ಶ್ರೀ ನಾಗರಾಜ್ ಅಡ್ವೆಯವರು ಇಡೀ ಭಾರತವನ್ನು ಸುತ್ತಾಡಿ, ಹವಾಮಾನ ಬದಲಾವಣೆಯಿಂದಾದ ವ್ಯತ್ಯಾಸಗಳನ್ನು ಗುರುತಿಸಿ, ದಾಖಲಿಸಿದ್ದಾರೆ. ಇದೇ ವರ್ಷದ ಡಿಸೆಂಬರ್‍ನಲ್ಲಿ ಪ್ಯಾರೀಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದ ಹೊತ್ತಿನಲ್ಲಿ, ಈ ಮಾಹಿತಿಗಳು ಅತ್ಯಂತ ಮಹತ್ವ್ತಪೂರ್ಣವೆನಿಸುತ್ತದೆಯಾದ್ದರಿಂದ ಇಲ್ಲಿ ಅವರು ಬರೆದ ಕಿರುಪುಸ್ತಕದ ಭಾವಾನುವಾದವನ್ನು ನೀಡಲಾಗಿದೆ.
ಗುಜರಾತಿನಲ್ಲಿ ಏನು ಹೇಳಿದರು?
ಮೂರು ವರ್ಷಗಳ ಹಿಂದೆ ಪೂರ್ವ ಗುಜರಾತಿ ಮೆಕ್ಕೆಜೋಳ ಬೆಳೆಯುವ ರೈತರನ್ನು ಮಾತನಾಡಿಸಲಾಯಿತು. ಕೆಲವು ವರ್ಷಗಳಿಂದ ಬಿಸಿಯಾಗುತ್ತಿರುವ ಚಳಿಗಾಲದಿಂದಾಗಿ, ಅಲ್ಲಿ ಇಬ್ಬನಿ ಬೀಳುವುದು ತೀವ್ರವಾಗಿ ಕಡಿಮೆಯಾಗಿದೆ. ಅತ್ಯಂತ ಕಡಿಮೆ ನೀರು ಬೇಡುವ ಮೆಕ್ಕೆಜೋಳ ಚಳಿಗಾಲದ ರಾತ್ರಿಯಲ್ಲಿ ಸುರಿಯುವ ಇಬ್ಬನಿಯನ್ನು ಹೀರಿಕೊಂಡು ಬೆಳೆಯುತ್ತದೆ. ಅತ್ಯಂತ ಕಡಿಮೆ ಜಮೀನು ಹೊಂದಿರುವ ಮೆಕ್ಕೆಜೋಳ ಬೆಳೆಯುವ ರೈತರು ಸ್ವಾಭಾವಿಕವಾಗಿ ಬಡವರು. ಹಿಂದೆಲ್ಲಾ ಸುರಿಯುತ್ತಿದ್ದ ಇಬ್ಬನಿಯ ಪ್ರಮಾಣವನ್ನು ಕಡಿಮೆ ಆಗುತ್ತಾ ಹೋಯಿತು. ಈಗ ಕಳೆದ ಮೂರು ವರ್ಷಗಳಿಂದ ನಿಂತೇ ಹೋಗಿದೆ. ಇಬ್ಬನಿಯ ತೇವಾಂಶವನ್ನೇ ನೆಚ್ಚಿಕೊಂಡ ರೈತರೀಗ ಕೃಷಿ ಕಸುಬನ್ನು ತೊರೆದು ಪೇಟೆ-ಪಟ್ಟಣದ ಕಡೆಗೆ ಮುಖ ಮಾಡಿದ್ದಾರೆ. ಹಾಗೆಯೇ ಬಿತ್ತನೆ ಕಾಲದಲ್ಲಿ ಸುರಿಯ ಬೇಕಾದ ಮಳೆ ಕೊಯಿಲಿನ ಸಮಯದಲ್ಲಿ ಸುರಿಯುತ್ತದೆ. ಜಾನುವಾರುಗಳಿಗೂ ಮೇವಿನ ಅಭಾವವಾಗಿದೆ. ಹವಾಮಾನ ಬದಲಾವಣೆಯಿಂದ ಹೊಸ ಹೊಸ ಕಾಯಿಲೆಗಳು ಅಮರಿಕೊಳ್ಳುತ್ತಿವೆ. ಕೀಟಭಾದೆಯು ಹೆಚ್ಚುತ್ತಿದೆ. ಈ ಬದಲಾವಣೆಯ ಕುರಿತು ರೈತರನ್ನು ಕೇಳಿದರೆ “ಎಲ್ಲಾ ಆ ಪ್ರಕೃತಿಯ ಆಟ” ಎಂದು ಮುಗಿಲು ನೋಡುತ್ತಾರೆ. ಹವಾಮಾನ ಬದಲಾವಣೆ ಎನ್ನುವುದು ಮಾನವ ನಿರ್ಮಿತವಾದದು ಹಾಗೂ ಇದು ಪ್ರಕೃತಿಯ ಋತುಮಾನಗಳನ್ನೇ ಬದಲಿಸುವಷ್ಟು ಶಕ್ತಿಯುತವಾಗಿದೆ ಎಂದು ಅವರು ಕನಸಿನಲ್ಲಿಯೂ ಯೋಚಿಸಿಲ್ಲ.
ಹೌದು. ಯಾವಾಗ ಕಲ್ಲಿದ್ದಲು ಹಾಗೂ ತೈಲ ನವಜನಾಂಗದ ಅನಿವಾರ್ಯವಾಯಿತೋ, 250 ವರ್ಷಗಳಿಂದೀಚೆ ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚುತ್ತಾ ಹೋಯಿತು. ನಾವು ಉಸಿರಾಡುವ ಆಮ್ಲಜನಕವನ್ನು ಹೋಲುವ ಇಂಗಾಲಾಮ್ಲವೂ ಕೂಡ ಕಣ್ಣಿಗೆ ಗೋಚರಿಸುವುದಿಲ್ಲ ಅಥವಾ ಅದಕ್ಕೆ ಯಾವುದೇ ವಾಸನೆಯಿರುವುದಿಲ್ಲ. ಮಿಥೇನ್ ಮತ್ತು ನೈಟ್ರಸ್ ಆಕ್ಷೈಡ್‍ನಂತೆ ಸೂರ್ಯನಿಂದ ಬಂದ ಶಾಖವನ್ನು ಮತ್ತೆ ವಾಪಾಸು ಹೋಗದಂತೆ ತಡೆಯುವ ಗುಣವೂ ಇಂಗಾಲಾಮ್ಲಕ್ಕಿದೆ. ಹಾಗೂ ಸಾವಿರಾರು ವರ್ಷಗಳ ಕಾಲ ಕರಗದೇ ವಾತಾವರಣದಲ್ಲೇ ಇರುವಂತಹ ದುರ್ಗುಣವೂ ಇದಕ್ಕಿದೆ. ಆದ್ದರಿಂದಲೇ ಇಂಗಾಲಾಮ್ಲವನ್ನೇ ಗುರಿಯಾಗಿಟ್ಟುಕೊಂಡು ಇಲ್ಲಿ ಚರ್ಚಿಸಲಾಗಿದೆ.
ಹಾಗಂತ ಇಂಗಾಲಾಮ್ಲವನ್ನು ಒಂದು ಶತ್ರುವಿನಂತೆ ಕಾಣುವುದೂ ಸಲ್ಲ. ಈ ಭೂಮಿಯ ಮೇಲೆ ಜೀವ ಅರಳಲು ಮುಖ್ಯ ಕಾರಣವೆಂಬ ಹೆಗ್ಗಳಿಕೆಯೂ ಇದಕ್ಕಿದೆ. ಇಂಗಾಲಾಮ್ಲವಿಲ್ಲದೆ ಈ ಭೂಮಿ ವಾಸಯೋಗ್ಯವಾಗುತ್ತಿರಲೇ ಇಲ್ಲ. ಅದರಲ್ಲೂ ಮನುಷ್ಯ ಜೀವಿ ಬದುಕಲು ಸಾಧ್ಯವಾಗುತ್ತಿರಲಿಲ್ಲ. ನೈಸರ್ಗಿಕವಾಗಿ ವಾತಾವರಣದಲ್ಲಿ ಇಂಗಾಲಾಮ್ಲ ಇರುವುದರಿಂದಲೇ ಕೃಷಿಯೆಂಬ ವಿಜ್ಞಾನ ಅರಳಲು ಸಾಧ್ಯವಾಗಿ, ನಾಗರೀಕ ಜಗತ್ತು ಬೆಳೆಯಿತು. ಆದರೆ, ಇದೀಗ ನಾವೇನು ಮಾಡುತ್ತಿದ್ದೇವೆ ಎಂದರೆ, ವಾತಾವರಣದಲ್ಲಿ ಮೊದಲೇ ಇದ್ದ ಇಂಗಾಲಾಮ್ಲಕ್ಕೆ ಮತ್ತಿಷ್ಟು, ಇನ್ನಷ್ಟು ಇಂಗಾಲಾಮ್ಲವನ್ನು ಸೇರ್ಪಡೆ ಮಾಡುತ್ತಿದ್ದೇವೆ. ಭೂಗರ್ಭದಲ್ಲಿ ಅವಿತಿರುವ ಇಂಗಾಲಾಮ್ಲವನ್ನು ಹೊರಗೆ ತೆಗೆದು ಅದನ್ನು ಸುಡುತ್ತೇವೆ. ತೈಲ ರೂಪದಲ್ಲಿರುವ ಇಂಗಾಲಾಮ್ಲದಿಂದ ನಮ್ಮ ದ್ವಿಚಕ್ರ-ತ್ರಿಚಕ್ರ-ಚತುಷ್ಕಕ್ರಗಳೂ, ರೈಲುಗಳೂ, ವಿಮಾನಗಳು ಚಲಿಸುತ್ತವೆ. ಕಾರ್ಖಾನೆಗಳಿಗೆ ಬೇಕಾದ ವಿದ್ಯುಚ್ಛಕ್ತಿಗಾಗಿ, ಸರಕು ಸಾಗಾಣಿಕೆಗಾಗಿ ಹಾಗೂ ಯುದ್ಧಕ್ಕಾಗಿಯೂ ಇಂಗಾಲಾಮ್ಲ ವಾತಾವರಣಕ್ಕೆ ಸೇರುತ್ತಿದೆ. ಇದರಲ್ಲಿ ಕೆಲವು ಅಗತ್ಯವಿರುವ ಕಾರ್ಯಗಳಾದರೆ, ಇನ್ನೂ ಹಲವು ಅನಗತ್ಯವಾಗಿ ನಡೆಯುವಂತಹ ಕಾರ್ಯಗಳಾಗಿವೆ. ಪ್ರಪಂಚದ ನಾಗರೀಕ ಸಮಾಜ ಹೀಗೆ ಅನಗತ್ಯವಾಗಿ 2011ರಲ್ಲಿ 32 ಬಿಲಿಯನ್ ಟನ್ ಇಂಗಾಲಾಮ್ಲವನ್ನು ವಾತಾವರಣಕ್ಕೆ ಸೇರಿಸಿದೆ. ಅರಣ್ಯ ನಾಶದಿಂದ ಮತ್ತೆ 4 ಬಿಲಿಯನ್ ಟನ್ ಇಂಗಾಲಾಮ್ಲ ವಾತಾವರಣಕ್ಕೆ ಸೇರಿದ. ಇದರಲ್ಲಿ ಕಾಲಂಶವನ್ನು ಸಮುದ್ರ ಹೀರಿಕೊಂಡು ಇನ್ನೂ ಹೆಚ್ಚು ಆಮ್ಲೀಯವಾಗಿದ್ದರೆ, ಇನ್ನು ಕಾಲಂಶ ಅಳಿದುಳಿದ ಕಾಡುಗಳು ಹೀರಿಕೊಂಡಿವೆ. ಉಳಿದರ್ದ ವಾತಾವರಣದಲ್ಲೇ ಇದೆ. ವಿಜ್ಞಾನಿಗಳ ಪ್ರಕಾರ ಹೆಚ್ಚೂ-ಕಡಿಮೆ 8 ಬಿಲಿಯನ್ ಟನ್ ಇಂಗಾಲಾಮ್ಲವೂ 1 ಪಿ.ಪಿ.ಎಮ್.ಗೆ ಸಮನಾಗಿದೆ (1 ಪಾರ್ಟ್ ಪರ್ ಮಿಲಿಯನ್). ಹೀಗೆ 9ನೇ ಮೇ 2013ರಂದು ವಾತಾವರಣದಲ್ಲಿನ ಇಂಗಾಲಾಮ್ಲದ ಮಟ್ಟ 400ಕ್ಕೆ ತಲುಪಿತು. ಹಾಗಂತ ಈ ಭೂಮಿಯ ಜನನದ ನಂತರದ ಮೊಟ್ಟ ಮೊದಲಿಗೆ ಈ ಮಟ್ಟ ತಲುಪಿದೆ ಎನ್ನುವ ಹಾಗಿಲ್ಲ, 4 ಲಕ್ಷ ವರ್ಷಗಳ ಹಿಂದೆಯೂ ಇಂಗಾಲಾಮ್ಲ 400 ಪಿ.ಪಿ.ಎಮ್. ತಲುಪಿತ್ತು. ಒಮ್ಮೆ ಬಿಡುಗಡೆಯಾಗುವ ಇಂಗಾಲಾಮ್ಲ ಒಂದು ವರ್ಷದಲ್ಲಿ ಭೂಮಿಯ ವಾತಾವರಣದಲ್ಲಿ ಲೀನವಾಗಿ ಇಡೀ ಪ್ರಪಂಚದ ಎಲ್ಲೆಡೆ ಹರಡುತ್ತದೆ. ಮೇಲೆ ಹೇಳಿದಂತೆ ಈ ಅನಿಲ ವಿಘಟನೆಯಾಗಲು ಸಾವಿರಾರು ವರ್ಷಗಳು ಬೇಕಾಗುತ್ತದೆ. ಹೀಗೆ ಪ್ರತಿವರ್ಷ ವಾತಾವರಣಕ್ಕೆ ಸೇರುವ ಇಂಗಾಲಾಮ್ಲ ದಿನೇ ದಿನೇ ತನ್ನ ದಪ್ಪವನ್ನು ಹೆಚ್ಚಿಕೊಳ್ಳುತ್ತಿದೆ. ಇಡೀ ಭೂಮಿಗೆ ಶಾಲು ಹೊದಿಸಿದಂತೆ ಆಗುತ್ತದೆ. ಪ್ರತಿ ವರ್ಷ ಒಂದೊಂದು ಶಾಲು. ಹಾಗಂತ ಯಾವುದೇ ಶಾಲು ಅಥವಾ ರಜಾಯಿ ತನ್ನಷ್ಟಕ್ಕೆ ತಾನೆ ಬಿಸಿಯಾಗುವ ಗುಣ ಹೊಂದಿರುವುದಿಲ್ಲ. ನೀವು ಹೊದ್ದುಕೊಳ್ಳುವ ರಜಾಯಿ ನಿಮ್ಮ ಮೈ ಶಾಖವನ್ನು ಆಚೆ ಹೋಗದಂತೆ ತಡೆದು ಬೆಚ್ಚಗಿಡುತ್ತದೆ. ರಜಾಯಿಯ ದಪ್ಪ ಹೆಚ್ಚಾದಂತೆ ಅದರ ಬಿಸಿಶೇಖರಣಾ ಸಾಮಥ್ರ್ಯವೂ ಹೆಚ್ಚಾಗುತ್ತದೆ. ವಾತಾವರಣದಲ್ಲಿನ ಇಂಗಾಲಾಮ್ಲವೂ ಕೂಡ ಹೀಗೆ ವರ್ತಿಸುತ್ತದೆ. ಇದನ್ನೇ ವಾತಾವರಣದಲ್ಲಿನ ಬಿಸಿಯೇರಿಕೆ ಅಥವಾ ಗ್ಲೋಬಲ್ ವಾರ್ಮಿಂಗ್ ಎನ್ನಲಾಗುತ್ತದೆ.
ಹಾಗಾದರೆ ಭಾರತದ ವಾತಾವರಣ ಎಷ್ಟು ಮಟ್ಟಿಗೆ ಹೆಚ್ಚು ಬಿಸಿಯಾಗಿದೆ? 1961-1990 ಅವಧಿಯಲ್ಲಿ ಭಾರತದ ಸರಾಸರಿ ಉಷ್ಣಾಂಶ 24.87 ಡಿಗ್ರಿ ಸೆಲಿಶಿಯಸ್ ಇತ್ತು. ಇದು 30 ವರ್ಷಗಳ ಸರಾಸರಿ ಉಷ್ಣಾಂಶವಾಗಿತ್ತು. ಅಂದರೆ ಕಾಶ್ಮೀರ, ಲಡಾಕ್ ಪ್ರದೇಶದಂತಹ ಶೀತ ಹಾಗೂ ಮಧ್ಯ ಭಾರತದ ಉಷ್ಣಪ್ರದೇಶದ ಒಟ್ಟೂ ಸರಾಸರಿ ಲೆಕ್ಕ. 21ನೇ ಶತಮಾನದ ಮೊದಲ ಹತ್ತು ವರ್ಷದಲ್ಲಿ, ಅಂದರೆ 2001ರಿಂದ 2010 ಅವಧಿಯಲ್ಲಿ ಸರಾಸರಿ ಉಷ್ಣಾಂಶ ಏರಿಕೆಯಾಗಿ 25.51 ಡಿಗ್ರಿ ಸೆಲಿಶಿಯಸ್‍ಗೆ ಏರಿದೆ. ವಾತಾವರಣದಲ್ಲಿ ಶೀತ ಹಾಗೂ ಉಷ್ಣದಲ್ಲಿ ಹೆಚ್ಚು-ಕಡಿಮೆಯಾಗುವುದು ಸಹಜವೇ ಆದರೂ, ಹೋಲಿಸಿದಾಗ 0.4 ಡಿಗ್ರಿ ಸೆಲಿಶಿಯಸ್‍ಗೆ ಇಳಿದ ವರ್ಷ ಅತ್ಯಂತ ಶೀತ ವರ್ಷವೆಂದು ಪರಿಗಣಿತವಾದರೆ, 0.93 ಡಿಗ್ರಿ ಸೆಲಿಶಿಯಸ್‍ನಷ್ಟು ಏರಿಕೆಯಾದ ವರ್ಷ ಉಷ್ಣವರ್ಷವೆಂದು ಪರಿಗಣಿತವಾಗಿದೆ ಮತ್ತು 1961ರಿಂದ ಯಾವ ವರ್ಷವೂ ಶೀತ ವರ್ಷ ಅಥವಾ ಋತುಮಾನವೆಂದು ಪರಿಗಣಿತವಾಗಿಲ್ಲ.
(ಮುಂದುವರೆಯುವುದು). . .
*****
One thought on “ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ: ಅಖಿಲೇಶ್ ಚಿಪ್ಪಳಿ”