ಎಂಭತ್ತರ ದಶಕದ ಕೊನೆಯ ಭಾಗ. ನಾನಾಗ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಎಂ ಎ. ಓದಲು ಬಂದವಳು. ಉತ್ತರ ಕನ್ನಡದ ಅನೇಕ ಹುಡುಗಿಯರು ನನ್ನಂತೆ ಹಾಸ್ಟೆಲಿನಲ್ಲಿ ಇದ್ದುದು ನಮ್ಮದೊಂದು ಗುಂಪು ರೆಡಿಯಾಗಿತ್ತು. ಶಿರಸಿಯ ನಮ್ಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ನಾವು ಸೇರಿ ಕಟ್ಟಿದ ಸಾಹಿತ್ಯ ಬಳಗ ನನ್ನಲ್ಲಿ ಒಬ್ಬ ಭಾಷಣಕಾರಳನ್ನು ಹುಟ್ಟುಹಾಕಿತ್ತು. ಧಾರವಾಡದಲ್ಲಿಯೂ ಅದರ ವರಸೆ ಬಿಡದೆ ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆ ಗಳಿಗೆ ಹೆಸರು ಕೊಡುತ್ತಿದ್ದೆ. ಒಂದಲ್ಲ ಹಲವು ಚರ್ಚಾಸ್ಪರ್ಧೆಗಳಲ್ಲಿ ನಾನು ಭಾಗವಹಿಸಿದೆ. ಆಗೆಲ್ಲ ರವಿ ಬೆಳೆಗೆರೆ ಎಂಬ ಹುಡುಗ ಪ್ರಥಮ ಪ್ರೈಸ್ ಪಡೆದು ಬಿಡುತ್ತಿದ್ದ. ಹಾಗೂ ನಾನು ಎರಡನೆಯ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು. ವಿದ್ಯಾರ್ಥಿಗಳ ನಡುವೆ ಇರುವ ಹಿತವಾದ ಸಂಕೋಚ ಭರಿತ ಅಸೂಯೆ ಹಾಗೂ ಮೆಚ್ಚುಗೆಭರಿತ ಮಾತುಕತೆಗಳು ಆಗೀಗ ನಡೆಯುತ್ತಿದ್ದವು. ಹೀಗೆ ಪರಿಚಯವಾದ ರವಿ ಬೆಳೆಗೆರೆ ಎಂಬ ದೈತ್ಯ ಪ್ರತಿಭೆ ಉತ್ತಮ ಮಾತುಗಾರ ಎಷ್ಟೋ ಅಷ್ಟೇ ಉತ್ತಮ ಲೇಖನಿಯೂ ಅವನದಾಗಿತ್ತು ಎಂಬುದು ಕೆಲವೇ ದಿನಗಳಲ್ಲಿ ನಮಗೆ ಅರಿವಾಗಿತ್ತು. ಮೊದಲನೇ ಸೆಮಿಸ್ಟರ್ ನಲ್ಲಿ ಉತ್ತರ ಕನ್ನಡದಿಂದ ಬಂದ ಅನೇಕ ಹುಡುಗಿಯರಿಗೆ ಇನ್ನು ಧಾರವಾಡದಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದು ಬೇಡ ಎಂಬಂತಹ ಕಹಿ ಅನುಭವಗಳು ಅವರವರ ಡಿಪಾರ್ಟ್ಮೆಂಟಿನಲ್ಲಿ ಆದ ಪರಿಣಾಮ ಒಂದು ದಿನ ನಾವೆಲ್ಲ ಮರಳಿ ಮನೆಗೆ ಹೊರಟು ಬಿಡೋಣ ಎಂದು ತೀರ್ಮಾನಿಸಿ ಬಿಟ್ಟಿದ್ದೆವು . ಸೂಟ್ ಕೇಸ್ ತುಂಬಿ ಇನ್ನೇನು ಹಾಸ್ಟೆಲ್ ಗೆ ಬೈ ಹೇಳಬೇಕು ಎಂಬಷ್ಟಾ ದಾಗ ರವಿಬೆಳೆಗೆರೆ ತನ್ನ ಸ್ನೇಹಿತ ರೊಂದಿಗೆ ಆ ಕಡೆ ಬಂದವನು ನಮ್ಮೆಲ್ಲರನ್ನೂ ಉದ್ದೇಶಿಸಿ ಸೂಟ್ ಕೇಸ್ ಒಳಗೆ ಇಡ್ತೀರೋ ಇಲ್ಲೋ ನಿಮಗೇನು ತಲೆಕೆಟ್ಟಿದೆಯಾ? ಮೇಷ್ಟ್ರುಗಳು ಮುಖ ಗಂಟಿಕ್ಕಿಕೊಂಡು ಇದ್ದರೇನಾಯಿತು. ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನ ಈ ಸೌಂದರ್ಯ, ಈ ಹಸಿರು, ಸ್ನೇಹಿತರ ಕಲರವ ಇವನ್ನೆಲ್ಲ ಬಿಟ್ಟು ಮುಂದೆ ಪಶ್ಚಾತ್ತಾಪ ಪಡುವಂತೆ ಮಾಡಿಕೊಳ್ಳಬೇಡಿ. ನಡೀರಿ ಒಳಗೆ ಎಂದು ಸೂಟ್ ಕೇಸ್ ಸಮೇತ ನಮ್ಮನ್ನು ನಮ್ಮನಮ್ಮ ರೂಮುಗಳಿಗೆ ಅಟ್ಟಿ ಗಂಟೆಗಟ್ಟಲೆ ಸಮಾಧಾನದ ಮಾತುಗಳನ್ನು ಆಡಿದ್ದ. ಬಡತನದ ಕಷ್ಟ, ಅವಮಾನಗಳನ್ನು ಅನುಭವಿಸಿದವರಿಗೆ ಮಾತ್ರ ಅವಮಾನದ ನೋವು ಅರ್ಥವಾದೀತು ಎಂಬುದು ಆಗ ನಮಗೆ ಅರ್ಥವಾಗಿರಲಿಲ್ಲ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣ ಇದ್ದುದರಿಂದಲೋ ಏನೋ ಸದಾ ರವಿಯ ಸುತ್ತ ಮುತ್ತ ಗೆಳೆಯ ಗೆಳತಿಯರ ದಂಡೇ ಇರುತ್ತಿತ್ತು. ಕ್ಯಾಂಪಸ್ಸಿನಲ್ಲಿರುವ ಗಂಡುಮಕ್ಕಳ ಅವನ ಹಾಸ್ಟೆಲ್ ನಲ್ಲಿ ನನ್ನ ಸಹಪಾಠಿಗಳೂ ಇದ್ದರು ದಿನಕ್ಕೊಂದು ತಮಾಷೆಯ ಸುದ್ದಿಯನ್ನು ತರುತ್ತಿದ್ದರು. ರವೀ, ರವ್ಯಾ, ಬೆಳಗೆರೆ ಹೀಗೆಲ್ಲಾ ಸಂಬೋಧಿಸುವ ಸ್ನೇಹಿತರ ದಂಡು ರವಿಬೆಳೆಗೆರೆಯ ಜತೆಯಲ್ಲಿರುತ್ತಿತ್ತು. ಆಮೇಲೆ ವಿದ್ಯಾಭ್ಯಾಸ ಮುಗಿಸಿ ನಮ್ಮ ನಮ್ಮ ಉದ್ಯೋಗದ ಬೇಟೆ, ಮದುವೆ ಸಂಸಾರ ಮಕ್ಕಳು ಎಂದು ನಮ್ಮ ನಮ್ಮ ದಾರಿಗಳು ಬೇರೆ ಬೇರೆಯಾದವು. ರವಿ ಬೆಳಗೆರೆಯ ಸಂಪರ್ಕ ಕೆಲದಿನಗಳ ಮಟ್ಟಿಗೆ ತಪ್ಪಿಹೋಗಿತ್ತು.
ಅಷ್ಟರಲ್ಲಾಗಲೇ ನನ್ನ ಹಾಸ್ಯ ಲೇಖನಗಳು ಕನ್ನಡದ ಹೆಚ್ಚಿನ ಪತ್ರಿಕೆಗಳಲ್ಲಿ ಬರತೊಡಗಿದ್ದವು. ಒಂದು ದಿನ ಮುದ್ದಾದ ಅಕ್ಷರಗಳಲ್ಲಿ ಕರ್ಮವೀರ ಕಚೇರಿಯಿಂದ ರವಿ ಬೆಳಗೆರೆಯ ಪತ್ರ ಬಂದಿತ್ತು. ಕರ್ಮವೀರ ವಿಶೇಷಾಂಕಕ್ಕೆ ಹಾಸ್ಯ ಲೇಖನ ಬರೆದು ಕೊಡು ಎಂದು ಆಗ್ರಹಿಸಿದ್ದ ನಲ್ಲದೆ ನಮ್ಮ ಕ್ಯಾಂಪಸ್ ವಿಷಯವನ್ನೇ ಬರೆದರಾಯ್ತು ಮಾರಾಯ್ತೀ ಎಂದೂ ಸೇರಿಸಿದ್ದ. ಆ ಬಳಿಕವೂ ರವಿಬೆಳೆಗೆರೆ ವೃತ್ತಿಯನ್ನು ಬದಲಾವಣೆ ಮಾಡಿದ್ದು ಹಾಯ್ ಬೆಂಗಳೂರ್’ ಪ್ರಾರಂಭಿಸಿ ತನ್ನದೇಆದ ಸಾಮ್ರಾಜ್ಯ ಕಟ್ಟಿ ವಿಸ್ತರಿಸುತ್ತ ಹೋಗಿದ್ದು ಎಲ್ಲವನ್ನೂ ದೂರದಿಂದಲೇ ಕೇಳಿ ತಿಳಿದುಕೊಳ್ಳುತ್ತಿದ್ದೆ. ಮಂಗಳೂರಿನತ್ತ ಬಂದಾಗ ನಮ್ಮಿಬ್ಬರಿಗೂ ಕ್ಲಾಸ್ ಮೇಟ್ ಆಗಿ ಡಿವೈಎಸ್ಪಿ ಆಗಿದ್ದ ಜಯಂತ್ ಶೆಟ್ಟಿ ಅವರನ್ನು ಭೇಟಿಯಾಗಿ ಬಳಿಕ ನನ್ನ ಮನೆಗೆ ಬಂದು ಒಂದರೆಗಳಿಗೆ ಕೂತು ಹೇಗಿದ್ದೀಯ ಭುವನಾ ಎಂದು ಕೇಳಿ ಸುಖದುಃಖದ ನಾಲ್ಕು ಮಾತಾಡಿ ಚಹಾ ಕುಡಿದು ಹೊರಡುತ್ತಿದ್ದ. ಒಂದು ಬಾರಿ ಬಂದಾಗ “ತುಂಬಾ ಕುಡಿಯುತ್ತೀಯಂತೆ ಹೌದೇನೋ? ಕುಡಿದು ಕುಡಿದು ಸಾಯಬೇಡ ಕಣೋ” ಎಂದು ಬೈದಿದ್ದೆ. ಮರುದಿನವೇ ತನ್ನ ಖಾಸ್ ಬಾತ್ನಲ್ಲಿ ನನ್ನ ಸಹಪಾಠಿ ಭುವನಾ ಹೀಗೆ ಬೈದಳು, ಕುಡಿಯುವುದನ್ನು ಬಿಟ್ಟೆ ಎಂದು ಅದೆಷ್ಟನೇ ಬಾರಿಯೋ ಎಂಬಂತೆ ಬರೆದುಕೊಂಡಿದ್ದ. . . . ಬಹುಶಃ ಕುಡಿತ ಒಂದನ್ನು ಆತ ನಿಗ್ರಹಿಸಿ ಕೊಂಡಿದ್ದರೆ ಇನ್ನಷ್ಟು ವರ್ಷ ನಮ್ಮ ನಡುವೆ ಖಂಡಿತ ಇರುತ್ತಿದ್ದ. ನೋಡನೋಡುತ್ತಲೇ ಕುಡಿತ ಮತ್ತು ಸಿಗರೇಟ್ ಗಳು ಅವನನ್ನು ಇಂಚಿಂಚು ಕಬಳಿಸುತ್ತಲೇ ಹೋಗಿದ್ದವು. ಇದಾವುದರ ಪರಿವೆಯೆ ಇಲ್ಲದವನಂತೆ ಬರ ಗೂಳಿ ಎಂದು ಬರೆದುಕೊಂಡ ಪುಣ್ಯಾತ್ಮ ಬರೆಯುತ್ತಲೇ ಹೋದ. ರವಿಯ ವಾಗ್ದಾಳಿಗೆ ತುತ್ತಾಗಿ ಘಾಸಿಗೊಂಡ ಅದೆಷ್ಟೋ ಮನಸ್ಸುಗಳು ಅವನ ಕುರಿತು ದ್ವೇಷದ ಕಿಡಿಯನ್ನು ಹೊತ್ತಿಸಿ ಕೊಳ್ಳುತ್ತಲೇ ಇದ್ದವು. ಅವೆಲ್ಲವನ್ನೂ ಆತ ಎಂಜಾಯ್ ಮಾಡುತ್ತಿದ್ದ ನೇನೋ ಎಂಬಂತೆ ಅಂಥ ಉಪದ್ವ್ಯಾಪಗಳಿಗೆ ಕೈ ಹಾಕುತ್ತಲೇ ಇರುತ್ತಿದ್ದ.
ಕಳೆದೆರಡು ವರ್ಷಗಳಿಂದ ನಾನು ಬೆಂಗಳೂರಿಗೆ ಮಗಳ ಉದ್ಯೋಗದ ಸಲುವಾಗಿ ಆಗಾಗ ಹೋಗುತ್ತಿದ್ದಾಗ ಹಾಯ್ ಬೆಂಗಳೂರು ಕಚೇರಿಗೆ ಒಂದೆರಡು ಬಾರಿ ಹೋಗಿದ್ದೆ. ನಿನ್ನ ಶುಗರ್ ಲೆವಲ್ ಹೇಗಿದೆ? ಇದೋ ನೋಡು ನನ್ನ ನೇರಳೆ ಹಣ್ಣಿನ ಕಷಾಯ ತೆಗೆದುಕೊಂಡು ಹೋಗಿ ಸೇವಿಸುತ್ತಿರು ಎಂದು ಆಫೀಸಿನಲ್ಲಿಯೇ ಇರಿಸಿಕೊಂಡಿದ್ದ ನೇರಳೆ ಕಷಾಯವನ್ನು ಕೊಟ್ಟಿದ್ದ. ನಾನು ಕಾಲು ಮುರಿದುಕೊಂಡು ಕುಂಟುತ್ತಲೇ ಅವನ ಕಛೇರಿಗೆ ಹೋಗಿದ್ದಾಗ ಇನ್ನಿಲ್ಲದ ಅಕ್ಕರೆಯಿಂದ ಕಚೇರಿಯ ಮೆಟ್ಟಿಲ ತನಕ ಎದ್ದುಬಂದು ಬೀಳ್ಕೊಟ್ಟಿದ್ದ. ನನ್ನ ಮಗಳು ತನ್ನ ತರಲೆ ಪ್ರಶ್ನೆಗಳಿಂದ “ಅಂಕಲ್ ಅಮ್ಮನಿಗೆ ಬುದ್ಧಿ ಹೇಳಿ “ಎಂದಾಗೆಲ್ಲಾ ಆಯ್ತು ಮಗಳೇ ನಿನ್ನ ಅಮ್ಮನಿಗೆ ಬುದ್ಧಿ ಹೇಳೋಣ ಎಂದು ನನಗೆ ಚಿಕ್ಕ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೋ. ಅದು ಅರ್ಥಶಾಸ್ತ್ರಕ್ಕೆ ಸೇರಿದ್ದಲ್ಲ ಎಂದು ಬೈದಿದ್ದ. ಮೂಡುಬಿದಿರೆಯ ಕರ್ಣಾಟಕ ಸಂಘದವರು ರವಿ ಬೆಳೆಗೆರೆಗೆ ಶಿವರಾಮಕಾರಂತ ಪ್ರಶಸ್ತಿ ಕೊಟ್ಟಾಗ ದಕ್ಷಿಣ ಕನ್ನಡದಲ್ಲಿದ್ದ ನಮ್ಮ ಬ್ಯಾಚ್ ಮೇಟ್ ಗಳಲ್ಲಿ ಕೆಲವರನ್ನು ಅಲ್ಲಿಗೆ ಕರೆದಿದ್ದರು. ಅದೊಂದು ವಿಶಿಷ್ಟವಾದ ಸಮಾಗಮವಾಗಿತ್ತು. ವೈರಿಗಳನ್ನು ಕಟ್ಟಿಕೊಳ್ಳುವಲ್ಲಿ ಇದ್ದ ಧಾರಾಳಿತನವೇ ಸ್ನೇಹಿತರನ್ನು ಪ್ರೀತಿಪಾತ್ರರನ್ನು ಮುಗ್ಧ ಮಗುವಿನಂತೆ ಪ್ರೀತಿಸುವಲ್ಲಿಯೂ ಇತ್ತು. ಅವನ ಗುಣ ಗೊತ್ತಿದ್ದ ವರೆಲ್ಲರೂ ಅವನ ದೋಷಗಳ ಸಮೇತ ಅವನನ್ನು ಪ್ರೀತಿಸುತ್ತಿದ್ದರು ಇದು ರವಿ ಗೂ ಗೊತ್ತಿತ್ತು. ಎಂದೂ ತನ್ನ ಅಸಹಾಯಕ ತೆಯನ್ನು ಸ್ನೇಹಿತರೆದುರು ತೋಡಿಕೊಂಡ ವನಲ್ಲ. ಕೊರೋನಾ ಬಂದ ಬಳಿಕವಂತೂ ನಮಗೆಲ್ಲಾ ಎಚ್ಚರಿಕೆಯ ಮಾತುಗಳನ್ನು ಆಗಾಗ ಮೆಸೇಜ್ ಹಾಕುತ್ತಲೇ ಇದ್ದ. ಮನೆಯ ಕೆಳಗೆ ಇಳಿಯಲೇ ಬೇಡ ಎಂದೆಲ್ಲ ಖಡಕ್ ವಾರ್ನಿಂಗ್ ಇರುತ್ತಿತ್ತು. ನಮ್ಮ ಇನ್ನೋರ್ವ ಸಹಪಾಠಿ ಗೋಕರ್ಣದ ಪ್ರಸಾದ್ ಭಟ್ ಹೃದಯಾಘಾತದಿಂದ ತೀರಿಕೊಂಡಾಗ ನಾನು “ರವಿ ಪ್ರಸಾದ್ ಭಟ್ ತೀರಿಕೊಂಡಿದ್ದಾನೆ ನಮ್ಮೆಲ್ಲರ ವ್ಯಾಲಿಡಿಟಿ ಮುಗಿಯುತ್ತಾ ಬಂತೆನೋ?” ಎಂದೊಂದು ಮೆಸೇಜ್ ಹಾಕಿದ್ದೆ. “ಸುಮ್ಮನಿರಮ್ಮ ಚಂಡಾಲ ಸಾಹಿತಿಗಳನ್ನು ಮೇಲಕ್ಕೆ ಅಟ್ಟಿದ ಮೇಲೇ ನಾನು ಮೇಲಕ್ಕೆ ಹೋಗೋದು ತಿಳಿದುಕೋ ಎಂದು ತಮಾಷೆ ಮಾಡಿದ್ದ.
ಕೊರೋನಾ ಅವತರಿಸುವ ಕೆಲವೇ ದಿನಗಳ ಮೊದಲು ಒಂದು ದಿನ ಎಲ್ಲರೂ ಹಾಯ್ ಬೆಂಗಳೂರು ಕಚೇರಿಗೆ ಬನ್ನಿ ಎಂದು ನಮಗೆ ಆಹ್ವಾನ ನೀಡಿ ಗಂಟೆಗಟ್ಟಲೆ ಮಾತಾಡಿ ಕಾಫಿ ಕುಡಿಯುತ್ತಾ ಸಿಗರೇಟ್ ಸೇದುತ್ತಾ ಜೀವನದ ತನ್ನೆಲ್ಲಾ ಅನುಭವಗಳನ್ನು ನಮ್ಮೆದುರು ಹಂಚಿಕೊಳ್ಳುತ್ತಾ ಕೆಲವೊಮ್ಮೆ ಭಾವುಕನಾಗಿ ಗದ್ಗದಿತನಾಗಿ ಇನ್ನೂ ಸಾಕಪ್ಪಾ ನಾವು ನಮ್ಮ ಮನೆಗಳಿಗೆ ಹೋಗಬೇಕು ನೀನೇನೋ ಆಫೀಸಿನಲ್ಲಿಯೇ ಮನೆ ಮಾಡಿದ್ದೀಯಾ ಎಂದು ತಮಾಷೆ ಮಾಡುತ್ತಾ ನಾವು ಹೊರಟಿದ್ದೆವು. ಬೀಳ್ಕೊಡಲು ಬಂದಾಗ ನಮ್ಮ ‘ಓ ಮನಸೇ ಪತ್ರಿಕೆಗೆ ನಿನ್ನ ಅಂಕಣವನ್ನು ಪ್ರಾರಂಭಿಸು ‘ಭುವನ ಭಂಡಾರ’ ಎಂದು ಹೆಸರಿಡೋಣ ಎಂದು ಬಿಟ್ಟ. ಸ್ನೇಹದ ದಾಕ್ಷಿಣ್ಯ ನನ್ನ ಕೈಲಿ ಇಪ್ಪತ್ತೈ ಕಂತುಗಳಲ್ಲಿ ನನ್ನ ನೆನಪುಗಳನ್ನು ದಾಖಲಿಸಿ ಕೊಟ್ಟಿತ್ತು. ಮಾಲಿಕೆ ಪೂರ್ತಿಗೊಂಡಾಗ ತನ್ನದೇ ಪ್ರಕಾಶನದಿಂದ ಪುಸ್ತಕ ಪ್ರಕಟಿಸೋಣ ವೆಂದೂ ಹೇಳಿದ್ದ. ಆದರೆ ಸ್ನೇಹಿತರೆಲ್ಲ ರಿಗೆ ಹಿತವಚನ ಹೇಳುತ್ತಿದ್ದ ತಾನು ಮಾತ್ರ ಅದೇಕೆ ಹೀಗೆ ದಿಢೀರನೆ ಎದ್ದು ಹೊರಟುಬಿಟ್ಟನೋ. ನಾವು ಭೆಟ್ಟಿಯಾದಾಗೆಲ್ಲ ಎಂದೂ ಅವನ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದ್ದೇ ಇಲ್ಲ. ಅವನ ಭಾವುಕತೆಯ ಅರಿವಿದ್ದ ನಾವು ಆದಷ್ಟು ಧಾರವಾಡದಲ್ಲಿ ಎಂ ಎ. ಓದುತ್ತಾ ಇದ್ದಾ ಗಿನ ಕ್ಯಾಂಪಸ್ ಜೋಕುಗಳು ಸಾಹಿತಿಗಳ ಹುಚ್ಚಾಟಗಳು ಇತ್ಯಾದಿಗಳನ್ನು ಹೇಳಿಕೊಂಡು ನಗುತ್ತಾ ಕಾಫಿ ಕುಡಿದದ್ದೇ ಹೆಚ್ಚು.
ಉಳಿದವರ ವಿಷಯ ನನಗೆ ಗೊತ್ತಿಲ್ಲ ಅವರವರ ಅನುಭವಕ್ಕೆ ದಕ್ಕಿದ ರವಿ ಬೆಳೆಗೆರೆಯನ್ನು ಅವರವರು ಚಿತ್ರಿಸಿ ಯಾರು. ಆದರೆ ಸಹಪಾಠಿಯ ಸಲುಗೆಯಿಂದ ನಾನು ಬೈದಾಗೆಲ್ಲಾ ಬೈಸಿಕೊಂಡು ತುಂಟ ಹುಡುಗನಂತೆ ತಾನು ಮಾಡುವುದನ್ನು ಮಾಡುತ್ತಲೇ ಇದ್ದ ಈ ಮಗುವಿನಂಥ ಸ್ನೇಹಿತ ಮಾತ್ರ ಮತ್ತೆ ಸಿಗಲಾರ. ದಣಿವರಿಯದ ದುಡಿತ ದಿಂದಲೇ ವಿಶ್ರಾಂತಿಗೆ ಗಮನ ಕೊಡದೆ ತನ್ನ ಅಂತ್ಯವನ್ನು ತಾನೇ ಆಹ್ವಾನಿಸಿಕೊಂಡ ಈ ಸ್ನೇಹಿತ ರವಿ ಬೆಳೆಗೆರೆ ಪರ ಲೋಕದಲ್ಲಿಯಾದರೂ ಶಾಂತ ಮನಸ್ಕನಾಗಿ ಅವನಿಷ್ಟದ ಹಳೆ ಹಿಂದಿ ಹಾಡುಗಳನ್ನು ಕೇಳುತ್ತಾ ಪ್ರಕೃತಿ ವೀಕ್ಷಣೆ ಮಾಡುತ್ತಾ ನೆಮ್ಮದಿಯಿಂದಿರಲಿ ಎಂದು ಮನಸ್ಸು ಬಯಸುತ್ತದೆ.
-ಭುವನೇಶ್ವರಿ ಹೆಗಡೆ