“Lightly, O lightly we bear her along
She sways like a flower in the mind of our song
She skims like a bird in the foam of a stream
She floats like a laugh from the lips of a dream”
ಇದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ “Palanquin-bearers” ಕವನದ ಆರಂಭದ ಸಾಲುಗಳು. ಬೋವಿಗಳು [ಪಲ್ಲಕ್ಕಿ ಹೊರುವವರು] ಮದುಮಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ನಿಧಾನವಾಗಿ ಸಾಗುತ್ತಿದ್ದಾರೆ. ಆಕೆ ಸ್ವಲ್ಪವೂ ಭಾರವಿಲ್ಲ. ಎಷ್ಟೊಂದು ಸಮಯ ಅವಳ ಹೊತ್ತು ಸಾಗಿದರೂ ಅವರಿಗಾಯಾಸವಿಲ್ಲ. ಆಕೆ ಅವರ ಹಾಡಿನ ಮನದಲ್ಲಿ ತೂಯ್ದಾಡುವ ಗಾಳಿಗೆ ಓಲಾಡುವ ಹೂವಿನಂತೆ ಮದುಮಗಳು ಪಲ್ಲಕ್ಕಿಯ ಚಲನೆಗೆ ಓಲಾಡುತ್ತಿದ್ದಾಳೆ, ತೊರೆಯ ನೊರೆಯ ಮೇಲೆ ಏರಿಳಿವ ಹಕ್ಕಿಯಂತೆ, ಕನಸಿನ ತುಟಿಯ ಮೇಲೆ ತೇಲುವ ನಗುವಿನಂತೆ. ಆಕೆಯನ್ನು ಸರಿಗೆಯಲ್ಲಿ ಪೋಣಿಸಿದ ಸುಂದರವಾದ ಮುತ್ತೆಂದು ಬಣ್ಣಿಸುತ್ತಿದ್ದಾರೆ. ಆಕೆ ಹೊಸ ಬದುಕನ್ನು ಕಣ್ಣಲ್ಲಿ ತುಂಬಿಕೊಂಡಿದ್ದಾಳೆ. ನಕ್ಷತ್ರದಂತೆ ಕಂಗೊಳಿಸುತ್ತಿದ್ದಾಳೆ. ತೆರೆಗಳ ಹುಬ್ಬಿನ ಮೇಲೆ ಪುಟಿಯುವ ಕಿರಣದಂತೆ ಮಿಂಚುತ್ತಿದ್ದಾಳೆ. ಆಕೆ ರಾಜ ವಧು. . ಪ್ರಾಚೀನ ಭಾರತ ಸಂಪ್ರದಾಯದಲ್ಲಿ ರಾಜ ಮಹಿಳೆಯರು ಗಂಡನ ಮನೆಗೆ ಹೋಗುವಾಗ ಪಲ್ಲಕ್ಕಿಯಲ್ಲಿ ಹೊತ್ತು ತರುವ ಕ್ರಮವಿತ್ತು. ಈ ಪರಂಪರೆಯ ಸನ್ನಿವೇಷವನ್ನು ಸರೋಜಿನಿ ತಮ್ಮ ಕವನದಲ್ಲಿ ಬಳಸಿಕೊಂಡಿದ್ದಾರೆ. ಪಲ್ಲಕ್ಕಿ ಹೊತ್ತವರು ಪಲ್ಲಕ್ಕಿಯಲ್ಲಿ ಕೂತವಳ ಹೃದಯದ ಮಿಡಿತಕ್ಕೂ, ಪಲ್ಲಕ್ಕಿಯ ತುಯ್ದಾಟಕ್ಕೂ, ತಮ್ಮ ಹೆಜ್ಜೆ ಸದ್ದಿಗೂ ತಕ್ಕಂತೆ ನುಡಿಗಾನಗೈಯುತ್ತಿದ್ದಾರೆ.
ಆಕೆಗೆ ಪಲ್ಲಕ್ಕಿಯ ಪ್ರಯಾಣ ಕಷ್ಟವಾಗದಿರಲೆಂದು ತುಂಬಾ ಜತನದಿಂದ ಹೆಜ್ಜೆ ಹಾಕುತ್ತಿದ್ದಾರೆ. ಆಕೆಯನ್ನು ಹೊತ್ತು ಸಾಗುವುದೇ ತಮಗೊದಗಿದ ಸುಕಾರ್ಯವೆಂದು ತಿಳಿದು ಆನಂದಿತರಾಗಿದ್ದಾರೆ. ಅವರಿಗಾವ ಶೋಷಣೆಯ ಅನುಭವವಾಗುತ್ತಿಲ್ಲ. ಬದಲಿಗೆ ಮೃದು ಸುಕೋಮಲೆಯಾದ ಆಕೆ ಅವರ ಆನಂದದ ಕೇಂದ್ರಬಿಂದು. ಆ ಕೆಲಸ ಅವರಿಗೊಪ್ಪಿಸಿದ ವಿಶೇಷಕಾರ್ಯವೆಂದೆ ಬಗೆದು ಪಲ್ಲಕ್ಕಿಯಲ್ಲಿ ಪವಡಿಸಿದ ಮದುಮಗಳ ವರ್ಣಿಸತೊಡಗುತ್ತಾರೆ.
ಆದರೆ ಕವನದ ಕೊನೆಯಲ್ಲಿ ಬರುವ ಸಾಲು “She falls like a tear from the eyes of a bride” ಆಕೆವಧುವಿನ ಕಣ್ಣೀರಿನ ಹನಿಯಂತೆ ಉರುಳುತ್ತಾಳೆ. ಇದು ಆಕೆಯ ದುಃಖವನ್ನೂ ನೆನಪಿಸುತ್ತದೆ. ಇಷ್ಟು ದಿನ ತವರಲ್ಲಿ ತನ್ನ ಪ್ರೀತಿಪಾತ್ರರೊಡನೆ ಬೆಳೆದ ಆಕೆ ಅವರನ್ನೆಲ್ಲಾ ಬಿಟ್ಟು ಹೊರಟಿದ್ದಾಳೆ. ಹೀಗೆ ಬದುಕಿನ ಸುಖ ದುಃಖಗಳ ಸಮ್ಮಿಶ್ರಣ ಬಿಂಬಿತವಾಗಿದೆ.
ಪ್ರಾಸ, ಮಾಧುರ್ಯ, ಸಂಗೀತ, ಸಂತೋಷ ಎಲ್ಲವನ್ನೂ ಒಳಗೊಂಡ ಅದ್ಬುತ ಸರಳ, ಅಪ್ಯಾಯವಾದ ಶಬ್ದಗಳ ಸುಂದರ ಕವನ ಮೂರು ನುಡಿಗಳಲ್ಲಿ ಸಂಪೂರ್ಣ ರಮಣೀಯತೆಯ ಅನುಭವ ನೀಡುತ್ತದೆÉ. ಕವನದ ಮೋಡಿಗೆ ಓದುಗ ಕೂಡ ಜಾರಿಹೋಗುತ್ತಾನೆ. ಆ ವಸಂತ ಋತುವಿನ ಚಲನೆ ಆ ಸುಕೋಮಲೆ, ಪಲ್ಲಕ್ಕಿ ಹೊರುವವರು ಎಲ್ಲವನ್ನೂ ನವಿರಾಗಿ ಕಲಾತ್ಮಕವಾಗಿ ಒಂದೇ ಕಟ್ಟಿನಲ್ಲಿ ಕಟ್ಟಿಕೊಡುವ ಕವನ ಸಂತಸದ ಕಡಲನ್ನು ಉಕ್ಕಿಸುತ್ತದೆ. ಹಾಡಿನ ತಾಳಕ್ಕೂ ಸುಕೋಮಲೆಯ ಹೃದಯ ಬಡಿತಕ್ಕೂ ಸಹವರ್ತತೆ ಇದೆ. ಕವನದ ತುಂಬೆಲ್ಲಾ ಉಪಮಾಲಂಕಾರ ಕಳೆಕಟ್ಟಿದೆ. ಹೀಗಾಗಿ ಈ ಕವನದ ಮಾರ್ದವತೆಗೆ ಮನಸೋಲದ ಸಹೃದಯಿ ಇಲ್ಲ. .
ಸರೋಜಿನಿ ನಾಯ್ಡು ಭಾರತೀಯ ಜನಪದರು, ಇಲ್ಲಿಯ ಭೂಭಾಗ, ಧರ್ಮಾಚರಣೆಯಲ್ಲಿನ ವಿಚಾರಗಳನ್ನೆ ಬರವಣಿಗೆಯ ವಸ್ತುವನ್ನಾಗಿ ಆರಿಸಿಕೊಂಡು ಅನೂಹ್ಯವಾದ ಪರಿಕಲ್ಪನೆಗಳನ್ನು ನೀಡುತ್ತಾರೆ. ಅಂತಹ ಇನ್ನೊಂದು ಕವನ “Coromandel Fishers”- ಮೀನುಗಾರರ ಬದುಕಿನ ಚಿತ್ರಣ ಕೊಡುತ್ತದೆ. ಈ ಶ್ರಮಿಕ ವರ್ಗಗಳೆಲ್ಲಾ ಯಾವ ದಬ್ಬಾಳಿಕೆ ಶೋಷಣೆಯೆಂದು ಹೋರಾಡದೆ ನೆಮ್ಮದಿಯ ಬದುಕ ಕಲೆಯಲ್ಲಿ ಬೆರೆತವರು. ಕಷ್ಟದ ನಡುವೆಯೇ ಆನಂದವನ್ನು ಪರಿಗ್ರಹಿಸುವ ಸಂವೇದನಾಶೀಲರು. ಸಮುದ್ರರಾಜನ ಮಕ್ಕಳಾದ ಆ ಮೀನುಗಾರರು ತಮ್ಮ ಕೆಲಸವನ್ನೆಂದೂ ಕಷ್ಟವೆಂದೂ ಜೀವಾಪಾಯದ ಕಾರ್ಯವೆಂದೂ ಬಗೆದಿಲ್ಲ. ನಿಸರ್ಗದ ಮಡಿಲಲ್ಲಿ ಅವರ ಕಂಪುಭರಿತ ಬದುಕು ಕೆಲಸ ಮತ್ತು ಸೌಂದರ್ಯ, ಅನುಪಮತೆ ಮತ್ತು ಪವಿತ್ರತೆಯಿಂದ ಕೂಡಿದೆ. ಸೂರ್ಯ ಹುಟ್ಟುತ್ತಲೇ ತನ್ನವರನ್ನೆಲ್ಲಾ ಎಬ್ಬಿಸಿ ತಮ್ಮ ಕೆಲಸಕ್ಕೆ ತೆರಳುವ ಮೀನುಗಾರರ ವಿರಾಮರಹಿತ ಜೀವನ ನೈಸರ್ಗಿಕ ಕ್ಷಮತೆಯಿಂದ ಕೂಡಿದೆ.
ಇವರಡಕ್ಕೂ ಭಿನ್ನ ಕಲ್ಪನೆಯಲ್ಲಿ ಮೂಡಿದ ಮತ್ತೊಂದು ಕವನ “Indian Weavers”. ಬರಿಯ ಹನ್ನೆರಡು ಸಾಲುಗಳಲ್ಲಿ ಕಾವ್ಯ ಬಾಳಪಯಣದ ಹಂತಗಳನ್ನು ಪ್ರಸ್ತುತ ಪಡಿಸುತ್ತದೆ. ಸರೋಜಿನಿನಾಯ್ಡು ಬಾಳ ಯಾತ್ರೆಯ ಮೂರು ಹಂತಗಳನ್ನು ನೆನಪಿಸುತ್ತಾರೆ. ಅದು ಹುಟ್ಟು, ಬೆಳವಣಿಗೆ ಮತ್ತು ಸಾವು. ಮೊದಲ ಎರಡು ಸಂತಸದ ಬದುಕಾದರೆ ಸಾವು ಬದುಕಿನ ಕೊನೆ. ಪ್ರಶ್ನೋತ್ತರ ಮಾಲಿಕೆಯಲ್ಲಿ ಮೂಡಿ ಬಂದಿದೆ ಕವನ.
ಬೆಳ್ಳಂಬೆಳಿಗ್ಗೆ ಮೀಂಗುಳ್ಳಿಯ ರೆಕ್ಕೆಗಳಂತಹ ಅಚ್ಚನೀಲಿಯ ಬಣ್ಣದ ಬಟ್ಟೆ ನೇಯುತ್ತಿರುವ ನೇಕಾರನಿಗೆ ಪ್ರಶ್ನಿಸುತ್ತಾರೆ. ಕವಿ. ಅದಕ್ಕಾತ ತಾವು ಅದೇ ತಾನೆ ಜನಿಸಿದ ಮಗುವಿಗಾಗಿ ಸಂತೋಷದಿಂದ ನೇಯುತ್ತಿರುವುದಾಗಿ ಉತ್ತರಿಸುತ್ತಾನೆ. ಇದು ಬದುಕಿನ ಪ್ರಾರಂಭವನ್ನು ಸೂಚಿಸಿದರೆ ರಾತ್ರಿ ನೇಯುವ ಆಕರ್ಷಕ ನೇರಳೆ ಮತ್ತು ಹಸಿರು ಬಣ್ಣದ ರಾಣಿಯ ಬಟ್ಟೆಗಳು ಜೀವನದ ಸುವರ್ಣ ಕಾಲ ಯೌವನವನ್ನೂ ಬಿಂಬಿಸುತ್ತವೆ. ಅದೇ ಈಗ ರಾತ್ರಿಯಾಗಿದೆ. ಚಂದಿರನ ಆಗಮನದಲ್ಲಿ ಚಳಿಯ ನಡುವೆ ನೇಕಾರ ಮೌನಿಯಾಗಿ ಗಂಭೀರವಾಗಿ ಮೋಡ ಮತ್ತು ಗರಿಯಂತೆ ಶುಭ್ರವಾದ ಬಿಳಿಯ ಬಟ್ಟೆಗಳನ್ನು ಶವದ ಸಂಸ್ಕಾರ ವಿಧಿಗಾಗಿ ನೇಯುತ್ತಿದ್ದಾನೆ. ಇದು ಬಾಳ ಹಾದಿ ಕೊನೆಯ ಹಂತ. ಹೀಗೆ ಕವಯತ್ರಿ ಬಳಸಿದ ಹಕ್ಕಿ, ಬಣ್ಣ ಸದ್ದು ಎಲ್ಲವೂ ತಾರ್ಕಿಕ ನೆಲೆಯಲ್ಲಿ ಓದುಗನ್ನು ಸೆಳೆಯುತ್ತವೆ.
ಸರೋಜಿನಿ ನಾಯ್ಡು ಅವರ ಸಾರ್ವಜನಿಕ ಜೀವನ ಹಾಗೂ ಸಾಹಿತ್ಯಿಕ ಬದುಕು ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತ. ಅಂದು ಭಾರತ ಬ್ರೀಟಿಷ ದಬ್ಬಾಳಿಕೆಯಲ್ಲಿ ನಲುಗುತ್ತಿರುವ ಸಂಕಷ್ಟಮಯ ಕಾಲ. 1879ರಲ್ಲಿ ಹೈದರಾಬಾದಿನಲ್ಲಿ ಅಘೋರನಾಥ ಚಟ್ಟೋಪಾಧ್ಯಾಯ ಹಾಗೂ ವರದಾ ಸುಂದರಿಯರ ಎಂಟು ಮಕ್ಕಳಲ್ಲಿ ಮೊದಲ ಮಗುವಾಗಿ ಜನಿಸಿದ ಸರೋಜಿನಿ ನಾಯ್ಡು ತನ್ನ 11ನೇ ವಯಸ್ಸಿನಲ್ಲೇ ಮೊದಲ ಕವನ ಮೆಹಿರ ಮುನೀರ ಬರೆದರು. ತಂದೆ ಕೂಡ ಅಗಾಧ ಪಂಡಿತರೂ ವಿಜ್ಞಾನ ಮತು ಸಾಹಿತ್ಯದಲ್ಲೆರಡರಲ್ಲೂ ಪ್ರವೀಣರು ಆಗಿದ್ದರು. ಮೊದಲ ಕವನ ಆಗಿನ ಹೈದರಾಬಾದ ನಿಜಾಮರ ಆಳ್ವಿಕೆಯ ಕಾಲ. ನಿಜಾಮರ ಮನಗೆದ್ದಿತು. ಹೀಗಾಗಿ ಸರೋಜಿನಿಯವರಿಗೆ ಶಿಷ್ಯವೇತನದೊಂದಿಗೆ ಇಂಗ್ಲೆಂಡಿಗೆ ಹೋಗುವ ಸದಾವಾಕಾಶ ದೊರೆಯಿತು. . ತಮ್ಮ ರಮಣೀಯ ಭಾವನಾತ್ಮಕ ಬರವಣಿಗೆಗಳ ಮೂಲಕ “ಭಾರತದ ಕೋಗಿಲೆ”ಯೆಂದೆ ಹೆಸರಾದ ಅವರು ಲಾಲಿತ್ಯಪೂರ್ಣವಾದ ಶೈಲಿಯಿಂದ ಪ್ರಸಿದ್ಧರು. ಅವರ ಬದುಕು ಕವಿಯಾಗಿ ಪ್ರಾರಂಭಗೊಂಡರೂ ಒಬ್ಬ ರಾಜಕಾರಣಿಯಾಗಿ ಕೊನೆಗೊಂಡಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಮೋಘವಾದ ಜವಾಬ್ದಾರಿಯನ್ನು ನಿಭಾಯಿಸಿದ ಸರೋಜಿನಿ ಸ್ವಾತಂತ್ರ್ಯನಂತರ ಮೊಟ್ಟಮೊದಲ ಮಹಿಳಾ ರಾಜ್ಯಪಾಲೆಯಾಗಿ ಉತ್ತರಪ್ರದೇಶಕ್ಕೆ ನೇಮಿಸಲ್ಪಟ್ಟರು. ಸಾಹಿತ್ಯ ಲೋಕಕ್ಕೆ “The Broken Wings, The Bird of Time, The Golden Threshold”ಇತ್ಯಾದಿ ಕೃತಿಗಳನ್ನು ಕೊಡುಗೆ ನೀಡಿದ ಸರೋಜಿನಿ ನಾಯ್ಡು 1949ರಲ್ಲಿ ಮರಣಹೊಂದಿದರು.
-ನಾಗರೇಖಾ ಗಾಂವಕರ