮಯಪ್ರಜ್ಞೆ, ಶಶಿ ತರೂರರ ಜ್ಞಾನ, ಮೋದಿಯವರ ಧೈರ್ಯ, ಜಯಲಲಿತಾರ ನಿಖರತೆ ಹೀಗೆ ಎಲ್ಲರ ಧನಾತ್ಮಕ ಅಂಶಗಳನ್ನೂ ತಂದಿರಿಸಿ, ಒಂದೊಂದು ಚಿಟಿಕೆಯನ್ನು ಹಾಕಿ ಭಾಷಣವನ್ನು ಸಿದ್ಧಪಡಿಸಿದ್ದೇ ಆದರೆ ನಿಮಿಷಕ್ಕೊಮ್ಮೆ “ಇನ್ನೊಂದೆರಡು ಮಾತು…'' ಎಂದು ಹೇಳುವ ಅವಶ್ಯಕತೆಯೇ ಎದುರಾಗುವುದಿಲ್ಲ. ವೇದಿಕೆಯಲ್ಲಿ ಮಾತನಾಡುವವನಿಗೆ ಭಾಷಣವು ಭೂಷಣವಾಗಬೇಕೇ ಹೊರತು ಭೀಷಣವಲ್ಲ. ಅಷ್ಟಕ್ಕೂ ಮಾತುಗಳು ತೂಕವೇ ಇಲ್ಲದೆ ಪೊಳ್ಳುಶಬ್ದಗಳಾಗಿ ಬಿದ್ದುಹೋಗುವುದಾದರೆ ಅವುಗಳು ಇದ್ದರೆಷ್ಟು, ಬಿಟ್ಟರೆಷ್ಟು?
************
ಸ್ಕೂಲ್ ಮಕ್ಕಳ ಯಾತನೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ (ಅಕ್ಷರದಲ್ಲಿ). ನೀವು ಹೇಳಿದ್ದು ನಿಜ ಪ್ರಸಾದ್.
Thank you Akhilesh sir…