’ಹತ್ತು ಗಂಟೆಗೆ ರೆಡಿಯಾಗಬೇಕು ದಾರಿಯಲ್ಲಿ ಹೋಗ್ತಾ ಕೇಶು ಮಾಮಾನನ್ನು ಕರೆದುಕೊಂಡು ಮದುವೆ ಮನೆಗೆ ಹೋಗೋದು.. ನೀನಿನ್ನು ನಿಧಾನ ಮಾಡ್ಬೇಡ’ ಅನ್ನುವ ಮಾತನ್ನು ನೂರು ಸಲ ಕೇಳಿ ಆಗಿತ್ತು ಇವರ ಬಾಯಲ್ಲಿ. ಸರಿ ಇನ್ನು ನನ್ನಿಂದ ತಡ ಆಯ್ತು ಅನ್ನೋದು ಬೇಡ ಅನ್ನುವ ಸಿಟ್ಟಿನಲ್ಲಿ ಸ್ವಲ್ಪ ಬೇಗವೇ ಹೊರಟು ಬಿಟ್ಟಿದ್ದೆ. ’ಹೇಗೂ ಹೊರಟಾಗಿದೆಯಲ್ಲ.. ಇನ್ನು ಮನೆಯೊಳಗೆ ಕೂತೇನು ಮಾಡುವುದು. ಹೋಗಿ ಕೇಶು ಮಾಮ ಬರ್ತೇನೆ ಅಂತ ಹೇಳಿದ ಜಾಗದಲ್ಲೊ ಕಾಯೋಣ’ ಅಂದರಿವರು. ನನಗೂ ಅದೇ ಸರಿ ಅನ್ನಿಸಿ ಕಾರೇರಿದೆ.
ಆಗಲೇ ಕೇಶು ಮಾಮನ ಕಾಲ್ ಬಂದಿದ್ದು. ’ವಿಶ್ವಾ ಸ್ವಲ್ಪ ತಡ ಆಗ್ತಿದೆ ಕಣೋ.. ಹೆಚ್ಚೇನಿಲ್ಲ.. ಹತ್ತು ಮುಕ್ಕಾಲಿಗೆ ಬಂದು ಬಿಡ್ತೀನಿ.. ನೀವು ಮನೆಯಿಂದಲೇ ಸ್ವಲ್ಪ ತಡವಾಗಿ ಹೊರಡಿ ಸಾಕು’ ಅಂದರು. ಆದರೆ ಇನ್ನು ಮತ್ತೆ ಕಾರಿಳಿದು ಮನೆ ಬಾಗಿಲು ತೆರೆದು ಒಳಗೆ ಕುಳಿತೇನು ರಾಜಕಾರ್ಯ ಮಾಡಲಿದೆ. ರಸ್ತೆ ಬದಿಯಲ್ಲಾದರೆ ಅತ್ತಿತ್ತ ನೋಡಿಕೊಂಡು ಸಮಯ ಸರಿದದ್ದೇ ತಿಳಿಯುವುದಿಲ್ಲ .. ನಾವು ಹೊರಟೇ ಬಿಡೋಣ ಅಂತ ಕಾರ್ ಸ್ಟಾರ್ಟ್ ಮಾಡಿದರು.
ನಾವು ನಿಲ್ಲಿಸಿದ್ದು ಒಂದು ಹೋಟೇಲಿನ ಪಕ್ಕದ ಜಾಗದಲ್ಲಿ. ಮಾಮನಿಗೆ ಮತ್ತೊಂದು ಫೋನ್ ಮಾಡಿ ಅಲ್ಲಿಗೆ ಬರಹೇಳಿದ್ದು ಆಯಿತು. ಇವರು ’ನೀನಿಲ್ಲೇ ಕೂತಿರು .. ಸ್ವಲ್ಪ ಮಿಲ್ಲಿನ ಬಳಿ ಹೋಗಿ ರಾಜ ಇದ್ದಾನಾ ನೋಡಿ ಬರ್ತೀನಿ. ಇದ್ರೆ ಮೊನ್ನೆಯ ಭತ್ತದ ದುಡ್ಡು ಕೊಡ್ತಾನೇನೋ.. ಮಾಮಾ ಬರೋದ್ರೊಳಗೆ ಬಂದ್ಬಿಡ್ತೀನಿ’ ಅಂದ್ರು.
’ಸರಿ.. ವಿಂಡೋ ಓಪನ್ ಮಾಡಿಡಿ. ಎಸಿ ಬೇಡ’ ಎಂದು ಕಾರಿನ ಕಿಟಕಿಗಾಜು ಅರ್ಧ ತೆರೆದಿಟ್ಟು ಕುಳಿತೆ. ಇವರು ಕೀ ಹಿಡಿದುಕೊಂಡು ಹೋದರು. ಹೈವೇ ಬದಿಯಾದ ಕಾರಣ ಭರ್ರೋ ಎಂದು ಸದ್ದು ಮಾಡುತ್ತಾ ಅತ್ತಿತ್ತ ಓಡಾಡುವ ವಾಹನಗಳನ್ನು ಸುಮ್ಮನೆ ನೋಡುವುದೂ ನನಗೆ ಮೋಜು.ಅವುಗಳೆಲ್ಲಾಲ್ಲಾದರೂ ಪರಿಚಿತ ಮುಖ ಕಂಡೀತೇ ಎಂದು ಹುಡುಕುವ ಚಟ. ಬೈಕಿನಲ್ಲಿ ಸಂಪೂರ್ಣ ಮುಖ ಮುಚ್ಚಿದಂತೆ ಹೆಲ್ಮೆಟ್ ಧರಿಸಿ ಹೋಗುವವರೂ ಕೂಡಾ ಯಾರೋ ಸಂಬಂಧಿಕರಂತೆ ಕಾಣ್ತಾರಲ್ಲಾ ಅಂತ ಆಲೋಚನೆ ಮಾಡುವುದು ಕೂಡಾ ಒಂದು ಹೊತ್ತು ಕಳೆಯುವ ಆಟವೇ ಆಗಿತ್ತು ನನ್ನದು.
ಆಗಲೇ ಕಾರಿನ ಬಳಿ ಬಂದು ಯಾರೋ ನಿಂತಂತಾಯಿತು. ಆ ಕಡೆ ನೋಡಿದರೆ ಮುಖದ ತುಂಬಾ ಕಪ್ಪು ಬಿಳುಪಿನ ಗಡ್ಡ. ಗಟ್ಟಿ ಮುಟ್ಟಾದ ಶರೀರ. ಕೆಂಪಡರಿದ ಕಣ್ಣುಗಳು.. ಮಧ್ಯವಯಸ್ಕ ಅನ್ನುವ ಹಾಗಿದ್ದವ ..
ಆತ ಅತ್ತಿತ್ತ ನೋಡುತ್ತಾ ನಾನು ಅರೆ ತೆರೆದಿಟ್ಟ ಕಾರಿನ ಕಿಟಕಿಯ ಬಳಿ ಬಂದು ನನ್ನನ್ನು ಗಮನಿಸಿಯೂ ಗಮನಿಸದಂತೆ ಒಂದು ಕೈ ಕಾರಿನ ಮೇಲ್ಬಾಗದಲ್ಲಿಟ್ಟು ಯಾರಿಗಾಗಿಯೋ ಕಾಯುವವರಂತೆ ರಸ್ತೆಯನ್ನು ನೋಡುತ್ತಾ ನಿಂತ.
ಯಾಕೋ ಅವನ ಬಗ್ಗೆ ಅನುಮಾನ ಕಾಡತೊಡಗಿತು. ಪ್ರತಿನಿತ್ಯ ಪೇಪರಿನಲ್ಲಿ ಟಿ ವಿ ಯಲ್ಲಿ ಚಿನ್ನಾಭರಣಗಳನ್ನು ಸೆಳೆದೊಯ್ದ ಎನ್ನುವ ಒಂದು ಕಾಲಂ ಆಗಲೀ ಬ್ರೇಕಿಂಗ್ ನ್ಯೂಸ್ ಆಗಲೀ ದಿನವೇ ಪೂರ್ಣ ಆಗುವುದಿಲ್ಲ.. ಹೇಳಿ ಕೇಳಿ ಮದುವೆ ಮನೆಗೆ ಹೊರಟಿದ್ದ ನಾನು ಎಷ್ಟು ಕಡಿಮೆ ಅಂದರೂ ಒಂದ್ನಾಲ್ಕು ಲಕ್ಷ ರೂಪಾಯಿ ಚಿನ್ನ ಏರಿಸಿಕೊಂಡಿದ್ದೆ. ಅದೂ ಮೊನ್ನೆ ಮೊನ್ನೆ ಮಾಡಿಸಿದ್ದ ನನ್ನ ಉದ್ದನೆಯ ಅವಲಕ್ಕಿ ಸರದ ಪ್ರದರ್ಶನ ಇವತ್ತೇ ಇದ್ದ ಕಾರಣ ಅದನ್ನು ಚೆನ್ನಾಗಿ ಕಾಣುವಂತೆ ಧರಿಸಿಕೊಂಡಿದ್ದೆ. ಅರ್ಧ ತೆರೆದ ಕಿಟಕಿಯ ಗಾಜಿನ ಒಳಗೆ ಅವನ ಕೈ ಬಂದರೆ ನನ್ನ ಕುತ್ತಿಗೆ ಸರಿಯಾಗಿಯೇ ಸಿಗುತ್ತಿತ್ತು. ಒಂದೇಟಿಗೆ ಆ ಸರ ಅವನ ಪಾಲಾಗುತ್ತಿತ್ತು. ಹೆದರಿಕೆ ಆದಂತಾಗಿ ಸೆರಗನ್ನು ಹೊದ್ದುಕೊಂಡಂತೆ ಹಾಕಿಕೊಂಡೆ. ಆತ ಈಗ ಸುಮ್ಮನೆ ಬೆರಳುಗಳಲ್ಲಿ ಕಾರಿನ ಮೇಲ್ಬಾಗಕ್ಕೆ ತಾಳ ಹಾಕಲು ತೊಡಗಿದ. ಅಂದರೆ ಅವನೀಗ ಅವಕಾಶಕ್ಕಾಗಿ ಕಾಯುತ್ತಿದ್ದಾನೆ ಎಂದು ನನಗನಿಸಿತು. ನನ್ನ ಸಿಕ್ಸ್ತ್ ಸೆನ್ಸ್ ಒಂದೇ ಸಮನೆ ಅಲರಾಂ ಬಾರಿಸಲು ಶುರು ಮಾಡಿತು.
ಕಾರಿನ ಕಿಟಕಿಯ ಗಾಜು ಮೇಲೇರಿಸಿಕೊಳ್ಳೋಣ ಎಂದರೆ ಕೀ ಇವರ ಬಳಿ ಇದೆ. ನಾನೇ ಇಳಿದುಹೋಗೋಣ ಅಂದರೆ ಕಾರು ಲಾಕ್ ಮಾಡದೆ ಹೋಗೋದು ಹೇಗೆ? ಕಾರಿನಲ್ಲಿ ಮದುವೆಗೆ ಕೊಂಡುಯ್ಯುವ ಗಿಫ್ಟ್ ಪ್ಯಾಕೆಟ್ಟುಗಳು ಬೇರೆ ಇದ್ದವು.
ನಾನು ಓರೆಗಣ್ಣಿನಲ್ಲಿ ಅವನನ್ನು ಗಮನಿಸಿದೆ. ಆಗಲೇ ಅವನು ನನ್ನನ್ನು ನೋಡಿದ. ನಾನು ಪಕ್ಕನೆ ಕಣ್ಣು ತಪ್ಪಿಸಿದೆ. ಅವನ ದೃಷ್ಟಿ ಯಾವುದೇ ಸಂಕೋಚವಿಲ್ಲದೆ ಕಾರಿನ ಒಳಗೆ ನೋಡುತ್ತಲೇ ಇದೆ ಎಂಬ ಸಂದೇಶವನ್ನು ನನ್ನ ಮನಸ್ಸು ನೀಡುತ್ತಲೇ ಇತ್ತು. ಯಾರಾದರೂ ಪರಿಚಿತರು ಕಂಡರೆ ಅವರನ್ನು ಕೂಗಿ ಕರೆದು ಇವರು ಬರುವವರೆಗೆ ಏನಾದರೂ ಮಾತನಾಡಿಸುತ್ತಾ ಅವರಿಲ್ಲೇ ಇರುವಂತೆ ನೋಡಿಕೊಳ್ಳಬೇಕು ಎಂದು ಅಂದುಕೊಂಡು ಅವನ ಕಡೆಗಿನ ಗಮನ ತಪ್ಪದಂತೆ ಕಣ್ಣನ್ನಾಡಿಸುತ್ತಾಲೇ ಪರಿಚಿತ ಮುಖಗಳಿಗಾಗಿ ಅರಸತೊಡಗಿದೆ. ಈ ಪೇಟೆಯ ಬಿಜೀ ರಸ್ತೆಗೂ, ನಿರ್ಜನ ರಸ್ತೆಗೂ ಏನಾದರು ವ್ಯತ್ಯಾಸವಿದ್ದಲ್ಲಿ ಅದು ಕೇವಲ ಸದ್ದಿನಲ್ಲಿ ಮಾತ್ರ.. ಯಾಕೆಂದರೆ ಇಲ್ಲಿ ಇಷ್ಟೊಂದು ಜನರಿದ್ದರೂ ಯಾರಿಗೂ ಯಾರ ಪರಿವೆಯೂ ಇಲ್ಲದೆ ನಡೆದು ಹೋಗುವ ಮಂದಿಯೇ ಹೆಚ್ಚು.
ಛೇ.. ಇವರಿಗಾದರೂ ಬೇಗ ಬರಬಾರದಾ? ಫೋನ್ ಮಾಡಲಾ ಎಂದುಕೊಂಡೆ. ಆದರೆ ನನ್ನ ಫೋನಿನ ಸ್ಪೀಕರ್ ಹಾಳಾಗಿ ಲೌಡ್ ಸ್ಪೀಕರ್ ಹಾಕಿದ್ರೆ ಮಾತ್ರ ಮಾತು ಕೇಳಿಸ್ತಿತ್ತು. ಅದು ನನಗೆ ಮಾತ್ರವಲ್ಲದೇ ಊರ ಮಂದಿಗೂ ಕೇಳಿಸುವಷ್ಟು ದೊಡ್ಡಕ್ಕಿತ್ತು. ಏನು ಮಾಡೋದಪ್ಪಾ ಅಂತ ಆಲೋಚಿಸುವಷ್ಟರಲ್ಲೆ ನನ್ನ ಮೊಬೈಲ್ಲೇ ಸದ್ದು ಮಾಡಿತು. ನೋಡಿದರೆ ಕೇಶು ಮಾಮಾನ ಹೆಂಡತಿ ಸುನಂದತ್ತೆ.. ’ಈಗ ಹೊರಟಿದ್ದಾರೆ ಮನೆಯಿಂದ .. ಒಂದತ್ತು ನಿಮಿಷ ತಡ ಆಗಬಹುದು.. ನಮ್ಮ ಕುಸುಮನ ಮಗಳ ಮಗಳು ಬಂದಿದ್ಲು ಅವಳನ್ನೊಮ್ಮೆ ಅವ್ಳ ಮನೇಲಿ ಬಿಟ್ಟು ಬಂದ್ಬಿಡ್ತಾರೆ.. ವಿಶ್ವಂಗೂ ಹೇಳಿದೆ.. ಅಷ್ಟರಲ್ಲಿ ಕಾಲ್ ಕಟ್ ಆಯ್ತು.. ಮತ್ತೆ ಬಿಜೀ ಬಂತಪ್ಪ ಅವ್ನ ಮೊಬೈಲ್.. ಹಾಗೆ ನಿಂಗೆ ಮಾಡಿದ್ದು.. ನಾನು ಬರೋಣ ಅಂತಲೇ ಇದ್ದೆ.. ಹಾಳಾದ್ದು ಕಾಲ್ಗಂಟು ನೋವು ಹಿಡ್ಕೊಂಡಿದೆ ಈ ಚಳಿಗೆ .. ಈಗ ನಿಮ್ಗೆ ಮಾಮನಿಂದಾಗಿ ತಡ ಆಗ್ತಿದೆ.. ಸಾರೀ..’ ಅಂದರು.
’ಇಲ್ಲಾ .. ಇಲ್ಲಾ .. ಹಾಗೇನು ಇಲ್ಲಾ ಅತ್ತೆ… ಅವ್ರು ಬರ್ಲಿ ನಿಧಾನಕ್ಕೆ .. ಹಾಗೆ ಅಲ್ಲಿ ಬೇಗ ಹೋಗಿ ಮಾಡೋದೇನಿದೆ. ಮದ್ವೆ ಆಗೋದು ಅವ್ರಿಗೆ..ನಮ್ಗೆ ಊಟ ಸಿಕ್ಕಿದ್ರೆ ಸಾಕಲ್ವಾ..’ ಅಂತ ನಗೆ ಚಟಾಕಿ ಹಾರಿಸುತ್ತಾ ನನ್ನ ಹೆದರಿಕೆಯನ್ನು ಶಮನ ಗೊಳಿಸಲೆತ್ನಿಸಿದರೆ ಕಿಟಕಿಯಾಚೆಯವನು ನಮ್ಮ ಮಾತನ್ನು ಗಮನವಿಟ್ಟು ಕೇಳುತ್ತಿದ್ದಾನೆ ಅನ್ನುವುದಕ್ಕೆ ಸಾಕ್ಷಿಯಾಗಿ ಅವನು ಬೆರಳುಗಳಲ್ಲಿ ಹಾಕುತ್ತಿದ್ದ ತಾಳ ನಿಂತು ತುಟಿಗಳು ನಕ್ಕಂತೆ ಬಿರಿದಿದ್ದವು. ಅವನು ಆಗ ನಿಂತುದ್ದಕ್ಕಿಂತ ಇನ್ನೂ ಕೊಂಚ ಹತ್ತಿರವೇ ಬಂದಿದ್ದಾನೇನೋ ಅನ್ನಿಸಿತು.
ಅತ್ತೆ ಮಾತು ಮುಂದುವರಿಸುತ್ತಾ ’ಮೊನ್ನೆ ಅವಲಕ್ಕಿ ಸರ ಮಾಡ್ಸಿಕೊಂಡೆಯಲ್ಲಾ ಎಲ್ಲಾ ಆಗುವಾಗ ಎಷ್ಟಾಯ್ತೇ ಅದಕ್ಕೆ? ನಾನು ಕೇಳಿದ್ಯಾಕೆ ಅಂದ್ರೆ ನಮ್ಮ ಸೂರಿ ಇದ್ದಾನಲ್ಲಾ ಬಾಂಬೇಲಿ.. ಅವ್ನ ಮಗಳಿಗೆ ಇಂತ ಹಳೇ ಕಾಲದ ಚಿನ್ನದ ಆಭರಣಗಳು ಅಂದ್ರೆ ಇಷ್ಟ. ಅವ್ಳ ಮದ್ವೆ ನಿಕ್ಕಿ ಆಯ್ತಲ್ಲಾ.. ನಮ್ದು ಅಂತ ಉಡುಗೊರೆ ಕೊಡ್ಬೇಕು ತಾನೇ ಪುಳ್ಳಿಗೆ.. ಇಂತಾದ್ದನ್ನೇ ಮಾಡ್ಸೋಣ ಅನ್ನಿಸ್ತು’ ಅಂದರು. ನನ್ನ ಹಾಳಾದ ಮೊಬೈಲಿನಿಂದಾಗಿ ವಿಷಯ ನನಗೆ ಕೇಳುವುದರಿಂದ ಹೆಚ್ಚು ಹೊರಗಿನವರಿಗೆ ಕೇಳುವುದೇ ಜಾಸ್ತಿ. ಇನ್ನು ಕಳ್ಳತನಕ್ಕೆಂದೇ ಹೊಂಚು ಹಾಕುವವನಿಗೆ ನಾನಾಗಿ ಎಲ್ಲಾ ಡಿಟೈಲ್ಸ್ ಕೊಟ್ಟ ಹಾಗೆ ಆಗುತ್ತೆ ಅಂತ ಏನು ಮಾಡಲೂ ತೋಚದೆ ಪಕ್ಕನೆ ಕಾಲ್ ಕಟ್ ಮಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ವಲ್ಪ ಡ್ರೈವರ್ ಸೀಟಿನ ಕಡೆಗೆ ಜರುಗಿ ಕುಳಿತುಕೊಳ್ಳುವ ಪ್ರಯತ್ನ ಮಾಡಿದೆ.
ಪಕ್ಕದಲ್ಲಿದ್ದವನ ನಿಂತ ಕೈತಾಳ ಈಗ ಮತ್ತೆ ಶುರು.
ಆತ್ಮರಕ್ಷಣೆಗಾಗಿ ನಾವೇ ಕಲಿತುಕೊಳ್ಳಬಹುದಾದ ಸುಲಭದ ಕರಾಟೆಯ ಪಟ್ಟುಗಳ ಬಗೆಗಿನ ಯೂ ಟ್ಯೂಬ್ ವಿಡಿಯೋ ಮೊನ್ನೆಯಷ್ಟೇ ನೋಡಿದ್ದೆ. ಅದನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದೆ. ಕರ್ಣನಿಗೆ ಕೊನೆಗಾಲದಲ್ಲಿ ಮಂತ್ರಗಳು ಮರೆತು ಹೋದಂತೆ ನನಗೂ ಅವುಗಳು ನೆನಪಿಗೇ ಬರಲಿಲ್ಲ. ಆದರೆ ಅದರಲ್ಲಿನ ಕಳ್ಳ ನೇರಾನೇರ ಎದುರೇ ನಿಂತಿರ್ತಾನೆ. ಹೀಗೆ ನಾನು ಕಾರಿನೊಳಗೆ ಬಂಧಿ ಅವನು ಓಡಲು ಅಪಾರ ಅವಕಾಶವಿರುವ ಬಯಲಲ್ಲೇನೂ ನಿಂತಿರುವುದಿಲ್ಲ ಎಂಬುದಂತು ನೆನಪಾಗಿ ಇನ್ನಷ್ಟು ಭಯವಾಯಿತು.
ಆಗಲೇ ಆ ಕಡೆಯಿಂದ ಗೊಗ್ಗರು ಧ್ವನಿಯಲ್ಲಿ ಅವನೇನೋ ನನ್ನಲ್ಲಿ ಹೇಳುವ ಪ್ರಯತ್ನದಲ್ಲಿರುವಂತೆ ಅನ್ನಿಸಿತು. ನನಗಂತೂ ಈಗ ಪಕ್ಕಾ ಗ್ಯಾರಂಟಿಯಾಗಿ ಹೋಯಿತು. ಇವನೀಗ ಮಾತನಾಡುವ ನೆಪದಲ್ಲಿ ನನ್ನ ಗಮನ ಬೇರೆ ಕಡೆ ಸೆಳೆದು ಸರ ಲಪಟಾಯಿಸಲಿದ್ದಾನೆ ಎಂದು. ನನ್ನೆದೆಯ ಬಡಿತ ನನಗೇ ಕೇಳುವಷ್ಟೇರಿತು. ಕೋಪ ಮತ್ತು ಭಯದಲ್ಲಿ ಮುಖಕ್ಕೆ ನೆತ್ತರೇರಿ ಕೆಂಪಗಾಯಿತು. ’ಸ್ವಲ್ಪ ಅತ್ಲಾಗಿ ನಿಂತ್ಕೊಳ್ಳಿ’ ಎಂದು ಜೋರಾಗಿ ದಟ್ಟಿಸಿ ಹೇಳಬೇಕೆಂದುಕೊಂಡರೂ ಸ್ವರ ನಾಲಿಗೆಯಿಂದ ಹೊರ ಬರಲಾರೆನೆನ್ನುವಂತೆ ಮುಷ್ಕರ ಹೂಡಿತ್ತು. ಅವನೀಗ ಏನಾದರೂ ಕಳ್ಳತನದ ಪ್ರಯತ್ನ ಮಾಡಿದರೆ ನಾನು ಏನೇನು ಮಾಡಬಹುದು, ಏನೇನು ಮಾಡಬೇಕು ಎಂದೆಲ್ಲಾ ಆಲೋಚಿಸುತ್ತಾ ಓರೆಕಣ್ಣಿನಲ್ಲೆ ಅವನೆಡೆಗೂ ನೋಡುತ್ತಾ ಚಡಪಡಿಸುತ್ತಿದ್ದೆ. ಅಷ್ಟರಲ್ಲಿ ದೂರದಲ್ಲಿ ಇವರು ನಿಧಾನಕ್ಕೆ ನಡೆದು ಬರುತ್ತಿರುವುದು ಕಾಣಿಸಿತು. ಅಬ್ಬಾ ಬದುಕಿದೆಯಾ ಬಡಜೀವವೇ ಎಂದುಕೊಂಡು ಸ್ವಲ್ಪ ಹಗುರವಾದೆ. ಅವನೂ ಈಗ ಕಾರಿನಿಂದ ಕೊಂಚ ಆ ಕಡೆ ನಿಂತಂತನಿಸಿತು. ಇವರು ಬಂದು ಕಾರೇರಿದೊಡನೇ ಅವನು ಇವರ ಪಕ್ಕದ ಡೋರ್ ಕಡೆಗೆ ಕಾರಿನೆದುರಿನಿಂದಲೇ ನಡೆದು ಹೋದ. ಇವರೂ ಅವನ ಕಡೆಗೆ ತಿರುಗಿ ’ಹ್ಹೋ.. ವಾಸು .. ಇದೇನು ಇಲ್ಲಿ’ ಅಂದರು.
’ ಸಾರ್ .. ಕಾರಿನ ಗಣಪತಿಗೆ ಇಟ್ಟಿದ್ದೀರಲ್ಲಾ ಜರ್ಬೇರಾ ಹೂವು ಅದು ನಿಮ್ಮಲ್ಲೇ ಆಗಿದ್ದಾ? ನಾನು ರೋಡಿನ ಆ ಕಡೆಯಿಂದಲೇ ಅದನ್ನು ಕಂಡು ನಿಮ್ಮ ಕಾರಿನ ಹತ್ರ ಬಂದೆ. ಮತ್ತೆ ಮೇಡಮ್ ಮಾತ್ರ ಇದ್ರು ಕಾರಲ್ಲಿ. ಅವ್ರಿಗೆ ನನ್ನ ಗುರ್ತ ಇಲ್ಲ .. ನೀವು ಈಗ ಬರಬಹುದು ಅಂತ ಕಾರಿನ ಪಕ್ಕದಲ್ಲೇ ನಿಂತು ನಿಮಗಾಗಿ ಕಾಯ್ತಾ ಇದ್ದೆ. ಆ ಹೂವಿನ ಬಣ್ಣ ಎಷ್ಟು ಚೆನ್ನಾಗಿದೆ ಸಾರ್.. ಕಣ್ಣು ತೆಗೆಯಲೇ ಮನಸ್ಸು ಬರೋದಿಲ್ಲ.. ನಿಮ್ಮನೆಯದ್ದೇ ಆಗಿದ್ರೆ ನಂಗೂ ಒಂದು ಗಿಡ ಬೇಕು ಸಾರ್… ನಮ್ಮಲ್ಲಿ ಹಳೇ ಟಯರ್ ಗೆ ಮಣ್ಣು ತುಂಬಿ ತುಂಬಾ ಗಿಡ ನೆಟ್ಟಿದ್ದೇವಲ್ಲ.. ನೋಡಿ ಅಲ್ಲೇ ಕಾಣ್ತಾ ಇದೆಯಲ್ಲಾ..’ ಎಂದ.
ನನ್ನ ಕಣ್ಣಿಗೆ ಕಟ್ಟಿದ್ದ ಭಯದ ಪರದೆ ಇಳಿದೊಡನೇ ಎದುರಿನಲ್ಲಿಯೇ ಇದ್ದ ಅವನ ಅಂಗಡಿ, ಅದರ ಪಕ್ಕದಲ್ಲಿ ಟಯರುಗಳ ರಾಶಿ, ಅಲ್ಲೆ ನಿಂತು ಟಯರುಗಳಿಗೆ ಗಾಳಿ ತುಂಬಿಸಿಕೊಳ್ಳುತ್ತಿರುವ ಒಂದೆರಡು ಜನ ಮತ್ತು ನಾನು ಅಲ್ಲಿಯವರೆಗೆ ಕಾಣದೇ ಇದ್ದ ಹೂಗಿಡಗಳ ಬಣ್ಣ ಬಣ್ಣದ ಸುಂದರ ಲೋಕ ಕಣ್ಣಿಗೆ ಬಿತ್ತು.
-ಅನಿತಾ ನರೇಶ್ ಮಂಚಿ
*****
ಹ ಹ 🙂 ….
ಕಣ್ಣ ಮು೦ದೆ ನಡೆದ೦ತೆ ಬರೆಯುವ ನಿಮ್ಮ ಬರವಣಿಗೆ ಎ೦ದಿನ೦ತೆ ಇಷ್ಟವಾಯ್ತು ಅನಿ…
good