ಭವ: ಪ್ರಶಸ್ತಿ ಪಿ.

ಮಧ್ಯಾಹ್ನದಿಂದಲೂ ಮಳೆಯ ಕಣ್ಣಾಮುಚ್ಚಾಲೆಯಾಟದಲ್ಲಿ ಕಾಮನಬಿಲ್ಲಿನ ಚಿತ್ತಾರಗಳ ಬಿಡಿಸಿ ಸುಸ್ತಾದ ಸೂರ್ಯ ಮೋಡಗಳ ಮರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೋ ಎಂಬಂತೆ ಕವಿದಿದ್ದ  ಮಬ್ಬುಗತ್ತಲು. ಇಲ್ಲಾಡಿ ಬೇಸರಗೊಂಡ ಮೋಡಗಳು ಇನ್ನೆಲ್ಲೋ ಹಾರಿದಂತೆ ಸೂರ್ಯ ಆಗಸವನ್ನೇ ಪಟವನ್ನಾಗಿಸಿ ಬಿಡುವು ಕಳೆಯುತ್ತಿದ್ದ . ಹಳದಿ ಕೇಸರಿಗಳ ಚಿತ್ತಾರ ಬಿಡಿಸುತ್ತಿದ್ದ ರವಿ, ಹೊಗೆಯುಗುಳುತ್ತಿದ್ದ ಬಸ್ಸುಗಳು, ದಿನವಿಡೀ ಸುರಿದ ಮಳೆಯಿಂದ ತಂಪಾದ ದಾರಿಪಕ್ಕದ ಮರಗಳು, ಕೊಚ್ಚೆಯಿಂದ ಕಾಲಿಡಲೂ ಆಗದಂತಹ ರಸ್ತೆಯ ಇಕ್ಕೆಲಗಳು..ಬದುಕೂ ಹೀಗೆ ಅಲ್ಲವೇ ? ಚಂದವೆಂದುಕೊಂಡ್ರೆ ಚಂದ ಚಂದ. ಗೋಳೆಂದುಕೊಂಡ್ರೆ ಗೋಳೇ ಗೋಳು ! ಪ್ರಕೃತಿಗೆ ನೂರೆಂಟು ಬಣ್ಣಗಳಂತೆ. ಅದರಲ್ಲಿ ನೀ ನೋಡಬಯಸಿದ್ದೇ ಕಾಣೋದು ನಿಂಗೆ ಅಂತ ಯಾರೋ ಹೇಳಿದ ಮಾತ ನೆನಪಿಸಿ ಗೋಣಾಡಿಸುತ್ತಾ ತನ್ನ ಗಮ್ಯದತ್ತ ಸಾಗಿದನಾತ. ತನ್ನ ಪಾಡಿಗೆ ತಲೆಯಾಡಿಸಿಕೊಳ್ತಾ ಮುಂದೆ ಹೋಗೋ ಇವ ಹಾಡು ಕೇಳ್ತಾ ಇದಾನಾ ಅಂದ್ರೆ ಕಿವಿಗೊಂದು ಕರಿಬಳ್ಳಿಯಿಲ್ಲ . ಹುಚ್ಚ, ಭಿಕಾರಿಯಾ ಅನ್ನೋಕೆ ಗರಿಗರಿಯಾದ ಬಟ್ಟೆ ಬೇರೆ ಹಾಕಿದ್ದಾನೆ. ಮಾನಸಿಕ ? ಛೇ ಛೇ. ಇಲ್ಲದಿರಬಹುದು. ಯಾರಂತ ನೋಡೇ ಬಿಡೋಣ ಅನ್ನೋ ಕುತೂಹಲದಲ್ಲಿ ಸೂರ್ಯನೂ ಈಚೆ ಬರುವ ಹವಣಿಕೆಯಲ್ಲಿದ್ದಾನಾ ಎಂಬಂತೆ ಅಲ್ಲಲ್ಲಿ ಬಂಗಾರದ ಎಳೆಗಳು ಕಾಣುತ್ತಿದ್ದವು.
 
ಸಂಜೆ ಆರು ಆರೂಕಾಲಾಗಿದ್ದಿರಬಹುದು. ಆರೂವರೆಯೂ ಆದೀತೇನೋ. ಮುಳುಗುತ್ತಿರುವ, ಇನ್ನೂ ಮುಳುಗಿಲ್ಲದ ಸೂರ್ಯನ ಕಂಡರೆ ಏಳರ ಒಳಗೆ ಎಂದೂ ತಳ್ಳೋ ತಿಂಡಿಗಾಡಿಗಳ ಪಕ್ಕದಲ್ಲಿ ಸಮವಸ್ತ್ರದಲ್ಲಿ ನಿಂತಿದ್ದ ಜನರನ್ನು ನೋಡಿ ಐದರ ಆಫೀಸುಗಳು ಬಿಟ್ಟಾದ ಮೇಲಿನ ಸಮಯವೆಂದೂ ಯಾರಾದರೂ ಹೇಳಬಹುದಿತ್ತು. ದಪ್ಪ ದಪ್ಪ ಬ್ಯಾಗುಗಳ, ಮುಂಬಾಗಿದ ಹೊಟ್ಟೆಗಳ ಹೊತ್ತು ಕನ್ನಡಕಗಳ ಆಚೆಯಿಂದ ತಮಗಾಗಿ ತಯಾರಾಗುತ್ತಿರೋ ತಿಂಡಿಗಳನ್ನೇ ನೊಡುತ್ತಿರೋ ಯುವಕರು , ಸಂಜೆಯಾದರೂ ಮುಖ ಬಾಡದ ಸುಂದರಿಯರು, ತಿಂಡಿಗಳ ನೋಡಿ ಬಾಯಿ ಸೆಳೆದರೂ ತಮ್ಮ ದೇಹದ ನೆನಪಾಗಿ ಮುಂದೆ ಸಾಗುತ್ತಿರೋ ಲಲನೆಯರು, ನಗುಮೂಡದ ಆಂಟಿಯರು, ನಾಯಿಯೊಂದಿಗೆ ಒಂದು ಬುಕ್ಕನ್ನೂ ಹಿಡಿದು ವಾಕಿಂಗ್ ಹೊರಟ ಅಂಕಲ್ಗಳು ಆ ತಿಂಡಿಬೀದಿಯನ್ನು ಕಳೆಗಟ್ಟಿಸಿದ್ದರು. ಮಸಾಲೆಪುರಿ, ಗೋಬಿ, ನ್ಯೂಡಲ್ಸು, ದೋಸೆ, ಮಂಡಕ್ಕಿ, ಪಾವ್ಬಾಜಿಗಳ ಹಲವಿಧ ಕಾಂಬಿನೇಷನ್ನುಗಳು ದಿನಾ ತಿಂದರೂ ಮುಂದಿನ ದಿನಕ್ಕೆ ಮತ್ತೇನೋ ಇದೆಯೆಂಬ ಸವಿಯ ಸೆಳೆತದಲ್ಲಿ ಜನರನ್ನು ಹಿಡಿದಿಟ್ಟಿದ್ದವು. ಉಚ್ವಾಸ ನಿಚ್ವಾಸಗಳಂತೆ ಒಂದೆಡೆಯಿಂದ ಜನರನ್ನು ಹತ್ತಿಸಿಕೊಂಡು ಹೋಗುತ್ತಿದ್ದ ಬಸ್ಸುಗಳಾದರೆ ಮತ್ತೊಂದೆಡೆಯಿಂದ ಜನರನ್ನು ತಂದು ತಿಂಡಿ ಬೀದಿಯ ಬಳಿ ಹಾಕೋ ಬಸ್ಸುಗಳು. ಎಲ್ಲೋ ಹುಟ್ಟಿ, ಎಲ್ಲೋ ಸಾಗಿ ಮತ್ತೆಲ್ಲೋ ಅವಸಾನಗೊಳ್ಳೋ ಬಾಳ ಪಯಣದಂತೆ ಎಲ್ಲೆಲ್ಲಿಂದಲೋ ತಿಂಡಿ ಬೀದಿಗೆ ಬರುತ್ತಿದ್ದ ಜನರು ಮತ್ತಿನ್ಯಾವುದೋ ಸಂದುಗೊಂದಲಗಳಲ್ಲಿ ಮಾಯವಾಗುತ್ತಿದ್ದರೆ. ಮೂರು ಘಳಿಗೆಯ ಬಾಳಪಯಣದಲ್ಲಿ ತಿಂಡಿಬೀದಿಯೆಂಬೊಂದೊಂದು ತಂಗುದಾಣವಷ್ಟೆ. ಬರಿಯ ನಿಲ್ದಾಣವಲ್ಲವಿದು. ಆಕರ್ಷಕ ತಂಗುದಾಣ. ದೇಹಮನಗಳ ಸುಸ್ತುಮರೆಸಿ ಆಹ್ಲಾದವೀಯೋ ತಾಣ.. ಆ ತಂಗುದಾಣಕ್ಕೊಬ್ಬ ಹೊಸ ಪಯಣಿಗ ಹೊಕ್ಕುವವನಿದ್ದ ಇಂದು.

ಹತ್ತಾರು ಜನರ ಮಧ್ಯೆ ಹನ್ನೊಂದನೆಯವನೆಂಬಂತೆ ಹೊಕ್ಕವನ ಬಟ್ಟೆಯ ಬಗ್ಗೆಯಾಗಲಿ, ಬ್ಯಾಗ ಬಗ್ಗೆಯಾಗಲೀ, ಬ್ಯಾಗೊಳಗಿದ್ದಿರಬಹುದಾದ ವಸ್ತುಗಳ ಬಗ್ಗೆಯಾಗಲಿ ಅಲ್ಲಿದ್ದ ಯಾರಿಗೂ ಗಮನವಿದ್ದಿರಲಿಲ್ಲ. ತಯಾರಿಸೋ ಅಂಗಡಿಯವನಿಂದ ಖಾಲಿಯಾಗಿಸೋ ಹೊಟ್ಟೆಯವನವರೆಗೆ ಎಲ್ಲರಿಗೂ ತಮ್ಮ ಹೊಟ್ಟೆಯ ಚಿಂತೆಯಷ್ಟೆ. ಸಂಜೆಯ ಹೊತ್ತಿಗೆ ತಮ್ಮ ಪಕ್ಕದಲ್ಲೇ ತಿಂಡಿ ಬೀದಿಯಲ್ಲಿ ನಡೆದುಹೋಗುತ್ತಿರುವವನೊಬ್ಬ ಕಾಲೇಜು ವಿದ್ಯಾರ್ಥಿಯಾ, ಆಫೀಸಿನಿಂದ ಬಂದವನಾ ? ಕೆಲಸಕ್ಕೋಸ್ಕರ ದಿನಾ ಹುಡುಕುತ್ತಿರುವವನ ಎಂಬ ಪ್ರಶ್ನೆ ಅಲ್ಲಿದ್ದವರಿಗೆ ಕಾಡಿರೋ ಸಾಧ್ಯತೆ ಕಮ್ಮಿಯೇ. ನಿಯಮಿತವಾಗಿ ಬರೋ ಒಂದಿಷ್ಟು ಮುಖಗಳ ಪರಿಚಯವಿದ್ದಿರಬಹುದಾದರೂ ಎಂದೋ ಬರುವ ನೂರಾರು ಜನರನ್ನು, ಮೊದಲ ಬಾರಿಗೆ ಬರೋ ಗ್ರಾಹಕರನ್ನು, ಗ್ರಾಹಕರ ತರದಲ್ಲೇ ಬಂದಿರೋ ಭಯೋತ್ಪದಕನನ್ನು ಯಾವ ಅಂಗಡಿಯವನಾದರೂ ಹೇಗೆ ಗ್ರಹಿಸಿಯಾನು ? ಆಫೀಸವ್ನೇ ಆಗಿದ್ದನೆಂದರೂ ಆರರ ಹೊತ್ತಿಗೆ ಬಂದನೆಂದರೆ ಆಫೀಸಿಂದ ಬಂದನೋ, ಅಥವಾ ಆಫೀಸಿಗೆ ದಿನವಿಡೀ ರಜೆ ಹಾಕಿ ಬೇರೇನೋ ಮಾಡಿ ಈಗ ಮತ್ತಿಲ್ಲಿಗೆ ಬಂದನೋ ಎಂಬ ಸಂದೇಹಗಳು ಯಾರಿಗೆ ತಾನೆ ಸುಳಿದೀತು ಹೇಳಿ. ಅತನ ಬೆನ್ನಿನಲ್ಲಿದ್ದ ಬ್ಯಾಗೊಳಗೆ ಬಾಂಬೇನಾದ್ರೂ ಇದ್ದಿರಬಹುದೆಂದ ಊಹೆಯಂತೂ  ಖಂಡಿತಾ ಮೂಡಲು ಸಾಧ್ಯವಿರಲಿಲ್ಲ.

ಸ್ವರ್ಗದ ಆಸೆಯಿತ್ತಿದ್ದು ಹೌದು.ಸತ್ತರೆ ಕುಟುಂಬಕ್ಕೊಂದು ಆಸರೆಯೀವ ಭರವಸೆಯಿತ್ತಿದ್ದೂ ಹೌದು. ಬಾಂಬಿಡುವಷ್ಟು ದಿನವೂ ಕೈತುಂಬಾ ಕಾಸು, ಮನಸ್ಸಿಗೆ ಬಂದ ಜೀವನ ಎಂಬ ಕನಸ ಕಟ್ಟಿಸಿದ್ದ ಗೆಳೆಯನ ಮಾತುಗಳು ಒಮ್ಮೆ ಹೌದೆನ್ನಿಸಿದ್ದು ಸುಳ್ಳಲ್ಲ.  ಆದರೆ ಈ ನೆಲದಲ್ಲಿ ಬಾಂಬಿತ್ತರೆ ತನಗೆ ದಕ್ಕುವುದೇನು ? ತನ್ನ ಹುಟ್ಟಿದ ನೆಲವಲ್ಲವೇ ಇದು ? ಹುಟ್ಟಿದ ನೆಲ ! ? ಎಲ್ಲ ಬಣ್ಣಗಳ ಅಳಿಸಿ ಒಂದೇ ಬಣ್ಣ ಮಾಡಬೇಕೆನ್ನುವವ ಹೇಳುವುದು ನನ್ನ ಮೂಲ ನೆಲವಲ್ಲವೇ ? ಜೀವವೆಲ್ಲವೂ ದೇವನ ವರದಾನವೆಂಬೋ ಮಾತುಗಳ ನಂಬಲೇ ? ತಂದೆತಾಯಿಯರ ಕೋಶಗಳ ಸಮ್ಮಿಲನವೆಂಬೋ ವಿಜ್ನಾನವ ನಂಬಲೇ ? ಯಾವುದನ್ನು ನಂಬಿದರೂ ತನ್ನ ಮೂಲ ನೆಲವೆಂಬುದೆಲ್ಲಿ ? ತನ್ನನ್ನು ತಂದವರು ಇಳಿಸಿದ್ದೇ ನೆಲ. ಕಲಿಸಿದ್ದೇ ಭಾಷೆ. ಇತ್ತಿದ್ದೇ ತುತ್ತು. ಕೇಸರಿ, ಹಸಿರು, ಬಿಳಿಗಳ ಕಚ್ಚಾಟಗಳಲ್ಲಿ ಸ್ವರ್ಗದ ಪರಿಕಲ್ಪನೆಗಿಂತ ತೊಳೆಯದ ಟೋಪಿಗಳ ವಾಸನೆಯೇ ಹೊಡೆಯುತ್ತಿದೆಯಲ್ಲ ಇತ್ತೀಚೆಗೆ ? ಕಚ್ಚಾಟ ತಂದಿಕ್ಕೋ ಬಾಂಬುಗಳು ಕೊಡೋ ಬೆಚ್ಚನೆಯ ಇಂದಿಗಿಂತ ಅದೆಷ್ಟೇ ಅವ್ಯವಸ್ಥೆಗಳ ತವರೆಂಬ ದೇಶದಲ್ಲೂ ಇರಬಹುದಾದ ಬೆಳಕ ಕಿರಣ ಹುಡುಕಿ ಹೊರಡುವುದೇ ಮೇಲಾ ? ತಿಂಡಿ ಬೀದಿಯಲ್ಲಿ ಹೊಟ್ಟೆ ತುಂಬಾ ಸಿಗಬಹುದಾಗಿದ್ದ  ,ತನ್ಮೂಲಕ ತನ್ನ ದಾಸ್ಯಕ್ಕೆ ತಳ್ಳಬಹುದಾಗಿದ್ದ ಗೋಬಿ ನ್ಯೂಡಲ್ಸನ್ನ ಧಿಕ್ಕರಿಸಿ ಮುಂದೆ ನಡೆದಿದ್ದವನಿಗೆ ಈಗ ತಿಂಗಳೆರಡಾದರೂ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದ ಪರಿಸ್ಥಿತಿ. ಪ್ರತಿ ದಿನಾ ಇಸ್ತ್ರಿಯಾದ ಬಟ್ಟೆಯ ಕಾಣುವವರಿಗೆ ಹೊಸ ಊರ ಹೆಂಗೋ ಹೊಕ್ಕವನ ಬಳಿಯಿರೋ ಮೂರೇ ಜೊತೆ ಬಟ್ಟೆಗಳೇ ಮತ್ತೆ ಮತ್ತೆ ಗರಿಯಾಗುತ್ತಾ ದಿನಗಳೆಯುತ್ತಿರೋದು, ಹೊಟ್ಟೆಪಾಡಿಗೊಂದು ಕೆಲಸವರೆಸುತ್ತಾ ಕಾಲ ತಳ್ಳುತ್ತಿವೆಯೆಂಬ ಸತ್ಯ ಎಲ್ಲಿ ಗೋಚರಿಸಬೇಕು. ಎಲ್ಲೋ ಬಾಂಬ್ ಮೊಳಗಿದ ಸದ್ದಾದಾಗೆಲ್ಲಾ , ತಿಂಡಿ ಬೀದಿಯ ಬಳಿ ಹಸಿದ ಹೊಟ್ಟೆಯಲ್ಲಿ ಸಾಗಿದಾಗೆಲ್ಲಾ ತಿಂಗಳೆರಡರ ಹಿಂದೆ ನಡೆದ ಮಾತುಕತೆ ನೆನಪಾಗುತ್ತೆ. ಸಿಗದ ಉತ್ತರಗಳನರಸುತ್ತಾ ಹಿಡಿದ ಹಾದಿಯಲ್ಲಿ ಇಂದಲ್ಲಾ ನಾಳೆಯೊಂದು ಆಶಾಕಿರಣ ಕಾಣೋ ಭರವಸೆ ಮೂಡಿಸಿಕೊಳ್ಳುತ್ತಾ ಹೆಜ್ಜೆಗಳು ಮುಂದೆ ಸಾಗುತ್ತೆ.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x