
ಬೇಸಿಗೆಯ ಬಿಸಿಲು ನೆತ್ತಿಯನ್ನು ಕಾವಲಿಯಂತೆ ಕಾಯಿಸುತ್ತಿದೆ ನಿಜ. ಆದರೆ ಬೇಸಿಗೆಯ ಬಿಸಿಲು ಬಂದರೆ ಮಾತ್ರ ಅಜ್ಜಿಗೆ ಹಾಗೂ ಅಮ್ಮನಿಗೆ ಸಂಭ್ರಮ. ತರೇವಹಾರಿ ತಿಂಡಿಗಳನ್ನು ಬೇಸಿಗೆಯಲ್ಲಿ ತಯಾರಿಸಿ ವರ್ಷಪೂರ್ತಿ ಕಾಪಿಟ್ಟುಕೊಳ್ಳಬಹುದಲ್ಲ ಎಂಬ ಸಂತೋಷವೇ ಅವರ ಮೊಗದಲ್ಲಿ ಮನೆ ಮಾಡಿರುತ್ತದೆ.
ಮಳೆಗಾಲದಲ್ಲಿ ಜೋರು ಮಳೆಗೆ, ಬೀಸುವ ಚಳಿಗೆ, ಹಬ್ಬದೂಟಗಳಿಗೆ ಹಪ್ಪಳ, ಸಂಡಿಗೆ, ಚಿಪ್ಸ್, ಮುಂತಾದವುಗಳು ಬೇಕೆ ಬೇಕೆಂಬುದು ಅವರಿಗಲ್ಲದೆ ಮತ್ಯಾರೂ ತಾನೇ ಅಷ್ಟೊಂದು ಚೆನ್ನಾಗಿ ಅರಿಯಲು ಸಾಧ್ಯ. ಇಂತಹ ತಿಂಡಿಗಳನ್ನು ತಯಾರಿಸಲು ಮಳೆಗಾಲ ಹಾಗೂ ಚಳಿಗಾಲ ಪ್ರಾಶಸ್ತ್ಯವಾದ ಸಮಯವಲ್ಲವೆಂದು ಗೊತ್ತಿರುವದರಿಂದ ಬೇಸಿಗೆಯ ಸುಡು ಬಿಸಿಲಲ್ಲಿ ಇದ್ದರೂ ಎಲ್ಲವನ್ನು ತಯಾರಿಸಿ ಅದನ್ನು ಕೂಡಿ ತಿನ್ನುವಂತಹ ಗಳಿಗೆಗಾಗಿ ಕಾಯುವುದೇ ಸಡಗರವಾಗಿರುತ್ತದೆ. ಹೀಗೆಯೇ ಹಪ್ಪಳದ ಹಿಟ್ಟನ್ನು ತಯಾರಿಸಿ ಮನೆಯ ಹೆಂಗಸರೆಲ್ಲ ಲಗು-ಬಗೆಯಿಂದ ಮನೆಯ ಕಾರ್ಯವನ್ನೆಲ್ಲ ಮುಗಿಸಿ ಸುತ್ತಲೂ ಒಟ್ಟುಗೂಡಿಕೊಂಡು ಹಿಟ್ಟನ್ನು ಲಟ್ಟಿಸುತ್ತಾ, ಒಬ್ಬರು ಅದನ್ನು ಹಾಸಿರುವ ಬಟ್ಟೆಯ ಮೇಲೆ ಒಣಗಿ ಹಾಕುತ್ತಾ ಮಾತಿನ ಭರಾಟೆಯಲ್ಲಿ ಕೆಲಸವು ಸಣ್ಣಗೆ ಸಾಗುತ್ತಿರುತ್ತದೆ.
ಅದಲ್ಲದೆ ಬೇಸಿಗೆಯಲ್ಲಿ ಸಂಡಿಗೆಯನ್ನು ಮಾಡುವ ಸಂಭ್ರಮ ಮತ್ತಷ್ಟು ಹೆಚ್ಚಿರುತ್ತದೆ. ಸಂಡಿಗೆ ಮಾಡುವುದಕ್ಕೆ ಅದಕ್ಕೆ ಬೇಕಾದ ಸರಿಯಾದ ಧಾನ್ಯವನ್ನು ತಂದು ಅದನ್ನು ಹಿಟ್ಟು ಮಾಡಿಸಿ ತಯಾರಿಸಿಕೊಳ್ಳುವುದು, ಅದನ್ನು ಸರಿಯಾಗಿ ಹಿಟ್ಟು ಮಾಡಿಕೊಂಡು ಹದವಾದ ಬೆಂಕಿ ಉರಿಯಲ್ಲಿ ಕಾಯಿಸುತ್ತಾ ಹದಕ್ಕೆ ಬಂದ ಹಿಟ್ಟನ್ನು ಅಟ್ಟುತ್ತ(ತಿರುವುತ್ತ) ಅದನ್ನು ಮಾಳಿಗೆ ಮೇಲೆ ತರುವಷ್ಟರಲ್ಲಿ ಮಕ್ಕಳೆಲ್ಲ ಚಾಪೆ, ಸ್ವಚ್ಛವಾದ ಬಟ್ಟೆ ಹಾಸಿ ಅದರ ಮೇಲೊಂದು ಪ್ಲಾಸ್ಟಿಕ್ ಹಾಳೆಯನ್ನು ತೊಳೆದು ಅದಕ್ಕೆ ಎಣ್ಣೆ ಹಚ್ಚಿ ಸವರಿ ಇಟ್ಟಿರುತ್ತಾರೆ. ಅಮ್ಮ ಹಿಟ್ಟಿನ ಪಾತ್ರೆಯನ್ನೆತ್ತಿಕೊಂಡು ಬಂದು ನಿಧಾನಕ್ಕೆ ಸಂಡಿಗೆಯ ಮಣೆಯಲ್ಲಿ ಹಿಟ್ಟನ್ನು ಚಿತ್ತಾರವಾಗಿ ಬಿಡಿಸುತ್ತ ಸಾಗುತ್ತಿದ್ದರೆ ಜೋರು ಬಿಸಿಲಿಗೆ ಸಂಡಿಗೆಯೂ ನಾಚಿಕೊಳ್ಳಬೇಕು. ಅಮ್ಮ ಮುಂದೆ ಸಂಡಿಗೆ ಇಟ್ಟು ಸಾಗುತ್ತಿದ್ದರೆ ಮಕ್ಕಳೆಲ್ಲ ಅದರ ರುಚಿಯನ್ನು ಸವಿಯುತ್ತಿರುತ್ತಾರೆ. ಹೀಗೆ ಮನೆ ಮಂದಿಯೆಲ್ಲ ಸಂಡಿಗೆಯ ಸಂಭ್ರಮದಲ್ಲಿ ಭಾಗಿಯಾಗಿ ಮಾಡುವ ಪದಾರ್ಥಗಳೆಲ್ಲ ಜಿಹ್ವೆಗೆ ಮಾತ್ರವಲ್ಲದೆ ಮನಸ್ಸಿಗೂ ಮುಟ್ಟಿದಾಗ ಅದರ ಆನಂದವೇ ಬೇರೆ.
ಇದನ್ನು ಕಾಗೆ, ನಾಯಿಗಳಿಂದ ಮಾತ್ರವಲ್ಲದೇ ಅದರ ಮೇಲೆ ಯಾವುದೇ ಧೂಳು ಕೂರದಂತೆ ಕಾಯುವ ಕೆಲಸ ಇನ್ನೂ ಕಷ್ಟದ್ದು, ಸಂಡಿಗೆಯ ಪಕ್ಕ ಯಾವುದೇ ಪ್ರಾಣಿಗಳು ಬರದಂತೆ ಕನ್ನಡಿ, ಕಲ್ಲಿದ್ದಲು ಇಟ್ಟು ಅವುಗಳನ್ನು ಹೆದರಿಸಿ ಓಡಿಸುವುದು. ಸರದಿಯ ಪ್ರಕಾರ ಮಕ್ಕಳೆಲ್ಲ ಅದನ್ನು ಊರ ಸರದಾರರಂತೆ ಕಾವಲು ಕಾಯುವುದು. ಯಾರೂ ತನ್ನನ್ನು ಗಮನಿಸುತ್ತಿಲ್ಲ ಎಂಬ ತಕ್ಷಣವೇ ಪಟ್ಟನೇ ಒಂದು ತುಂಡೊಂದನ್ನು ಎತ್ತಿ ತಿಂದು ನಾನೇನು ಮಾಡೇ ಇಲ್ಲವೆನ್ನುವಂತೆ ಕಳ್ಳಬೆಕ್ಕಿನಂತೆ ಇರುವುದು. ಹೀಗೆ ಎಷ್ಟೊಂದು ಮೋಜಿನ ಸಂಗತಿಗಳು ಜರುಗುತ್ತವೆ.
ಇದರೊಂದಿಗೆ ಉಪ್ಪಿನಕಾಯಿಯ ಕಥೆ ಇನ್ನೊಂದು ತೆರನಾಗಿರುತ್ತದೆ. ತೋಟದಲ್ಲಿ ಮಾವಿನ ಚಿಗುರು ಕಾಯಾಗಿ ಮಾರ್ಪಾಡಾಗುವುದನ್ನೆ ಕಾಯುತ್ತ ಅತ್ತ ಎಳೆಯದು ಅಲ್ಲದ, ಬಲಿತಿರುವುದು ಅಲ್ಲದ ಒಳ್ಳೆಯ ಕಾಯಿಯನ್ನೇ ಆಯ್ದು ಹೆಕ್ಕಿ ತಂದು ಮನೆಯ ಹೆಂಗಸರಿಗೆ ಕೊಟ್ಟರೆ, ಅವರ ಅದನ್ನು ಚೆನ್ನಾಗಿ ತೊಳೆದು ಒಣಗಿಸಿ, ಮೆಟ್ಟುಗತ್ತಿ ಅಥವಾ ಈಳಿಗೆಯಲ್ಲಿ ಸಣ್ಣಗೂ ಅಲ್ಲದೇ ದೊಡ್ಡಕ್ಕೂ ಅಲ್ಲದೇ ಒಂದೇ ಆಕಾರದಲ್ಲಿ ಹೆಚ್ಚಿ ಸಾಸಿಗೆ, ಎಣ್ಣೆ, ಉಪ್ಪು, ಖಾರ, ಮಸಾಲೆ ಎಲ್ಲವನ್ನು ಜೋಡಿಸಿಟ್ಟುಕೊಂಡು ಅದು ಸರಿಯಾಗಿದೆಯೆ ಎಂದು ಪರೀಕ್ಷಿಸಿ ಉಪ್ಪಿನಕಾಯಿಯ ಗೊಜ್ಜು ಸಿದ್ಧಪಡಿಸಿ ಉಪ್ಪಿನಕಾಯಿ ತಯಾರಿಸಿ, ತೊಳೆದು ಒರಸಿಟ್ಟ ಜರಡಿಗೆ ಹಾಕಿ ಅದು ಕಳೆತು ಹದವಾಗಿ ಬೆರೆತುಕೊಳ್ಳಲಿ ಎಂದು ಸರಿಯಾದ ಸ್ಥಳದಲ್ಲಿ ಅಥವಾ ಅಟ್ಟದ ಮೇಲೆ ತೆಗೆದಿಡಲಾಗುತ್ತದೆ.ಅದನ್ನು ಯಾರಿಗೂ ತಾಕದಂತೆ ಮಕ್ಕಳ ಕೈಗೆ ಸಿಕ್ಕದಂತೆ ಕೋಣೆಯೊಂದರಲ್ಲಿ ಇಟ್ಟು ಅದನ್ನು ಕಾಯುವ ಕೆಲಸವೇ ದೊಡ್ಡದು, ಮಕ್ಕಳಿಗೆ ಅದು ನಿಷಿದ್ಧ ಪ್ರದೇಶ. ಅದನ್ನು ಬಿಸಿ ಅನ್ನದೊಂದಿಗೆ ಉಪ್ಪಿನಕಾಯಿ ಹಾಕಿ ಸವಿಯುತ್ತಿದ್ದರೆ, ನಾಕಕ್ಕೆ ನಾಲ್ಕೇ ಗೇಣು ದೂರವಷ್ಟೇ.
ಬಯಲುಸೀಮೆ ದಾಟಿ ಮಲೆನಾಡನ್ನು ಹೊಕ್ಕಿದರಂತೂ ಮುಗಿತು. ತರೇವಾಹರಿ ಖಾದ್ಯಗಳೇ ಕಾಯ್ದುಕೊಂಡಿರುತ್ತವೆ. ಮಿಡಿಗಾಯಿಯ ಉಪ್ಪಿನಕಾಯಿ, ಹಲಸಿನ ಹಪ್ಪಳ, ಬಾಳಕ, ಚಿಪ್ಸ್ ಮಾವಿನ ತರೇವಹಾರಿ ಪದಾರ್ಥಗಳು ಎಷ್ಟೊಂದು ವೈವಿಧ್ಯ. ಬೇಸಿಗೆ ಕೇವಲ ಬಿಸಿಲನ್ನು ಮಾತ್ರ ತರುವುದಲ್ಲದೇ ಅಜ್ಜಿ, ಅಮ್ಮಂದಿರು ನಾವು ಹೀಗೆ ಮಾಡುತ್ತಿದ್ದವಿ, ಹಾಗಿತ್ತು ನಮ್ಮ ಕಾಲ ಎಂದೇಳುತ್ತ ತಮ್ಮ ಜೋಳಿಗೆಯಿಂದ ಒಂದೊಂದಾಗಿ ನೆನಪುಗಳನ್ನು ಹೆಕ್ಕುತ್ತಿದ್ದರೆ ಅದನ್ನು ಆಯ್ದು ನಮ್ಮೊಳೊಗೆ ಸೇರಿಸಿಕೊಳ್ಳವ ಸಂಭ್ರಮವೊಂದು ಮಾತ್ರವೇ ಉಳಿದು ಹೋಗಿರುತ್ತದೆ. ಬೇಸಿಗೆಯು ಬಿಸಿಲನ್ನು ಮಾತ್ರವಲ್ಲದೇ ಇಂತಹ ಅನೇಕ ಸಂಭ್ರಮ, ನೆನಪನ್ನೂ ಕೂಡ ಹೊತ್ತು ತರುತ್ತದೆ. ಇಷ್ಟು ಸಾಕಲ್ಲವೇ ಬೇಸಿಗೆಯನ್ನು ಪ್ರೀತಿಸಲು..!!
–ರಾಜೇಶ್ವರಿ ಲಕ್ಕಣ್ಣವರ