ಅಮರ್ ದೀಪ್ ಅಂಕಣ

“ಭವಿಷ್ಯ”ದ ಜಗುಲಿಕಟ್ಟೆ​ಯಲ್ಲಿ ಅನಿರೀಕ್ಷಿತ​ವಾಗಿ ಕುಳಿತು: ಅಮರ್ ದೀಪ್ ಪಿ.ಎಸ್.

ತಮಾಷೆ ಅನ್ನಿಸಿದರೂ ಕಿವಿಗೆ ಬಿದ್ದ ಒಂದು ಪ್ರಸಂಗ ಹೇಳಿಬಿಡುತ್ತೇನೆ.  ಒಂದಿನ ಸಂಜೆ ಪೂರ್ಣ ಬೆಳಕಿಲ್ಲದ  ದೊಡ್ಡ ಅಂಕಣದ ಕೋಣೆಯಲ್ಲಿ ಅಲ್ಲೊಂದು ಇಲ್ಲೊಂದು ದೀಪ ಹಚ್ಚಿಟ್ಟಂತಿದ್ದ  ಬೆಳಕಲ್ಲಿ  ಕುಳಿತು ಗುಸು ಗುಸು ಮಾತಾಡುವ ಮಂದಿ ಮಧ್ಯೆ ಅತ್ತಿಂದಿತ್ತ ತಿರುಗುವ ಹುಡುಗನೊಬ್ಬ. ಮಾತಾಡುವ ಗುಂಪಿನಲ್ಲಿ ಒಬ್ಬ ಧಡೂತಿ ಮನುಷ್ಯನೊಬ್ಬ   ಹುಡುಗನನ್ನು ಕರೆದು "ಏನ್ ತಮ್ಮಾ ನಿನ್ ಹೆಸ್ರು?" ಕೇಳಿದ.   ಈ ಹುಡುಗ "ಬಿರಾದರ" ಅಂದ.  "ಸರಿ, ಈ  ತುಂಡು ಪೇಪರ್ ಮೇಲೆ ನಿನ್ ಹೆಸ್ರು ಬರ್ದು ಸೈನ್ ಮಾಡು" ಅಂದ  ಧಡೂತಿ ಮನುಷ್ಯ.   ಆ ಹುಡುಗ ತನ್ನ ಹೆಸರು ಬರೆದು ಕೆಳಗೆ ಸಹಿ ಮಾಡಿ ಕೊಡುತ್ತಾನೆ.   ಆ ಹುಡುಗನ ಅಕ್ಷರ, ಸಹಿ  ನೋಡುತ್ತಲೇ ಆ ಧಡೂತಿ ಮನುಷ್ಯ; ಆ ಹುಡುಗನ ಓದು, ಹುಂಬುತನ, ಮನೆಯವರ- ಸಂಭಂಧಿಕರ  ಹೀಯಾಳಿಸುವಿಕೆ,  ನಂಬಿ ಕೆಟ್ಟ ಗೆಳೆತನ, ತಾನಾಗೇ ಬಿದ್ದ ಲವ್ ಪಜೀತಿ, ಏನಾರ ಮಾಡ್ಯಾದ್ರೂ  ತನ್ನ   ದುಡಿಮೆಯನ್ನು ತೋರಿಸುವ ಛಲ, ತನ್ನ ಗಟ್ಟಿ ರೆಟ್ಟೆಗಳ ಮೇಲಿನ ಅತಿಯಾದ  ನಂಬಿಕೆ, ಯಾರಾದ್ರೂ ಸರಿ, ನಾಲ್ಕು ಜನ ರನ್ನು ಒಟ್ಟೊಟ್ಟಿಗೆ ಬಾರಿಸಲು ತನ್ನಲ್ಲಿರುವ ಶಕ್ತಿ ಸಾಮರ್ಥ್ಯದ ಬಗ್ಗೆ ಇರುವ ಹುಚ್ಚು ಅಭಿಮಾನ ಎಲ್ಲದರ ಬಗ್ಗೆ ಚಡಾಬಡಾ ಹೇಳಿ  ಹುಡುಗನನ್ನು ದಂಗುಬಡಿಸಿಬಿಟ್ಟ.     
 
 "ಸರ್, ಹುಲಿಗೆಮ್ನಾಣೇ,  ನೀವ್ ಹೇಳಿದ್ರಲ್ಲಿ ಒಂದಕ್ಷರ ತಪ್ಪಿಲ್ಲ", ಹುಡುಗ ಹೇಳಿದ.   ಕೂಡಲೇ ಆ ಧಡೂತಿ ಮನುಷ್ಯ ಹುಡುಗನಿಗೆ ಇಪ್ಪತ್ತು ರೂಪಾಯಿ ಕೊಟ್ಟು ಬೆನ್ನು ತಟ್ಟಿ ಕಾಲ್ಕಿತ್ತಿದ.   ಹುಡುಗ ಆ ಧಡೂತಿ ಮನುಷ್ಯ ಮತ್ತೊಂದಿನ ಬರೋ ವರೆಗೂ  ಕಾದು, ಬಂದ  ದಿನ ಇನ್ನೊಂದು ತುಂಡ್  ಪೇಪರ್ ನಲ್ಲಿ ಮತ್ತೆ ಸಹಿ ಮಾಡಿ "ಇನ್ನೇನಾರ ಇದ್ರೆ ಹೇಳ್ರಿ ಸಾ …. " ಕುತೂಹಲದಿಂದ ಕೇಳುತ್ತಾನೆ. ಆ ಧಡೂತಿ ಮನುಷ್ಯ ಹೇಳಿದ್ದೇನು ಗೊತ್ತಾ?  "ನಾನ್ ಹೇಳಿದ್ನಾ?, ಒಂಚೂರು ನೆನಪಿಲ್ಲ ತಮ್ಮಾ". ಯಾಕೆಂದರೆ, ಹೇಳಿದ ಧಡೂತಿ ಮನುಷ್ಯ  ಅಪರೂಪಕ್ಕೊಮ್ಮೆ ಕುಡಿಯುವಾತ.   ಆ ಹುಡುಗ  ಹೊಸದಾಗಿ ಬಂದಿದ್ದ ಸಪ್ಪ್ಲೈರ್ ಮತ್ತದೊಂದು ಬಾರ್ ರೆಸ್ಟೋರೆಂಟ್.   ಕುಡಿದವರು ನಿಜವನ್ನೇ ಹೇಳುತ್ತಾರೆಂದೇ ನಂಬೋಣ, ಆದರೆ, ಇದ್ದ ಸಂಗತಿ ಮತ್ತು ಭವಿಷ್ಯ ಹೇಳುವುದು? ಅದೂ ಅಪರಿಚಿತರಿಗೆ ಸಂಬಂಧಿಸಿದ್ದು ? ಗೊತ್ತಿಲ್ಲ.  
 
ಆದರೆ, ನನಗೆ ಕುತೂಹಲವಿರುವುದು ಲೌಕಿಕ ಬದುಕಿನಲ್ಲಿದ್ದುಕೊಂಡೇ ಸ್ವಾಮೀಜಿ ಅನ್ನಿಸಿಕೊಂಡವರು, ಫಕೀರರು, ವೃತ್ತಿ ಯಲ್ಲಿ ಬೇರೇನೋ ಮಾಡುತ್ತಾ ತಕ್ಷಣಕ್ಕೆ ಅನ್ನಿಸಿದ್ದನ್ನು ಕೆಟ್ಟದಿರಲಿ, ಒಳ್ಳೆಯದೇ ಆಗಲಿ, ಹೇಳಿ ಮರೆತುಬಿಡುವ ಜನರ ಬಗ್ಗೆ.  ಅಂಥವರನ್ನು ಒಮ್ಮೆಲೇ  ಯಾರೂ "ಹೇಳಿಕೆ"ನೀಡುವವ, "ಭವಿಷ್ಯವಾಣಿ" ನುಡಿಯುವ  ಪಂಡಿತರೆಂದು ಒಪ್ಪಿಕೊಳ್ಳುವ ಜರೂ ರತ್ತು ಏನಿರುವುದಿಲ್ಲ. ಆದರೆ,  ವೈಯುಕ್ತಿಕವಾಗಿ ಅನುಭವಿಸದ ಹೊರತು ಅವರನ್ನು ಸ್ವಾಮೀಜಿ, ಪಂಡಿತ,ಜ್ಯೋತಿಷಿಯೆಂದಾಗಲಿ ಒಪ್ಪಿಕೊಳ್ಳದಿದ್ದರೂ ಅವರಲ್ಲಿ ಒಂದು ವಿಶೇಷತೆ ಇದೆ ಅಂತಾದರೂ ಗೊತ್ತಾಗುತ್ತದೆ.  
 
ಮೊದಲಾದರೆ ಹಳ್ಳಿಗಳಲ್ಲಿ , ಮನಸ್ಸಿಗೆ, ಮನೆಗೆ, ಮನೆ ಮಂದಿಗೆ ಏನಾದ್ರೂ ತೊಂದರೆ, ಖಾಯಿಲೆ ಕಸಾಲೆ, ಚಿಟಿ ಚಿಟಿ ಸಿಡುಕು, ದುಸುಮುಸು ಮುಖಗಳಲ್ಲಿ  ನೆಮ್ಮದಿ ಇಲ್ಲವಾದರೆ, ಡಾಕ್ಟರಿಗಿಂತ ಮುಂಚೆ ಹೋಗುತ್ತಿದ್ದುದು ಹತ್ತಿರದ ಗುಡಿ ಪೂಜಾ ರಪ್ಪ,  ದರ್ಗಾದ ಮೌಲ್ವಿ ಹತ್ರ.  ಆತ ಮಂತ್ರಿಸಿಕೊಡುವ ಹೂವು, ಅಂಗಾರ, ತಾಯ್ತಾ ಅದರಲ್ಲಿ ವಾಸಿ ಮಾಡುವಂಥ ಯಾವುದೇ ಗುಣ ಇರಲಿ ಇಲ್ಲದಿರಲಿ, ಆದರೆ ಆತ ಕಣ್ಣು ಮುಚ್ಚಿ ದೇವರ ಮುಂದೆ ಬೇಡಿ ಮೂರು ಸರ್ತಿ ಕೈ ಸುತ್ತರಿಸಿ ನಮ್ಮ ಕೈಯಲ್ಲಿ ಇಟ್ಟು ಕಳಿಸಿದರೆ ಸಾಕು, ಅರ್ಧ ಖಾಯಿಲೆ ವಾಸಿಯಾದಂತೆ ಆರಾಮೆನಿಸಿರುತ್ತದೆ.  ಮತ್ತೆ ಐತ್ವಾರ, ಬ್ರೇಸ್ತ್ವಾರ  ( ಭಾನುವಾರ ಮತ್ತು ಗುರುವಾರಕ್ಕೆ ಹಾಗೆನ್ನುವುದು ಹಳ್ಳಿಗಳಲ್ಲಿ ರೂಢಿ )  ಒಂದೆರಡು ನಿಂಬೆ ಹಣ್ಣು ತೆಗೆದು ಹಾಕಲು ಕೊಟ್ಟು ಮಂತ್ರಿಸಿ ಕೊಟ್ಟರಂತೂ  ಮುಗಿಯಿತು.   ಮುಂದಿನ ವಾರಕ್ಕೆ ಮತ್ತೆ ಖುಷಿ ಖುಷಿ.   ಸಮಸ್ಯೆ ಏನಿಲ್ಲದಿದ್ದರೂ ವೈದ್ಯರಲ್ಲಿ ಚೆಕಪ್ ಮಾಡಿಸಿಕೊಂಡು, ಅವರಿಂದ "ಏನು ತೊಂದ್ರೆ ಇಲ್ಲ, ನೀವು ಆರೋಗ್ಯವಾಗಿದೀರಾ" ಅಂತ ಪ್ರಮಾಣೀಕರಿಸಿಕೊಂಡು ಮನೆಗೆ ನಗುತ್ತಾ ಬರುವ ರೋಗಿ ಮನಸ್ಸಿನಂತೆ ಅಥವಾ  ಮನಸ್ಸಿನ ರೋಗದಂತೆ.    
 
ನಮ್ಮಲ್ಲೇ ಕಳೆದುಕೊಂಡ ನೆಮ್ಮದಿಗೆ ಊರ ತುಂಬಾ ಹುಡುಕಾಡಿ ಪರಿಹಾರವಾಗಿ ಪೂಜೆ ಪುನಸ್ಕಾರಗಳ ಪಟ್ಟಿ, ಸಲಹೆಗಳ ಮೂಟೆ ಹೊತ್ತು  ತಂದಿರುತ್ತೇವೆ. ಕೆಲವೊಮ್ಮೆ ತಿಂಗಳಾನುಗಟ್ಟಲೇ ಕಾಡಿದ ಖಿನ್ನತೆಗೂ ಒಂದು ಕಾರಣ ಅಂತ ಸಿಗುವುದಿಲ್ಲ. ಅದು ಖಿನ್ನತೆ ಅಂತ ಕೂಡ ಗೊತ್ತು ಮಾಡಿಕೊಳ್ಳಲೂ ಸಹ  ನಮಗೆ ಬಹಳ ಸಮಯವೇ ಹಿಡಿಯುತ್ತದೆ.   ಅದು ನಮ್ಮ ಹಣೆ ಬರಹ, ಅದೃಷ್ಟ ಅಂತೆಲ್ಲಾ ಹಂಗೇ ದಿನ ದೂಡುವುದು ಸಹ ಕೆಲವೊಮ್ಮೆ ಆಗುತ್ತೆ. ಅದಕ್ಕೆ ನಮ್ಮ ಭವಿಷ್ಯ ಹೆಂಗಿದ್ಯೋ ಏನೋ?   ಒಂದ್ಸಾರಿ ಯಾರಾದ್ರೂ ಜ್ಯೋತಿಷಿ ಹತ್ರ ಕೇಳಿಸಿ ನೋಡೋಣವೆಂದು  ಕಾಸು ಕೊಟ್ಟು ಕೈ ಚಾಚಿರುತ್ತೇವೆ.   ನಿಜ ವೆಂದರೆ, ಜಾತಕ, ಜನ್ಮ ನಕ್ಷತ್ರ, ರಾಶಿ, ಎಲ್ಲವನ್ನೂ ನೋಡಿ ಜ್ಯೋತಿಷಿ ಹೇಳುವ  "ಭವಿಷ್ಯ" ವನ್ನು ಕುತೂಹಲದಿಂದ ಕೇಳಿರುತ್ತೇವೆ.   ಹಿಂದೆ ನಡೆದ ಘಟನೆಗಳು ಏನೇ ನಿಜವಾಗಿದ್ದರೂ ಮುಂದಿನ ಭವಿಷ್ಯ ನುಡಿದ ಜ್ಯೋತಿಷಿಯ ಮಾತುಗಳನ್ನು ಬಹಳ ಗಂಭೀರದಿಂದ ಆಚರಿಸಲು ಪ್ಲಾನ್ ಮಾಡುತ್ತೇವೆ.  ಕಾಕತಾಳೀಯ ಎನ್ನುವಂತೆ ಕೆಲವು ಘಟನೆಗಳು ಹೆಂಗೆ ನಡೆದಿರು ತ್ತವೆಂದರೆ, ಭವಿಷ್ಯ ಹೇಳಿದ ಜ್ಯೋತಿಷಿ ನಮ್ಮ ಕಣ್ಣಲ್ಲಿ ನಿಜವಾದ ನಂಬಿಕಸ್ಥ.  
 
ಈ "ಹೇಳಿಕೆ" ನೀಡಿ ಪರಿಹಾರ ಸೂಚಿಸುವ ಮಂದಿ ಸಹಜಕ್ಕೆ ಕೆಲವೊಮ್ಮೆ ಜ್ಯೋತಿಷಿಯಂತೆ ಕಾಣುವುದಿಲ್ಲ.  ಅವರು ಹೇಳು ವುದು, ಅದರಿಂದ ಅವರು ಯಾವುದೇ ದುಡ್ಡು ಮಾಡುವ, ಪ್ರಸಿದ್ಧಿಗೆ ಬರುವ ಹಪಾಹಪಿ ಇರುವಂತೆ ಕಾಣುವುದಿಲ್ಲ.  ಈಗಿನ ಅಲಂಕೃತ ಜ್ಯೋತಿಷಿಗಳ ಲಕ್ಷಣಗಳನ್ನು,  ಹಿಡಿದು ಕೂಡಿಸಿ ಅವರನ್ನು ತೋರಿಸುತ್ತಿರುವ ಚಾನಲ್ ಗಳಲ್ಲಿ ನೋಡಿದರಂತೂ ಒಮ್ಮೊಮ್ಮೆ ಅವರನ್ನು ದುಡ್ಡು ಖರ್ಚು ಮಾಡಿ ದೂರದೂರುಗಳಿಗೆ ಹೋಗಿ ದೇಣಿಗೆ ಕೊಟ್ಟು ಸಂಪರ್ಕಿಸಲು ಸುಸ್ತು ಬೀಳುವ  ಬದಲು ಟೀವಿಯಲ್ಲೇ ನೋಡಿ ಸುಮ್ಮನಾಗುವುದು ವಾಸಿ ಅನ್ನಿಸಿಬಿಡುತ್ತೆ; ಅವರು ಹೇಳುವ ಭವಿಷ್ಯ  ಕಿವಿಗೆ ಹಾಕಿಕೊಳ್ಳು ವುದು ಕಂಪಲ್ಸರಿ ಅಂತೇನೋ ನಾನು  ಜ್ಯೋತಿಷಿಗಳ ಪರ ವಾದ  ಮಾಡುವುದಾಗಲೀ ಅಥವಾ  ಖಂಡಿಸಿ ವಿರೋಧಿಸು ವುದಾಗಲೀ ಮಾಡುತ್ತಿಲ್ಲ. ಆದರೆ, ಒಬ್ಬಬ್ಬರಿಗೆ ಒಂದೊಂದು ರೀತಿ ಅನುಭವವನ್ನುಈ ಜ್ಯೋತಿಷಿಗಳ ಸಂಪರ್ಕ  ತಂದಿರುತ್ತೆ.  ಅದು ಒಳ್ಳೆಯದಾಗಲೀ, ಕೆಟ್ಟದ್ದೇ ಇರಲಿ.  
 
ನಮ್ಮ ಓಣಿಯಲ್ಲಿ ಪ್ರತಿ ವರ್ಷ ನಡೆಸುವ ಪುರಾಣ ಕಾರ್ಯಕ್ರಮದಲ್ಲಿ ಒಬ್ಬ ಸ್ವಾಮೀಜಿ ಬರುತ್ತಿದ್ದರು.  ಅದೊಮ್ಮೆ  ಬಂದಾಗ ಹನ್ನೊಂದು ವರ್ಷದವನಾಗಿದ್ದ ನಾನು ಉಳಿದ ಭಕ್ತರಂತೆ ಆ ಸ್ವಾಮೀಜಿ ಕಾಲಿಗೆ ನಮಸ್ಕರಿಸಿ ಬರುತ್ತಿದ್ದೆ.  ಒಂದಿನ ಹೀಗೆ ನಮಸ್ಕರಿಸಿ ಬಂದೆ.   ಆಗ ಒಂದು ಹುಳ ಕಚ್ಚಿಸಿಕೊಂಡು ನನ್ನ ಮುಖ ಪೂರಿಯಂತೆ ಉಬ್ಬಿತ್ತು. ವಾಪಸ್ಸು ನನ್ನ ಕರೆದು "ಲೇ, ಬಾರ್ಲೆ ಇಲ್ಲಿ,  ಎನಾಗೆತಿ?" ಎಂದು ಕೇಳಿದರು ಆ ಸ್ವಾಮೀಜಿ.   ಹುಳು ಕಡಿದಿದ್ದಾಗಿ  ಹೇಳಿದೆ.  "ಇವ್ನು ಇನ್ನೊಂದಾರೇಳು ವರ್ಸ ಅಷ್ಟೇ ಸಾಲಿ   ಓದೋದು" ಅಂದರು.   ಓದಲು  ಆಸಕ್ತಿಯಿದ್ದ ನಾನು "ಮುಂದೆ?"  ಎಂದು ಕೇಳಿದಾಗ "ಆಮೇಲೆ ನಿಂದ್ ನೀನ್ ನೋಡ್ಕ್ಯಂತಿ ಹೋಗಲೇ, ಆದ್ರೆ ಓದು ಹತ್ತಲ್ಲ ಬಿಡು"  ಅಂದುಬಿಟ್ಟರು.  ಹದಿನೆಂಟು ವರ್ಷ ದಾಟಿದ ನಂತರ ನಾನು ಓದುತ್ತೇನೆಂದರೂ ನನ್ನಿಂದ ಓದು ದೂರವೇ ಉಳಿಯಿತು.  ಅಲ್ಲ, ಓದಿನಿಂದ ನಾನೇ ದೂರ ಉಳಿದೆ.   . ಇಪ್ಪತ್ತು  ವಯಸ್ಸು ದಾಟುವ ಮೊದಲೇ  ನಾನಾಗಲೇ ಸರ್ಕಾರಿ ನೌಕರಿಯಲ್ಲಿದ್ದೆ. ಸುಮಾರು ವರ್ಷಗಳ ನಂತರ "ಈ ಓದಿನ ಕಥೆ" ನೆನೆಸಿಕೊಂಡಾಗ ಹೌದಲ್ಲಾ? ಅನ್ನಿಸಿದ್ದೂ ಇದೆ.  
 
ನಂಬಲೇಬೇಕಾದ ಸಂಗತಿಯೆಂದರೆ, ಅವರು ಬಿಂದಾಸ್  ಆಗಿ ಕೈಯಲ್ಲಿ  ಸಿಗರೇಟ್  ಹಿಡಿದಿರುತ್ತಿದ್ದರು. ಲೌಕಿಕ ಬದುಕಿನಂತೆ ಸಿನೆಮಾ,  ನಾಟಕ ಅಂತೆಲ್ಲಾ  ಹೊರಡುತ್ತಿದ್ದರು.  ಇನ್ನು ಹೆಚ್ಚಾಗಿ  ಹೇಳಬೇಕೆಂದರೆ, ಅವರು ಸಂಸಾರಸ್ಥರು, ಮನೆ ತುಂಬಾ ಮಕ್ಕಳಿದ್ದವರು. ಮೇಲಾಗಿ ಸರ್ಕಾರಿ ನೌಕರಿಯಲ್ಲಿ ಮೇಷ್ಟ್ರಾಗಿ ಸೇವೆ ಸಲ್ಲಿಸಿದಂಥವರು. ಆದರೆ ಆ ಸ್ವಾಮೀಜಿ ನಾಲಗೆ ಭಾರಿ ಹರಿತ.  ಒಮ್ಮೆ ಏನಾದರೂ ಸಿಟ್ಟಿನಿಂದ ಸಿಗರೇಟಿನ ಬೂದಿ ಕೊಡವುತ್ತಾ ಝಾಡಿಸಿದನೆಂದರೆ, ಅನುಭವಿಸಿ ದವರ ಬಾಯಲ್ಲಿ "ಅದೊಂದು ಕಥೆಯಲ್ಲ  ಜೀವನ" ಅನ್ನುವ ಟ್ರಾಜಿಡಿ.   ಆ ಮನುಷ್ಯ ಬಂದವರಲ್ಲಿ ದೇಣಿಗೆಗೋಸ್ಕರವಾಗಿ ಜೋಳಿಗೆ ಹಿಡಿದು ಕುಳಿತಿದ್ದರೇ? ಗೊತ್ತಿಲ್ಲ.  ಅಥವಾ ನನಗೆ ಹಾಗನ್ನಿಸಿದ್ದಿಲ್ಲ. ಭಕ್ತ ಸಮೂಹ ಸ್ವಯಂ ಪ್ರೇರಣೆಯಿಂದ ಕೊಟ್ಟಿ ದ್ದಿರಬಹುದು.  ಆ ಬಗ್ಗೆ ನನಗೆ ಹೆಚ್ಚು ಕುತೂಹಲವಿಲ್ಲ.  ಆದರೆ, ಒಮ್ಮೆ ಅವರು ಆಡಿದ ಮಾತುಗಳಿರುತ್ತಿದ್ದವಲ್ಲ? ಕಡ್ಡಿ ತುಂಡಾಯಿತೆಂದೇ ಅರ್ಥ. ಅವರನ್ನು ಸ್ವಾಮೀಜಿ ಅಂತಲೂ ಒಪ್ಪಿಕೊಳ್ಳಲೇಬೇಕೆಂಬ ಇಚ್ಛೆಯೂ ಅವರಿಗೆ ಇತ್ತೋ ಇಲ್ಲವೋ ಕಾಣೆ.  ಅವರಿದ್ದದ್ದೇ ಹಾಗೆ.  ಅವರು ಅಸ್ತಂಗತರಾಗಿ  ಕೆಲ ವರ್ಷಗಳಾದವು.   
 
ನಾನು ಕಂಡಂತೆ ಇನ್ನೊಂದೆಡೆ  ಒಬ್ಬ ವೈದ್ಯರಿದ್ದರು.  ಮೂಲತಃ ಬ್ರಾಹ್ಮಣನಾದರೂ ಜಾತಿ  ತೊರೆದು  ಆಚರಣೆಯಿಂದಾಗಿ  ಕ್ರೈಸ್ತರಾದರು.   ಒಮ್ಮೆ ಒಂದು ಅವಘಡವಾದ ಸಂಧರ್ಭದಲ್ಲಿ ನಾನು  ಆತ್ಮೀಯರಾಗಿದ್ದ ಅವರನ್ನು ಕಾಣಲು ಹೋಗಿದ್ದೆ.   ನಾನಿನ್ನು ಆ ವಿಷಯವನ್ನು ಪೂರ್ಣವಾಗಿ ಹೇಳುವ ಮುನ್ನವೇ ಆ ಪ್ರಕರಣದಲ್ಲಾಗುವ ಅಂತಿಮ ಫಲಿತಾಂಶವನ್ನು ಹೇಳಿ "ನಿಶ್ಚಿಂತೆಯಿಂದಿರು" ಅಂದರು.  ತಿಂಗಳುಗಳ ಕಾಲ ಕಳೆದು ನೋಡಿದರೆ, ಅವರು ಹೇಳಿದಂತೆಯೇ ನಡೆದಿತ್ತು.  ಕೇಳಿದರೆ, ಮೇಲೆ ಕೈ ತೋರಿಸಿ ಸುಮ್ಮನಾದರು.  ಅವರು ದುಡ್ಡು ಪಡೆದು ಹೇಳಿದ ಪ್ರಸಂಗ ಇದಾಗಿರಲಿಲ್ಲ.  ಹಾಗೆ ನೋಡಿದರೆ ಅವರು ಸ್ವಾಮೀಜಿಯೂ ಅಲ್ಲ, ಜ್ಯೋತಿಷಿಯೂ ಅಲ್ಲ. ತುಂಬಾ ಸಾಧಾರಣವಾದ,  ಸಂಸಾರವಿದ್ದ ವ್ಯಕ್ತಿ.  ಅವರ ವೈದ್ಯ ವೃತ್ತಿಗೂ ಅವರ ಈ ಗುಣಕ್ಕೂ ಒಂದಕ್ಕೊಂದು ಸಂಭಂಧವಿಲ್ಲ.  ಆದರೂ ಅದ್ಹೇಗೆ ಸಾಧ್ಯ?  
 
ಒಂದಿನ ಅಚಾನಕ್ಕಾಗಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೊಪ್ಪಳದ ಬಸ್ ನಿಲ್ದಾಣದಲ್ಲಿ ಯಾರನ್ನೋ ಡ್ರಾಪ್ ಮಾಡಿ ವಾಪಸ್ ಬರುತ್ತಿದ್ದೆ. ಎದುರಿಗೆ ಬಂದ ಒಬ್ಬ ಫಕೀರ ಗಾಡಿ ತಡೆದು ನಿಲ್ಲಿಸಿ "ಹತ್ತು ರುಪಾಯಿ ಕೊಡು ಊಟಕ್ಕೆ"  ಕೇಳಿದ.  ಚಿಲ್ಲರೆ ಇಲ್ಲ ವೆಂದು ನಾನು.  "ಗೊತ್ತಪ್ಪ, ನಿನ್ನತ್ರ ಸದ್ಯಕ್ಕೆ ಐನೂರು, ನೂರರ ನೋಟು ಇದಾವಂತ ಗೊತ್ತು, ಅದರಲ್ಲೇ ಒಂದೇ ಹತ್ರ ನೋಟಿದೆ ಕೊಡು" ಅಂದುಬಿಟ್ಟ.  ಕುತೂಹಲಕ್ಕೆ ಜೇಬು ತಡಕಾಡಿದರೆ, ಆತ ಹೇಳಿದಂತೆ ಐನೂರು, ನೂರರ ನೋಟಿನ ಮಧ್ಯೆ ಒಂದೇ ಒಂದು ಹತ್ತರ ನೋಟಿತ್ತು.   ಕೈಗಿಟ್ಟು ತಿರುಗುತ್ತಿದ್ದೆ.  "ನಿಂತ್ಕಳಪ್ಪ, ನೀನ್ ಕೊಟ್  ಹತ್ರುಪಾಯಲ್ಲೇ ನನ್ ಊಟ ಆಗಂಗಿಲ್ಲ.  ಆದರೆ, ನಿನಗೊಂದಿಷ್ಟು ಹೇಳಬೇಕಿದೆ.  ನಿನ್ ತಕ್ದೀರ್ ಇಲ್ಲಿತಂಕ ನಿನ್ನ ಕಾಡಿದ್ರೂ  ನೀನ್ ಮಾತ್ರ ಕೈಯಾಗ್ ದುಡ್ಡು ಇರ್ಲಿ ಬಿಡ್ಲಿ, ನಿನ್ ತಿಕ್ಲು ಹೌದು, ನಿನ್ ನಂಬಿಕೇನೂ ಹೌದು, ಹಂಗೇ ಬದ್ಕಿದಿಯಾ" ಅಂದ.    "ಕೈ ಬಿಡೋ ಮಾರಾಯಾ, ತಲೆ ತಿನ್ನೋಕೆ ಬೇರೆ ಯಾರೂ ಸಿಕ್ಕಲಿಲ್ವಾ?" ಅನ್ನುವುದಿನ್ನು ಮುಗಿದಿಲ್ಲ, ಆಗಲೇ ನನಗಾಗಿದ್ದ ಒಂದು ಮರೆಯಲಾರದ ಘಟನೆ ಮತ್ತು  ಸಧ್ಯಕ್ಕೆ ನನಗಿರುವ ಒಂದೆರಡು ಕೊರತೆಗಳನ್ನು ವರ್ಷಾನುಗಟ್ಟಲೇ ಜೊತೆಗಿದ್ದು ನೋಡಿ ದವನಂತೆ ಹೇಳಿ ಒಂದು ಪರಿಹಾರವಾಗಿದ್ದ ಘಟನೆ, ಅದರ ಹಿಂದಿದ್ದ ಮಸಲತ್ತು, ಸಹಾಯ ಮಾಡುತ್ತಿದ್ದ ನೆಪದಲ್ಲಿ ಮಾಡದೇ ಉಳಿದ ಮಂದಿ,  ನಿರೀಕ್ಷೆ ಮಾಡದಿದ್ದ  ಆದರೆ, ನ್ಯಾಯಬದ್ಧವಾಗಿ ಸಹಾಯ ಮಾಡಿದ ಜನರ ಬಗ್ಗೆ ಹೇಳಿದ.  ಇನ್ನೊಂದು ವರ್ಷದಲ್ಲಿ  ಕೊರತೆ  ನೀಗುವ  ಸೂಚನೆ ಹೇಳಿದವನೇ ರಸ್ತೆ ಕ್ರಾಸ್ ಮಾಡಿದ.  ನಾನು ಬೈಕ್ ತಿರುಗಿಸುವಷ್ಟರಲ್ಲೇ ನಾಪತ್ತೆಯಾಗಿದ್ದ.  ಆತನ ಹೆಸರು ರಾಜಾಸಾಬ್.  ಮುಂದೆ ಒಂದೇ ವರ್ಷದಲ್ಲಿ ನನ್ನ ಕೊರತೆ ನೀಗಿದ ಸಂಧರ್ಭವೂ ಬಂತು.  
 
ಜಾತಕ, ನಕ್ಷತ್ರ, ರಾಶಿ,  ಸಂಖ್ಯಾಶಾಸ್ತ್ರಾನುಸಾರ  ಕಚೇರಿ ಇಟ್ಟುಕೊಂಡು, ಆಧುನಿಕ ತಾಂತ್ರಿಕ  ಸವಲತ್ತುಗಳನ್ನೂ ಉಪ ಯೋಗಿಸಿ ಭವಿಷ್ಯ ಹೇಳುವವರು  ಸಾಕಷ್ಟು ಜನರಿದ್ದಾರೆ.   ಅವರು ಹೇಳುವುದು ಸುಳ್ಳು ಅಂತಾಗಲಿ ಗಂಟೆ ಹೊಡೆದಷ್ಟೇ ಸತ್ಯ ಅಂತಾಗಲಿ ವಾದ ಮಾಡುವುದು ಪ್ರಸ್ತುತ ವಿಷಯವಲ್ಲ.   ಈ ಬಗ್ಗೆ  ವೈಯುಕ್ತಿಕ ಭೇಟಿ ಮತ್ತು ಅನುಭವದ ನಂತರ ವಷ್ಟೇ ನಾನು ಮಾತನಾಡಲು ಯೋಗ್ಯ.  ಆದರೆ, ಶಾಸ್ತ್ರಬದ್ಧವಾಗಿ ಜ್ಯೋತಿಷ್ಯದ ಬಗ್ಗೆ  ಅಭ್ಯಾಸ ಮಾಡದೇ ವ್ಯಾವ್ಯಹಾರಿಕ ವಾಗಿ ಆ ಬುದ್ಧಿಯನ್ನು ಉಪಯೋಗಿಸಿಕೊಳ್ಳದೇ  ಅನಾಯಾಸವಾಗಿ ಮತ್ತು ಖಂಡಿತವಾಗಿಯೂ ಅನ್ನಿಸಿದ್ದನ್ನು ಅವರವರಿಗೆ  ಹೇಳುವ,  ಹೇಳಿ ಮರೆತುಬಿಡುವ, ಕೇಳಿದರೆ ಕೈ ಮೇಲೆ ತೋರಿಸಿ ಸುಮ್ಮನಾಗುವ ಇಂಥ  ವ್ಯಕ್ತಿಗಳ  ನಡವಳಿಕೆ ಬಗ್ಗೆ ಕುತೂ ಹಲವಲ್ಲದೇ ಮತ್ತೇನು  ಹುಟ್ಟಲು ಸಾಧ್ಯ? 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

6 thoughts on ““ಭವಿಷ್ಯ”ದ ಜಗುಲಿಕಟ್ಟೆ​ಯಲ್ಲಿ ಅನಿರೀಕ್ಷಿತ​ವಾಗಿ ಕುಳಿತು: ಅಮರ್ ದೀಪ್ ಪಿ.ಎಸ್.

  1. !! ಹೀಗೂ ಉಂಟು .. ಕಣ್ಣಿಗೆ ಕಾಣದ, ವಿವರಣೆಗೆ ನಿಲುಕದ ಅದೆಷ್ಟೋ ಸತ್ಯಗಳು ನಮ್ಮೆದುರು ಹಿಂಗೇ ಹೊಳೆದು ಮಾಯವಾಗುತ್ತೆ ಅನಿಸುತ್ತೆ

  2. ಕೊಪ್ಪಳದ ಭಾಷೆಯೊಳಗ ಬಾಳ ಚಂದ ಬಂದಿದೆ ಸರ್. ಅತಿಮಾನವರ ಬಗ್ಗೆ ನನಗೂ ಕುತೂಹಲವಿದೆ.

  3. ಕುತೂಹಲಕರ ವಿಷಯ ಮತ್ತು ಮೆಚ್ಚುಗೆ ಪಡಬೇಕಾದದ್ದೇ

  4. ನೀನು ಹೇಳಿದ ಸ್ವಾಮಿಗಳ ಬಗೆಗೆ ನನಗೂ ನಂಬಿಕೆ ಬಂದದ್ಡೂ ಅದೇ ಕಾರಣಕ್ಖೇ ಸಂಸಾರವಿದ್ದು ಸಹಜ ಸನ್ಯಾಸದ ಭಾ‍‍‍‍‍ಶೆ ಬರೆದವರಿಗೆ ಇದೊ ನನ್ನ ಸಲಾಂ

Leave a Reply

Your email address will not be published. Required fields are marked *