ಹಳವಂಡ ಕನಸು. ಅದ್ಹೇನೋ ಸಮಾರಂಭ. ಹೋದಲೆಲ್ಲಾ ಚಿವುಟಿದಂತೆ; ದೇಹದ ಎದೆ ಹಾಗೂ ಕಿಬ್ಬೊಟ್ಟೆ ಭಾಗಕ್ಕೆ ಯಾರೋ ತಿವಿದಂತೆ. ತಿವಿಯುವ ಕೈ ಮತ್ತು ಮುಖ ಮಾತ್ರ ಅಸ್ಪಷ್ಟ. ಕಿರುಕುಳ ಮುಂದುವರಿದಂತೆ, ಅದರಿಂದ ತಪ್ಪಿಸಿಕೊಂಡ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಂತೆ ಅದೆಂಥದೋ ಭಾರ ಎನಿಸುವ ಕನಸು. ಯಾರೋ ವೆಹಿಕಲ್ ಪಾರ್ಕಿಂಗ್ ಗೇಟ್ ತೆರದಂತೆ ಸದ್ದು. ಇದ್ದಕ್ಕಿದ್ದಂತೆ ಎಚ್ಚರವಾಯ್ತು. ಎದೆಯ ಮೇಲೆ ಕೈಯಿಟ್ಟು ಮಲಗಿದ್ದಕ್ಕೋ ಏನೋ…ಇರಬೇಕು. ಕೆಟ್ಟ ಕನಸು. ಬೆಡ್ ರೂಂ ಲೈಟ್ ಹಾಕಿದ. ಕೋಣೆಯಲ್ಲಿ ಆತನ ಜೊತೆ ಇರುವುದು ಬೆಳಕು ಮಾತ್ರ. ಅದು ಸ್ವಿಚ್ ಒತ್ತಿದ್ದಕ್ಕೆ ಹೊತ್ತಿಕೊಂಡ ಬಲ್ಬ. ಅದಕ್ಕೂ ಮೊದಲು ಇದ್ದುದು ಕತ್ತಲು, ಕೋಣೆ, ಹಾಸಿಗೆ ಮತ್ತು ಆತ.
ಹಗಲು ಆಯುಧ ಪೂಜೆ. ಅಕ್ಟೋಬರ್ ಎರಡರ ಮರುದಿನ. ರಜೆ ಶುರುವಾಗಿತ್ತು. ಮಗ ಅಜ್ಜಿ ಮನೆ ಊರಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದ. ಶಾಲೆಯಿಂದ ಬಂದದ್ದೇ ತಡ ತಾಯಿ ಜೊತೆ ಹೊರಟು ನಿಂತ. ಟ್ರೇನ್ ಹಿಡಿದು ಊರಿಗೆ ಪಯಣಿಸಿದ್ದರು. ಅವರ ತುಡಿತ ಅವರಿಗೆ. ಅದು ಕಂಡು ಕೋಪ ಬಂದಿತ್ತಾದರೂ ಅದನ್ನು ರೈಲ್ವೆ ನಿಲ್ದಾಣದ ಎದುರು ಜನರೆದರು ತೋರಲು ಆಗಲಿಲ್ಲ. ಏನು ಅವಸರ ಇತ್ತು ಎಂದು ಕೊಂಚ ರೇಗಿಕೊಂಡನಾದರೂ, ಸ್ಟೇಶನ್‌ನಲ್ಲಿ ಸಿಕ್ಕ ಗೆಳೆಯನೊಬ್ಬನ ಕಾರಣ ಕೋಪವನ್ನು ಅದುಮಿಕೊಂಡಾಗಿತ್ತು. ಸ್ಟೇಶನ್‌ನಲ್ಲಿ ಬಿಟ್ಟು, ಇನ್ನು ಇಪ್ಪತ್ತು ನಿಮಿಷದಲ್ಲಿ ಬರಲಿದ್ದ ಟ್ರೇನ್ ಕಾಯದೇ ಕಾರ್ ಹತ್ತಿ ಮನೆಗೆ ಮರಳಿದ್ದೆ. ಬಂದವನೇ ಕಳುಹಿಸಿದ ಬೇಕಿದ್ದ ಸುದ್ದಿಯನ್ನು ಟೈಪಿಸಿ, ಮೇಲ್ ಮಾಡಿ ಸಂಜೆ ಹೊತ್ತಿಗೆ ನಿರಾಳನಾಗಿದ್ದ. ಮಾಮೂಲಿಯಂತೆ ಸಂಜೆ ದಂಡೆಯಲ್ಲಿ ತೆರೆದ ಆಕಾಶಕ್ಕೆ ಮುಖಮಾಡಿ ಓಡಾಡಿದ್ದಾಯಿತು. ಮುತ್ತಿಡುವ ತಂಗಾಳಿ, ಅನುರಾಗ ಹೊತ್ತು ತರುವ ಅಲೆಯಲ್ಲಿ ಕಳೆದು ಹೋದ ದಿನಗಳನ್ನು ಮೆಲುಕು ಹಾಕುತ್ತಾ ಬರಬಹುದಾದ ಯಾವುದೋ ಪೋನ್‌ಗಾಗಿ ಕಾದರೂ, ಹಾಗೇನು ಕರೆ ಬರಲಿಲ್ಲ. ಈ ಬದುಕು ಬರೀ ಕಾಯುವುದೇ ಆಯಿತು ಅಂದುಕೊಳ್ಳುತ್ತಲೇ, ಪ್ರವಾಸಿ ಮಂದಿರದ ಫರ್ನಾಂಡಿಸ್‌ನ ಖಾನಾವಳಿಯಲ್ಲಿ ರುಚಿಯಾದ ಮೀನೂಟ ಉಂಡು ಮರಳಿದ್ದ. ಅಂದು ರಾತ್ರಿಯನ್ನು ಒಬ್ಬನೇ ಕಳೆದ ನಂತರ ಒಂದು ಹಗಲು ಜಾರಿ ಮಾಮೂಲಾಗಿ ಜಾರಿಹೋಗಿತ್ತು. ಮತ್ತೊಂದು ರಾತ್ರಿ ಆರಂಭವಾಗಿತ್ತು. ಹಗಲು ಭಾರ ಎನಿಸಿರಲಿಲ್ಲ. ಎಂಟೋ ಹತ್ತೋ ವರ್ಷದ ಹಿಂದೆ ನೆಟ್ಟ ನೆರಳು ನೀಡುವ ಮರ. ಹಳದಿ ಬಣ್ಣದ ಹೂಬಿಡುವ ಜಾತಿಯದ್ದು. ಗುಲ್ಮೋಹರ್ ಪ್ರಬೇಧದ ಮತ್ತೊಂದು ಮರ. ಹೆಸರು ಬೇರೆ. ಬಣ್ಣ ಬೇರೆ. ಬೇಗ ಬೆಳೆದು ಹರಡಿಕೊಳ್ಳುವ ಮರ. ಬೆಂಕಿಕಡ್ಡಿ ತಯಾರಿಕೆಗೆ, ಉರುವಲಿಗೆ ಬಳಸುವ ಮರ. ಮನೆಯ ಕಾಂಪೌಂಡು ಸಡಿಲಿಸುವಷ್ಟು ಬೊಡ್ಡೆ ದಪ್ಪವಾಗಿತ್ತು. ಮನೆಯ ಎರಡನೇ ಅಂತಸ್ತು ಮೀರಿ ಎತ್ತರಕ್ಕೆ ಬೆಳೆದು ನಿಂತಿತ್ತು. ಅದರ ಎಲೆ, ಬೀಜಗಳು ತಗಡಿನ ಮಳೆ ನೀರು ಹರಿಯುವ ಹರಣಿಗೆಯಲ್ಲಿ ಸೇರಿ ಸಂಗ್ರಹವಾಗಿ ಮಳೆ ನೀರು ಬೀಳಲು ಅಡೆ ಮಾಡುತ್ತಿತ್ತು. ದೊಡ್ಡ ಗಾಳಿಗೆ ಬಿದ್ದರೆ ಮನೆಯ ಮೇಲೋ, ದಾರಿಯ ಅಡ್ಡಕ್ಕೋ ಬಿದ್ದು, ಕೆಳಗೆ ನಿಂತ ವಾಹನಗಳಿಗೆ ಜಖಂ ಮಾಡುವ ಭಯದಿಂದ ಟೊಂಗೆ ಸವರಿಸಿ ಹಾಕಿದ್ದ. ಎರಡು ಆಳುಗಳಿಂದ. ಬೆಳೆದ ಮರದ ತಲೆ ಕೈಕಾಲು ಕತ್ತರಿಸಿ ಹಾಕಿದ ದುಷ್ಟ ಅನುಭವ ಕಾಡುತ್ತಿತ್ತು. ಒಬ್ಬನೇ ಬೇರೆ. ಪ್ರೀತಿಯ ನಾಯಿ ಚಿನ್ನಿಗೆ ಅನ್ನ ಇತ್ತು. ಸಾರು ಬೇಕಿತ್ತು. ಆತ ಹೊರಗೆ ಊಟ ಮಾಡಿ, ಸಾರು ತಂದು ಕಲಸಿ ಚಿನ್ನಿ ಹೊಟ್ಟೆಗೆ ಹಾಕಿ ಕೊಂಚ ಅಪರಾಹ್ನ ನಿದ್ದೆಗೆ ಜಾರಿದ್ದ.
ಇಳಿಸಂಜೆ. ಪೋನ್ ರಿಂಗಣಿಸಿತು. ಅರೆ ೫.೩೦ ಆಗಿದೆ. ಎದ್ದು ಪೋನ್‌ಗೆ ಉತ್ತರಿಸಿ, ಚಹಾಕ್ಕಿಟ್ಟು ಟಿವಿಯತ್ತ ಕಣ್ಣಾಯಿಸಿದೆ. ೫ ನಿಮಿಷ ಬಿಸಿ ಬಿಸಿ ಟೀ ಹೀರಿ. ಕಾರ್ ಹೊರತೆಗೆದು ಪೇಟೆ ಸುತ್ತಿ ಬರಲು ಹೊರಟಾಯ್ತು. ಸಿಕ್ಕ ಗೆಳೆಯರ ಜೊತೆ ಹರಟಿ ಬಂದು, ಫ್ರೀಜ್‌ನಲ್ಲಿದ್ದ ತಣ್ಣನೆಯ ಮೀನಿನ ತಂಡಿ ಮೈ ಸಹಜವಾಗಲು ಬಿಟ್ಟು, ಅನ್ನ ಮಾಡಿದೆ. ತಣ್ಣನೆಯ ಐಸ್ ನಿಂದ ಕಳಚಿಕೊಂಡ ಮೀನನ್ನು ಬಿಸಿ ಬಂಡೆಯ ಮೇಲಿಟ್ಟು ಹುರಿಯಲು ಅಣಿಯಾದ.
ಅಡಿಗೆ ಮಾಡಿ ಹಾಕುವ ಹೆಣ್ಣಿದ್ದರೆ ಚೆಂದ ಅನ್ಸಿತು. ಒ.ಕೆ. ಒಂಟಿತನವೂ ಅನುಭವವೇ. ರೂಢಿಯಾಗಬೇಕು. ಜಗತ್ತು ಒಂಟಿಯಾಗಿಸಿದ ಅನುಭವ. ನಮ್ಮನ್ನು ಬಳಸಿಕೊಂಡು ಬಿಡುವ, ಒಮ್ಮೊಮ್ಮೆ ಬಿಸಾಡುವ ಸುತ್ತಣ ಜಗತ್ತು. ಕ್ರೂರ ಜಗತ್ತು. ಭಯ ಮತ್ತು ಒಂಟಿತನ ಕುರಿತದ್ದು. ಈ ಕ್ಷಣದ ಅವಸ್ಥೆ ತಪ್ಪಿಸಿಕೊಳ್ಳಲು ಬರೆಯುತ್ತಿದ್ದೇನೆಯೇ. ಓದು ಅಥವಾ ಬರಹಕ್ಕೆ ಈ ಒಂಟಿತನದಿಂದ ತಪ್ಪಿಸಿಕೊಳ್ಳುವ, ಖಾಲಿತನ ತುಂಬಿಕೊಡುವ, ಭಯವನ್ನು ಕಿತ್ತೆಸೆಯುವ ಶಕ್ತಿ ಇದೆಯೇ ಅಂದುಕೊಳ್ಳುತ್ತಲೇ ಆತ ಬರೆಯತೊಡಗಿದೆ. ಹೇಳಬೇಕೆಂದು ಕೊಂಡಿದ್ದೇನು? ಕ್ಷಣ ಮರೆತಂತಾಯಿತು.
ಹಾ!! ನೆನಪಾಯಿತು. ಒಂದನ್ನು ಬಿಟ್ಟು ಮತ್ತೊಂದಕ್ಕೆ ಶಿಫ್ಟ್ ಆದ ಮನಸ್ಥಿತಿ. ಎಲ್ಲಿಗ್ಹೋ ಹೋಗಬೇಕಿತ್ತು. ಏನನ್ನೋ ಮಾಡಬೇಕಿತ್ತು. ಅದಾಗಲಿಲ್ಲ. ಮತ್ತಿನ್ನೇನೊ ಆಯಿತು. ನಾಗಪುರಕ್ಕೆ ಹೋಗಲು ಆತ ಸಜ್ಜಾಗಬೇಕಿತ್ತು. ಹಾಗೇ ನೋಡಿದರೆ ಈ ರಾತ್ರಿ ಬೆಳಗಾವಿಯಲ್ಲಿ ಕಳೆದು, ಮರುದಿನ ಎದ್ದು ನಾಗಪುರಕ್ಕೆ !! ಅದೇ ಅಂಬೇಡ್ಕರ್ ಹುಟ್ಟಿದ ಸ್ಥಳ ನೋಡಲು ತೆರಳಬೇಕಿತ್ತು. ಅದಾಗಲಿಲ್ಲ. ಏನೋ ಕಾರಣ ಕೆಲಸವೂ ಬದಲಾಗಿತ್ತು. ಯೋಜಿತ ಕಾರ್ಯಕ್ರಮಕ್ಕೆ ಅತ್ತ ಸ್ನೇಹಿತರಿಂದ ಕರೆಯೂ ಬಂದಿರಲಿಲ್ಲ. ಅದ್ಹೇನೋ ಅಡಚಣೆ. ಕಾರ್ಯಕ್ರಮ ಬದಲಾಗಿತ್ತು. ಇದಲ್ಲ ಹೇಳಬೇಕೆಂದುದು. ಬರೆಯಬೇಕಾದುದು ಬೇರೆಯದೇ ಮನಸ್ಥಿತಿ.
ಹಾಸಿಗೆಯ ಮೇಲೆ ಕುಳಿತು ಬರೆಯುತ್ತಿದ್ದ ಆತ. ಎಡಗಾಲು ಜೌ ಬಂತು. ಮರಗಟ್ಟಿತು. ಎದ್ದು ಹೋಗಿ ಉಚ್ಚೆ ಹೋಯ್ದು ಬಂದ. ಬೆಳಕಿನ ರೂಮ್ ನಿಂದ ಕತ್ತಲು ಕೋಣೆಗೆ ಬೆಳಕು ಹಾಯಿತು. ಅಲ್ಲಿಂದ ಬಲಕ್ಕೆ ಟಾಯ್‌ಲೆಟ್ ರೂಮ್. ನಲ್ಲಿ ನೀರು ಮೊಗ್ಗು ತುಂಬಿದ ಶಬ್ದ. ನೀರು ಚೆಲ್ಲಿದ ಶಬ್ದ. ಮನೆ ಹೊರಗೆ ನಿರ್ಜನ ಬೀದಿ. ಒಂಟಿ ರಸ್ತೆ. ಒಬ್ಬಂಟಿ ರಸ್ತೆ. ತಲೆ, ಮೈ, ಕೆತ್ತಿಸಿಕೊಂಡ ಮರ, ಅಪಘಾತದಲ್ಲಿ ಗಾಯಗೊಂಡಂತೆ ಮುಗಿಲಿಗೆ ಮುಖಮಾಡಿ ನಿಂತಿತ್ತು. ತನ್ನ ಆಯುಷ್ಯದ ಹತ್ತನೇ ವರ್ಷದಲ್ಲಿ ಇಷ್ಟೊಂದು ದೊಡ್ಡ ಅಘಾತ ಆದದ್ದು ಇದೇ ಮೊದಲು. ಇದಕ್ಕೂ ಮೊದಲು ಇಲ್ಲವೇಂದೇನಿಲ್ಲ. ದಾರಿಗೆ ಬಾಗಿದ, ಬುಡದಲ್ಲಿ ಬೆಳೆಯುತ್ತಿದ್ದ ಸಣ್ಣ ರಂಬೆ ಕೊಂಬೆಗಳನ್ನು ಕತ್ತರಿಸುತ್ತಿದ್ದುದು ಆಗಾಗ ಆರುತಿಂಗಳಿಗೂ , ವರ್ಷಕ್ಕೂ . ಅವೆಲ್ಲಾ ಸಣ್ಣಪುಟ್ಟ ಗಾಯಗಳು. ಮಕ್ಕಳು ಆಡುವಾಗ ಬಿದ್ದು ಮಂಡಿ ಕೆತ್ತಿಸಿಕೊಂಡಂತೆ. ಆದರೆ ಇವತ್ತು ಆದದ್ದು ಮಾತ್ರ ದೊಡ್ಡ ಪ್ರಮಾಣದ ಗಾಯ.
ಹೇಳಬೇಕೆಂದುದು ಬರೆಯಬೇಕಾದುದು ಬೇರೇನೋ ಇದೆ. ಅದನ್ನು ಯಾವುದೋ ಮನಸ್ಥಿತಿ ಬರೆಯದಂತೆ ಹೇಳದಂತೆ ತಡೆಯುತ್ತಿದೆ. ಬದುಕು ಹೀಗಿರಬೇಕಾಗಿರಲಿಲ್ಲ. ಬೇರೇನೋ ಆಗಿರಬೇಕಾಗಿತ್ತು. ಅದು ಮತ್ತೊಂದು ರೀತಿಯಾಗಿತ್ತು. ಅಸಮಾಧಾನ ತುಂಬಿಕೊಂಡ ಭೂಮಿ ಒಡಲಿನಂತೆ ಇತ್ತು ಆತನ ಮನಸ್ಸು.
ಈಗ ಇದ್ದುದು ಕೋಣೆ. ಮುಂಚದ ಮೇಲೆ ಯಾವಾಗಲೂ ಬಿದ್ದು ಕೊಂಡಿರುವ ಹಾಸಿಗೆ, ಹಾಕಿದಾಗ ತಿರುಗುವ ಫ್ಯಾನ್. ಒತ್ತಿದಾಗ ಹೊತ್ತಿಬೆಳಗುವ ಬಲ್ಬು. ಬಿಟ್ಟರೆ ಗೋಡೆಗೆ ತೂಗುಬಿಟ್ಟ ಗಡಿಯಾರ. ಸಮಯ ಬೆಳಗಿನ ಜಾವ ೨.೪೦. ಆಗಿತ್ತು. ಬರೆದದ್ದು ಕೊಂಚ ಸಮಾಧಾನ ಹಾಗೂ ಮನಸ್ಸಿಗೆ ಬಲ ಬಂದಂತಾಗಿತ್ತು. ಭಯ ಮರೆಯಾಗಿತ್ತು.
ಬರೆಯಬೇಕಾದುದು ಇದಾಗಿರಲಿಲ್ಲ. ಬರೆಯಬೇಕಾದ ಚೌಕಟ್ಟು ಸರಿಯಾಗಿಯೇ ಇತ್ತು. ಹೇಳಬೇಕಾದ್ದು ಮಾತ್ರ ಬೇರೆಯೇ ಇತ್ತು. ಅದು ಏನು?
ಒಂಟಿ ರಾತ್ರಿ ಕುರಿತದ್ದೆ ?? ಒಂಟಿಯಾಗುವ ಮುನ್ನ ಇದ್ದ ಪಿಸುಮಾತುಗಳದ್ದೇ ?? ಆ ಪಿಸುಮಾತುಗಳಲ್ಲಿ ಕಳೆದುಹೋದ ನೆನಪುಗಳದ್ದೇ ???ಸ್ಪಷ್ಟವಾಗುತ್ತಿಲ್ಲ. ಹಳವಂಡ ಕನಸನೇ ಅಸಂಗತವಾಗಿತ್ತೇ ???
*****