ಬ್ಯಾಚುಲರ್ ಬದುಕಿನ ಬಾನ್ಗಡಿಗಳು…: ವಿನಾಯಕ ಅರಳಸುರಳಿ

ಅದೊಂದು ಅಮಾಯಕ ಟೆರಾಸ್. ಮೂರನೇ ಫ್ಲೋರಿನ ತುತ್ತತುದಿಯಲ್ಲಿ ನಿಶ್ಯಬ್ದವಾಗಿ ಮಲಗಿದೆ. ಸಮಯ ರಾತ್ರಿ ಹನ್ನೆರೆಡೂವರೆ. ಕೆಳಗಡೆ ಬೀದಿಯಲ್ಲಿ ಅಂಡಲೆಯುತ್ತಿರುವ ನಾಯಿಗಳಿಗೂ ಆಕಳಿಕೆ ಶುರುವಾಗಿದೆ.

“ನೋಡ್ತಿರು…ದೊಡ್ಡ ಸಾಧನೆ ಮಾಡಿ ನಾನೇನು ಅಂತ ತೋರಿಸ್ತೀನಿ ಅವಳಿಗೆ!”

ಅರ್ಧ ಕೆಜಿ ಅಳು, ಎರೆಡು ಕ್ವಿಂಟಾಲ್ ಹತಾಶೆ, ಎರೆಡು ಡಜನ್ ರೊಚ್ಚು, ಐದೂವರೆ ಕ್ವಾಟರ್ ನಶೆ ಹಾಗೂ ಸಾವಿರಾರು ಗ್ಯಾಲನ್ ದುಃಖ… ಇವೆಲ್ಲ ಒಟ್ಟಾಗಿ ಬೆರೆತ ಧ್ವನಿಯೊಂದು ಹಾಗಂತ ಅಬ್ಬರಿಸುತ್ತದೆ.

“ಹೂ ಮಚ್ಚೀ.. ನೀನೇನಾದ್ರೂ ಅಚೀವ್ಮೆಂಟ್ ಮಾಡ್ಲೇಬೇಕು. ನಿನ್ನ ಬಿಟ್ಟೋಗಿದ್ದು ಎಷ್ಟು ದೊಡ್ಡ ಲಾಸ್ ಅಂತ ಅವಳಿಗೆ ರಿಯಲೈಸ್ ಆಗ್ಬೇಕು. ಅದೇ ನನ್ ಆಸೆ ಮಚ್ಚೀ..”

ಪಕ್ಕದಲ್ಲಿ ನಾಲ್ಕನೇ ಕ್ವಾಟರ್ ನ ಹೊಡೆತಕ್ಕೆ ಸಣ್ಣಗೆ ತೊದಲುತ್ತಿರುವ ಧ್ವನಿ ಹಾಗಂತ ಬಡಬಡಿಸುತ್ತದೆ.

“ನಿಜ ಮಗ.. ನಿನ್ನಿಂದ ಸಾಧ್ಯ ಇದೆ. ಮಾಡು ಮಗಾ ಮಾಡು..”

ಪಕ್ಕದಲ್ಲೇ ಕುಳಿತಿರುವ ಮತ್ತೆರೆಡು ವಾಲುಗಾಡಿಗಳು ಹಾಗಂತ ಬೆನ್ನುತಟ್ಟುತ್ತವೆ. ಇದ್ದಕ್ಕಿದ್ದಂತೆ ಅಲ್ಲಿನ ವಾತಾವರಣವೇ ಬದಲಾಗುತ್ತದೆ. ಈಗ ಅಲ್ಲೊಂದು ವೇದಿಕೆ ಸಿದ್ಧವಾಗಿದೆ. ಪ್ರಧಾನ ಮಂತ್ರಿಗಳೂ ಸೇರಿದಂತೆ ಹಲವಾರು ಘಟಾನುಘಟಿಗಳು ಅಲ್ಲಿ ಆಸೀನರಾಗಿದ್ದಾರೆ.ಅವರೆಲ್ಲ ಸೇರಿ ಆರನೇ ಕ್ವಾಟರನ್ನೂ ಯಶಸ್ವಿಯಾಗಿ ‌ಕುಡಿದು ಮುಗಿಸಿರುವ ನಮ್ಮ ‘ಮಚ್ಚಿ’ಗೆ ಇನ್ನೇನು ಪ್ರಶಸ್ತಿ ಕೊಡಲಿದ್ದಾರೆ. ಅವನ ಗೆಳೆಯರೆಲ್ಲ ಚಪ್ಪಾಳೆ ತಟ್ಟಲು ಹೆಮ್ಮೆಯಿಂದ ತಯಾರಾಗಿದ್ದಾರೆ‌. ಕೈಕೊಟ್ಟುಹೋದ ಹುಡುಗಿಯೀಗ ‘ಇಂಥವನನ್ನು ಬಿಟ್ಟುಹೋದೆನಲ್ಲಾ’ ಎಂದು ಕೈಕೈ ಹಿಸುಕಿಕೊಳ್ಳುತ್ತಿದ್ದಾಳೆ..

“ಆಆಆಆಆ…. ಹಚೀ”

ಟೆರಾಸು ದೊಡ್ಡದಾಗಿ ಆಕಳಿಸುತ್ತದೆ. ಇಂತಹಾ ಅದೆಷ್ಟೋ ತಡರಾತ್ರಿಯ ಸನ್ಮಾನ ವೇದಿಕೆಗಳನ್ನೂ, ಹತಾಶ ಚಾಲೆಂಜ್ ಗಳನ್ನೂ ನೋಡೀ ನೋಡೀ ಅದಕ್ಕೂ ಬೋರಾಗಿದೆ. ಇನ್ನೇನು ಪ್ರಶಸ್ತಿ ಬಂದೇಬಿಟ್ಟಿತು ಎನ್ನುವಷ್ಟರಲ್ಲಿ ನಷೆಯೇರಿ ಧರಾಶಾಯಿಯಾದ ಧೀರರನ್ನೆಲ್ಲ ತನ್ನ ಎದೆಯ ಮೇಲೆ ಮಲಗಿಸಿಕೊಂಡು ಅದೂ ನಿದ್ರೆಗೆ ಜಾರುತ್ತದೆ.


ಬ್ರಹ್ಮಚಾರಿ ಜೀವನವೆಂದರೆ ಇಂತಹಾ ಅನೇಕ ಎಪಿಸೋಡ್ ಗಳ ಧಾರಾವಾಹಿಯಿದ್ದಂತೆ. ಹುಟ್ಟಿದೂರ ಬಿಟ್ಟುಬಂದು, ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು, ನಗರದ ಕಟ್ಟಡದ ಟೆರಾಸೊಂದರ ಮೇಲಿನ ರೂಮನ್ನು ಗೊತ್ತುಮಾಡಿಕೊಂಡು, ಜೊತೆಗಿರಲಿಕ್ಕೆ ಹಾಗೂ ಬಾಡಿಗೆಯ ಜೊತೆ ಅದೆಷ್ಟೋ ಬೈಟೂ ಕಾಫಿಗಳನ್ನೂ, ಫುಲ್ ಪ್ಲೇಟಿನ ಅರ್ಧ ಗೋಭೀ ಮಂಚೂರಿಗಳನ್ನೂ ಹಂಚಿಕೊಳ್ಳಲಿಕ್ಕೆ ರೂಮ್ ಮೆಟ್ ಒಬ್ಬನನ್ನು ಹುಡುಕಿಕೊಳ್ಳುತ್ತಿದ್ದಂತೆಯೇ ಬ್ಯಾಚುಲರ್ ಬದುಕು ಆರಂಭವಾಗುತ್ತದೆ. ಹಾಗೆ ಬರುವ ಪ್ರತಿಯೊಬ್ಬ ಬ್ರಹ್ಮಚಾರಿಯ ಹೆಗಲಿನ ಚೀಲದಲ್ಲೂ ಬಿಟ್ಟುಬಂದ ಬಾಲ್ಯದ ನೆನಪುಗಳಿರುತ್ತವೆ. ಆಡಾಡುತ್ತಾ ಅರ್ಧಕ್ಕೇ ಬಿಟ್ಟು ಎದ್ದುಬರುವಾಗ ಜೋಪಾನವಾಗಿ ಎತ್ತಿಟ್ಟುಕೊಂಡುತಂದ ಗೋಲಿಯೊಂದಿರುತ್ತದೆ. ಕಾಲೇಜಿನಲ್ಲಿ ಗೆಳೆಯರ ಜೊತೆ ಕೇಕೆ ಹಾಕಿ ಕುಣಿದ ಸಂಮಭ್ರಮದ ಅವಶೇಷಗಳಿರುತ್ತವೆ. ಶಹರದ ರಂಗ್ ಬಿರಂಗೀ ಬದುಕಿನೆಡೆಗೆ ಭಯ ಬೆರೆತ ಅಚ್ಚರಿಯ ದೃಷ್ಟಿಯಿರುತ್ತದೆ. ಸಿಗಲಿರುವ ಗೆಳೆಯ-ಗೆಳತಿಯರ ಬಗ್ಗೆ ಕುತೂಹಲವಿರುತ್ತದೆ.

ನಗರ ಬ್ರಹ್ಮಚಾರಿಗಳ ಪಾಲಿನ ಸ್ವರ್ಗ. ಇದು ಚಿಟ್ಟೆಯ ಪಾಲಿನ ಹೂದೋಟದಂತೆ; ಡೈನೋಸರ್ ಗಳ ಪಾಲಿನ ಜುರಾಸಿಕ್ ಪಾರ್ಕಿನಂತೆ! ಊರಿನಲ್ಲಿ ಅಪ್ಪ-ಅಮ್ಮನಾದಿಯಾಗಿ ಸರ್ವ ಬಂಧುಮಿತ್ರರಿಂದಲೂ ಪ್ರೀತಿಯಿಂದ ಬೀಳ್ಕೊಡಲ್ಪಟ್ಟ ಹಳ್ಳಿಹೈದನನ್ನು ಮೆಜಸ್ಟಿಕ್ಕಿನ ಅಪರಿಚಿತ ಬೀದಿಯಲ್ಲಿ ಅನಾಥವಾಗಿ ಇಳಿಸಿದ ಬಸ್ಸು ತಿರುವಿನಾಚೆಗೆ ಸಾಗಿ ಮರೆಯಾಗಿಬಿಡುತ್ತದೆ. ‘ಹೊಸನಗರ ಟೂ ಬೆಂಗಳೂರು’ ಎಂಬ ಬೋರ್ಡಿನಲ್ಲಿ ತನ್ನೂರಿನ ಹೆಸರನ್ನು ಕೊನೆಯಬಾರಿಯೊಮ್ಮೆ ನೋಡಿಕೊಂಡ ಅವನು ನೂರಾರು ಅಪರಿಚಿತರ ಮೆಜಸ್ಟಿಕ್ಕಿನ ಬೀದಿಯಲ್ಲಿ ತನ್ನವರನ್ನು ಹುಡುಕುತ್ತಾ ಮೊದಲ ಹೆಜ್ಜೆಯಿಡುತ್ತಾನೆ. ಯಾವುದೋ ಗೆಳೆಯ/ಅಣ್ಣ/ಬಂಧುವು ಟೆರಾಸಿನ ಮೇಲೆ ಮಾಡಿಕೊಂಡಿರುವ ಒಂಟಿ ರೂಮು ಅಲ್ಯಾವುದೋ ಏರಿಯಾದ ಎಷ್ಟನೆಯದೋ ಕ್ರಾಸಿನಲ್ಲಿ ಅವನ ಹಾದಿಯನ್ನೇ ಕಾಯುತ್ತಿರುತ್ತದೆ.

ನಗರಕ್ಕೆ ಕಾಲಿಟ್ಟ ಮೇಲೆ ಎದುರಾಗುವ ಮೊದಲ ಸವಾಲೆಂದರೆ ಇಂಟರ್ವ್ಯೂ ಎಂಬ ಸ್ವಯಂವರ. ಇಷ್ಟು ವರ್ಷ ಕಾಲೇಜಿನಲ್ಲಿ ಕಲಿತ ಬಿಲ್ವಿದ್ಯೆ, ಕತ್ತಿವರಸೆ, ಕಳರೀಪಯಟ್ ಗಳನ್ನೆಲ್ಲಾ ಇಂಟರ್ವ್ಯೂವರ್ ಎಂಬ ಮಹಾರಾಜನೆದುರು ಎಷ್ಟೇ ವೀರೋಚಿತವಾಗಿ ಪ್ರದರ್ಶಿಸಿದರೂ ಅವನು ಕೆಲಸವೆಂಬ ಯುವರಾಣಿಯನ್ನು ಕೊಡದೇ ಸತಾಯಿಸುತ್ತಾನೆ. ಕೊನೆಗೂ ಯಾವುದೋ ಒಂದು ಕಂಪನಿಯಲ್ಲಿ ಶಿವಧನುಸ್ಸನ್ನು ಮುರಿದು ಕೆಲಸಗಿಟ್ಟಿಸುವ ಹೊತ್ತಿಗೆ ಬೆಂಗಳೂರಿನ ಹಲವಾರು ಏರಿಯಾಗಳ ಹೆಸರುಗಳೂ, ಬಿಎಂಟಿಸಿ ಬಸ್ಸಿನ ನಂಬರ್ ಗಳೂ ಬಾಯಿಪಾಠವಾಗಿ, ಬೆಂಗಳೂರು ವಾರದ ಹಿಂದೆ ಪರಿಚಯವಾದ ಹೊಸ ಗೆಳೆಯನಂತಾಗಿರುತ್ತದೆ.

ಮೊದಲ ಉದ್ಯೋಗವೆಂದರೆ ಅವನು ಆಯ್ದುಕೊಳ್ಳುವುದಲ್ಲ, ಅವನನ್ನು ಆಯ್ಕೆಮಾಡಿಕೊಳ್ಳುವುದು! ಹಕ್ಕಿಯೊಂದು ಪುಟ್ಟ ಗೂಡಿನಿಂದ ವಿಶಾಲ ಜಗತ್ತಿಗೆ ಬಿದ್ದ ಸಮಯವದು. ಚಿಕ್ಕ ಹಳ್ಳಿಯಿಂದ ರಾಕ್ಷಸ ಪಟ್ಟಣಕ್ಕೆ, ವಿದ್ಯಾರ್ಥಿ ಜೀವನದಿಂದ ಔದ್ಯೋಗಿಕ ಬದುಕಿಗೆ, ಕನ್ನಡವಷ್ಟೇ ಇದ್ದ ಊರಿನಿಂದ ತೆಲುಗು, ತಮಿಳು, ಮಲೆಯಾಳ, ಹಿಂದಿ, ಇಂಗ್ಲೀಷುಗಳೆಲ್ಲದರ ಕಲಸು ಮೆಲೋಗರಕ್ಕೆ, ಅಪ್ಪ-ಅಮ್ಮ-ಗೆಳೆಯರ ಮಡಿಲಿನಿಂದ ಅಪರಿಚಿತ ಪ್ರತಿಸ್ಪರ್ಧಿಗಳಿರುವ ರಂಗಸ್ಥಳಕ್ಕೆ… ಹೀಗೆ ಬದುಕು ಈವರೆಗೆ ಕಾಣದ ಬೇರೆಯದೇ ವಾತಾವರಣಕ್ಕೆ ಥಟ್ಟನೆ ಹೊರಳಿಕೊಂಡುಬಿಟ್ಟಿರುತ್ತದೆ‌. ಬಸ್ಸಿನಲ್ಲಿ ಅಪರಿಚಿತೊಬ್ಬ ಜಗಳಕ್ಕೇ ನಿಲ್ಲುತ್ತಾನೆ. ಯಾರೋ ಮೊಬೈಲು, ಪರ್ಸು ಎಗರಿಸುತ್ತಾರೆ. ಆಫೀಸಿನಲ್ಲಿ ಬಾಸು ಕಿರುಚುತ್ತಾನೆ. ಸೀನಿಯರ್ ಸಿಡುಕುತ್ತಾನೆ. ಬದುಕು ಟ್ರಾಫಿಕ್ಕು-ಆಫೀಸುಗಳೆಂಬ ನಿಂತನೀರಿನಲ್ಲಿ ಮೆಲ್ಲನೆ ಬೆಳೆಯತೊಡಗುತ್ತದೆ. ಬೆಳಗಾಗುತ್ತಿದ್ದಂತೆಯೇ ಹಾಕಿ ಹೊರಟ ರೂಮಿನ ಬಾಗಿಲನ್ನು ಕತ್ತಲಾದ ನಂತರವೇ ತೆರೆಯುವಂತಾಗುತ್ತದೆ. ಸೂರ್ಯ ಅಪರಿಚಿತನಂತನಾಗುತ್ತಾನೆ. ಊರು, ಅಪ್ಪ, ಅಮ್ಮ, ಗೆಳೆಯರ ನೆನಪು ಉಕ್ಕುಕ್ಕಿ ಬರುತ್ತದೆ‌. ಫೋನು ದಿನಕ್ಕೆ ಹತ್ತು ಬಾರಿ ಅಮ್ಮನ ನಂಬರನ್ನು ಡಯಲ್ ಮಾಡುತ್ತದೆ. ‘ನಾನು ಊರಿಗೆ ವಾಪಾಸು ಬರ್ತೀನಿ ಅಮ್ಮಾ’ ಎಂಬ ಮಾತು ತುಟಿಯಂಚಿನಲ್ಲಿಮತ್ತೆ ಮತ್ತೆ ಜಾರಿಬೀಳುತ್ತದೆ.

ಹೀಗಿರುವಾಗಲೇ ಮೊದಲ ಸಂಬಳವು ಅಪ್ಪನ ಮೈಮೇಲೆ ಹೆಮ್ಮೆಯ ತಿಳಿನೀಲಿ ಅಂಗಿಯಾಗಿ ಮಿರಮಿರ ಹೊಳೆಯುತ್ತದೆ. ಅಮ್ಮನ ಒಡಲಲ್ಲಿ ಸಂಭ್ರಮದ ಜರತಾರಿ ಸೀರೆಯಾಗಿ ಸರಭರಗುಟ್ಟುತ್ತದೆ. ತಂಗಿಯ ಕೈಯಲ್ಲಿ ಹರುಷದ ಬಳೆಯಾಗಿ ಘಲ್ಲೆನ್ನುತ್ತದೆ. ತಮ್ಮನ ಮೊಬೈಲಿಗೆ ಕರೆನ್ಸಿಯಾಗುತ್ತದೆ. ಬದುಕ ದಾರಿಯಲ್ಲಿ ಮೈಲುಗಲ್ಲೊಂದನ್ನು ಸದ್ದಿಲ್ಲದೇ ದಾಟಿಬಂದೆನೆಂಬುದು ಮೆಲ್ಲಗೆ ಅರಿವಾಗುತ್ತದೆ. ‘ಕೆಲಸ ಸಿಕ್ತಲ್ಲಾ, ಇನ್ನು ಮದುವೆ ಮಾಡಬಹುದು’ ಎಂಬ ಛೇಡಿಕೆ ಸಾಮಾನ್ಯವಾಗುತ್ತದೆ. ಆಫೀಸಿನ ಕ್ಯಾಂಟೀನಿನಲ್ಲಿ ತನ್ನಂತೆಯೇ ಬೆದರಿ ಕುಳಿತಿರುವ ಬಡಪಾಯಿಯೊಬ್ಬ ಪರಿಚಯವಾಗುತ್ತಾನೆ. ತನ್ನದೇ ಟೀಮಿನಲ್ಲಿರುವ ಸಹೋದ್ಯೋಗಿಯೊಬ್ಬಳು ಆತ್ಮೀಯಳಾಗುತ್ತಾಳೆ. ವಾರದ ಕೊನೆಯಲ್ಲಿ ಥಿಯೇಟರ್, ಮಾಲ್, ಪಾರ್ಕುಗಳ ಸುತ್ತಲಿಕ್ಕೆ ಗೆಳೆಯರ ತಂಡವೊಂದು ತಯಾರಾಗುತ್ತದೆ. ಮಗಾ, ಮಚ್ಚೀ, ಡ್ಯೂಡ್, ಡಾ ಗಳು ಒಬ್ಬೊಬ್ಬರಾಗಿ ಬದುಕಿನೊಳಗೆ ಪ್ರವೇಶಿಸತೊಡಗುತ್ತಾರೆ. ಯಾರೋ ಹುರಿದುಂಬಿಸಿದರೆಂದು ಕರೆಸ್ಪಾಂಡೆನ್ಸಿನಲ್ಲಿ ಎಂಬಿಎಗೆ ಸೇರಿಕೊಂಡು ಪಾಸಾಗಲಿಕ್ಕೆ ಪಾಡುಪಡುತ್ತಾನೆ. ಬಸ್ಸಿನಲ್ಲಿ ಪಕ್ಕದ ಸೀಟಿನಲ್ಲಿ ಕೂತ ಅಪರಿಚಿತನೊಬ್ಬ ಅದೆಂಥದೋ ಚೈನ್ ಲಿಂಕ್ ಬ್ಯುಸಿನೆಸ್ಸಿಗೆ ಸಿಕ್ಕಿಸಲು ನೋಡುತ್ತಾನೆ. ಇನ್ನೇನು ಹಣ ಹಾಕಬೇಕೆನ್ನುವಷ್ಟರಲ್ಲಿ ಯಾರೋ ತಡೆಯುತ್ತಾರೆ‌. ಹೀಗೆ ಬೆಂಗಳೂರಿನ ಕೋಟಿಯುಸಿರುಗಳ ಗಾಳಿ ಹಳ್ಳಿ ಹೈದನಿಗೆ ನಿಧಾನಕ್ಕೆ ಅಭ್ಯಾಸವಾಗತೊಡಗುತ್ತದೆ‌.

ಅಪ್ಪ, ಅಮ್ಮ, ತಮ್ಮ, ತಂಗಿಯರು ಶಹರಿಗೆ ಬರುತ್ತಾರೆ. ಒಂದು ಕಾಲದಲ್ಲಿ ಊರ ಜಾತ್ರೆಯಲ್ಲಿ ಕೈಹಿಡಿದು ನಡೆಸಿಕೊಂಡು ಹೋಗಿದ್ದ ಅಪ್ಪ-ಅಮ್ಮನ ಅದೇ ಕೈಯನ್ನು ಇಂದು ತಾನು ಹಿಡಿದು ರಸ್ತೆದಾಟಿಸುವಾಗ ಅವರ್ಣನೀಯ ಭಾವವೊಂದು ಎದೆತುಂಬಿನಿಲ್ಲುತ್ತದೆ. ಮೆಜಸ್ಟಿಕ್ಕಿನ ಸಂದಣಿಯಲ್ಲಿ ತಮ್ಮ ಅರೆಕ್ಷಣ ಕಳೆದುಹೋದಾಗ ಹೃದಯವೇ ನಿಂತುಹೋಗುತ್ತದೆ. ಬೆದರಿದ ಅಮ್ಮನನ್ನು ರಮಿಸಿ ಎಸ್ಕಿಲೇಟರ್ ಮೇಲೆ ಕರೆದೊಯ್ಯುವಾಗ ತಾನೂ ದೊಡ್ಡವನಾದೆ ಎನಿಸತೊಡಗುತ್ತದೆ. ಯಾವ್ಯಾವ ಏರಿಯಾದಲ್ಲಿ ಏನೇನು ಫೇಮಸ್ಸೆನ್ನುವುದನ್ನು ಅಪ್ಪನಿಗೆ ವರ್ಣಿಸಿ ಹೇಳುವ ಮಾತಿನಲ್ಲಿ ಉತ್ಸಾಹ ಪುಟಿಯುತ್ತದೆ. ಕೊನೆಯಲ್ಲಿ ಅವರೆಲ್ಲ ಊರಿನ ಬಸ್ಸುಹತ್ತಿ ಹೊರಟು ನಿಂತಾಗ ಕಣ್ಣಿನಿಂದ ಸಣ್ಣದೊಂದು ಮುಂಗಾರು ಸದ್ದಿಲ್ಲದೇ ಸುರಿದುಹೋಗುತ್ತದೆ.


ಬ್ರಹ್ಮಚಾರಿಯ ಕೋಣೆಯ ಚಿತ್ರಗಳನ್ನು ಮಾಡ್ರನ್ ಆರ್ಟ್ ಗೆ ಹೋಲಿಸಬಹುದು. ಯಾವ ರೇಖೆ ಯಾವುದರೊಂದಿಗೆ ಸುತ್ತಿಕೊಂಡು ಏನನ್ನು ತೋರುತ್ತಿದೆಯೆಂದು ವಿವರಿಸುವುದೇ ಕಷ್ಟ! ‘ಸ್ವಚ್ಛ ಭಾರತ ಅಭಿಯಾನ’ ಬಂದನಂತರವಾದರೂ ಈ ರೂಮು ಪ್ರತಿದಿನ ಪೊರಕೆಯ ಮುಖ ನೋಡುವುದಿಲ್ಲ. ಬಿಗ್ ಬಝಾರಿನಿಂದ ಹಿಡಿದು ಬರ್ಮಾ ಬಜಾರಿನ ತನಕ, ಫ್ಲಿಪ್ ಕಾರ್ಟಿನಿಂದ ಹಿಡಿದು ಚೋರ್ ಬಜಾರಿನ ತನಕ ಎಲ್ಲ ಕಡೆಯಿಂದ ಖರೀದಿಸಿ ತಂದ ವಸ್ತುಗಳನ್ನೂ ಇಲ್ಲಿ ಕಾಣಬಹುದು. ಅಟ್ಟಹಾಸ ಮಾಡುವ ಸ್ಪೀಕರ್ ಗಳು, ಹಾವುಗಳಂತೆ ಸುತ್ತಿಕೊಂಡು ಹೆಣೆಯಾಡುತ್ತಿರುವ ಇಯರ್ ಫೋನ್ ಗಳು, ಮಲ್ಲಯುದ್ಧ ಮಾಡದ ಹೊರತು ಹಾಕಲು ಬರದ ಕಿಟಕಿಯ ಬೋಲ್ಟುಗಳು, ಸಣ್ಣಗೆ ಉಫ್ ಎಂದರೂ ತೆರೆದುಕೊಂಡು, ಒಳಗೆ ಸ್ನಾನ ಮಾಡುತ್ತಿರುವವರ ಮರ್ಯಾದೆ ಹರಾಜು ಹಾಕುವ, ಮುಚ್ಚಲು ಬಾರದ ಬಚ್ಚಲಿನ ಬಾಗಿಲುಗಳು, ಯಾರೋ ಬರ್ಬರವಾಗಿ ಕೊಂದು ನೇತುಹಾಕಿ ಹೋಗಿರುವ ಹೆಣದಂತೆ ನ್ಯಾಲೆಯ ಮೇಲೆ ಯದ್ವಾತದ್ವಾ ನೇತಾಡುವ ಅನಾಥ ಬಟ್ಟೆಗಳು, ಜಿರಳೆಗಳ ಅಪಾರ್ಟ್ಮೆಂಟು, ವಿಲ್ಲಾ, ಫ್ಲಾಟುಗಳಾಗಿ ಬದಲಾಗಿರುವ ಅಡುಗೆ ಪಾತ್ರೆಗಳು, ವಾಸನೆ ಆರದ ಬಾಟಲಿಗಳು, ಎಂತಹಾವರಿಗಾದರೂ ಕ್ಷಣಾರ್ಧದಲ್ಲಿ ಮೂರ್ಛೆತರಿಸುವ ‘ಸುವಾಸನೆ’ಯ ಸಾಗ್ಸುಗಳು, ಮದ್ದಾನೆಯೊಂದು ಮಲಗೆದ್ದು ಹೋಗಿರುವಂತೆ ಸದಾ ಅಸ್ತವ್ಯಸ್ತವಾಗಿರುವ ಮಂಚ, ಎಷ್ಟೋ ತಿಂಗಳ ಕೆಳಗೆ ಅರ್ಧ ಓದಿ ಪುಟದ ತುದಿ ಮಡಿಚಿಟ್ಟಿರುವ, ತನ್ನನ್ನು ತಾನೇ ಓದಿಕೊಳ್ಳುತ್ತಿರುವ ಕಾದಂಬರಿ…

ಸದಾ ನೆಗಡಿಯಾದಂತೆ ಸೋರುವ, ಕಿವಿಗೆ ಬಾಣಂತಿಯಂತೆ ಬಟ್ಟೆ ಕಟ್ಟಿಕೊಂಡಿರುವ ನಲ್ಲಿ, ಹತ್ತು ಪೈಸೆ ಬಾಡಿಗೆಯನ್ನೂ ಕೊಡದೇ ರೂಮಿನಲ್ಲಿ ಜೊತೆಗೇ ವಾಸಿಸುವ, ಪುಕ್ಕಟೆಯಾಗಿ ನಮ್ಮ ಊಟ, ತಿಂಡಿಗಳನ್ನೂ ಹಂಚಿಕೊಳ್ಳುವ, ಬಾಟಲಿಯ ಸೀಲ್ ಒಡೆಯುವ ಮೊದಲೇ ತುಪ್ಪ, ಎಣ್ಣೆಗಳ ರುಚಿ ನೋಡುವ ಕೀಟ ಪ್ರಬೇಧಗಳು, ಅಂಬಾನಿ ಕೊಟ್ಟ ಫ್ರೀ ಆಫರ್ ಮುಗಿದರೂ ಪ್ರೇಯಸಿಯ ಜೊತೆಗಿನ ಲಲ್ಲೆ ಮುಗಿಸದ ರೂಮ್ ಮೆಟ್, ಸುಖಾಸುಮ್ಮನೆ ಸ್ಮೈಲ್ ಕೊಡುವ ಎದುರು ಪಿಜಿ ಹುಡುಗಿ, ಕಾಡುಮನುಷ್ಯರ ಸೊಪ್ಪಿನ ಉಡುಗೆಗಿಂತಲೂ ಹೆಚ್ಚು ತೂತುಗಳಿರುವ ಮೈಯೊರೆಸುವ ಟವೆಲ್, ಗೋಡೆಗೆ ಮೊಳೆ ಹೊಡೆಯುವುದರಿರಲಿ, ಹಾಗೇ ಸುಮ್ಮನೆ ತಟ್ಟಿದರೂ ‘ಯಾವನೋ ಅವ್ನೂ?’ ಎಂದು ಓಡಿಬರುವ ಮನೆ ಓನರ್, ಹೊಚ್ಚಹೊಸ ಗಂಡನಿಗೆ ಮುದ್ದು ಮಾಡುತ್ತಿರುವ ಫೋಟೋಗಳನ್ನು ಹಾಕಿ ಮನಸಾರೆ ನೋಯಿಸುವ ಶಾಲೆಯ ದಿನಗಳ ಕ್ರಶ್, ಅಂಕಲ್ ಎಂದು ಕರೆದು ಪಿತ್ತನೆತ್ತಿಗೇರಿಸುವ ಕಾಲೇಜು ಹುಡುಗರು, ಫೋನಿನಲ್ಲಿ ‘ಹಲೋ’ ಎಂದ ಒಂದು ಶಬ್ದವನ್ನು ಕೇಳಿಕೊಂಡೇ ಮೈಹುಷಾರಿಲ್ಲವೆಂಬುದನ್ನು ಅರಿಯುವ ಅಮ್ಮ, ಯಾವುದೋ ಶಿಲಾಯುಗದ ಮಧ್ಯರಾತ್ರಿ ಹನ್ನೆರೆಡು ಗಂಟೆಗೆ ನಿಂತುಹೋಗಿರುವ ಗೋಡೆ ಗಡಿಯಾರ, ಈ ಕ್ಷಣಕ್ಕೆ ಬೇಕಾಗಿರುವ ವಸ್ತುವೊಂದನ್ನು ಬಿಟ್ಟು ಮತ್ತೆಲ್ಲದೂ ರಾಶಿ ಬಿದ್ದಿರುವ ಟೇಬಲ್, ಆಫರ್ ಇತ್ತೆಂಬ ಒಂದೇ ಒಂದು ಕಾರಣಕ್ಕೆ ಬಾಚಿತಂದ, ಬ್ರ್ಯಾಂಡ್ ಫ್ಯಾಕ್ಟರಿಗಿಂತಲೂ ಹೆಚ್ಚಿನ ಕಲೆಕ್ಷನ್ ಗಳಿರುವ ಬಟ್ಟೆ ಸಂಗ್ರಹ, ಒಳಗಿದ್ದ ಮೊಬೈಲೇ ಹಾಳಾದರೂ ಇನ್ನೂ ಎಸೆಯದ ಅದರ ರಟ್ಟಿನ ಡಬ್ಬ, ರೂಮಿನ ಯಾವ ಮೂಲೆಯಲ್ಲಿ ಬೇಕಾದರೂ ನಿಂತು ಬಟ್ಟೆಯನ್ನು ನೇರ ನ್ಯಾಲೆಯ ಮೇಲೇ ಕೂರುವಂತೆ ಎಸೆಯುವ ಕಲೆ, ಒಬ್ಬ ಎದ್ದು ನಿಂತು ಮೈಮುರಿದರೂ ಇನ್ನೊಬ್ಬ ರೂಮಿನಿಂದಾಚೆಗೆ ಉದುರಿಹೋಗುವ ಕಿಶ್ಕಿಂದೆಯಂತಹಾ ಕೋಣೆಯಲ್ಲಿ ಹೊಂದಿಕೊಂಡು ಹೋಗುವ ಸಹಬಾಳ್ವೆ…

ಯುವ ಭಾರತದ ಸಾವಿರ-ಲಕ್ಷ-ಕೋಟ್ಯಾಂತರ ಅವಿವಾಹಿತ ಬದುಕುಗಳು ಸಾಗುತ್ತಿರುವುದೇ ಇಂತಹಾ ರೋಚಕ, ತಳಕಂಬಳಕ ಹಳಿಗಳ ಮೇಲೆ.


ಹೀಗೆ ಗೆಳೆಯರು, ಉದ್ಯೋಗ, ತಿರುಗಾಟ, ಉಲ್ಲಾಸ… ಎಲ್ಲವೂ ಇರುವ ಹೊತ್ತಿಗೇ ಈ ಬದುಕಿನಲ್ಲೇನೋ ಕಮ್ಮಿಯಿದೆ ಎಂದೆನಿಸಲು ಶುರುವಾಗುತ್ತದೆ. ರೂಮ್ ಮೆಟ್ ನಿಂದ ಹಿಡಿದು ಆಫೀಸಿನ ಪ್ಯೂನ್ ತನಕ ಪರಿಚಯದ ಎಲ್ಲರೂ ತಮ್ಮ ತಮ್ಮ ಹುಡುಗಿಯ ಜೊತೆ ಗಮ್ಮತ್ತನಿಂದ ತಿರುಗಾಡುತ್ತಾ ಒಬ್ವರನ್ನೊಬ್ಬರು ಮುದ್ದುಗರೆಯುವ ಫೋಟೋಗಳನ್ನು ಹಾಕುತ್ತಿರುವಾಗ ತನ್ನ ಬದುಕಿನ ಡುಯೆಟ್ ಹಾಡು ಹೀರೋಯಿನ್ನೇ ಇಲ್ಲದೆ ಸಾಗುತ್ತಿದೆಯೆಂಬುದು ಅರಿವಾಗುತ್ತದೆ.

ಆಗ ಅವಳು ಕಣ್ಣಿಗೆ ಬೀಳುತ್ತಾಳೆ.

ಟೀಶರ್ಟು, ಜೀನ್ಸ್ ಪ್ಯಾಂಟುಗಳ ಪಾಶ್ ಹುಡುಗಿಯರ ನಡುವೆ ತಿಳಿಹಸಿರು ಚೂಡಿದಾರ ತೊಟ್ಟು ಸಾಧಾರಣವಾಗಿರುವ ಅವಳ ನೆನಪುಗಳೇಕೋ ಆಫೀಸು ಮುಗಿಸಿ ಬಂದ ಮೇಲೂ ಕೈಮರೆತು ಬ್ಯಾಗಿನಲ್ಲಿ ಸೇರಿಕೊಂಡುಬಿಟ್ಟಿರುವ ಫೈಲಿನಂತೆ ಅವನನ್ನು ಹಿಂಬಾಲಿಸಿಕೊಂಡುಬರುತ್ತವೆ. ಬೆಳಗಿನ ಜಾವ ಬಿದ್ದ, ಅವಳನ್ನೊಳಗೊಂಡ ಸುಂದರ ಕನಸನ್ನು ನೆನೆಯುತ್ತ ಮರುದಿನ ಬೆಳಗ್ಗೆ ಆಫೀಸಿಗೆ ಹೊರಟರೆ ದಾರಿಯಲ್ಲಿ ಅವಳೇ ಸಿಕ್ಕಿಬಿಡುತ್ತಾಳೆ! ‘ಬೇಕಂತಲೇ ನಿನ್ನ ಕನಸಿನಲ್ಲಿ ಬಂದೆ’ ಎಂಬಂತೆ ಮುಗುಳ್ನಕ್ಕು ಮಾತಿಗೆ ತೊಡಗುತ್ತಾಳೆ. ಅವರಿಬ್ಬರ ಅದೆಷ್ಟೋ ಅಭಿರುಚಿಗಳು ಒಂದೇ ಎನ್ನುವ ಅತ್ಯಮೂಲ್ಯ ಸಂಗತಿ ಅವನಿಗೆ ಅರಿವಾಗುತ್ತದೆ. ಕಾರಿಡಾರ್ ನಲ್ಲಿ ಎದಿರಾಗುತ್ತಾಳೆ. ಕ್ಯಾಂಟೀನ್ ನಲ್ಲಿ ಅಡ್ಡ ಬರುತ್ತಾಳೆ. ಆಫೀಸಿನವರು ಆಯೋಜಿಸಿದ ಪ್ರವಾಸವೊಂದರಲ್ಲಿ ಪಕ್ಕದ ಸೀಟಿನಲ್ಲೇ ಕುಳಿತುಬಿಡುತ್ತಾಳೆ! ಅವಳ ನವಿರಾದ ಮುಂಗುರುಳು ಹಾರಿಹಾರಿ ಅವನೆದೆಯ ಸೋಕುತ್ತಿದ್ದರೆ, ಅವನು ಮೇಲ್ಬರುವ ದಾರಿಯೇ ಇಲ್ಲದ ಸಿಹಿಯಾದ ಆಳವೊಂದಕ್ಕೆ ಜಾರುತ್ತಾ ಹೋಗುತ್ತಾನೆ. ಅವಳಿಗೆ ಹೇಳದೆಯೇ ಅವಳ ಹೆಸರಿನ ಮೊದಲೆರೆಡು ಅಕ್ಷರಗಳನ್ನು ಕದ್ದು ತನ್ನ ಹೆಸರಿನ ಮೊದಲ ಅಕ್ಷರಕ್ಕೆ ಜೋಡಿಸಿ ಪ್ರೇಮ ವರ್ಣಮಾಲೆಯ ಹೊಚ್ಚಹೊಸ ಪದವೊಂದನ್ನು ಕಟ್ಟಿಕೊಂಡುಬಿಡುತ್ತಾನೆ‌. ಮಂಜಿನ ಗಾಜೊಂದರ ಮೇಲೆ ಆ ಪದವನ್ನು ಬರೆದು ಅವಳು ಬರುವಳೆನ್ನುವಾಗ ಅಳಿಸಿ ಪೆಚ್ಚುನಗೆ ನಗುತ್ತಾನೆ. ಕಾಲ ಮೆಲ್ಲಗೆ ಹರಿಯುತ್ತದೆ. ಅವನು ನಡೆಯುವ ದಾರಿಗಳಿಗೆಲ್ಲ ಚಿಕ್ಕ ಚಿಕ್ಕ ತಿರುವುಗಳನ್ನು ನೀಡಿ ಅವಳಿರುವ ತಾಣಗಳಿಗೇ ತಂದು ಸೇರಿಸುತ್ತದೆ. ಆದರೆ ಇಷ್ಟೆಲ್ಲ ಕಾಕತಾಳೀಯಗಳ ಕೊನೆಯ ಫಲಿತಾಂಶ ತಮ್ಮಿಬ್ಬರ ಮಿಲನವೇ ಎಂದವನು ನಂಬಿರುವ ಹೊತ್ತಿಗೇ ಸಮಯ ಮಗ್ಗಲು ಬದಲಾಯಿಸಿಬಿಡುತ್ತದೆ‌. ಅವಳ ನವಿರು ಮುಗುಳ್ನಗೆಯೊಳಗೆ ಮತ್ಯಾರದೋ ಚಹರೆ ಕದಲತೊಡಗುತ್ತದೆ. ಸಂಜೆಯ ಪ್ರಯಾಣದಲ್ಲಿ ಮತ್ಯಾವುದೋ ನೆರಳೊಂದು ಅವಳ ಪಕ್ಕ ಚಲಿಸತೊಡಗುತ್ತದೆ. ಇದು ಹೀಗೇ ಮುಂದುವರೆದರೆ ತನ್ನ ಪ್ರೀತಿ ಪಂಜರದ ಹಕ್ಕಿಯ ಸ್ವಗತವಾಗುತ್ತದೆಂದು ಭೀತಿಗೊಳಗಾಗುವ ಅವನು ಅದೊಂದು ಸಂಜೆ ನಡುಗುತ್ತಿರುವ ಹೃದಯದ ಸಮೇತ ಅವಳೆದುರು ನಿಂತು ತನ್ನೆದೆಯ ಪುಸ್ತಕದಲ್ಲಿ ಹೇಳದೇ ಬರೆದಿಟ್ಟುಕೊಂಡಿರುವ ಅವಳ ಚಿತ್ರಗಳನ್ನೆಲ್ಲಾ ಅವಳೆದುರು ಹರಡಿನಿಲ್ಲುತ್ತಾನೆ.

ಅದೃಷ್ಟ ಚೆನ್ನಾಗಿದ್ದರೆ ಮೊದಲ ಮಾತಿನಲ್ಲೇ ತಿರಸ್ಕರಿಸಲ್ಪಡುತ್ತಾನೆ‌. ಇಲ್ಲವಾದಲ್ಲಿ ಮುಳುಗಲೇಬೇಕಿರುವ ದೋಣಿಯೊಂದು ತುಸು ದೂರ ಹೆಚ್ಚು ತೇಲಿದಂತೆ, ಇಲ್ಲೇ ಮುಳುಗಬೇಕಿದ್ದುದು ಅಲ್ಲೇಲ್ಲೋ ದಡದ ಸಮೀಪದಲ್ಲಿ ಮುಳುಗಿದಂತೆ ಕೆಲದಿನಗಳ ಕಾಲ ಆ ಪ್ರೀತಿ ಮುನ್ನಡೆಯುತ್ತದೆ. ಪಾರ್ಕಿನಲ್ಲಿರುವ ಹಕ್ಕಿಗಳಿಗೆಲ್ಲ ಇವರ ಪರಿಚಯವಾಗಿ, ಮಾಲುಗಳ ಎಸ್ಕಿಲೇಟರ್ ಗಳ ಮೇಲೆಲ್ಲಾ ಇವರ ಹೆಜ್ಜೆಗುರುತು ಜೊತೆಯಾಗಿ ಮೂಡಿ, ತಡರಾತ್ರಿಯ ನೆರಳು ಹಾಸಿದ ನಿರ್ಜನ ರಸ್ತೆಗಳಿಗೆಲ್ಲ ಇವರ ಪಿಸುಮಾತು ಬಾಯಿಪಾಠವಾಗಿ, ಒಲವಿನ ಈ ಬಂಡಿ ಮುಂದೆಸಾಗಿರುವಾಗಲೇ ಜನುಮ ಜನುಮದ್ದೆಂದು ನಂಬಿದ್ದ ಆ ಪಯಣ ಥಟ್ಟನೆ ನಿಂತುಹೋಗುತ್ತದೆ. ಸಣ್ಣ ಮುನಿಸು, ಮನೆಯವರ ಅಸಮ್ಮತಿ, ಎಂಥದೋ ಅಸಮಾಧಾನ.. ಇಂತಹಾ ಯಾವುದೋ ನೆಪದ ಎಡರಿಗೆ ಸಿಲುಕಿ ಅವಳು ಏಕಾಏಕಿ ತನ್ನ ಹಾದಿಯನ್ನೇ ಬದಲಿಸಿಬಿಡುತ್ತಾಳೆ. ವೇದನೆಯ ನೆನಪುಗಳನ್ನು ಯಾವುದೋ ಸಂಜೆಯ ಮೌನಕ್ಕಷ್ಟೇ ಸೀಮಿತಿಗೊಳಿಸಿ, ಅವನು ಮೊದಲ ಬಾರಿಗೆ ಸಿಕ್ಕ ಹಿಂದಿನ ದಿನ ಬೆಳಗ್ಗೆ ಹೇಗೆ ನಗುನಗುತ್ತಾ ಇದ್ದಳೋ ಅಂತಹದೇ ಉಲ್ಲಸವೊಂದನ್ನು ಮುಖದಮೇಲೆ ತಂದುಕೊಂಡುಬಿಡುತ್ತಾಳೆ.

ಆದರೆ ಬದುಕಿನ ಆ ಕಹಿಸತ್ಯವನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದು ಅವನಿಂದ ಸಾಧ್ಯವಾಗುವುದಿಲ್ಲ. ಎದೆಯ ಮೇಲೆ ಅವಳು ತಲೆಯಾನಿಸಿ ನಕ್ಕ ನವಿರಾದ ಗುರುತು ಚಿಟಚಿಟನೆ ಉರಿಯತೊಡಗುತ್ತದೆ. ರಾತ್ರೆಗಳು ನಿದ್ರೆಯನ್ನು ಬಹಿಷ್ಕರಿಸುತ್ತವೆ. ನಗು ಬ್ಯಾನ್ ಆಗುತ್ತದೆ‌. ಯಾವ ದಾರಿಯಲ್ಲಿ ಕಾಲಿಟ್ಟರೂ ಹಳೆಯ ಹೆಜ್ಜೆಗುರುತಿನ ಮುಳ್ಳುಗಳು ಪಾದಕ್ಕೆ ನಾಟಿ ನೋವು ಛಿಲ್ಲನೆ ಚಿಮ್ಮುತ್ತದೆ. ಸಿಗದೇಹೋದ ಒಲವು ಇನ್ನಷ್ಟು, ಮತ್ತಷ್ಟು ಆತ್ಮೀಯವಾಗುತ್ತದೆ. ಬಿಟ್ಟುಹೋದ ಹುಡುಗಿಯ ಮೇಲಿನ ಪ್ರೀತಿ ಬೆಟ್ಟದಂತೆ ಬೆಳೆಯುತ್ತದೆ. ಈ ಮುನ್ನ ಎಷ್ಟು ಬಾರಿ ಅವಳು ಪ್ರೀತಿ ಹೇಳಿಕೊಂಡಿದ್ದಳೋ ಅದರ ದುಪ್ಪಟ್ಟು ತಿರಸ್ಕಾರ ಅವಳ ನಡವಳಿಕೆಯಲ್ಲಿ ಚಿಮ್ಮುತ್ತದೆ. ಸಂಜೆ ನೆನಪುಗಳ ಪಾಲಾಗುತ್ತದೆ. ಬೆಳಗು ಕೆಟ್ಟಕನಸುಗಳಿಗೀಡಾಗುತ್ತದೆ. ಎದ್ದು ನೋಡಿದರೆ ಪಕ್ಕದ ಮಂಚದಲ್ಲಿ ರೂಮ್ ಮೆಟ್ ಜಗತ್ತಿನ ಅತ್ಯಂತ ಸುಖ ಜೀವಿಯಂತೆ ಗೊರಕೆ ಹೊಡೆಯುತ್ತಿರುತ್ತಾನೆ.

ಟೆರಾಸಿನ ಮೂಲೆಯಲ್ಲಿನ ಬಾಟಲಿಗಳು ಬಹುಸಂಖ್ಯಾತರಾಗುತ್ತವೆ. ಮೊಂಡು ಸಿಗರೇಟುಗಳ ಸಣ್ಣ ಸೈನ್ಯವೇ ತಯಾರಾಗುತ್ತದೆ. ಮನಸ್ಸು ಅಮೀಬಾದಂತೆ ರೂಪ ಬದಲಾಯಿಸತೊಡಗುತ್ತದೆ. ಬೆಳಗ್ಗೆಯಷ್ಟೇ ಅವಳ ನೆನಪುಗಳೇ ಬೇಡವೆಂದು ಗಹಗಹಿಸುತ್ತಿದ್ದದ್ದು ಸಂಜೆಯಾಗುವ ಹೊತ್ತಿಗೆ ಅವಳದೇ ನೆನಪುಗಳನ್ನು ನಾಟಿಸಿಕೊಂಡು ನರಳತೊಡಗುತ್ತದೆ. ‘ಇವತ್ತಿನಿಂದ ಎಲ್ಲರ ಜೊತೆ ಫ್ಲರ್ಟ್ ಮಾಡ್ತೀನಿ’ ಎಂದು ಹೊರಟಿದ್ದು ‘ಇನ್ನು ಯಾರ ಜೊತೆಗೂ ಬೆರೆಯುವುದಿಲ್ಲ’ ಎಂದು ಮೂಲೆಸೇರಿಬಿಡುತ್ತದೆ. ಒಮ್ಮೆ ಅವಳನ್ನು ಬೈದರೆ ಇನ್ನೊಮ್ಮೆ ತನ್ನನ್ನೇ ಘಾಸಿಗೊಳಿಸಿಕೊಂಡಂತೆ ವೇದನೆ ಪಡುತ್ತದೆ.

ಅವನ ಕೈಯ ರೇಖೆಯೊಂದು ಮೆಲ್ಲನೆ ಸವೆದು ಮರೆಯಾದ ಅದೇ ಹೊತ್ತಿಗೆ ಅವಳ ಅಂಗೈಯ ಮದರಂಗಿಯಲ್ಲಿ ಬೇರ್ಯಾರದೋ ಹೆಸರು ಕೆಂಪಾಗಿ ಮೂಡಿನಿಲ್ಲುತ್ತದೆ.


ಈ ನಡುವೆಯೇ ಊರಿನಲ್ಲಿನ ಅಪ್ಪನಿಗೆ ಲಘುವಾಗಿ ಆರೋಗ್ಯ ತಪ್ಪುತ್ತದೆ. ಅಮ್ಮ ಕೆಮ್ಮಿದ ಸದ್ದು ಬೆಂಗಳೂರಿಗೂ ಕೇಳುತ್ತದೆ. ಜಮೀನಿನ ಮೇಲಿನ ಸಾಲ ಪಾವತಿಸೆಂದು ಬ್ಯಾಂಕಿನವರು ಕಳಿಸಿದ ನೋಟಿಸು ನೇರ ರೂಮಿನ ಬಾಗಿಲನ್ನೇ ತಟ್ಟುತ್ತದೆ‌. ಹೈಕು, ಪ್ರಮೋಷನ್ನು, ಪ್ಯಾಕೇಜುಗಳ ಹಿಂದಿನ ಓಟ ಅನಿವಾರ್ಯವಾಗಿ ತೀವ್ರಗೊಳ್ಳುತ್ತದೆ. ಕೈಯಲ್ಲಿರುವ ಪುಡಿಗಾಸನ್ನು ಶೇರುಗಳಿಗೆ ಹಾಕುವುದೋ ಇಲ್ಲಾ ಊರಿನಲ್ಲೊಂದು ಜಮೀನು ಕೊಳ್ಳುವುದೋ ಎಂಬ ಗೊಂದಲ ಆರಂಭವಾಗುತ್ತದೆ. ಅಲ್ಯಾವುದೋ ನಗರದಾಚೆಗಿನ ಸೈಟು ‘ನನ್ನನ್ನು ಕೊಳ್ಳು’ ಎಂದು ಕೈಬೀಸಿ ಕರೆಯುತ್ತದೆ‌. ಇಎಮೈಗಳ ಲೆಕ್ಕ ಜೋರಾಗುತ್ತದೆ. ಗೆಳೆಯರೆಲ್ಲಾ ಬಾಗಿಲಿನಲ್ಲಿ ಸಾಲಾಗಿ ನಿಂತು ಮದುವೆಗೆ ಕರೆದುಹೋಗುತ್ತಾರೆ. ಅವರೆಲ್ಲ ತಮ್ಮ ತಮ್ಮ ಹೆಂಡಿರನ್ನು ತಬ್ಬಿ ಮುದ್ದಾಡುವ ಚಿತ್ರಗಳು ವಾಟ್ಸಾಪ್, ಫೇಸ್ಬುಕ್ಕುಗಳಲ್ಲಿ ರಾರಾಜಿಸುವಾಗ ಹದಿಮೂರೇ ಲೈಕು ಕಂಡ ಇವನ ಒಬ್ಬಂಟಿ ಪ್ರೊಫೈಲು ಫೋಟೋ ಗೋಳೋ ಎಂದು ಅಳತೊಡಗುತ್ತದೆ. ಅವಳ ನೆನಪುಗಳ ನಡುವೆಯೇ ಹೆಣ್ಣುಗಳ ಮನೆಗೆ ಓಡಾಟ ಶುರುವಾಗುತ್ತದೆ. ಕಾಫೀಡೇಗಳ ಜಗುಲಿಯಲ್ಲಿ ಭವಿಷ್ಯದ ಮಡದಿಯ ಜೊತೆ ಮದುವೆ ಚೌಕಾಶಿಯ ಮಾತುಕತೆಗಳಾಗುತ್ತವೆ. ಮುಂದೊಂದು ದಿನ ಅತ್ತ ದೇವತೆಯೂ ಅಲ್ಲದ, ಇತ್ತ ರಾಕ್ಷಸಿಯೂ ಆಗದ ಯಾರೋ ಒಬ್ಬಳು ಅವನ ಬದುಕಿಗೆ ಕಾಲಿಡುತ್ತಾಳೆ. ಅವನು ಮನೆ-ಮನದ ತುಂಬಾ ಚೆಲ್ಲಾಡಿಕೊಂಡಿರುವ ವೇದನೆಗಳನ್ನೆಲ್ಲ ಒಂದೊಂದಾಗಿ ಎತ್ತಿಡುತ್ತಾಳೆ. ಅವನೆಲ್ಲ ಅಸ್ತವ್ಯಸ್ಥ ನೆನಪುಗಳನ್ನು ನೋವಾಗದಂತೆ ಮೆಲ್ಲನೆ ಗುಡಿಸಿ ಚಂದದ ರಂಗೋಲಿಯಿಡುತ್ತಾಳೆ.

ಬ್ರಹ್ಮಚಾರಿ ಬದುಕಿನ ಕಟ್ಟಕಡೆಯ ಅವಶೇಷವಾದ ಟೆರಾಸಿನ ಮೇಲಿನ ತನ್ನ ಒಂಟಿಕೋಣೆಯ ಕೊನೆಯ ತಿಂಗಳ ಬಾಡಿಗೆಯನ್ನೂ ಕಟ್ಟಿದ ಅವನು, ಎಸೆದ ಮೇಲೂ ಉಳಿದ ಸಾಮಾನು ಸರಂಜಾಮುಗಳನ್ನೂ, ಮಧುರ ನೆನಪುಗಳನ್ನೂ ಗಂಟುಕಟ್ಟಿಕೊಂಡು ವಿವಾಹ ಜೀವನವೆಂಬ ಟೂ ಬಿಎಚ್ಕೆ ಮನೆಯತ್ತ ಮೆಲ್ಲನೆ ತನ್ನ ಬೈಕನ್ನು ಚಲಾಯಿಸುತ್ತಾನೆ.

ವಿನಾಯಕ ಅರಳಸುರಳಿ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Gerald Carlo
Gerald Carlo
4 years ago

ಬ್ಯಾಚುಲರ್ ದಿನಗಳನ್ನು ನೆನಪಿಸಿದಿರಿ!

1
0
Would love your thoughts, please comment.x
()
x