[ಶ್ರೀ ನಾಗರಾಜ್ ಅಡ್ವೆಯವರು ದೆಹಲಿಯ ಇಂಡಿಯನ್ ಕ್ಲೈಮೇಟ್ ಜಸ್ಟೀಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎಂ.ಫಿಲ್. ಪದವಿ ಪಡೆದಿದ್ದಾರೆ. ಇವರು ಅಭ್ಯಸಿಸಿದ ಮುಖ್ಯ ವಿಷಯ “ಹವಾಮಾನ ಬದಲಾವಣೆ” ಕುರಿತೇ ಆಗಿದೆ. ದೇಶದ ಎಲ್ಲಾ ಪ್ರಮುಖ ಪತ್ರಿಕೆಗಳಿಗೂ ಹವಾಮಾನ ಬದಲಾವಣೆ ಕುರಿತ ಲೇಖನಗಳನ್ನು ಬರೆಯುತ್ತಾರೆ. ಇವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು ಬರೆದ ಕಿರುಪುಸ್ತಕದ ಭಾವಾನುವಾದದ ಮುಂದುವರೆದ ಭಾಗ].
ಬರೀ ಲಾಭಕ್ಕಾಗಿಯೇ ಪ್ರಾರಂಭಿಸಲಾಗುವ ಉದ್ಯಮಗಳು ಹಾಗೂ ಕೈಗಾರಿಕೆಗಳಿಂದ ಒಟ್ಟಾರೆಯಾಗಿ ಒಂದು ರಾಜ್ಯದ, ದೇಶದ ಅಥವಾ ಪ್ರಪಂಚದ ಪ್ರಗತಿಯನ್ನು ನಿರ್ಧರಿಸಲಾಗುತ್ತದೆ. ಒಂದು ನಿರ್ಧಿಷ್ಟ ಕಾಲಮಾನದಲ್ಲಿ ಅಂದರೆ ಒಂದು ವರ್ಷದಲ್ಲಿ ಒಟ್ಟು ಎಷ್ಟು ವಹಿವಾಟು ನಡೆಯಿತು ಇದರಿಂದ ಬಂದ ಆದಾಯವೆಷ್ಟು ಎನ್ನುವುದನ್ನು ಮಾನದಂಡವಾಗಿಟ್ಟುಕೊಂಡು ಆಯಾ ದೇಶಗಳ ಪ್ರಗತಿಯ ಪ್ರಮಾಣವನ್ನು ಅಳೆಯಲಾಗುತ್ತದೆ. ಇದಕ್ಕಾಗಿ ಕಾರ್ಮಿಕರನ್ನು ಹೆಚ್ಚು ಕೆಲಸ ಮಾಡಲು ಒತ್ತಡ ಹಾಕಲಾಗುತ್ತದೆ, ಇದನ್ನು ಹೆಚ್ಚು-ಹೆಚ್ಚು ವೇಗವಾಗಿ ಅಥವಾ ನಿಗದಿತ ಗಂಟೆಗಳಿಗಿಂತ ಜಾಸ್ತಿ ಸಮಯ ಕೆಲಸ ಮಾಡುವ ಮೂಲಕ ಸಾಧಿಸಲಾಗುತ್ತದೆ. ಹಾಗೆಯೇ ಪ್ರಕೃತಿಯನ್ನು ಅಸ್ಥಿರಗೊಳಿಸುವುದರ ಮೂಲಕ ಸಾಧಿಸಲಾಗುತ್ತದೆ. ಕಚ್ಚಾವಸ್ತುಗಳನ್ನು ನಿಸರ್ಗದ ಗರ್ಭದಿಂದ ಬಗೆದೆತ್ತಿ, ಸಂಸ್ಕರಿಸಿ, ಚೆಂದಗೊಳಿಸಿ, ಅವಧಿ ಮುಗಿದ ಪಕ್ಕಾ ವಸ್ತುಗಳನ್ನು ಮತ್ತೆ ಭೂಮಿಯ ಮೇಲ್ಮೈಯಲ್ಲೇ ಎರಚಲಾಗುತ್ತದೆ. 18ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾದ ಕೈಗಾರಿಕ ಕ್ರಾಂತಿಯ ನಂತರದಲ್ಲಿ ಪ್ರಪಂಚದ ಆರ್ಥಿಕ ಪ್ರಗತಿ ಪ್ರತಿವರ್ಷ ಸರಾಸರಿಯಾಗಿ 2-3% ಹೆಚ್ಚುತ್ತಿದೆ. ಅಂದರೆ ಪ್ರತಿ 23 ವರ್ಷಗಳಿಗೆ ನೈಸರ್ಗಿಕ ಸಂಪನ್ಮೂಲಗಳ ಬೇಡಿಕೆ ದುಪ್ಪಟ್ಟಾಗಿದೆ. ದುಪ್ಪಟ್ಟಾಗುತ್ತಲೇ ಇದೆ. ಹೀಗೆ ನಿತ್ಯವೂ ಹೆಚ್ಚುತ್ತಿರುವ ಸಂಪನ್ಮೂಲಗಳನ್ನು ತೆಗೆದು ಉಪಯೋಗಿಸಿ ಉಳಿದ ತ್ಯಾಜ್ಯಗಳು, ಆಮ್ಲಗಳು, ವಿಷಯುಕ್ತ ನೀರು ಇತ್ಯಾದಿಗಳು ಭೂಮಿಯ ಮೇಲ್ಮೈಗೆ ಮೊದಲು ಸೇರುತ್ತವೆ. ಕಾರ್ಖಾನೆಗಳ ವಿಷಯುಕ್ತ ತ್ಯಾಜ್ಯಗಳು ನದಿಗೆ, ನದಿಯ ಮೂಲಕ ಸಮುದ್ರಕ್ಕೆ ಸೇರುತ್ತವೆ. ನೆಲದ ಮೂಲಕ ಅಂತರ್ಜಲವನ್ನು ತಲುಪುತ್ತವೆ. ಹೀಗೆ ಇದೀಗ ಜಾಗತಿಕ ಸಮಸ್ಯೆಯೆಂದು ಪರಿಗಣಿಸುವ ಸ್ಥಿತಿ ಬಂದಿದೆ. ನೀರು-ಗಾಳಿ ಮುಂತಾದವುಗಳು ಈ ಪ್ರಪಂಚದ ಪತ್ರಿ ಜೀವಿಗೂ ಅಗತ್ಯವಾದ ಸಂಪನ್ಮೂಲಗಳಾಗಿವೆ. ಆದರೆ, ಇದರ ಮೂಲಗಳು ಇಂದು ತಿಪ್ಪೆ-ಕೊಚ್ಚೆ ಗುಂಡಿಗಳಾಗಿ ಪರಿವರ್ತಿತವಾಗಿವೆ. ಇಲ್ಲಿ ಅತಿಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಕೂಡಿಡುವ ಹಾಗೂ ಲಾಭಗಳಿಸುವ ಬಂಡವಾಳಶಾಹಿ ಪ್ರವೃತ್ತಿ ತಾರ್ಕಿಕವಾಗಿ ಸಾರ್ವತ್ರಿಕಗೊಂಡಿರುವುದು. ಅಂದರೆ, ಆರ್ಥಿಕ ಅಭಿವೃದ್ಧಿಯನ್ನೇ ಕೇಂದ್ರವಾಗಿಟ್ಟುಕೊಂಡು ಬೆಳೆಯುತ್ತಿರುವ ಬಂಡವಾಳಶಾಹಿತನ ಹಾಗೂ ಇದಕ್ಕೆ ನೀರೆರೆಯುತ್ತಿರುವ ಆರ್ಥಿಕ ತಜ್ಞರು, ರಾಜಕೀಯಸ್ಥರು ಹಾಗೂ ಬಹುಸಂಖ್ಯೆಯ ಜನಸ್ತೋಮ.
ನಿಮ್ಮ ಮನೆಯಲ್ಲಿ ನಿತ್ಯಪಯೋಗಿಯಾಗಿರುವ ಎಷ್ಟು ಪರಿಕರಗಳಿವೆ? ಎಷ್ಟು ದೀಪಗಳಿವೆ, ಎಷ್ಟು ಫ್ಯಾನ್‍ಗಳಿವೆ, ವಾಟರ್ ಹೀಟರ್‍ಗಳಿವೆ, ಸ್ಟೌಗಳಿವೆ, ಫ್ರಿಡ್ಜ್‍ಗಳಿವೆ, ಎಸಿಗಳಿವೆ? ಸೈಕಲ್ ಉಪಯೋಗವಾಗುತ್ತಿದೆಯೇ? ಬಸ್ಸಿನಲ್ಲಿ ಪ್ರಯಾಣಿಸುತ್ತೀದ್ದೀರಾ? ಅಥವಾ ಕಾರು ಬೇಕೇ ಬೇಕು ಎಂಬ ಸ್ಥಿತಿ ತಲುಪಿದ್ದೀರಾ? ನಮ್ಮ ವೈಯಕ್ತಿಕ ಇಂಗಾಲಾಮ್ಲ ಕಕ್ಕುವ ಪ್ರಮಾಣ ಇವೆಲ್ಲರ ಮೇಲಿನ ಅವಲಂಬನೆಯನ್ನೇ ಅವಲಂಬಿಸಿದೆ. ನೀವು 1500 ಕಿ.ಮಿ. ಪ್ರಯಾಣವನ್ನು ರೈಲಿನ ಮೂಲಕ ಕ್ರಮಿಸಿದಾಗ ಸುಮಾರು 35 ಕೆ.ಜಿ. ಇಂಗಾಲಾಮ್ಲವನ್ನು ವಾತಾವರಣಕ್ಕೆ ಸೇರಿಸಿದ್ದೀರಿ ಎಂದು ಅರ್ಥ. ಅದೇ ದೂರವನ್ನು ವಿಮಾನದ ಮೂಲಕ ಪ್ರಯಾಣಿಸಿದರೆ ನೀವು ವಾತಾವರಣಕ್ಕೆ ಸೇರಿಸುವ ಇಂಗಾಲಾಮ್ಲ ಪ್ರಮಾಣ 200 ಕೆ.ಜಿಯಾಗುತ್ತದೆ. ಮೂಲತವಾಗಿ ಇವೆಲ್ಲವೂ ಒಂದು ವ್ಯಕ್ತಿಯ ಆದಾಯವನ್ನು ಅವಲಂಬಿಸಿದೆ. ಭಾರತದ ಪರಿಸ್ಥಿತಿಯಲ್ಲಿ ಈ ವ್ಯಕ್ತಿಯಿಂದ ವ್ಯಕ್ತಿಗೆ ಇರುವ ಆದಾಯ-ಆಸ್ತಿಯ ಪ್ರಮಾಣದ ಅಂತರ ಅತಿ ಹೆಚ್ಚು ಇದೆ. ಕಳೆದ 20 ವರ್ಷಗಳಿಂದ ಆದ ಸರ್ಕಾರದ ನಿಯಮಗಳು ಈ ಅಂತರವನ್ನು ಹೆಚ್ಚು ಮಾಡುವಲ್ಲಿ ಗಣನೀಯ ಪಾತ್ರವಹಿಸಿವೆ. 2011ರ ಗಣತಿಯ ಪ್ರಕಾರ ನಗರ ಪ್ರದೇಶದ 30 ಲಕ್ಷ ಜನಸಂಖ್ಯೆಯೂ ಸೇರಿದಂತೆ ಭಾರತದ ಸುಮಾರು 4 ಕೋಟಿ ಜನರಿಗೆ ವಿದ್ಯುಚ್ಛಕ್ತಿ ಸೌಲಭ್ಯಗಳಿಲ್ಲ. ಅಂದರೆ, ಮೇಲೆ ಹೆಸರಿಸಿದ ಯಾವ ಪರಿಕರಗಳೂ ಇಲ್ಲ, ವಿದ್ಯುಚ್ಛಕ್ತಿಯ ಸರಬರಾಜು ಇಲ್ಲ. ಶಕ್ತಿಕೇಂದ್ರವಾದ ದೆಹಲಿಯಲ್ಲಿ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಒಂದು ಕುಟುಂಬ ಎಷ್ಟು ಇಂಗಾಲಾಮ್ಲವನ್ನು ಕಕ್ಕುತ್ತದೆ. ಮಧ್ಯಮವರ್ಗದ ಕುಟುಂಬದ ಒಬ್ಬ ಸದಸ್ಯ ವರ್ಷಕ್ಕೆ 4-5 ಟನ್ ಇಂಗಾಲಾಮ್ಲವನ್ನು ಹೊರಹಾಕುತ್ತಾನೆ. ಶ್ರೀಮಂತರು ಇನ್ನೂ ಹೆಚ್ಚು ಅಂದರೆ ಮುಂದುವರೆದ ಪಾಶ್ಚ್ಯಾತ್ಯ ರಾಷ್ಟ್ರಗಳ ವ್ಯಕ್ತಿಯ ಸರಾಸರಿಯಷ್ಟು. ಅದೇ ಕಾರ್ಖಾನೆಯಲ್ಲಿ ಕೆಲಸಮಾಡುವವರೋ ಅಥವಾ ಸೆಕ್ಯುರಿಟಿಯಾಗಿ ಕೆಲಸ ಮಾಡುವ ತಿಂಗಳಿಗೆ 5-7 ಸಾವಿರ ಸಂಬಳ ಪಡೆಯುವ, ಅಥವಾ ಕೃಷಿಯಿಂದ ಬರುವ ಇನ್ನೂ ಕಡಿಮೆ ಆದಾಯವನ್ನು ನಂಬಿಕೊಂಡು ಇರುವ ಕುಟುಂಬಗಳು ಎಷ್ಟು ಇಂಗಾಲಾಮ್ಲವನ್ನು ಕಕ್ಕುತ್ತಾರೆ?. ಇಲ್ಲೊಂದು ಗಣಿತವಿದೆ. ಭಾರತದ ತಲಾವಾರು ಸರಾಸರಿ ಇಂಗಾಲಾಮ್ಮ ತ್ಯಾಜ್ಯದ ಪ್ರಮಾಣ ಅಭಿವೃದ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ಕಡಿಮೆ ಇದೆ. ಇದನ್ನು ಇಲ್ಲಿನ ಸರ್ಕಾರಗಳು ಎತ್ತಿ ಹೇಳುತ್ತವೆ. ಭಾರತದ ಯೋಜನಾ ಆಯೋಗದ ವರದಿಯಂತೆ ದೇಶದ 8 ಕೋಟಿ ಜನರ ದಿನದ ಆದಾಯ 20 ರೂಪಾಯಿಗಳಿಗಿಂತ ಕಡಿಮೆ. ಪ್ರಪಂಚದ ದೃಷ್ಟಿಯಲ್ಲಿ ಭಾರತದ ತಲಾವಾರು ಇಂಗಾಲಾಮ್ಲದ ತ್ಯಾಜ್ಯದ ಪ್ರಮಾಣ ಕಡಿಮೆಯಿದೆ ಎಂಬುದನ್ನು ಬಿಂಬಿಸಿ ಇಲ್ಲಿನ ಸರ್ಕಾರಗಳು ಭೂಬಿಸಿಯೇರಿಕೆ ಕುರಿತು ನಿರ್ಲಕ್ಷ್ಯರಾಗಿ ವರ್ತಿಸುತ್ತಿದ್ದಾರೆ. ಭಾರತದ ಒಳಗಿನ ಪರಿಸ್ಥಿತಿಯ ಅವಲೋಕನ ಇವರಿಗೆ ವಜ್ರ್ಯ. ಶ್ರೀಮಂತರು ಕಕ್ಕುವ ಇಂಗಾಲಾಮ್ಲದ ಪ್ರಮಾಣವನ್ನು ಬಡವರ ತಲೆ ಮೇಲೆ ಹೊರಿಸಿ ಶೋಷಣೆ ಮಾಡಲಾಗುತ್ತಿದೆ ಎಂಬುದು ಅಷ್ಟು ಸುಲಭವಾಗಿ ಅರ್ಥವಾಗದು. 20 ರೂಪಾಯಿಗಳಿಗಿಂತ ಕಡಿಮೆ ಸಂಬಳಕ್ಕೆ ದುಡಿಯುವ ಕೈಗಳಿಗೆ ಸೂಕ್ತ ಕೆಲಸ-ಸಂಬಳ ಸಿಗುವಂತೆ ಮಾಡುವ ಮಂತ್ರದಂಡ ಇಲ್ಲವೆ? ಹಾಗೆಯೇ ಈ 8 ಕೋಟಿ ಜನರ ಬದುಕನ್ನು ಸಹ್ಯ ಮಾಡುವಷ್ಟು ಮೇಲೆತ್ತ ಬೇಕಾದ ಜವಾಬ್ದಾರಿ ಇರುವುದು ಯಾರ ಮೇಲೆ? ಇವರ ಬದುಕು ಮತ್ತು ಜೀವನ ಮಟ್ಟ ಸುಧಾರಿಸಿದರೆ, ಉಳ್ಳವರ ಇಂಗಾಲಾಮ್ಲದ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಿಸುವ ಜವಾಬ್ದಾರಿ ಹೊರಬೇಕಾಗುತ್ತದೆ. ಇದು ಆಳುವವರಿಗೆ ಇಷ್ಟವಿಲ್ಲ.
ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳ ಕುರಿತು ಚರ್ಚೆ ಮಾಡುವ ಮೊದಲು ಕೆಲವು ಸಂಗತಿಗಳ ಬಗ್ಗೆ ಗಮನ ಹರಿಸುವುದು ಸೂಕ್ತ. ತಾಪಮಾನ ಏರಿಕೆಯ ಪರಿಣಾಮಗಳು ಸುಮಾರು 35-40 ವರ್ಷಗಳ ಹಿಂದಿನಿಂದಲೇ ಪ್ರಾರಂಭವಾಗಿತ್ತು ಎಂಬುದು ತಜ್ಞರ ಅಭಿಪ್ರಾಯ. ಅಮೆರಿಕಾದಲ್ಲಿ ಪಳೆಯುಳಿಕೆ ಇಂಧನಗಳ ಬಳಕೆ ಹೆಚ್ಚಾದಂತೆ, ಅದರ ಪರಿಣಾಮ ಗೊತ್ತಾಗುವುದು ಮಾಲ್ಡೀವ್ಸ್‍ನಲ್ಲಿ. ವಾತಾವರಣಕ್ಕೆ ಸೇರಿದ ಇಂಗಾಲಾಮ್ಲ ಸಾವಿರಾರು ವರ್ಷ ಕರಗದೇ ಅಲ್ಲೇ ಸುತ್ತುತ್ತಿರುತ್ತದೆ. ಪ್ರತಿನಿತ್ಯ ಈಗಾಗಲೇ ಸೇರ್ಪಡೆಯಾದ ಪ್ರಮಾಣಕ್ಕೆ ಇನ್ನಷ್ಟು-ಮತ್ತಷ್ಟು ಸಿತ್ಯಾಜ್ಯ (ಬಳಕೆಗೆ ಮತ್ತು ಓದಿಗೆ ಸುಲಭವಾಗಲಿ ಎಂದು ಸಿಓಟು ಅಥವಾ ಇಂಗಾಲಾಮ್ಲಕ್ಕೆ – ಸಿತ್ಯಾಜ್ಯವೆಂದು ಇಟ್ಟುಕೊಳ್ಳೋಣ) ಸೇರ್ಪಡೆಯಾಗುತ್ತದೆ. ಹಾಗೂ ಇದರ ಪರಿಣಾಮ ಸಿತ್ಯಾಜ್ಯ ವಾತಾವರಣಕ್ಕೆ ಸೇರುವ ಪ್ರಮಾಣವನ್ನು ಶೂನ್ಯಕ್ಕೆ ತಂದು ನಿಲ್ಲಿಸಿದರೂ, ಸಿತ್ಯಾಜ್ಯದ ದುಷ್ಪರಿಣಾಮ ಮುಂದುವರೆಯುತ್ತಲೇ ಇರುತ್ತದೆ ಹಾಗೂ ಪ್ರತಿದಿನ ಸಿತ್ಯಾಜ್ಯದ ಸೂಚ್ಯಂಕದ ಗರಿಷ್ಟ ಪ್ರಮಾಣದ ಮಿತಿಯನ್ನು ಏರಿಸುತ್ತಲೇ ಇರಬೇಕಾಗುತ್ತದೆ.
ವಿಷಯ ಸ್ವಲ್ಪ ಸರಳವಾಗಿ ಅರ್ಥವಾಗುವಂತೆ ಹೇಳುವುದಾದರೆ, ನಮ್ಮದೇ ದೇಹಕ್ಕೆ ಭೂಮಿಯನ್ನು ಹೋಲಿಸಿಕೊಳ್ಳೋಣ. ಆಧುನಿಕ ವೈದ್ಯಶಾಸ್ತ್ರದ ಪ್ರಕಾರ ಆರೋಗ್ಯವಂತ ಮನುಷ್ಯನ ದೇಹದ ಉಷ್ಣಾಂಶ 97 ರಿಂದ 99 ಡಿಗ್ರಿ ಫ್ಯಾರನ್ ಹೀಟ್. ಲೆಕ್ಕಕ್ಕೆ ಸರಿಯಾಗಲಿ ಎಂದು ಮಧ್ಯದಲ್ಲಿ ಚುಕ್ಕಿ ಹಾಕಿಲ್ಲ. 99ಕ್ಕಿಂತ ಹೆಚ್ಚಾದರೆ ಜ್ವರ ಎಂದು ಪರಿಗಣಿಸಲಾಗುತ್ತದೆ. ದೇಹಕ್ಕೆ ಸ್ವಲ್ಪ ವಿಶ್ರಾಂತಿ ನೀಡುವುದರಿಂದ, ತಣ್ಣೀರು ಬಟ್ಟೆ ಹಾಕುವುದರಿಂದ ಜ್ವರ ಕಡಿಮೆಯಾಗಬಹುದು. ಹಾಗೆಯೇ 100 ದಾಟಿ 101, 102 ದಾಟಿದಾಗ ಮನುಷ್ಯ ಸುಸ್ತಾಗುತ್ತಾನೆ, ನಿಶ್ಯಕ್ತಿಯಿಂದ ಬಳಲುತ್ತಾನೆ. ಏಳುವುದಕ್ಕೆ ಆಗುವುದಿಲ್ಲ ಇತ್ಯಾದಿಗಳು. ಇದು 104 ಡಿಗ್ರಿಗೆ ಬಂದರೆ ಹೈಪೋಥರ್ಮಿಯಾ ಎಂದು ಕರೆಯಲಾಗುತ್ತದೆ. ಈಗ ತುರ್ತುಸ್ಥಿತಿ ಉಂಟಾಗಿದೆ ಎನ್ನಲಡ್ಡಿಯಿಲ್ಲ. ಸೂಕ್ತ ಚಿಕಿತ್ಸೆಯಿಲ್ಲದಿದ್ದರೆ, ವ್ಯಕ್ತಿ ಮರಣ ಹೊಂದಬಹುದು. ಹೀಗೆ ಜ್ವರ ಬಂದಾಗ ನಮ್ಮ ದೇಹದ ಎಲ್ಲಾ ಅಂಗಾಂಗಗಳೂ ಏರುಪೇರಾಗುತ್ತವೆ. ಯಾವ ಅಂಗವೂ ಸರಿಯಾಗಿ ಕೆಲಸ ಮಾಡುವುದಿಲ್ಲ. ಹಾಗೆಯೇ ಜ್ವರ ಬರುವುದಕ್ಕೆ ನಾನಾ ಕಾರಣಗಳಿವೆ. ಚಿಕಿತ್ಸೆ ನೀಡುವುದಕ್ಕೆ ಪೂರ್ವದಲ್ಲಿ ಕಾರಣಗಳನ್ನು ತಿಳಿಯುವುದು ಅಗತ್ಯ. ಆಧುನಿಕ ಯುಗದ ನಾನಾ ಯಂತ್ರಗಳು ಕಾರಣಗಳನ್ನು ಕಂಡು ಹಿಡಿಯುತ್ತವೆ. ವೈದ್ಯರು ಚಿಕಿತ್ಸೆ ನೀಡಿ ಗುಣ ಮಾಡುತ್ತಾರೆ. ರೋಗಿಯ ಕತೆ ಸುಖಾಂತ್ಯವಾಗುತ್ತದೆ.
ಹಾಗೆಯೇ, ಭೂಜ್ವರಕ್ಕೆ ಕಾರಣವೇನು ಎಂಬುದು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಗೊತ್ತಾಗಿದೆ. ಯಾವ ವೈರಾಣುವಿನಿಂದ ಜ್ವರ ಬಂದಿದೆ ಎಂದು ಕೂಡಾ ತಿಳಿದಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ಏನು ಎಂಬುದು ಗೊತ್ತಿದೆ. ದುರದೃಷ್ಟವೆಂದರೆ, ಭೂತಾಯಿಯ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡುವ ಬದಲಿಗೆ, ಜ್ವರ ಹೆಚ್ಚಾಗುವಂತೆ ಮಾಡುತ್ತಿರುವುದೇ ಆಧುನಿಕ ವೈರಾಣುವಿನ ಹೆಗ್ಗಳಿಕೆಯಾಗಿದೆ. ಹಾಗೂ ಖುದ್ದು ರೋಗವೇ ಚಿಕಿತ್ಸೆ ನೀಡಬೇಕಾದ ವಿಲಕ್ಷಣ ಪರಿಸ್ಥಿತಿಯಿದು. ಇದು ಹೇಗೆ ಎಂಬುದನ್ನು ಮುಂದೆ ನೋಡೋಣ.
(ಮುಂದುವರೆಯುವುದು)
******
[…] ಇಲ್ಲಿಯವರೆಗೆ […]