ಯುವ ಕವಿ ಮೆಹಬೂಬ ಪಾಷ ಎ.ಮಕಾನದಾರ ಕೊಪ್ಪಳದವರು.ಸಮಾಜಶಾಸ್ತ್ರದಲ್ಲಿ ಎಂ.ಎ ಮತ್ತು ಬಿ.ಎಡ್ ಶಿಕ್ಷಣದ ಬಳಿಕ ಅತಿಥಿ ಉಪನ್ಯಸಕರಾಗಿ ಸೇವಾ ಕಾರ್ಯ ಆರಂಭ. ಕವಿಯ ಬಗ್ಗೆ ನಾನು ಒಂದಷ್ಟು ವಿಚಾರ ಹೇಳಬೇಕನ್ನಿಸುತ್ತೆ, ಬದುಕಿಗೆ ತುಂಬ ಹತ್ತಿರದನೆಂಟು ಮೆಹಬೂಬ ಪಾಷರವರ ಚಿಂತನೆಗಳು ಆಳಕ್ಕೆ ಹೋದರೂ ಅಲ್ಲಿಯು ಒಂದು ಚಿಗುರು ಕಾಣುವಂಥದ್ದು. ಜಾತಿ, ನೀತಿ, ರೀತಿ, ರೀವಾಜುಗಳಿಂದ ಆಚೆಗೆ ಇವರ ಹೃದಯ ಚಿಂತಿಸುತ್ತದೆ. ಬದುಕು ಅನೇಕ ಘಟ್ಟಗಳಲ್ಲಿ ಅನೇಕ ಅನುಭವ ನೀಡಿ ಅದರಿಂದ ಕಲಿತ ಪಾಠವೇ ಜೀವನದ ಸಾರ್ಥಕದ ಮುನ್ನೋಟವಾಗಿರುತ್ತೆ ಇಂತಹ ಸೂಕ್ಷ್ಮ ಚಿಂತನೆಯ ಕವಿ ಮೆಹಬೂಬ ಪಾಷ ಕನ್ನಡದ ಸಾಹಿತ್ಯಲೋಕದಲ್ಲಿ ಈಗ ಪ್ರಾರಂಭದ ಹೆಜ್ಜೆ ಇಟ್ಟಿದ್ರು ಮುಂದೆ ಭವಿಷ್ಯದ ಸಾಹಿತ್ಯ ನಕ್ಷತ್ರದಂತೆ ಪ್ರಖ್ಯಾತಿ ಪ್ರಸಿದ್ಧಿ ಮೆಹಬೂಬ ಪಾಷರವರಿಗೆ ಉನ್ನತ ಸ್ಥಾನಮಾನ ದೊರಕಿಸಿ ಶ್ರೇಷ್ಠ ಸಾಹಿತಿಯೆಂದು ಗುರುತಿಸಲ್ಪಡುವ ಕಾಲ ಸನಿಹದಲ್ಲೆ ಇದೆ. ಒಂದೊಂದು ಕವನವೂ ಒಂದೊಂದು ಅನುಭವದಂತೆ ಓದುಗರಿಗೆ ಚಿಂತನ ಮಂಥನದ ಕಸರತ್ತಿಗೆ ಅಣಿ ಮಾಡಿ ಕೊಡುವಲ್ಲಿ ಕವಿ ತನ್ನ ಮೊದಲ ಕೃತಿಯಲ್ಲೆ ಅಪಾರ ಓದುಗರ ಸಂಖ್ಯೆಯನ್ನು ಹೊಂದಿರುವ ಯುವ ಕವಿ ಮೆಹಬೂಬ ಪಾಷರವರಿಗೆ ಆತ್ಮೀಯವಾಗಿ ಅಭಿನಂದನೆ ಸಲ್ಲಿಸಿ ಅವರ ಕೃಷಿ ಹೀಗೆ ಮುಂದೆ ಮುಂದೆ ಸಾಗಲಿ ಸಾಧನೆಯತ್ತ ನಿಮ್ಮ ಪಯಣ ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತೇನೆ.
ಕವಿ ಮೆಹಬೂಬ ಪಾಷನವರ ಒಂದೇ ಬಳ್ಳಿಯ ಹೂವುಗಳು ಕವನ ಸಂಕಲನದಲ್ಲಿ ತಾಯಿ ಮಕ್ಕಳ ಸಂಬಂಧವಿದೆ,ಸೋದರ ಸೋದರಿಯ ವಾತ್ಸಲ್ಯವಿದೆ, ಕರುಳ ಬಳ್ಳಿಯ ನಂಟು ತಮ್ಮ ಅನುಭವ, ತಮ್ಮದೆ ಮಾತಿನಲ್ಲಿ ಸೊಗಸಾಗಿ ಬರೆದಿದ್ದಿರಿ ಒಂದು ಶೀರ್ಷಿಕೆಯೊಂದಿಗೆ ಒಡಲಾಳದ ಅನುಭಂದ ನಿಜಕ್ಕೂ ಅರ್ಥ ಪೂರ್ಣ.
‘ನಿನಗೆ ಹುಣ್ಣಿಮೆಯ ಬೆಳದಿಂಗಳು
ತರುವ ಚಂದ್ರ
ನನಗೆ ರಮಜಾನ್ ತರುತ್ತಾನೆ
ನಿನ್ನ ಅಮ್ಮ ನಿನಗೆ ತೋರಿಸೋ ಚಂದ್ರ
ನನ್ನ ಅಮ್ಮಿಗೂ ಮಾತಾಡಿಸುತ್ತಾನೆ.
ಒಂದೇ ಬಳ್ಳಿ ಹೂವುಗಳು ನಾವು
ಇದ್ದರೆ ದಾಯಾದಿ ಕಲಹ ತೆಗೆದು
ಹೊಲೆದು ಬಿಡು’
‘ಒಂದೇ ಬಳ್ಳಿಯ ಹೂವುಗಳು’ ಕವನದಲ್ಲಿ ಎರಡು ಹೃದಯಗಳ ಬೆಸುಗೆ ಇದೆ ಎರಡು ಧರ್ಮಗಳಸಾಮ್ಯತೆ ಇದೆ ಎರಡು ಸಂಸ್ಕøತಿಯಮಿಲನ ಕಾಣುತ್ತಿದೆ. ಎಲ್ಲರೂ ಹೊಂದುಕೊಂಡು ಹೋದದ್ದೆಯಾದರೆ ಈ ಜೀವನ ಹಬ್ಬಗಳಂತೆ ಸಂಭ್ರಮಿಬಹುದು. ಬೆಳಕು ಇಲ್ಲಿ ಪ್ರಧಾನವಾಗಿದೆ ಬೆಳಕು ಎಂದರೇ ಸಂತಸ, ಸಮಾಧಾನ, ನೆಮ್ಮದಿ ಇವೆಲ್ಲ ಬದುಕಿನ ಅವಿಭಾಜ್ಯ ಅಂಗಗಳು. ಇಲ್ಲಿ ಎಲ್ಲರೂ ಆಪ್ತರೆ ಬಂಧುಗಳು ಇಲ್ಲಿ ಯಾರು ನಮಗೆ ದಾಯಾದಿಗಳಿಲ್ಲ ಒಂದು ವೇಳೆ ಇದ್ದರೆ ಅದು ನಮ್ಮ ನಮ್ಮ ಹೃದಯದಲ್ಲಿರುವ ಕಲ್ಮಶ ತೆಗೆದು ಬಿಡುವ ಹಸನಾದ ಹೊಸ ಜೀವನ ರೂಪಿಸೋಣ ಕವಿಯ ಚಿಂತನೆ ಓದುಗರಿಗೆ ಇಲ್ಲಿ ಅರ್ಥ ಪೂರ್ಣ ಎಂದು ತಿಳಿಯುವುದು.
‘ಸಾಲಿ ಕಲೀಲಾರ್ದಾಕಿ ಅವ್ವ
ನಮ್ಮ ಸಾಲಿಗೆ ಕಳಿಸಿ
ಕಣ್ತುಂಬಕನಸ ಕಾಣೋದು ಕಲಿತಿದ್ಲು
ಟೀಚರ್‍ಗಿಂತ ಜಾಸ್ತಿ ಅವ್ವನೆ
ನಮ್ ಮನಸ ಅರಿತಿದ್ಲು
ತನ್ನ ನೋವ ಮರೆಯೋಕೆ
ನಮ್ಮ ಮೊಗದಲ್ಲಿ ನಗು ತರ್ತಿದ್ಲು’
ತಾಯಿ ಅನಕ್ಷರಸ್ಥೆಯಾದರೂ ಮಗನಿಗೆ ವಿದ್ಯಾವಂತನಾಗಿಸಿದಳು ಮುಂದಿನ ಭವಿಷ್ಯ ರೂಪಿಸಿಕೊಳ್ಳುವುದು ಕಲಿಸಿದ್ಲು ಪಾಠ ಹೇಳಿ ಕೊಡುವ ಟೀಚರ್‍ಗಿಂತ ಹೆಚ್ಚು ಲೋಕ ಜ್ಞಾನ ಹೊಂದಿದ್ದಳು. ಏನೇ ಕಷ್ಟ ಬಂದ್ರು ಅದನ್ನು ಎದುರಿಸೊದನ್ನ ಕಲಿಸಿದ್ದಳು. ಅವ್ವನೇ ನನ್ನ ಜಗತ್ತು ಮುಕ್ಕೋಟಿ ದೇವತೆಗಳು ಮಿಗಿಲು ಅವಳು ತಾಯಿ ತನ್ನ ಬಾಳ ಸವೆದು ಮಕ್ಕಳಿಗೆ ಬದುಕಿಗೆ ಮಾರ್ಗದರ್ಶಿಯಾಗುತ್ತಾಳೆ. ದೈವ ಸ್ವರೂಪಿ ನನ್ನವ್ವ ಎಂದು ಕವಿ ತಮ್ಮ ‘ಅವ್ವ ‘ ಕವನದ ಮುಖಾಂತರ ತನ್ನ ದೇವತೆಗೆ ಭಕ್ತಿ ಅರ್ಪಿಸಿದ್ದಾರೆ.
‘ಗಂಗೆಗೂ ಅಸಹ್ಯವಾಗಿದೆ
ನನ್ನ ಮೈಗಂಟಿದ ಪಾಪದ
ಜೋಳಿಗೆ ನೋಡಿ
ಭಯದಿಂದ ನನ್ನನೇ
ನೋಡುತ್ತಿದ್ದಾಳೆ
ಎಲ್ಲಿ ನಾನು ಆ ಕೊಳೆಯನ್ನು
ಅವಳಿಗೊಪ್ಪಿಸುವೆ ಎಂದು’
ಗಂಗೆ ಪಾವನ ನದಿಯಾದರೂ ಮನುಷ್ಯ ಗಂಗೆಯ ಅಮೃತದಂತಿರುವ ಜಲವನ್ನು ಸಹ ಮಲಿನ ಮಾಡಹೊರಟ್ಟಿದ್ದಾನೆ. ಪ್ರಕೃತಿಯೊಂದಿಗೆ ತಾನು ಕಲುಶಿತವಾಗಿ ಪಾಪ ಪ್ರಜ್ಞೆಯಲ್ಲಿ ಮುಳುಗಿದ್ದಾನೆ. ಶಿಷ್ಟಾಚಾರಕ್ಕೆ, ಬದಲಾಗಿ ಭ್ರಷ್ಠಾಚಾರ, ವ್ಯಭಿಚಾರ ಮಾಡಹೊರಟಿದ್ದಾನೆ. ಗಂಗೆ ಇದನ್ನೆಲ್ಲ ನೋಡಿ ಸಹಿಸಿ ಕೊಂಡಿದ್ದಾಳೆ. ಮನುಷ್ಯ ಪ್ರಾಯ್ಶಚ್ಚಿತ್ತ ಮಾಡುವನೆಂದು ಪಾಪದಿಂದ ಮುಕ್ತಿ ಕೊಡಲು ಗಂಗೆ ಇವೆಲ್ಲವು ಸಹಿಸುತ್ತಿದ್ದಾಳೆ. ಮನುಷ್ಯ ಮಾತ್ರ ಪಾಪಗಳ ಸಂತೆಯಲ್ಲಿ ಪಾಪದ ಮೂಟೆಗಳನ್ನು ಪವಿತ್ರ ಗಂಗೆಗೆ ಅರ್ಪಿಸುತ್ತಲೆ ಇದ್ದಾನೆ. ಕವಿ ಭಾರತ ಸಂಸ್ಕøತಿಯ ಬಗ್ಗೆ ಇರುವ ಗೌರವಗಳನ್ನು ಪೂಜಿಸುತ್ತ ನೊಂದುಕೊಂಡು ಈ ಚಿಂತನೆಯ ಉಲ್ಲೇಖವನ್ನು ಪಾಪದ ಮೂಟೆ
ಪದ್ಯದಲ್ಲಿ ಮಾಡಿದ್ದಾರೆ.
‘ನಿಜ ಮಾನವ
ಬದುಕು ಸಾವು ಚಿಂತಿಸದೆ
ದಾರಿಯುದ್ದಕ್ಕೂ ಸತ್ಕಾರ್ಯ ಗೈದೊಡೆ
ಅವನಲ್ಲಿ ನಿಜಜೀವ ಉಂಟು
ಉಳಿದಂತೆ?
ಪ್ರಾಣಿಗಳು ಉಸಿರಾಡುತ್ತಿವೆ’
ಬದುಕು ಹೇಗಾದರೂ ಬದುಕುವುದಲ್ಲ ಬದುಕಿಗೊಂದು ಅರ್ಥವಿದೆ ಒಂದು ಸಾರ್ಥಕತೆ ಇದೆ. ಕೇವಲ ಹೆಸರಿಗಾಗಿ ಬದುಕುವುದು ಸರಿಯಲ್ಲ ಕೇವಲ ಉಸಿರಾಗಿಯೇ ಇರುವುದು ತರವಲ್ಲ ಬದುಕು ಧನ್ಯತಾಭಾವವಾಗಬೇಕು. ಇತಿಹಾಸ ಸೃಷ್ಠಸಬೇಕು. ನೋವು ಸಾವು ನಿರಂತರ ಅದರ ಆಚೆಗೂ ಬದುಕಿದೆ. ಸತ್ಕಾರ್ಯ ದಾನ ಧರ್ಮ ಪುಣ್ಯ ಕಾರ್ಯ ಮಾಡಿದಾಗ ಬದುಕು ನಿಜ ಅರ್ಥಪಡಿದೀತು.ಇಲ್ಲವೆಂದರೆ ನಮಗೂ ಪ್ರಾಣಿಗಳಿಗೂ ಏನು ವ್ಯತ್ಯಾಸ ಎಂದು ಕವಿ ‘ಬದುಕೆಂದರೆ’ ಕವನದಲ್ಲಿ ಬದುಕಿಗೆ ಸಾರ್ಥಕತೆಯ ದಾರಿ ಕಂಡು ಕೊಂಡಿದ್ದಾರೆ.
‘ನೀಕೊಟ್ಟಿದ್ದು
ಸ್ಪರ್ಶವು ಹೌದು
ಗಾಯವೂ ಹೌದು’
ಪ್ರೇಮಿಗಳ ಹೃದಯದ ತುಡಿತ ಮಿಡಿತ, ಸರಸ ವಿರಸ ವಿರಹ ವಿಲಾಸ ಒಂದಕ್ಕೊಂದು ಅವಿನಭಾವ ಸಂಬಂದವಿದೆ ನಾಣ್ಯದ ಎರಡು ಮುಖದಂತೆ ಇಲ್ಲಿ ಪ್ರೀತಿಯಲ್ಲಿ ಸೋಲು ಗೆಲುವು ಗಳಿಸಿದ್ದು ಕಳೆದುಕೊಂಡಿದ್ದು ಎಲ್ಲವು ಅನುಭವಕ್ಕೆ ಬಂದಿರುವುದು ಜತೆಗೆ ಒಪ್ಪಿಗೆ ಸೂಚಿಸಿರುವಂಥ ವಿಚಾರ ಪರಸ್ಪರ ಮಿಲನ, ಆಲಿಂಗನ, ಚುಂಬನ ಎಲ್ಲಕ್ಕೂ ಸ್ಪರ್ಶ ಎಂಬ ಪದದಲ್ಲಿ ಅಡಗಿಸಿ ಕವಿ ಅತ್ಯಂತ ಜಾಣ್ಮೆಯಿಂದ ‘ಹೌದು’ಯೆಂಬ ಕವನ ರಚನೆ ಮಾಡಿರುವುದು ನೇರ ಹೇಳಿಕೆಯಾಗಿದೆ.
‘ನನ್ನ ಸಮಾಧಿಯ
ಮ್ಯಾಲೆ ನೀ ಇಟ್ಟ ಕೈ
ನನ್ನ ಎದಿ ಮ್ಯಾಗಾ
ಇಟ್ಟಂಗಾತು
ಕಣ್ಣಿಂದ ಉದುರಿದ
ಎರಡ್ಹನಿಗಳಿಂದ
ನನ್ನ ಆತ್ಮಕ್ಕೆ ಶಾಂತಿ
ಕೋರಿದಂಗಾತು’
ಪ್ರೀತಿಗೆ ಸಾವಿಲ್ಲ ಸತ್ತರು ಜೀವ ಕಳೆಯಿಂದ ಆತ್ಮಕ್ಕೆ ಶಾಂತಿ ದೊರೆಯಲುಬಹುದು. ಪ್ರಿಯಕರನ ಸಮಾಧಿಯಲ್ಲಿ ಕಫನ್ ಹೊದ್ದು ದಫನ್ ಆಗಿರುವಾಗ ಪ್ರೇಯಸಿಯ ಕೈ ಸ್ಪರ್ಶ ಸಾಕು, ಆತ್ಮಶಾಂತಿಗಾಗಿ ಇಷ್ಟು ಸಾಕು ಪ್ರೀತಿಗೆ ಬದುಕು ಸಾವು ನೋವು ನಲಿವು ಎಲ್ಲವೂ ಒಂದೇ ಆತ್ಮಗಳ ಮಿಲನದ ಕಳೆದುಹೋದ ಸುಖ ಮತ್ತೆ ಒಂದಾಗುವುದರಲ್ಲಿ ಕಾಣುವ ಬಯಕೆ ಅಲ್ಲಿವರೆಗೆ ‘ಸಂಘರ್ಷ.’ ನಿರಂತರ.
‘ಅವಳ
ಮಾತಿಗಿಂತ
ಮೌನವೇ
ಹೆಚ್ಚು
ಅರ್ಥವಾಗಿದ್ದು’
ಮೌನದ ಭಾಷೆಯ ಮನಸಿನ ಗೀತೆಯಾಗಿರುವ ಮಾತಿಗೇನು ಕೆಲಸ ನೋಟ, ಮೌನ ಹೃದಯಗಳ ಭಾವನೆಗಳನ್ನು ತಿಳಿಯಲು ಅರಿಯಲು ಇರುವ ಸಾಧನ. ಮನಸ್ಸಿನಲ್ಲಿನಾಗುವ ತರ್ಕಗಳ ವೇದನೆ ಸಂವೇದನೆ, ಕವಿಯ ಚಿಂತನೆ ಹಚ್ಚಿದ ಕಾಮನ ಬಿಲ್ಲಿನ ಬಣ್ಣದಂತಿದೆ ‘ಕಿರುಗವಿತೆಗಳು”’. ಮೆಹಬೂಬ್ ಪಾಷ ಎ. ಮಕಾನದಾರ ಒಬ್ಬ ಕವಿ ಅನ್ನೊದಿಕ್ಕಿಂತಲು ಒಬ್ಬ ದಾರ್ಶನಿಕ ಎಂದು ನನ್ನ ಅಭಿಪ್ರಾಯ ಕವಿತೆಗಳಲ್ಲಿರುವ ಪದಪುಂಜಗಳು ಓದುಗರ ಮನಸ್ಸಿನಲ್ಲಿ ಮನೆ ಮಾಡುತ್ತೆ. ಕವಿಯ ಭಾವನೆ, ಆಲೋಚನೆ, ವೇದನೆ, ಸಂವೇದನೆ ಪ್ರೀತಿ ಅಕ್ಕರೆ ಒಂದಕ್ಕಿಂತ ಒಂದು ಮಿಗಿಲಾಗಿ ಕವಿತೆಗಳ ರೂಪ ಧರಿಸಿವೆ. ಇಂಥ ಕವಿತೆಗಳಿಗೆ ಸಾವಿಲ್ಲ ಸದಾ ಜೀವಂತ ಒಟ್ಟಾರೆ ಒಬ್ಬ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಮೆಹಬೂಬ ಪಾಷ ಯಶಸ್ಸು ಸಾಧಿಸಿರುವ ಯುವ ಕವಿ.
ಆತ್ಮೀಯ ಕವಿ ನಿಮ್ಮ ಈ ಕೃತಿಗೆ ಆ ಶೀರ್ಷಿಕೆಗೆ ಅದರ ಹಿಂದಿರುವ ಭಾವಕ್ಕೆ ಮನಮಿಡಿಯುವಷ್ಟು ಗೌರವ ದೊರಕಿದೆ. ಇನ್ನು ಮುಂದೆ ನಿಮ್ಮಿಂದ ಬರುವ ಕಿರುಹೊತ್ತಿಗೆಗಳು ನಿಮಗೆ ಕೀರ್ತಿಯ ಯಶಸ್ಸು ನೀಡುವಲ್ಲಿ, ಓದುಗರು ನಿಮಗೆ ಸಾಥ್ ನೀಡುತ್ತಾರೆ ಎಂಬ ಭರವಸೆಯೊಂದಿಗೆ ನನ್ನ ಅಭಿನಂದನೆಗಳು ಶುಭ ಹಾರೈಕೆಗಳು.
–ಹೆಚ್. ಷೌಕತ್ ಆಲಿ