ಭರವಸೆಯ ಬಣ್ಣದ ಬದುಕು: ಸೀಮಾ ಶಾಸ್ತ್ರಿ


ಧೂಳಿನಿಂದ ಹಳೆಯದಾಗಿದ್ದ ಬೀದಿ ದೀಪವು ಅದರ ಕೆಳಗೆ ಕುಳಿತಿದ್ದ ಆ ಯುವ ಗುಂಪಿನ ಮನದಂತೆ ಮಬ್ಬಾಗಿತ್ತು… ಕತ್ತಲೆಯಲ್ಲಿ ಎಲ್ಲವೂ ಅಸ್ಪಷ್ಟ… ಅಲ್ಲಿದ್ದ ಗೆಳೆಯ ಗೆಳತಿಯರ ಗುಂಪು ಮನದಲ್ಲಿದ್ದ ದುಗುಡವನ್ನು ಹಂಚಿಕೊಳ್ಳುತ್ತಿದ್ದರು. ಊರಿನಲ್ಲಿದ್ದ ಸಾಮಾಜಿಕ ಅನಿಷ್ಟವಾದ ಕೋಮು ಜಗಳದ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ಹೇಳುತ್ತಿದ್ದರು.

"ಶಿವನೂ ದೇವರೇ, ಅಲ್ಲನೂ ದೆವರೇ ಅಲ್ಲವೇ?  ಅವರೇನು ವೈರಿಗಳಲ್ಲವಲ್ಲ… ಆದರೆ ಅವರನ್ನು ಅನುಸರಿಸೋ ಈ ಹುಲುಮಾನವರಲ್ಲಿ ಯಾಕೆ ಈ ರೀತಿ ?" ಸಲ್ಮಾನ್ ಹೇಳಿದ. 
" ನನ್ನ ಪ್ರಕಾರ ಹೇಳೊದಾದ್ರೆ… ಯಾರಿಗೆ  ಎಲ್ಲರಲ್ಲೂ, ಎಲ್ಲದರಲ್ಲೂ ದೇವರನ್ನು ಕಾಣಲು ಸಾಧ್ಯವಿಲ್ಲವೋ ಅವರು ದೇವಸ್ಥಾನಕ್ಕೆ ಹೋಗ್ತಾರೆ… ದೇವರಿಗೆ ಒಂದೊಂದು ಹೆಸರು ಇಟ್ಕೊಳ್ತಾರೆ… ನಾನ್ಸೆನ್ಸ್ " ಪ್ರಕಾಶ್ ತನ್ನ ನಾಸ್ತಿಕವೂ  ಅಲ್ಲದ ಆಸ್ತಿಕವೂ ಅಲ್ಲದ ವಾದವನ್ನು ಎಲ್ಲರ ಮುಂದಿಟ್ಟ.

"ನನ್ನ ಅಕ್ಕನಿಗೆ ಸರ್ಕಾರಿ ಕೆಲಸ ಸಿಗ್ಲಿ ಅಂತ ತಿರುಪತಿ ಹುಂಡಿಯಲ್ಲಿ ೨೦೦೦೦ ರು ಹಾಕಿ ಬಂದಿದ್ದಾರೆ ನಮ್ಮ ಅಮ್ಮ… ಆ ಹಣಾನ್ನೆ  ಯಾರಿಗಾದ್ರೂ  ಲಂಚವಾಗಿ ಕೊಟ್ಟಿದ್ರೆ …" ಸೋಮು ನಗುತ್ತ ತನ್ನ ಅಕ್ಕನಿಗೆ ಛೇಡಿಸಿದ.
"ನಂಗೊತ್ತು ಆವತ್ತು ನಿಮ್ಮೆಲ್ರನ್ನೂ ಮನೆಗೆ ಊಟಕ್ಕೆ ಕರೆದು ಶಾಹಿರ್ ನ್ನು ಕರೆಯಲಿಲ್ಲ… ಅವನಿಗೆಷ್ಟು ಬೆಸರವಾಗಿತ್ತೋ… ಅವನೂ ನನ್ನ ಕ್ಲೋಸ್ ಫ಼್ರೆಂಡ್ ಆಲ್ವಾ?" ಪ್ರವೀಣ್ ಕ್ಷಮೆ ಯಾಚಿಸುವ ದನಿಯಲ್ಲಿ ಶಾಹಿರ್ ನೆಡೆಗೆ ನೋಡಿದ…

" ನೀನೇನು ಬೇಸರ ಮಾಡ್ಕೋ ಬೇಡ್ವೋ… ನಂಗೆ ಅರ್ಥವಾಗತ್ತೆ…" ಶಾಹಿರ್  ಅನುನಯಿಸುವ ದನಿಯಲ್ಲಿ ಹೇಳಿದ.
"ಅದೆಲ್ಲ ಬಿಡ್ರೊ… ಇವಾಗ ಏನ್ಮಾಡೋದು ಅಂತ ಹೇಳಿ…"
ಒಂದೇ ಊರಲ್ಲಿದ್ದರೂ ಕೆಲವು ದಶಕಗಳಿಂದ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿಕೊಳ್ಳದಷ್ಟು ದ್ವೇಷವಿತ್ತು ಆ ಎರಡು ಕೋಮಿನ ಜನರಲ್ಲಿ… ಆ ಎರಡು ಕೋಮುಗಳ ನಡುವೆ ಶೀತಲ ಯುದ್ದ ಶುರುವಾಗಿತ್ತು…

"ಏನಾದರೊಂದು ಮಾಡ್ಬೇಕು… ಈ ಜಾತಿ, ಧರ್ಮಕ್ಕಾಗಿ ಹೊಡೆದಾಡಿ ಒಂದೆ ಊರಲ್ಲಿದ್ರೂ ಭಾರತ ಪಾಕಿಸ್ತಾನದವರಂತೆ ಬದುಕೋದು ನನಗಿಷ್ಟ ಇಲ್ಲ… ಈ ಅನಿಷ್ಟಗಳು ಬದಲಾಗಲೇಬೇಕು…" ಸುಮಂತನ ಪ್ರಾಮಾಣಿಕ ಅಭಿಪ್ರಾಯ ಬಂದಿತ್ತು…

"ಅಲ್ಲಿ ನಮ್ಮ ಸಸೀರ್ ಅಣ್ಣ ೫ ಗಂಟೆಗೆ ಮೈಕ್ನಲ್ಲಿ ನಮಾಜ್ ಹಾಕದ್ರೆ, ಇಲ್ಲಿ ರಂಗಸ್ವಾಮಿ ಭಜನೆಗಳ್ನ ಹಾಕ್ತಾರೆ… ಕರ್ಮದ್ದು…ಎರಡೂ ಸ್ಪಷ್ಟವಾಗಿ ಕೇಳಲ್ಲ…" ಸುಹೇಲ್ ಅಲವತ್ತುಕೊಂಡ…
"ಇವಕ್ಕೆಲ್ಲ ಒಂದೆ ಪರಿಹಾರ ಅನ್ಸತ್ತೆ, ಅಲ್ವ ಸನಾ?…" ಸುಭಾಷ್ ಛೇಡಿಸುವಂತೆ ಸನಾಳೆಡೆಗೆ ನೋಡಿದ…
ಸನಾ ನಾಚಿಕೆಯಿಂದಲೋ, ಭವಿಷ್ಯದ ಆತಂಕದಿಂದಲೋ ತಲೆ ಬಗ್ಗಿಸಿದಳು. ಸನಾಳ ಅಣ್ಣ ನಮೀಜ್ ತಂಗಿಯ ಬುಜದ ಮೇಲೆ ಕೈ ಇಟ್ಟು ಭವಿಷ್ಯದ ಹೊಂಬೆಳಕಿನ ಭರವಸೆಯನ್ನಿತ್ತ. ಈ ಮಧ್ಯ ಸುಭಾಷ್ ಮತ್ತು ಸನಾ ತುಂಬಾ ಕ್ಲೋಸ್ ಆಗಿದ್ದರು. ಸನಾ ಕೂಡ ಬುರುಕಾ ಧರಿಸುವುದನ್ನು ಬಿಟ್ಟಿದ್ದು ಈ ಗೆಳೆಯರ ಬಳಗದಲ್ಲಿ ಅಚ್ಚರಿ ತಂದಿತ್ತು.

ನಾಳೆಯ ಬಣ್ಣದ ಬೆಳಗು ತಮ್ಮ ಬಾಳಲ್ಲೂ ಹೊಂಬೆಳಕನ್ನು ತರಬಹುದೆಂಬ ನಿರೀಕ್ಷೆ ಆಸೆಯಿಂದ ಆ ಯುವ ಗುಂಪು ಅಲ್ಲಿಂದ ಚದುರಿತು. 

****

ಊರಲ್ಲಿದ್ದ ಪ್ರಾಥಮಿಕ ಶಾಲೆಯೇ ಎರಡು ಕೋಮಿನವರಿಗೆ ಸಾಮಾನ್ಯ ಜಾಗವಾಗಿತ್ತು. ಅದು ಬಿಟ್ಟರೆ ಬೇರೆಲ್ಲೂ ಒಬ್ಬರ ಮುಖವನ್ನೊಬ್ಬರು ನೊಡಿಕೊಳ್ಳುತ್ತಿರಲಿಲ್ಲ. ಆದ್ದರಿಂದ ಈ ಗೆಳೆಯರ ಗುಂಪು ಹಲವು ರಂಗುಗಳ ಪಾತ್ರೆಯನ್ನು ಹಿಡಿದು ಓಕುಳಿಯಾಡಲು ರೆಡಿಯಾಗಿ ನಿಂತಿದ್ದರು… ಈ ಗೆಳೆಯರ ಗುಂಪಿನಲ್ಲಿ ಯಾವ ರೀತಿಯ ಬೇದವೂ ಇರಲಿಲ್ಲ. ಹಲವು ಕಾರಣಗಳಿಗೆ ಬೇರೆಯಾಗಿದ್ದ ಎರಡು ಕೋಮುಗಳನ್ನು ಒಂದುಗೂಡಿಸುವುದೇ ತಮ್ಮ ಧ್ಯೇಯ ಎಂದುಕೊಂಡಿದ್ದ ಅವರು ಹೋಳಿ ಹಬ್ಬವನ್ನು ಒಂದು ತಂತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿಕೊಂಡಿದ್ದರು.

ಹಸಿರು, ಕೆಂಪು. ಗುಲಾಬಿ, ನೀಲಿ, ಕೇಸರಿ, ಹಳದಿ…. ಹೀಗೆ ಬಣ್ಣ ಬಣ್ಣದ ರಂಗುಗಳನ್ನು ಒಬ್ಬರ ಮೇಲೊಬ್ಬರು ಎರಚಿಕೊಳ್ಳುತ್ತ ಗೆಳೆಯರ ಗುಂಪು ಊರೊಳಗೆ ಬಂದಿತ್ತು… ಸನಾ, ನಜೀರ್, ಸಲ್ಮಾನ್ ರಿಗೆ ತಮ್ಮದೇ ಊರಿನ ಈ ಪಕ್ಕ ಹೊಸದು. ಅವರು ಓಕುಳಿಯಾಡುತ್ತ  ಮುಖ, ದೇಹವೆಲ್ಲ ಬಣ್ಣವಾಗಿಸಿಕೊಂಡಿದ್ದರಿಂದ ಯಾರೂ ಯಾರನ್ನೂ ಗುರುತಿಸುವ ಸ್ಥಿತಿಯಲ್ಲಿ ಇರಲಿಲ್ಲ. ನಜೀರ್ ಚಿಮ್ಮಿಸಿದ ಬಣ್ಣದ ಪುಡಿ ಮನೆಯ ಕಟ್ಟೆಯ ಮೇಲೆ ಕುಳಿತಿದ್ದ ರಂಗರಾಯರ ಮುಖವನ್ನೆಲ್ಲ ಹಳದಿ ಹಸಿರಾಗಿಸಿತು. 
"ಕ್ಷಮಿಸಿ ರಾಯರೆ… ತಿಳಿಯಲಿಲ್ಲ… " ನಜೀರ್ ಭಯ, ಆತಂಕದಿಂದ ಚೀರಿದ… 

ಆ ದನಿ ಯಾರದೆಂದು ರಂಗರಾಯರಿಗೆ ತಟ್ಟನೇ ತಿಳಿಯಿತು…  ಏನೆನ್ನುವರೋ ಎಂಬ ಭಯದಿಂದ ನಿಂತಿದ್ದ ನಜೀರ್ ರಂಗರಾಯರನ್ನು ನೋಡಿದಾಗ ಅವರಿಗೆ ಅವನ ಮುಗ್ಧತೆಗೆ ಅಯ್ಯೋ ಎನ್ನಿಸಿತು. "ಇರಲಿ ಬಿಡಪ್ಪ…" ರಂಗರಾಯರು ಸಣ್ಣದಾಗಿ ನಕ್ಕರು. ಅವರ ನಗುವನ್ನು ನೋಡಿದ ನಜೀರ್ "ಅಯ್ಯಪ್ಪ.." ಎಂದುಕೊಂಡು, ರಂಗರಾಯರ ಕಾಲಿಗೆ ಉದ್ದಾಂಡ ನಮಸ್ಕಾರ ಮಾಡಿದನು… ಅವರಲ್ಲಿದ್ದ ತುಂಟತನ ಹೊರಬಂದು ಅವರೂ ಬಣ್ಣವನ್ನು ಎರಚಲು ಬಂದರು… ಆಗ ಎದುರಿಗೆ ಬಂದವರು ಮಸೀದಿಯಲ್ಲಿ ನಮಾಜ್ ಓದುವ ಬಷೇರ್… ಅವನ ಬಿಳಿಬಟ್ಟೆಯೆಲ್ಲ ನೀಲಿಯಾಯಿತು… 

"ಅರೇ…!!! ರಂಗರಾಯರೇ ಇದೇನು ಮಾಡುತ್ತಿರುವಿರಿ?" ಬಷೇರ್ ಅರಚಿದನು. 
"ಅಯ್ಯೋ ಇದೇನಾಯ್ತು? ನನ್ನದು ತಪ್ಪಾಯ್ತು… ಕ್ಷಮಿಸಿ…" ರಂಗರಾಯರು ದೈನ್ಯರಾಗಿ ಕ್ಷಮೆ ಯಾಚಿಸಿದರು… 

"ಹೇಯ್ ನಿಮ್ಮಂತಹ ದೊಡ್ಡವರೇಕೆ ಕ್ಷಮೆ ಯಾಚಿಸುವುದು?" ಬಷೇರ್ ಸಂಕೋಚಿಸಿದರು. 
ಹೀಗೇ ಮುಂದುವರಿದು ಇಡಿ ಊರವರೆಲ್ಲರೂ ಹೋಳಿಯ ಓಕುಳಿಯಲ್ಲಿ ರಂಗುರಂಗಾಗಿದ್ದರು… ಒಕುಳಿಯಾಟದಲ್ಲಿ ಯಾವ ಕುಲ, ಜಾತಿ ಮತ್ತು ಧರ್ಮವಿರಲಿಲ್ಲ. ಬಣ್ಣಗಳ ಎರೆಚಾಟದಲ್ಲಿ ಮನವನ್ನೇಲ್ಲ ಆವರಿಸಿದ್ದ ದುಗುಡ, ದುಮ್ಮಾನ, ಬೇದ, ಅಹಂಕಾರಗಳೆಲ್ಲವೂ ತೊಳೆದು ಹೋಗಿತ್ತು… ಈ ಬಣ್ಣದಾಟವು ಊರಿನವರ ಕಪ್ಪು ಬಿಳುಪು ಬಾಳಿಗೆ ಬಣ್ಣ ತುಂಬಿತ್ತು… 

ಇವೆಲ್ಲವನ್ನೂ ನೋಡುತ್ತಿದ್ದ ಎಳೆಯರ ಮನಗಳು ತಂಪಾಗಿದ್ದವು… 

****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x