ಅಮರ್ ದೀಪ್ ಅಂಕಣ

ಬೋಳು ತಲೆಯ ಅಪ್ಪ ಮತ್ತೆರಡು ಪ್ರಸಂಗಗಳು: ಅಮರ್ ದೀಪ್ ಪಿ.ಎಸ್.

ಆ  ಅಂಗಡಿ ತುಂಬಾ ಸಿನೆಮಾ ತಾರೆಯರ ಫೋಟೋಗಳು. ಬಗೆ ಬಗೆ ಸ್ಟೈಲ್ ನಲ್ಲಿ ನಿಂತ ಕಾರು, ಬೈಕು, ಕುದುರೆ ಹೀಗೆ ಒಂದೊಂದು ಸವಾರಿಯಲ್ಲಿ ನಿಂತ, ಓಡಿಸುವ  ಹೀರೋಗಳು. ಇನ್ನು ಹಿರೋಯಿನ್ನುಗಳ ಫೋಟೋಗಳಿಗೆ ಲೆಕ್ಕ ಇಲ್ಲ. ಅಲ್ಲಲ್ಲಿ ಹರಡಿ ಚೆಲ್ಲಾಪಿಲ್ಲಿಯಾದ ದಿನಪತ್ರಿಕೆಗಳ ತುಂಬಾ ಸಹ ಬರೀ ಸಿನೆಮಾಗಳ ಪೋಸ್ಟರ್.  ಕೆಲವೇ ಕೆಲವು ಪುಟಗಳು ಮಾತ್ರ ಪ್ರಾಪಂಚಿಕ ವಿದ್ಯಮಾನವುಳ್ಳದ್ದು ಆಗಿರುತ್ತಿದ್ದವು. ಸುತ್ತಲು ಕನ್ನಡಿಗಳ ಸಾಲು.  ಒಂದು ಮೂಲೆಯಲ್ಲಿ ಮೊದಲೆಲ್ಲ ರೇಡಿಯೋ ಟೇಪ್ ರೆಕಾರ್ಡರ್ ಇರುತ್ತಿದ್ದವು, ಇತ್ತೀಚೆಗೆ ಟಿ. ವಿ. ಗಳು. ಅವುಗಳಲ್ಲಿ ತೆಲುಗು, ಕನ್ನಡ ಮತ್ತು ಹಿಂದಿ ಹಾಡುಗಳ ಭರಾಟೆ.  ಅದೊಂದು ಹೇರ್ ಕಟ್ಟಿಂಗು ಸೆಲೂನು, ಸಿನೆಮಾ ಜಗತ್ತಿನ ಸಣ್ಣ ಕಿಂಡಿ. ಅಲ್ಲಿಗೆ ಬರುವ ವಯಸ್ಸಿನ ಹುಡುಗರು ಆಗತಾನೇ ಬಿಡುಗಡೆಯಾದ ಸಿನೆಮಾಗಳನ್ನು ಗಡ್ಡ ತೆಗೆಸಿಕೊಳ್ಳುತ್ತಲೋ, ಇಲ್ಲವೇ ಪೇಪರ್ ಹಿಡಿದು ಕೂತು ವಿಮರ್ಶೆ ಮಾಡುತ್ತಿರುತ್ತಾರೆ. ಇನ್ನು ಕೆಲವರು ಮೂಲೆಯಲ್ಲಿ ಟೇಪ್ ರೆಕಾರ್ಡರ್/ಟಿ. ವಿ. ಯಿಂದ ಕೇಳುವ ಹಾಡುಗಳ ಸಾಲುಗಳನ್ನೇ ಜೋರು ಜೋರಾಗಿ ಹೇಳುತ್ತಿರುತ್ತಾರೆ.  ಇನ್ನು ಕೆಲವು ಕಡೆ ಕಟ್ಟಿಂಗು ಶಾಪೇ ಕೆಲವರಿಗೆ ರಿಯಲ್ ಎಸ್ಟೇಟ್ ಡಿಸ್ಕಶನ್ ಪಾಯಿಂಟ್, ಬುಸಿನೆಸ್ಸು ಅಲ್ಲೇನೆ. ಬಜಾರ ಸುದ್ದಿನೂ, ಬಡಿವಾರದ ಬಡಾಯಿಯೂ ಸಹ.  ಕಂಡ ಕಂಡ ಮನೆಗಳವರ, ರಾಜಕೀಯದವರ ಸುದ್ದಿಗೆ ಒಂದು ಸಖತ್ ವೇದಿಕೆ. ತಿಂಗಳಿಗೊಮ್ಮೆ  ಅಥವಾ ಎರಡು ತಿಂಗಳಿಗೊಮ್ಮೆ ನಮ್ಮ ವಿಸಿಟ್ಟು ಅಲ್ಲಿಗೆ ಇರಲೇಬೇಕು..  

ನಾನು ಚಿಕ್ಕವನಿದ್ದಾಗ ಗಮನಿಸಿದಂತೆ ಮನೆಯಲ್ಲಿ ನಮ್ಮ ಮಾವನವರಿಬ್ಬರದೂ ಒಂದೊಂದು ತರಹ ಹೇರ್ ಸ್ಟೈಲ್.  ದೊಡ್ಡ ಮಾವನದು ಶಂಕರನಾಗ್ ನಂತೆ ಸ್ಟೆಪ್ ಕಟ್ಟಿಂಗು, ಆದರೂ ಆತ ಡಾ. ರಾಜ್ ಅಭಿಮಾನಿ. ಮನೆಯಲ್ಲಿ ಅವರ ಹಾಡುಗಳ ಕ್ಯಾಸೆಟ್ಟುಗಳು  ಜೋರು.  ನಮ್ಮ ಎರಡನೇ ಮಾವನದ್ದು ಚಕ್ರವ್ಯೂಹ ಚಿತ್ರದ ರವಿಚಂದ್ರನ್ ನ "ಕೋಯಾ ಕೋಯಾ ಅಟ್ಯಾಕ್ " ಸ್ಟೈಲಿನ ಕಟ್ಟಿಂಗು. ಇನ್ನು ನಮ್ಮ  ತಾತನದ್ದು  ಆಹಾ….  ಸೀಜರ್ ಕಟ್ಟಿಂಗು…  ತಾತ  ಯಾವಾಗ್ಲೂ ಹಗರಿಬೊಮ್ಮನಹಳ್ಳಿ ಬಜಾರದ ಬಸ್ ಸ್ಟ್ಯಾಂಡಿನ ಹತ್ತಿರದ "ಹೇರ್ ಕಟ್ಟಿಂಗ್ ಸಲೂನ್ ನಲ್ಲಿ  "ನೋಡಪಾ, ಹುಡುಗರಿಗೆ ಸಣ್ಣಗಿ…. ಇರ್ಬೇಕು" ಅಂತಂದು ಹೇಳೇ ನಮ್ಮನ್ನು ಕಟ್ಟಿಂಗು ಮಾಡಿಸಲು ಕೂಡಿಸುತ್ತಿದ್ದರು. ರೈಲ್ವೆ ಹಳಿ ಪೂರ್ವಕ್ಕೆ ನಮ್ಮ ಓಣಿ. ಹಳಿ ದಾಟಿ ಎಡವಿ ಬಿದ್ದರೆ ಬಜಾರು ಎಂಬಂತಿದ್ದ ಊರಿನ ವಾತಾವರಣವದು.  ಒಂದಷ್ಟು ವರ್ಷಗಳ ನಂತರ ನಾನು ಆರೇಳು ವರ್ಷದವನಾದ ಮೇಲೆ ನಮ್ಮ ದೊಡ್ಡ ಮಾಮ "ಲೇ, ಈ ಸಲ ನನ್ಜೊತಿ ಬಾರ್ಲೆ ಸ್ಟೆಪ್ ಕಟ್ಟಿಂಗು ಮಾಡಿಸ್ತೀನಿ" ಅಂತಿದ್ದ. ಅದಕ್ಕೆ ತಾತನ ತಕರಾರು. ಒಮ್ಮೆ ಇನ್ನೇನು ಕೂದಲು ಜಾಸ್ತಿ ಬೆಳೆದಿವೆ ಅನ್ನಿಸುತ್ತಲೇ, ಭಾನುವಾರ ಶಾಲೆಗೂ  ಮತ್ತು ಕಚೇರಿ ಕೆಲಸಗಳಿಗೂ ರಜೆ ಇರುತ್ತಿದ್ದರಿಂದ ನಮ್ ದೊಡ್ಡ ಮಾವ ಎದ್ದೇಳುವ ಮೊದಲೇ ತಾತ  " ಲೇ ದೀಪ್ಯಾ, ಬಾರಲೇ ನಿಂಗೆ ಇಡ್ಲಿ ವಡಾ ತಿನ್ನಿಸ್ಗಂಡು ಆಮೇಲೆ ಕಷ್ಟ (ತಲೆಗೂದಲು ತೆಗೆಸುವುದಕ್ಕೆ ಹಾಗನ್ನುತ್ತಿದ್ದರು ) ಮಾಡಿಸ್ಕ್ಯಂಡ್ ಬರ್ತೀನಿ" ಅಂದು ಪುಸಲಾಯಿಸಿ ನನ್ನನ್ನು ಕಟ್ಟಿಂಗು ಶಾಪಿಗೆ ಕರೆದುಕೊಂಡು ಹೋದ. ನನಗೆ ಸ್ಟೆಪ್ ಕಟ್ಟಿಂಗಿನ ಆಸೆ.  ಅಲ್ಲಿಗೆ ಹೋದ ಮೇಲೆ ನನ್ನ ತರ್ಲೆ ಬುದ್ಧಿ ಎಚ್ಚೆತ್ತುಕೊಂಡು "ತಾತ, ನಾನ್ ಮೊದ್ಲು ಇಡ್ಲಿ ವಡಾ ತಿಂತೀನಿ, ಅಮೇಲ್ ಕಟ್ಟಿಂಗು " ಅಂದೆ. ಆಯಿತೆಂದು ಪಕ್ಕದಲ್ಲೇ ಇದ್ದ ಶ್ರೀನಿವಾಸ ಹೋಟಲ್ ನಲ್ಲಿ "ಇತಗಾ ಏನ್ ಬೇಕ್  ಕೊಟ್ ಬಿಡಪ್ಪ…. ನಾನ್ ದುಡ್ಡು ಕೊಡ್ತೀನಿ." ಅಂದವನೇ ಕಟ್ಟಿಂಗು ಶಾಪಿನಲ್ಲಿ ತಾನು ಕಟ್ಟಿಂಗು ಮಾಡಿಸಿಕೊಳ್ಳಲು ಕುಳಿತ.    

ನಾನು ಮೊದಲು ಇಡ್ಲಿ ವಡಾ ತಿಂದ ನಂತರ ಹೊರಗೆ ಬಂದು ನೋಡಿದೆ, ತಾತನ ತಲೆಯನ್ನು  ಹಿಂದೆ ಎಳೆ ನೀರು ಕೊಚ್ಚುವ ಮಾದರಿಯಲ್ಲಿ ಇನ್ನು ಮಷೀನು ಹಿಡಿದು ಕಟಕಟಕಟ ಮಾಡುತ್ತಿದ್ದರು. ಹೇಳದೇ ಕೇಳದೇ ಸೀದಾ ಮನೆಗೆ ಓಡಿ ಬಂದು ಮೂಲೆಯಲ್ಲಿ ಚಾಪೆಯನ್ನು ಸುತ್ತಿಕೊಂಡು ಕುಳಿತಿದ್ದೆ.  ಕಟಿಂಗು ಮಾಡಿಸಿಕೊಂಡು ತನಗಿದ್ದ ಅಸ್ತಮಾದಿಂದ ತೇಕುತ್ತಾ, ಗಾಬರಿಯಿಂದ ಮನೆಗೆ ಬಂದು ಬಯ್ಯಲು ಶುರು ಮಾಡಿದ. ಆಗತಾನೇ ಎದ್ದಿದ್ದ ದೊಡ್ಡ ಮಾವ ಅದೇ ಕಟ್ಟಿಂಗಿನ ಸಲುವಾಗಿ ತಾತನೊಂದಿಗೆ ಹಾಕ್ಯಾಟ ಮಾಡಿ ಮತ್ತೊಂದು ದಿನ ನನಗೆ ಸ್ಟೆಪ್ ಕಟ್ಟಿಂಗು ಮಾಡಿಸಿದ.   

ಇದು ಕೂದಲಿದ್ದ ನನ್ನ, ನಮ್ಮ ಮಾವಂದಿರ, ಅಜ್ಜನ ಕಟ್ಟಿಂಗಿನ ಕಥೆಯಾಯಿತು. ಇನ್ನು ಗಂಗಾವತಿಯಲ್ಲಿದ್ದ  ನಮ್ಮಪ್ಪ ಆತ ಆರು ತಿಂಗಳಿಗೋ ಎಂಟು ತಿಂಗಳಿಗೋ ಒಮ್ಮೆ ಕಟ್ಟಿಂಗು ಮಾಡಿಸಿದರೆ ಹೆಚ್ಚು. ಶೇವಿಂಗು ಮಾತ್ರ ತಾನು ಪ್ರತಿ ಸೋಮವಾರ ತಪ್ಪದೇ ಮಾಡಿಕೊಳ್ಳುತ್ತಿದ್ದ. ಆರೆಂಟು ತಿಂಗಳಿನವರೆಗೆ ಆ ಕೂದಲನ್ನು ಬಿಟ್ಟುಕೊಂಡು ಅದೇಗೆ ಇರುತ್ತಿದ್ದ ಅನ್ನಬೇಡಿ.  ನಮ್ಮಪ್ಪನಿಗೆ ನಾನು ನನಗೆ ತಿಳುವಳಿಕೆ ಬಂದ ನಂತರ ನೋಡಿರುವಂತೆ ಆತನಿಗೆ ಬೆಳೆಯುತ್ತಿದ್ದುದೇ ಇಡೀ  ಬಾಂಡ್ಲಿ ತಲೆಯ  ತುಂಬಾ ಕೇವಲ ನಾಲ್ಕೈದು ಎಳೆ ದಾರದಂತ ಕೂದಲು.  ಬಾಚಿಣಿಕೆಯ ಹಲ್ಲಿಗೂ ಕೂದಲು ಸಿಗುತ್ತಿರಲಿಲ್ಲ.  ಹೀಗಿದ್ದಾಗ  ಆರೆಂಟು ತಿಂಗಳೇನು ಕಟ್ಟಿಂಗು ಮಾಡಿಸದೇ ವರ್ಷ ಬಿಟ್ಟರೂ ಪರವಾಗಿದ್ದಿಲ್ಲ, ನಡೀತಿತ್ತು.  ಅಂಥಾದ್ದರಲ್ಲಿ ಆಹಾ….. ಆತ ಬೆಳಿಗ್ಗೆ ತಿಂಡಿ …  ಅಲ್ಲ ಬರೋಬ್ಬರಿ ಊಟದಂತೆ ಸ್ವೀಕರಿಸಿ ಕನ್ನಡಿ ಮುಂದೆ ನಿಂತು ಇರುವ ನಾಲ್ಕೈದು ಎಳೆ ದಾರದಂಥ ಕೂದಲುಗಳಿಗೆ ರೋಡ್ ಹಂಪ್ಸ್ ತರ ತೆಗ್ಗು ಕೂಡಿಸಿ ಹಿಂಬದಿಯಿಂದ ಕೈಗನ್ನಡಿ ಹಿಡಿದು ಅದನ್ನು ಚೆಕ್ಕು ಮಾಡಿಕೊಳ್ಳುತ್ತಿದ್ದ. ನಾನು ಬಹಳ ಜನರನ್ನು ನೋಡಿದ್ದೇನೆ. ಕೂದಲು ಇದ್ದವರಿಗಿಂತ, ಕಡಿಮೆ ಇದ್ದವರು ಅಥವಾ ಅರ್ಧ ಬಾಂಡ್ಲಿಯಾದವರು ತಮ್ಮ ಜೇಬಿನಲ್ಲಿ ಬಾಚಣಿಕೆ ಇಟ್ಟುಕೊಂಡಿರುತ್ತಾರೆ. ಇರುವ ಅಷ್ಟಾದರೂ ಕೂದಲಿಗೆ ಆರೈಕೆ ಬೇಡವೇ? 

ಗಂಡಸರಾದ ನಮ್ಮ  ಕೂದಲಿನ ಮೇಲಿರುವ, ಆಗಾಗ ತಲೆ ಮೇಲೆ ಕೈ ಆಡಿಸಿಕೊಳ್ಳುವ ಚಟ ನೋಡಿ ಹೆಂಗಿರುತ್ತೆ ಅಂತ.  ಕಟ್ಟಿಂಗು ಶಾಪಿನಿಂದ ಎದ್ದು ಬರುವಾಗ ನಮ್ಮ ಮುಖ, ತಲೆ ಕೂದಲು, ಮೀಸೆ ಮೇಲೆ ಕೈ ತಿರುವಿ ಆಹಾ… ಏನ್ ಚೆಂದ ಅದೀಲೆ ಮಗನಾ ? ಅಂದುಕೊಂಡೇ ಮೆಟ್ಟಿಲಿಳಿಯುತ್ತೇವೆ. ಕಟ್ಟಿಂಗು ಮಾಡಿಸಲು ಬರುವ ತರಹೇವಾರಿ ಮುಖಗಳು ಬೇರೆ ಬೇರೆಯೇ ಇರುತ್ತವೆ. ಒಬ್ಬೊಬ್ಬರದೂ ಒಂದೊಂದು ಸ್ಟೈಲ್. ಅದೇನೋ ಅಂತಾರಲ್ಲ; ಕೂದಲು ಇದ್ದವಳು ಹೆಂಗೆ ತುರುಬು ಕಟ್ಟಿದರೂ ಚೆಂದವಂತೆ.  ಗಂಡಸರಿಗೆ ಇರುವ ತಟಗು ಕೂದಲ ಸಿಂಗಾರಕ್ಕೇ ಇಷ್ಟು ಕಾಳಜಿ ಇರಬೇಕಾದರೆ, ಇನ್ನು ಹೆಣ್ಣು ಮಕ್ಕಳು ತಮ್ಮ ಹಕ್ಕು ಮತ್ತು ಆದ್ಯತೆಯಾದ ಕೇಶ ಮತ್ತು ಮುಖದ ಸೌಂದರ್ಯ ಸಿಂಗಾರಕ್ಕೆ ಗಾಬರಿಯಾಗುವಷ್ಟು ಶ್ರದ್ಧೆ ವಹಿಸಿ ಪೋಷಿಸುವುದನ್ನು ನೋಡಿದರೆ ಹೌದೌದು ಅನ್ನಿಸುವುದರಲ್ಲಿ ತಪ್ಪಿಲ್ಲ, ಮತ್ತದು ಆಶ್ಚರ್ಯವೂ ಅಲ್ಲ.  ಈಗೀಗ ಕೇಶ ವೃದ್ಧಿಗೆ ಹೆಸರಿಸುವ ಶಾಂಪು, ತೈಲಾ, ಎಂತೆಂಥದೋ ನೋಡಿ ಅವುಗಳನ್ನೆಲ್ಲ ಬಳಸಬೇಕೋ ಅಥವಾ ಬರೀ ನೋಡಿಯೇ  ಸುಮ್ಮನಿರುವುದು ವಾಸಿಯಾ? ಗೊತ್ತಾಗುವುದೇ ಇಲ್ಲ.  ಬಿಡಿ, ಅದರ ಬಗ್ಗೆ ಕ್ರಮೇಣ ಬೋಳಾಗುವ ತಲೆಯ ಗಂಡಸರೇಕೆ ತಲೆ ಕೆಡಿಸಿಕೊಳ್ಳಬೇಕು?.. ಹೆಂಗಸರಿಗೆ ಈ ವಿಚಾರ ದಾಟಿಸಿಬಿಟ್ಟರಾಯಿತು. 

ಸಣ್ಣ ವಯಸ್ಸಿಗೆ ನೆರೆಗೂದಲು ಬೆಳೆದಿದ್ದರೆ, ಅಥವಾ ವಯಸ್ಸು ಮರೆಮಾಚಲು ಹೇರ್ ಡೈ ಮಾಡಿಸಿ ಕೊಳ್ಳುವವರ ಕಾಳಜಿಯನ್ನು ಒಮ್ಮೆ ನೀವು ನೋಡಬೇಕು, ಕಟ್ಟಿಂಗು ಶಾಪಿನಲ್ಲಿ .  ಭಯಂಕರ ತಾಳ್ಮೆ ಇಟ್ಟುಕೊಂಡೇ ಬಣ್ಣ ಬಳಿಯಲು ಕಟ್ಟಿಂಗು ಶಾಪಿನವರು ತಯಾರಾಗಿರುತ್ತಾರೆ.  ನಮ್ಮ ದೊಡ್ಡ ಮಾವನದು ಮದುವೆ ಮುಂಚಿನ ದಿನಗಳಲ್ಲಿ ನನಗೆ ವಿಶಿಷ್ಟ ಆಫರ್ ನೀಡಿದ್ದ.  ಭಾನುವಾರ ದಿನ ಬಂತೆಂದರೆ ತನ್ನ ತಲೆಯಲ್ಲಿರುವ ಬಿಳಿ ಕೂದಲು ಆರಿಸಿ ಆರಿಸಿ ಎಣಿಸಿ, ತೋರಿಸಿ ಕಿತ್ತೊಗೆದರೆ ಆ ದಿನ ನನಗೆ ಯಾವುದಾದ್ರೂ ಸಿನೆಮಾ ನೋಡಲು "ನೆಲ"ವಾದರೆ ಒಂದೂವರೆ ರುಪಾಯಿ, ಬೆಂಚಿಗಾದರೆ ಎರಡು ರುಪಾಯಿ ಕೊಟ್ಟು ಕಳಿಸುತ್ತಿದ್ದ. ಒಂದು ವೇಳೆ ತಾನು ಕನ್ನಡಿ ಹಿಡಿದು ನೋಡಿ ಏನಾದ್ರು ಒಂದೆರಡು ಬಿಳಿ  ಕೂದಲು ತನ್ನ ತಲೆಯಲ್ಲಿ ಕಾಣಿಸಿತೋ? ನನ್ನ ಸಿನೆಮಾ ಪ್ರೋಗ್ರಾಮ್ ಕ್ಯಾನ್ಸಲ್.  ಆಮೇಲೆ ಮಾವನದು ಮದುವೆ ಆಯಿತು,ಮಕ್ಕಳಾದವು, ಸ್ಟೆಪ್ ಕಟ್ಟಿಂಗು ಮಾಯವಾಗಿ ಈಗೀಗ ಬಿಳಿ ತೆಲಿ ಮತ್ತು ಅರ್ಧ ಬೋಳು ತಲೆ ಮಾನವನಾಗಿದ್ದಾನೆ. ನನ್ನ ಎರಡನೇ ಮಾವನದು ಅವತ್ತಿಗೂ ಇವತ್ತಿಗೂ ಒಂದೇ ಸ್ಟೈಲ್, ಒಂಚೂರು ತಲೆಯ ಸುತ್ತಲೂ ಟ್ರಿಮ್ ಮಾಡಿಸುವುದರ ಹೊರತಾಗಿ. 

ನಾನಿನ್ನು ಡಿಪ್ಲೋಮಾ ಎರಡನೇ ವರ್ಷವೋ ಮೂರನೆಯದೋ ಏನೋ ಓದುತ್ತಿದ್ದೆ.. ನನ್ನ ಓರಗೆಯವ ಮತ್ತು ನನ್ನ ಸಹಪಾಠಿ ಪಿ. ಯು . ಸಿ. ಅಥವಾ ಡಿಗ್ರಿ ಮೊದಲ ವರ್ಷ ಓದುತ್ತಿದ್ದ ರಾಜನಿಗೆ ಹದಿನಾರು ಅಥವಾ ಹದಿನೇಳನೇ ವಯಸ್ಸಿನಿಂದಲೇ ನೆರೆಗೂದಲ ಹಾವಳಿ ಹೆಚ್ಚಾಗಿತ್ತು. ಅದರಿಂದ ಅವನಿಗೆ ಸ್ನೇಹಿತರ ನಡುವೆ ಮುಜುಗರವಾಗುತ್ತಿತ್ತೇನೋ.  ಆಗಾಗ ಕಟ್ಟಿಂಗು ಶಾಪಿಗೆ ಹೋಗಿ ಹೇರ್ ಡೈ ಮಾಡಿಸಿಕೊಂಡು ಬರುತ್ತಿದ್ದ.   ಆಮೇಲೆ ಒಂದು ದಿನ ಯಾರು ಸಲಹೆ ಕೊಟ್ಟರೋ ಅಥವಾ ತಾನೇ ನಿರ್ಧರಿಸಿದನೋ ಏನೋ ಗೊತ್ತಿಲ್ಲ, ಸ್ವತಃ ಹೇರ್ ಡೈ ಮಾಡಿಕೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾನೆ.  ಹಚ್ಚಿಕೊಳ್ಳುವ ಮುನ್ನ ಸಲಹೆ ಪಡೆದನೋ ಇಲ್ಲವೋ ಅದೂ ಗೊತ್ತಿಲ್ಲ. ಅದೊಂದು ದಿನ ಹೇರ್ ಡೈ ಮಾಡಿಕೊಂಡು ಬಾತ್ ರೂಮಿಗೆ ಸ್ನಾನಕ್ಕೆ ಹೋಗಿದ್ದಾನೆ. ಶಾಂಪು ಹಚ್ಚಿಕೊಂಡು ತಿಕ್ಕಿ ತೊಳೆದು, ನಂತರ ದಬಾ ದಬಾ ನೀರು ತಲೆ ಮೇಲೆ ಸುರಿದುಕೊಂಡಿದ್ದಾನೆ. ನೀರಿಗುಂಟ ತಲೆಯಲ್ಲಿರುವ ಜೊಂಪು ಜೊಂಪು ಕೂದಲು ಮೋರಿಯ ಪಾಲಾಗಿವೆ. ಸೋಪಿನ ನೀರಲ್ಲೇ ಕಣ್ಣುಜ್ಜಿಕೊಂಡು ತಲೆ ಮೇಲೆ ಕೈಯಾಡಿಸಿದರೆ, ಎಲ್ಲಿವೆ ಕೂದಲು ? 

ಗಾಬರಿ ಬಿದ್ದು ನಂಬಿಕೆ ಬಾರದೇ ಕನ್ನಡಿ ಮುಂದೆ ನಿಂತಿದ್ದಾನೆ; ಅಷ್ಟೇ. ಅವನಾಗಲೇ ಬೋಳುದಲೆಯ "ರಾಜ". ಆ ದಿನ ಏನು ಮಾಡಬೇಕೋ ತೋಚದೇ ಕಾಲೇಜಿಗೆ ಹೋದನೋ ಇಲ್ಲವೋ ಗೊತ್ತಿಲ್ಲ.  ಅಂತೂ ತಲೆಯ ಮೇಲೆ ಟೋಪಿ ಬಂತು. ಆ ನಂತರ ವೈದ್ಯರಲ್ಲಿ ತೋರಿಸಿದ್ದಾನೆ. ಉಹೂ.. ಅಲ್ಲೀಗ ಕೂದಲು ಬೆಳೆಯುವ ಲಕ್ಷಣಗಳೇ ಕಂಡಿಲ್ಲ. ವಯಸ್ಸಿನ್ನೂ ಕೇವಲ ಹದಿನೆಂಟು… ಓದು ಮುಗಿದಿಲ್ಲ, ಮದುವೆ ಬಗ್ಗೆ ಸದ್ಯ ಯೋಚಿಸುವಂತಿಲ್ಲ. ಡಿಗ್ರಿ ಓದುವಾಗ ಹುಡುಗರು ರೂಂ ಮಾಡಿದ್ದರು, ಅದರಲ್ಲಿ ಜೊತೆಗಿದ್ದ ಸೂರಿ  ಅಶೋಕ, ಲಿಂಗರಾಜು, ಅನಧಿಕೃತವಾಗಿ ಇನ್ನು ಹಲವು ಮಂದಿ ರಾತ್ರಿ "ಬತ್ತಿ" ಹಚ್ಚಿ ಸೊಳ್ಳೆ ಓಡಿಸಲು ಬರುತ್ತಿದ್ದರೂ ಇವರಲ್ಲಿ ಸೂರಿ ಮಾತ್ರ ಇವನು ರಾತ್ರಿ ಓದಲು ಬಂದಾಗ ಮತ್ತು ಹಗಲಲ್ಲಿ ಎದುರು ಬರುತ್ತಿದ್ದರೆ "ಯವ್ವಾ, ಕೂದ್ಲದವೆನ್ರವ್ವಾ ………. " ಎಂದು ಕೂದಲು ತೆಗೆದುಕೊಂಡು ಬಾಂಬೆ ಮಿಠಾಯಿ ಮಾರುವವರ ಸ್ಟೈಲ್ ನಲ್ಲಿ ಅರಚಿ ಕಾಡಿ ಬಿಡುತ್ತಿದ್ದ. ಆದರೂ ರಾಜು ಏನು ತೋರಗೊಡದೇ ಸುಮ್ಮನಿರುತ್ತಿದ್ದ. ಹೈದರಾಬಾದು, ಬೆಂಗಳೂರು ಮತ್ತೆಲ್ಲೋ ಹೋಗಿ ಪ್ಲಾಂಟೇಶನ್ ಮಾಡಿಸಿಕೊಂಡು ಬಂದ, ವಿಗ್ ಹಾಕಿದ.  ಆದರೂ ಅದು ಟೆಂಪೊರರಿ ಆಯಿತು. ಅಷ್ಟೊತ್ತಿಗೆ ಒಂದಷ್ಟು ವರ್ಷಗಳು ಗತಿಸಿದ್ದವು. ಓದು ಮುಗಿದಿತ್ತು, ಮದುವೆಗೆ ಹುಡುಗ ರೆಡಿಯಾಗಿದ್ದ.  ಅದೂ ಅಲ್ಲದೇ ಅವರದೇ ಸಂಭಂಧದಲ್ಲಿ  ದಾವಣಗೆರೆಯ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದ.  ಕನಸಿದ ಹುಡುಗಿಗೆ ಸಂಬಂಧಿಸಿದಂತೆ ಮಾತ್ರ ಅದೃಷ್ಟ ಕೈಕೊಟ್ಟಿತ್ತು.  ಅವನಿಗೆ ಮನೆಯವರು ನೋಡಿದ ಬೇರೆ ಹುಡುಗಿ ಸಿಕ್ಕಳು, ಮದುವೆಯಲ್ಲಿ ಮೈಸೂರು ಪೇಟ ತೊಟ್ಟುಕೊಂಡು ಸ್ಟೇಜ್ ಮೇಲೇರಿದ್ದ. ಈಗ ಎರಡು ಮಕ್ಕಳಿವೆ. ಸ್ವಂತ ಮನೆಯಿದೆ.  ಮತ್ತವನೀಗ ಬಜಾರದ ಒಳ್ಳೆ ಬಟ್ಟೆ ವ್ಯಾಪಾರಿ. ಅದೆಲ್ಲಕ್ಕಿಂತಲೂ ಮುಖ್ಯವೆಂದರೆ ಯಾವುದೇ ಸಂಕೋಚವಿಲ್ಲದೇ ಬೋಳು ತಲೆ ಮೇಲೆ ಸಿಂಪಲ್ ಆಗಿ ಎಡಗೈ ನೀವುತ್ತಾ "ರಾಜು ಬನ್ ಗಯಾ ಜೆಂಟಲ್ ಮ್ಯಾನ್" ಎನ್ನುವಂತೆ ನೋಡುತ್ತಾನೆ.  

ಒಂದು ವಾರದ ಕೆಳಗೆ ಬಿ. ವಿ. ಭಾರತಿ ಅವರ "ಸಾಸಿವೆ ತಂದವಳು" ಪುಸ್ತಕ ಓದುತ್ತಿದ್ದೆ, ಪುಸ್ತಕದ ಮಧ್ಯೆ ಕ್ಯಾನ್ಸರ್ ಖಾಯಿಲೆಯ ಪರಿಣಾಮವಾಗಿ  ತನ್ನ ತಲೆಯ ಕೂದಲೆಲ್ಲಾ ಉದುರಿದ ಪ್ರಸಂಗವನ್ನು ಒಬ್ಬ ಹೆಣ್ಣು ಮಗಳಾಗಿ ಬಹಳ ಸಂಕಟಪಟ್ಟುಕೊಂಡು ಬರೆದಿದ್ದರು.  ನಮ್ಮ  ತಾತ, ಮಾವನವರ ಸೀಜರ್ ಕಟ್ಟಿಂಗು, ಸ್ಟೆಪ್ ಕಟ್ಟಿಂಗು, ನನ್ನ ಗೆಳೆಯ ರಾಜನ ಹೇರ್ ಡೈ ಪುರಾಣ ಎಲ್ಲಾ ಒಮ್ಮೆಲೇ ನೆನೆಪಾಯಿತು…. ಅಷ್ಟೊತ್ತಿಗೆ ಕರೆಂಟು ಹೋಯಿತೆಂದು ಸೆಖೆಗೆ ತಡೆಯಲಾರದೇ ಹಣೆ ಒರೆಸಿಕೊಂಡೆ, ಸಣ್ಣಗೆ ಕೂದಲು ಬೆಳೆಯದೇ ಬೋಳು ಬೋಳಾದ ತಲೆಯ ಮುಂಭಾಗವನ್ನು ಮತ್ತೆ ಮತ್ತೆ  ಮುಟ್ಟಿ ನೋಡಿಕೊಂಡೆ. ತಲೆ ಮೇಲಿನ ಗೋಡೆಯಲ್ಲಿ ಹಾರ ಹಾಕಿದ ಫೋಟೋದಲ್ಲಿ ಬೋಳು ತಲೆಯ ಅಪ್ಪ ನಗುತ್ತಿದ್ದ; ಮುಗ್ಯಾಂಬೋ ಸ್ಟೈಲ್ ನಲ್ಲಿ ….

*****

ಕನ್ನಡದ ಬರಹಗಳನ್ನು ಹಂಚಿ ಹರಡಿ

14 thoughts on “ಬೋಳು ತಲೆಯ ಅಪ್ಪ ಮತ್ತೆರಡು ಪ್ರಸಂಗಗಳು: ಅಮರ್ ದೀಪ್ ಪಿ.ಎಸ್.

    1. ಬಹುಶ: ಅವನು ಬಳಸಿದ ಹೇರ್ ಡೈ ಪರಿಣಾಮದಿಂದ ಆಗಿತ್ತು ಅಂತ ಕಾಣುತ್ತೆ ಮೇಡಂ…

  1. ಚೆನ್ನಾಗಿದೆ ಸರ್ .. ಹೇರ್’ಕಟಿಂಗ್ ವೃತ್ತಾಂತ.. ವಸತಿ ಶಾಲೆ/ಕಾಲೇಜಿನ ದಿನಗಳು ನೆನಪಾದವು.

  2. ಚೆನ್ನಾಗಿದೆ ಕಟ್ಟಿಂಗ್ ಪುರಾಣ… 🙂 ಈಗೀಗ ಎಲ್ಲವು ಆಧುನಿಕ… ಹಳೇ ಹಾಡಿಲ್ಲ… ಅಂದ ಚೆಂದವಿಲ್ಲ.. ಕಟಿಂಗ್ ಶಾಪಿನ ಮುಂದಿರುತ್ತಿದ್ದ ೨ ಗಿಡಗಳಿಲ್ಲ… ಚೆನ್ನಾಗಿ ನಿರೂಪಿಸಿದ್ದೀರಿ.

  3. chennagithu.  Ond sari nange besige kala koodlu short irali antha "ili chutting" madisidru. Nanu avaga chikkavanu around 8-10 years irabahudu. Kannadili nan mukha kettadagi kanisthithu. adanna  nodi nodi althide…..

  4. Amar, nimma lekhana oadtha nanna sahapaathi Ramu (Basaveshwara Bazar nalli avaradoo ondu Hair Cutting Saloon itthu) nenapaada! Good one, enjoyed.

  5. ತಾತನ ತಲೆಯನ್ನು  ಹಿಂದೆ ಎಳೆ ನೀರು ಕೊಚ್ಚುವ ಮಾದರಿಯಲ್ಲಿ ಇನ್ನು ಮಷೀನು ಹಿಡಿದು ಕಟಕಟಕಟ ಮಾಡುತ್ತಿದ್ದರು.

    khushi athu…

Leave a Reply

Your email address will not be published. Required fields are marked *