ಸ್ನೇಹಿತರೇ ,
ಈ ಶೀರ್ಷಿಕೆ ಕೊಡಲು ಒಂದು ಮುಖ್ಯ ಉದ್ದೇಶವಿದೆ. ಭಾರತೀಯರಾದ ಮತ್ತು ದೇಶಭಕ್ತರಾದ ನಾವು ಕೆಲ ವಿಷಯಗಳಿಗೆ ಹೆದರುತ್ತೇವೆ ಮತ್ತು ಹೆದರುತ್ತಲೇ ಇರುತ್ತೇವೆ. ಆದರೆ ಅದು ಯಾರೋ ಏನೋ ಮಾಡುವರೆಂದು ಅಲ್ಲ ಅಥವಾ ಎಲ್ಲಿಂದಲೋ ಆಪತ್ತು ಬರುವುದು ಎಂದೂ ಅಲ್ಲ. ನಮ್ಮ ದೇಶದಲ್ಲಿರುವ ಕೆಲವು ಬೆಲೆಬಾಳುವ ವಸ್ತು ಅಥವಾ ಆ ಮಾಹಾನ್ ಶಕ್ತಿಗಳನ್ನು ಎಲ್ಲಿ ಕಳೆದು ಕೊಳ್ಳುತ್ತವೋ ಎನ್ನುವ ಭಯ ಅಷ್ಟೇ. ಅದನ್ನು ವಿವರವಾಗಿ ತಿಳಿಸುವುದಾದರೆ ಕೇವಲ ಒಂದು ಲೇಖನದಲ್ಲಿ ಆಗುವುದಿಲ್ಲ. ಆದರೆ ಸಾಧ್ಯವಾದಷ್ಟು ತಿಳಿಸಲು ಪ್ರಯತ್ನ ಪಡುತ್ತೇನೆ.
ಕೆಲ ದಶಕಗಳಿಂದ ಕ್ರೀಡೆಯ ಕ್ಷೇತ್ರದಲ್ಲಿ ಅದರಲ್ಲೂ ಕ್ರಿಕೆಟ್ ಎಂಬ ಕ್ರೀಡೆಯಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ, ಯಾರೂ ಮುರಿಯುವುದಕ್ಕೆ ಸಾಧ್ಯವಾಗದ ದಾಖಲೆಯನ್ನು ಸೃಷ್ಟಿಸಿ, ಅದೆಷ್ಟೋ ಪದಕಗಳನ್ನು, ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಸರದಾರ, ಅದೆಷ್ಟೋ ಯುವಜನತೆಯನ್ನು ತನ್ನ ತಾಳ್ಮೆಯ ಆಟದ ಪ್ರದರ್ಶನದಿಂದ ಕ್ರಿಕೆಟ್ ಕಡೆಗೆ ಗಮನ ಹರಿಸುವಂತೆ ಮಾಡಿದ, ಪ್ರಪಂಚದ ಅದೆಷ್ಟೋ ರಾಷ್ಟ್ರಗಳಿಗೆ ಬಾರತದ ಕ್ರೀಡಾ ಶಕ್ತಿಯನ್ನು ತೋರಿಸಿದ, ಕ್ರಿಕೆಟ್ ಎಂಬ ಆ ಲೋಕಕ್ಕೆ "ಗಾಡ್ ಆಫ್ ಕ್ರಿಕೆಟ್ " ಎಂದು ಕರೆಯಲ್ಪಡುವ ಆ ಮಹಾನುಭಾವನಾದ "ಸಚಿನ್ ತೆಂಡೂಲ್ಕರ್ " ಎನ್ನುವ ಶಕ್ತಿಯು ತನ್ನ ಅಂತರಾಷ್ಟಿಯ ಕ್ರಿಕೆಟ್ ಇಂದ ದೂರಸರಿಯುತ್ತಿರುವುದಕ್ಕೆ ನಮಗೆ ಕ್ರಿಕೆಟ್ ಬಗ್ಗೆ ಭಯವಿದೆ.
ಜಾಗತಿಕ ಮಟ್ಟದಲ್ಲಿ ಇನ್ಫರ್ಮೇಷನ್ ಟೆಕ್ನೋಲಜಿ ವಿಭಾಗದಲ್ಲಿ ಮೊದಲ ಹತ್ತು ದೇಶಗಳ ಸಾಲಿನಲ್ಲಿ ಯಾವಾಗಲೂ ತನ್ನ ಸ್ಥಾನವನ್ನು ಗಟ್ಟಿಯಾಗಿ ಇರಿಸಿಕೊಂಡು ಬರುತ್ತಿರುವ, ಮತ್ತು ಅದೆಷ್ಟೋ ಸಾವಿರ ಜನಗಳಿಗೆ ಉದ್ಯೋಗ ಕಲ್ಪಿಸಿ ಕೊಟ್ಟಿರುವ, ನಾವು ಈ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಯಾವ ರಾಷ್ಟ್ರಕ್ಕೂ ಕಮ್ಮಿ ಇಲ್ಲ ಎಂದು ಸಾಬೀತು ಪಡಿಸಿರುವ, ಸ್ವದೇಶಿ ಸಾಫ್ಟ್ ವೇರ್ ಕಂಪನಿಗಳು, ತಮ್ಮ ಸ್ಥಾನವನ್ನು ಪ್ರಗತಿಯತ್ತ ಸಾಗುವಂತೆ ಮಾಡುತ್ತಿರುವಾಗ ಈ ರೂಪಾಯಿ ಕುಸಿತದ ಪ್ರಭಾವ ಅದಕ್ಕೆ ಎಲ್ಲಿ ಅಡ್ಡಿ ಉಂಟು ಮಾಡುತ್ತದೋ ಎಂಬ ಭಯವಿದೆ .
ಪ್ರತಿದಿನ ಸೂರ್ಯ ಹುಟ್ಟುವ ಮುಂಚೆಯೇ ತಾನು ಎದ್ದು ತಾಯಿಯಂತೆ ಪೂಜಿಸುವ ಈ ಭೂಮಿತಾಯಿಯ ಮಡಿಲಲ್ಲಿ ತನ್ನ ವ್ಯವಸಾಯದ ಹೋರಾಟ ನಡೆಸುವ, ದೇಶದ ಬೆನ್ನೆಲುಬು ಆದ ನಮ್ಮ ರೈತ ತಾನು ಬೆಳೆಯುವ ಬೆಳೆಗೆ ಈ ಸರ್ಕಾರಗಳ ಇಂಪೋರ್ಟ್ ಅಂಡ್ ಎಕ್ಸ್ಪೋರ್ಟ್ ನೀತಿಯಿಂದ ಎಲ್ಲಿ ತನ್ನ ಕಷ್ಟಕ್ಕೆ ತಕ್ಕಂತೆ ಪ್ರತಿಫಲ ಪಡೆಯುವಲ್ಲಿ ವಿಫಲನಾಗುತ್ತನೋ ಎನ್ನುವ ಭಯವಿದೆ .
ನೂರಾರು ಕೋಟಿ ಬಂಡವಾಳ ಹೂಡಿ ನಾವು ಸಹ ಬೇರೆ ದೇಶಗಳ ಚಲನ ಚಿತ್ರಗಳ ಗ್ರಾಫಿಕ್ಸ್ ನ್ನು ಮಿಂಚುವ ಹಾಗೆ ನಮ್ಮ ಸ್ವದೇಶೀ ಸಿನಿಮಾಗಳಲ್ಲಿ ಗ್ರಾಫಿಕ್ಸ್ ನ್ನು ಉಪಯೋಗಿಸಿ ಅಂತರಾಷ್ಟಿಯ ಮಟ್ಟದಲ್ಲಿ ಹಾಲಿವುಡ್ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದೇವೆ . ಮತ್ತು ಅಂತಹ ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಆಯ್ಕೆ ಆಗುವ ಆ ಪಟ್ಟಿಯಲ್ಲಿ ಆ ಸ್ಥಾನ ಪಡೆದು ಕೊಳ್ಳುವಲ್ಲಿ ಎಲ್ಲಿ ಸೋಲುತ್ತದೆಯೊ ಎನ್ನುವ ಭಯವಿದೆ .
ಪ್ರಪಂಚದ ಅಗ್ರಮಾನ್ಯ ರಾಷ್ಟ್ರಗಳು ಬಾಹ್ಯಾಕಾಶ ಸಂಶೋದನೆಯಲ್ಲಿ ತಾವೇ ಮುಂದು ಎಂದು ಬೀಗುತ್ತಿದ್ದಾಗ ತಮ್ಮ ಬಾಯಿ ಮೇಲೆ ಬೆರೆಳು ಇಟ್ಟುಕೊಳ್ಳುವಂತೆ ಮಾಡಿದ ಇಸ್ಸ್ರೋ ವಿಜ್ಞಾನಿಗಳು ಅಂತಹ ಅಗ್ರಮಾನ್ಯ ರಾಷ್ಟ್ರಗಳ ಕೈಯಲ್ಲಿ ಮಾಡಲಾಗದ ಸಾದನೆಗಳನ್ನು ಅತಿ ಕಡಿಮೆ ಸಮಯದಲ್ಲಿ ಸಾಧಿಸಿ ತೋರಿಸಿ ಭಾರತದ ಕಡೆಗೆ ಎಲ್ಲಾ ರಾಷ್ಟ್ರಗಳು ತಿರಿಗಿ ನೋಡುವಂತೆ ಮಾಡಿದೆ. ಇಂತಹ ಮಹಾನ್ ಪ್ರಯತ್ನಗಳು ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪಬಾರದು ಎನ್ನುವ ಭಯವಿದೆ.
ದೇಶ ವಿದೇಶಗಳಿಂದ ನಮ್ಮ ಭಾರತಕ್ಕೆ ಬರುತ್ತಿರುವ ಸಾವಿರಾರು ಪ್ರವಾಸಿಗರು ಭಾರತದ ಸಂಸ್ಕೃತಿಯನ್ನು ನೋಡಿ ತಾವು ಸಹ ನಮ್ಮ ದೇಶದ ಸಂಸ್ಕ್ರತಿಗೆ ಮಾರುಹೋಗಿ ಇಲ್ಲೇ ನೆಲಸಿರುವ ಉದಾಹರಣೆಗಳು ಉಂಟು. ಬಂದ ಪ್ರವಾಸಿಗರು ನಮ್ಮ ದೇಶದ ಪುರಾತನ ದೇವಸ್ಥಾನಗಳನ್ನು, ಅಲ್ಲಿರುವ ಶಿಲ್ಪಕಲೆಗಳನ್ನು ನೋಡಿ ಅದರ ಬಗ್ಗೆ ಸಂಶೋದನೆಗಳನ್ನು ಮಾಡಲು ಮುಂದಾಗುತ್ತಾರೆ ಮತ್ತು ನಮ್ಮ ನೆಲೆಯ ಸಂಸ್ಕೃತಿ ಬಗ್ಗೆ ತಾವು ಗೌರವ ಪಡುತ್ತಾರೆ. ಇಂತಹ ಪುರಾತನ ಕಲೆಗಳನ್ನು ಎಲ್ಲಿ ಆದುನಿಕ ಬದಲಾವಣೆಗಳಲ್ಲಿ ಅಥವಾ ಭಯೋತ್ಪಾದಕರ ಕಣ್ಣಿಗೆ ಗುರಿಯಾಗಿ ಹಾಳಾಗುತ್ತದೋ ಎನ್ನುವ ಭಯವಿದೆ. ಹೀಗೆ ಹೇಳುತ್ತಾ ಹೋದರೆ ಸಾವಿರಾರು ಉದಾಹರಣೆಗಳು ಎಲ್ಲರ ಕಣ್ಣ ಮುಂದೆ ಹಾದು ಹೋಗುತ್ತವೆ.
ಆದರೆ ಇದೇ ಭಯ ಎಲ್ಲದರಲ್ಲಿಲ್ಲ .. ಯಾವುದೋ ದೇಶ ನಮಗೆ ಕೊಡುವ ಕಾರಣವಿಲ್ಲದ ತೊಂದರೆ ಇಂದ ನಮಗೆ ಭಯವಿಲ್ಲ. ನಮ್ಮ ದೇಶದ ಗಡಿಗಳಲ್ಲಿ ನೆರೆ ದೇಶದವರು "ಲೈನ್ ಆಫ್ ಕಂಟ್ರೋಲ್" ನ್ನು ಮೀರಿ ಮತ್ತು ಯುದ್ದ ವಿರಾಮ ನೀತಿಯನ್ನು ಉಲ್ಲಂಘನೆ ಮಾಡಿ ನಮ್ಮ ದೇಶದ ಸೈನಿಕರ ತಲೆಯನ್ನು ಕಡಿದ ಕ್ಷಣ ನಮಗೆ ಭಯ ಆಗಲಿಲ್ಲ. ಬದಲಾಗಿ ನಮ್ಮ ದೇಶದ ರಾಜಕೀಯದ ನೀತಿಯನ್ನು ನೋಡಿ ನಾಚಿಕಯಿಂದ ತಲೆ ಬಗ್ಗಿಸುವಂತಾಯಿತು. ಕಾಲು ಕೆರೆದು ಜಗಳಕ್ಕೆ ಬರುವ ಅಂತಹ ಜನರಿಗೆ ಯಾಕೆ ಈ ಕ್ಷಮಾದಾನ ಎಂದು ಕಣ್ಣೀರು ಇಡುವಂತಾಯಿತು. ಯಾವುದೇ ಕ್ಷೇತ್ರದಲ್ಲಿ ಆ ರಾಷ್ಟ್ರಕ್ಕಿಂತ ಕಡಿಮೆ ಇಲ್ಲದಂತ ನಾವು ಯಾಕೇ ಕೈ ಕಟ್ಟಿ ಕೂಡುವಂತಾಯಿತು. ನಮಗೆ ನಾವು ವೀರ ಭಾರತೀಯರು ಎನ್ನುವ ಅಪಾರವಾದ ಹೆಮ್ಮೆ ಇದೆ. ನಾವು ಉದ್ದೇಶಪೂರ್ವಕವಾಗಿ ಜಗಳಕ್ಕೆ ಬರುವ ಅಂತಹ ದೇಶಗಳಿಗೆ ತಕ್ಕ ಪಾಠ ಕಲಿಸಿವುವಲ್ಲಿ ಭಾರತಕ್ಕೆ ಕಿಂಚಿತ್ತು ಭಯಪಡುವ ಅಗತ್ಯವಿಲ್ಲ ಎನ್ನುವ ದೈರ್ಯ ಎಲ್ಲಾ ಪ್ರಜ್ಞಾವಂತ ಭಾರತೀಯನಿಗೆ ಇದೆ. ಇನ್ನು ಮುಂದೆಯಾದರೂ ಭಾರತೀಯರಾದ ನಾವು ಇಂತಹ ರಾಷ್ಟ್ರಗಳಿಗೆ ಪಾಠ ಕಲಿಸುವಲ್ಲಿ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ .
*****
ಚೆನ್ನಾಗಿದೆ ಸಂತೋಷ್.. ತಾಳ್ಮೇನೆ ನಿಶ್ಯಕ್ತಿ ಅಂತಂದುಕೊಳ್ಳೋ ಮೊದಲು ಎಚ್ಚೆತ್ತುಕೊಳ್ಳೋ ಅನಿವಾರ್ಯತೆಯಿದೆ 🙂
ಅನುಸರಿಸಲೇ ಬೇಕಾದ ಮಾತನ್ನು ಹೇಳಿದ್ದೀರಿ . ದನ್ಯವಾದಗಳು .