
ಇತ್ತ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅವರ ಭಾರತ ಭಾಗ್ಯವಿಧಾತ ಕಾರ್ಯಕ್ರಮ ಧ್ವನಿ ಬೆಳಕು ಎಲ್ಲ ಕಲಾಪ್ರಕಾರಗಳನ್ನೊಳಗೊಂಡ ಕಾರ್ಯಕ್ರಮ ಉತ್ತಮವಾಗಿ ಮೂಡಿಬರುತ್ತಿತ್ತು. ಆ ಅದ್ಧೂರಿ ಸೆಟ್, ಝಗಮಗಿಸುವ ಬೆಳಕು, ಹಿನ್ನೆಲೆ ಧ್ವನಿ, ಗೊರವರ ಕುಣಿತ, ಪುರವಂತಿಕೆ, ಯಕ್ಷಗಾನ, ಗೀಗಿ ,ತಮಾಷಾ ,ಡೊಳ್ಳು ಇನ್ನಿತರ ಕಲಾಪ್ರಕಾರಗಳ ಕಾರ್ಯಕ್ರಮ ಅದ್ಭುತವಾಗಿದ್ದ ಈ ಕಾರ್ಯಕ್ರಮ ನೋಡುತ್ತಿದ್ದಂತೆಯೇ ನನ್ನ ಮನಸ್ಸು 2008 ರಲ್ಲಿ ಬುದ್ಧವಿಹಾರದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಅಂತರ ಮಹಾವಿದ್ಯಾಲಯದ ಶಿಬಿರದ ಘಟನೆಗಳತ್ತ ಮನಸ್ಸು ವಾಲುತ್ತಿತ್ತು. ಆ ಚರ್ಚೆಯಲ್ಲಿ ಏನೂ ತಿಳಿಯದ ಶಿಬಿರಾರ್ಥಿಯೊಬ್ಬನ ವಿತ್ತಂಡವಾದ ನೆನಪಾಯಿತು. ಅವನಿಗೆ ಮತ್ತು ಅಂತಹ ಮನಸ್ಸಿನ ಎಲ್ಲರಿಗೂ ಈ ಭಾರತ ಭಾಗ್ಯವಿಧಾತ ಕಾರ್ಯಕ್ರಮವನ್ನು ತೋರಿಸಬೇಕು ಅನ್ನಿಸುವಂತಿದೆ.
ಅಂದು ಬುದ್ಧವಿಹಾರದಲ್ಲಿ ಸಂಜೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮೀಸಲಾತಿ ಕುರಿತು ಚರ್ಚೆ ನಡೆದಿದ್ದವು. ಆ ಚರ್ಚೆ ವೇಳೆ ಮೀಸಲಾತಿ ಕುರಿತು ಒಬ್ಬ ಶಿಬಿರಾರ್ಥಿ ಎದ್ದು ನಿಂತು ಸರ್ ಈ ಮೀಸಲಾತಿಯಲ್ಲಾ ಬರೀ ಎಸ್ಸಿ,ಎಸ್ಟಿಗೆ ಅನ್ನಿಸಿಕೊಳ್ಳುವ ದೇವರ ಮಕ್ಕಳಿಗೆ ಮೀಸಲು. ಬಾಬಾ ಸಾಹೇಬ ಡಾ ಬಿ.ಆರ್. ಅಂಬೇಡ್ಕರ ಅವರಿಗೆ ಹೆಚ್ಚು ಅನುಕೂಲ ಕಲ್ಪಿಸಿದ್ದಾರೆ ಎಂದ. ಇದರಿಂದ ಅಂದಿನ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳೆಲ್ಲಾ ಚರ್ಚೆಗಳು ಶುರುವಾದವು. ವಾದ ವಿವಾದಗಳು ನಡೆಯುತ್ತಿದ್ದವು ಹಿರಿಯ ಪ್ರಾಧ್ಯಾಪಕರೊಬ್ಬರು ಎಲ್ಲ ಶಿಬಿರಾರ್ಥಿಗಳನ್ನು ಕೂಡಿಸಿ. ಮೀಸಲಾತಿ ಬಗ್ಗೆ ತಪ್ಪು ತಿಳಿದುಕೊಂಡ ಆ ವಿದ್ಯಾರ್ಥಿಯನ್ನೇ ಎಬ್ಬಿಸಿ ಕೇಳಿದರು. ಈಗ ನೀನು ಹೇಳು ಎಸ್ಸಿ, ಎಸ್ಟಿಗೆ ಮೀಸಲಾತಿ ಎಷ್ಟು ಶೇಕಡಾ ಇದೆ ಹೇಳು ಎಂದಾಗ. ಆ ಹುಡುಗನ ಉತ್ತರ ಮೌನ ಅಷ್ಟೊತ್ತು ವಿತ್ತಂಡವಾದ ನಡೆಸುತ್ತಿದ್ದವ ಈಗ ತಲೆ ಕೆಳಗೆ ಹಾಕಿ ಸುಮ್ಮನೆ ನಿಂತಿದ್ದ. ಹೋಗಲಿ ನಿನ್ನ ಜಾತಿ ಯಾವುದು? ಆ ಜಾತಿಗೆ ಶೇಕಡಾ ಎಷ್ಟು ಮೀಸಲಾತಿ ಇದೆ ? ಗೊತ್ತಾ ಎಂದಾಗಲೂ, ಆ ಶಿಬಿರಾರ್ಥಿಗೆ ತನ್ನ ಜಾತಿ ಮಾತ್ರ ತಿಳಿದಿತ್ತು. ಜಾತಿಗಿರುವ ಮೀಸಲಾತಿ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಆಗ ಪ್ರಾಧ್ಯಾಪಕರು ವಿವರವಾಗಿ ನೋಡು ವಾದ ಮಾಡುವ ಮೊದಲು ವಿಷಯದ ಕುರಿತು ತಿಳಿದುಕೊಳ್ಳಬೇಕು, ಇಲ್ಲದಿದ್ದರೆ ನಿನ್ನದು ಕುತರ್ಕವಾಗುತ್ತದೆ. ನಿನ್ನ ಜಾತಿ 2ಎ ವರ್ಗಕ್ಕೆ ಸೇರುತ್ತದೆ. ಈ ವರ್ಗಕ್ಕೆ ಶೇ 15 ರಷ್ಟು ಮೀಸಲಾತಿ ಇದೆ. ನಿನಗೆ ಎಸ್ಸಿ,ಎಸ್ಟಿಗೆ ಎಷ್ಟು ಶೇಕಡಾ ಪ್ರಮಾಣ ಮೀಸಲಾತಿ ಇದೆ ಗೊತ್ತಾ ಎಂದಾಗ. ಮತ್ತೆ ಆ ಹುಡುಗನ ಉತ್ತರ ಮೌನವಾಗಿತ್ತು. ನೋಡು ನಿನಗೆ ಮೀಸಲಾತಿ ಕುರಿತು ಹೆಚ್ಚಿನ ವಿವರ ಗೊತ್ತಿಲ್ಲ ಎನ್ನುತ್ತಾ ಪ್ರಾಧ್ಯಾಪಕರು ಕರ್ನಾಟಕದಲ್ಲಿ ಎಸ್ಸಿಗೆ ಶೇಕಡಾ 15,ಎಸ್ಟಿಗೆ ಶೇಕಡಾ 3 ರಷ್ಟು ಮೀಸಲು ನಮ್ಮ ರಾಜ್ಯದಲ್ಲಿದೆ ಎಂದು ಹೇಳಿದರು. ನೀನು ವಾದ ಮಾಡುವಾಗ ಹೇಳಿದೆಯಲ್ಲ ದೇವರು ಮಕ್ಕಳು ಅಂತ ಇದುವರೆಗೂ ಅದೆಷ್ಟೋ ದೇವರ ಮಕ್ಕಳಿಗೆ ದೇವರ ಗುಡಿಯೊಳಗೆ, ಗ್ರಾಮೀಣ ಹೊಟೇಲೊಳಗೆ ಪ್ರವೇಶವಿಲ್ಲ. ಕರೆಕಟ್ಟೆಗಳಿಗೆ ಪ್ರವೇಶವಿಲ್ಲ, ಇದೆಲ್ಲಾ ಕಾಣದ ನಿಮಗೆ ಮೀಸಲಾತಿ ಮಾತ್ರ ಕಾಣುತ್ತದೆ ಎಂದು ಅದೇ ಶಿಬಿರದ ಶಿಬಿರಾರ್ಥಿಯೊಬ್ಬ ಹೇಳಿದ್ದು ಈಗಲೂ ನೆನಪಿದೆ.

ಡಾ ಬಿ.ಆರ್. ಅಂಬೇಡ್ಕರ ಅವರು ಬರೀ ಮೀಸಲಾತಿ ಕುರಿತು ಹೇಳಿದ್ದಾರೆ ಎನ್ನುವಂತೆ ಬಿಂಬಿಸಲಾಗಿದೆ.ಅವರನ್ನು ದಲಿತ ಕೆರಿಗಳಿಗೆ ಸೀಮಿತಗೊಳಿಸುವ ಪರಿಪಾಠ ರೂಢಿಯಾಗಿ ಬಿಟ್ಟಿದೆ. ಅಂತಹವರಿಗೆ ಸಂವಿಧಾನ ನೀಡಿದ್ದು, ಮಹಿಳೆಯರಿಗೆ ಸಮಾನತೆಯ ಹಕ್ಕುಗಳನ್ನು ನೀಡಿ ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು. ಕಷ್ಟ ಪಟ್ಟು ಓದಿದ್ದು, ಸರ್ವರಿಗೂ ಮೂಲಭೂತ ಹಕ್ಕುಗಳನ್ನು ನೀಡಿಲ್ಲವೆ. ಜಾತಿ ವರ್ಗಗಳ ಅಸೃಶ್ಯತೆಯ ನೋವುಂಡು ಬೆಳೆದ, ಜಾತಿಯ ಕಾರಣಕ್ಕೆ ಬಾಡಿಗೆ ಮನೆ ದೊರೆಯದ, ಕಛೇರಿಯೊಳಗೆ ಸಮಾನವಾಗಿ ಕಾಣದ ಈ ಜನರಿಗೆ. ಬಾಬಾಸಾಹೇಬ ಡಾ ಬಿ,ಆರ್. ಅಂಬೇಡ್ಕರ್ ಅವರ ಬಹುಮುಖಿ ಸಾಧನೆ ಕಾಣಿಸುವುದಿಲ್ಲವೇ ಎನ್ನುವ ಪ್ರಶ್ನೆ ಕಾಡುತ್ತದೆ. ಅಥವಾ ಜಾಣ ಕುರುಡು ಅನುಸರಿಸುತ್ತಾರೆಯೇ ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವಂತಿದೆ ಭಾರತ ಭಾಗ್ಯವಿಧಾತ ಕಾರ್ಯಕ್ರಮ. ಈ ಕಾರ್ಯಕ್ರಮ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಜೀವನವನ್ನು ಇಂದಿನ ಮಾಡರ್ನ್ ಯುವಕರು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಾ ಸಾಗುವ ಈ ಧ್ವನಿ ಬೆಳಕು ಕಾರ್ಯಕ್ರಮ ಅದ್ಭುತವಾಗಿ ಮತ್ತು ಸುಂದರವಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಬಿ,ಎಂ.ಗಿರಿರಾಜ ಅವರ ನಿರ್ದೇಶನ. ನೃತ್ಯ ಸಂಯೋಜನೆ -ಪದ್ಮಿನಿ ಅಚ್ಚಿ, ರಂಗ ವಿನ್ಯಾಸ- ಶಶಿಧರ ಅಡಪ, ಬೆಳಕು- ನಂದಕಿಶೋರ, ವಸ್ತ್ರಾಲಂಕಾರ -ಪ್ರಮೋದ್ ಶಿಗ್ಗಾವ, ಪ್ರಸಾದನ -ರಾಮಕೃಷ್ಣ ಬೆಳ್ತೂರ ಅವರದ್ದಾಗಿದೆ.

ನೋಡುಗರ ಮನಸೆಳೆಯುತ್ತದೆ,ಒಂದು ಕ್ಷಣವೂ ಅಲುಗಾಡದೇ ಕುಳಿತು ನೋಡಿಕೊಳ್ಳುವಂತೆ ಮಾಡುವ ಸಾಮಥ್ರ್ಯ ಈ ಕಾರ್ಯಕ್ರಮಕ್ಕಿದೆ. ಕಲಾವಿದರ ನೈಜ ಅಭಿನಯ, ಸುಂದರ ನೃತ್ಯ, ಹಿನ್ನೆಲೆ ಧ್ವನಿ, ಬೆಳಕಿನಾಟ, ಸಾಹಿತ್ಯ ಹಾಗೂ ವಿವಿಧ ಕಲಾಪ್ರಕಾರಗಳು ಸೇರಿ ಭಾರತ ಭಾಗ್ಯವಿಧಾತ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತದೆ. ಇಂತಹ ಅಪರೂಪದ ಕಾರ್ಯಕ್ರಮ ಈಗ ಕರ್ನಾಟಕ ರಾಜ್ಯಾದ್ಯಾಂತ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತಿದೆ. ಮನೆಮಂದಿಯಲ್ಲಾ ಕುಳಿತು ನೋಡಬೇಕಾದ ಕಾರ್ಯಕ್ರಮವಿದು. ಇಂತಹ ಸುಂದರ ಕಾರ್ಯಕ್ರಮವನ್ನು ನೀಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೂಂದು ಥ್ಯಾಂಕ್ಸ್. ನಿಮ್ಮ ಊರಿಗೆ ಬಂದಾಗ ನೀವೂ ನೋಡಿ ನಿಮ್ಮ ಗೆಳೆಯರನ್ನು ಕರೆದುಕೊಂಡು ಹೋದರೆ ಖಂಡಿತ ಹೊಚ್ಚ ಹೊಸ ಅನುಭವ, ಖುಷಿ, ನಿಮ್ಮದಾಗುತ್ತದೆ. ಇತಿಹಾಸದ ಎಷ್ಟೋ ಸಂಗತಿಗಳು ಕಣ್ಣಿಗೆ ಕಟ್ಟುವಂತೆ ನಿಮ್ಮ ಸ್ಮೃತಿಪಟಲದಲ್ಲಿ ಉಳಿಯುವದರಲ್ಲಿ ಯಾವುದೇ ಸಂಶಯವಿಲ್ಲ.
–ನಾಗರಾಜನಾಯಕ ಡಿ.ಡೊಳ್ಳಿನ