ಭಾರತಾಂಭೆಯೇ ನಿನ್ನ ಮಕ್ಕಳು ಕ್ಷೇಮವೇ???: ಅಖಿಲೇಶ್ ಚಿಪ್ಪಳಿ


ದೇಶದ ಜನ ಗಣಪತಿ ಹಬ್ಬದ ಸಡಗರದಲ್ಲಿದ್ದಾರೆ. ಬ್ರಹ್ಮಚಾರಿ ಗಣೇಶನ ಹಬ್ಬದ ವಾರ್ಷಿಕ ವಹಿವಾಟನ್ನು ಲೆಕ್ಕ ಹಾಕಿದವಾರೂ ಇಲ್ಲ. ವಿಘ್ನನಿವಾರಕನೆಂಬ ಖ್ಯಾತಿವೆತ್ತ, ಮೊದಲ ಪೂಜಿತನೆಂಬ ಹೆಗ್ಗಳಿಕೆಗೊಳಗಾದ ಗಣೇಶನ ಹಬ್ಬಕ್ಕೂ, ರಾಜಕೀಯಕ್ಕೂ, ಮಾಲಿನ್ಯಕ್ಕೂ ನೇರಾನೇರ ಸಂಬಂಧವಿರುವುದು ಸುಳ್ಳೇನಲ್ಲ. ಗಲ್ಲಿ-ಗಲ್ಲಿಗಳಲ್ಲಿ ಗಣಪತಿ ಪೆಂಡಾಲ್ ತಯಾರಾಗಿದೆ. ವರ್ಷವೂ ರಶೀದಿ ಪುಸ್ತಕ ಹಿಡಿದು ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಗಣಪತಿಯನ್ನು ವಿಸರ್ಜನೆ ಮಾಡುವಾಗಿನ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಲೇ ಇದೆ. ಪಟಾಕಿ ಸಿಡಿಸುವುದು ಎಂದರೆ ಹಿಂದೆಲ್ಲಾ ಸಂಭ್ರಮವಾಗಿತ್ತು. ಈಗ ಪ್ರತಿಷ್ಠೆಯ ವಿಷಯವಾಗಿದೆ. ರಾಸಾಯನಿಕ ಬಣ್ಣಗಳಿಂದ ಕೂಡಿದ ಗಣಪ ಬೇಡ ಎನ್ನುವವರ ಸದ್ದು ಕೇಳುತ್ತಲೇ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯ ಕೂಗೂ ಅದೆಲ್ಲೋ ಅಡಗಿಹೋಗಿದೆ. ಪೇಟೆಗಳ ಅಂಗಡಿಗಳಲ್ಲಿ ಗಣೇಶನ ಅಲಂಕಾರಕ್ಕಾಗಿ ವಿವಿಧ ರೀತಿಯ ನೈಲಾನ್, ರೇಯಾನ್, ಪ್ಲಾಸ್ಟಿಕ್ ವಸ್ತುಗಳು, ಕಾiನಬಿಲ್ಲನ್ನೂ ಮೀರಿಸುವ ವಿವಿಧ ಬಣ್ಣಗಳ ದೀಪಾಲಂಕಾರ ಹಾರಗಳು ಹಗಲೂ ಹೊತ್ತಿನಲ್ಲೂ ಮಿಣುಕುತ್ತಿರುತ್ತವೆ. ಜನರಲ್ಲಿ ಜಾಗೃತಿಯುಂಟು ಮಾಡಬಲ್ಲ ಶಕ್ತಿಯಿರುವ ಮಾಧ್ಯಮಗಳು ಗಣೇಶನ ಹಬ್ಬದ ಆಫರ್‌ಗಳ ಜಾಹೀರಾತಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿವೆ. ಲೋಕಹಿತಕ್ಕಾಗಿ, ಜನಹಿತಕ್ಕಾಗಿ ಜಾಗೃತಿಯನ್ನುಂಟು ಮಾಡುವ ಕಾರ್ಯದಲ್ಲಿ ಹಣದ ವಹಿವಾಟಿನ ವಾಸನೆಯಿಲ್ಲ ಎಂಬ ಕಾರಣಕ್ಕೆ ಇರಬಹುದು. ೭೦೦ ಚಿಲ್ಲರೆ ಕೋಟಿ ಮನುಜರ ಮಾಲಿನ್ಯದ ಹೊರೆ ಹೊರುವ ಧಾರಣ ಸಾಮರ್ಥ್ಯ ಧರಿತಿಗಿಲ್ಲ. ನಮಗಿನ್ನೂ ಖುಲ್ಲಾ ಜಾಗ ಬೇಕು. ಮುಂದಿನ ಗಣೇಶೋತ್ಸವದ ಹಬ್ಬ ಬರುವುದಕ್ಕಿಂತ ಮುನ್ನ ನಮ್ಮ ಜಿಡಿಪಿ ಗೆರೆ ಆಕಾಶದೆತ್ತರಕ್ಕೇರಬೇಕು.

ಹಳ್ಳಿಗಳಲ್ಲಿ ಹೆಚ್ಚು-ಕಡಿಮೆ ಪ್ರತಿ ಮನೆಯಲ್ಲೂ ಗಣಪನನ್ನು ತಂದು ಪೂಜಿಸುತ್ತಾರೆ. ಗಣಪತಿಯನ್ನು ತರದಿದ್ದವರೂ ಕಾಯಿ-ಕಡುಬು ಮಾಡುವುದರ ಮೂಲಕ ಹಬ್ಬದ ಸಂಭ್ರಮ ಆಚರಿಸುತ್ತಾರೆ. ಇದಕ್ಕೂ ಮೊದಲು ಅಂದರೆ ಗಣಪನನ್ನು ಪೂಜಿಸುವುದಕ್ಕೂ ಮೊದಲು ಗಣಪನ ಮುಂದೆ ಸಸ್ಯವೈವಿಧ್ಯಗಳ ಪೆರೇಡ್ ಇರುತ್ತದೆ. ಮನೆಯಲ್ಲಿ ಬೆಳೆದ ತರಕಾರಿಯಿರಬಹುದು, ಕಾಡಿನಲ್ಲಿ ಸಿಗುವ ಹಣ್ಣುಗಳಿರಬಹುದು, ಕಂಚಿಕಾಯಿ, ದೊಡ್ಲಿಕಾಯಿ, ಗಜನಿಂಬೆ, ಮದ್ದರಸನ ಕಾಯಿ ಹೀಗೆ ಸಸ್ಯವೈವಿಧ್ಯಗಳ ಪೇರೆಡ್‌ನಲ್ಲಿ ಸಾಕಷ್ಟು ಸಸ್ಯ ಪರಿಚಯದ ಅವಕಾಶವಿರುತ್ತದೆ. ಇದಕ್ಕೆ ಫಲವಳಿಗೆ ಎಂದೂ ಕರೆಯುತ್ತಾರೆ.  ಯಾರೂ ಹೆಚ್ಚು ಸಸ್ಯವೈವಿಧ್ಯಗಳ ಪರಿಚಯ ಮಾಡಿಸುತ್ತಾರೋ ಅವರಿಗೊಂದು ಹೆಮ್ಮೆ. ಈ ಹಬ್ಬದಲ್ಲೂ ಒಂದು ತಲೆಮಾರಿನಿಂದ ಒಂದು ತಲೆಮಾರಿಗೆ ಜ್ಞಾನವನ್ನು ದಾಟಿಸುವ ಘನಉದ್ಧೇಶವಿರುತ್ತದೆ. ಕಾಡಿನಲ್ಲೇ ಬೆಳೆಯುವ ಮಡಹಾಗಲಕಾಯಿ ಸಿಗದಿದ್ದರೆ, ಮನೆ ಯಜಮಾನನಿಗೆ ತಲೆನೋವು. ಯಾಕೆ ಮಡಹಾಗಲಬಳ್ಳಿ ಹುಟ್ಟಿಲ್ಲ ಎಂದು ಚಿಂತಿಸುತ್ತಾನೆ. ಕಳೆದ ವರ್ಷ ಹೋದ ಜಾಗಕ್ಕೆ ಹೋಗಿ ಮತ್ತೆ-ಮತ್ತೆ ಹುಡುಕುತ್ತಾನೆ. ಹೀಗೆ ಕಳೆದು ಹೋಗುವ ಆತಂಕದಲ್ಲಿರುವ ಸಸ್ಯಪ್ರಭೇದಗಳನ್ನು ಉಳಿಸುವ ಪರಂಪರೆಯೂ ಗಣೇಶನ ಹಬ್ಬಕ್ಕಿದೆ. ಪ್ರತಿ ಹಬ್ಬಕ್ಕೂ ತನ್ನದೇ ಆದ ವೈಶಿಷ್ಟ್ಯವಿರುತ್ತದೆ. ಆದರೆ ಈಗೀಗ ಎಲ್ಲಾ ಹಬ್ಬಗಳೂ ತಮ್ಮ ಮೂಲ ವೈಶಿಷ್ಟ್ಯಗಳನ್ನು ಕಳೆದುಕೊಂಡು ಸೊರಗುತ್ತಿವೆ. ಡಾಂಭಿಕವಾಗಿ ವಿಜೃಂಭಿಸುತ್ತಿವೆ. ಫಲವಳಿಗೆ ಕಟ್ಟುವ ಕೋಲಿನಲ್ಲೀಗ ವೈವಿಧ್ಯವಿಲ್ಲ, ಬರೀ ಪೇಟೆಯಿಂದ ತಂದ ಸೇಬು, ದ್ರಾಕ್ಷಿ-ದಾಳಿಂಬೆಗಳು ಪಾರಂಪಾರಿಕ ವೈವಿಧ್ಯದ ಜಾಗವನ್ನು ಅಲಂಕರಿಸಿವೆ. 

ದೇಶದ ಜನ ಗಣೇಶನ ಹಬ್ಬದ ಸಂಭ್ರಮದಲ್ಲಿದ್ದರೆ, ಇತ್ತ ಆ(ಹಾ)ಳುವವರು ಕಾಡಿನ ಡಯಾಮೀಟರ್ (ವ್ಯಾಸ) ಕಡಿಮೆ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಾರೆ. ಮಹಾರಾಷ್ಟ್ರದ ಮುಖ್ಯಅರಣ್ಯ ಕಾರ್ಯದರ್ಶಿಯ ಹೆಸರು ಪ್ರವೀಣ್ ಪರದೇಶಿ. ಈ ನೆಲದ-ಜಲದ ಅಷ್ಟೂ ಸೌಲಭ್ಯಗಳನ್ನು ಉಪಯೋಗಿಸಿಕೊಂಡು, ಸರ್ಕಾರದ ಅತಿಮುಖ್ಯವಾದ ಹುದ್ದೆಯಲ್ಲಿದ್ದರೂ, ಪರದೇಶಿಯರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಸಿದ್ದಾನೆ. ಅರಣ್ಯ ಅಭಿವೃದ್ಧಿ ನಿಗಮ, ಮಹಾರಾಷ್ಟ್ರ,  ಇದು ಅಲ್ಲಿಯದೇ ಸರ್ಕಾರದ ಸ್ವಾಮ್ಯದಲ್ಲಿರುವ ಸಂಸ್ಥೆ, ತನ್ನ ಹೆಸರಿಗೆ ತಕ್ಕಂತೆ ಯಾವಾಗಲೂ ಅರಣ್ಯ ಅಭಿವೃದ್ಧಿಯನ್ನು ಮಾಡಲಿಲ್ಲ. ಬದಲಿಗೆ ಅಪರೂಪದ ಕಾಡುಗಳನ್ನು ಕಡಿದು ಸಾಗಿಸುವ ಸರ್ಕಾರದ ಅಧಿಕೃತ ಏಜೆಂಟ್‌ನಂತೆ ವರ್ತಿಸುತ್ತದೆ. ನಮ್ಮಲ್ಲೂ ಎಂ.ಪಿ.ಎಂ. ಇನ್ನಿತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಾಗೆ ಇದೂ ಒಂದು. ಈ ಸಂಸ್ಥೆಗೆ ಲಾಭ ಮುಖ್ಯ. ಜೀವಿವೈವಿಧ್ಯ, ಮಳೆಕಾಡುಗಳು, ವನ್ಯಜೀವಿ, ವಾತಾವರಣ ವೈಪರೀತ್ಯವೆಂಬ ಪದಗಳಿಗೆ ಈ ಸಂಸ್ಥೆಯ ದೃಷ್ಟಿಯಲ್ಲಿ ಅರ್ಥವೇ ಇಲ್ಲ. ಈ ಪ್ರವೀಣ್ ಪರದೇಶಿ ಅತ್ತ ಅರಣ್ಯ ಸಂರಕ್ಷಿಸುವ ಹುದ್ಧೆಯಲ್ಲೂ ಇದ್ದಾನೆ ಜೊತೆಗೆ ಮರಕಡಿದು ಲಾಭ ಮಾಡಿಕೊಳ್ಳುವ ಅರಣ್ಯ ಅಭಿವೃದ್ದಿ ನಿಗಮದಲ್ಲೂ ಇದ್ದಾನೆ. ಅದೇಕೋ ಮರ ಕಡಿಯುವ ಕಾರ್ಯದಲ್ಲೇ ಪರದೇಶಿಗೆ ಆಸಕ್ತಿ.

ಪ್ರಪಂಚದಲ್ಲಿರುವ ಒಟ್ಟೂ ಹುಲಿಗಳ ಸಂಖ್ಯೆಗೆ ಹೋಲಿಸಿದರೆ ಭಾರತದಲ್ಲೇ ಹುಲಿಗಳ ಸಂಖ್ಯೆ ಹೆಚ್ಚು. ಅಂದರೆ ಕಾಡಿನಲ್ಲಿರುವ ಹುಲಿಗಳ ಸಂಖ್ಯೆ ಸುಮಾರು ೧೫೦೦ ಮಾತ್ರ. ಭೇಟೆಯಿಂದಾಗಿ ಈ ಸಂಖ್ಯೆಯೂ ನಶಿಸುತ್ತಿದೆ. ಜೊತೆಗೆ ಈಗ ಅರಣ್ಯ ಅಭಿವೃದ್ಧಿ ನಿಗಮ, ಮಹಾರಾಷ್ಟ್ರವು ಒಂದು ಪ್ರಸ್ತಾವನೆಯನ್ನು ಅಲ್ಲಿನ ಸರ್ಕಾರದ ಮುಂದಿಟ್ಟಿದೆ. ಅದೇನೆಂದರೆ, ಪೆಂಚ್ ಮತ್ತು ನಾಗ್ಜೀರಾ ಎಂಬ ಎರಡು ಹುಲಿಧಾಮಗಳು ಮಹಾರಾಷ್ಟ್ರದಲ್ಲಿವೆ. ಇದರ ಮಧ್ಯೆ ಹಾದು ಹೋಗುವ ದಟ್ಟಾರಣ್ಯ ಪ್ರದೇಶಕ್ಕೆ ಲೇಂಡ್ಜಾರಿ ಎಂದು ಕರೆಯುತ್ತಾರೆ. ಇದರ ವಿಸ್ತೀರ್ಣ ಸುಮಾರು ೯೦ ಸಾವಿರ ಎಕರೆಗಳು. ಈ ದಟ್ಟಾರಣ್ಯವನ್ನು ಕಡಿದು ಮಾರುವ ಹುನ್ನಾರಕ್ಕೆ ಕೈ ಹಾಕಿದೆ ಇದೇ ಅರಣ್ಯ ಅಭಿವೃದ್ಧಿ ನಿಗಮ, ಮಹಾರಾಷ್ಟ್ರ ಸಂಸ್ಥೆ. ಇದಕ್ಕೆ ಅನುಮತಿ ನೀಡಲು ತುದಿಗಾಲಿನಲ್ಲಿ ನಿಂತಿದ್ದಾನೆ ಇದೇ  ಪ್ರವೀಣ್ ಪರದೇಶಿ. ಯಥಾಪ್ರಕಾರ ಪರಿಸರವಾದಿಗಳು, ಹುಲಿಪ್ರೇಮಿಗಳು ಈ ಪ್ರಸ್ತಾವನೆಯನ್ನು ವಿರೋಧಿಸಲು ತೊಡಗಿದ್ದಾರೆ. ಇದಕ್ಕೆ ಪರದೇಶಿ ಕೊಡುವ ವಿವರಣೆ ಹೀಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಕಾಲ-ಕಾಲಕ್ಕೆ ದಟ್ಟಾರಣ್ಯವನ್ನು ಸವರುವ ಪದ್ಧತಿ ರೂಡಿಯಲ್ಲಿದೆ. ಹಾಗಾಗಿಯೇ ಅಲ್ಲಿ ವನ್ಯಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ನಮ್ಮಲ್ಲೂ ಕೂಡ ದಟ್ಟಾರಣ್ಯವನ್ನು ಕಾಲ-ಕಾಲಕ್ಕೆ ಸವರಿ ಚೊಕ್ಕಟ ಮಾಡಿದಲ್ಲಿ ಹುಲಿಸಂಖ್ಯೆ ನಿಶ್ಚಿತವಾಗಿ ಹೆಚ್ಚುತ್ತದೆ. ಆದ್ದರಿಂದ ಲೇಂಡ್ಜಾರಿ ಪ್ರದೇಶದಲ್ಲಿರುವ ದಟ್ಟಾರಣ್ಯವನ್ನು ಕಡಿತಲೆ ಮಾಡುವುದಕ್ಕೆ ಶಿಫಾರಸ್ಸು ಮಾಡುವುದು ಸೂಕ್ತ ಎಂಬ ವಾದ ಹೂಡುತ್ತಾನೆ. ಇಂತವರಿಂದ ಅರಣ್ಯ ಹುಲಿ ಸಂತತಿ ಉಳಿಯುವುದೇ?. ೯೦ ಸಾವಿರ ಎಕರೆ ದಟ್ಟಾರಣ್ಯ ಪ್ರದೇಶವನ್ನು ಸವರಿ ನಂತರ ಉಳಿದ ಫಲವತ್ತಾದ ಬಯಲಿನಲ್ಲಿ ತೇಗ ಮತ್ತು ಬಿದಿರನ್ನು ನೆಡುವ ಯೋಜನೆಯೂ ತಯಾರಾಗಿದೆ.

ಹೋದ ವರ್ಷ ಬಿಹಾರದಲ್ಲಿ ಕ್ರಿಮಿನಾಶಕದ ಅಂಶವನ್ನು ಸೇವಿಸಿ ೨೩ ಶಾಲಾ ಮಕ್ಕಳು ಸತ್ತರು. ಈ ತರಹದ ಅವಘಡಗಳು ಮುಂದೆ ಸಂಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಸರಿ ಇದಕ್ಕೊಂದು ಪರಿಹಾರ ಬೇಕು. ಬಿಸಿಯೂಟದ ಕಾರ್ಯಕ್ರಮ ನಿರಂತರವಾಗಿ ಯಾವುದೇ ಅಡಚಣೆಯಿಲ್ಲದೆ ನಡೆಯಬೇಕು. ಹಸಿವಿನಿಂದ ಬಳಲುತ್ತಿರುವ ಬಡವರ ಮಕ್ಕಳಿಗೆ ಆಹಾರ ಭದ್ರತೆ ಒದಗಿಸಬೇಕು. ೧೨೦ ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ಭವ್ಯ ಭಾರತದ ಆಡಳಿತ ಯಂತ್ರವು ಬಿಸಿಯೂಟ ಯೋಜನೆಯನ್ನು ಸಮರ್ಥವಾಗಿ ನಿಭಾಯಿಸಲು ಸಮರ್ಥವಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಜಗತ್ತಿನ ಅತಿದೊಡ್ಡ ಕಾರ್ಪೊರೇಟ್ ಸಂಸ್ಥೆಯಾದ ಪೆಪ್ಸಿಕೋ ಕಂಪನಿಯ ಮುಂದೆ ಮೊಳಕಾಲೂರಿದೆ. ಪೆಪ್ಸಿಕೋ ಕಂಪನಿಯ ಸಿ.ಇ.ಓ ಭಾರತ ಸಂಜಾತೆ ಇಂದಿರಾ ನೋಯಿ. ಜಗತ್ತಿನ ಶ್ರೀಮಂತರಲ್ಲಿ ಒಬ್ಬಳು. ಈ ವರ್ಷದ ಬಜೆಟ್‌ನಲ್ಲಿ ಬಿಸಿಯೂಟದ ವೆಚ್ಚಕ್ಕಾಗಿ ೧೩,೨೦೦ ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಎತ್ತಿಟ್ಟಿದೆ. ಈಗ ಹಾಲಿ ಇರುವ ವ್ಯವಸ್ಥೆಯಲ್ಲಿ ಆಯಾ ಶಾಲೆಯಲ್ಲೇ ಬಿಸಿಯೂಟವನ್ನು ತಯಾರಿಸಿ ಮಕ್ಕಳಿಗೆ ಬಡಿಸಲಾಗುತ್ತಿದೆ. ಬಿಸಿಯೂಟ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಮತ್ತು ಶುಚಿತ್ವದ ಕೊರತೆಯಿದೆ ಎಂಬ ಕಾರಣ ನೀಡಿ, ಪೆಪ್ಸಿಕೋ ಕಂಪನಿಗೆ ಸ್ವಚ್ಛ ಹಾಗೂ ಪೌಷ್ಟಿಕ ಆಹಾರವನ್ನು ಪೂರೈಸಲು ಸರ್ಕಾರ ಕೇಳಿಕೊಂಡಿದೆ. ೧೦೭ ಮಿಲಿಯನ್ ಮಕ್ಕಳಿಗೆ ಮಧ್ಯಾಹ್ನ ಆಹಾರವನ್ನು ನೀಡುವುದು ಎಂದರೆ ಇದರಲ್ಲಿ ಅಪಾರ ಪ್ರಮಾಣದ ಹಣದ ಹರಿವಿದೆ. ಅಂದ ಹಾಗೆ ಪೆಪ್ಸಿಕೋ ಕಂಪನಿ ಜಾದೂ ಮಾಡುತ್ತದೆ ಎಂದು ಕೊಳ್ಳುವುದು ಬೇಡ. ಲೇಸ್, ಕುರ್-ಕುರೇ ಪೊಟ್ಟಣದ ಮಾದರಿಯಲ್ಲಿ ರೆಡಿಮೇಡ್ ಆಹಾರದ ಪೊಟ್ಟಣಗಳನ್ನು ಪೂರೈಸಲು ಸರ್ಕಾರವೇ ಸಲಹೆ ಮಾಡಿದೆ. ಆಹಾರತಜ್ಞರ ಪ್ರಕಾರ, ಸಂಸ್ಕರಿಸಿದ ಆಹಾರ ಆರೋಗ್ಯಕ್ಕೆ ಒಳ್ಳೆಯದಲ್ಲ. ಪ್ರತಿದಿನ ಇಷ್ಟು ಪ್ಲಾಸ್ಟಿಕ್ ಕೊಟ್ಟೆಗಳು ಪರಿಸರಕ್ಕೆ ಸೇರುತ್ತವೆ. ದೊಡ್ಡ-ದೊಡ್ಡ ಕಾರ್ಖಾನೆಗಳಲ್ಲಿ ಯಾಂತ್ರಗಳ ಮೂಲಕ, ಕುಲಾಂತರಿ ಬೆಳೆಗಳನ್ನು ಉಪಯೋಗಿಸಿ ಸಂಸ್ಕರಿಸಿದ ಆಹಾರ ನಮ್ಮ ಮಕ್ಕಳಿಗೆ ಲಭ್ಯವಾಗಲಿದೆ. ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಖಾತೆಯ ಮಂತ್ರಿಣಿ ಹಸ್ರಿಮ್‌ರತ್ ಕೌರ್ ಬಾದಲ್ ಕೇಂದ್ರದ ಪರವಾಗಿ ಇಂದಿರಾ ನೋಯಿ ಜೊತೆ ಭೇಟಿ ಮಾಡಿ, ಮಾತನಾಡಿ, ಡೀಲ್ ಮಾಡುತ್ತಿರುವ ಮಹಿಳಾ ಸಚಿವೆ.

ಇತ್ತ ಇಂದಿರಾ ನೋಯಿ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ, ಜಗತ್ತಿನ ದೈತ್ಯ ಕುಲಾಂತರಿ ಕಂಪನಿ ನಮ್ಮ ಎಂ.ಪಿ.ಗಳನ್ನು ತನ್ನ ಖರ್ಚಿನಲ್ಲಿ ಅಮೆರಿಕದಲ್ಲಿರುವ ಐಯೋವಕ್ಕೆ ಬನ್ನಿರೆಂದು ಆಹ್ವಾನ ನೀಡಿತ್ತು. ನಮ್ಮ ೨೦ ಎಂ.ಪಿಗಳು ಹೊರಡಲು ತಯಾರಾಗಿದ್ದರು. ಕ್ಷೇತ್ರ ಅಧ್ಯಯನ ನೆವದಲ್ಲಿ ಒಂದು ಟೂರ್ ಹೋಗಿಯೇ ಬಿಡೋಣವೆಂದು, ಎಲ್ಲಾ ತಯಾರಾಗಿ ಆಗಸ್ಟ್ ೨೪ ರಿಂದ ೩೦ರ ವರೆಗೆ ಮಾನ್ಸಂಟೋ ಅತಿಥಿಗಳಾಗಲು ಸೂಟ್‌ಕೇಸ್‌ಗೆ ಬಟ್ಟೆ-ಬರೆ ತುಂಬಿಕೊಂಡು ರೆಡಿಯಾಗಿ ಕುಳಿತಿದ್ದರು. ಹೇಗೂ ದುಡ್ಡು ಕೊಡುವವರು ಮಾನ್ಸಂಟೋ ಕಂಪನಿಯವರು ತಾನೆ? ಅದೂ ಕ್ಷೇತ್ರ ಅಧ್ಯಯನದಂತಹ ಪವಿತ್ರ ಕಾರ್ಯದ ಸಲುವಾಗಿ, ಅಷ್ಟರಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ, ಸ್ವದೇಶಿ ಜಾಗರಣ್ ಮಂಚ್ ಹಾಗೂ ಭಾರತೀಯ ಕಿಸಾನ್ ಸಂಘಗಳು ಸೇರಿ ಸರ್ಕಾರದ ಕಿವಿ ಹಿಂಡಿದರು. ಎಂಪಿಗಳ ಅಮೆರಿಕ ಪ್ರವಾಸಕ್ಕೆ ಕತ್ತರಿ ಬಿತ್ತು. ಇದೇ ಸಮಯದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಡಾ:ಮಾಧವ ಗಾಡ್ಗಿಳ್‌ರ ವರದಿಯನ್ನು ಮೂಲೆಗೆ ಹಾಕಿ ಕಸ್ತೂರಿ ರಂಗನ್ ವರದಿಯನ್ನು ಎತ್ತಿ ಹಿಡಿಯುವ ನಿರ್ಧಾರವನ್ನು ಪ್ರಕಟಿಸಿದೆ. ಆಘಾತಕಾರಿ ವಿಷಯವೆಂದರೆ, ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ೬೪%ನಿಂದ ೩೭% ಇಳಿಸುವ ಮೂರ್ಖ ನಿರ್ಧಾರವನ್ನು ಕೈಗೊಂಡಿದೆ. ಇದಕ್ಕಾಗಿ ಹೂಡಿಕೆದಾರರ ಸಲಹೆಗಳನ್ನು ಕೇಳಿದೆ. ಈಗಾಗಲೇ ಶಿಥಿಲ ಸ್ಥಿತಿ ತಲುಪಿರುವ ಪಶ್ಚಿಮಘಟ್ಟ ಶ್ರೇಣಿಗಳು ಅವಸಾನದಂಚಿಗೆ ಬಂದು ನಿಲ್ಲುವ ದಿನ ದೂರವಿಲ್ಲ. ಪರಿಸರವಾದಿಗಳ ಒಕ್ಕೋರಲಿನ ಪರಿಸರಪರ ದನಿಯನ್ನು ಬಂಡವಾಳಶಾಹಿಗಳ ಪಟಾಕಿ ಸದ್ದು ಅಡಗಿಸಿದೆ. ಇದೇ ಹೊತ್ತಿನಲ್ಲಿ, ಒಟ್ಟೂ ೧೪೪ ಬೃಹತ್ ಯೋಜನೆಗಳಿಗೆ ಪರಿಸರ ಇಲಾಖೆ ತರಾತುರಿಯಿಂದ ಅನುಮತಿ ನೀಡಿದ್ದನ್ನು ಸರ್ವೋಚ್ಛ ನ್ಯಾಯಾಲಯ ಪ್ರಶ್ನಿಸಿ, ತಾತ್ಕಾಲಿಕ ತಡೆ ನೀಡಿದೆ. 

ಇದನ್ನು ಬರೆಯುವ ಹೊತ್ತಿನಲ್ಲೇ, ಅಂದರೆ, ಗಣೇಶ ಚೌತಿಯ ಮರುದಿನವೇ ಹಬ್ಬವನ್ನು ಪೂರೈಸಿದ ಭಾರತದ ಪ್ರಧಾನಿಯವರು ಜಪಾನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ಭೇಟಿಯಿಂದ ಉಭಯ ದೇಶಗಳ ಸಂಬಂಧಗಳು ಉತ್ತಮವಾಗುತ್ತವೆಯೆಂದು ಖುದ್ಧು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ. ಇಲ್ಲೊಂದು ಚೋದ್ಯವಿದೆ, ಪ್ರಧಾನಿಯ ಸಂಗಡ ಯಾರ್‍ಯಾರು ಜಪಾನಿಗೆ ತೆರಳುತ್ತಿದ್ದಾರೆ ಎಂಬಲ್ಲಿ ಕುತೂಹಲವಿದೆ. ಭಾರತದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿ, ಗೌತಮ್ ಅದಾನಿ, ಬಿಟಿ ಖ್ಯಾತಿಯ ಕಿರಣ ಮುಜಂದಾರ್, ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಐಸಿಐಸಿಐ ಬ್ಯಾಂಕ್‌ನ ಚಂದಾ ಕೊಚ್ಚಾರ್, ಭಾರತಿ ಎಂಟರ್‌ಪ್ರೈಸಸ್‌ನ ಸುನೀಲ್ ಮಿತ್ತಲ್, ಲಾರ್ಸನ್ & ಟೌಬ್ರೋದ ಸಿಇಓ ವೆಂಕಟರಮಣನ್, ಸನ್ ಫಾರ್ಮಾಸುಟಿಕಲ್‌ನ ದಿಲೀಪ್ ಸಾಂಗ್ವಿ ಹೀಗೆ ಕಾರ್ಪೊರೇಟ್ ಪ್ರಪಂಚದ ಗಣ್ಯರು ಪ್ರಧಾನಿಯ ಜೊತೆ ಜಪಾನ್ ಪ್ರವಾಸದಲ್ಲಿ ಸಾತ್ ನೀಡುತ್ತಿದ್ದಾರೆ. ಶ್ರೀಮಂತಿಕೆಯಲ್ಲಿ ಬಲಿಷ್ಟರಾದ ಈ ದೈತ್ಯರು ಮತ್ತು ತಂತ್ರಜ್ಞಾನದಲ್ಲಿ ಜಗತ್ತಿನಲ್ಲೇ ಮಂಚೂಣಿಯಲ್ಲಿರುವ ಜಪಾನ್ ದೇಶದ ಬುದ್ಧಿಮತ್ತೆ ಒಟ್ಟಾದರೆ, ನಮ್ಮ ಭಾರತಾಂಭೆಯ ಭವಿಷ್ಯವೇನಾಗಬಹುದು ಎಂಬುದನ್ನು ಚಿಂತಿಸಬೇಕಾಗಿದೆ. ಈ ವಿಚಾರದಲ್ಲಿ ಮಾತ್ರ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಮಧ್ಯಪ್ರವೇಶ ಮಾಡಿ, ಪ್ರಧಾನಿಗೆ ಇಷ್ಟು ದೊಡ್ಡ ಸಾಹುಕಾರರನ್ನು ನಿಮ್ಮ ಜೊತೆ ಕರೆದುಕೊಂಡು ಹೋಗಬೇಡಿ ಎಂಬ ಸಲಹೆ ನೀಡಿದ ವರದಿಯಿಲ್ಲ. 

ಕಡೆಯದಾಗಿ, ಮುಂಬೈಯ ಕಿಂಗ್ಸ್ ಸರ್ಕಲ್ ಗಣಪ ಇನ್ನೂ ಶ್ರೀಮಂತ. ೮೦ ಕೆ.ಜಿ. ಬಂಗಾರದ ಆಭರಣವನ್ನು ಹೊತ್ತು ಸಾರ್ವಜನಿಕ ದರ್ಶನಕ್ಕೆ ನಿಂತಿದ್ದಾನೆ. ಅಲ್ಲದೇ ಈ ಬಾರಿ ೧ ಕೋಟಿ ರೂಪಾಯಿ ಮೌಲ್ಯದ ಹಾರವನ್ನು ಧರಿಸಿದ್ದಾನೆ ಎಂದು ವರದಿಯಾಗಿದೆ. ಇಷ್ಟು ಚಿನ್ನವನ್ನು ಒಟ್ಟು ಮಾಡಲು ವಸುಂಧರೆಯ ಗರ್ಭದ ಮೇಲೆ ಯಾವ ಮಟ್ಟದ ಪ್ರಹಾರ ಮಾಡಿರಬೇಕು? ಬರೀ ಢಾಂಭಿಕತನದಿಂದ ಭಕ್ತಿಯುಕ್ಕುವುದೇ? ಕನಕದಾಸರ ಎಲ್ಲೆಲ್ಲೂ ದೇವರಿದ್ದಾನೆ ಎಂಬ ಮಾತು ಸುಳ್ಳೆ!! ಜೊತೆಗೆ ಮತ್ತೊಂದು ಸಂತೋಷದ ಸುದ್ದಿಯೆಂದರೆ, ಇದನ್ನು ಕನ್ನಡದ ಖ್ಯಾತ ವಿಜ್ಞಾನ ಬರಹಗಾರ, ಸಹಜ ಕೃಷಿತಜ್ಞ ಶ್ರೀಯುತ ನಾಗೇಶ್ ಹೆಗಡೆಯವರಿಗೆ ಸಂಬಂಧಿಸಿದ್ದು, ಅವರ ಮಾತಿನಲ್ಲೇ ಕೇಳಿ. ’ದೈವಿಕ ಕೃಷಿ’ ಗೊತ್ತಾ? ಗಣೇಶ ವಿಸರ್ಜನೆ ಮುಗಿದ ನಂತರ ಬೆಂಗಳೂರಿನ ಸಹಸ್ರಾರು ಬಂಗಾಳಿಗಳು ನಮ್ಮೂರ ಕೆರೆಗೆ ಬಂದು ವಿಶ್ವಕರ್ಮನ ಸುಂದರ ವಿಗ್ರಹಗಳನ್ನು ವಿಸರ್ಜಿಸಿ ಹೋಗುತ್ತಾರೆ. ಮೂರು ವಾರಗಳ ನಂತರ ನಾನು ನನ್ನ ಪತ್ನಿ ರೇಖಾ ಕೆರೆಗೆ ಇಳಿದು ಬಣ್ಣರಹಿತ ವಿಗ್ರಹಗಳನ್ನು ಮೇಲೆತ್ತಿ ಒಣಗಿಸುತ್ತೇವೆ. ಈಗ ಅವು ಬರೀ ಹುಲ್ಲಿನ ಮೂರ್ತಿಗಳು. ಹಿತ್ತಿಲಿಗೆ ಸಾಗಿಸಿ ತಂದು ಎರೆಗೊಬ್ಬರದ ತೊಟ್ಟಿಗೆ ಹಾಕಿ ಕಾಯಕಲ್ಪ ಮಾಡುಸುತ್ತೇವೆ. ನಮಗೆ ಉತ್ಕ್ರಷ್ಟ ಪುಡಿ ಗೊಬ್ಬರ ಸಿಗುತ್ತದೆ. ಮುಂದಿನ ಕತೆ ಗೊತ್ತೇ ಇದೆ: ರೇಖಾ ಅದರಿಂದ ಸ್ವಾದಿಷ್ಟ ಹಣ್ಣು, ಕಾಯಿಪಲ್ಲೆ ಬೆಳೆಸುತ್ತಾಳೆ. ನಾನು ಚಪ್ಪರ ಕಟ್ಟುತ್ತೇನೆ. ನಮ್ಮ ಈ ವಿಶ್ವಕರ್ಮ ಸೃಷ್ಟಿಯ ತಮಾಷೆಯ ಚಿತ್ರ-ಕತೆ ಈ ವಾರದ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ವಿಶ್ವಕರ್ಮ ಎಂದರೆ ಸ್ವರ್ಗದ ಶಿಲ್ಪಿಯಂತೆ. ಸಮುದ್ರಮಥನದ ಕಾಲದಲ್ಲಿ, ಕಲ್ಪವೃಕ್ಷ, ಕಾಮಧೇನು, ಕಲ್ಪವೃಕ್ಷಗಳ ಹಾಗೆ ಈ ಶಿಲ್ಪಿಯೂ ಮೇಲೆದ್ದು ಬಂದನಂತೆ. ನಾವು ಅವನನ್ನು ಕೆರೆಯಿಂದ ಮೇಲೆತ್ತುವಾಗಲೂ ಏನೆಲ್ಲಾ ವಿಷವಸ್ತುಗಳು ಹೊರಬರುತ್ತವೆ. ಆಗ ನಾವು ವಿಷಕಂಠರಷ್ಟೇ ಅಲ್ಲ ಮೈಕೈಗೆಲ್ಲಾ ನೀಲಿ ಕೆಸರು ಅಂಂಟಿಸಿಕೊಂಡು ಮಡ್ ಬಾತ್ಮಾನಂದರು! ಕೆಸರಿನಿಂದ ಲಭಿಸಿದ ಗೊಬ್ಬರವನ್ನು ಹೀರಿದ ಹಾಗಲ, ಲಿಂಬೆಗಳ ಕಹಿ, ಹುಳಿಯೆನ್ನೆಲ್ಲಾ ಕಡೆಗಣಿಸಿ ಸಪೋಟ, ಆಮ್ರಪಾಲಿ, ಸೀಬೆ, ಅಂಬರಹಣ್ಣುಗಳ ರಸವನ್ನೆಲ್ಲ ಪಕ್ಷಿಗಳು, ಬಾವಲಿಗಳು ಹೀರಿದ ನಂತರ ನಮ್ಮ ಪಾಲಿಗೆ ಉಳಿದದ್ದು ಅಮೃತ. 
ಗಣಪತಿ, ಗಣೇಶ, ಏಕದಂತ ಇತ್ಯಾದಿ ಸಹಸ್ರ ಹೆಸರಿನಿಂದ ಕರೆಯಲ್ಪಡುವ ಹೇ ಭಗವಂತನೇ ನಿನಾರಿಗಾದೆಯೋ ಎಲೆ ಮಾನವ ಎಂದು ಕೇಳಬಾರದೆ? ಉದಯವಾಣಿ ಈ ದಿನದ ಪತ್ರಿಕೆಯಲ್ಲಿ ಬಂದ ವರದಿಯ ಪ್ರಕಾರ ದೇಶದ ಸುಮಾರು ೪ ಕೋಟಿ ಗಣಪನಿಂದಾಗಿ ನಮ್ಮ ಜಲಖಜಾನೆಗೆ ೧೦೦೦ ಟನ್ ವಿಷ ಸೇರುತ್ತದೆ ಎಂದು ವಿಷಪಾಷಾಣ ತಜ್ಞ ಡಾ:ತುಪ್ಪಿಲ್ ವೆಂಕಟೇಶ್ ಹೇಳಿದ್ದಾರೆ. ಒಟ್ಟಾರೆಯಾಗಿ ಎಲ್ಲರೂ ಸುಖ-ಸಮೃದ್ಧಿಯಿಂದ ಬಾಳುವುದು ಇನ್ನು ಕನಸಿನ ಮಾತೇ ಸರಿ. ಬಣ್ಣದ ಗಣೇಶನ ವಿಷದಿಂದ ಕಲುಷಿತಗೊಂಡ ನೀರನ್ನು ಕುಡಿದು ಕಾಯಿಲೆ ಬಿದ್ದರೆ, ನರ-ನಾಡಿಗಳು ಮುರುಟಿ ಹೋದರೆ, ಸರ್ಕಾರದಿಂದ ಒಂದಿಷ್ಟು ಪರಿಹಾರ ಜೊತೆಗೆ ಜಪಾನ್ ತಂತ್ರಜ್ಞಾನದಿಂದ, ಸನ್ ಫಾರ್ಮಾಸುಟಿಕಲ್‌ನವರು ತಯಾರಿಸಿದ ಮಾತ್ರೆಗಳು ಸಿಗಬಹುದು. ಬೇಕೇ? ನಮಗಿಂತಹ ಪರಿಸರ ವಿರೋಧಿ ಹಬ್ಬಗಳು, ಆಡಳಿತ ಯಂತ್ರಗಳು???

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Guruprasad Kurtkoti
9 years ago

ಅಖಿಲೇಶ್, ಬರಹ ತುಂಬಾ ಇಷ್ಟವಾಯ್ತು! ಇಷ್ಟೆಲ್ಲಾ ಮಾಡಿ ಇನ್ನಷ್ಟು ವಿಘ್ನಗಳನ್ನು ಮೈ ಮೇಲೆ ಹಾಕಿಕೊಳ್ಳುತ್ತಿರುವ ಮಾನವರನ್ನು ಆ ವಿಘ್ನನಾಶಕನಾದರೂ ಹೇಗೆ ರಕ್ಷಿಸಿಯಾನು?!

1
0
Would love your thoughts, please comment.x
()
x