ಭಾಷಣದ ಗಮ್ಮತ್ತು: ಅನಿತಾ ನರೇಶ್ ಮಂಚಿ


 ಭಾಷಣ ಎಂಬುದೊಂದು ಕಲೆ. ಕೆಲವರಿಗೆ ಭಾಷಣ ಮಾಡುವುದು ಎಂದರೆ ನೀರು ಕುಡಿದಂತೆ. ಮೈಕ್ ಕಂಡರೆ ಅದೇನೋ ಪ್ರೀತಿ. ಬಹು ಜನ್ಮದಾ ಅನುಬಂಧವೇನೋ ಎಂಬಂತೆ ಹಿಡಿದುಕೊಂಡದ್ದನ್ನು  ಬಿಡಲೇ ಒಲ್ಲರು. ಸಾಧಾರಣವಾಗಿ ರಾಜಕಾರಿಣಿಗಳಿಗೆ ಈ ರೋಗ ಇರುವುದು. ಯಾಕೆಂದರೆ ಅವರು ತಮ್ಮ ಕಾರ್ಯಗಳಿಂದ ಹೆಚ್ಚಾಗಿ ಮಾತಿನ ಬಲದಲ್ಲೇ ಮಂತ್ರಿಗಳಾಗುವಂತಹವರು. ಯಾವುದೇ ಮಾನದಂಡದ ಮುಲಾಜಿಗೂ ಸಿಕ್ಕದೇ ಪದವಿಯನ್ನಾಗಲೀ, ಪದಕಗಳನ್ನಾಗಲೀ,ಪ್ರಶಸ್ತಿಗಳನ್ನಾಗಲೀ ಮಾತಿನ ಬಲದಲ್ಲೇ ಪಡೆಯುವಂತಹವರು. ಅಂತವರು ಮಾತು ನಿಲ್ಲಿಸುವುದಾದರೂ ಹೇಗೆ ಅಲ್ಲವೇ? 
 ಇವರಷ್ಟೇ ಮೈಕ್ ಪ್ರೀತಿಸುವ ಇನ್ನೊಂದು ಪಂಗಡದ ಜನ ಯಾರೆಂದರೆ  ಕಾರ್ಯಕ್ರಮವನ್ನು ನಿರ್ವಹಣೆ ಮಾಡುವವರು.  ಮೊದಲಿಗೆ ಭಾಷಣ ಮಾಡಿದವರು ಅಂತೂ  ಮುಗಿಸಿದರಲ್ಲಾ ಎಂದು ಜನ ನೆಮ್ಮದಿಯ ನಿಟ್ಟುಸಿರು ಬಿಡುವಾಗ ಇವರು ಮೈಕ್ ಹಿಡಿದು ಆಗಷ್ಟೇ ಮುಗಿದ ಭಾಷಣದ ಶಬ್ಧ ಶಬ್ಧವನ್ನೂ ಪುನರುಚ್ಚರಿಸುತ್ತಾ ನಮ್ಮ ತಾಳ್ಮೆಯ ಪರೀಕ್ಷೆ ಮಾಡುತ್ತಾರೆ.ಅದಾದ ನಂತರ ಅವರಿಗೆ ತಿಳಿದಷ್ಟು ಅದರ ವಿಮರ್ಶೆಯನ್ನೂ ವಿಶ್ಲೇಷಣೆಯನ್ನೂ ಮಾಡುತ್ತಾ ನಮ್ಮನ್ನು ಅರ್ಧದಲ್ಲೇ ಏಳಿಸಿ ಮನೆಗೆ ಹೋಗುವಂತೆ ಮಾಡುವುದರಲ್ಲಿ ಸಫಲರಾಗುತ್ತಾರೆ.

ಇವರುಗಳಲ್ಲದೇ ಇನ್ನೂ ಒಂದು ತರದ ಮೈಕಾಸುರರು ಇದ್ದಾರೆ. ಇವರು ನೇರವಾಗಿ ಕಾರ್ಯಕ್ರಮಕ್ಕಾಗಲೀ ಕಾರ್ಯಕ್ರಮದ ವಿಷಯಕ್ಕಾಗಲೀ ಸಂಬಂಧ ಪಡದೆ ಕಾರ್ಯಕ್ರಮ ನಡೆಸುವವರಿಗೆ ಸಂಬಂಧಪಟ್ಟವರಾಗಿರುತ್ತಾರೆ. ಅಂದರೆ ಅವರ ಅಳಿಯನೋ, ಮಾವನೋ, ಅತ್ತಿಗೆಯೋ, ತಂಗಿಯೋ.. ಹೀಗೆ.. ಇವರ ಮಹದಾಶೆ ಎಂದರೆ  ಒಮ್ಮೆ ಮೈಕ್ ಹಿಡಿದು ಸ್ಟೇಜಿನ ಮೇಲೆ ಕಾಣಿಸಿಕೊಳ್ಳುವುದು. ಹಾಗಾಗಿ ಇವರಿಗೆ ಲಿಖಿತ ಪ್ರತಿಗಳನ್ನು ಓದುವ ಸ್ವಾಗತ ಭಾಷಣ ಮಾಡುವ ಕೆಲಸ ಹೆಚ್ಚಾಗಿ ಸಿಗುತ್ತದೆ. ಅದನ್ನು ಮೇಲೆ ಕೆಳಗೆ ನೋಡಿಕೊಂಡು ಅವರು ಪರಿಚಯ ಮಾಡುತ್ತಿರುವವರು ಯಾರು ಎಂದೇ ಗೊತ್ತಿಲ್ಲದೆ ಅಲ್ಲಿ  ಕುಳಿತಿರುವ ಬೇರೆ ಯಾರನ್ನೋ ತೋರಿಸುತ್ತಾ ಇನ್ಯಾರದ್ದೋ ಪರಿಚಯ ಮಾಡಿಯೇ ಬಿಡುತ್ತಾರೆ. ಇವರನ್ನಾದರೂ ಸಹಿಸಬಹುದು. 

ಇನ್ನೂ ಕೆಲವರಿರುತ್ತಾರೆ. ಅವರು ತಮ್ಮ ಕಿಸೆಯಿಂದಲೂ ತಮಗೆ ಗೊತ್ತಿರುವ ಅಣಿಮುತ್ತುಗಳನ್ನು ಆಗಾಗ ಸೇರಿಸುತ್ತಾ ತಮ್ಮ ಗೊತ್ತುಗಾರಿಕೆಯನ್ನು ಪ್ರದರ್ಶನಕ್ಕೆ ಇಟ್ಟಿರುತ್ತಾರೆ.

ನಾನು ಮೊನ್ನೆ ಮೊನ್ನೆಯಷ್ಟೇ ಇಂತಹದ್ದೇ ಒಂದು ಅದ್ಭುತ ಭಾಷಣವನ್ನು ಕೇಳಿ ನನ್ನ ಜನ್ಮ ಪಾವನ ಮಾಡಿಕೊಂಡೆ. ಬಹುಶಃ ಆ ಮನುಷ್ಯ ಮಾಡಿದ ಭಾಷಣವನ್ನು ಎಲ್ಲರೂ ಸರಿಯಾಗಿ ಕೇಳಿಸಿಕೊಂಡಿದ್ದರೆ ಇದು ಅವರ ಕೊನೆಯ ಭಾಷಣವಾದರೂ ಆಗಿದ್ದೀತು. ಈ ಭಾಷಣಕಾರರಿಗೆ ಸ್ವಾಗತ ಭಾಷಣ ಮಾಡಲು ಸಂಘಟಕರು ಅವಕಾಶ ಮಾಡಿಕೊಟ್ಟಿದ್ದು ನಮ್ಮೆಲ್ಲರಿಗೂ ಒಳ್ಳೆಯ ರಸದೌತಣ ಒದಗಿಸಿತ್ತು. ಇಲ್ಲದಿದ್ದರೆ ನೀರಸವಾಗಿದ್ದ ಆ ಧಾರ್ಮಿಕ ಭಾಷಣದ ಸಭೆಯಲ್ಲಿ ನಗೆ ರೇಖೆಗಳು ಕಾಣಿಸಿಕೊಳ್ಳಲು ಸಾಧ್ಯವೇ ಇರುತ್ತಿರಲಿಲ್ಲ. 

ಅದು ಶುರುವಾಗಿದ್ದು ಹೀಗೆ. ಒಬ್ಬರು  ಗುರುಗಳು ಮತ್ತು ಇನ್ನೊಬ್ಬರು ರಾಜಕಾರಿಣಿಗಳ ಪರಿಚಯವನ್ನು ಅವರು ಮಾಡಿಕೊಡಬೇಕಾಗಿತ್ತು. ಮೊದಲಿನ ಸಾಂಪ್ರದಾಯಿಕ ವಾಕ್ಯಗಳ ನಂತರ ಸ್ವಾಗತ ಭಾಷಣಕಾರರ ನಿಜವಾದ ಪ್ರತಿಭೆ ಬಯಲಿಗೆ ಬೀಳತೊಡಗಿತು, ಮುಂದಿನದನ್ನು ಅವರ ಮಾತುಗಳಲ್ಲೇ ಕೇಳಿ.

ಶ್ರೀ ಶ್ರೀ ಪರಮಪುಜ್ಯ ( ಪುಜ್ಯ ಎಂದರೆ ತುಳು ಭಾಷೆಯಲ್ಲಿ ಸೊನ್ನೆ ಎಂದರ್ಥ) ಸ್ವಾಮಿಗಳು ನಿಮಗೆ ಅಪರಿಚಿತರೇನಲ್ಲ. ಅವರು ನಮ್ಮ ಇಹಕ್ಕೆ ಮಾತ್ರವಲ್ಲ ಪರಕ್ಕೂ ನಮ್ಮ ಜೊತೆಯೇ ಇರಬೇಕಾದವರು. ( ಕೆಲವು ಕಡೆಯಿಂದ ಚಪ್ಪಾಳೆ) ಅಂತಹವರ ಪರಿಚಯ ಮಾಡಿಕೊಡಲು ಸಂತಸವೆನಿಸುತ್ತದೆ. ಅವರು ನಮ್ಮಂತಹವರ ಸೇವೆಗಾಗಿಯೇ ಹುಟ್ಟಿಬಂದವರು. ಅವರಿಗೆ ದೇವರು ನಮ್ಮ ಸೇವೆ ಮಾಡುವ ಅವಕಾಶವನ್ನು ಕೊಡಲಿ ಎಂದು ಮಹಾಮಹಿಮನಾದ ದೇವರಲ್ಲಿ ಬೇಡಿಕೊಳ್ಳುತ್ತೇನೆ.
ಜನರ ನಗುವಿನ ನಡುವೆ ಜೋರಾಗಿ ಚಪ್ಪಾಳೆ ಸದ್ದು ಮೊಳಗಿತು.
ಇದು ಸ್ವಾಗತಭಾಷಣಕಾರರ ಆತ್ಮ ಸ್ಥೈರ್ಯವನ್ನೂ ಉತ್ಸಾಹವನ್ನೂ ಹೆಚ್ಚಿಸಿತ್ತೇನೋ..

ಈಗ ರಾಜಕಾರಿಣಿಗಳ ಪರಿಚಯ. ಒಂದು ಕಾಲದಲ್ಲಿ ಅವರ  ಪಾರ್ಟಿಯ ಸರ್ಕಾರ ಇರುವಾಗ  ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿ ಕೆಲಸ ನಿರ್ವಹಿಸಿದ್ದವರು. 
ಅವರ ಪರಿಚಯ ನಮ್ಮ ಸ್ವಾಗತಕಾರರ ಬಾಯಿಯಲ್ಲಿ ಹೀಗಿತ್ತು.

ಸನ್ಮಾನ್ಯರಾದ ಮಂತ್ರಿಗಳು ನಮ್ಮ ಕರ್ನಾಟಕದವರು ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ. ತಾವು ಮಂತ್ರಿಗಳಾಗಿದ್ದಾಗ ನೆರೆ ಬಂದು ಹಲವು ಮನೆಗಳು ಕೊಚ್ಚಿ ಹೋಗಿದ್ದವು. ಜನಗಳು ಗತಿ ಇಲ್ಲದರಾಗಿದ್ದರು. ಆಗ ತಾವು ಗಂಜಿ ಕೇಂದ್ರ ತೆರೆದು ಜನರಿಗೆ ಅನುಕೂಲ ಮಾಡಿಕೊಟ್ಟರು. ಆ ಜನಗಳು ಈಗಲೂ ಅಲ್ಲೇ ಸಂತೋಷವಾಗಿ ಇದ್ದಾರೆ. ( ಮಂತ್ರಿಗಳು ಕುಳಿತ ಸೀಟಿನಿಂದ ಕೊಂಚ ಅತ್ತಿತ್ತ ಕದಲಿ ಅಸಹನೆ ವ್ಯಕ್ತಪಡಿಸಿದರು) ಇವರು ತುಂಬಾ ಸರಳ ಜನ.  ಈ ಕಾರ್ಯಕ್ರಮಕ್ಕೆ ನಮಗೆ ಬೇರೆಯೇ ವ್ಯಕ್ತಿಯನ್ನು ಕರೆಯಬೇಕೆಂದಿತ್ತು. ಮೊದಲಿಗೆ ಒಪ್ಪಿದ್ದ ಅವರು ಕೊನೆಯ ಕ್ಷಣದಲ್ಲಿ ಕೈ ಕೊಟ್ಟದ್ದರಿಂದ ಕೂಡಲೇ  ಇವರಲ್ಲಿ ಕೇಳಿಕೊಂಡೆವು. ಈಗ ಮಾಜಿ ಮಂತ್ರಿಗಳನ್ನು ಯಾರೂ ಕಾರ್ಯಕ್ರಮಕ್ಕೆ ಕರೆಯದ ಕಾರಣ ಕೂಡಲೇ ನಮ್ಮ ಹೇಳಿಕೆಗೆ ಮನ್ನಣೆ ಕೊಟ್ಟು ಒಪ್ಪಿಕೊಂಡರು. ( ಕಾರ್ಯಕ್ರಮದ ರೂವಾರಿಗಳ ಮುಖ ಪೆಚ್ಚಾಯಿತು. ಜೊತೆಗೆ ಮಾಜಿಗಳ ಮುಖವೂ..) ಇವರು ನಮ್ಮ ಊರಿಗೆ ಹೊಸಬರೇನಲ್ಲ. ಈ ಸಾರಿ ನಮ್ಮದೇ ಕ್ಷೇತ್ರದಿಂದ ಓಟಿಗೆ ನಿಂತು ಒಂದು ಲಕ್ಷಕ್ಕೂ ಅಧಿಕ ಮತದಿಂದ ಸೋಲನ್ನನುಭವಿಸಿದವರು.( ಮಂತ್ರಿಗಳು ಕುಳಿತಲ್ಲೇ ಕುತ್ತಿಗೆ ಹೊರಳಿಸಿ ಕಾರ್ಯಕ್ರಮದ ಸಂಘಟಕರನ್ನು ಹುಡುಕತೊಡಗಿದರು. ಸಂಘಟಕರ ಕಡೆಯಿಂದ ಒಬ್ಬ ಸ್ವಾಗತಭಾಷಣ ಮಾಡುವವರಿಗೆ ಏನೋ ಚೀಟಿ ತಂದು ಕೊಟ್ಟರು. ಅದನ್ನು ಓದಿದ ಅವರು ತಲೆಯಲ್ಲಾಡಿಸಿ ಒಪ್ಪಿಗೆ ಸೂಚಿಸಿ ಭಾಷಣ ಮುಂದುವರಿಸಿದರು) ಇಂತಹ ಮಂತ್ರಿಗಳು ನಮ್ಮ ಕಾರ್ಯಕ್ರಮಕ್ಕೆ ಬಂದದ್ದು ನಮಗೆ ಹೆಮ್ಮೆ. ಜೊತೆಗೆ ಇಂತಹವರಿಗೆ ಸ್ವಾಗತ ಕೋರುವ ಸೌಭಾಗ್ಯ ನನ್ನದಾಗಿದ್ದು ಕೂಡಾ ನನ್ನ ಪುಣ್ಯ. ಇವರಿಗೆ ಸಂಪತ್ತು, ಆಯುಷ್ಯ, ಆರೋಗ್ಯಗಳನ್ನು ಕೊಟ್ಟು ( ಪೇಲವಗೊಂಡಿದ್ದ ಮಂತ್ರಿಗಳ ಮುಖ ಸಾಧಾರಣ ಸ್ಥಿತಿಗೆ ಮರಳುವುದರಲ್ಲಿತ್ತು) ಆ ದಯಾಮಯನಾದ ಭಗವಂತನು ಇವರನ್ನು ಹುತಾತ್ಮರನ್ನಾಗಿಸಲಿ ಎಂದು ನಾನು ಮನದುಂಬಿ ಸರ್ವಶಕ್ತನಲ್ಲಿ ಬೇಡಿಕೊಳ್ಳುತ್ತೇನೆ. 
ಜನಗಳೆಲ್ಲಾ ಎದ್ದು ನಿಂತು  ಹೋ ಎಂದು ನಗುತ್ತಾ ಚಪ್ಪಾಳೆ ತಟ್ಟಿದರು. 
ಭಾಷಣ ಮಾಡುವವರ ರಟ್ಟೆ ಹಿಡಿದು ಯಾರೋ ಒಳಗೆ ಎಳೆದೊಯ್ದರು. ಮತ್ತೇನಾಯಿತೋ ಗೊತ್ತಿಲ್ಲ.. ಎ ಎ 🙂
-ಅನಿತಾ ನರೇಶ್ ಮಂಚಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಮಸ್ತ್….. ಸ್ವಾಗತಕಾ(ಕೋ)ರ…….

Akhilesh Chipli
Akhilesh Chipli
9 years ago

ತ್ರೀ ಈಡಿಯಟ್ಸ್ ನ "ಬಲತ್ಕಾರ್" ಭಾಷಣ ನೆನಪಾಯಿತು.

vijay kumble
vijay kumble
9 years ago

Nakku nakku six pack banthu… 🙂

Anitha Naresh Manchi
Anitha Naresh Manchi
9 years ago

Tnq 🙂

ಮಂಜುನಾಥ ಕೊಳ್ಳೇಗಾಲ

ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾಯಿತು.  ಡಾಕ್ಟರ ಬಳಿ ಹೋಗಿ ಬರುತ್ತೇನೆ, ಅವರಿನ್ನೂ ಹುತಾತ್ಮರಾಗಿಲ್ಲದಿದ್ದರೆ 🙂

ಆದರ್ಶ
ಆದರ್ಶ
9 years ago

ಮೇಡ್೦ ಓದುತ್ತ ಓದುತ್ತ, ಭಾಷಣಕಾರರ ನಾಟಕೀಯ ಭಾಷಣ ನೆನಪಿಸಿಕೊಳ್ಳುತ್ತ ನಕ್ಕರೆ, ನನ್ನ ಹೆ೦ಡತಿ ನನಗೆ ಹುಚ್ಚು ಹಿಡಿದಿದೆ ಅ೦ತ ತಿಳಿದುಕೊಳ್ಳುವುದೊ೦ದು ಬಾಕಿ, ಅ೦ತಹ ವಿಶಿಷ್ಟ ಕಲೆ ನಿಮ್ಮ ಲೇಖನ, ಬರವಣಿಗೆಯಲ್ಲಿದೆ. 

Anitha Naresh Manchi
Anitha Naresh Manchi
9 years ago

ಭಾಷಣದ ಗಮ್ಮತ್ತು ಅನುಭವಿಸಿದವರಿಗೇ ಗೊತ್ತು.. ಮಂಜುನಾಥ ಸರ್, ಆದರ್ಶ. ಅಮರ್ ದೀಪ್. ಅಖಿಲೇಶ್, ವಿಜಯ್ ಕುಂಬ್ಳೆ.. ಲೇಖನವನ್ನು ಮೆಚ್ಚಿಕೊಂಡದ್ದಕ್ಕಾಗಿ ಧನ್ಯವಾದಗಳು 🙂 

ashokvaladur
ashokvaladur
9 years ago

Akka…super.

ವಿಕ್ರಮಾದಿತ್ಯ ಮೋಟಗಿ
ವಿಕ್ರಮಾದಿತ್ಯ ಮೋಟಗಿ
8 years ago

ಅಯ್ಯಯ್ಯಪ್ಪಾ ಇಂಥಾ ಮಯ್ಕಾಸುರರು ನಮ್ಮ ಆರೋಗ್ಯದ ಗುಟ್ಟೆಂದರೆ ತಪ್ಪಲ್ಲ

9
0
Would love your thoughts, please comment.x
()
x