ಹೀಂಗೊಂದ ಊರೊಳಗ ಒಬ್ಬ ಶ್ರೀಮಂತ ಜಮೀನದಾರ ಇದ್ನಂತ. ಆಂವಾ ಭಾಳ ಜೀನಗೊಟ್ಟ(ಜೀಪುಣ) ಇದ್ನಂತ. ತನ್ನ ಕೈ ಕೆಳಗ ಕೆಲಸಾ ಮಾಡೊವರ ಕಡೆ ಜಬರದಸ್ತ ಕೆಲಸಾ ತಗೋತಿದ್ನಂತ, ಆದ್ರ ಅವರಿಗೆ ಬರೊಬ್ಬರಿ ಪಗಾರನ ಕೋಡ್ತಿದ್ದಿಲ್ಲಂತ. ಆಳು ಮಕ್ಕಳು ಪಗಾರ ಕೇಳಲಿಕ್ಕೆ ಬಂದವರಿಗೆಲ್ಲ ಏನರೇ ನೆವಾ ಹೇಳಿ. ರೊಕ್ಕಾ ಕೊಡದಾ ಹಂಗ ಕಳಿಸ್ತಿದ್ನಂತ. ಇದರಿಂದ ಕೆಲಸಗಾರರಿಗೆ ಭಾಳ ನೋವಾಗ್ತಿತ್ತಂತ, ಜಮೀನದಾರಗ ಅಂಜಿ ಏನು ಹೇಳಲಾರದ ಸುಮ್ನಾಗ್ತಿದ್ರಂತ.
ಆದ್ರ ಜಮೀನದಾರಿಣಿಗೆ ಗಂಡನ ಈ ಜೀನಗೊಟ್ಟತನ ಒಟ್ಟ ಸೇರ್ತಿದ್ದಿಲ್ಲಂತ. ಆಕಿ ಜಮೀನದಾರಗ, “ ಏ ನೋಡು ನೀ ಮಾಡೂದ ಅನ್ಯಾಯದ ಕೆಲಸ. ಹಿಂಗ ಬಡವರ ಹೊಟ್ಟಿ ಮ್ಯಾಲೆ ಹೊಡದು ರೊಕ್ಕಾ ಕುಡಿಸಿದ್ರ ಅದೆಂದು ದಕ್ಕುದಿಲ್ಲ. “ ಜೀನರ ಬಾಳೆ, ನುಶಿ ತಿಂತಂತ” ಅನ್ನೊ ಮಾತು ಕೇಳಿಯಿಲ್ಲೊ “ ಅಂತ ಬೈತಿದ್ಲಂತ. ಅದಕ್ಕ ಆ ಜಮೀನದಾರ “ ಏ ಹೇಂಡ್ತಿ, ನೀ ಇದರಾಗೆಲ್ಲ ತಲಿ ಹಾಕಬ್ಯಾಡಾ. ನಂಗ ದಿನಾ ರುಚಿ ರುಚಿ ಅಡಗಿ ಮಾಡಿ ಹಾಕೊಂದೊಂದ ಕೆಲಸಾ ಮಾಡು ಸಾಕು ಅಂತ ಜಬರಿಸಿದ್ನಂತ.
ಹಿಂಗೊಂದ ಸಲ ಆಳು ಮಕ್ಕಳು ಕೆಲಸಾ ಮಾಡಬೇಕಾದ್ರ, ತ್ವಾಟದಾಗ ನೆಲ ಅಗಿಬೇಕಾದ್ರ ಏನೋ “ಠಣ್ ಠಣ್ ಅಂತ ಸಪ್ಪಳಾತಂತ. ಅದನ್ನ ಕೇಳಿ ಎಲ್ಲಾರು ನಿಧಿ-ಗಿಧಿ ಇರಬಹುದೇನೊ ಅಂತ ನೆಲ ಅಗದು ನೋಡಿದ್ರ ಅಲ್ಲೊಂದು “ಶಂಖ” ಇತ್ತು, ಎಲ್ಲಾರು ನಿರಾಸೆಯಿಂದ, “ ಅಯ್ಯ, ಶಂಖನ ಅಂದು ಸುಮ್ನಾದ್ರಂತ, ಆದ್ರ ಒಬ್ಬಾಂವ ಅದನ್ನ ಜೋರಾಗಿ ಊದಿದ್ನಂತ. ಅಷ್ಟ ಊದಿದ್ದ ತಡಾ, ಅದರೊಳಗಿಂದ ಒಂದು ಭಯಂಕರ ಬ್ರಹ್ಮರಾಕ್ಷಸ ಹೋರಗ ಬಂತಂತ. ಅದನ್ನ ನೋಡಿ ಎಲ್ಲಾರು ಹೆದರಿ ಓಡಿ ಹೋದ್ರಂತ. ಆದ್ರ ಶಂಖ ಊದಿದಂವಾ ಅಲ್ಲೆ ನಿಂತಿದ್ನಂತ ಹೆದರಿ ನಡಿಕ್ಕೊತ.
ಅಂವನ್ನ ನೋಡಿ ಆ ಬ್ರಹ್ಮರಾಕ್ಷಸ, ಹ್ಹ ಹ್ಹ ಹ್ಹಾ ಹ್ಹಾ “ ನನ್ನ ಹೆಸರು ಶ್ರೀನಿವಾಸಾಚಾರ ರಾಕ್ಷಸರಾಜ ಕೃಷ್ಣರಾಜಪೂರ.ಶಾರ್ಟಕಟ್ ನ್ಯಾಗ ಎಸ್. ಆರ್, ಕೆ ಕರಿಬಹುದು “ ಫೂಲ್ಲಿ ಲೋಡೇಡ್” ,ಹತ್ತುಸಾವಿರ ವರ್ಷದಿಂದ ಈ ಶಂಖದೊಳಗ ಬಂಧಿಯಾಗಿದ್ದೆ. ಇಷ್ಟು ವರ್ಷದ ಮ್ಯಾಲೆ ಭಾಳ ಉಪಕಾರಾತು ಬಿಡಿಸಿದ್ದಕ್ಕ. ನಾ ಈಗ ನಿಮ್ಮ ಗುಲಾಮ ಇದ್ದಿನಿ ,ಹೇಳ್ರಿ ನಾ ಎನ ಕೆಲಸಾ ಮಾಡ್ಲಿ. ಅಂತಂತ.
ಅಷ್ಟು ಕೇಳಿದ್ದ ತಡಾ ಆಳುಮಕ್ಕಳಿಗೆಲ್ಲ ಖುಷಿ ಆತಂತ. “ ನಾವಾಲ್ಲ ಹೋಲದಾಗ, ತೋಟದಾಗ ಮಾಡಲಾರದ ಕೆಲಸ ಎಲ್ಲ ಮಾಡಿ ಮುಗುಸು ಅಂತ ಹೇಳಿದ್ರಂತ. ಅದಕ್ಕ ಆ ಬ್ರಹ್ಮರಾಕ್ಷಸ ನಾ ಎಲ್ಲ ಕೆಲಸ ಮಾಡ್ತೇನಿ ಆದ್ರ ನಂದೊಂದು ಶರ್ತ ಅದ, ಅಂತಂತ. ಅದಕ್ಕ ಕೆಲಸ ಮಾಡೊವರೆಲ್ಲ, ಏ ಶರ್ತ ಗಿರ್ತ ಏನು ಇಲ್ಲ, ಹೇಳಿದ್ದ ಕೆಲಸಾ ಮದ್ಲ ಮಾಡಿ ಬಾ ಅಂದ್ರಂತ. ಅದಕ್ಕ ಅದು ಆತು ನಿಮ್ಮ ಹಣೆಬರಹ ನಾನೆನ ಮಾಡ್ಲಿಕ್ಕಾಗ್ತದ ಅಂದು ಕೆಲಸಾ ಮಾಡ್ಲಿಕ್ಕೆ ಹೋತಂತ. ಕಣ್ಣು ಮುಚ್ಚಿ ಕಣ್ಣು ತೆಗೆಯೊದ್ರೊಳಗ ರಾಕ್ಷಸ ಎಲ್ಲ ಕೆಲಸಾ ಮಾಡಿ ಬಂದು ಮತ್ತ ಎನರೆ ಕೆಲಸಾ ಹೇಳ್ರಿ ಅಂತ ಮುಂದ ನಿಂತಂತ. ಅರರೆ ಇಷ್ಟ ಲಗು, ಅಂತ ಆಶ್ಚರ್ಯ ಆತಂತ ಎಲ್ಲಾರಿಗೂ, ಎಲ್ಲಾ ಹೊಲಕ್ಕ ತ್ವಾಟಕ್ಕ ನೀರು ಹಾಯಿಸಿ ಬಾ ಅಂತ ಮತ್ತ ಕಳಸಿದ್ರಂತ.
ಎಲ್ಲಾ ಕೆಲಸಗಾರರು ಆರಾಮ ಹರಟಿ ಹೋಡ್ಕೋತ ನಕ್ಕೊತ ಹೊತ್ತು ಕಳಿಲಿಕತ್ತಿದ್ರಂತ ಅವರ ಆವಾಜ ಕೇಳಿ ಜಮೀನದಾರ ಬಂದು ನೋಡಿದ್ರ, ರಾಕ್ಷಸ ಕೆಲಸಾ ಮಾಡ್ಲಿಕತ್ತದ್ದ ನೋಡಿ, ಓಹ್ಹೊ ಹಿಂಗದಯೇನು ಈ ಹಕಿಕತ್ತು. ಅಂದು ಆಳುಮಕ್ಕಳ ಕಡೆಯಿಂದ ಆ ಶಂಖ ಕಸ್ಕೊಂಡು, ಇದು ನನ್ನ ಜಮೀನ ಒಳಗ ಸಿಕ್ಕದ. ನಾ ಇದರ ಮಾಲೀಕ. ನನ್ನ ಹೊಲದ್ದ ಮನಿದು ಎಲ್ಲ ಕೆಲಸ ನಾ ಇನ್ನ ಮ್ಯಾಲೆ ರಾಕ್ಷಸನ ಕಡೆ ಮಾಡಿಸ್ಕೊತೇನಿ ಇನ್ನ ನಿಮ್ಮ ಜರೂರತ್ತ ಇಲ್ಲ ನಂಗ ಅಂತ ಬೈದು ಕಳಿಸಿದಾ.
ಈ ಕಡೆ ಕೆಲಸ ಎಲ್ಲಾ ಮುಗಿಸಿಬಂದ ರಾಕ್ಷಸ, ಜಮೀನದಾರನ ನೋಡಿ, ಓಹ್ಹೊ ಹೊಸಾ ಮಾಲೀಕ, ಅಂದು, ಹ್ಹ ಹ್ಹಾ ಹ್ಹಾ “ ನನ್ನ ಹೆಸರು ಶ್ರೀನಿವಾಸಾಚಾರ ರಾಕ್ಷಸರಾಜ ಕೃಷ್ಣರಾಜಪೂರ.ಶಾರ್ಟಕಟ್ ನ್ಯಾಗ ಎಸ್. ಆರ್, ಕೆ ಕರಿಬಹುದು “ ಫೂಲ್ಲಿ ಲೋಡೇಡ್” ನಾ ನೀ ಹೇಳಿದ್ದ ಎಲ್ಲ ಕೆಲಸ ಮಾಡ್ತೇನಿ ಆದ್ರ ನಂದೊಂದ ಶರ್ತ ಅದ ಅಂತಂತ. ಅದೇನಂದ್ರ ನೀವು ನಂಗ 24 ತಾಸು ಕೆಲಸಾ ಕೊಡಬೇಕು ಇಲ್ಲಂದ್ರ ನಾನು ಮಾಲೀಕನ್ನ ತಿಂತೇನಿ ಅಂತ ಅಂತಂತ. ಅದನ್ನ ಕೇಳಿ ಜಮೀನದಾರ, ಹಾಂ ಹಾಂ ಇಷ್ಟನಾ, ಎನ ಚಿಂತಿ ಮಾಡಬ್ಯಾಡಾ, ನಾನಿಂಗ ತಲಿ ತುರುಸ್ಕೊಳ್ಳಿಕ್ಕೆ ಸುದ್ಧಾ ಪುರುಸೊತ್ತು ಇರಲಾರದಂಗ ಕೆಲಸಾ ಕೋಡ್ತೇನಿ ಅಂದು, ಕೆಲಸಾ ಹೇಳಿದ್ನಂತ ಮದ್ಲಾ ರಾಕ್ಷಸ ಅದು ಕಣ್ಣ ಮುಚ್ಚಿ ಕಣ್ಣ ತೆಗಿಯೊದ್ರಾಗ ಎಲ್ಲಾ ಕೆಲಸ ಮುಗಿಸಿ ಬಂದು ಧುತ್ತಂತ ನಿಂದ್ರತ್ತಿತ್ತಂತ.
ಜಮೀನದಾರಗ ಹೆದ್ರಿಕಿ ಆಗ್ಲಿಕ್ಕೆ ಶುರುವಾತಂತ. ಆಂವಾ ಬ್ರಹ್ಮರಾಕ್ಷಸಗ ಕರೆದು” ಉತ್ತರದ ದೇಶಗಳ ಕಡೆ ಹೋಗಿ ಛೋಲೊ ಬಿತ್ತಲಿಕ್ಕೆ ಭತ್ತ ಬೀಜ ತಗೊಂಡ ಬಾ” ಅಂತ ಕಳಿಸಿ, ಅಬ್ಬಾ. ನಾ ಕಳಿಸಿದ್ದ ಕೆಲಸ ಮಾಡಿಕೊಂಡ ಬರಬೆಕಂದ್ರ ಕಮ್ಮಸೆ ಕಮ್ ಒಂದು ವಾರಾದ್ರು ಆಗ್ತದ. ನಾ ಆರಾಮ ಇರಬಹುದು ಅಂತ ಮಲ್ಕೊಂಡನಂತ. ಹಿಂಗ ಜಂಪ ಹತ್ಲಿಕತ್ತಿತ್ತಂತ ಅಷ್ಟರಾಗ ಕೈಯ್ಯೊಳಗ ಭತ್ತದ ಚೀಲ ಹಿಡ್ಕೊಂಡು ಮುಂದ ರಾಕ್ಷಸ ಬಂದು ನಿಂತ್ನಂತ. ಅದನ್ನ ನೋಡಿ ಜಮೀನದಾರಗ ಇನ್ನೆನ ಕೆಲಸ ಹೇಳಬೆಕಂತ ತಿಳಿಲಾರದ ವಿಚಾರ ಮಾಡ್ಲಿಕತ್ತಾಗ ಕಿಡಕಿ ಒಳಗಿಂದ ತೆಂಗಿನ ಮರ ಕಾಣ್ಸಿತಂತ. ಹೋಗಿ ಎಲ್ಲಾ ಬಲಿತದ್ದು ಕಾಯಿಗೊಳನ್ನ ಇಳಿಸು ಅಂತ ಹೇಳಿ ರಾಕ್ಷಸನ್ನ ಸಾಗ ಹಾಕಿ, ಹೆದ್ರಿಕಿಯಿಂದ ನಡಿಕ್ಕೊತ, ಜಮೀನದಾರಿಣಿನ್ನ ಎಬ್ಬಿಸಿದ್ನಂತ. “ ಏ ಹೆಂಡ್ತಿ, ಏಳ, ಆ ರಾಕ್ಷಸ ನನ್ನ ತಿಂತಾನ. ಎನಾರ ಉಪಾಯ ಮಾಡೇಳು ಅಂತ ಅಂದ್ನಂತ. ಅದನ್ನ ಕೇಳಿ ಜಮೀನದಾರಿಣಿ, ಉಪಾಯ ಎನೋ ಮಾಡ್ತೇನಿ, ಆದ್ರ ನಂದೊಂದ ಶರ್ತ ಅದ ಅಂತಂದ್ಲಂತ. ಅದಕ್ಕ ಆಂವಾ ಅಯ್ಯೊ ಮಾರಾಯ್ತಿ ನಿಂದೂ ಶರ್ತ ಅದ ಏನ? ಆತು ಆತು ಹೇಳು ಅಂದ್ನಂತ. ಅದಕ್ಕ ಆಕಿ “ ಆ ರಾಕ್ಷಸನ ಕಾಟದಿಂದ ನಿನ್ನ ತಪ್ಪಿಸಿದ್ರ, ನೀ ಮೋಸಾ ಮಾಡಿ ಕೂಡಿಟ್ಟ ಆಳು ಮಕ್ಕಳ ಪಗಾರ ಎಲ್ಲ, ಅವರವರಿಗೆ ವಾಪಸ ಕೋಡ್ಬೇಕು. ಮತ್ತ ಇನ್ನಮ್ಯಾಲೆ ಹಿಂಗ ಮೋಸಾ ಮಾಡಂಗಿಲ್ಲಂತ ಮಾತು ಕೋಡಬೇಕು ಅಂತ ಹೇಳಿದ್ಲು. ಅದಕ್ಕ ಆಂವಾ ಹೂಂ ಅಂದ್ನಂತ. ಅದಕ್ಕೆ ಆಕಿ,” ಹಂಗಿದ್ರ ಆ ರಾಕ್ಷಸನ್ನ ನನ್ನ ಹತ್ರ ಕಳಿಸು, ಅಂತ ಹೇಳಿದ್ಲಂತ.
ಇತ್ಲಾಕಡೆ ಎಲ್ಲಾ ಕೆಲಸ ಮುಗಿಸಿದ ರಾಕ್ಷಸ ಜಮೀನದಾರನ ಕಡೆ ಬಂದು ಇನ್ನು ಎನರೆ ಕೆಲಸ ಇದ್ರೆ ಹೇಳಿ, ಇಲ್ಲಂದ್ರ ನಾ ನಿನ್ನ ತಿನ್ನಲಿಕ್ಕೆ ಶುರು ಮಾಡ್ತೇನಿ ಅಂತ ಹೇಳ್ತಂತ. ಅದಕ್ಕ ಆಂವಾ, ನನ್ನ ತಿನ್ನೊಕಿಂತ ಮೊದಲ, ಒಮ್ಮೆ ನನ್ನ ಹೆಂಡ್ತಿನ ಭೆಟ್ಟಿ ಆಗಿ ಬಾ, ಆಕಿಗೆನೊ ಕೆಲಸದ ನಿನ ಹತ್ರ ಅಂದ್ನಂತ. ಅದಕ್ಕ ಅದು “ಹಾಂ ಆತು ಹೋಗ್ತೇನಿ ಅಂದು, ಹೋಗಿ ಜಮೀನದಾರಿಣಿ ಮುಂದ ನಿಂತು, ಹ್ಹ ಹ್ಹಾ ಹ್ಹಾ “ ನನ್ನ ಹೆಸರು ಶ್ರೀನಿವಾಸಾಚಾರ ರಾಕ್ಷಸರಾಜ ಕೃಷ್ಣರಾಜಪೂರ.ಶಾರ್ಟಕಟ್ ನ್ಯಾಗ ಎಸ್. ಆರ್, ಕೆ ಕರಿಬಹುದು “ ಫೂಲ್ಲಿ ಲೋಡೇಡ್” ಅಂತಂತ.
ಅದಕ್ಕ ಆಕಿ “ ಹಾಂ ಹಾಂ ಇರ್ಲಿ, ಇರ್ಲಿ, ಅಂದು ತನ್ನ ತಲಿಯೊಳಗಿನ ಗುಂಗರು ಗುಂಗರು ಸುರಳಿ ಕುದಲ ಕಿತ್ತಿ, ರಾಕ್ಷಸನ ಕೈಗೆ ಕೊಟ್ಟು, ಇದನ್ನ ಸೀದಾ ಮಾಡು. ಇಲ್ಲಂದ್ರ ಇನ್ನು ಹತ್ತಸಾವಿರ ವರ್ಷ ತನಕ ಈ ಶಂಖದೊಳಗ ಮತ್ತ ಬಂಧಿಯಾಗು, ಎನೊ “ಫೂಲ್ಲಿ ಲೋಡೆಡ್” ಅಂತ ಹೇಳಿದ್ಲು. ಅದಕ್ಕ ಆ ರಾಕ್ಷಸ “ ಓ ಇಷ್ಟನಾ.. ಇದೇನ ಮಹಾ ಅಂದು ಕುದಲಾನ ಒಂದ ಸಲಾ ಜೊರಾಗಿ ಎಳೆದ,ಆದ್ರ ಅದು ಮತ್ತ ಸುರುಳಿ ಆತು. ಹಿಂಗ ಎಷ್ಟ ಸಲ ಮಾಡಿದ್ರು ಕೂದಲಮಾತ್ರ ನೆಟ್ಟಗ ಆಗಲೇಯಿಲ್ಲ. ರಾಕ್ಷಸಗ ತಲಿಕೆಟ್ಟು ಎನ ಮಾಡಬೇಕಪ್ಪ ಅನ್ನೊದ್ರಾಗ, ಅಲ್ಲೆ ಒಳಿಯೊಳಗ ಬೆಂಕಿ ಕಾಣಿಸ್ತಂತ, ಅದನ್ನ ನೋಡಿ, ಹಾಂ, ಎಂಥೆಂಥ ಕಬ್ಬಣದ ಸಳಿಗೊಳನ್ನ ಸೀದಾ ಮಾಡ್ತದ ಈ ಬೆಂಕಿ ಸೊಟ್ಟ ಒಂದ ಕೂದಲ ಎಳಿ ನೆಟ್ಟಗ ಮಾಡಂಗಿಲ್ಲೇನ ಅಂದು ಎಬ್ಬಂಕ ರಾಕ್ಷಸ, ಕೂದಲ ನ ಬೆಂಕಿಗೆ ಹಿಡದು, ಸುತಗಿಲೇ ಜೋರಾಗಿ ಬಡದ್ನಂತ. ಅಷ್ಟ ಮಾಡಿದ್ದ ತಡಾ ಕೂದಲ ಸುಟ್ಟು ಪುಡಿ ಪುಡಿ ಆತಂತ.
ಅದಕ್ಕ, ಜಮೀನದಾರಿಣಿ, ಏನ್ನೊ “ಫೂಲ್ಲಿ ಲೋಡೇಡ್” ನಾ ಹೇಳಿದ್ದ ಕೆಲಸ ನೀ ಪೂರ್ತಿ ಮಾಡಲೇಯಿಲ್ಲ. ನೀ ವಾಪಸ ಈ ಶಂಖದೊಳಗ ಬಂಧಿಯಾಗು, ಇಲ್ಲಿಗೆ ಮತ್ತೆಂದು ಬರದಂಗ ದೂರ ದೂರ ಓಡಿಹೋಗು ಅಂತಂದ್ಲಂತ. ಅದಕ್ಕ ರಾಕ್ಷಸ, ಇನ್ನೆಂದು ನಿಮ್ಮ ಸಹವಾಸಕ್ಕ ಬರುದಿಲ್ಲ, ಅಂದು ದೂರ ದೂರ ಹಾರಿ ಹೋಗಿಬಿಡ್ತಂತ.
ಹೆಂಡತಿ ಗೆ ಮಾತು ಕೊಟ್ಟಂಗ ಆ ಜಮೀನದಾರ ಆಳು ಮಕ್ಕಳಿಗೆಲ್ಲ ಅವರವರ ಪಾಲಿನ ಪಗಾರ ಕೊಟ್ಟು ಕಳಿಸಿದ್ನಂತ. ನ್ಯಾಯದಿಂದ, ಪ್ರಮಾಣಿಕತೆಯಿಂದ ಜೀವನ ನಡೆಸಿದ್ನಂತ……
*****
ವಿ.ಸೂ.: ಮಕ್ಕಳಿಗಾಗಿಯೇ ವಿಶೇಷವಾಗಿ ರೆಕಾರ್ಡ್ ಮಾಡಿರುವ ಸುಮನ್ ದೇಸಾಯಿಯವರ ಧ್ವನಿಯಲ್ಲಿರುವ ಈ ಕತೆ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ಲಿಂಕ್ ನ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಕತೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ ಮೇಲ್ ಗೆ ಕಳುಹಿಸಿ.. ನಮ್ಮ ಇ ಮೇಲ್ ವಿಳಾಸ editor.panju@gmail.com